ಮೂರನೇ ಕಣ್ಣು : ಎದ್ದೇಳು ಕರ್ನಾಟಕ ‘ಅಭಿಯಾನ– ಕೆಲವು ಪ್ರಶ್ನೆಗಳು : ಮುಕ್ಕಣ್ಣ ಕರಿಗಾರ

ಕರ್ನಾಟಕದಲ್ಲಿ ೨೦೨೩ ನೇ ಸಾಲಿನ ವಿಧಾನಸಭಾ ಚುನಾವಣೆಗಳು ಯಾವುದೇ ಸಂದರ್ಭದಲ್ಲಿ ಘೋಷಣೆಯಾಗಬಹುದು ಎನ್ನುವ ನಿರೀಕ್ಷೆಯಲ್ಲಿ ರಾಜಕಾರಣಿಗಳು ನಾನಾ ತರಹದ ಕಸರತ್ತುಗಳನ್ನು ಮಾಡುತ್ತಿರುವ ದಿನಗಳಲ್ಲಿ ಸಾಹಿತಿಗಳು,ರಾಜಕಾರಣಿಗಳು,ಸಾಮಾಜಿಕ ಹೋರಾಟಗಾರರು ಮತ್ತು ಪರಿಸರ ಪ್ರೇಮಿಗಳಂತಹ ಬಹುಕ್ಷೇತ್ರಗಳ ಸಮಾನ ಮನಸ್ಕರುಗಳು ಕರ್ನಾಟಕದ ಮತದಾರರನ್ನು ಎಚ್ಚರಿಸಲು ‘ ಎದ್ದೇಳು ಕರ್ನಾಟಕ’ ಆಂದೋಲನ ರೂಪಿಸುತ್ತಿದ್ದಾರೆ.ಮಾಜಿ ಸಚಿವ ಎಸ್ ಕೆ ಕಾಂತಾ,ಸಾಹಿತಿಗಳಾದ ದೇವನೂರು ಮಹಾದೇವ,ಪುರುಷೋತ್ತಮ ಬಿಳಿಮಲೆ,ಕಮಲಾ ಹಂಪನಾ,ರಹಮತ್ ತರೀಕೆರೆ,ಅಲ್ಲಮಪ್ರಭು ಬೆಟ್ಟದೂರು,ವಿಜಯಾ,ಎ ಆರ್ ವಾಸವಿ,ಮಹಿಳಾ ಹೋರಾಟಗಾರ್ತಿ ದು.ಸರಸ್ವತಿ,ಮಾಜಿ ಸಚಿವ ಎಚ್ ಏಕಾಂತಯ್ಯ,ಪರಿಸರತಜ್ಞೆ ತಾರಾರಾವ್ ಹಾಗೂ ಡಾ.ಶ್ರೀನಿವಾಸ ಕಕ್ಕಿಲಾಯ ಅವರುಗಳು ಈ ಆಂದೋಲನದ ಪ್ರಮುಖರುಗಳಾಗಿದ್ದು ಸಮಾನ ಮನಸ್ಕರುಗಳು ಆಂದೋಲನವನ್ನು ಬೆಂಬಲಿಸಲು ಕೋರಿದ್ದಾರೆ.’ ಇದು ಭ್ರಷ್ಟಾಚಾರ,ಬೆಲೆ ಏರಿಕೆ,ದ್ವೇಷರಾಜಕಾರಣ,ಜನಸಾಮಾನ್ಯರ ಸುಲಿಗೆ ಹಾಗೂ ನಮ್ಮ ಹೆಮ್ಮೆಯ ನಾಡನ್ನು ಎರಡನೇ ದರ್ಜೆ ರಾಜ್ಯವನ್ನಾಗಿಸುವುದರ ವಿರುದ್ಧದ ಆಂದೋಲನ’ ಎಂದು ಆಂದೋಲನದ ಧ್ಯೇಯೋದ್ದೇಶಗಳನ್ನು ಸ್ಪಷ್ಟಪಡಿಸಿದ್ದಾರೆ.

