ಮೂರನೇ ಕಣ್ಣು : ಪ್ರಶಸ್ತಿ ಪಡೆದವರೇ ಶ್ರೇಷ್ಠ ಸಾಹಿತಿಗಳಲ್ಲ; ಪ್ರಶಸ್ತಿ ಪಡೆಯುವ ಪುಸ್ತಕಗಳೆಲ್ಲ ಶ್ರೇಷ್ಠ ಕೃತಿಗಳಲ್ಲ ! : ಮುಕ್ಕಣ್ಣ ಕರಿಗಾರ

ಒಬ್ಬ ಸಾಹಿತಿ ಶ್ರೇಷ್ಠ ಸಾಹಿತಿ ಎಂದು ನಿರ್ಧರಿಸುವುದು ಹೇಗೆ? ಕೃತಿ ಒಂದು ಶ್ರೇಷ್ಠ ಕೃತಿ ಎಂದು ನಿರ್ಧರಿಸಲು ಇರುವ ಮಾನದಂಡಗಳೇನು ?ಸಾಹಿತ್ಯಕ್ಷೇತ್ರದ ಸಾಧನೆ- ಸಿದ್ಧಿಗಳಿಗೆ ಸಂಬಂಧಪಟ್ಟ ಮಹತ್ವದ ಪ್ರಶ್ನೆಗಳಿವು.ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ನಮ್ಮ ಬರಹಗಾರರೊಬ್ಬರು “……ಅವರಿಗೆ ಈ ಪ್ರಶಸ್ತಿ ಸಿಕ್ಕಿಲ್ಲ,….ಇವರಿಗೆ ಈ ಪ್ರಶಸ್ತಿ ಸಿಕ್ಕಿಲ್ಲ,ನನಗೆ ಸಿಕ್ಕಿದೆ” ಎಂದು ತಾವು ಅವರೆಲ್ಲರಿಗಿಂತ ಬಹುದೊಡ್ಡ ಸಾಹಿತಿ ಎಂಬಂತೆ ಮಾತನಾಡಿದ್ದನ್ನು ನಾನು ಕೇಳಿದ್ದೇನೆ.ಆ ದೊಡ್ಡಸಾಹಿತಿ ಉಲ್ಲೇಖಿಸಿದ ಸಾಹಿತಿಗಳ ಸಾಹಿತ್ಯದ ಸತ್ತ್ವ,ತತ್ತ್ವದ ಮುಂದೆ ಇವರು ದೊಡ್ಡವರಲ್ಲ,ಆದರೂ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತದ್ದು ಅವರನ್ನು ಇತರ ಪ್ರತಿಭಾವಂತ ಸಾಹಿತಿಗಳಿಗಿಂತ ದೊಡ್ಡವರನ್ನಾಗಿಸಿತ್ತು.ಪದವಿ- ಪ್ರಶಸ್ತಿಗಳು ನಮ್ಮ ಕೆಲಸಾಹಿತಿಗಳ ಅಹಂಭಾವವನ್ನು ಹೆಚ್ಚಿಸುತ್ತಿವೆ.ತಾವು ಇತರರಿಗಿಂತ ಶ್ರೇಷ್ಠರು ಎನ್ನುವ ಮನೋವ್ಯಾಧಿಗೆ ತುತ್ತಾಗುವಂತೆ ಮಾಡುತ್ತಿವೆ.

