ಮೂರನೇ ಕಣ್ಣು : ಉಚಿತ ಕೊಡುಗೆಗಳನ್ನು ಘೋಷಿಸುವದಲ್ಲ,ಬಡವರ ಉದ್ಧಾರದ ಬದ್ಧತೆ ಬೇಕು : ಮುಕ್ಕಣ್ಣ ಕರಿಗಾರ

ಮೇ 10 ರಂದು ನಡೆಯಲಿರುವ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವ ಹಿರಿಯಾಸೆಯಲ್ಲಿ ರಾಜ್ಯದ ಮೂರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್,ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮತದಾರರಿಗೆ ಹತ್ತು ಹಲವು ಉಚಿತಕೊಡುಗೆಯ ಆಶ್ವಾಸನೆ ನೀಡಿವೆ.ರಾಜಕೀಯ ಪಕ್ಷಗಳು ನೀಡುತ್ತಿರುವ ಉಚಿತ ಕೊಡುಗೆ,ಸಬ್ಸಿಡಿ,ರಿಯಾಯತಿಗಳ ಘೋಷಣೆಗಳನ್ನು ಲೆಕ್ಕ ಹಾಕಿದರೆ ಹತ್ತಾರು ಲಕ್ಷ ಕೋಟಿಗಳಷ್ಟು ಹಣಬೇಕಾಗುತ್ತದೆ.ಎರಡು ಲಕ್ಷ ಕೋಟಿಗಳ ಆಸು ಪಾಸಿನಲ್ಲಿರುವ ಕರ್ನಾಟಕದ ಬಜೆಟ್ ಗಾತ್ರದ ನಾಲ್ಕೈದು ಪಟ್ಟು ಸಂಪನ್ಮೂಲ ನಿರೀಕ್ಷಿಸುವ ಉಚಿತಕೊಡುಗೆಗಳಿಗೆ ಸಂಪನ್ಮೂಲ ಕ್ರೋಢೀಕರಣ ಹೇಗೆ? ಎಲ್ಲಿಂದ ತರುತ್ತಾರೆ ಹಣ? ಯಾವ ರಾಜಕೀಯ ಪಕ್ಷವೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಚುನಾವಣೆಯ ಸಂದರ್ಭದಲ್ಲಿ ಮತದಾರರನ್ನು ತಮ್ಮ ಪಕ್ಷದತ್ತ ಸೆಳೆಯಲು ರಾಜಕೀಯ ಪಕ್ಷಗಳು ಘೋಷಿಸುವ ಉಚಿತಕೊಡುಗೆಗಳು ರಾಜ್ಯದ ಜನತೆಯ ಮೇಲೆ ಹೊರಿಸುತ್ತಿರುವ ಅನಗತ್ಯ ಭಾರ ಎನ್ನುವುದನ್ನು ಮತದಾರರು ಮನಗಾಣಬೇಕು.ಉಚಿತ ಕೊಡುಗೆಗಳ ಭರವಸೆಗಳನ್ನು ಈಡೇರಿಸಲು ರಾಜಕೀಯ ಪಕ್ಷಗಳು ಬ್ಯಾಂಕುಗಳು,ಹಣಕಾಸು ಸಂಸ್ಥೆಗಳು ಮತ್ತು ಖಾಸಗಿ ವಲಯದ ಹಣಕಾಸು ವ್ಯವಹರಣೆಯ ಸಂಸ್ಥೆಗಳಿಂದ ಸಾಲ ಎತ್ತುತ್ತವೆ.ಆ ಸಾಲಕ್ಕೆ ಬಡ್ಡಿಯೂ ಸೇರಿರುತ್ತದೆ.