ಮೂರನೇ ಕಣ್ಣು : ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸಲಿರುವ ಸುಪ್ರೀಂಕೋರ್ಟಿನ ದೂರಗಾಮಿ ಪರಿಣಾಮಗಳ ಮಹತ್ವದ ತೀರ್ಪು : ಮುಕ್ಕಣ್ಣ ಕರಿಗಾರ

ಸುಪ್ರೀಂಕೋರ್ಟಿನ ಸಂವಿಧಾನ ಪೀಠವು ಭಾರತದ ಚುನಾವಣಾ ಆಯೋಗಕ್ಕೆ ಶಕ್ತಿ ತುಂಬುವ ಮೂಲಕ ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸಲು ನೆರವಾಗುವಂತಹ ಮಹತ್ವದ ಮತ್ತು ದೂರಗಾಮಿ ಪರಿಣಾಮಗಳನ್ನು ಬೀರುವ ತೀರ್ಪನ್ನು ಮಾರ್ಚ್ 02 ರ ಗುರುವಾರದಂದು ಪ್ರಕಟಿಸಿದೆ.ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರ ನೇತೃತ್ವದಲ್ಲಿನ ಸಂವಿಧಾನ ಪೀಠವು ಭಾರತದಲ್ಲಿ ನಡೆಯುತ್ತಿರುವ ಚುನಾವಣಾ ದುರ್ಬಳಕೆಯ ಪ್ರಕರಣಗಳು ಮತ್ತು ಕೇಂದ್ರ ಚುನಾವಣಾ ಆಯೋಗದ ಅಸಹಾಯಕತೆ ಇಲ್ಲವೆ ಮೂಕಸಮ್ಮತಿಯ ಪ್ರವೃತ್ತಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಮತ್ತು ಇತರ ಆಯುಕ್ತರ ನೇಮಕ ಪ್ರಕ್ರಿಯೆಯು ಪಾರದರ್ಶಕವಾಗಿ,ಪ್ರಬುದ್ಧವಾಗಿ ನಡೆಯಿಸಲು ಅನುಕೂಲವಾಗಲು ಸುಪ್ರೀಂಕೊರ್ಟಿನ ಕೋಲಿಜಿಯಂ ವ್ಯವಸ್ಥೆಯನ್ನು ಹೋಲುವ ಸ್ವತಂತ್ರ ನೇಮಕಾತಿ ವಿಧಾನವನ್ನು ಪ್ರಸ್ತಾಪಿಸಿ,ತೀರ್ಪು ನೀಡಿದೆ.ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಆಯುಕ್ತರುಗಳ ನೇಮಕವನ್ನು ಪ್ರಧಾನಿ,ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂಕೋರ್ಟಿನ ಮುಖ್ಯನ್ಯಾಯಾಧೀಶರು ಸದಸ್ಯರಾಗಿರುವ ಸಮಿತಿಯು ನೀಡುವ ಸಲಹೆಯಂತೆ ರಾಷ್ಟ್ರಪತಿಯವರು ನೇಮಿಸಬೇಕು ಎಂದು ಸಂವಿಧಾನ ಪೀಠದ ಸರ್ವಾನುಮತದ ತೀರ್ಪು ಹೇಳಿದೆ.ಭಾರತದ ಚುನಾವಣಾ ಸುಧಾರಣೆಗಳು ಮತ್ತು ಚುನಾವಣಾ ಆಯೋಗದ ಸ್ವಾಯತ್ತತೆಗೆ ಈ ತೀರ್ಪು ಭೀಮಬಲ ನೀಡಿದೆ.ಚುನಾವಣಾ ಸುಧಾರಣೆಗಳ ಬಗ್ಗೆ ಇದುವರೆಗೆ ಹಲವು ಆಯೋಗಗಳು ಹತ್ತು ಹಲವು ಸುಧಾರಣೆಯ ಶಿಫಾರಸ್ಸುಗಳನ್ನು ನೀಡಿದ್ದರೂ ಆ ಶಿಫಾರಸ್ಸುಗಳಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ರಾಜಕೀಯ ಪಕ್ಷಗಳು ತಮಗೆ ಬೇಕಾದ ಶಿಫಾರಸ್ಸುಗಳನ್ನು ಮಾತ್ರ ಅನುಷ್ಠಾನಗೊಳಿಸಿದ್ದವು.ಈಗ ಸುಪ್ರೀಂಕೋರ್ಟಿನ ಸಂವಿಧಾನ ಪೀಠವೇ ಇಂತಹ ಮಹತ್ವದ ತೀರ್ಪನ್ನು ನೀಡಿರುವುದರಿಂದ ಮುಕ್ತ ಮತ್ತು ಸ್ವತಂತ್ರ ಚುನಾವಣೆಗಳ ಕಾಲ ಸಮೀಪಿಸಿದೆ ಎಂದು ಭಾವಿಸಬಹುದು.

