ಚಿಂತನೆ : ಹೋಳಿ ಹಬ್ಬದ ಸಂದೇಶ : ಮುಕ್ಕಣ್ಣ ಕರಿಗಾರ

ಉತ್ಸಾಹ,ಉಲ್ಲಾಸ,ಸಡಗರಗಳಿಂದ ಆಚರಿಸಲ್ಪಡುತ್ತಿರುವ ಹೋಳಿಯು ಭಾರತದ ವಿಶಿಷ್ಟ ಹಬ್ಬಗಳಲ್ಲೊಂದು. ಉತ್ತರ ಭಾರತದಲ್ಲಿ ಸಾರ್ವತ್ರಿಕವಾಗಿ ಆಚರಿಸಲ್ಪಡುತ್ತಿರುವ ಹೋಳಿಯನ್ನು ದೇಶದಾದ್ಯಂತ ಪ್ರಾದೇಶಿಕ ಸಂಸ್ಕೃತಿಗೆ ಅನುಗುಣವಾಗಿ ಭಿನ್ನ ವಿಭಿನ್ನವಾಗಿ ಆಚರಿಸಲಾಗುತ್ತದೆ.ಕಾಮದಹನ ಮತ್ತು ಬಣ್ಣ ಎರಚಿ,ಸಂಭ್ರಮಿಸುವುದು ಈ ಹಬ್ಬದ ಸಾಮಾನ್ಯ ಸಂಗತಿ.ನಾಗರಿಕ ಪ್ರಪಂಚದ ಭರಾಟಗೆ ಸಿಕ್ಕು ಭಾರತದ ಸಂಸ್ಕೃತಿಯ ಪ್ರತೀಕವಾಗಿದ್ದ ಎಲ್ಲ ಹಬ್ಬಗಳು ಆಚರಣೆಯಲ್ಲಿನ ವೈಭವ ಕಳೆದುಕೊಂಡಿರುವಂತೆ ಹೋಳಿಯು ಕೂಡ ತನ್ನ ಗತಕಾಲದ ಮಹಿಮೆ- ವೈಭವಗಳನ್ನು ಕಳೆದುಕೊಂಡಿದೆ.ತುಂಟಹುಡುಗರು,ಕೀಟಲೆ ಕಾಮಣ್ಣಗಳ ದುರ್ವರ್ತನೆಗಳಿಂದ ಹೋಳಿಯ ಆಚರಣೆಯು ಕಳೆಗುಂದಿದೆ.ಬಣ್ಣ ಎರಚಿ ಆಡುವ ಬದಲು ಪೇಂಟ್ ಗಳು ಮತ್ತಿತರ ರಾಸಾಯನಿಕಗಳಿಂದ ತಯಾರಿಸಲ್ಪಟ್ಟ ದ್ರವ,ದ್ರಾವಣಗಳನ್ನು ಹಚ್ಚುತ್ತಿರುವುದರಿಂದ ಜಗಳ,ಘರ್ಷಣೆಗಳುಂಟಾಗುತ್ತಿವೆ.ಬಣ್ಣಗಳೊಂದಿಗೆ ಸಹಜವಾಗಿ ಆಚರಿಸಿದರೆ ಎಲ್ಲರಲ್ಲೂ ಸಂತೋಷವನ್ನುಂಟು ಮಾಡುವ ಹಬ್ಬ ಹೋಳಿ.