 

‘ ಎದ್ದೇಳು ಕರ್ನಾಟಕ’ ಆಂದೋಲನದ ಪ್ರಮುಖ ಗುರಿ ಕಳೆದ ನಾಲ್ಕು ವರ್ಷಗಳಲ್ಲಿ ‘ ಸಿಕ್ಕಷ್ಟು ಬಾಚಿಕೊಳ್ಳುವುದನ್ನೇ’ ಕಾಯಕ ಮಾಡಿಕೊಂಡವರ ವಿರುದ್ಧ ಜನಜಾಗೃತಿ ಮೂಡಿಸುವುದು.ಸಜ್ಜನ ರಾಜಕಾರಣಿ ಎಂದೇ ಹೆಸರಾಗಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಆಡಳಿತದಲ್ಲಿ ಅವರದೇ ಛಾಪು ಮೂಡಿಸುವಲ್ಲಿ ಸೋತಿದ್ದಾರೆ.ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಕಾಳಜಿ- ಕಳಕಳಿಗಳು ಇದ್ದರೂ ದೆಹಲಿ ದರಬಾರಿನ ಆಣತಿ- ಆದೇಶಗಳನ್ನು ಮೀರಿ ನಡೆಯದ ಅಸಹಾಯಕತೆಯಲ್ಲಿದ್ದಾರೆ.ಅವರ ಸಂಪುಟದ ಬಹುತೇಕ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ,ಶಾಸಕರುಗಳು ದುಡ್ಡು ಮಾಡುವ ದಂಧೆಗಿಳಿದಿದ್ದಾರೆ.ಆಡಳಿತ ಯಂತ್ರ ಸ್ವೇಚ್ಛೆಯಾಗಿ ವರ್ತಿಸುತ್ತಿದೆ.ಮುಖ್ಯಮಂತ್ರಿಯವರ ಆದೇಶವನ್ನೇ ಧಿಕ್ಕರಿಸುವ ಐಎಎಸ್ ಅಧಿಕಾರಿಗಳನ್ನು ಇಟ್ಟುಕೊಂಡು ಮುಖ್ಯಮಂತ್ರಿಯರು ಎಂತಹ ಜನಪರ ಆಡಳಿತ ಕೊಡಬಲ್ಲರು? ಪಕ್ಷದ ವರಿಷ್ಠರ ಆಣತಿಯನ್ನು ಕೇಳುವುದು ಅವರಿಗೆ ಅನಿವಾರ್ಯವೇ ಆಗಿರಬಹುದು,ಆದರೆ ರಾಜ್ಯದ ಪ್ರಜೆಗಳ ತೆರಿಗೆ ಹಣದಿಂದ ಸಂಬಳ- ಸವಲತ್ತುಗಳನ್ನು ಪಡೆಯುತ್ತಿರುವ ಐಎಎಸ್ ಅಧಿಕಾರಿಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಜನಸ್ನೇಹಿಯಾದ ಪರಿಣಾಮಕಾರಿ ಆಡಳಿತ ನೀಡಬಹುದಿತ್ತು.ಪ್ರಗತಿ ಪರಿಶೀಲನಾ ಸಭೆ,ವಿಡಿಯೋ ಕಾನ್ಫರೆನ್ಸ್ಗಳಲ್ಲಿ ಅಧಿಕಾರಿಗಳ ವಿರುದ್ಧ ಗುಡುಗಿ ‘ ನಾನೇ ಬೇರೆ,ನನ್ನ ಸ್ಟೈಲೇ ಬೇರೆ’ ಎಂದು ಅಬ್ಬರಿಸಿದ್ದನ್ನು ಬಿಟ್ಟರೆ ಅಧಿಕಾರಿಗಳನ್ನು ನಿಯಂತ್ರಿಸುವ ನಿಷ್ಠುರ ನಿಲುವನ್ನು ಪ್ರದರ್ಶಿಸಲಿಲ್ಲ.ಭಾರತೀಯ ಆಡಳಿತ ಮತ್ತು ಪೋಲೀಸ್ ಸೇವೆಗೆ ಸೇರಿದ ಅಧಿಕಾರಿಣಿಗಳಾದ ರೋಹಿಣಿ ಸಿಂಧೂರಿ ಮತ್ತು ಡಿ.