ಮೂರನೇ ಕಣ್ಣು : ಸಾಂವಿಧಾನಿಕ ಹುದ್ದೆಗಳಲ್ಲಿದ್ದವರು ಸಂವಿಧಾನದ ಘನತೆ- ಗೌರವಗಳನ್ನು ಎತ್ತಿಹಿಡಿಯಬೇಕು,ರಾಜಕೀಯ ಒಲವು- ನಿಲುವುಗಳನ್ನಲ್ಲ : ಮುಕ್ಕಣ್ಣ ಕರಿಗಾರ

ಇತ್ತೀಚಿನ ದಿನಗಳಲ್ಲಿ ಕೇಂದ್ರದ ಆಡಳಿತಾರೂಢ ಬಿಜೆಪಿಯ ವಿರೋಧ ಪಕ್ಷಗಳು ಆಡಳಿತದ ಚುಕ್ಕಾಣಿ ಹಿಡಿದಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಮತ್ತು ಆ ರಾಜ್ಯಗಳ ಮುಖ್ಯಮಂತ್ರಿಗಳ ನಡುವಿನ ವಿವಾದ,ಸಂಘರ್ಷ ಸಾಮಾನ್ಯ ರಾಜಕೀಯ ವಿದ್ಯಮಾನ ಎಂಬಂತೆ ಕಾಣಿಸುತ್ತಿದೆ.ರಾಜ್ಯಪಾಲರಾದವರು ತಮ್ಮ ಹುದ್ದೆಯ ಘನತೆ- ಗೌರವಗಳನ್ನು ಮರೆತು ರಾಜಕೀಯ ಪಕ್ಷ ಒಂದರ ವಕ್ತಾರರಂತೆ ವರ್ತಿಸುತ್ತಿರುವುದು ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ನಡುವಿನ ಸಂಘರ್ಷದ ಕಾರಣ.ರಾಜಕೀಯ ಪಕ್ಷಗಳ ನಂಟು ಉಳ್ಳವರು,ಸಕ್ರೀಯ ರಾಜಕಾರಣದಲ್ಲಿ ಇದ್ದವರುಗಳನ್ನು ರಾಜ್ಯಪಾಲರುಗಳನ್ನಾಗಿ ನೇಮಿಸುತ್ತಿರುವುದರಿಂದ ವಿರೋಧಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಅನಗತ್ಯ ಹಾಗೂ ಅನಪೇಕ್ಷಣೀಯ ಬಿಕ್ಕಟ್ಟಿನ ವಾತಾವರಣವನ್ನು ಸೃಷ್ಟಿಸುತ್ತಿದೆ.ರಾಜ್ಯದ ಮುಖ್ಯಮಂತ್ರಿ ಹೇಗೆಯೇ ವರ್ತಿಸಲಿ ಆದರೆ ರಾಜ್ಯಪಾಲರಾದವರು ಸಂವಿಧಾನದ ಇತಿ ಮಿತಿಗಳಲ್ಲಿ ಪ್ರಬುದ್ಧವಾಗಿ ವರ್ತಿಸುವ ಹಿರಿಮೆಯನ್ನು ರೂಢಿಸಿಕೊಳ್ಳಬೇಕಿದೆ.

ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವಿನ ವಿವಾದಕ್ಕೆ ಚಾಟಿ ಬೀಸಿರುವ ಸುಪ್ರೀಂಕೋರ್ಟ್ ಇಬ್ಬರಿಗೂ ಬುದ್ಧಿವಾದ ಹೇಳಿದೆ.ಸುಪ್ರೀಂಕೋರ್ಟಿನ ಮುಖ್ಯನ್ಯಾಯಾಧೀಶರಾದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರನ್ನು ಒಳಗೊಂಡ ಸುಪ್ರೀಂಕೋರ್ಟಿನ ದ್ವಿಸದಸ್ಯ ನ್ಯಾಯಪೀಠ ಫೆಬ್ರವರಿ 28 ರ ಮಂಗಳವಾರದಂದು ಪಂಜಾಬ್ ರಾಜ್ಯ ಸರ್ಕಾರವು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿ ” ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು ಶಿಷ್ಟಾಚಾರಕ್ಕೆ ಅನುಗುಣವಾಗಿ ಹೆಚ್ಚು ಪ್ರಬುದ್ಧತೆಯಿಂದ ವರ್ತಿಸಬೇಕು” ಎಂದು ಪಂಜಾಬ್ ರಾಜ್ಯಪಾಲ ಮತ್ತು ಮುಖ್ಯಮಂತ್ರಿಯವರಿಗೆ ಹಿತೋಪದೇಶ ಹೇಳಿದೆ.ಮಾರ್ಚ್ 03 ರಂದು ರಾಜ್ಯದ ಬಜೆಟ್ ಅಧಿವೇಶನ ಕರೆಯಲು ಮುಖ್ಯಮಂತ್ರಿಯವರ ನೇತೃತ್ವದ ಸಚಿವ ಸಂಪುಟದ ನಿರ್ಣಯವನ್ನು ರಾಜ್ಯಪಾಲರು ಒಪ್ಪದೆ ಇರುವುದು ಸಂಘರ್ಷದ ಮೂಲವಾಗಿದ್ದು ಪಂಜಾಬ್ ಸರ್ಕಾರ ವಿಷಯವನ್ನು ಸುಪ್ರೀಂಕೋರ್ಟಿಗೆ ಕೊಂಡೊಯ್ದಿದೆ.ಮುಂದುವರೆದು ಸುಪ್ರೀಂಕೋರ್ಟ್ ನೀಡಿದ ಸೂಚನೆಗಳನ್ನು ಬಹಳಷ್ಟು ಜನ ರಾಜ್ಯಪಾಲರುಗಳು ಹಾಗೂ ಮುಖ್ಯಮಂತ್ರಿಗಳು ಅರ್ಥಮಾಡಿಕೊಳ್ಳಬೇಕಿದೆ.ಸುಪ್ರೀಂಕೋರ್ಟಿನ ಮುಖ್ಯನ್ಯಾಯಾಧೀಶರ ನೇತೃತ್ವದಲ್ಲಿನ ದ್ವಿಸದಸ್ಯ ನ್ಯಾಯಪೀಠವು ಪಂಜಾಬ್ ರಾಜ್ಯದ ವಿದ್ಯಮಾನವನ್ನು ಕುರಿತು ಹೇಳಿದ್ದು;” ರಾಜ್ಯಪಾಲರಾದವರು ಸಚಿವ ಸಂಪುಟದ ಸಲಹೆ ಹಾಗೂ ಸಹಕಾರದೊಂದಿಗೆ ಕಾರ್ಯನಿರ್ವಹಿಸುವುದಕ್ಕೆ ಬದ್ಧರಾಗಿರಬೇಕು.ಹಾಗೆಯೇ ರಾಜ್ಯದ ಮುಖ್ಯಮಂತ್ರಿಯಾಗಿರುವವರು ರಾಜ್ಯಪಾಲರು ಕೋರಿದ ಎಲ್ಲಾ ಮಾಹಿತಿಗಳನ್ನು ಒದಗಿಸಬೇಕು.