ಪುರಾಣಗಳಂತೆ ತಪೋನಿರತನಾಗಿದ್ದ ಶಿವನ ತಪಸ್ಸಿಗೆ ಭಂಗವನ್ನುಂಟು ಮಾಡಿದ್ದರಿಂದ ಮನ್ಮಥನು ಶಿವನ ಹಣೆಗಣ್ಣು ಅಥವಾ ಮೂರನೇ ಕಣ್ಣಿನ ಕ್ರೋಧಾಗ್ನಿಜ್ವಾಲೆಯಾಗಿ ಬಲಿಯಾಗಿ ಸುಟ್ಟು ಬೂದಿಯಾಗುತ್ತಾನೆ.ರತಿಯ ಪ್ರಲಾಪಕ್ಕೆ ಮನಕರಗಿದ ಶಿವನು ಮನ್ಮಥನು ಸುಟ್ಟು ಬೂದಿಯಾಗಿದ್ದರಲ್ಲಿನ ಬೂದಿಯಲ್ಲಿ ಸ್ವಲ್ಪ ಬೂದಿಯನ್ನು ಸಂಗ್ರಹಿಸಿಟ್ಟುಕೊಳ್ಳಲು ಸೂಚಿಸಿ,ಕಾಲಾಂತರದಲ್ಲಿ ಈ ಬೂದಿಯಿಂದ ಮನ್ಮಥನು ಪುನಃ ಜನ್ಮ ತಳೆಯುತ್ತಾನೆ ಎಂದು ಅಭಯನೀಡಿ,ರತಿಯನ್ನು ಅನುಗ್ರಹಿಸುವನು.ಶಿವನಪ್ಪಣೆಯಂತೆ ರತಿಯು ತನ್ನ ಪತಿಯು ಸುಟ್ಟು ಬೂದಿಯಾದ ಸ್ಥಳದಲ್ಲಿನ ಸ್ವಲ್ಪ ಬೂದಿಯನ್ನು ಸಂಗ್ರಹಿಸಿಟ್ಟುಕೊಂಡು ಮನ್ಮಥನ ಪುನರಾಗಮನಕ್ಕೆ ಕಾಯುತ್ತಾಳೆ.ಮನ್ಮಥನು ಇಂದಿಲ್ಲ ನಾಳೆ ಬರುತ್ತಾನೆ ಎನ್ನುವ ನಿರೀಕ್ಷೆ ಮತ್ತು ಅವನ ಸ್ವಾಗತಕ್ಕಾಗಿ ಕಾಯುವ ಸಂತೋಷದ ಆಚರಣೆಯೇ ಪರಸ್ಪರರಿಗೆ ಬಣ್ಣ ಎರಚಿ,ಸಂಭ್ರಮಿಸುವುದು.

ಶಿವ ಸರ್ವೇಶ್ವರ ತತ್ತ್ವವನ್ನು ಸಾರುವ ಕಾಮದಹನದ ಹೋಳಿ ಹಬ್ಬವು ಕೆಲವು ಸಂದೇಶಗಳನ್ನು ನೀಡುತ್ತಿದೆ.ವ್ಯಕ್ತಿತ್ವ ವಿಕಸನದ ಸೂತ್ರಗಳನ್ನಾಗಿಯೂ ನಾವು ” ಕಾಮದಹನ ಸಂದೇಶ ಸೂತ್ರಗಳ” ನ್ನು ಅರ್ಥೈಸಿಕೊಂಡು,ಅಳವಡಿಸಿಕೊಳ್ಳಬಹುದು.

೦೧. ದೊಡ್ಡವರ ಹಿತಕ್ಕಾಗಿ ಸಣ್ಣವರ ಬಲಿ

‌ದೊಡ್ಡವರು,ಪ್ರತಿಷ್ಠಿತರ ಹಿತಕ್ಕಾಗಿ ಜನಸಾಮಾನ್ಯರು ಬಲಿಯಾಗುತ್ತಿರುವುದು ಭಾರತದ ಇತಿಹಾಸ, ಸಂಸ್ಕೃತಿಯ ಸಾಮಾನ್ಯ ಅಂಶಗಳಲ್ಲೊಂದು.ರಾಜ ಮಹಾರಾಜರುಗಳು,ರಾಜಗುರುಗಳು,ಪಟ್ಟಭದ್ರರು- ಪುರೋಹಿತರುಗಳ ವೈಭವೀಕರಣವೇ ಭಾರತದ ಇತಿಹಾಸವಾಗಿದ್ದು ಜನಸಾಮಾನ್ಯರು,ದುರ್ಬಲರು ಭಾರತದ ಇತಿಹಾಸ ಮತ್ತು ವರ್ತಮಾನಗಳಲ್ಲಿ ಮಹತ್ವದ ಸ್ಥಾನವನ್ನೇನೂ ಪಡೆದಿಲ್ಲ.

