ಚಿಂತನೆ : ಮೂರ್ಖರ ಮಾತುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು : ಮುಕ್ಕಣ್ಣ ಕರಿಗಾರ

ಜಿ.ಫ್ರಾನ್ಸಿಸ್ ಜೇವಿಯರ್ ಅವರದ್ದು ವ್ಯಕ್ತಿತ್ವ ವಿಕಸನ ತರಬೇತಿಗಳ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು.ಭಾರತದ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಉಪನ್ಯಾಸಕರು,ಸಹಪ್ರಾಧ್ಯಾಪಕರು,ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಲ್ಲದೆ ನೂರಾರು ಅಂತಾರಾಷ್ಟ್ರೀಯ ತರಬೇತಿ ಶಿಬಿರಗಳನ್ನು ನಡೆಸಿ,ಸಾವಿರಾರು ಜನರ ಮೇಲೆ ಗಾಢಪ್ರಭಾವ ಬೀರಿದ್ದಾರೆ.ಅವರ ಕೃತಿಗಳಿಂದ ಸಹಸ್ರ ಸಹಸ್ರ ಸಂಖ್ಯೆಯ ಜನರು ಪ್ರಭಾವಿತರಾಗಿದ್ದಾರೆ.ವ್ಯಕ್ತಿತ್ವ ವಿಕಸನ ಕ್ಷೇತ್ರದಲ್ಲಿ 15 ಕೃತಿಗಳನ್ನು ಬರೆದಿರುವ ಜಿ.ಫ್ರಾನ್ಸಿಸ್ ಜೇವಿಯರ್ ಅವರ ಬಹುಪ್ರಸಿದ್ಧ ಪುಸ್ತಕ ” 100 Inspiring Stories to Enrich Your Life”.ಒಂದು ನೂರು ಕಥೆಗಳುಳ್ಳ ಈ ಪುಸ್ತಕವು ವಿವಿಧ ದೇಶ- ಭಾಷೆಗಳಲ್ಲಿನ ಅತ್ಯುತ್ತಮ ತತ್ತ್ವ- ಉಪದೇಶಗಳನ್ನು ಆಧರಿಸಿ ರಚಿಸಿದ ಪುಸ್ತಕವಾಗಿದ್ದು ನಿರೂಪಣೆಯು ಸರಳ ಮತ್ತು ನೇರವಾಗಿರುವುದರಿಂದ ಇಂಗ್ಲಿಷಿನ ಸಾಮಾನ್ಯ ಜ್ಞಾನ ಇದ್ದವರೂ ಈ ಪುಸ್ತಕವನ್ನು ಓದಿ,ಆನಂದಿಸಬಹುದು.ನಮಗೆ ಇಷ್ಟವಾದ ಕಥೆ ಮತ್ತು ಅದರ ಸಂದೇಶವನ್ನು ಬಾಳ ಸೂತ್ರವಾಗಿ ಸ್ವೀಕರಿಸಬಹುದು.ಜಿ.ಫ್ರಾನ್ಸಿಸ್ ಜೇವಿಯರ್ ಅವರ 100 ಕಥೆಗಳಲ್ಲಿ ನನಗೆ ಹತ್ತಕ್ಕೂ ಹೆಚ್ಚು ಕಥೆಗಳು ಇಷ್ಟವಾದವು.