ಅದು ಅವರ ಆದ್ಯ ಕರ್ತವ್ಯ ಎಂಬುದನ್ನು ಮನಗಾಣಬೇಕು”. ಸುಪ್ರೀಂಕೋರ್ಟಿನ ಈ ನಿಷ್ಠುರ ಸಲಹೆಯನ್ನು ಪಾಲಿಸದೆ ಬೇರೆ ಮಾರ್ಗವೇ ಇಲ್ಲ ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಮತ್ತು ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಬ್ಬರಿಗೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಆಮ್ ಆದ್ಮಿ ಪಕ್ಷದವರು; ರಾಜ್ಯಪಾಲರಾದ ಬನ್ವಾರಿ ಲಾಲ್ ಪುರೋಹಿತ್ ಅವರು ಕೇಂದ್ರದ ಬಿಜೆಪಿ ಸರ್ಕಾರದ ಶಿಫಾರಸ್ಸಿನಂತೆ ಪಂಜಾಬ್ ರಾಜ್ಯದ ರಾಜ್ಯಪಾಲರಾಗಿ ನೇಮಕಗೊಂಡವರು.ಆಮ್ ಆದ್ಮಿಪಕ್ಷ ಮತ್ತು ಕೇಂದ್ರ ಬಿಜೆಪಿಯ ನಡುವಿನ ಸಮಸ್ಯೆ ಎಲ್ಲರಿಗೂ ಗೊತ್ತಿರುವುದೆ.ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ ಅವರ ರಾಜಕೀಯ ನಾಗಲೋಟಕ್ಕೆ ಬಿಜೆಪಿಯ ವರಿಷ್ಠರು ತೊಡರುಗಳನ್ನೊಡ್ಡುತ್ತಿರುವುದು ರಾಜಕೀಯ ಪಡಸಾಲೆಯಲ್ಲಿ ನಿತ್ಯ ಚರ್ಚಿತ ವಿಷಯಗಳಲ್ಲೊಂದು.ಅರವಿಂದ್ ಕೇಜ್ರಿವಾಲ ಅವರು ದೆಹಲಿಯನ್ನು ಸ್ವಾಧೀನ ಪಡಿಸಿಕೊಂಡಿದ್ದಲ್ಲದೆ ಪಕ್ಕದ ಪಂಜಾಬ್ ರಾಜ್ಯಕ್ಕೂ ಲಗ್ಗೆ ಇಟ್ಟಿರುವುದು ಬಿಜೆಪಿಯ ವರಿಷ್ಠರಿಗೆ ನುಂಗಲಾರದ ತುತ್ತು.ಇತ್ತೀಚೆಗೆ ನಡೆದ ಗೋವಾ ವಿಧಾನ ಸಭೆಯ ಚುನಾವಣೆಯಲ್ಲೂ ಗೆಲುವಿನ ನಗೆಬೀರಿದ ಆಮ್ ಆದ್ಮಿ ಪಕ್ಷವು ಪ್ರಾದೇಶಿಕ ಪಕ್ಷದ ಪರಿಮಿತಿಯಿಂದ ರಾಷ್ಟ್ರೀಯ ಪಕ್ಷವಾಗುವವರೆಗೆ ತನ್ನರಾಜಕೀಯ ಬಲವನ್ನು ವಿಸ್ತರಿಸಿಕೊಂಡಿದೆ.ಕಾಂಗ್ರೆಸ್ಸಿನಂತಹ ಪ್ರಬಲ ರಾಷ್ಟ್ರೀಯ ರಾಜಕೀಯ ಪಕ್ಷವು ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳಲು ಪರದಾಡುತ್ತಿರುವ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷವು ರಾಜಕೀಯ ಮಹತ್ವಾಕಾಂಕ್ಷೆಯೊಂದಿಗೆ ಮುನ್ನುಗ್ಗುತ್ತಿರುವುದು ಬಿಜೆಪಿಯ ವರಿಷ್ಠರ ಅಸಹನೆಯ ಕಾರಣ.