ಮನ್ಮಥನು ತನಗಾಗಿ ಸಾಯದೆ ಇಂದ್ರಾದಿ ದೇವತೆಗಳ ಹಿತ ಕಾಯಲು ಹೋಗಿ ಶಿವನ ಮೂರನೇ ಕಣ್ಣಿನ ಕೋಪಕ್ಕೆ ಸಿಕ್ಕು ಬಲಿಯಾಗುತ್ತಾನೆ.

೦೨. ಆತ್ಮವಿಶ್ವಾಸವಿರಲಿ ಆದರೆ ಹುಸಿಹೊಗಳಿಗೆ ಮರುಳಾಗದೆ ಇರುವ ವಿವೇಕವಿರಲಿ

ಪ್ರತಿಯೊಬ್ಬರಲ್ಲಿಯೂ ವಿಶಿಷ್ಟವಾದ ಶಕ್ತಿ,ಸಾಮರ್ಥ್ಯಗಳಿವೆ.ನಮ್ಮ ಬುದ್ಧಿ,ಪ್ರತಿಭೆ,ಶಕ್ತಿ- ಸಾಮರ್ಥ್ಯಗಳಲ್ಲಿ ನಮಗೆ ನಂಬಿಕೆ ಇರಬೇಕು.ಆದರೆ ಕಾರ್ಯಸಾಧಿಸಿಕೊಳ್ಳಲು ಅನ್ಯರು ಹೊಗಳುವ ಅತಿಹೊಗಳಿಕೆಗೆ ಉಬ್ಬಿ ಕೊಬ್ಬಬಾರದು.

ಪರಶಿವನ ಶಕ್ತಿ ಸಾಮರ್ಥ್ಯಗಳ ಅರಿವಿದ್ದೂ ವಿಶ್ವನಿಯಾಮಕನಾದ ಪರಶಿವನ ಇಚ್ಛೆ ಮತ್ತು ಸಂಕಲ್ಪಗಳಿಗೆ ಅನುಗುಣವಾಗಿಯೇ ಕಾರ್ಯನಿರ್ವಹಿಸುತ್ತಿರುವ ತಾನು ಶಿವನ ಇಚ್ಛೆಗೆ ವಿರುದ್ಧವಾಗಿ ವರ್ತಿಸುವುದು ಉಚಿತವಲ್ಲ ಎನ್ನುವ ಅರಿವು ಇದ್ದೂ ಮನ್ಮಥನು ಇಂದ್ರಾದಿ ದೇವತೆಗಳ ಬಣ್ಣದ ಮಾತುಗಳಿಗೆ ಬಲಿಯಾಗಿ ಸುಟ್ಟುಬೂದಿಯಾಗುವನು.

೦೩. ಬಂದೊದಗಲಿರುವ ಆಪತ್ಕಾಲದಲ್ಲಿ ತನ್ನವರ ಆಪ್ತ ಸಲಹೆ ಕೇಳಬೇಕು

ಇಂದ್ರಾದಿ ದೇವತೆಗಳ ಹೊಗಳಿಕೆಯ ಮಾತುಗಳಿಗೆ ಬಲೂನಿನಂತೆ ಉಬ್ಬಿ ಶಿವನ ತಪೋಭಂಗಕ್ಕೆ ಹೊರಟು ನಿಂತು ಗಂಡನನ್ನು ಕುರಿತು ರತಿಯು ‘ ಈ ದುಸ್ಸಾಹಸಕ್ಕೆ ಕೈಹಾಕಬೇಡ.ಪರಶಿವನನ್ನು ಎದುರಿಸಿ ನಿಲ್ಲಲ್ಲು ಸ್ವಯಂ ಬ್ರಹ್ಮ ವಿಷ್ಣುಗಳೆ ಸಮರ್ಥರಲ್ಲ. ಮೂರುಲೋಕವನ್ನು ಗೆದ್ದೆನೆಂಬ ನಿನ್ನ ಆಟ ವೈರಾಗ್ಯಮೂರ್ತಿಯಾದ ಪರಶಿವನೆದುರು ನಡೆಯದು.ಶಿವನು‌ ಕೋಪಿಸಿಕೊಂಡು ಮೂರನೇ ಕಣ್ಣನ್ನು ತೆರೆದರೆ ಅನರ್ಥ ಸಂಭವಿಸುತ್ತದೆ’ ಎಂದು ಪರಿಪರಿಯಾಗಿ ಹೇಳಿದರೂ ಮನ್ಮಥನು ಹೆಂಡತಿಯ ಮಾತುಗಳಿಗೆ ಬೆಲೆಕೊಡದೆ ಶಿವನ ಉರಿಗಣ್ಣಿಗೆ ಸಿಕ್ಕು ಬೂದಿಯಾದನು.

