ಮೂರನೇ ಕಣ್ಣು : ಜನಪ್ರತಿನಿಧಿಗಳ ಕುಟುಂಬ ವ್ಯಾಮೋಹ; ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ,ಕಟಂಕ : ಮುಕ್ಕಣ್ಣ ಕರಿಗಾರ

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಯುದ್ಧೋತ್ಸಾಹ ಕಂಡುಬರುತ್ತಿದೆ.ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಹಾಲಿ ಶಾಸಕರಾಗಿದ್ದವರಿಗೆ ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಟಿಕೆಟ್ ಘೋಷಿಸಿವೆ,ಘೋಷಿಸಲಿವೆ.ಕೆಲವು ಪ್ರಭಾವಿ ರಾಜಕಾರಣಿಗಳು ತಮ್ಮ ಜೊತೆ ಕುಟುಂಬದ ಸದಸ್ಯರಿಗೂ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪ್ರಭಾವಿಗಳು ತಮ್ಮ ಮಗ,ಹೆಂಡತಿ,ಅಳಿಯ,ಅಣ್ಣನ ಮಗ,ತಮ್ಮನ ಮಗ ಹೀಗೆ ಅವರ‌ ಕುಟುಂಬದ ಸದಸ್ಯರುಗಳಿಗೆ ಟಿಕೆಟ್ ಕೊಡಿಸಲು ಎಲ್ಲಿಲ್ಲದ ಕಸರತ್ತು ಮಾಡುತ್ತಾರೆ.ತಮ್ಮ ಜೊತೆಗೇ ತಮ್ಮ ಕುಟುಂಬವು ರಾಜಕೀಯವಾಗಿ ಬೆಳೆಯಬೇಕು ಎನ್ನುವ ಹಂಬಲದ ರಾಜಕಾರಣಿಗಳು ತಾವು ಅಧಿಕಾರದಲ್ಲಿದ್ದಾಗಲೆ ತಮ್ಮ ಮಕ್ಕಳನ್ನು ರಾಜಕೀಯ ಮುನ್ನೆಲೆಗೆ ತರಲು ಪ್ರಯತ್ನಿಸುತ್ತಾರೆ.ಜನರೊಂದಿಗೆ ಪುತ್ರರುಗಳಿಗೆ ಸಂಪರ್ಕಕಲ್ಪಿಸುವುದು,ತಮ್ಮ‌ಪುತ್ರರುಗಳು ಹೇಳಿದ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ತಮ್ಮ ಅಧಿಕಾರವ್ಯಾಪ್ತಿಯಲ್ಲಿ — ಕೆಲವೊಮ್ಮೆ ಅಧಿಕಾರ ವ್ಯಾಪ್ತಿಯನ್ನು ಮೀರಿ–ಮಾಡಿ ಕೊಡುವ ಮೂಲಕ ಪುತ್ರರುಗಳನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಎನ್ನುವಂತೆ ಬಿಂಬಿಸುತ್ತಾರೆ.

