ಹೋಮಿಯೋಪತಿ : ಹುಸಿನಂಬಿಕೆಯೆ? : ಹೋಮಿಯೋಪತಿ ಹುಸಿ ನಂಬಿಕೆಗಳಿಗೆ ಹೊಸಪೆಟ್ಟು : ನಾಗೇಶ್ ಹೆಗಡೆ

ಹೋಮಿಯೋಪತಿ ಹುಸಿ ನಂಬಿಕೆಗಳಿಗೆ ಹೊಸಪೆಟ್ಟು’ ಎಂಬ ನಾಗೇಶ ಹೆಗ್ಡೆ ಅವರ ಲೇಖನ. ಇಲ್ಲದ ಕಲ್ಲಿಗಾಗಿ ಹುಡುಕಾಟ ಮಾಡಿದಂತಿದೆ. “ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು” ಎಂಬ ಕನ್ನಡದ ಹಳೆಯ ಗಾದೆಗೆ ಉದಾಹರಣೆ. ವೈದ್ಯರೇ ಅಲ್ಲದ ಲೇಖಕರು ತಾವು ಸರ್ವಜ್ಞರೆಂದು ಭ್ರಮಿಸಿ, ಸಾಂದರ್ಭಿಕವಾದ ಕೆಲವು ಪ್ರಕರಣಗಳನ್ನು ಉಲ್ಲೇಖಿಸಿ ರಂಜನೀಯವಾಗಿ ನಿರೂಪಿಸಿದ್ದಾರೆ. ಸತ್ಯಕ್ಕೆ ದೂರವಾದ ಸಂಗತಿಗಳನ್ನು ಈ ರೀತಿ ಫರ್ಮಾನು ಹೊರಡಿಸುವ ಔಚಿತ್ಯವಿತ್ತೆ? ಹೋಮಿಯೋಪತಿ ಮೂಲತಃ ವೈದ್ಯಕೀಯ ಪದ್ದತಿಗಳ ಅಧ್ಯಯನವಾಗಲಿ, ಪ್ರಯೋಗಶೀಲ ಅನುಭವವಾಗಲಿ, ಫಲಿತಾಂಶದ ಖಚಿತ ಅರಿವಾಗಲಿ ಇರದೆ ಮಾಧ್ಯಮಗಳ ಮಾಹಿತಿಗಳನ್ನಷ್ಟೇ ಸಂಗ್ರಹಿಸಿ ಅಸ್ಪಷ್ಟವಾಗಿ ಹೇಳಿರುವುದನ್ನು ನೋಡಿದರೆ ಅಚ್ಚರಿ ಮೂಡುತ್ತದೆ. ಹೋಮಿಯೋಪತಿ ಚಿಕಿತ್ಸೆ ವಿಶ್ವದಾದ್ಯಂತ ಎರಡನೆಯ ಅಗ್ರಶ್ರೇಣಿಯಲ್ಲಿರುವ ವೈದ್ಯಕೀಯ ಪದ್ಧತಿ. ಇಂದಿಗೂ 82 ಕ್ಕೂ ಹೆಚ್ಚಿನ ರಾಷ್ಟ್ರಗಳ. ಕೋಟ್ಯಂತರ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದೆ. ಭಾರತದ ಸಂಸತ್ತಿನಲ್ಲೇ ಹೋಮಿಯೋಪತಿ ಸ್ವಯಂಪರಿಪೂರ್ಣ ವೈಜ್ಞಾನಿಕ ಪದ್ಧತಿ ಎಂದು ಸಂವಿಧಾನಾತ್ಮಕವಾಗಿ ಅನುಮೋದಿಸಿದೆ. ಕೇಂದ್ರದ ಮಾನ್ಯ ಆರೋಗ್ಯ ಸಚಿವರು ಹೋಮಿಯೋಪತಿಯು ಆಯುರ್ವೇದ,ಯುನಾನಿ ಮತ್ತು ಸಿದ್ದಕ್ಕಿಂತ ಹೆಚ್ಚುಜನ ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂರು ಮಿಲಿಯನ್ ಭಾರತೀಯರು ಹೋಮಿಯೋಪತಿ ಚಿಕಿತ್ಸೆಯ. ಮೇಲೆ ಅವಲಂಬಿತರಾಗಿದ್ದಾರೆಂದು ಹೇಳಿರುವುದನ್ನು ಗಮನಿಸಬೇಕು. ಹೋಮಿಯೋಪತಿಗೆ ಯಾವುದೇ ಸ್ವಯಂಘೋಷಿತ ಸಂಶೋಧಕರ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂಬುದನ್ನು ವಿನಮ್ರವಾಗಿ ತಿಳಿಸಬಯಸುತ್ತೇನೆ. ಇಂಥ ಅಸ್ಪಷ್ಟ ಬರಹದಿಂದ ಶ್ರೀಸಾಮಾನ್ಯರಲ್ಲಿ ಗೊಂದಲವನ್ನುಂಟು ಮಾಡುವುದರ ಹೊರತಾಗಿ ಲೋಕೋಪಯೋಗವಾಗದು. ಹೋಮಿಯೋಪತಿಗೆ ಇಂಥ ನಿಂದೆಗಳು.ಅಪಪ್ರಚಾರ.