೦೪. ಆಪತ್ಕಾಲದಲ್ಲಿ ಜೊತೆಗಿರುವವರೇ ನಿಜವಾದ ಸ್ನೇಹಿತರು

ಮನ್ಮಥನು ಶಿವನ ತಪೋಭಂಗಕಾರ್ಯಕ್ಕೆ ಹೊರಟಿರುವುದು ಅಪಾಯಕಾರಿ ಕೆಲಸ,ಸಾವು ಸಂಭವಿಸುವುದು ನಿಶ್ಚಿತ ಎಂದರಿತರೂ ಮನ್ಮಥನ ಸ್ನೇಹಿತ ವಸಂತನು ಕಾಮನ ಜೊತೆ ಶಿವನ ತಪೋಭೂಮಿಯಾದ ಹಿಮಾಲಯಕ್ಕೆ ತೆರಳಿ ಅಕಾಲದಲ್ಲಿ ವಸಂತೋದಯವನ್ನುಂಟು ಮಾಡಿ ಕಾಮನಿಗೆ ನೆರವಾಗುವನು.

ಹಣ,ಅಧಿಕಾರ ಇದ್ದಾಗ ಸುತ್ತಮುತ್ತ,ಹಿಂದೆ ಮುಂದೆ ತಿರುಗಿ ಸ್ನೇಹಿತರಂತೆ ನಟಿಸುವವರು ನೀವು ಬರಿಗೈಯ ಬಸವನಾಗಲು ನಿಮ್ಮಿಂದ ದೂರ ಸರಿಯುತ್ತಾರೆ.ಇಂಥವರ ಸ್ನೇಹ ವ್ಯಾವಹಾರಿಕ ಸ್ನೇಹವಾಗಿದ್ದು ಅದನ್ನು ನಂಬಲಾಗದು.ಆದರೆ ನಿಜವಾದ ಸ್ನೇಹಿತರು ನಿಮ್ಮ ಕಷ್ಟಕಾಲದಲ್ಲಿ ನಿಮ್ಮೊಂದಿಗೆ ಇರುತ್ತಾರೆ,ನಿಮ್ಮ ಆಪತ್ಕಾಲದಲ್ಲಿ ನೆರವಾಗುತ್ತಾರೆ.ಅವಕಾಶವಾದಿಗಳು,ಸಮಯಸಾಧಕರುಗಳನ್ನು ಸ್ನೇಹಿತರು ಎಂದು ನಂಬಬಾರದು.

೦೫. ನಿಮ್ಮ ನೆರವು ಪಡೆಯುವ ದೊಡ್ಡವರು ನೀವು ಕಷ್ಟಕ್ಕೆ ಸಿಲುಕಿದಾಗ ನೆರವಿಗೆ ಬಾರರು

ಕ್ರೋಧೋನ್ಮತ್ತ ತಪಸ್ವಿ ಶಿವನ ಹಣೆಗಣ್ಣ ಅನಲನ ಆರ್ಭಟಕ್ಕೆ ಕಾಮನು ಕ್ಷಣಾರ್ಧದಲ್ಲಿ ಸುಟ್ಟು ಬೂದಿಯಾಗುವನು.ಇದನ್ನು ಕಂಡು ಬೆದರಿದ ದೇವತೆಗಳು ದಿಕ್ಕಾಪಾಲಾಗಿ ಓಡಿದರೇ ವಿನಃ ಪರಶಿವನಲ್ಲಿ ಕಾಮನ ಪರವಾಗಿ ಕ್ಷಮೆ ಯಾಚಿಸಿ,ಪ್ರಾರ್ಥಿಸಲಿಲ್ಲ.