ಕೇಂದ್ರಸಾಹಿತ್ಯ ಅಕಾಡೆಮಿ‌ ಪ್ರಶಸ್ತಿಯೇ ಆಗಿರಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೇ ಆಗಿರಲಿ ಅವುಗಳನ್ನು ಪಡೆಯುವವರೆಲ್ಲ ಶ್ರೇಷ್ಠ ಸಾಹಿತಿಗಳಲ್ಲ,ಆ ಪ್ರಶಸ್ತಿಗಳನ್ನು ಪಡೆದ ಕೃತಿಗಳೆಲ್ಲ ಶ್ರೇಷ್ಠ ಕೃತಿಗಳಲ್ಲ!ಜ್ಞಾನಪೀಠ ಪ್ರಶಸ್ತಿ ಪಡೆದವರೆಲ್ಲ ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲ ಎಂದ ಬಳಿಕ ಇತರ ಪ್ರಶಸ್ತಿಗಳನ್ನು ಪಡೆದವರು ಶ್ರೇಷ್ಠರಾಗುವರೆ? ಆದರೂ ಕೆಲವರಿಗೆ ತಾವು ಪಡೆದ ಪ್ರಶಸ್ತಿಗಳನ್ನು ಲೆಟರ್ ಗಳಲ್ಲಿ ಎದ್ದುಕಾಣುವಂತೆ ಮುದ್ರಿಸಿಕೊಳ್ಳುವ ಚಪಲ.ಸಾಹಿತ್ಯ ಸಂಘಟನೆಗಳು,ಸಾಹಿತ್ಯಪರ ಸಂಘಟನೆಗಳು ಕೆಲವು ಪ್ರಶಸ್ತಿಗಳನ್ನು ನೀಡುತ್ತವೆ.ಪತ್ರಿಕೆ,ನಿಯತಕಾಲಿಕೆಗಳು ಕಥೆ,ಕವನ ಸ್ಪರ್ಧೆಗಳನ್ನು ಏರ್ಪಡಿಸಿ ತಮ್ಮ ಆಯ್ಕೆಗಾರರು ಆಯ್ಕೆಮಾಡಿದ ಕಥೆ,ಕವನಗಳು ಅತ್ಯುತ್ತಮ ಕಥೆ,ಕವನ ಎಂದು ಬಿಂಬಿಸುತ್ತವೆ.ಆಯಾ ಪತ್ರಿಕೆಯ ಆಯ್ಕೆಸಮಿತಿಯು ಆಯ್ಕೆ ಮಾಡಿದ‌ ಕಥೆ,ಕವನಗಳೇ ಶ್ರೇಷ್ಠ ಕಥೆ ಅಥವಾ ಕವನಗಳೆ?ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ ಹತ್ತಾರು ಜನರಲ್ಲಿ ಯಾರದೋ ಒಂದು ಕಥೆ,ಕವನ ಉತ್ತಮವಾಗಿರಬಹುದು.ಆದರೆ ಆ ವರ್ಷ ಪ್ರಕಟಗೊಂಡ ಎಲ್ಲ ಕಥೆ- ಕವನಗಳಲ್ಲಿ ಅವು ಉತ್ತಮ ಕಥೆ,ಇಲ್ಲವೆ ಉತ್ತಮ ಕವಿತೆ ಆಗಿರಲು ಸಾಧ್ಯವಿಲ್ಲ.ಪ್ರಶಸ್ತಿಗಾಗಿ ಬಂದಿರುವ ಹತ್ತಿಪ್ಪತ್ತು ಹೆಚ್ಚೆಂದರೆ ಐವತ್ತು ಕಥೆ,ಕವನಗಳಲ್ಲಿ ಯಾವುದೋ ಒಂದೆರಡು ಕಥೆ,ಕವಗಳು ಇತರರ ಕಥೆ- ಕವನಗಳಿಗಿಂತ ಉತ್ತಮವಾಗಿರಬಹುದಷ್ಟೆ.ಪತ್ರಿಕೆಯ ಪ್ರಶಸ್ತಿ ಪಡೆದ ಮಾತ್ರಕ್ಕೆ ಅವು ಶ್ರೇಷ್ಠ ಸಾಹಿತ್ಯದ ಸಾಲಿನಲ್ಲಿ ಸೇರುವ ಅರ್ಹತೆ ಪಡೆಯಲಾರವು.ಇದು ಕೇವಲ ಪತ್ರಿಕೆ,ನಿಯತ ಕಾಲಿಕೆಗಳ ಪ್ರಶಸ್ತಿಗಳಿಗಷ್ಟೇ ಅನ್ವಯವಾಗುವುದಿಲ್ಲ; ಎಲ್ಲ ಪ್ರಶಸ್ತಿಗಳಿಗೂ ಅನ್ವಯವಾಗುವ ಮಾತು.

