ಪಕ್ಷ ಸಂಘಟನೆಯಲ್ಲಿ ಹಿಂದುಳಿದ ಕಾಂಗ್ರೆಸ್,ಕಾರ್ಯಕರ್ತರ ಕಡೆಗಣನೆ,ಹಿಂಬಾಲಕರಿಗೆ ಸ್ಥಾನಮಾನ

ವಡಗೇರಾ : ಯಾದಗಿರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಹಿಂದುಳಿದಿದೆ ಎನ್ನುವ ಕೂಗು ಕ್ಷೇತ್ರಾದಾದ್ಯಂತ ಕೇಳಿ ಬರುತ್ತಿದೆ. ರಾಜಕೀಯ ನೇತಾರರು ತಮ್ಮ ಹಿಂಬಾಲಕರಿಗಷ್ಟೇ ಸ್ಥಾನಮಾನ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಗ್ರಾಮೀಣ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.
     ರಾಜಕೀಯ ನೇತಾರರು  ಹಿಂದಿರುವವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡುತ್ತಿದ್ದು, ಪಕ್ಷದಲ್ಲಿದ್ದು ಪಕ್ಷಕ್ಕಾಗಿ ಸಂಘಟನೆ ಮಾಡುವವರನ್ನು ಕಡೆಗಣಿಸಲಾಗುತ್ತಿದೆ. ದಿನದ 24 ಗಂಟೆಗಳ ಕಾಲ ದಿನಂಪ್ರತಿ ಅವರ ಹಿಂದಿರಲು ಸಾಧ್ಯವೇ ಎಂದು ಪ್ರಶ್ನಿಸುತ್ತಿದ್ದಾರೆ. ಈಗ ಚುನಾವಣೆ ಬಂದಾಗ ಮಾತ್ರ ಪಕ್ಷದ ಕಾರ್ಯಕರ್ತರು ಎಂದು ಹೇಳುತ್ತಿದ್ದಾರೆ. ಐದು ವರ್ಷಗಳ ಹಿಂದೆ ಎಲ್ಲಿ ಹೋಗಿದ್ದರು ಎಂದು ಗ್ರಾಮೀಣದ ಕಾರ್ಯಕರ್ತರು  ಪ್ರಶ್ನಿಸುತ್ತಿದ್ದಾರೆ.
ಆರೆಸ್ಸೆಸ್ ಮತ್ತು ಬಿಜೆಪಿಯನ್ನು ನೋಡಿ ಕಲಿಯಬೇಕಿದೆ
ಅಧಿಕಾರ ಇದ್ದರೂ ಇಲ್ಲದಿದ್ದರೂ ಪಕ್ಷಕ್ಕಾಗಿ ಸಂಘಟನೆ ಮಾಡುತ್ತಿದ್ದಾರೆ ಬಿಜೆಪಿಯವರು. ತಮ್ಮ ಕ್ಷೇತ್ರದಲ್ಲಿ ಯಾವ ವ್ಯಕ್ತಿ ವಿಧಾನಸಭೆಗೆ ನಿಲ್ಲುತ್ತಾರೋ ಗೊತ್ತಿಲ್ಲ. ಆದರೆ ಪಕ್ಷಕ್ಕಾಗಿ ಸದಾ ಸೇವೆ ಮಾಡುವುದು ಬಿಜೆಪಿ ಮತ್ತು ಆರೆಸ್ಸೆಸ್ ನವರು ಯಾವತ್ತೂ ಮುಂದೆ. ಮುಂದೊಂದು ದಿನ ನಮ್ಮನ್ನು ಪಕ್ಷ ಗುರುತಿಸುತ್ತದೆ ಎನ್ನುವ ಬಲವಾದ ನಂಬಿಕೆ ಅವರಲ್ಲಿರುತ್ತದೆ. ಆದರೆ ಕಾಂಗ್ರೆಸ್ ಪಕ್ಷ ಹಾಗಲ್ಲ. ಕೆಳಗಿನ ಬೂತ್ ಮಟ್ಟದ ಗ್ರಾಮೀಣ ಮಟ್ಟದಲ್ಲಿ ಪಕ್ಷಕ್ಕಾಗಿ ದುಡಿಯುತ್ತಿರುವ ಯಾವೊಬ್ಬ ಕಾರ್ಯಕರ್ತರನ್ನು ಇದುವರೆಗೂ ಗುರುತಿಸಲು ಸಾಧ್ಯವಾಗುತ್ತಿಲ್ಲ. ಪಕ್ಷದಲ್ಲಿ ಮೇಲ್ಮಟ್ಟದವರಿಂದ ಯಾವೊಬ್ಬ ರಾಜಕೀಯ ನಾಯಕರಿಗೂ ಸಾಧ್ಯವಾಗುತ್ತಿಲ್ಲ ಎನ್ನುವುದು ಶೋಚನಿಯ ಸಂಗತಿ.