ಬಿಜೆಪಿ ವರಿಷ್ಠರ ಅಸಹನೆಯು ಪಂಜಾಬ್ ರಾಜ್ಯಪಾಲರ ನಡೆ ನುಡಿ,ವರ್ತನೆಗಳಲ್ಲಿ ವ್ಯಕ್ತವಾಗುತ್ತಿದೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಫೆಬ್ರವರಿ 13 ರಂದು ರಾಜ್ಯಪಾಲರಿಗೆ ಪತ್ರ ಬರೆದು ಮಾರ್ಚ್ 3 ರಂದು ರಾಜ್ಯದ ಬಜೆಟ್ ಅಧಿವೇಶನ ಕರೆಯಲು ಕೋರಿದ್ದರು.ಆದರೆ ರಾಜ್ಯಪಾಲರು ಕಾನೂನಿನ ಸಲಹೆ ಪಡೆಯುವುದಾಗಿ ಹೇಳಿದ್ದು ವಿವಾದದ ಕಾರಣವಾಗಿತ್ತು.ರಾಜ್ಯಪಾಲರು ಬಜೆಟ್ ಅಧಿವೇಶನ ಕರೆಯಲು ಕಾನೂನು ಸಲಹೆ ಪಡೆಯುವಂತಹ ರಾಜಕೀಯ ಬಿಕ್ಕಟ್ಟು ಆಗಲಿ ಅಥವಾ ರಾಷ್ಟ್ರೀಯ ವಿಪತ್ತಿನ ದಿನಗಳಾಗಲಿ ಇಲ್ಲ.ಮುಖ್ಯಮಂತ್ರಿಯವರ ನೇತೃತ್ವದ ಸಚಿವ ಸಂಪುಟವು ನಿರ್ಧರಿಸಿದ ದಿನ,ಸಮಯಕ್ಕೆ ರಾಜ್ಯದ ಅಧಿವೇಶನವನ್ನು ಕರೆಯುವುದು ರಾಜ್ಯಪಾಲರ ಸಂವಿಧಾನ ಬದ್ಧ ಹೊಣೆಗಾರಿಕೆ.ಅಧಿವೇಶನವನ್ನುದ್ದೇಶಿಸಿ ಮಾತನಾಡುವುದನ್ನು ಬಿಟ್ಟರೆ ರಾಜ್ಯಪಾಲರಿಗೆ ಅಧಿವೇಶನದ ಸಂದರ್ಭದಲ್ಲಿ ಅಂತಹ ದೊಡ್ಡ ಜವಾಬ್ದಾರಿ ಏನೂ ಇಲ್ಲ.ಸಮರ್ಥನೀಯ ಕಾರಣಗಳಿಲ್ಲದೆ ಬಜೆಟ್ ಅಧಿವೇಶನವನ್ನು ಕರೆಯಲು ಕಾನೂನಿನ ಸಲಹೆ ಪಡೆಯುವ ಪಂಜಾಬ್ ರಾಜ್ಯಪಾಲರ ನಿರ್ಧಾರ ಸರಿಯಾದ ನಡೆಯಲ್ಲ.ಹಾಗೆಯೇ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ” ತಾವು ಪಂಜಾಬಿನಲ್ಲಿ ನೆಲೆಸಿರುವ ಮೂರುಕೋಟಿ ಜನರಿಗಷ್ಟೇ ಉತ್ತರದಾಯಿಯಾಗಿರುವುದಾಗಿ” ಹೇಳಿದ್ದು ಕೂಡ ಸಮರ್ಥನೀಯವಲ್ಲ.ಮುಖ್ಯಮಂತ್ರಿ ಮತ್ತು ಅವರ ನೇತೃತ್ವದ ಸರಕಾರವು ರಾಜ್ಯದ ಹಿತಾಸಕ್ತಿಗೆ ಅನುಗುಣವಾಗಿ ನಡೆದುಕೊಳ್ಳಬೇಕಿದ್ದರೂ ಸಚಿವ ಸಂಪುಟವು ರಾಜ್ಯಪಾಲರ ನಿರ್ದೇಶನ,ಮೇಲ್ವಿಚಾರಣೆಗಳಡಿ ಕಾರ್ಯನಿರ್ವಹಿಸಬೇಕಿದೆ.ರಾಜ್ಯ ಸಚಿವಸಂಪುಟವು ವಿಧಾನಸಭೆಗೆ ಉತ್ತರದಾಯಿಯಾಗಿದ್ದರೂ ನಮ್ಮ ಸಂವಿಧಾನದ ‘ ರಾಜ್ಯದ ಆಡಳಿತ ನಿರ್ವಹಣೆಯಲ್ಲಿ ರಾಜ್ಯಪಾಲರಿಗೆ ನೆರವಾಗಲು ರಾಜ್ಯದ ಮುಖ್ಯಮಂತ್ರಿ ಮತ್ತು ಅವರ ಸಚಿವ ಸಂಪುಟ ಇರಬೇಕು’ ಎಂದು ನಿಯಮಿಸಿದ್ದನ್ನು ಮರೆಯಬಾರದು.