ಸಾಲದ ಅಸಲು ತೀರಿಸದೆ ಇದ್ದರೂ ಪ್ರತಿವರ್ಷ ಬಡ್ಡಿಯನ್ನು ತೀರಿಸುವ ಅನಿವಾರ್ಯತೆ ಇರುತ್ತದೆ.ಈ ಸಾಲ ಮತ್ತು ಬಡ್ಡಿಗೆ ಹೊಣೆಗಾರರಾಗುವವರು ರಾಜಕಾರಣಿಗಳಲ್ಲ,ಕರ್ನಾಟಕದ ಜನತೆ! ಒಂದು ಅಂದಾಜಿನಂತೆ ರಾಜ್ಯದ ಪ್ರತಿ ಪ್ರಜೆಯ ಮೇಲೆ ಮೂರುಲಕ್ಷಗಳ ಸಾಲದ ಹೊರೆ ಇದೆ.ಸಾಲದ ಹೊರೆಯನ್ನು ಭರಿಸಲು ಪ್ರಜೆಗಳು ಹೆಚ್ಚಿನ ತೆರಿಗೆ ಕಟ್ಟಬೇಕಾಗುತ್ತದೆ,ಸೆಸ್ ಗಳನ್ನು ಕಟ್ಟಬೇಕಾಗುತ್ತದೆ,ಸರಕಾರವು ವಿಧಿಸುವ ಹಲವು ಹಣಕಾಸು ಶಿಸ್ತು ಮತ್ತು ಹೆಚ್ಚುವರಿ ಸಂಪನ್ಮೂಲ ಸಂಗ್ರಹದ ಉರುಳಿಗೆ ರಾಜ್ಯದ ಜನತೆ ಕೊರಳೊಡ್ಡಬೇಕಾಗುತ್ತದೆ.ರಾಜಕಾರಣಿಗಳ ಅಧಿಕಾರದಾಹ ಮತ್ತು ವಿವೇಚನಾರಹಿತ ನಿರ್ಧಾರಗಳಿಗೆ ರಾಜ್ಯದ ಜನತೆ ಏಕೆ ತೊಂದರೆಗೆ ಈಡಾಗಬೇಕು?

ಉಚಿತಕೊಡುಗೆಗಳೆಲ್ಲವೂ ಸಮರ್ಥನೀಯವಲ್ಲ.ಗ್ರಾಮೀಣ‌ ಪ್ರದೇಶದ ವಿದ್ಯಾರ್ಥಿನಿಯರಿಗೆ ಸೈಕಲ್ ನೀಡುವುದರಲ್ಲಿ ಗ್ರಾಮೀಣ ಪ್ರದೇಶದ ಬಡಕುಟುಂಬಗಳ ವಿದ್ಯಾರ್ಥಿನಿಯರ ಶೈಕ್ಷಣಿಕ ಕಾಳಜಿ ಇದೆ,ಅದನ್ನು ಒಪ್ಪೋಣ.ಅನ್ನಭಾಗ್ಯ ಬಡವರ ಹೊಟ್ಟೆ ತುಂಬಿಸುತ್ತದೆ,ದುರ್ಬಳಕೆ ಎನ್ನಿಸಿದರೂ ದುರ್ಬಲ ವರ್ಗಗಳ ಕೈಯಗಳಿಗೆ ಒಂದಿಷ್ಟು ಕಾಸು ಸಿಗುತ್ತದೆ ಎಂದು ಸಮರ್ಥಿಸೋಣ.ಆದರೆ ಕೆಲವು ಜಾತಿ ಮತಗಳ ಉದ್ಧಾರಕ್ಕಾಗಿ ಘೋಷಿಸುವ ಉಚಿತಕೊಡುಗೆಗಳಿಗೆ ರಾಜ್ಯದ ಸಮಸ್ತ ಜನತೆ ಏಕೆ ಹೊರೆಹೊರಬೇಕು? ಜಾತಿಗಳ ಹೆಸರಿನ ನಿಗಮ ಮಂಡಳಿಗಳು,ಮಠಮಾನ್ಯಗಳಿಗೆ ನೀಡುವ ಸಾವಿರಾರು ಕೋಟಿ ಕೊಡುಗೆ,ಸಹಾಯಾನುದಾನ,ಜಾತ್ರೆ- ಉತ್ಸವಗಳ ಖರ್ಚಿಗೆ ಸಾರ್ವಜನಿಕರ ತೆರಿಗೆಯ ಹಣವನ್ನು ಏಕೆ ಬಳಸಬೇಕು? ಉಚಿತ ಮೊಬೈಲ್,ಕಂಪ್ಯೂಟರ್,ಲ್ಯಾಪ್ ಟಾಪ್ ಗಳನ್ನು ನೀಡುವುದರ ಹಿಂದಿರುವ ತರ್ಕವಾದರೂ ಏನು?