ದೊಡ್ಡವರು ಎಂದು ಭ್ರಮಿಸಿ ಅವರ ಮಾತುಗಳನ್ನು ನಂಬಿ ತಮ್ಮ ಬದುಕುಗಳನ್ನು ಹಾಳು ಮಾಡಿಕೊಳ್ಳುವುದು ವಿವೇಕವಲ್ಲ.ಅಧಿಕಾರಸ್ಥರು,ಹಣವಂತರು ಸಮಾಜದ ದುರ್ಬಲ ವರ್ಗಗಳ ಸೇವೆ,ತ್ಯಾಗ ಮನೋಭಾವದ ಮಹೋನ್ನತಿಯನ್ನು ಅರ್ಥೈಸಿಕೊಳ್ಳದೆ ಹಣದಿಂದ ಅಳೆಯಬಯಸುತ್ತಾರೆ ಇಲ್ಲವೆ ದುರ್ಬಲರು ಇರುವುದು ನಮ್ಮ ಸೇವೆಗಾಗಿಯೇ,ನಮ್ಮ ಶ್ರೇಯಸ್ಸಿನಲ್ಲಿಯೇ ಅವರ ಸಾರ್ಥಕತೆ ಇದೆ ಎಂದು ಅಹಂ ಪ್ರದರ್ಶಿಸುತ್ತಾರೆ.ಉಳ್ಳವರು,ಪಟ್ಟಭದ್ರರ ಸೇವೆಯ ಹೆಸರಿನಲ್ಲಿ ಸ್ವಂತ ಬದುಕನ್ನು ಕಡೆಗಣಿಸಬಾರದು,ಸ್ವಾಭಿಮಾನಕ್ಕೆ ಧಕ್ಕೆ ತಂದುಕೊಳ್ಳಬಾರದು.

೦೬. ಸತ್ತ್ವಗುಣಗಳಿಂದ ಹಿರಿಯರಾದವರು ನಿಮ್ಮ ಸಹಾಯವನ್ನು ಮರೆಯುವುದಿಲ್ಲ

ಮನ್ಮಥನು ತನಗಾಗಿ ಸುಟ್ಟುಬೂದಿಯಾದುದನ್ನರಿತ ಪಾರ್ವತಿಯು ಪರಿಪರಿಯಾಗಿ ಪರಿತಪಿಸುತ್ತಾಳೆ,ರತಿಯನ್ನು ಸಂತೈಸಿದ್ದಲ್ಲದೆ ಮನ್ಮಥನ ದುರ್ಮರಣಕ್ಕೆ ತಾನೇ ಕಾರಣಳು ಎಂದು ತನ್ನ ಹೆತ್ತವರೆದುರು ಪ್ರಲಾಪಿಸುತ್ತಾಳೆ.

ಹಣದಿಂದ,ಅಧಿಕಾರದಿಂದ ದೊಡ್ಡವರಾದವರು ಉನ್ಮತ್ತರಂತೆ ವರ್ತಿಸುವ ಅವಿವೇಕಿಗಳಾದರೆ ಸತ್ತ್ವಗುಣ,ಧರ್ಮಗುಣಗಳಿಂದ ಹಿರಿಯರಾದವರು ನೀವು ಮಾಡಿದ ಉಪಕಾರವನ್ನು ಮರೆಯದೆ ಸದಾ ಸ್ಮರಿಸುವುದಲ್ಲದೆ ನಿಮಗೆ ಪ್ರತಿಯಾಗಿ ಉಪಕಾರ ಮಾಡುವ ಕ್ಷಣಗಳಿಗಾಗಿ ಕಾಯುತ್ತಿರುತ್ತಾರೆ.