ಪ್ರಜಾಪ್ರಭುತ್ವವು ವಂಶಪಾರಂಪರ್ಯವನ್ನಾಗಲಿ ಇಲ್ಲವೆ ಆನುವಂಶಿಕ ಆಡಳಿತ ಪದ್ಧತಿಯನ್ನಾಗಲಿ ಬೆಂಬಲಿಸದು.ಆದರೆ ಮತದಾನವು ಪ್ರಜಾಪ್ರಭುತ್ವದ ನಿರ್ಣಾಯಕ ಅಂಶವಾಗಿರುವುದರಿಂದ ಮತದಾನದ ಮೂಲಕವೇ ತಮ್ಮ ವಂಶಸ್ಥರು,ಮಡದಿ ಮಕ್ಕಳುಗಳನ್ನು ರಾಜಕೀಯ ಪ್ರವೇಶಿಸುವಂತೆ ನೋಡಿಕೊಳ್ಳುತ್ತಿದ್ದಾರೆ ಬಲಾಢ್ಯರು.ಚುನಾವಣೆಗೆ ಸ್ಪರ್ಧಿಸುವುದು ಎಂದರೆ ಹತ್ತಾರು ಕೋಟಿಗಳ ಖರ್ಚಿನ ಸಂಗತಿ ಎಂದು ಗೊತ್ತಿರುವುದರಿಂದ ಹಣ ಇಲ್ಲದವರು ಚುನಾವಣೆಗಳಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಮಾತ್ರವಲ್ಲ ಪ್ರಭಾವಿ ರಾಜಕಾರಣಿಗಳು ಪಕ್ಷದಲ್ಲಿ ಹೊಂದಿರುವ ಹಿಡಿತ ಮತ್ತು ಪ್ರಭಾವದಿಂದಾಗಿ ರಾಜಕೀಯ ಪಕ್ಷಗಳ ನಿಷ್ಠಾವಂತ ಕಾರ್ಯಕರ್ತರುಗಳು ಸಹ ಟಿಕೆಟ್ ಕೇಳದ ಅಸಹಾಯಕತೆಯಲ್ಲಿದ್ದು ಪ್ರಭಾವಿಗಳ ಮಕ್ಕಳಿಗೆ ಟಿಕೆಟ್ ನೀಡುತ್ತಿರುವುದನ್ನು ಪ್ರಶ್ನಿಸದ ಸ್ಥಿತಿಗೆ ತಲುಪಿದ್ದಾರೆ.ರಾಜಕೀಯ ಪಕ್ಷಗಳಿಗೆ ಗೆಲ್ಲುವ ಕುದುರೆಗಳು ಮುಖ್ಯವಾಗುತ್ತಾರೆಯೇ ಹೊರತು ಪ್ರಜಾಪ್ರಭುತ್ವದ ತತ್ತ್ವ,ಸಿದ್ಧಾಂತ,ಸಂವಿಧಾನದ ಆಶಯಗಳು ಮುಖ್ಯವಾಗುವುದಿಲ್ಲ.ಹಣವೇ ಚುನಾವಣೆಯಲ್ಲಿ ಗೆಲ್ಲುವ ನಿರ್ಣಾಯಕ ಅಂಶವಾಗಿರುವದರಿಂದ ತಮ್ಮ ಮಕ್ಕಳನ್ನು ಹತ್ತಾರು ಕೋಟಿಗಳಷ್ಟು ಹಣಖರ್ಚು ಮಾಡಿ ಗೆಲ್ಲಿಸುವ ಪ್ರಭಾವಿ ಜನಪ್ರತಿನಿಧಿಗಳು ತಾವು ಪ್ರತಿನಿಧಿಸುವ ಪಕ್ಷಕ್ಕೂ ತಕ್ಕಷ್ಟು ಅನುಕೂಲ ಮಾಡಿಕೊಡುವುದರಿಂದ ಪಕ್ಷಗಳ ವರಿಷ್ಠರುಗಳು ಅಂತಹ ಹಣಬಲ ಉಳ್ಳ ಪ್ರಭಾವಿಗಳ ಬೇಡಿಕೆಗೆ ಸೊಪ್ಪು ಹಾಕುತ್ತಿದ್ದಾರೆ.ಪಕ್ಷದ ಸಾಮಾನ್ಯ ಕಾರ್ಯಕರ್ತನೊಬ್ಬನಿಗೆ ಎಂ ಎಲ್ ಎ,ಎಂ ಪಿ ಟಿಕೇಟ್ ನೀಡಿ,ಗೆಲ್ಲಿಸುವ ಹುಮ್ಮಸ್ಸು,ಬದ್ಧತೆ ಯಾವ ರಾಜಕೀಯಪಕ್ಷದಲ್ಲೂ ಇಲ್ಲ .