ಅಸಹನೆ ಹೊಸತೇನೂ ಅಲ್ಲ. ಹೋಮಿಯೊಪತಿ ಚಿಕಿತ್ಸಾ ಪದ್ಧತಿಯ ಜನಕ ಡಾ. ಸ್ಯಾಮ್ಯುಯಲ್ ಹಾನಿಮನ್ ಅವರ ಕಾಲದಿಂದಲೇ ಬೆಳೆದು ಬಂದಿದೆ. ಸ್ಥಾಪಿತ ಪಟ್ಟಭದ್ರ ಹಿತಾಸಕ್ತಿಗಳ ಸ್ಥಾನಭದ್ರತೆ, ಅನುಭವಿ ಹೋಮಿಯೋಪತಿ ವೈದ್ಯರ ಅಸಾಮರ್ಥ್ಯ ಮತ್ತು ಡ್ರಗ್ ಮಾಫಿಯಾ ದಂಧೆ( ಮಾರ್ಕೆಟಿಂಗ್ ಫೂರ್ಸಸ್, ಪ್ಯಾಕೇಜಿಂಗ್,ಬ್ರಾಂಡ್ ಈಕ್ವಿಟಿ) ಯ ಹಿನ್ನೆಲೆಯಲ್ಲಿ ಪ್ರತಿರೋಧಗಳು ಅಭಿವ್ಯಕ್ತವಾಗುತ್ತಿರುತ್ತವೆ. ಹೋಮಿಯೋಪತಿ ಎಲ್ಲದಕ್ಕೂ ಮೂಲವಾದ ಜೀವವನ್ನು ವೈಜ್ಞಾನಿಕವಾಗಿ ಮತ್ತು ಸಮಗ್ರವಾಗಿ ಅರ್ಥ ಮಾಡಿಕೊಳ್ಳುವ ಪದ್ಧತಿ. ಅದು ದೇಹ, ಮನಸ್ಸು, ಬುದ್ಧಿಯನ್ನು ಒಂದು ಘಟಕವೆಂದು ಪರಿಗಣಿಸುತ್ತದೆ. ಅದರ ಮೂಲನಿಯಮ “ಸಿಮಿಲಿಯಾ ಸಿಮಿಲಿಬಸ್ ಕ್ಯೂರೆಂಟರ್ ಅಂದರೆ ಯಾವುದೇ ಪದಾರ್ಥ ಆರೋಗ್ಯವಂತ ವ್ಯಕ್ತಿಯಲ್ಲಿ ಕೆಲವು ರೋಗೋತ್ಪನ್ನಗಳನ್ನು ಉಂಟು ಮಾಡಬಲ್ಲದಾದರೆ ಅದೇ ಪದಾರ್ಥ ಅತ್ಯಲ್ಪ ಪ್ರಮಾಣದಲ್ಲಿ ಅದೇ ರೋಗ ಲಕ್ಷಣವುಳ್ಳ ರೋಗಿಯಲ್ಲಿ ನಿವಾರಕವಾಗಿ ಕೆಲಸ ಮಾಡುತ್ತದೆ” ಎಂಬ ತತ್ತ್ವವನ್ನೇ ಗ್ರಹಿಸದೆ ಆರಂಭದಲ್ಲೇ ಜಿರಲೆ ಕತೆ ಹೇಳಿ ತಮ್ಮ ವೈಯಕ್ತಿಕ ಅಜ್ಞಾನವನ್ನು ಸಾರ್ವತ್ರೀಕರಿಸುವ ಪ್ರಯತ್ನ ಮಾಡಲು ಹೊರಟಂತಿದೆ.

ಡಾ. ಹಾನಿಮನ್ ಅಲೋಪತಿ(ಆಧುನಿಕ ವೈದ್ಯ ವಿಜ್ಞಾನವೆಂದುಕೊಂಡಿರುವ)ಪದ್ಧತಿಯ ಪ್ರಪಂಚದ ಮೂವರು ಅತ್ಯುತ್ತಮ ವೈದ್ಯರಲ್ಲಿ ಒಬ್ಬರು.ಎಂ.ಡಿ ಪದವೀಧರರಾಗಿದ್ದು ತಾವು ನೀಡುತ್ತಿದ್ದ ಚಿಕಿತ್ಸಾಪದ್ಧತಿಯಲ್ಲಿ ಒಂದು ಮೂಲ ನಿಯಮ ಇಲ್ಲದಿರುವುದು, ರೋಗಗಳ ಮೂಲ ಕಾರಣ ತಿಳಿಯದಿರುವುದು ಮತ್ತು ಮಾನಸಿಕ ರೋಗಿಗಳಿಗೆ ಛಡಿಏಟು ಕೊಡುವುದೂ ಒಳಗೊಂಡಂತೆ ರೂಢಿಯಲ್ಲಿದ್ದ ತೀವ್ರ ವೇದನೆಯ ರಣವೈದ್ಯ ಅವರನ್ನು ವಿಮುಖರನ್ನಾಗಿಸಿತು. ಮುಖ್ಯವಾಗಿ ಒಂದು ಕಾಯಿಲೆಯ ಔಷಧ ಮತ್ತೊಂದು ಕಾಯಿಲೆಗೆ ಕಾರಣವಾಗುವ ಅಡ್ಡ ಪರಿಣಾಮವನ್ನು ಗಮನಿಸಿ ಸೂಕ್ಷ್ಮಸಂವೇದನಾಶೀಲರಾಗಿದ್ದ ಅವರಿಗೆ ಭ್ರಮನಿರಸನವನ್ನುಂಟು ಮಾಡಿತ್ತು. ಅದಕ್ಕೊಂದು ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಹನ್ನೆರಡು ಭಾಷೆಗಳಲ್ಲಿ ಪರಿಣತರಾಗಿದ್ದ ಅವರು ರಸಾಯನಶಾಸ್ತ್ರ ವಿಜ್ಞಾನಿಯೂ ಆಗಿದ್ದು ವೈದ್ಯಕೀಯ ಗ್ರಂಥಗಳ ಅನುವಾದದಲ್ಲಿ ತೊಡಗಿದರು. ನ್ಯೂಟನ್ ಗೆ ಗುರುತ್ವಾಕರ್ಷಣೆ ನಿಯಮ ನಿರೂಪಣೆಗೆ ಸೇಬು ಹೇಗೆ ಪ್ರೇರಕವಾಯಿತೋ ಅದೇ ರೀತಿ ಹಾನಿಮನ್ ಅವರಿಗೆ ಕ್ವಿನೈನ್ (ಸಿಂಕೋನ ತೊಗಟೆ) ಪ್ರೇರಕವಾಯಿತು.