ಸರ್ವೋಚ್ಛ ನ್ಯಾಯಾಲದ ಈ ತೀರ್ಪು ನ್ಯಾಯಾಂಗದ ಅತಿಯಾದ ಕ್ರಿಯಾಶೀಲತೆ ಮತ್ತು ಸಂಸತ್ತಿನ ಅಧಿಕಾರದಲ್ಲಿ ನೇರ ಹಸ್ತಕ್ಷೇಪ ಎಂದು ಕೆಲವರು ವಾದಿಸಬಹುದು.ಆದರೆ ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆ,ಫಲಿತಾಂಶಗಳನ್ನು ಗಮನಿಸಿ,ಮುಕ್ತ ,ಸ್ವತಂತ್ರ ಮತ್ತು ಪಾರದರ್ಶಕ ಚುನಾವಣೆಗಳ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಿದ್ದವರಿಗೆ ಈ ತೀರ್ಪು ಸಮಾಧಾನ ನೀಡಿದೆ.ಸುಪ್ರೀಂಕೋರ್ಟಿನ ಇತ್ತೀಚಿನ ಕೆಲ ತೀರ್ಪುಗಳು ಕಾನೂನು ತಜ್ಞರುಗಳು ಸೇರಿದಂತೆ ಜನರ ಅನುಮಾನಕ್ಕೆ ಕಾರಣವಾಗಿದ್ದವು.ಸರ್ವೋಚ್ಛನ್ಯಾಯಾಲದ ಬಗ್ಗೆಯೇ ಜನರಲ್ಲಿ ಸಂದೇಹಗಳು ಮೂಡುತ್ತಿದ್ದ ಸಂದರ್ಭದಲ್ಲಿ ಸರ್ವೋಚ್ಛ ನ್ಯಾಯಾಲದ ಸಂವಿಧಾನ ಪೀಠವು ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸುವ ಬಹುಮಹತ್ವದ ಹಾಗೂ ಪ್ರಬುದ್ಧ ತೀರ್ಪು ನೀಡಿದೆ.ಸಂಸತ್ತು ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಸಲು ಜವಾಬ್ದಾರಿ ಹೊಂದಿರುವ ಕೇಂದ್ರ ಚುನಾವಣಾ ಆಯೋಗವು ಇತ್ತೀಚಿನ ವರ್ಷಗಳಲ್ಲಿ ತೀರ ದುರ್ಬಲ ಸಂಸ್ಥೆಯಾಗಿತ್ತು.ಚುನಾವಣಾ ನಿಯಮಗಳು ಪ್ರಧಾನಮಂತ್ರಿ ಸೇರಿ ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತವೆ ಎನ್ನುವ ಅರಿವು ಇದ್ದರೂ ಚುನಾವಣಾ ಆಯೋಗವು ಕೆಲವರ ಚುನಾವಣಾ ನಿಯಮಗಳ ಉಲ್ಲಂಘನೆಯನ್ನು ಪ್ರಶ್ನಿಸುತ್ತಿರಲಿಲ್ಲ ಮತ್ತು ಚುನಾವಣಾ ಘೋಷಣೆಯ ತನ್ನ ಪರಮಾಧಿಕಾರವನ್ನು ಕಾಣದ ಕೈಯಗಳ ಹಿಡಿತಕ್ಕೆ ಒಪ್ಪಿಸಿ ‘ ಶರಣಾಗತಿ’ ಯನ್ನು‌ ಪ್ರದರ್ಶಿಸಿತ್ತು.ಚುನಾವಣಾ ಆಯೋಗವು ದುರ್ಬಲಗೊಳ್ಳಲು ಮುಖ್ಯ ಚುನಾವಣಾ ಆಯುಕ್ತರು ಮತ್ತು‌ಇತರ ಚುನಾವಣಾ ಆಯುಕ್ತರುಗಳ ನೇಮಕಾತಿಯ ವಿಧಾನವು ಕಾರಣವಾಗಿತ್ತು.