‌ ‌ ಸಾಹಿತ್ಯಕ್ಷೇತ್ರವೂ ಎಲ್ಲ ಕ್ಷೇತ್ರಗಳಂತೆ ಹೊಲಸಾಗಿದೆ,ಜಾತಿ ರಾಜಕೀಯ,ಪಕ್ಷರಾಜಕೀಯಗಳ ಕರಿನೆರಳು ಸಾಹಿತ್ಯಕ್ಷೇತ್ರದ ಮೇಲೂ ಬಿದ್ದಿದೆ.ಕೇಂದ್ರಸಾಹಿತ್ಯ ಅಕಾಡೆಮಿ ಅಥವಾ ಕರ್ನಾಟಕ ಸಾಹಿತ್ಯ ಅಕಾಡೆಮಿಗಳ ಅಧ್ಯಕ್ಷರಾಗಿ ಆಯ್ಕೆಯಾಗುವವರು ಎಲ್ಲರಂತೆ ಮನುಷ್ಯರೆ! ಮನುಷ್ಯ ಸಹಜ ರಾಗ- ದ್ವೇಷ,ಮೋಹ- ಮಮಕಾರಗಳಿಗೆ ತುತ್ತಾಗುವವರೆ. ಅಕಾಡೆಮಿಗಳ ಅಧ್ಯಕ್ಷರುಗಳು ಆಯಾವರ್ಷದ ಪ್ರಶಸ್ತಿಗೆ ಕೃತಿಗಳನ್ನು ಆಯ್ಕೆ ಮಾಡಲು ತಮಗೆ ಬೇಕಾದವರುಗಳನ್ನು,ತಮ್ಮ ಪ್ರೀತಿಪಾತ್ರರನ್ನು ಆಯ್ಕೆ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರುಗಳು ಎಂದು ನೇಮಿಸುತ್ತಾರೆ.ಇಂಥವರುಗಳಲ್ಲಿ ಬಹುತೇಕ ಜನರು ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿ ನಿವೃತ್ತರಾದವರು ಇಲ್ಲವೆ ಕೆಲಸ ಮಾಡುತ್ತಿರುವವರು.ಸಾಹಿತ್ಯವನ್ನೇ ನಂಬಿ ಬರೆದು ಬದುಕುತ್ತಿರುವ ಯಾವೊಬ್ಬ ಸಾಹಿತಿಯೂ ಅಕಾಡೆಮಿಗಳ ಆಯ್ಕೆ ಸಮಿತಿಗಳ ಸದಸ್ಯರಾಗಿರುವುದಿಲ್ಲ.ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರೋ ಮತ್ತಿನ್ನಾರೋ ತಮಗೆ ಪರಿಚಿತರಿರುವ ಸಾಹಿತಿಗಳ ಕೃತಿಗಳ ಆಯ್ಕೆಯಲ್ಲಷ್ಟೇ ಆಸಕ್ತರಿರುತ್ತಾರೆ,ಅವರ ಅಧ್ಯಯನವೂ ಅಷ್ಟೇ.ವರ್ಷದಲ್ಲಿ ಪ್ರಕಟಗೊಂಡ ಎಲ್ಲ ಕೃತಿಗಳ ಪರಿಚಯವೂ ಅವರಿಗೆ ಇರುವುದಿಲ್ಲ.ರಾಜ್ಯದ ಹತ್ತಾರು ವಿಶ್ವವಿದ್ಯಾಲಯಗಳಲ್ಲಿ ಸೇವೆಸಲ್ಲಿಸುತ್ತಿರುವ ಬರಹಗಾರರ ಕೃತಿಗಳನ್ನಷ್ಟೇ ಪಡೆದು ಒಂದು ಕೃತಿಯನ್ನು ವರ್ಷದ ಉತ್ತಮಕೃತಿ ಎಂದು ಆಯ್ಕೆ ಮಾಡುತ್ತಾರೆ.