ಮೂರನೇ ಕಣ್ಣು : ಮುಕ್ತ,ನ್ಯಾಯಸಮ್ಮತ ಚುನಾವಣೆ ಪ್ರಕ್ರಿಯೆ ಚುನಾವಣಾ ಆಯೋಗದಿಂದಲೇ : ಪ್ರಾರಂಭವಾಗಬೇಕಿದೆ !ಮುಕ್ಕಣ್ಣ ಕರಿಗಾರ

ಕರ್ನಾಟಕದ 2023 ನೇ ವರ್ಷದ ವಿಧಾನ ಸಭಾ ಚುನಾವಣೆಗಳನ್ನು ಮುಕ್ತ,ಪಾರದರ್ಶಕವಾಗಿ ನಡೆಯಿಸಲು ಹೊಣೆಹೊತ್ತಿರುವ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಗಳ ಬಗ್ಗೆಯೇ ವಿರೋಧ ಪಕ್ಷದವರು ಸಂಶಯವ್ಯಕ್ತಪಡಿಸಿ ರಾಜ್ಯ ಮುಖ್ಯ ಚುನಾವಣಾಧಿಕಾರಿಯವರ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವುದು ಗಂಭೀರವಾದ ವಿಷಯ.ರಾಜ್ಯ ಮುಖ್ಯ ಚುನಾವಣಾ ಆಯುಕ್ತರ ಕಛೇರಿಯಲ್ಲಿ ನಾಲ್ಕುಜನ ಅಧಿಕಾರಿಗಳು ಮೂರುವರ್ಷ,ಐದುವರ್ಷ ಮತ್ತು ಒಂಬತ್ತು ವರ್ಷಗಳಿಂದ ಅಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು ಆ ಅಧಿಕಾರಿಗಳು ಆರ್ ಎಸ್ ಎಸ್ ಮತ್ತು ಬಿಜೆಪಿಯೊಂದಿಗೆ ಸಲುಗೆಯ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ರಾಜಾಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ರಾಮಯ್ಯ ಅವರಿಬ್ಬರು ರಾಜ್ಯ ಮುಖ್ಯ ಚುನಾವಣಾ ಆಯುಕ್ತರ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರಬರೆದಿದ್ದಾರೆ.ರಾಜ್ಯ ಚುನಾವಣಾ ಆಯೋಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಘವೇಂದ್ರ ಅವರು ಒಂಬತ್ತು ವರ್ಷಗಳಿಂದ,ಜ್ಞಾನೇಶ ಅವರು ಆರುವರ್ಷಗಳಿಂದ,ಪ್ರಾಣೇಶ ಅವರು ಐದುವರ್ಷಗಳಿಂದ ಮತ್ತು ಯೋಗೇಶ ಅವರು ಮೂರುವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಚುನಾವಣಾ ಆಯೋಗದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದು ಅವರು ಕೂಡಲೆ ವರ್ಗಾಯಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಉಭಯ ನಾಯಕರು ಪತ್ರಬರೆದಿದ್ದಾರೆ.ಮತದಾರರ ಮಾಹಿತಿ ಸಂಗ್ರಹಿಸಲು ‘ಚಿಲುಮೆ’ ಎನ್ನುವ ಸಂಸ್ಥೆಗೆ ನಕಲಿ ಬಿ ಎಲ್ ಒ ಗಳನ್ನು ನೇಮಿಸಲು ಅವಕಾಶ ನೀಡಿದ ಪ್ರಕರಣದಲ್ಲಿ ಈ ಅಧಿಕಾರಿಗಳ ಪಾತ್ರ ಇದೆ ಎಂದು ಕಾಂಗ್ರೆಸ್ ನಾಯಕರು ಸಂಶಯಿಸಿದ್ದಾರೆ.

ವಿಧಾನಸಭಾ ಚುನಾವಣೆ ಘೋಷಣೆಗೆ ಸಾಕಷ್ಟು ಮುಂಚಿತವಾಗಿಯೇ ಒಂದೆಡೆ ಮೂರು ವರ್ಷಗಳಿಗೂ ಹೆಚ್ಚುಕಾಲ ಕರ್ತವ್ಯ ನಿರ್ವಹಿಸಿದ ಮತ್ತು ಸ್ವಂತ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾಯಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸುವ ಚುನಾವಣಾ ಆಯೋಗದ ಕಛೇರಿಯಲ್ಲಿಯೇ ಮೂರರಿಂದ ಒಂಬತ್ತು ವರ್ಷಗಳ ಕಾಲ ಅಲ್ಲೇ ಠಿಕಾಣಿ ಹೂಡಿದ ಅಧಿಕಾರಿಗಳಿದ್ದಾರೆ ,ಅವರು ಆರ್ ಎಸ್ ಎಸ್ ಮತ್ತು ಬಿಜೆಪಿಯೊಂದಿಗೆ ಸಖ್ಯ ಹೊಂದಿದವರು ಎಂಬುದನ್ನರಿತೂ ಮೌನವಾಗಿರುವ ಚುನಾವಣಾ ಆಯೋಗದ ನಡೆ ಸಮರ್ಥನೀಯವಲ್ಲ.ಇತರರಿಗೆ ನಿರ್ದೇಶಿಸುವ ನಿರ್ದೇಶನಗಳನ್ನು ತಾನೂ ಪಾಲಿಸಬೇಕಾದ ನೈತಿಕಹೊಣೆ ರಾಜ್ಯಚುನಾವಣಾ ಆಯೋಗದ ಮೇಲೆ ಇದೆ.ಕಾಂಗ್ರೆಸ್ ನಾಯಕರಿಬ್ಬರು ಲಿಖಿತವಾಗಿ ದೂರು ಸಲ್ಲಿಸಿದ ಬಳಿಕ ರಾಜ್ಯ ಮುಖ್ಯ ಚುನಾವಣಾ ಆಯುಕ್ತರು ಆ ದೂರನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ರವಾನಿಸಿ ಸುಮ್ಮನಿರುವ ಬದಲು ತಾವೇ ಆ ನಾಲ್ವರು ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡಿ ಅವರ ಮಾತೃಇಲಾಖೆಯಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಬಹುದಿತ್ತು.ಕೇಂದ್ರ ಚುನಾವಣಾ ಆಯೋಗವಾದರೂ ಕೂಡಲೆ ಆ ನಾಲ್ವರು ಅಧಿಕಾರಿಗಳ ವರ್ಗಾವಣೆಗೆ ಸೂಚಿಸಬೇಕು.ಇಲ್ಲದಿದ್ದರೆ ಚುನಾವಣಾ ಆಯೋಗದ ಪಾರದರ್ಶಕ ನೀತಿಯ ಬಗ್ಗೆಯೇ ಜನತೆ ಸಂಶಯ ತಳೆಯಲು ಕಾರಣವಾಗುತ್ತದೆ.

‌ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಲು ಜವಾಬ್ದಾರವಾಗಿರುವ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಗಳು ಜನರು ಮತ್ತು ಮತದಾರರ ವಿಶ್ವಾಸ ಉಳಿಸಿಕೊಳ್ಳಬೇಕು.ಇತ್ತೀಚಿನ ದಿನಗಳಲ್ಲಿ ಮತದಾರರು ಇ ವಿ ಎಂ ಮತಯಂತ್ರಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ಒಂದು ಸಂಘಟನೆ,ಒಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಆರೋಪ ಹೊತ್ತಿರುವ ಅಧಿಕಾರಿಗಳನ್ನು ಚುನಾವಣಾ ಆಯೋಗದಲ್ಲಿ ಮುಂದುವರೆಸುವುದು ಆಯೋಗದ ಪಾವಿತ್ರ್ಯ ಮತ್ತು ಘನತೆ- ಗೌರವಗಳಿಗೆ ಕುಂದುಂಟು ಮಾಡುತ್ತದೆ.ಚುನಾವಣಾ ಆಯೋಗದ ನಡೆ,ನೀತಿ- ನಿಲುವುಗಳು’ Do as I say but don’t do as I do’ ಎನ್ನುವ ಸಿಗರೇಟ್ ಸೇದುವ ಹವ್ಯಾಸದ ತಂದೆಯು ಮಗನಿಗೆ ಉಪದೇಶಿಸಿದ ನೀತಿ ವಾಕ್ಯದಂತಿರದೆ ತನ್ನ ಕಛೇರಿಯಿಂದಲೇ ಪಾರದರ್ಶಕ,ಪ್ರಾಮಾಣಿಕ,ಸಂಶಯಾತೀತ ವರ್ತನೆಗಳನ್ನು ಪ್ರದರ್ಶಿಸಿ,ನಿಜನಾಯಕತ್ವದ ಗುಣ- ಮೌಲ್ಯಗಳನ್ನು ಎತ್ತಿಹಿಡಿಯುವ ಅನಿವಾರ್ಯತೆ ಇದೆ.

About The Author