ರೂಪಾ ಅವರ ಆರೋಪ,ಪ್ರತ್ಯಾರೋಪಗಳ ಇತ್ತೀಚಿನ ಪ್ರಕರಣವು ಮುಖ್ಯಮಂತ್ರಿಗಳು ಅಧಿಕಾರಿಗಳ ಮೇಲೆ ಬಿಗಿ ಹಿಡಿತ ಹೊಂದಿಲ್ಲ ಎನ್ನುವುದರ ಸ್ಪಷ್ಟ ಕುರುಹು.ಸರಕಾರಕ್ಕೆ ಉತ್ತಮ ಹೆಸರು ಬರಬೇಕಿದ್ದರೆ,ಜನಪರ ಕೆಲಸ ಮಾಡುವ ಅಧಿಕಾರಿಗಳಿರಬೇಕು.ಆದರೆ ಬೊಮ್ಮಾಯಿಯವರ ಆಡಳಿತದಲ್ಲಿ ಆಯಕಟ್ಟಿನ ಹುದ್ದೆಗಳಲ್ಲಿರುವ ಬಹಳಷ್ಟು ಅಧಿಕಾರಿಗಳು ‘ ಡೋಂಟ್ ಕೇರ್’ ಮನೋಭಾವದವರು.ಮುಖ್ಯಮಂತ್ರಿಯವರು ಪ್ರತಿ ಇಲಾಖೆಯ ಹಿರಿಯ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಬೇಕಿತ್ತು,ದಪ್ಪನೆಯ ಚರ್ಮದ ಅಧಿಕಾರಿಗಳಿಗೆ ಇಂಜಕ್ಷನ್ ನೀಡಬೇಕಿತ್ತು,ಕುಂಭಕರ್ಣ ನಿದ್ದೆಯಲ್ಲಿದ್ದವರನ್ನು ಗಾಢನಿದ್ದೆಯಿಂದ ಎಬ್ಬಿಸಬೇಕಿತ್ತು.ಮುಖ್ಯಮಂತ್ರಿಯವರು ಆ ಕೆಲಸ ಮಾಡಲೇ ಇಲ್ಲ.ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳಲು ಆಗದ ಅವರ ‘ಯಾರಿಗೂ ನಿಷ್ಠುರರಾಗಬಾರದು’ ಎನ್ನುವ ವರ್ತನೆ ರಾಜ್ಯದ ಆಡಳಿತಯಂತ್ರದ ಸ್ವೇಚ್ಛೆಯ ವರ್ತನೆಗೆ ಕಾರಣವಾಗಿದೆ.ಅಧಿಕಾರಿಗಳ ಭ್ರಷ್ಟಾಚಾರ ಮಿತಿಮೀರಿದೆ.ಕೆಲವು ಇಲಾಖೆಗಳಲ್ಲಿ ನಿಯಮಬಾಹಿರ ಬಡ್ತಿ,ಅನರ್ಹರಿಗೆ ಬಡ್ತಿ ನೀಡಿ ದುಡ್ಡು ಮಾಡಿಕೊಳ್ಳುವ ದಂಧೆ ಎಗ್ಗಿಲ್ಲದೆ ನಡೆದಿದೆ.ಕೆಲವು ಜನ ಅಧಿಕಾರಿಗಳು ರಾಜಾರೋಷವಾಗಿ ಜಾತಿರಾಜಕಾರಣ ಮಾಡುತ್ತಿದ್ದಾರೆ.ಇಂತಹ ಅನಿಷ್ಟಗಳನ್ನು ಮುಖ್ಯಮಂತ್ರಿಯವರು ನಿಯಂತ್ರಿಸಬಹುದಿತ್ತು.ತಮ್ಮ ಕೈಯಲ್ಲಿದ್ದ ಈ ಸಂಗತಿಗಳನ್ನು ಅವರು ಇನ್ನೊಬ್ಬರ ಮೇಲೆ ಹೊರಿಸಲಾಗದು.ಭ್ರಷ್ಟಾಚಾರದ ಕಳಂಕ ಹಚ್ಚಿಕೊಳ್ಳದ,ಸಜ್ಜನ ರಾಜಕಾರಣಿ ಎಂದು ತಮ್ಮ ವ್ಯಕ್ತಿವಿಶಿಷ್ಟತೆಯನ್ನು ಕಾಯ್ದುಕೊಂಡಿರಬಹುದಾದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಜನಸ್ನೇಹಿ ಆಡಳಿತ ನೀಡುವಲ್ಲಿ ಸೋತಿದ್ದಾರೆ ಎನ್ನದೆ ವಿಧಿಯಿಲ್ಲ.