ತಪಸ್ವಿಯಂತೆ ನಿರಂತರ ಪ್ರಯೋಗಶೀಲತೆ, ಆಳವಾದ ಅಧ್ಯಯನದಿಂದ ಶಾಶ್ವತ ನೈಸರ್ಗಿಕ ನಿಯಮವನ್ನು ಆಧರಿಸಿರುವ” ಲಾ ಆಫ್ ಸಿಮಿಲರ್ಸ್ ” ರೂಪಿಸಿದ್ದಾರೆಯೇ ಹೊರತು ವಿಷವಸ್ತುಗಳನ್ನೇ ದುರ್ಬಲಗೊಳಿಸಿ ಔಷಧ ತಯಾರಿಸುವಂಥದ್ದಲ್ಲ ಎಂಬುದು ಲೇಖಕರಿಗೆ ತಿಳಿದಿದ್ದರೆ ಒಳಿತು.
ಸೃಷ್ಟಿಯಲ್ಲಿ ಪ್ರತಿಕ್ಷಣವೂ ಹಳತು ಹೊಸದಕ್ಕೆ ದಾರಿ ಮಾಡಿಕೊಡುತ್ತದೆ.ಹೊಸ ಹೊಸತು ಮತ್ತೆ ಹಳತಾಗಿ ಹೊಸತನಕ್ಕೆ ಅಂಕುರವಾಗುತ್ತದೆ.ಅರಿತುಕೊಳ್ಳುವನಿರಂತರ ಪ್ರಯತ್ನ ಶೀಲತೆಯೆ ವಿಜ್ಞಾನ. ಜ್ಞಾನದ ವಿಕಾಸ ಪ್ರಕ್ರಿಯೆಯಲ್ಲಿ ಯಾವುದೇ ನಿಯಮ, ಪದ್ಧತಿಗಳು ಇದಕ್ಕೆ ಹೊರತಲ್ಲ.
ಹೋಮಿಯೋಪತಿಯಲ್ಲಿ ಸೂರ್ಯನ ಅಡಿಯಲ್ಲಿರಬಹುದಾದ ಎಲ್ಲ ನಿಸರ್ಗದ ಎಲ್ಲ ರೋಗ ನಿವಾರಕಗಳು ಔಷಧಿಗಳಾಗಿ ಬಳಕೆಯಾಗುತ್ತವೆ. ಇದರಲ್ಲಿ ಸಸ್ಯ.ಪ್ರಾಣಿ ಹಾಗೂ ಖನಿಜಗಳೂ ಸೇರಿವೆ. ಹೋಮಿಯೋಪತಿಯ ಫಾರ್ಮಾಕಾಲಜಿ ಒಂದು ವಿಶೇಷ ವಿಜ್ಞಾನ. ಔಷಧಗಳನ್ನು ಸರಳೀಕರಿಸಿ, ಶಕ್ತೀಕೃತ ರೂಪದಲ್ಲಿ ಸಿದ್ದೀಕರಿಸಲ್ಪಟ್ಟಿರುತ್ತವೆ. ಈ ವಿಶಿಷ್ಟ ಕ್ರಿಯೆಯಿಂದ ಎಲ್ಲ ಕಚ್ಛಾವಸ್ತುಗಳು ಮೂಲ ಸೊಗಡನ್ನು ಕಳೆದುಕೊಂಡು ಕೇವಲ ರೋಗನಿವಾರಕ ಸಾಮರ್ಥ್ಯವಾಗಿ ಪರಿವರ್ತಿತವಾಗಿರುತ್ತವೆ ಎಂಬ ಅರಿವು ಅತ್ಯಂತ ಅಗತ್ಯ.