ಆಯ್ಕೆಸಮಿತಿಯು ಶಿಫಾರಸ್ಸು ಮಾಡಿದ ಕೃತಿಗಳೇ ಶ್ರೇಷ್ಠ ಕೃತಿ ಎಂದು ಘೋಷಿಸುವುದನ್ನು ಬಿಟ್ಟ ಪರ್ಯಾಯ ಮಾರ್ಗಗಳಿರುವುದಿಲ್ಲ ಅಕಾಡೆಮಿಗಳ ಅಧ್ಯಕ್ಷರುಗಳಿಗೆ.ರಾಜ್ಯಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದವರ ಪಟ್ಟಿಯನ್ನೊಮ್ಮೆ ನೋಡಿದರೆ ಅದರಲ್ಲಿ ವಿಶ್ವವಿದ್ಯಾಲಯಗಳಲ್ಲಿ ಬೋಧಕರಾಗಿದ್ದವರು,ವಿಶ್ವವಿದ್ಯಾಲಯಗಳೊಂದಿಗೆ ನಂಟು ಇದ್ದವರ ಸಂಖ್ಯೆಯೇ ದೊಡ್ಡದಿದೆ.ವಿಶ್ವವಿದ್ಯಾಲಯಗಳ ಬೋಧಕರು ಮತ್ತು ಸಾಹಿತ್ಯ ಸಂಘಟನೆಗಳೊಂದಿಗೆ ಮತ್ತು ಖ್ಯಾತನಾಮ ಸಾಹಿತಿಗಳೊಂದಿಗೆ ಸಂಪರ್ಕ ಇಟ್ಟುಕೊಂಡವರೆ ಶ್ರೇಷ್ಠಸಾಹಿತಿಗಳಾಗುವ ಅರ್ಹತೆ ಪಡೆದಿರುತ್ತಾರೆಯೆ?ನಿಜವಾದ ಸೃಷ್ಟಿಶೀಲಬರಹಗಾರರ ಗತಿ ಏನು? ‘ನಿರ್ಧಾರಿತ ವಲಯ’ ( ವಿಶ್ವವಿದ್ಯಾಲಯಗಳ ಬೋಧಕರು,ಖ್ಯಾತ ಸಾಹಿತಿಗಳು ಮತ್ತು ಸಾಹಿತ್ಯ ಸಂಘಟನೆಗಳು ಪ್ರಶಸ್ತಿಗಳ ಆಯ್ಕೆಯಲ್ಲಿ ಮುಖ್ಯಪಾತ್ರವಹಿಸುವುದರಿಂದ ಅವುಗಳನ್ನು ಒಟ್ಟಾಗಿ ‘ ನಿರ್ಧಾರಿತ ವಲಯ’ ಎಂದು ಕರೆದಿದ್ದೇನೆ) ದ ಆಚೆ ಇರುವ ಸತ್ತ್ವ,ಸಾಮರ್ಥ್ಯ ಉಳ್ಳ ಕವಿ- ಸಾಹಿತಿಗಳು ಪುಸ್ತಕಗಳನ್ನು ಪ್ರಕಟಿಸಿ ಮಾತ್ರ ಖುಷಿ ಪಡಬೇಕೆ ?ಪ್ರಜಾಪ್ರಭುತ್ವ ಯುಗದಲ್ಲೂ ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಪದವಿ- ಪ್ರಶಸ್ತಿಗಳಿ ‘ವಿಶೇಷಜನರು’ ಎಂದು ಗುರುತಿಸಿಕೊಳ್ಳುವವರ ಏಕಸ್ವಾಮ್ಯವಾಗಬೇಕೆ?