‘ ಎದ್ದೇಳು ಕರ್ನಾಟಕ ಆಂದೋಲನ’ ವು ಆಡಳಿತಾರೂಢ ಬಿಜೆಪಿ ಪಕ್ಷದ ಸಚಿವರು,ಶಾಸಕರುಗಳ ಭ್ರಷ್ಟಾಚಾರದತ್ತ ಜನರ ಗಮನ ಸೆಳೆಯುವ ಉದ್ದೇಶ ಹೊಂದಿರುವುದರ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದೆಹಲಿ ದರಬಾರಿನ ಹುಕುಂಗಳಿಗಾಗಿ ಕಾಯುತ್ತ ಕುಳಿತುಕೊಳ್ಳುತ್ತಿದ್ದುದು ‘ ರಾಜ್ಯವನ್ನು ಎರಡನೇ ದರ್ಜೆಯ ರಾಜ್ಯ’ವನ್ನಾಗಿಸುವ ಪ್ರಯತ್ನ ಎಂದು ದೂರಲು,ಬಿಂಬಿಸಲು ಕಾರಣವಾಗಿದೆ.ಕರ್ನಾಟಕದ ಸ್ವಾಭಿಮಾನವನ್ನು ಎತ್ತಿಹಿಡಿಯಬೇಕಿದ್ದ ಸಂದರ್ಭಗಳಲ್ಲಿ ಮುಖ್ಯಮಂತ್ರಿಯವರು ಮೌನಕ್ಕೆ ಶರಣಾದದ್ದು ಮತ್ತು ರಾಜ್ಯಕ್ಕೆ ಬರಬೇಕಿದ್ದ ಜಿ ಎಸ್ ಟಿ ಹಂಚಿಕೆಯ ಹಣ ಸೇರಿದಂತೆ ವಿವಿಧ ಅಭಿವೃದ್ಧಿ ವಲಯಗಳಿಗೆ ನಿಗದಿತ ಅನುದಾನ ಬಾರದೆ ಇದ್ದುದನ್ನು ಪ್ರಶ್ನಿಸದೆ ಇರುವ ಬಸವರಾಜ ಬೊಮ್ಮಾಯಿಯವರ ಸೌಮ್ಯ ವರ್ತನೆಯು ಆಂದೋಲನದ ಟೀಕಾಸ್ತ್ರವೂ ಹೌದು.

‌ ‘ ಎದ್ದೇಳು ಕರ್ನಾಟಕ ಆಂದೋಲನ’ ದ ಪ್ರಮುಖರು ‘ ಈ ಸುಲಿಗೆ ಸರ್ಕಾರ ಮೊದಲು ಸೋಲಬೇಕು.ಆಮೇಲೆ ಗೆದ್ದವರ ಜೊತೆ ಜನಹಿತದ ಮರುಸ್ಥಾಪನೆಗೆ ಗುದ್ದಾಡಬೇಕು.ಇದೇ ಪ್ರಜಾಪ್ರಭುತ್ವ ಉಳಿಸಿಕೊಳ್ಳುವ ಪ್ರಕ್ರಿಯೆ.ಪಕ್ಷ,ಸಂಘಟನೆ,ಜಾತಿ,ಧರ್ಮದ ಅಂಟುಗಳನ್ನು ಬಿಟ್ಟು,ಒಟ್ಟುಗೂಡಿ ರಾಜ್ಯ ಉಳಿಸುವ ಈ ಅಭಿಯಾನ ಒಂದು ಆಶಾಕಿರಣವಾಗಿದೆ’ ಎಂದು ಹೇಳಿರುವ ಮಾತುಗಳಲ್ಲಿ ವಿರೋಧಾಭಾಸವಿದೆ.ಆಡಳಿತಾರೂಢ ಬಿಜೆಪಿಯನ್ನು ವಿರೋಧಿಸುವ ಭರದಲ್ಲಿ ಇತರ ಪಕ್ಷಗಳ ಭ್ರಷ್ಟರ ಬಗ್ಗೆ ಆಂದೋಲನದ ಮುಖಂಡರು ಮೌನವಹಿಸಿದ್ದಾರೆ.ಆಂದೋಲನದ ಪ್ರಮುಖರಲ್ಲಿ ಬಹಳಷ್ಟು ಜನರು ಒಂದು ರಾಜಕೀಯ ಪಕ್ಷದೊಂದಿಗೆ ಪರೋಕ್ಷವಾಗಿ ಗುರುತಿಸಿಕೊಂಡಿದ್ದಾರೆ ಇಲ್ಲವೆ ದೂರದ ನಂಟಸ್ತಿಕೆ ಇಟ್ಟುಕೊಂಡಿದ್ದಾರೆ.