ಹೋಮಿಯೋಪತಿ – ಹುಸಿನಂಬಿಕೆಗಳಿಗೆ ಹೊಸಪೆಟ್ಟು ಲೇಖನದ ಮೂಲ ಇತ್ತೀಚೆಗೆ ಕೇರಳದಲ್ಲಿ ಫಿಲಿಪ್ ಮತ್ತು ಇತರ ಏಳು ಮಂದಿ ಪ್ರಕಟಿಸಿದ ಲೇಖನ. ಅವರು 456 ರೋಗಿಗಳನ್ನು ಅಧ್ಯಯನ ಮಾಡಿರುವುದಾಗಿ ಅದರಲ್ಲಿ 9 ರೋಗಿಗಳಿಗೆ ಯಕೃತ್ತಿನ ಕಾಯಿಲೆ ಬಂದಿತೆಂದು ಹೇಳಿದೆ. ಹೋಮಿಯೋಪತಿಗೆ ಕೇರಳದಲ್ಲಿರುವ ಜನಪ್ರಿಯತೆ ಮತ್ತು ವ್ಯಾಪಕತೆಯನ್ನು ಕಂಡು ಹತಾಶರಾಗಿ ಆಡಿರುವ ದುರ್ಬಲ ಮಾತುಗಳಾಗಿವೆ. ತಮ್ಮ ಚಿಕಿತ್ಸಾನುಭವದಲ್ಲಿ ಭ್ರಮನಿರಸನಗೊಂಡು ತಮ್ಮ ವೈಫಲ್ಯವನ್ನು ಮರೆಮಾಚಲು ಪ್ರಯತ್ನಿಸಿದ್ದಾಗಿದೆ. ಇವರೇ ಹೇಳಿರುವಂತೆ ಈ 9 ಮಂದಿ ಅಲೋಪತಿ. ಆಯುರ್ವೇದ ಔಷಧಗಳನ್ನು ಬಳಸಿಲ್ಲ ಎಂಬುದಕ್ಕೆ ಯಾವ ಖಾತ್ರಿಯೂ ಇಲ್ಲ. ಹೇಳಿಕೆಗಳಿಗೆ ಸಾಕ್ಷ್ಯಾಧಾರಗಳ ಕೊರತೆ ಎದ್ದು ಕಾಣುತ್ತದೆ. ಭಾರತಸರ್ಕಾರದ ಅಧಿಕೃತ ಸಂಸ್ಥೆಯಾದ ಆಯುಷ್ ಫಾರ್ಮಾಕಾಗ್ನಸಿ ಎರ್ನಾಕುಲಂನಿಂದ 40 ಕೀಮಿ ದೂರದಲ್ಲಿದೆ. ಅದರೊಂದಿಗೆ ಪ್ರಯೋಗ ನಡೆಸದೆ ಏಕಪಕ್ಷೀಯವಾಗಿ ನಿರ್ಧರಿಸುವುದು ವಿಜ್ಞಾನವೆ? ಇಂತಹ ಸಂಶೋಧನೆಗಳನ್ನು ವಿಜ್ಞಾನಿಗಳ ಸಮೂಹ ಒಪ್ಪಿಕೊಳ್ಳಲು ಸಾಧ್ಯವೆ? ಅಸ್ತಿಭಾರದ ಮೆಟಾ ಅನಾಲಿಸಿಸ್, ಸಿಸ್ಟಮಿಕ್ ಅನಾಲಿಸಿಸ್, ಲಾರ್ಜ್ ಅಂಡ್ ಸ್ಮಾಲ್ ಗ್ರೂಫ್ ಟ್ಯಾಕ್ಸಿಕ್ ಅನಾಲಿಸಿಸ್ ,ಕನ್ ಕ್ಲೂಜನ್ ಅಂಡ್ ಇನ್ಫರೆನ್ಸ್ ಇವುಗಳ ಕ್ರಮವೇ ತಿಳಿಯದಾಗಿದೆ. ಎಲ್ಲೋ ನಡೆದ ಕೆಲವು ಘಟನೆಗಳನ್ನಷ್ಟೇ ಉಲ್ಲೇಖಿಸಿ 200 ಕ್ಕೂ ಹೆಚ್ಚು ವರ್ಷಗಳಿಂದ ಬೆಳೆದು ಬಂದಿರುವ ಹೋಮಿಯೋಪತಿ ಚಿಕಿತ್ಸಾ ಪದ್ಧತಿ ಹುಸಿನಂಬಿಕೆಯಾಗಲು ಸಾಧ್ಯವೆ? ಹೋಮಿಯೋಪತಿ ತನ್ನದೇ ಆದ ಸ್ಥಿರತೆ ಯೋಗ್ಯತೆ ಮತ್ತು ಅರ್ಹತೆಯಿಂದಾಗಿ ಜನಮಾನ್ಯವಾಗಿದೆಯೇ ಹೊರತುಕೃಪಾಪೋಷಿತವಲ್ಲ. ಹೋಮಿಯೋಪತಿ ಮೌಲಿಕ ಸಾಹಿತ್ಯ ಪ್ರತಿಶತ 90 ಭಾಗ ಅಲೋಪತಿವೈದ್ಯರಿಂದಲೇ ರಚನೆಯಾಗಿದೆ.ಬೇರೆ ಪದ್ಧತಿಗಳಿಂದಲೇ ಎಲ್ಲ ರೋಗಗಳು ಗುಣಮುಖವಾಗುವುದಾದರೆ ಕೊನೆಯಲ್ಲಾದರೂ ಹೋಮಿಯೋಪತಿ ಚಿಕಿತ್ಸೆಗೆ ಬರುವ ಅಗತ್ಯದ ಏನಿದೆ? ಫಿಲಿಪ್ ಮತ್ತು ಲೇಖಕರು ಪೂರ್ವಗ್ರಹಪೀಡಿತರಾಗಿ ಹೋಮಿಯೋಪತಿ ಗೆ ಸರ್ಕಾರಿ ಅ ನುದಾನವನ್ನು ನಿಲ್ಲಿಸಲು ಒತ್ತಾಯಿಸಿ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. ಯಾವುದೇ ಅಡ್ಡ ಪರಿಣಾಮವಿರದೆ ಜನಸಾಮಾನ್ಯರಿಗೆಕೈಗೆಟುಕುವ ಬದರದಲ್ಲಿ ಸುಲಭವಾಗಿ ಸಿಗುವ ಪದ್ಧತಿಯನ್ನು ನಿಲ್ಲಿಸಬೇಕೆಂಬ ಆಗ್ರಹ ಎಷ್ಟರಮಟ್ಟಿಗೆ ಸರಿ?