ಉಚಿತ ಕೊಡುಗೆಗಳನ್ನು ನೀಡುವ ಮೂಲಕ ಜನರ ದುಡಿಯುವ ಸಾಮರ್ಥ್ಯವನ್ನು ಹಾಳು ಮಾಡಲಾಗುತ್ತಿದೆ.ಮೈಗಳ್ಳರು,ಸೋಮಾರಿಗಳ ವರ್ಗ ಒಂದನ್ನು ಸರಕಾರವೇ ಸೃಷ್ಟಿಸುತ್ತದೆ.ಕಾಯಕಸಂಸ್ಕೃತಿಯನ್ನು ಬೆಳೆಸುವುದು,ಜನರಿಗೆ ದುಡಿದುಣ್ಣುವ ಸಂಸ್ಕೃತಿಯನ್ನು ಕಲ್ಪಿಸುವುದು ಸರಕಾರದ ಆದ್ಯ ಕರ್ತವ್ಯ.ಆದರೆ ತಾವು ಆರಿಸಿಬರಬೇಕು,ತಮ್ಮ ಪಕ್ಷವು ಅಧಿಕಾರಕ್ಕೆ ಬರಬೇಕು ಎನ್ನುವ ರಾಜಕಾರಣಿಗಳು,ರಾಜಕೀಯ ಪಕ್ಷಗಳ ನಾಯಕರುಗಳು ಜನರನ್ನು ದುಡಿಮೆಯಿಂದ ವಿಮುಖರನ್ನಾಗಿಸಿ,ಪರಾವಲಂಬಿಗಳನ್ನಾಗಿ ಮಾಡುತ್ತಿದ್ದಾರೆ.ಉಚಿತಕೊಡುಗೆಗಳ ರೂಪದಲ್ಲಿ ಒಂದಿಷ್ಟು ಹಣ,ಸೌಲಭ್ಯಗಳನ್ನು ಪಡೆದವರು ರಾಜಕಾರಣಿಗಳ ಮನೆಗಳಿಗೆ ಎಡತಾಕುವ ಪ್ರವೃತ್ತಿಯನ್ನೇ ಮುಂದುವರೆಸುತ್ತಾರೆ.ನಮ್ಮ ರಾಜಕಾರಣಿಗಳಿಗೆ ಇದೇ ಬೇಕು.ಜನರು ತಮ್ಮ ಹಿಂದೆ ಮುಂದೆ ಸುತ್ತಬೇಕು,ತಮಗೆ ಜೈಕಾರ ಹಾಕಬೇಕು,ತಾವು ಹೋದಲ್ಲಿ ಬಂದಲ್ಲಿ ತಮ್ಮನ್ನು ಬೆಂಬಲಿಸಬೇಕು ಎಂದು ನಿರೀಕ್ಷಿಸುವ ರಾಜಕಾರಣಿಗಳು ಪ್ರಜೆಗಳಿಗೆ ಸ್ವಾಭಿಮಾನದ,ಗೌರವಯುತ ಬದುಕನ್ನು ಕಟ್ಟಿಕೊಡಬೇಕು ಎಂದು ಆಲೋಚಿಸುವುದಿಲ್ಲ.ಪ್ರಜೆಗಳು ಅವರ ಪಾಡಿಗೆ ಅವರು ದುಡಿದುಣ್ಣುತ್ತಿದ್ದರೆ ಎಂ ಎಲ್ ಎ,ಎಂಪಿಗಳಿಗೆ ನಮಸ್ಕರಿಸುವವರು ಯಾರು?