‌‌ಪ್ರಜಾಪ್ರಭುತ್ವಯುಗದಲ್ಲಿ ಪ್ರಜೆಗಳ ಪ್ರತಿನಿಧಿಗಳಾಗಿರುವವರು ನಡೆಸುತ್ತಿರುವ ಸರಕಾರಗಳ ಪ್ರತಿನಿಧಿಗಳು ಅಕಾಡೆಮಿಗಳಿಗೆ ಅನುದಾನ ನೀಡಿ,ಅವುಗಳು ಆಯ್ಕೆ ಮಾಡಿದವರಿಗೆ ಪ್ರಶಸ್ತಿ ನೀಡುವುದಷ್ಟೇ ತಮ್ಮ ಹಿರಿಮೆ ಎಂದು ಭಾವಿಸಬಾರದು.ಸಾಮಾಜಿಕ ನ್ಯಾಯ,ಬಹುವರ್ಗಗಳ ಹಿತರಕ್ಷಣೆಯ ಜವಾಬ್ದಾರಿಯೂ ಅವರದಾಗಿರುವುದಿಲ್ಲವೆ? ಜನಪ್ರತಿನಿಧಿಗಳು ಸರಕಾರದ ಸಾಹಿತ್ಯ ಸಂಸ್ಥೆಗಳ ಲಾಬಿ,ಜಾತಿರಾಜಕಾರಣ,ಸ್ವಜನಪಕ್ಷಪಾತ ಮೊದಲಾದವುಗಳ ಬಗ್ಗೆ ಪರಿಶೀಲಿಸಬೇಕು.ವಿಶ್ವವಿದ್ಯಾಲಯಗಳಲ್ಲಿ ಬೋಧಿಸುವವರಷ್ಟೇ ಸಾಹಿತಿಗಳೆ ಎಂದು‌ ಪ್ರಶ್ನಿಸಬೇಕು.ಆಯ್ಕೆ ಸಮಿತಿಗಳಲ್ಲಿ ಎಲ್ಲ ವರ್ಗಗಳಿಗೆ ಸದಸ್ಯತ್ವದ ಪ್ರಾತಿನಿಧ್ಯ ಸಿಕ್ಕಿದೆಯೆ ಎಂಬುದನ್ನು ಪರಿಶೀಲಿಸಬೇಕು.ಆಯ್ಕೆ ಸಮಿತಿಯವರು ಶ್ರೇಷ್ಠಕೃತಿ ಎಂದು ಆಯ್ಕೆ ಮಾಡಿದ ವ್ಯಕ್ತಿ ಆಯ್ಕೆ ಸಮಿತಿಯಲ್ಲಿ ಯಾವ ಪ್ರಭಾವ ಬೀರಿದ್ದಾರೆ,ಯಾರಿಗೆ ಹತ್ತಿರರಾಗಿದ್ದಾರೆ ಎನ್ನುವುದನ್ನು ಪರಿಶೀಲಿಸಬೇಕು.ಜೊತೆಗೆ ಸರಕಾರವು ತನ್ನ ಆಶ್ರಯದಲ್ಲಿ ನೀಡುತ್ತಿರುವ ಸಾಹಿತ್ಯ ಪ್ರಶಸ್ತಿ- ಪುರಸ್ಕಾರಗಳಿಗಾಗಿ ಸ್ಪಷ್ಟನಿಯಮಾವಳಿಗಳನ್ನು ರೂಪಿಸಬೇಕು.ಪ್ರಶಸ್ತಿಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸುವುದು,ಹಾಗೆ ಅರ್ಜಿ ಸಲ್ಲಿಸಿದವರಷ್ಟೇ ಶ್ರೇಷ್ಠರು ಎಂದು ಬಿಂಬಿಸುವುದು ಸಲ್ಲದು.ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸುವುದೇ ತಪ್ಪು,ಪ್ರತಿಭಾವಂತರಿಗೆ ಎಸಗುವ ಅನ್ಯಾಯ.ಪ್ರಶಸ್ತಿ ಪಡೆಯುವುದೇ ಸಾಹಿತಿ ಜೀವನದ ಸಾರ್ಥಕತೆ ಎಂದು ಭಾವಿಸಿರುವವರು ಪತ್ರಿಕೆಗಳಲ್ಲಿ ಪ್ರಶಸ್ತಿಗಳಿಗಾಗಿ ಕೃತಿಗಳಿಗೆ ಆಹ್ವಾನಿಸುವ ಪ್ರಕಟಣೆಯ ಸುದ್ದಿಯನ್ನೇ ಕಾಯುತ್ತಿರುತ್ತಾರೆ.