ಲೇಖಕರು ಹೇಳುವಂತೆ ತಾನಾಗಿಯೇ ಗುಣವಾಗುವ ಕೆಲವು ರೋಗಗಳು ಇರುವುದಾದರೆ ಅದಕ್ಕೆ ಹೋಮಿಯೋಪತಿ ವೈದ್ಯರಲ್ಲಿಗೇ ಏಕೆ ಬರಬೇಕು? ಎರಡನೆಯ ಹಂತದ ಲಿವರ್ ಕ್ಯಾನ್ಸರ್, ಮಂಗನಕಾಯಿಲೆ,ಬ್ಯಾಕ್ಟಿರಿಯಲ್ ನ್ಯುಮೋನಿಯಾವನ್ನು ಹೋಮಿಯೋಪತಿಯಲ್ಲಿ ವಾಸಿ ಮಾಡಲಿ ನೋಡೋಣ ಎಂದು ಸವಾಲು ಹಾಕುವ ಫಿಲಿಪ್ ಅವರು ಅಲೋಪತಿ ಪದ್ದತಿಯಲ್ಲಿ ವಾಸಿಮಾಡಬಲ್ಲರೆ? ಸಾಪೇಕ್ಷವಾದವನ್ನು ಮಹಾವೀರ.ಶತಮಾನಗಳ ಹಿಂದೆಯೇ ಹೇಳಿದ್ದರು. ಆದರೆ ಅದನ್ನು ಕಳೆದ ಶತಮಾನದಲ್ಲಿ ಐನ್ ಸ್ಟೈನ್ ಪ್ರಾಯೋಗಿಕವಾಗಿ ಸಾದರಪಡಿಸುವ ತನಕ ಜಗತ್ತು ಕಾಯಬೇಕಾಯಿತು. ಗೆಲಿಲಿಯೊ ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ ಎಂದಾಗ ಅವನನ್ನು ಧರ್ಮದ್ರೋಹಿ ಎಂದು ವ್ಯಾಟಿಕನ್ ಸಿಟಿಯಿಂದ ಹೊರಹಾಕಲಾಯಿತು.
ಡಾ.ಜಾನ್ ರಂಗೆನ್ ವಿರಾಪೆನ್ ಹೇಳುವಂತೆ “ಜಗತ್ತಿನಲ್ಲಿ ಈವರೆಗೆ ಯುದ್ಧಗಳಿಂದ ಮೃತಪಟ್ಟವರಿಗಿಂತ ಔಷಧಗಳ ದುಷ್ಪರಿಣಾಮಗಳಿಂದ ಸತ್ತವರ ಸಂಖ್ಯೆಯೇ ಹೆಚ್ಚು” ಅಷ್ಟೇ ಅಲ್ಲ. ಕ್ಲಿನಿಕಲ್ ಟ್ರಯಲ್ ಗಳಲ್ಲಿ ಔಷಧಿಗಳ ದುಷ್ಪರಿಣಾಮಗಳಿಂದ ಸತ್ತವರ ಸಂಖ್ಯೆಯನ್ನು ಫಾರ್ಮಾಕಂಪನಿಗಳು ಮುಚ್ಚಿಡುತ್ತವೆ. ಇಲಾಯ್ ಲಿಲಿ ಕೋಟ್ಯಂತರ ರೂಗಳನ್ನು ವೆಚ್ಛಮಾಡಿ ಮಾನಸಿಕ ಅಸ್ವಸ್ತರಿಗಾಗಿ ತಯಾರಿಸಿದ ಔಷಧ ನಿರೀಕ್ಷಿತ ಗುಣಮಟ್ಟದಲ್ಲಿ ಇಲ್ಲ ಎಂಬ ಕಾರಣಕ್ಕೆ ವೃದ್ಧರಿಗೆ ನಿದ್ದೆ ಮಾತ್ರೆಯಾಗಿ ಮಾರಾಟಮಾಡಿದ್ದು, ಈ ಕಂಪನಿ ನ್ಯಾಯಾಲಯದಲ್ಲಿ ಕೋಟ್ಯಂತರ ಡಾಲರ್ ಗಳನ್ನು ದಂಡ ತೆರಬೇಕಾಯಿತು. ಇಂಥ ಹುಸಿ ಪ್ರಕರಣಗಳು ಹೋಮಿಯೋಪತಿಯಲ್ಲಿ ಇದೆಯೆ?