ಯಾವುದೇ ಆಂದೋಲನವು ಜನಾಂದೋಲನವಾಗಿ ಯಶಸ್ವಿಯಾಗಬೇಕಾದರೆ ಅದರ ಸಂಘಟಕರು ರಾಜಕೀಯ ತಾಟಸ್ಥ್ಯ ನಿಲುವು ಹೊಂದಿರಬೇಕು ಇಲ್ಲವೆ ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಸಮಾನ ಅಂತರ ಕಾಪಾಡಿಕೊಂಡಿರಬೇಕು.ಈ ಆಂದೋಲನವು ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರುವ ಹವಣಿಕೆಯಲ್ಲಿದ್ದಂತಿದೆ ಎನ್ನುವ ಆಕ್ಷೇಪ ಸಹಜವಾಗಿಯೇ ಏಳುತ್ತಿದೆ ಆಂದೋಲನದ ಗೊತ್ತುಗುರಿಗಳನ್ನು ಗಮನಿಸಿದಾಗ.ಬಿಜೆಪಿಯನ್ನು ಸುಲಿಗೆ ಸರ್ಕಾರ ಎನ್ನುವ ಆಂದೋಲನವು ಇತರ ರಾಜಕೀಯ ಪಕ್ಷಗಳ ಭ್ರಷ್ಟರ ಬಗ್ಗೆ ಏಕೆ‌ ಪ್ರಸ್ತಾಪಿಸಿಲ್ಲ ? ಭ್ರಷ್ಟಾಚಾರ ಯಾವ‌ ಒಂದು ರಾಜಕೀಯ ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ.ಭ್ರಷ್ಟರಾಜಕಾರಣಿಗಳು ಎಲ್ಲ ಪಕ್ಷಗಳಲ್ಲೂ ಇದ್ದಾರೆ.ಆಂದೋಲನವು ಭ್ರಷ್ಟಾಚಾರವನ್ನು ಸಾರಾಸಗಟಾಗಿ ವಿರೋಧಿಸಬೇಕು.ಅಂದರೆ ಮಾತ್ರ ಜನರ ಒಲವನ್ನು ಗಳಿಸಲು ಸಾಧ್ಯವಾಗುತ್ತದೆ.ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯವು ಬಿಜೆಪಿಯ ಆಡಳಿತದಿಂದ ಕತ್ತಲೆಯ ಕೂಪಕ್ಕೆ ಜಾರಿರಬಹುದು.ಆದರೆ‌ ಇತರ ಪಕ್ಷಗಳ ಮುಖ್ಯಮಂತ್ರಿ ಆಕಾಂಕ್ಷಿಗಳಲ್ಲಿ ಎಷ್ಟುಜನರು ಶುದ್ಧಹಸ್ತರಿದ್ದಾರೆ? ಪ್ರಾಮಾಣಿಕ ಜನಪರ ಕಾಳಜಿಯ ನಾಯಕರು ಎಷ್ಟು ಜನರಿದ್ದಾರೆ? ಕೂಸು ಉಟ್ಟುವ ಮುನ್ನ ಕುಲಾವಿ ಹೊಲಿಸಿದಂತೆ ಚುನಾವಣೆಗೆ ಮುನ್ನವೇ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು ವಿರೋಧಿಗಳನ್ನು ಹಣಿಯಲು ನಾನಾ ಕಸರತ್ತುಗಳನ್ನು ಮಾಡುತ್ತಿರುವವರು ರಾಜ್ಯದ ಜನತೆಯ ಹಿತವನ್ನು ಎತ್ತಿ ಹಿಡಿಯುತ್ತಾರೆ ಎನ್ನುವ ಖಾತ್ರಿ ಏನು ?