‌ರಾಜಕೀಯ ಪಕ್ಷಗಳು ಉಚಿತಕೊಡುಗೆ,ಸಬ್ಸಿಡಿ,ರಿಯಾಯತಿಗಳು ಘೋಷಿಸುವ ಬದಲು ಬಡಜನರ ಜೀವನ ಮಟ್ಟವನ್ನು ಎತ್ತರಿಸುವ ಕೆಲಸ ಮಾಡಬೇಕು.ದುಡಿಯುವ ವರ್ಗದ ಜನರಿಗೆ ಉದ್ಯೋಗ ಖಚಿತ ಪಡಿಸಬೇಕು.ಗ್ರಾಮೀಣ ಪ್ರದೇಶದ ರೈತರು,ಬಡವರು,ಮಹಿಳೆಯರಿಗೆ ಕೆಲಸ ನೀಡಬೇಕು,ರೈತರು ಬೆಳೆಯುವ ಬೆಳೆ,ಉತ್ಪನ್ನಗಳಿಗೆ ಬೆಂಬಲಬೆಲೆ, ದಲ್ಲಾಳಿಗಳಿಂದ ಮುಕ್ತಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು.ಗ್ರಾಮೀಣ ಸಾಂಪ್ರದಾಯಿಕ ಕಸುಬುಗಳಿಗೆ ಉತ್ತೇಜನ ನೀಡಿ ಸಣ್ಣ‌ಕುಟುಂಬಗಳಿಗೆ ವರಮಾನವನ್ನು ಖಚಿತಪಡಿಸಬೇಕು.ಮುಕ್ತಮಾರುಕಟ್ಟೆಯ ಹೆಸರಿನಲ್ಲಿ ಗ್ರಾಮೀಣ ಮಾರುಕಟ್ಟೆಯನ್ನು ಆಕ್ರಮಿಸಿರುವ ಬಹುರಾಷ್ಟ್ರೀಯ ದರೋಡೆಕೋರ ಕಂಪನಿಗಳ ಸರಕು- ಉತ್ಪನ್ನಗಳ ಬದಲು ಗ್ರಾಮೀಣಜನರು ಉತ್ಪಾದಿಸಿದ ಸರಕು ಸೇವೆಗಳು ದೊರೆಯುವಂತಾಗಬೇಕು.ರೈತರಿಗೆ ನೀರಾವರಿ ಸೌಲಭ್ಯ ದೊರಕಿಸಬೇಕು.ನಗರಪ್ರದೇಶಗಳ ನಿರುದ್ಯೋಗಿ ಯುವಕರುಗಳಿಗೆ ಉದ್ಯೋಗಾವಕಾಶ ಕಲ್ಪಿಸಬೇಕು.ನಗರಪ್ರದೇಶದ ಬಡವರಿಗೆ ಆರ್ಥಿಕ ಭದ್ರತೆ ಕಲ್ಪಿಸಬೇಕು.ದೊಡ್ಡದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸುವ ನೆಪದಲ್ಲಿ ಬಡವರನ್ನು ಒಕ್ಕಲೆಬ್ಬಿಸದೆ ಸ್ಥಳೀಯ ಅವಶ್ಯಕತೆಗನುಗುಣವಾದ ಗ್ರಾಮೋದ್ಯೋಗಯೋಜನೆಗಳನ್ನು ಅನುಷ್ಠಾನಗೊಳಿಸಬೇಕು,ಗುಡಿ ಕೈಗಾರಿಕೆ,ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಬೇಕು.ಬಡವರು,ದುರ್ಬಲವರ್ಗಗಳ ಜನರ ಬದುಕನ್ನು ಸುಧಾರಿಸುವ ಮಾಡಬೇಕಾದ ಇಂತಹ ಸಾವಿರಾರು ಕೆಲಸಗಳಿವೆ.ಅದನ್ನು ಬಿಟ್ಟು ಉಚಿತಕೊಡುಗೆಗಳೆಂಬ ಅನಗತ್ಯಹೊರೆಯನ್ನು ಜನರ ಮೇಲೆ ಹೊರಿಸಬಾರದು.