ಫಿಲಿಪ್ ಅವರ ಪ್ರಕಾರ ಮದರ್ ಟಿಂಚರ್ ( ತಾಯಿದ್ರವ)ನ್ನು ಬಹಳಕಾಲ ಬಳಸಿದ್ದರೆ ದುಷ್ಪರಿಣಾಮಗಳಾಗುವ ಸಾಧ್ಯತೆ ಇದೆ ಎಂಬುದಾಗಿದೆ. ಆದರೆ ಮದರ್ ಟಿಂಚರ್ ಹೋಮಿಯೋಪತಿ ಮೂಲ ತತ್ತ್ವದ ಪ್ರಕಾರ ಶಕ್ತೀಕೃತವಾದ ಶುದ್ಧೀಕರಿಸಿದ ರೂಪದಲ್ಲಿರುವುದಿಲ್ಲ ಎಂಬುದನ್ನು ಗಮನಿಸಬೇಕು. ಇದು ಫಿಲಿಪ್ ಅವರಿಗೆ ಹೋಮಿಯೋಪತಿ ಬಗೆಗಿರುವ ಅರಿವಿನ ಕೊರತೆಗೆ ಸಾಕ್ಷಿ. ಇಷ್ಟೊಂದು ಅಸಹನೆ, ಗೊಂದಲ, ಅತಾರ್ಕಿಕತೆಯನ್ನು ವೈಜ್ಞಾನಿಕವೆಂದು ಯಾವ ವಿಜ್ಞಾನಿಯೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಗೋಲ್ ಕೀಪರ್ ಇಲ್ಲದ ಮೈದಾನದಲ್ಲಿ ಗೋಲು ಹೊಡೆದಂತೆ. ಫುಟುಬಾಲ್ ಆಡುವವರಿಗೆ ಕ್ರಿಕೆಟ್ ನಿಯಮಗಳನ್ನು, ಕ್ರಿಕೆಟ್ ನಿಯಮಗಳನ್ನು ಪಾಲಿಸಿ ಎಂದು ಹೇಳಿದಂತಾಗಿದೆ.
ನಿನ್ನೆಯ ವಂಡರ್ ಡ್ರಗ್ಸ್ ಗಳು ಇಂದಿನ ಬ್ಲಂಡರ್ ಡ್ರಗ್ಸ್ ಗಳಾಗಿ ರುವುದನ್ನು ನೋಡುತ್ತಿದ್ದೇವೆ. ವೈದ್ಯಕೀಯ ಕ್ಷೇತ್ರ ವಾಣಿಜ್ಯೀಕರಣಗೊಂಡು ಅಮಾನವೀಯತೆಯ ಎಲ್ಲೆಯನ್ನು ದಾಟಿದೆ. ಭಾರತದಲ್ಲಿ ಶ್ರೀಸಾಮಾನ್ಯನಿಗೆ ವೈದ್ಯಕೀಯ ವೆಚ್ಛ. ಗಗನಕುಸುಮ ವಾಗಿರುವಾಗ ಸುಲಭವಾಗಿ ಲಭ್ಯವಾಗಬಲ್ಲ ಹೋಮಿಯೋಪತಿಗೆ ಅನುದಾನವನ್ನು ನಿಲ್ಲಿಸಲು ಹೇಳುವುದಕ್ಕೆ ಫಿಲಿಪ್ ಅವರಿಗೆ ಯಾವ ನೈತಿಕ ತೆಯೂ ಇಲ್ಲ.ಪ್ರಾಯಶಃ ಇಂಥ ಪ್ರಕರಣಗಳ ಕಾರಣದಿಂದಲೇ ಐನ್ ಸ್ಟೈನ್ “ಧರ್ಮವಿಲ್ಲದ. ವಿಜ್ಞಾನ ಧೂರ್ತರ ತಾಣವಾಗುತ್ತದೆ” ಎಂದಿರುವುದು.
ಎಲ್ಲ ಕ್ಷೇತ್ರಗಳಲ್ಲೂ ಪರ – ವಿರೋಧ ಇದ್ದೇ ಇರುತ್ತದೆ. ಅಪಪ್ರಚಾರಗಳಿಂದ ಸತ್ಯವನ್ನು ಬಹಳ ಕಾಲ ಮುಚ್ಚಿಡಲು ಸಾಧ್ಯವಿಲ್ಲ. ಹೋಮಿಯೋಪತಿ ಹುಸಿನಂಬಿಕೆಗಳಿಗೆ ಹೊಸಪೆಟ್ಟು ಎಂಬ ಲೇಖನ ಪೂರ್ವಗ್ರಹ ಪೀಡಿತ ಅಪಪ್ರಚಾರಕ್ಕೆ ಸಾಕ್ಷಿಯಾಗಿದೆ. ಆಧುನಿಕ ವೈದ್ಯಕೀಯ ವಿಜ್ಞಾನದ ಪಿತಾಮಹಾ, ಮಹಾಮಾನವತಾವಾದಿ ಸರ್. ವಿಲಿಯಂ ಅಸ್ಲರ್ ಹೇಳುವಂತೆ” ಔಷಧ ವಿಜ್ಞಾನ ಅನಿಶ್ಚಿತತೆಯ ವಿಜ್ಞಾನ ಹಾಗೂ ಸಂಭಾವನೀಯತೆಗಳ ಕಲೆ” ಎಂಬುದನ್ನು ಮರೆಯಬಾರದು.