ಪ್ರಧಾನಮಂತ್ರಿಯವರು ಇಚ್ಛಿಸಿದ ವ್ಯಕ್ತಿ,ವ್ಯಕ್ತಿಗಳ ಹೆಸರುಗಳು ಚುನಾವಣಾ ಆಯೋಗದ ಸಿ ಇ ಸಿ ಮತ್ತು ಇ ಸಿ ಹುದ್ದೆಗಳಿಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆಯೊಂದಿಗೆ ನೇಮಕಾತಿಗಾಗಿ ರಾಷ್ಟ್ಟಪತಿಯವರಿಗೆ ಸಲ್ಲಿಸಲ್ಪಡುತ್ತಿದ್ದವು.ಸುಪ್ರೀಂಕೋರ್ಟಿನ ಸಂವಿಧಾನ ಪೀಠವು ನಿವೃತ್ತ ಐಎಎಸ್ ಅಧಿಕಾರಿ ಅರುಣ್ ಗೋಯಲ್ ಅವರ ನೇಮಕಾತಿಯು ಅತಿ ಅವಸರದಲ್ಲಿ ಆಗಿದ್ದು ಮತ್ತು ಕೇವಲ 24 ಘಂಟೆಗಳಲ್ಲಿ ಇಡೀ ಪ್ರಕ್ರಿಯೆಯು ಮುಗಿದಿರುವುದನ್ನು ತನ್ನ ವಿಚಾರಣೆ ಸಂದರ್ಭದಲ್ಲಿ ಗಮನಿಸಿತ್ತು ಎಂಬುದು ಉಲ್ಲೇಖನಾರ್ಹ ಸಂಗತಿ.ಸರಕಾರದ ಇಚ್ಛೆಗೆ ಅನುಗುಣವಾಗಿ ಮುಖ್ಯ ಚುನಾವಣಾ ಆಯುಕ್ತ ಮತ್ತು‌ ಇತರ ಆಯುಕ್ತರುಗಳಾಗಿ ನೇಮಕಗೊಳ್ಳುವವರು ಸರಕಾರದ ಇಚ್ಛೆಗೆ ವಿರುದ್ಧವಾಗಿ ವರ್ತಿಸುತ್ತಿರಲಿಲ್ಲ,ಸರಕಾರದ ಆಣತಿಯನ್ನು ಮೀರುತ್ತಿರಲಿಲ್ಲ.ಹೀಗಾಗಿ ಚುನಾವಣಾ ಆಯೋಗದ ಕಾರ್ಯವೈಖರಿಯು ಸಾರ್ವಜನಿಕರಲ್ಲಿ ಸಂದೇಹಮೂಡಿಸಿತ್ತು.ರೋಗದ ಮೂಲವನ್ನು ಪತ್ತೆ ಹಚ್ಚಿರುವ ಸಂವಿಧಾನ ಪೀಠವು ವ್ರಣಬಾಧೆಯ ಮೂಲಕ್ಕೆ ಶಸ್ತ್ರಚಿಕಿತ್ಸೆ ಮಾಡಹೊರಟಿದೆ.

ಚುನಾವಣೆಗಳು ಸ್ವತಂತ್ರವಾಗಿ ಮತ್ತು ಪಾರದರ್ಶಕವಾಗಿ ನಡೆದಾಗಲೇ ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯ.ಅನಕ್ಷರಸ್ಥ ಮತ್ತು ಅಪಕ್ವತದಾರರನ್ನು ಹೊಂದಿರುವ ಭಾರತದಲ್ಲಿ ಸ್ವತಂತ್ರ ಮತ್ತು ನಿರ್ಭೀತ ಮತದಾನವು ಸವಾಲಿನ ಕೆಲಸವೇ ಸರಿ.ಮತಯಂತ್ರಗಳ ದುರ್ಬಳಕೆಯ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು.ಈ ಎಲ್ಲ ಅಂಶಗಳನ್ನು ಪರಿಗಣಿಸಿಯೇ ಸುಪ್ರೀಂಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.