ನಾವು ಮಹತ್ಕಾರ್ಯವನ್ನು ಮಾಡ ಹೊರಟಾಗ ಮೂರ್ಖರು ನಮ್ಮನ್ನು ವಿನಾಕಾರಣ ಟೀಕಿಸುತ್ತಾರೆ,ಮಂದಿಯೆದುರು ಆಡಿಕೊಳ್ಳುತ್ತಾರೆ.ಅಂತಹ ಸಂದರ್ಭದಲ್ಲಿ ಸಾಧಕ,ಜ್ಞಾನಿ ಆದವನು ಏನು ಮಾಡಬೇಕು ಎನ್ನುವದನ್ನು ಅತ್ಯಂತ ಸರಳ ಪ್ರಸಂಗ ಒಂದರ ಮೂಲಕ ವಿವರಿಸುವ ” ಅರ್ಥಹೀನ ದಾಳಿಗಳ ವಿರುದ್ಧ ಸೌಮ್ಯವಾಗಿರಿ” ಎನ್ನುವ ಪುಟ್ಟ ಕಥೆಯೊಂದು ನನ್ನ ಗಮನ ಸೆಳೆಯಿತು.ಆ ಪುಟ್ಟ ಕಥೆ ;

ಒಬ್ಬ ವ್ಯಕ್ತಿ ಪಕ್ಕದಲ್ಲೊಂದು ನಾಯಿಯ ಜೊತೆ ಬೀದಿಯಲ್ಲಿ ನಡೆಯುತ್ತಿದ್ದನು.ಆಗ ಇದ್ದಕ್ಕಿದ್ದಂತೆ ಮೂವರು ವ್ಯಕ್ತಿಗಳು ಬಂದು ಆ ವ್ಯಕ್ತಿಯನ್ನು ಅಡ್ಡಗಟ್ಟಿ ಕೂಗಾಡತೊಡಗಿದರು.ಆ ಮೂವರಲ್ಲಿ ಮೊದಲನೆಯವ ಹೇಳಿದ’ ನಿನ್ನ ನಾಯಿ ನನ್ನ ಬೆಕ್ಕನ್ನು ಆ ಮರದವರೆಗೆ ಅಟ್ಟಿಸಿಕೊಂಡು ಹೋಗಿತ್ತು’. ಎರಡನೆಯವನು ಹೇಳಿದ ‘ ನಿನ್ನ ನಾಯಿ ರಾತ್ರಿಯಿಡೀ ಬೊಗಳುತ್ತಾ ನನ್ನ ನಿದ್ರೆಗೆ ಭಂಗ ಉಂಟು ಮಾಡಿತು ‘. ಮೂರನೆಯ ವ್ಯಕ್ತಿ ರೇಗಾಡಿದ ‘ ನೀನು ನಾಯಿಗೆ ಸರಿಯಾಗಿ ಅನ್ನ ಹಾಕುತ್ತಿಲ್ಲ,ಅದಕ್ಕೆ ಆ ನಾಯಿ ಹೀಗೆಲ್ಲ ವರ್ತಿಸುತ್ತಿದೆ’. ಮೂವರ ಅರಚಾಟ,ಆರ್ಭಟಗಳನ್ನು ಆಲಿಸಿದ ಆ ವ್ಯಕ್ತಿ ನಗುನಗುತ್ತ,ಶಾಂತ ಚಿತ್ತನಾಗಿ ಉತ್ತರಿಸಿದ” ನೀವು ಇಷ್ಟೊಂದು ಕಠಿಣ ಮನಸ್ಕರಾಗಿ ವರ್ತಿಸುವಿರೇಕೆ ? ಆ ನಾಯಿಯು ನನ್ನ ಸ್ನೇಹಪರ ವರ್ತನೆಯನ್ನು ಕಂಡು ನನ್ನನ್ನು ಹಿಂಬಾಲಿಸುತ್ತಿದೆ.ಇದು ನನ್ನ ನಾಯಿಯಲ್ಲ”. ಆ ವ್ಯಕ್ತಿಯ ಮಾತುಗಳನ್ನು ಕೇಳಿದ ಮೂವರ ಮುಖಗಳು ಸಪ್ಪೆಯಾದವು.ತಪ್ಪುಹೊರಿಸಿ ಅವನನ್ನು ಮುಜುಗರಕ್ಕೆ ಈಡು ಮಾಡಬಯಸಿದ್ದ ಮೂವರು ತಾವೇ ಅವಮಾನಿತರಾಗಿ ಆ ವ್ಯಕ್ತಿಯ ಕ್ಷಮೆ ಕೇಳಿ ಹಿಂತಿರುಗಿದರು.