Medicine is science of uncertainty and art of probability
ಮಾನ್ಯ ಲೇಖಕರು ವೈದ್ಯವಿಜ್ಞಾನವನ್ನು ನಿಖರ ಭೌತದ್ರವ್ಯವಿಜ್ಞಾನಕ್ಕೆ ಹೋಲಿಸಿ ಅದರಂತೆಯೇ ಇರಬೇಕೆಂದು ಭಾವಿಸಿದಂತಿದೆ. ಆಧುನಿಕ ವಿಜ್ಞಾನಕ್ಕಾಗಲಿ, ವೈದ್ಯಕೀಯ ವಿಜ್ಞಾನಕ್ಕಾಗಲಿ ಮನುಷ್ಯನ ಲಕ್ಷಣ ನಿರೂಪಣೆಯೇ ಈವರೆಗೆ ಸಾಧ್ಯವಾಗಿಲ್ಲ. ಆರೋಗ್ಯ ಮತ್ತು ಅನಾರೋಗ್ಯದ ಅಜಗಜಾಂತರವನ್ನು ಅರ್ಥಮಾಡಿಕೊಳ್ಳುವುದೂ ತಮ್ಮ ಅರಿವಿನ ಮಿತಿಯಲ್ಲಿಲ್ಲ ಎಂಬುದು ಈ ಮಂದಿಗೆ ಗೊತ್ತಾಗುತ್ತಿಲ್ಲ. ವಿಶ್ವ ಆರೋಗ್ಯಸಂಸ್ಥೆಯಿಂದ ಹಿಡಿದು ಎಲ್ಲ ಹಂತಗಳಲ್ಲಿ ಮನುಷ್ಯನ ಬಗೆಗೆ ಸಂಪೂರ್ಣ ಅರಿವಿನ ಕೊರತೆಯೇ ಈ ಎಲ್ಲ ಪ್ರಮಾದಗಳಿಗೆ ಮುಖ್ಯ ಕಾರಣವಾಗಿದೆ. ಆಧುನಿಕ ವಿಜ್ಞಾನ ವಿಶೇಷಜ್ಞರನ್ನು ಸೃಜಿಸಿ ಮನುಷ್ಯನನ್ನು ಬಿಡಿಬಿಡಿಭಾಗಗಳಾಗಿ ನೋಡಲಾಗುತ್ತಿದೆಯೇ ಹೊರತು ಸಮಗ್ರವಾಗಿ ನೋಡಲು ಸಾಧ್ಯವಾಗಿಲ್ಲ. ಹೀಗಾಗಿ ವೈದ್ಯವಿಜ್ಞಾನ ಪರಿಪೂರ್ಣ ಎಂದು ಹೇಳಲು ಸಾಧ್ಯವಿಲ್ಲ. ಶೇ.೮೦ ರಷ್ಟು ಕಾಯಿಲೆಗಳಿಗೆ ಕಾರಣವೇ ಗೊತ್ತಿಲ್ಲ ಎಂದಾದರೆ ಅದು ಪರಿಪೂರ್ಣ ಹೇಗಾಗುತ್ತದೆ? ನಾವು ಮನುಷ್ಯನ ವಿಜ್ಞಾನದ ಬಗ್ಗೆ ಮಾತನಾಡುತ್ತಿರುವುದೇ ಹೊರತು ಭೌತದ್ರವ್ಯ ವಿಜ್ಞಾನವನ್ನಲ್ಲ.ಗಣಿತ. ಭೌತವಿಜ್ಞಾನ. ರಸಾಯನಶಾಸ್ತ್ರದಲ್ಲಿರುವ ನಿಖರತೆಯನ್ನು ವೈದ್ಯವಿಜ್ಞಾನದಲ್ಲಿ ನಿರೀಕ್ಷಿಸಲಾಗದು. ಈ ನಿಟ್ಡಿನಲ್ಲಿ ಹೋಮಿಯೋಪತಿ ಮಾನವೀಯ ಮೌಲ್ಯಗಳನ್ನು ಒಳಗೊಂಡ ಸಮಗ್ರ ಪದ್ದತಿಯಾಗಿದೆ. ಕೆಲವು ರೋಗಳು ವೈಯಕ್ತಿಕ, ಕೆಲವು ರೋಗಗಳು ಸಾಮೂಹಿಕ, ಇನ್ನೂ ಕೆಲವು ಪ್ರತ್ಯೇಕ . ಒಂದೇ ಕಾಯಿಲೆ ಒಮ್ಮೆ ಒಬ್ಬರಲ್ಲಿ ಒಂದು ರೂಪದಲ್ಲಿ ಕಾಣಿಸಿಕೊಳ್ಳಬಹುದು. ಬೇರೊಬ್ಬರಲ್ಲಿ ಅದರ ಒಂದು ಲಕ್ಷಣ ಒಳಗೆ ಉಳಿದು ಬೇರೆಯೇ ರೂಪದಲ್ಲಿ ಕಾಣಿಸ ಬಹುದು. ಇಂಥ ಸಂಕೀರ್ಣ ತೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹೀಗಿರುವಾಗ ರೋಗದ ಮೂಲವನ್ನು ಬಿಟ್ಟು ಲಕ್ಷಣಗಳೆಂಬ ಶಾಖೆಗಳನ್ನು ಗುಣಪಡಿಸುವ ಪ್ರಯತ್ನ ಅದೆಷ್ಟೇ ತಜ್ಞವೈದ್ಯರೆ ನ್ನಿಸಿಕೊಂಡರೂ ಅದು ಅರೆಬರೆಯೇ ಸರಿ.