ಭಾರತದ ಸಂವಿಧಾನದ 324 ನೆಯ ಅನುಚ್ಛೇದವು ಭಾರತದ ಚುನಾವಣಾ ಆಯೋಗ,ಅದರ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಆಯುಕ್ತರುಗಳ ಸ್ಥಾನ ಮಾನ,ನೇಮಕ ಪ್ರಕ್ರಿಯೆಯ ಬಗ್ಗೆ ವಿವರಿಸುತ್ತದೆ.ಸಂವಿಧಾನದ 324(2)ನೇ ಅನುಚ್ಛೇದವು “ಚುನಾವಣಾ ಆಯೋಗವು ಮುಖ್ಯ ಚುನಾವಣಾ ಆಯುಕ್ತನನ್ನು ಮತ್ತು ರಾಷ್ಟ್ರಪತಿಯು ಕಾಲಕಾಲಕ್ಕೆ ನಿಗದಿಪಡಿಸಬಹುದಾದಷ್ಟು ಸಂಖ್ಯೆಯ ಇತರ ಚುನಾವಣಾ ಆಯುಕ್ತರುಗಳು ಯಾರಾದರೂ ಇದ್ದರೆ,ಅವರುಗಳನ್ನು ಒಳಗೊಂಡಿರತಕ್ಕದ್ದು ಮತ್ತು ಮುಖ್ಯ ಚುನಾವಣಾ ಆಯುಕ್ತನ ಮತ್ತು ಇತರ ಚುನಾವಣಾ ಆಯುಕ್ತರುಗಳ ನೇಮಕವನ್ನು ಆ ಬಗ್ಗೆ ಸಂಸತ್ತು ಮಾಡಿದ ಯಾವುದೇ ಕಾನೂನಿನ ಉಪಬಂಧಗಳಿಗೆ ಒಳಪಟ್ಟು ರಾಷ್ಟ್ರಪತಿಯು ಮಾಡತಕ್ಕದ್ದು” ಎಂದು ವಿಧಿಸಿದೆ.ಆದರೆ ಇದುವರೆಗೂ ಕೇಂದ್ರದಲ್ಲಿ ಆಡಳಿತ ನಡೆಯಿಸಿದ ಎಲ್ಲ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಸ್ವಾಯತ್ತತೆಯನ್ನು ನೀಡುವ ನಿಯಮಗಳನ್ನು ರೂಪಿಸಲಿಲ್ಲ.ಭಾರತದ ಚುನಾವಣಾ ಆಯೋಗಕ್ಕೆ ಘನತೆ ಗೌರವಗಳನ್ನು ನೀಡಿ,ಅದನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗಿದ್ದ ದಿಟ್ಟ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್ .ಶೇಷನ್ ಅವರ ಕ್ರಮಗಳಿಂದ ಬೆದರಿದ ಸರಕಾರವು ಮುಖ್ಯ ಚುನಾವಣಾ ಆಯುಕ್ತರ ಸ್ವಾತಂತ್ರ್ಯವನ್ನು ನಿರ್ಬಂಧಿಸಲು ಇಬ್ಬರು ಇತರ ಚುನಾವಣಾ ಆಯುಕ್ತರುಗಳನ್ನು ನೇಮಿಸಿ,ಚುನಾವಣೆಗೆ ಸಂಬಂಧಿಸಿದ ನಿರ್ಧಾರಗಳು ಚುನಾವಣಾ ಆಯೋಗದ ಸರ್ವಸಮ್ಮತ ನಿರ್ಧಾರಗಳಾಗಿರಬೇಕು ಎಂದು ಕಡಿವಾಣ ಹಾಕಿತ್ತು.ಕೇಂದ್ರ ಚುನಾವಣಾ ಆಯೋಗಕ್ಕೆ ಇತರ ಚುನಾವಣಾ ಆಯುಕ್ತರುಗಳನ್ನು ನೇಮಿಸಿದ್ದ ಸರಕಾರದ ಕ್ರಮವನ್ನು ಆಡಳಿತಾರೂಢ ಪಕ್ಷ ಮತ್ತು ಸರ್ಕಾರದ ಹಿತವನ್ನು ಕಾಯುವುದಾಗಿತ್ತೇ ಹೊರತು ಅದರಲ್ಲಿ ಚುನಾವಣಾ ಆಯೋಗವನ್ನು ಬಲಪಡಿಸುವ ಉದ್ದೇಶ ಇರಲಿಲ್ಲ.ಇದನ್ನು ಗಮನಿಸಿದ ಸಂವಿಧಾನ ಪೀಠವು ” ಚುನಾವಣಾ ಪ್ರಕ್ರಿಯೆಯನ್ನು ಬಹುಕಾಲದಿಂದ ನಿರಂತರವಾಗಿ ದುರ್ಬಳಕೆ ಮಾಡಿರುವುದು ಪ್ರಜಾಪ್ರಭುತ್ವವನ್ನು ಸಮಾಧಿಯತ್ತ ಸಾಗಿಸುವ ದಾರಿಯಾಗಿದೆ” ಎನ್ನುವ ಮಾತುಗಳಲ್ಲಿ ತನ್ನ ಆಕ್ರೋಶಭರಿತ ಕಾಳಜಿಯನ್ನು ವ್ತಕ್ತಪಡಿಸಿದೆ.