ಜನತಂತ್ರ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿಯೇ ರಾಜ್ಯದ ನಿಜವಾದ ಮುಖ್ಯಸ್ಥರಾಗಿದ್ದರೂ ರಾಜ್ಯಪಾಲರು ಸಂವಿಧಾನ ಬದ್ಧವಾಗಿ ರಾಜ್ಯದ ಮುಖ್ಯಸ್ಥರು ಎನ್ನುವುದು ತಿಳಿದಿರಬೇಕಾದ ವಿಚಾರ.ರಾಜ್ಯಪಾಲರು ಸರಕಾರದ ದೈನಂದಿನ ಆಡಳಿತ ಮಾಹಿತಿಯನ್ನು ಅಪೇಕ್ಷಿಸುವುದು ಪ್ರಬುದ್ಧ ನಡೆಯಲ್ಲ.ರಾಜ್ಯಪಾಲರು ಕೇಳಿದ ಮಾಹಿತಿಯನ್ನು ನೀಡಲು ನಿರಾಕರಿಸುವುದು ಮುಖ್ಯಮಂತ್ರಿಯವರ ಹಿರಿಮೆಯೇನೂ ಅಲ್ಲ.ಸಾರ್ವಜನಿಕ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ವಿನಿಮಯವನ್ನೇ ಪ್ರತಿಷ್ಠೆಯ ವಿಷಯವನ್ನಾಗಿ ಸ್ವೀಕರಿಸುವುದು ಪ್ರಬುದ್ಧತೆಯಲ್ಲ.

ಸುಪ್ರೀಂಕೋರ್ಟಿನ ನ್ಯಾಯಪೀಠವು ತನ್ನ ನಿರ್ಣಯದಲ್ಲಿ ಹೇಳಿರುವ ಮಾತುಗಳಿವು;” ಇಬ್ಬರ ಕಡೆಯಿಂದಲೂ ಲೋಪವಾಗಿದೆ.ಸಿ ಎಂ ಅವರು ಪತ್ರದಲ್ಲಿ ವ್ಯಕ್ತಪಡಿಸಿರುವ ಭಾವನೆ ಒಪ್ಪಲಾಗದು.ಅಧಿವೇಶನ ಕರೆಯದ ಕುರಿತು ರಾಜ್ಯಪಾಲರಿಂದಲೂ ಯಾವುದೇ ಸಮರ್ಥನೆ ಇಲ್ಲ”.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜಾಪ್ರತಿನಿಧಿಗಳು ನಡೆಸುವ ಸರ್ಕಾರಕ್ಕೆ ಹೆಚ್ಚಿನ ಮನ್ನಣೆ ಇರಬೇಕು.ರಾಜ್ಯಪಾಲರಿಗೆ ಸಂವಿಧಾನವು ಕೆಲವು ವಿಶೇಷ ಹಕ್ಕು- ವಿಶೇಷಾಧಿಕಾರಿಗಳನ್ನು ನೀಡಿದೆಯಾದರೂ ರಾಜ್ಯಪಾಲರು ಆ ಹಕ್ಕು,ವಿಶೇಷಾಧಿಕಾರ ಮತ್ತು ವಿವೇಚನೆಯನ್ನು ರಾಜ್ಯದ ಹಿತದೃಷ್ಟಿಯಿಂದ ಮಾತ್ರವೇ ಚಲಾಯಿಸಬೇಕು.ರಾಜ್ಯಪಾಲರು ನಾಮ ಮಾತ್ರ ಆಡಳಿತ ಮುಖ್ಯಸ್ಥರು,ಮುಖ್ಯಮಂತ್ರಿ ಆಡಳಿತದ ನೈಜ ಮುಖ್ಯಸ್ಥರು.ರಾಜ್ಯಪಾಲರು ರಾಷ್ಟ್ರಪತಿಯವರಿಗೆ ಮಾತ್ರ ಜವಾಬ್ದಾರರು.ಆದರೆ ಮುಖ್ಯಮಂತ್ರಿ ಮತ್ತು ಅವರ ನೇತೃತ್ವದ ಸಚಿವ ಸಂಪುಟವು ಆ ರಾಜ್ಯದ ಪ್ರಜಾಸಮೂಹಕ್ಕೆ ಉತ್ತರದಾಯಿಯಾಗಿರುತ್ತದೆ.