   ಎಪ್ಪತ್ತು ವರ್ಷ ದೇಶವನ್ನಾಳಿದ ಕಾಂಗ್ರೆಸ್ ಇದುವರೆಗೂ ಕೆಳಮಟ್ಟದವರನ್ನು ಗುರುತಿಸಿಲ್ಲ. ಚುನಾವಣೆ ಬಂದಾಗ ಮಾತ್ರ ಎಲ್ಲರೂ ನೆನಪಾಗುವದು. ನಂತರ ಐದು ವರ್ಷಗಳ ಕಾಲ ಯಾರು ಕಾಣಿಸಿಕೊಳ್ಳುವದಿಲ್ಲ.ತಮ್ಮ ಸುತ್ತಲಿರುವವರನ್ನು ಕಾರ್ಯಕರ್ತರೆಂದು ಭಾವಿಸಿ ಅವರನ್ನೇ ಬೆಳೆಸುತ್ತಾರೆ.ಇದು ಕಾಂಗ್ರೆಸ್ ಪಕ್ಷದ ನೆಗೆಟಿವ್ ವಿಚಾರವಾಗಿದೆ.
      ಯಾದಗಿರಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿ 17ಕ್ಕೂ ಹೆಚ್ಚು ಜನ ಟಿಕೆಟ್ ಬಯಸಿದ್ದಾರೆ. ಇವರೆಲ್ಲರೂ ಪಕ್ಷ ಸಂಘಟಕರೇನು?, ಖಂಡಿತ ಅಲ್ಲ. ವಿರೋಧ ಪಕ್ಷದಲ್ಲಿದ್ದರೂ ಯಾದಗಿರಿ ಕ್ಷೇತ್ರದಾದ್ಯಂತ ಸಂಚರಿಸಿ ಸದಾ ಜನರ ಸಮಸ್ಯೆಗಳಿಗೆ ಸ್ಪಂದಿಸಿದರೇನು? ಇಲ್ಲ. ಪ್ರಸ್ತುತ ಚುನಾವಣೆ ಇದೆ ಎಂದು ಎಲ್ಲರೂ ಸಂಚರಿಸುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ದುರಂತ. ಕಾಂಗ್ರೆಸ್ ನವರಿಗೆ ಬುದ್ಧಿ ಬರುವುದಾದರೂ ಯಾವಾಗ.ಐದರಿಂದ ಆರು ಬಾರಿ ಸಚಿವರಾಗಿ ಶಾಸಕರಾಗಿ ಆಯ್ಕೆಯಾದವರು ಕ್ಷೇತ್ರದಲ್ಲಿ ತಲೆ ಎತ್ತುತ್ತಿಲ್ಲ.
       ಶಹಾಪುರ ಕ್ಷೇತ್ರದ ಶಾಸಕ ಶರಣಬಸಪ್ಪ ದರ್ಶನಾಪುರ ಕ್ಷೇತ್ರದಾದ್ಯಂತ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಯತ್ತ ಸಾಗಿಸುತ್ತಿದ್ದಾರೆ. ಪ್ರತಿದಿನ ಕಾರ್ಯಕರ್ತರ ಮಧ್ಯೆ ಇರುವವರು ಅವರೊಬ್ಬರು ಮಾತ್ರ.
  ನಮಗೆ ಅಧಿಕಾರವೇ ಇಲ್ಲ ಎಂದು ಇತರರು ಮನೆ ಸೇರಿದ್ದಾರೆ.ಈಗಾದರೆ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವೇ ?. ಮುಂದಿನ ದಿನದಲ್ಲಾದರೂ ಕಾಂಗ್ರೆಸ್ ಪಕ್ಷ ಎಚ್ಚೆತ್ತುಕೊಳ್ಳುವುದೆ? ಎಂದು ಕಾದು ನೋಡಬೇಕಿದೆ.

About The Author