ಸಂಸತ್ತು ಇದುವರೆಗೂ ಚುನಾವಣಾ ಆಯೋಗದ ಸ್ವಾಯತ್ತತೆ ಮತ್ತು ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರ ನೇಮಕದ ಬಗ್ಗೆ ನಿಯಮಗಳನ್ನು ರೂಪಿಸದೆ ಇರುವುದನ್ನು ಮನಗಂಡ ಸಂವಿಧಾನ ಪೀಠವು ಈ ತಾತ್ಕಾಲಿಕ ನೇಮಕ ವ್ಯವಸ್ಥೆಯನ್ನು ಮುಂದಿಟ್ಟಿದೆ ಮತ್ತು ಸಂಸತ್ತು ಈ ಕುರಿತು ನಿಯಮಗಳನ್ನು ರಚಿಸುವವರೆಗೆ ಮಾತ್ರ ಈ ವ್ಯವಸ್ಥೆ ಮುಂದುವರೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದರಿಂದ ಶಾಸಕಾಂಗ- ಕಾರ್ಯಾಂಗಗಳಲ್ಲಿ ನ್ಯಾಯಾಂಗದ ಹಸ್ತಕ್ಷೇಪ ಎನ್ನುವ ಮಾತಿನಲ್ಲಿ ಅರ್ಥವಿಲ್ಲ.ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಸುಪ್ರೀಂಕೋರ್ಟಿಗೆ ಆಸಕ್ತಿ ಇದೆಯೇ ಹೊರತು ರಾಜಕಾರಣದಲ್ಲಿ ಅದಕ್ಕೆ ಆಸಕ್ತಿ ಇಲ್ಲ ಎನ್ನುವುದನ್ನು ಮನಗಾಣಬೇಕು.ದೇಶದ ಕಾರ್ಯಾಂಗದ ಭಾಗವಾಗಿದ್ದ ಎಲ್ಲ ಸಂಸ್ಥೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಟು ಅವುಗಳ ಮೂಲಕ ವಿರೋಧಿಗಳನ್ನು ನಿಗ್ರಹಿಸುತ್ತಿದ್ದವರು,ಪ್ರಜಾಪ್ರಭುತ್ವದ ಆಶಯಗಳನ್ನು ತುಳಿದು ನಿಂತವರು ಈಗಲಾದರೂ ಚುನಾವಣಾ ಆಯೋಗದ ಬಗ್ಗೆ ನಿಯಮಗಳನ್ನು ರೂಪಿಸಬೇಕಿದೆ.

ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರ ನೇತೃತ್ವದ ಪೀಠವು ಎಲ್ಲ ಆಯಾಮಗಳನ್ನು ಪರಿಶೀಲಿಸಿ ಚುನಾವಣಾ ಆಯೋಗವನ್ನು ಸ್ವಾಯತ್ತ ಸಂಸ್ಥೆಯನ್ನಾಗಿಸುವ ಬಹು ಮಹತ್ವದ ತೀರ್ಪನ್ನು ನೀಡಿದೆ.ವಿರೋಧಪಕ್ಷದ ನಾಯಕ ಇರದೆ ಇರುವಂತಹ ಸ್ಥಿತಿ ಏರ್ಪಟ್ಟು ಆಗ ಆಡಳಿತ ಪಕ್ಷವು ತನ್ನ ಸ್ವೇಚ್ಛೆಯನ್ನು ಪ್ರದರ್ಶಿಸಬಹುದು ಎಂಬುದನ್ನು ಇತ್ತೀಚಿನ ವರ್ಷಗಳ ರಾಜಕೀಯ ವಿದ್ಯಮಾನದಲ್ಲಿ ಗಮನಿಸಿದ ಸಂವಿಧಾನ ಪೀಠವು ‘ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕ ಇಲ್ಲದೆ ಇದ್ದರೆ ಅತಿದೊಡ್ಡ ಪಕ್ಷದ ನಾಯಕ ಸಮಿತಿಯಲ್ಲಿ ಇರಬೇಕು’ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸುವ ಮೂಲಕ ಉದ್ಭವಿಸಬಹುದಾದ ಎಲ್ಲ ಗೊಂದಲಗಳಿಗೆ ತೆರೆ ಎಳದಿದೆ.ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷದ ಮುಖ್ಯಸ್ಥರಾಗಿರುವ ಪ್ರಧಾನ ಮಂತ್ರಿಯವರೊಂದಿಗೆ ವಿರೋಧಪಕ್ಷದ ನಾಯಕ ಮತ್ತು ಸುಪ್ರೀಂಕೋರ್ಟಿನ ಮುಖ್ಯನ್ಯಾಯಾಧೀಶರು ಚುನಾವಣಾ ಆಯೋಗದ ಮುಖ್ಯ ಆಯುಕ್ತ ಮತ್ತು ಇತರ ಆಯುಕ್ತರ ನೇಮಕಾತಿ ಪ್ರಾಧಿಕಾರದ ಸದಸ್ಯರುಗಳಾಗಿರುವುದರಿಂದ ರಾಜಕೀಯ ನಿರ್ಲಿಪ್ತ ಮನೋಭಾವದ,ನಿರ್ಭೀತ ನಿಲುವಿನ,ಚುನಾವಣಾ ಸುಧಾರಣೆಗಳಲ್ಲಿ ಆಸಕ್ತರಿರುವವರು ಮಾತ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಮತ್ತು ಇತರ ಆಯುಕ್ತರುಗಳಾಗಿ ನೇಮಕಗೊಳ್ಳಲು ಸಾಧ್ಯ.

ಸಂವಿಧಾನ ಪೀಠದ ಈ ತೀರ್ಪಿನ ಮತ್ತೊಂದು ಮಹತ್ವದ ಅಂಶ ಮುಖ್ಯ ಚುನಾವಣಾ ಆಯುಕ್ತರಿಗೆ ಇರುವ ಸಾಂವಿಧಾನಿಕ ರಕ್ಷಣೆಯನ್ನು ಇತರ ಆಯುಕ್ತರಿಗೂ ನೀಡಿರುವುದು.ಸಂವಿಧಾನದ ಅನುಚ್ಛೇದ 324(5) ರ ಪರಂತುಕದಂತೆ ಚುನಾವಣಾ ಆಯೋಗದ ಮುಖ್ಯ ಆಯುಕ್ತರನ್ನು ಸುಪ್ರೀಂಕೋರ್ಟಿನ ನ್ಯಾಯಾಧೀಶರನ್ನು ತೆಗೆದುಹಾಕುವಂತಹ ಮಹಾಭಿಯೋಗ ವಿಧಾನ ( Impeachment) ದ ಮೂಲಕವೇ ತೆಗೆದುಹಾಕಬೇಕು ಎನ್ನುವ ನಿಬಂಧನೆಯನ್ನು ಚುನಾವಣಾ ಆಯೋಗದ ಇತರ ಆಯುಕ್ತರಿಗೂ ವಿಸ್ತರಿಸಿ ಸಂವಿಧಾನ ಪೀಠವು ತೀರ್ಪು ನೀಡಿರುವುದರಿಂದ ಚುನಾವಣಾ ಆಯೋಗಕ್ಕೆ ನೇಮಕಗೊಳ್ಳುವ ಇತರ ಆಯುಕ್ತರುಗಳ ಸಹ ಯಾವ ಪ್ರೀತಿ ಇಲ್ಲವೆ ಭೀತಿಗಳಿಗೆ ಒಳಗಾಗದೆ ನಿರ್ಭೀತಿಯಿಂದ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ.ಭಾರತದ ಚುನಾವಣಾ ವ್ಯವಸ್ಥೆಯ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರುವ ಸರ್ವೋಚ್ಛ ನ್ಯಾಯಾಲದ ಸಂವಿಧಾನ ಪೀಠದ ಈ ತೀರ್ಪು ಅನುಷ್ಠಾನಗೊಳ್ಳುವುದೆ ಅಥವಾ ತೀರ್ಪಿನ ಅನುಷ್ಠಾನವನ್ನು ತಡೆಹಿಡಿಯಲು ಇತರ ಮಾರ್ಗಗಳನ್ನು ಹುಡುಕುತ್ತಾರೆಯೆ ಎನ್ನುವುದನ್ನು ಕಾದು ನೋಡಬೇಕು.

About The Author