ಮೇಲು ನೋಟಕ್ಕೆ ಸಾಮಾನ್ಯ ಕಥೆ,ಪ್ರಸಂಗ ಎಂದು ತೋರಬಹುದಾದ ಈ ಕಥೆಯು ನಮ್ಮೆಲ್ಲರನ್ನು ಕಾಡುವ ಬಹುಮುಖ್ಯ ಪ್ರಶ್ನೆಗೆ ಉತ್ತರ ನೀಡುತ್ತದೆ.ನಮ್ಮ ಪಾಡಿಗೆ ನಾವು ಕೆಲಸ ಮಾಡುತ್ತಿದ್ದರೂ ಸಹಿಸಿಕೊಳ್ಳಲಾಗದ ಕೆಲವರು ಇರುತ್ತಾರೆ ಸಮಾಜದಲ್ಲಿ.ನೀವು ದೊಡ್ಡ ಕೆಲಸ ಮಾಡುತ್ತಿದ್ದೀರಿ,ಸಮಾಜೋಪಯೋಗಿ ಕೆಲಸ ಮಾಡುತ್ತಿದ್ದೀರಿ,ಲೋಕೋಪಕಾರಗಳನ್ನು ಮಾಡುತ್ತಿದ್ದೀರಿ ಎಂಬುದನ್ನು ತಿಳಿದು ಅವರು ಸಂತೋಷ ಪಡುವುದಿಲ್ಲ,ಬದಲಿಗೆ ನಿಮ್ಮ ಬಗ್ಗೆ ಅತೃಪ್ತಿ ವ್ಯಕ್ತಪಡಿಸುತ್ತಾರೆ,ನಿಮ್ಮ ಬಗ್ಗೆ ಅಸಹನೆಯನ್ನು ತೋರ್ಪಡಿಸುತ್ತಾರೆ.ನಿಮ್ಮಿಂದ ಅವರಿಗೆ ಕೆಟ್ಟದ್ದು ಆಗಿರುವುದಿಲ್ಲ ಆದರೆ ಅವರ ಮನಸ್ಸು ಕೆಟ್ಟಿರುತ್ತದೆ.ಕೊಳಕ ಮನಸ್ಕರು ನಿಮ್ಮ ಬಗ್ಗೆಯೇ ಕೆಟ್ಟದಾಗಿ ಮಾತನಾಡುತ್ತಾರೆ.ಕಾರಣ ಇಷ್ಟೆ,ಅವರು ಯಾರನ್ನೋ ಇಷ್ಟಪಟ್ಟಿರುತ್ತಾರೆ,ಅವರು ಮಾತ್ರ ಬೆಳೆದು ದೊಡ್ಡವರಾಗಬೇಕು ಎನ್ನುವ ಕೀಳು ಬುದ್ಧಿ ಇವರದ್ದು.ತಾವು ಇಷ್ಟಪಟ್ಟ ವ್ಯಕ್ತಿ ನಿಜವಾದ ಸಾಧಕನಲ್ಲ,ಸತ್ತ್ವಶೀಲನಲ್ಲ ಎಂದು ಗೊತ್ತಿದ್ದರೂ ಈ ವ್ಯಕ್ತಿಗಳು ಆ ವ್ಯಕ್ತಿಯ ಹಂಗು- ಅಭಿಮಾನಗಳಿಗೆ ‘ ಒತ್ತೆಯಾಳುಗಳು’ ಆಗಿರುವುದರಿಂದ ಕೆಚ್ಚೆದೆಯಿಂದ ಮುನ್ನುಗ್ಗುತ್ತಿರುವ ಸತ್ತ್ವಶೀಲರಾದ ನಿಮ್ಮನ್ನು ಸಹಿಸುವುದಿಲ್ಲ.ಇದು ಲೋಕದ ಜನರ ರೀತಿ- ರಿವಾಜು.ತಮಗೆ ಬೇಕಾದವರಿಗೆ ಮಾತ್ರ ದೊಡ್ಡಸ್ತಿಕೆ ಸಿಗಬೇಕು; ಮತ್ತೊಬ್ಬರು ನಿಜವಾಗಿಯೂ ದೊಡ್ಡವರಿದ್ದರೂ ಅವರಿಗೆ ಉನ್ನತಿಕೆ ಒದಗಬಾರದು ಎಂದು ಬಯಸುವ ಕ್ಷುಲ್ಲಕ ಮನಸ್ಸಿನ,ಸಣ್ಣಮನುಷ್ಯರುಗಳು.ನಿಮ್ಮ ಏಳ್ಗೆಯನ್ನು ಸಹಿಸದ ದುರ್ಬುದ್ಧಿಯ ಹೊರತು ಅವರಲ್ಲಿ ವಿವೇಕವಾಗಲಿ,ವಿವೇಚನಾ ಶಕ್ತಿಯಾಗಲಿ ಇರುವುದಿಲ್ಲ.