ದೆಹಲಿಯ ಒಂದು ‘ ಕೈ’ ಕರ್ನಾಟಕದ ರಾಜಕಾರಣದಲ್ಲಿ ಕೈಯಾಡಿಸದೆ ಸುಮ್ಮನಿರುತ್ತದೆಯೆ? ಬಿಜೆಪಿಯ ಬದಲಾಗಿ ಇನ್ನೊಂದು ಪಕ್ಷದ ಸರ್ಕಾರ ಬರಬೇಕು ಎಂದು ಅಪೇಕ್ಷಿಸುವ ಆಂದೋಲನದ ಮಂದಿ ಬರಬಹುದಾದ ಸರಕಾರ ಹೇಗಿರಬೇಕು ಎಂದು ಯೋಚಿಸಿದ್ದಾರೆಯೆ? ಒಂದು ವೇಳೆ ತಮ್ಮ ಇಷ್ಟದಂತೆ ಮತ್ತೊಂದು ಪಕ್ಷವು ಅಧಿಕಾರಕ್ಕೆ ಬಂದರೆ ಅದರ ಮೇಲೆ ಆಂದೋಲನದ‌ ಪ್ರತಿನಿಧಿಗಳಿಗೆ ಹಿಡಿತ ಇರುತ್ತದೆಯೆ? ಅಥವಾ ಬೇರೊಂದು ಪಕ್ಷವು ಆಂದೋಲನದ ತತ್ತ್ವ ಸಿದ್ಧಾಂತಗಳನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳುವುದೆ? ಕರ್ನಾಟಕದ ನೆಲವನ್ನು ಬಗೆದು ಕುಬೇರರಾದ ಜನಾರ್ಧನ ರೆಡ್ಡಿ ಒಂದು ಸ್ವತಂತ್ರ ಪಕ್ಷ ಕಟ್ಟಿ ರಾಜಕೀಯ ಆಖಾಡಕ್ಕೆ ಧುಮುಕಿದ್ದಾರೆ.ನಾಡನ್ನೇ ಲೂಟಿ ಮಾಡಿ ಹಣ ಬಲದಿಂದ ಅಧಿಕಾರ ಹಿಡಿಯ ಹೊರಟಿರುವ ಜನಾರ್ಧನ ರೆಡ್ಡಿಯವರಂತಹವರ ಬಗ್ಗೆ ಆಂದೋಲನದವರು ಏಕೆ‌ ಪ್ರಸ್ತಾಪಿಸಿಲ್ಲ? ಜನಸಾಮಾನ್ಯರು ಎತ್ತಬಹುದಾದ ಇಂತಹಪ್ರಶ್ನೆಗಳಿಗೆ ಆಂದೋಲನವು ಉತ್ತರಿಸಬೇಕಾಗುತ್ತದೆ.

‘ ಎದ್ದೇಳು ಕರ್ನಾಟಕ’ ಆಂದೋಲನವು ಸಮಗ್ರದೃಷ್ಟಿಕೋನದೊಂದಿಗೆ ಜನರ ಮುಂದೆ ಹೋಗಬೇಕು.ರಾಜ್ಯದ ಸಮಗ್ರ ಅಭಿವೃದ್ಧಿ ಮತ್ತು ಸರ್ವರನ್ನು ಒಳಗೊಳ್ಳುವಿಕೆಯ ಆಡಳಿತ ತಂತ್ರದ ಬದ್ಧತೆಯೊಂದಿಗೆ ಮುಂದುವರೆಯಬೇಕು.ಪಕ್ಷ,ಜಾತಿಯ ನಂಟು ಇಲ್ಲ ಎಂದು ಹೇಳಿಕೊಂಡರೂ ಆಂದೋಲನದ‌ಪ್ರಮುಖರು ಜಾತಿ ಮತ್ತು ಪಕ್ಷಗಳೊಂದಿಗೆ ಗುರುತಿಸಿಕೊಂಡವರೆ! ಕೇವಲ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಪ್ರಯತ್ನವೇ ‘ ಎದ್ದೇಳು ಕರ್ನಾಟಕ’ ಆಂದೋಲನದ ಗುರಿಯಾಗಬಾರದು; ಎಲ್ಲ ರಾಜಕೀಯ ಪಕ್ಷಗಳಲ್ಲಿನ ಭ್ರಷ್ಟರು,ಕೊಳಕರುಗಳ ವಿರುದ್ಧ ಜನಾಭಿಪ್ರಾಯ ರೂಪಿಸುವ ಪ್ರಯತ್ನವಾದರೆ ಅದು ಸ್ವಾಗತಾರ್ಹ ಮತ್ತು ಜನರು ಸ್ವೀಕರಿಸುತ್ತಾರೆ ಕೂಡ.