ಒಂದು ವೇಳೆ ಮತದಾರರನ್ನು ಸೆಳೆಯುವ ಉದ್ದೇಶದಿಂದ ಉಚಿತಕೊಡುಗೆ,ಸಬ್ಸಿಡಿ,ರಿಯಾಯತಿಗಳನ್ನು ಕೊಡಲೇಬೇಕು ಎಂದಿದ್ದರೆ ರಾಜಕೀಯ ಪಕ್ಷಗಳು ಆ ವೆಚ್ಚವನ್ನು ತಮ್ಮ ಪಕ್ಷದ ನಿಧಿಯಿಂದ ಭರಿಸಬೇಕು! ಹೇಗಿದ್ದರೂ ಎಲ್ಲ ರಾಜಕೀಯ ಪಕ್ಷಗಳು ಚುನಾವಣಾ ಬಾಂಡುಗಳ ರೂಪದಲ್ಲಿ ಸಾವಿರಾರು ಕೋಟಿಗಳ ದೇಣಿಗೆ ಪಡೆಯುತ್ತಿವೆ.ತೆರಿಗೆ ವಂಚಿಸುವ ಉದ್ದೇಶದಿಂದ ರಾಜಕೀಯ ಪಕ್ಷಗಳಿಗೆ ಕೊಡುಗೆ ನೀಡುತ್ತಿರುವ ಉದ್ಯಮಿಗಳು,ಕಾರ್ಪೊರೇಟ್ ಸಂಸ್ಥೆಗಳು ನೀಡುವ ಹಣ ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಇದೆಯಲ್ಲ.ತಮ್ಮ ಪಕ್ಷದ ನಿಧಿಯಿಂದ ಉಚಿತಕೊಡುಗೆಗಳನ್ನು ನೀಡುವ ಪಕ್ಷ ನಿಜವಾಗಿಯೂ ಪ್ರಬುದ್ಧರಾಜಕೀಯ ಪಕ್ಷ ಎನ್ನಿಸುತ್ತದೆ,ಪ್ರಜಾಪ್ರಭುತ್ವವನ್ನು ಬಲಪಡಿಸುವ ಪಕ್ಷ ಎನ್ನುವ ಹೆಗ್ಗಳಿಕೆ ಪಡೆಯುತ್ತದೆ.ಸಾರ್ವಜನಿಕರು ರಾಜಕಾರಣಿಗಳು ಅಧಿಕಾರದ ದಾಹಕ್ಕಾಗಿ ಆಡುವ ಆಟ,ಕೀಳುವಾಂಛೆಗಳನ್ನು ಪ್ರಶ್ನಿಸಬೇಕು.

ಕೊನೆಯದಾಗಿ ಒಂದು ಮಾತು,ರಾಜಕೀಯ ಪಕ್ಷಗಳ ಉಚಿತಕೊಡುಗೆಗಳ ಘೋಷಣೆ ಮತ್ತು ರಾಜಕಾರಣಿಗಳು ಹಣನೀಡಿ,ಮತಖರೀದಿಸುವ ನಿರ್ಲಜ್ಜ ಪ್ರಯತ್ನ ಹೀಗೆಯೇ ಮುಂದುವರೆದರೆ ಭಾರತದ ಪ್ರಜಾಪ್ರಭುತ್ವಕ್ಕೆ ಅಪಾಯವು ಬಂದೊದಗಿ ಮುಂದೆ ಭಾರತದ ಉದ್ಯಮಿಗಳು,ಶ್ರೀಮಂತರುಗಳೇ ದೇಶವನ್ನು ಆಳುವ ಪರಿಸ್ಥಿತಿ ಬರುತ್ತದೆ.ಭಾರತದ ಪ್ರಬುದ್ಧ ಸಂವಿಧಾನವನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸಿದ ರಾಜಕೀಯ ಪಕ್ಷಗಳು ಈಗಾಗಲೇ ಸಂವಿಧಾನಕ್ಕೆ ನೂರಿಪ್ಪತ್ತಕ್ಕು ಹೆಚ್ಚು ತಿದ್ದುಪಡಿ ಮಾಡಿವೆ.ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಸಾರ್ವತ್ರಿಕ ಮತದಾನ ಪದ್ಧತಿಯ ಬದಲು ಉಳ್ಳವರು,ಉದ್ಯಮಿಗಳೇ ಮತದಾರರಾಗಿ ಅವರೇ ರಾಜಕೀಯ ಅಧಿಕಾರ ಹಿಡಿಯುವ ಕಾಲ ಬರಬಹುದು.ಅಂತಹ ಪರಿಸ್ಥಿತಿ ಬಂದೊದಗಲಾರದು .ಆದರೆ ಮತದಾರರು ಪ್ರಜ್ಞಾವಂತರಾಗದೆ,ಮಲಗಿದರೆ ಅಪಾಯವಂತೂ ತಪ್ಪಿದ್ದಲ್ಲ.

About The Author