ಈ ಕಥೆಯಲ್ಲಿ ಬೀದಿಯಲ್ಲಿ ನಡೆದು ಹೋಗುವ ವ್ಯಕ್ತಿಯು ಸಚ್ಚರಿತ, ನಿರುಪದ್ರವಿ,ಪರೋಪಕಾರಿ ಎಂಬುದನ್ನು ಅರಿತದ್ದರಿಂದಲೇ ಆ ನಾಯಿಯು ಆತನ ಜೊತೆ ನಡೆದಿದೆ.ಆದರೆ ಆ ಮೂವರು ವ್ಯಕ್ತಿಗಳಿಗೆ ಆ ನಾಯಿ ಈತನದ್ದೋ ಅಥವಾ ಅಲ್ಲವೊ ಎಂದು ವಿಚಾರಿಸುವಷ್ಟು ತಾಳ್ಮೆ ಇಲ್ಲ.ಆ ವ್ಯಕ್ತಿಯ ಬಗೆಗಿನ ತಮ್ಮ ಅಸಹನೆ,ಹೊಟ್ಟೆಉರಿಯನ್ನು ನಾಯಿಯ ಉಪದ್ರವಗಳ ಬಗ್ಗೆ ರೇಗಾಡುತ್ತ ತೀರಿಸಿಕೊಳ್ಳುತ್ತಾರೆ.ನಾಯಿಯಂತಹ ಮೂಕ ಪ್ರಾಣಿಯೂ ಮನುಷ್ಯರಲ್ಲಿ ಒಳ್ಳೆಯವರು ಮತ್ತು ಕೆಟ್ಟವರನ್ನು ಗುರುತಿಸುತ್ತದೆ.ಆದರೆ ಮನುಷ್ಯರಾದವರಿಗೆ ನಾಯಿಯಷ್ಟು ವಿವೇಕವಾಗಲಿ,ವಿವೇಚನಾ ಸಾಮರ್ಥ್ಯವಾಗಲಿ ಇಲ್ಲ !ಮಹಾನ್ ಕಾರ್ಯಗಳನ್ನು ಸಾಧಿಸುತ್ತಿರುವವರ ತಪ್ಪುಗಳನ್ನು ಕಂಡು,ಹಿಡಿದು ಕಂಡವರ ಎದುರು ಆಡಿಕೊಂಡಾಗಲೇ ಖುಷಿ.ಮಹಾನ್ ವ್ಯಕ್ತಿಗಳು ತಪ್ಪು ಮಾಡದೆ ಇದ್ದರೂ ಮಾಡಿದಂತೆ ಆರೋಪಿಸಿ, ಅವರಿವರ ಎದುರು ಮಾತನಾಡಿ ಸಂತೋಷಪಡುವ ವಿಕೃತಮನಸ್ಕರುಗಳು.ಬಂಗಾರದಲ್ಲಿ ಮಾಡಿದ ಗಣಪತಿ ಬಂಗಾರದ ಗಣಪತಿಯೆ! ಎಂದಿದ್ದರೂ ಎಲ್ಲಿದ್ದರೂ ಪೂಜಾರ್ಹನೆ,ಲೋಕಪೂಜ್ಯನೆ.ಆದರೆ ‘ಸಗಣಿಯ ಬೆನಕ’ ನನ್ನು ಪೂಜಿಸುವ ಜನರ ಅವಸ್ಥೆ ನೋಡಿ ಹೇಗಿದೆ! ತಾವು ಪೂಜಿಸುತ್ತಿರುವುದು ಸಗಣಿಯ ಬೆನಕನನ್ನು,ವಿಷಯ ವಾಸನೆಗಳ ದಾಸನಾದ ವ್ಯಕ್ತಿಯನ್ನು,ಮಲಭಾಂಡದೇಹಿಯನ್ನು ಎಂದು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಇಲ್ಲದವರು.