ಆಂದೋಲನದ ಪ್ರಮುಖರು ಆರಂಭದಲ್ಲಿಯೇ ಎಚ್ಚೆತ್ತುಕೊಂಡು ‘ ಎದ್ದೇಳು ಕರ್ನಾಟಕ ಆಂದೋಲನ’ ವನ್ನು ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾದ ಜನಾಭಿಪ್ರಾಯ ರೂಪಿಸುವ ಆಂದೋಲವನ್ನಾಗಿಸುವತ್ತ ಕ್ರಮಗಳನ್ನು ಕೈಗೊಂಡರೆ ಆಂದೋಲನವು ಜನಬೆಂಬಲಗಳಿಸುತ್ತದೆ.ಕರ್ನಾಟಕದ ಸಮಸ್ತ ಜನತೆಯು ಬಿಜೆಪಿಯ ಪರ ಇಲ್ಲ,ಆದರೆ ಸಮರ್ಥ ಪರ್ಯಾಯ ಸರ್ಕಾರವನ್ನು ಕೊಡುವ ಮುಖಗಳ ಕೊರತೆ ಎಲ್ಲ ರಾಜಕೀಯ ಪಕ್ಷಗಳಲ್ಲಿದೆ.ಬಿ ಎಸ್ ಯಡಿಯೂರಪ್ಪ ಮತ್ತು ಸಿದ್ರಾಮಯ್ಯ ಇವರಿಬ್ಬರನ್ನು ಬಿಟ್ಟರೆ ಮಾಸ್ ಲೀಡರ್ ಎಂದು ಜನಗುರುತಿಸುವ ಜನರು ಯಾವ ಪಕ್ಷದಲ್ಲಿ,ಎಷ್ಟು ಜನರಿದ್ದಾರೆ ? ಯಡಿಯೂರಪ್ಪನವರು ಬಿಜೆಪಿಯಲ್ಲಿ ಪಡುತ್ತಿರುವ ಪಾಡು,ಸಿದ್ರಾಮಯ್ಯನವರು ಕಾಂಗ್ರೆಸ್ಸಿನಲ್ಲಿ ಅನುಭವಿಸುತ್ತಿರುವ ನೋವನ್ನು ರಾಜ್ಯದ ಮತದಾರರು ಬಲ್ಲರು.ರಾಜ್ಯವನ್ನು ಮತ್ತೆ ಕತ್ತಲೆಯ ಕೂಪಕ್ಕೆ ದೂಡಬಾರದು ಎಂದರೆ ಬೆಳಕಿನ ವರ್ಷಧಾರೆಯ ಭರವಸೆ ಇರಬೇಕು.ಅಂತಹ ಪರಿಸ್ಥಿತಿ ಕರ್ನಾಟಕದಲ್ಲಿ ಇಲ್ಲ.ಎದ್ದೇಳು ಕರ್ನಾಟಕವು ಚುನಾವಣಾ ಸಂದರ್ಭದಲ್ಲಿ ಜನಾಭಿಪ್ರಾಯ ರೂಪಿಸಲು ಪ್ರಯತ್ನಿಸುವ ಬದಲು ಆರು ತಿಂಗಳುಗಳ ಮೊದಲೇ ಕ್ರಿಯಾಶೀಲವಾಗಿ ‘ ಸಮಗ್ರ ದೃಷ್ಟಿಕೋನ’ ದೊಂದಿಗೆ ಸಮಗ್ರ ಕರ್ನಾಟಕದ ಕಲ್ಯಾಣದ ಗುರಿ’ ಯನ್ನು ಮೊಳಗಿಸಬೇಕಿತ್ತು.ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವಂತಿರುವ ‘ ಎದ್ದೇಳು ಕರ್ನಾಟಕ’ ಆಂದೋಲನವು ಸ್ವಲ್ಪ ಮಟ್ಟಿನ ಪ್ರಭಾವವನ್ನಾದರೂ ಖಂಡಿತ ಬೀರುತ್ತದೆ.ಅಷ್ಟನ್ನಾದರೂ ಸಾಧಿಸಿದ ಗೆಲುವು ‘ ಎದ್ದೇಳು ಕರ್ನಾಟಕ ಆಂದೋಲನ’ ದ ಪ್ರಮುಖರಿಗೆ ಸಿಕ್ಕಬಹುದು.

‌ ‌

About The Author