೦೭. ನಿಮ್ಮ ಕಷ್ಟಕಾಲದಲ್ಲಿ ನಿಮ್ಮ ಮಡದಿ ಮಕ್ಕಳು,ಬಂಧು- ಸಂಬಂಧಿಕರಲ್ಲದೆ ಇತರರು ಸಂಕಷ್ಟಕ್ಕೆ ಈಡಾಗರು.

‌ಪತಿ ಮನ್ಮಥನು ದೇವತೆಗಳ ಕಾರ್ಯ ಸಾಧಿಸಹೋಗಿ ಶಿವನ ಕೋಪಕ್ಕೆ ತುತ್ತಾಗಿ ಸುಟ್ಟು ಬೂದಿಯಾದಾಗ ರತಿಯೊಬ್ಬಳೇ ತನ್ನ ಗಂಡನ ಬೂದಿಯ ರಾಶಿಯಲ್ಲಿ ಬಿದ್ದು ಒದ್ದಾಡುತ್ತಾಳೆ,ಹುಚ್ಚಿಯಂತೆ ಪ್ರಲಾಪಿಸುತ್ತಾಳೆ.ಇಂದ್ರನಾಗಲಿ ಇತರ ದೇವತೆಗಳಾಗಲಿ ಅಲ್ಲಿ ಇರುವುದಿಲ್ಲ.

‌ ದೊಡ್ಡವರು,ಪ್ರತಿಷ್ಠಿತರು,ಪಟ್ಟಭದ್ರರ ಸೇವೆ- ಶುಶ್ರೂಷೆಗಳಿಗಾಗಿ ನಿಮ್ಮ ಬದುಕನ್ನೇ ಒತ್ತಿ ಇಟ್ಟು ಬಳಲುವುದಕ್ಕಿಂತ ನಿಮ್ಮ ವೈಯಕ್ತಿಕ ಬದುಕಿನ ಬಗ್ಗೆ,ನಿಮ್ಮ ಕುಟುಂಬ,ನಿಮ್ಮ ಹೆಂಡಿರು ಮಕ್ಕಳುಗಳ ಬಗ್ಗೆ ಗಮನಿಸುವುದು ಒಳಿತು.ನೀವು ಎಷ್ಟೇ‌ಉದಾರಿಗಳಾಗಿರಿ,ಸಮಾಜಸೇವೆಗಾಗಿ ನಿಮ್ಮ ಸಂಪತ್ತನ್ನೇ ವ್ಯಯಿಸಿದವರಾಗಿರಿ ನೀವು ಸತ್ತಾಗ ಅಳುವವರು,ನಿಮ್ಮ ಹೆಣ ಹೊರುವವರು ನಿಮ್ಮ ಹೆಂಡಿರು ಮಕ್ಕಳು,ಹತ್ತಿರದ ಬಂಧುಗಳು ಮಾತ್ರ.ವಿಶ್ವಮಾನವತೆಯ ತತ್ತ್ವ ಬೋಧಿಸಿ,ಅನುಷ್ಠಾನಕ್ಕೆ ತಂದರೂ ಜನರು ನಿಮ್ಮ ಹೆಣದ ದರ್ಶನ ಪಡೆಯಬಹುದು,ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಬಹುದಷ್ಟೆ.’ ಮನೆಗೆದ್ದು ಮಾರುಗೆಲ್ಲು’ ಎನ್ನುವ ನಾಣ್ಣುಡಿಯ ಹಿಂದಿನ ಅರ್ಥವು ಇದೆ ಎಂಬುದನ್ನರಿತು ಸಂಸಾರದೊಟ್ಟಿಗೆ ಚೆನ್ನಾಗಿ ಬದುಕಿ.

ಈ ಏಳು ಜೀವನ ಸೂತ್ರಗಳನ್ನು ನಾವು ಕಾಮದಹನ ಪ್ರಸಂಗದಿಂದ ಕಲಿತು,ಅಳವಡಿಸಿಕೊಳ್ಳಬಹುದಾಗಿದೆ.

‌ ‌‌ ‌

About The Author