ರಾಜಕೀಯ ಪಕ್ಷಗಳು ಮತದಾರರನ್ನು‌ ಕೆಡಿಸಿದ್ದಲ್ಲದೆ ಚುನಾವಣಾ ಪದ್ಧತಿಯನ್ನು ಹೊಲಸು ಮಾಡಿವೆ.ರಾಜಕೀಯ ಪಕ್ಷಗಳಿಗೆ ಅಧಿಕಾರ ಹಿಡಿಯುವುದು ಮುಖ್ಯವಾಗುತ್ತದೆಯೇ ಹೊರತು ಪ್ರಜಾಪ್ರಭುತ್ವದ ಆಶಯ,ಸಂವಿಧಾನದ ತತ್ತ್ವ- ಆದರ್ಶಗಳು ಮಹತ್ವದ್ದೆನ್ನಿಸುವುದಿಲ್ಲ.ಪಕ್ಷದ ಸಾಮಾನ್ಯ ಕಾರ್ಯಕರ್ತನೂ ಎಂ ಎಲ್ ಎ ,ಎಂಪಿ ಆಗಬೇಕು,ಸಚಿವನಾಗಬೇಕು ಎನ್ನುವ ಸಾಮಾಜಿಕ ಬದ್ಧತೆಯ ಪಕ್ಷ ನಿಷ್ಠೆ ರಾಜಕೀಯ ಪಕ್ಷಗಳ ನೇತಾರುರುಗಳಲ್ಲಿ ಇಲ್ಲ.ಪಕ್ಷದ ಕಾರ್ಯಕರ್ತರುಗಳು ಏನಿದ್ದರೂ ರಾಜಕೀಯ ನಾಯಕರುಗಳ ಫ್ಲಂಕ್ಸ್ ಗಳನ್ನು ಹಾಕಲು,ಬ್ಯಾನರ್ ಬಂಟಿಗ್ಸ್ ಗಳನ್ನು ಹೊರಲು,ಚುನಾವಣಾ ಸಭೆ- ಸಮಾರಂಭಗಳಿಗೆ ಜನರನ್ನು ಕರೆತರಲು ಮಾತ್ರ ಸೀಮಿತರಾದವರು ಎನ್ನುವ ಭಾವನೆ ರಾಜಕಾರಣಿಗಳಲ್ಲಿದೆ.ಪಕ್ಷದ ಕಾರ್ಯಕರ್ತರುಗಳಿಗೆ ರಾಜಕೀಯ ಅಧಿಕಾರ ನೀಡಿ,ಅವರನ್ನು ರಾಜಕೀಯವಾಗಿ ಬೆಳಸಬೇಕು ಎಂದು ಯಾವ ರಾಜಕಾರಣಿಯೂ ಆಲೋಚಿಸುವುದಿಲ್ಲ. ರಾಜಕಾರಣಿಗಳು ತಮ್ಮ ಮಗ,ಅಳಿಯ ,ಹೆಂಡತಿ,ಬಂಧು- ಸಂಬಂಧಿಗಳನ್ನು ರಾಜಕಾರಣಕ್ಕೆ ‘ ಎಳೆ ತರಲು’ ಪ್ರಯತ್ನಿಸುತ್ತಾರೆಯೇ ಹೊರತು ಪಕ್ಷಕ್ಕೆ ನಿಷ್ಠೆಯಿಂದ ದುಡಿಯುವ ಕಾರ್ಯಕರ್ತರಿಗೆ ರಾಜಕಾರಣದಲ್ಲಿ ಅವಕಾಶ ಕಲ್ಪಿಸಬೇಕು ಎಂದು ಆಲೋಚಿಸುವುದಿಲ್ಲ.ರಾಜಕೀಯ ಅಧಿಕಾರವು ತಮ್ಮ ಕುಟುಂಬದ ಸ್ವತ್ತು ಆಗಿರಬೇಕು,ತಮ್ಮ ಜೀವಿತಾವಧಿಯಲ್ಲಿಯೇ ತಮ್ಮ ಮಕ್ಕಳು ಮೊಮ್ಮಕ್ಕಳು ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರುವುದನ್ನು ಕಾಣುವುದೇ ತಮ್ಮ ರಾಜಕೀಯ ಜೀವನದ ಸಾಧನೆ,ಸಾರ್ಥಕ್ಯ ಎಂದು ಭಾವಿಸಿರುವ ರಾಜಕಾರಣಿಗಳ ಮಧ್ಯೆ ಜನಸಾಮಾನ್ಯರು ಗೆದ್ದು,ಜನಪ್ರತಿನಿಧಿಗಳಾಗಲು ಸಾಧ್ಯವೆ ? ರಾಜಕೀಯ ಪ್ರಾತಿನಿಧ್ಯವು ತಮ್ಮ ಕುಟುಂಬಕ್ಕೇ ಇರಬೇಕು ಎಂದು ನಿರೀಕ್ಷಿಸುವ ರಾಜಕಾರಣಿಗಳು ಇತರರಿಗೆ ಸಂವಿಧಾನಬದ್ಧವಾಗಿ ಇರುವ ರಾಜಕಾರಣ ಪ್ರವೇಶಾಧಿಕಾರದ ಹಕ್ಕನ್ನು ಕಸಿದುಕೊಳ್ಳುತ್ತಾರೆ.ಹಣಬಲ- ತೋಳ್ಬಲಗಳಿಂದ ಬಲಾಢ್ಯರೆನ್ನಿಸಿಕೊಂಡವರು ದುರ್ಬಲರ ರಾಜಕೀಯ ಹಕ್ಕನ್ನು ಹತ್ತಿಕ್ಕಿ ಅಟ್ಟಹಾಸ ಮೆರೆಯುತ್ತಾರೆ.ಬಲಾಢ್ಯರಿಗೆ ಬಾಗಿ,ನಮಸ್ಕರಿಸುವುದೇ ಜನಸಾಮಾನ್ಯರಿಗೆ ಭಾಗ್ಯವಾಗುತ್ತಿರುವುದು ಪ್ರಜಾಪ್ರಭುತ್ವ ಭಾರತದ ದೌರ್ಭಾಗ್ಯವೇ ಸರಿ.ಮತದಾರರು ಪ್ರಬುದ್ಧರಾಗಬೇಕು.ಹಣ- ಆಮಿಷಗಳಿಗೆ ಶರಣಾಗಿ ಮತಮಾರಿಕೊಳ್ಳುವ ಪ್ರವೃತ್ತಿಯಿಂದ ಹೊರಬರಬೇಕು.ರಾಜಕೀಯ ಪಕ್ಷಗಳ ಗುಲಾಮಗಿರಿಯ ಕಟ್ಟನ್ನು ಹರಿದೊಗೆಯಬೇಕು.ಯಾವ ಪಕ್ಷದಿಂದ ರಾಜ್ಯ,ರಾಷ್ಟ್ರದ ಜನತೆಯ ಹಿತ ಸಾಧ್ಯ ಎಂದು ಆಲೋಚಿಸಬೇಕು.ಯಾವ ವ್ಯಕ್ತಿ ಜನರೊಂದಿಗೆ ಇರುತ್ತಾನೋ ಅಂಥವರನ್ನೇ ಚುನಾವಣೆಯಲ್ಲಿ ಗೆಲ್ಲಿಸುವ ಸಂಕಲ್ಪ ಮಾಡಬೇಕು.ಜನಶಕ್ತಿಯ ಮುಂದೆ ಯಾವ ಶಕ್ತಿಯೂ ಏನೂ ಮಾಡದು.ಜನಶಕ್ತಿಯನ್ನು ಜಾಗೃತಗೊಳಿಸುವ ದೂರದೃಷ್ಟಿಯ ನಾಯಕರು ಇಲ್ಲದ್ದರಿಂದ ಜನತೆ ಜಡತೆಯನ್ನು ಮೈಗೂಡಿಸಿಕೊಂಡು ಮಲಗಿದೆ.ಜಾತಿ,ಹಣ,ಆಮಿಷಗಳಿಂದ ಜನತೆಯ ಜಡತ್ವವನ್ನು ವರ್ಧಿಸಿ ಗೆಲ್ಲುತ್ತಿದ್ದಾರೆ,ತಮ್ಮ ವಂಶಸ್ಥರನ್ನೂ ಗೆಲ್ಲಿಸುತ್ತಿದ್ದಾರೆ ಶ್ರೀಮಂತ ರಾಜಕಾರಣಿಗಳು.

About The Author