ಸಗಣಿಯ ಬೆನಕನನ್ನು ಸಂಪಿಗೆ- ಮಲ್ಲಿಗೆಯ ಹೂವುಗಳ ಹಾರ- ತುರಾಯಿಗಳನ್ನು ಹಾಕಿ ಸಿಂಗರಿಸಿ ಪೂಜಿಸಿದರೆ ಸಗಣಿಯ ದುರ್ವಾಸನೆ ಅಡಗುವುದೆ? ಹಾಗೆಯೇ ಸಚ್ಚರಿತನಲ್ಲದ ವ್ಯಕ್ತಿಯನ್ನು ದೊಡ್ಡವನೆಂದು ಭ್ರಮಿಸಿದ್ದು ತಮ್ಮ ತಪ್ಪು ಎಂದರಿಯದೆ ಧೀರೋದಾತ್ತರಲ್ಲಿ ಅವಗುಣಗಳನ್ನರಸಿ ತಮ್ಮ ಮೂರ್ಖತನವನ್ನು ಪ್ರದರ್ಶಿಸುತ್ತಾರೆ.ಹಾಗಾಗಿ ದಾರಿಯಲ್ಲಿ ನಡೆದು ಹೋಗುವಾಗ ಇಂತಹ ಮತಿಹೀನ ಮೂರ್ಖರ ಮಾತುಗಳಿಗೆ ಬೆಲೆ ಕೊಡದೆ ನಮ್ಮಷ್ಟಕ್ಕೆ ನಾವು ಮುಂದುವರೆಯಬೇಕು.ಮೂರ್ಖರ ಮಾತುಗಳಿಗೆ ಕಿವಿಗೊಟ್ಟು ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವ ಬದಲು ಮೂರ್ಖರ ಮಾತುಗಳಿಗೆ ಕಿವುಡರಾಗುವ ಮೂಲಕ ನಾವು ಮಹಾತ್ಕಾರ್ಯಗಳನ್ನು ಸಾಧಿಸಬೇಕು.ಮೂರ್ಖರು ಉದ್ಧಾರವಾಗದೆ ಮೂರ್ಖರಾಗಿಯೇ ಉಳಿಯುತ್ತಾರೆ.ಆದ್ದರಿಂದ ಅವರ ಮಾತುಗಳಿಗೆ ಬೆಲೆ ಕೊಡದೆ ಅವರನ್ನು ನಿರ್ಲಕ್ಷಿಸಬೇಕು.ಜಗತ್ತು ಮೂರ್ಖರ ಮಾತಿಗೆ ಬೆಲೆ ಕೊಡುವುದಿಲ್ಲ.ಬಂಗಾರದ ಗಣಪತಿ ಮತ್ತು ಸಗಣಿಯ ಗಣಪತಿಯ ನಡುವಿನ ವ್ಯತ್ಯಾಸವನ್ನು ಗುರುತಿಸುವಷ್ಟು ಬುದ್ಧಿವಂತರಿದ್ದಾರೆ ಜನರು ಎಂದು ತಿಳಿದುಕೊಂಡು ನಮ್ಮ ಕೆಲಸದಲ್ಲಿ ನಾವು ತಲ್ಲೀನರಾಗಬೇಕು.

About The Author