ಅದರ ಪರಿಣಾಮ ಕೂಡ ಅಪರಿಪೂರ್ಣವೇ. ಕಾಯಿಲೆಗಳು ಕೇವಲ ಪರಾವಲಂಬಿ ಕೀಟಗಳು, ಬ್ಯಾಕ್ಟೀರಿಯಾ ಗಳು,ವೈರಸ್ ಗಳಿಂದ ಬರುತ್ತದೆ ಎಂದಷ್ಟೇ ಅಲ್ಲ. ಮನುಷ್ಯ ಕುಟುಂಬ, ಸಮಾಜ ಮತ್ತು ಕಾರ್ಯಕ್ಷೇತ್ರದೊಡನೆ ಹೊಂದಿರುವ ಸಂಬಂಧವನ್ನೂ ಅಧರಿಸಿರುತ್ತದೆ. ಮನುಷ್ಯ, ಮನಸ್ಸು. ದೇಹ. ಬುದ್ಧಿಭಾವಗಳ ಸಮ್ಮಿಲನ ಎಂಬ ಸಮಗ್ರತೆಯ ಅರಿವು ಅಗತ್ಯ.ಕೇವಲ ನಂಬಿಕೆಯಿಂದ ಪ್ಲೆಸಿಬೊಎಫೆಕ್ಟ್ ( ಸುಳ್ಳುಔಷಧ) ನಿಂದಲೇ ರೋಗವಾಸಿಯಾಗುವುದಾದರೆ ಯಾವುದೇ ಔಷಧ ಪದ್ಧತಿಯ ಅಗತ್ಯವಿರದು. ನುರಿತ ಹೋಮಿಯೋಪತಿ ತಜ್ಞರ ಜತೆ ಚರ್ಚಿಸಿ, ಅವಲೋಕಿಸಿ, ಪ್ರಯೋಗಶೀಲರಾಗಿ ಬಂದ ಫಲಿತಾಂಶದ ಆಧಾರದ ಮೇಲೆ ಇಂತಹ ಫರ್ಮಾನುಗಳನ್ನು ಹೊರಡಿಸಿದ್ದರೆ ಉಪಯುಕ್ತವಾಗುತ್ತಿತ್ತು. ವೈಯಕ್ತಿಕ ನೆಲೆಗಟ್ಟಿನಲ್ಲಿ ಅವಲೋಕಿಸುವುದಾದರೆ ನಾಲ್ಕು ದಶಕಗಳ ಚಿಕಿತ್ಸಾನುಭವದಲ್ಲಿ 25 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇನೆ. ಮೂರು ಸಾವಿರ ಸಂತಾನಹೀನರಿಗೆ ಪರಿಹಾರ ಒದಗಿಸಿರುವುದು ವಿಶ್ವದಾಖಲೆ.ನಂಬಿದರೆ ನಂಬಿ ಬಿಟ್ಟರೆ ಬಿಡಿ ಅಂಕಣಕ್ಕೆ ಸೇರಬಹುದಾದ ಮಾರಾಣಾಂತಿಕ ಕಾಯಿಲೆಗಳನ್ನೂ ತಹಬಂದಿಗೆ ತಂದ ಪ್ರಕರಣಗಳು ಸೇರಿದೆ. ಕೊನೆಯ ಅವಕಾಶಕ್ಕಾಗಿ ಹೋಮಿಯೋಪತಿ ಗೆ ಬಂದ ಸಾವಿರಾರು ಪ್ರಕರಣಗಳನ್ನು ಸಾಕ್ಷ್ಯಾಧಾರಗಳಿಂದ ದೃಢಪಡಿಸಬಲ್ಲೆ.ಇವೆಲ್ಲವೂ ಹುಸಿ ನಂಬಿಕೆಗಳಿಂದ ಸಾಧ್ಯವಾಗುವಂಥದ್ದಲ್ಲ.

ಡಾ.ಬಿ.ಟಿ.ರುದ್ರೇಶ್
ಅಧ್ಯಕ್ಷರು.
ಕರ್ನಾಟಕ ಹೋಮಿಯೋಪತಿ ಮಂಡಳಿ. ಬೆಂಗಳೂರು.

About The Author