ಮುಖ್ಯಮಂತ್ರಿ ಮತ್ತು ಸಚಿವ ಸಂಪುಟವು ಜನತೆಯ ಹಿತಸಂವರ್ಧನೆಯ ದೃಷ್ಟಿಯಿಂದಲೇ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ರಾಜ್ಯಪಾಲರು ಮನಗಾಣಬೇಕು.ರಾಜ್ಯದ ಮುಖ್ಯಮಂತ್ರಿ ಸಮರ್ಥ ಆಡಳಿತ ನೀಡುವಲ್ಲಿ ವಿಫಲರಾದಾಗ ಇಲ್ಲವೆ ಗುರುತರ ಆರೋಪಗಳಿಗೆ ಸಿಕ್ಕಾಗ ರಾಜ್ಯಪಾಲರು ಮುಂದೆ ಉದ್ಭವಿಸಬಹುದಾದ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯದ ಆಡಳಿತದ ಮೇಲೆ ನಿಗಾ ಇಡಬಹುದು.ಸುಖಾಸುಮ್ಮನೆ ರಾಜ್ಯದ ದೈನಂದಿನ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು,ಯಾರದೋ ಕೈಗೊಂಬೆಯಾಗಿ ರಾಜ್ಯಸರ್ಕಾರವನ್ನು ಮುಜುಗರಕ್ಕೆ ಈಡುಮಾಡುವ,ಪೇಚಿಗೆ ಸಿಲುಕಿಸುವ ಮಾಹಿತಿಯನ್ನು ಅಪೇಕ್ಷಿಸಬಾರದು.ಕೇಂದ್ರಸರ್ಕಾರವು ಕೂಡ ತಮ್ಮ ವಿರೋಧಿ ಪಕ್ಷ ಆಡಳಿತದಲ್ಲಿದೆ ಎಂದು ರಾಜ್ಯಪಾಲರನ್ನು ತನ್ನ ಏಜೆಂಟರಂತೆ ಬಳಸಬಾರದು.ರಾಜ್ಯಪಾಲರ ಹುದ್ದೆಯ ಕಾರ್ಯವೈಖರಿಯು ಹಾದಿಬೀದಿಯಲ್ಲಿ ಚರ್ಚಿಸುವ ವಿಷಯವಾಗಬಾರದು.ರಾಜಕೀಯ ನಿರ್ಲಿಪ್ತಮನೋಭಾವದವರು ರಾಜ್ಯಪಾಲರಾದರೆ ಆ ಹುದ್ದೆಗೆ ಶೋಭೆ.ಆದರೆ ಈಗ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತಿರುವ ರಾಜ್ಯಪಾಲರುಗಳಿಲ್ಲ.ಸಂವಿಧಾನದ ವಿಧಿ- ನಿಯಮಗಳು ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವ ರಾಜ್ಯಪಾಲರುಗಳಿಂದ ಮಾತ್ರ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ.ಪ್ರಜಾಪ್ರಭುತ್ವವನ್ನು ಬಲಪಡಿಸುವುದು ರಾಜ್ಯಪಾಲರ ಆದ್ಯತೆ ಆಗಬೇಕು,ಸಂವಿಧಾನದ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವುದನ್ನು ಮುಖ್ಯಮಂತ್ರಿಗಳಾದವರು ರೂಢಿಸಿಕೊಳ್ಳಬೇಕು.

About The Author