ಅರ್ಜಿ ಹಾಕದೆ ಇರುವ ಸಾಕಷ್ಟು ಸಂಖ್ಯೆಯ ಸತ್ತ್ವಯುತ ಬರಹಗಾರರೂ ಇದ್ದಾರಲ್ಲ.ಹಾಗಾಗಿ ಸರಕಾರವು ಸಾರ್ವಜನಿಕ ಗ್ರಂಥಾಲಯ ಇಲಾಖೆ ಮತ್ತಿತರ ಸಾಹಿತ್ಯಕ್ಷೇತ್ರಕ್ಕೆ ಸಂಬಂಧಿಸಿದ ಸರಕಾರಿ ಇಲಾಖೆಗಳ ಮೂಲಕ ಆ ವರ್ಷ ಪ್ರಕಟಗೊಂಡ ಎಲ್ಲ ಪುಸ್ತಕಗಳನ್ನು ಪಡೆದು ಆಯ್ಕೆ ಸಮಿತಿಗೆ ನೀಡಬೇಕು.ಆಯ್ಕೆ ಸಮಿತಿಗಳು ಎಲ್ಲ ಜಾತಿ,ಜನಾಂಗಗಳನ್ನು ಪ್ರತಿನಿಧಿಸುವಂತೆ ಇರಬೇಕು.ಅವಸರದಲ್ಲಿ ಕೃತಿಗಳ ಆಯ್ಕೆ ಮಾಡದಂತೆ ಸಮಿತಿಯ ಸದಸ್ಯರುಗಳಿಗೆ ಸಾಕಷ್ಟು ಸಮಯಾವಕಾಶ ನೀಡಬೇಕು.ಆಯ್ಕೆ ಸಮಿತಿಯಲ್ಲಿ ಪ್ರತಿ ವಿಭಾಗದಲ್ಲಿ ನಾಲ್ಕುಜನ ಸದಸ್ಯರು ಮತ್ತು ಒಬ್ಬರು ಅಧ್ಯಕ್ಷರು ಇರುವಂತೆ ನೋಡಿಕೊಳ್ಳಬೇಕು.ಇದನ್ನು ಸ್ಪಷ್ಟಪಡಿಸಿ ಹೇಳುವುದಾದರೆ ನಿಗದಿತ ವರ್ಷ ಒಂದರಲ್ಲಿ ಕಥೆ,ಕಾದಂಬರಿ,ಕಾವ್ಯ,ನಾಟಕ,ವಿಮರ್ಶೆ,ಪ್ರವಾಸ ಸಾಹಿತ್ಯ ಎನ್ನುವ ವಿಭಾಗಗಳಲ್ಲಿ ಪ್ರಶಸ್ತಿ ನೀಡುವಂತಿದ್ದರೆ ಒಂದೊಂದು ಸಾಹಿತ್ಯ ಪ್ರಕಾರಕ್ಕೂ ನಾಲ್ವರು ನಿರ್ಣಾಯಕರು ಮತ್ತು ಒಬ್ಬರು ಅಧ್ಯಕ್ಷರು ಇರುವ ಆಯ್ಕೆ ಸಮಿತಿಯನ್ನು ರಚಿಸಬೇಕು.ಸಮಿತಿಯು ಬಹುಮತದಿಂದ ಆಯ್ಕೆ ಮಾಡಿದ ಕೃತಿಯೇ ಆ ವರ್ಷದ,ಆ ಪ್ರಕಾರದ ಉತ್ತಮ ಸಾಹಿತ್ಯ ಕೃತಿ ಎಂದು ಘೋಷಿಸಬೇಕು.ಹೀಗಾದರೆ ಮಾತ್ರ ನಿಜವಾದ ಸತ್ತ್ವಯುತ ಸಾಹಿತಿಗಳಿಗೆ ಬೆಲೆ ದೊರೆಯುತ್ತಿದೆ.ಇಲ್ಲವಾದರೆ ‘ ಕುರುಡುಗಣ್ಣಿನಲ್ಲಿ ಮೆಳ್ಳೆಗಣ್ಣು ಲೇಸು’ ಎನ್ನುವಂತೆ ಹತ್ತಿಪ್ಪತ್ತು ಜನರಲ್ಲಿ ಒಬ್ಬರನ್ನು ಶ್ರೇಷ್ಠಸಾಹಿತಿ ಎನ್ನುವ ವಿರೋಧಾಭಾಸ,ವಿಪರ್ಯಾಸದ ಹೊರತು ಮತ್ತೇನನ್ನೂ ಸಾಧಿಸಿದಂತಾಗುವುದಿಲ್ಲ.ಬೆರಳೆಣಿಕೆಯ ಜನರು ಆಯ್ಕೆ ಮಾಡಿದವರು ಸಮಸ್ತ ಕನ್ನಡಿಗರ ಹೆಮ್ಮೆಯ ಕವಿ- ಸಾಹಿತಿಗಳಾಗುವುದೆಂತು?.

About The Author