ಬೀದರ್ : ಮನರೆಗಾ ಯೋಜನೆಯು ದುರ್ಬಲವರ್ಗಗಳ ಬಾಳಿಗೆ ಆಸರೆಯಾಗುವ ಯೋಜನೆಯಾಗಿದ್ದು ಅದರ ಪರಿಣಾಮಕಾರಿ ಅನುಷ್ಠಾನ ಸಂಬಂಧಿಸಿದವರೆಲ್ಲರ ಜವಾಬ್ದಾರಿ ಎಂದು ಬೀದರ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ದಿಲೀಪ್ ಬದೋಲೆ ತಿಳಿಸಿದರು.
ಮಹಾತ್ಮಗಾಂಧಿ ನರೆಗಾ ಯೋಜನೆಯು ಗ್ರಾಮೀಣಪ್ರದೇಶದ ಬಡಜನತೆಯ ಬದುಕಿಗೆ ಆಸರೆಯಾಗುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಮನರೆಗಾ ಯೋಜನೆಯಡಿ ಪರಿಣಾಮಕಾರಿ ಕೆಲಸ ಮಾಡುವುದು ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲರ ಜವಾಬ್ದಾರಿಯಾಗಿದೆ.ಮನರೆಗಾ ಯೋಜನೆಯು ಗ್ರಾಮೀಣ ಪ್ರದೇಶದ ಬಡವರ ಬಾಳುಗಳಿಗೆ ಆಸರೆಯಾಗುವ ಯೋಜನೆಯಾಗಿದ್ದು ಅದರಲ್ಲಿ ಎಲ್ಲರೂ ನಿಷ್ಠೆ,ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ದುಡಿಯಬೇಕು.ಬಡವರ ಬಾಳುಗಳಿಗೆ ಆಸರೆಯಾಗುವುದಕ್ಕಿಂತ ಮತ್ತೊಂದು ದೊಡ್ಡಪುಣ್ಯಕಾರ್ಯವಿಲ್ಲ’ ಎಂದು
ಅಭಿಪ್ರಾಯಪಟ್ಟರು.
ಎಪ್ರಿಲ್ 09 ನೇ ತಾರೀಖಿನಂದು ಅವರು ತಮ್ಮ ಕಛೇರಿಯಲ್ಲಿ ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು,ನರೆಗಾ ಯೋಜನೆಯ ಸಹಾಯಕ ನಿರ್ದೇಶಕರುಗಳೊಂದಿಗೆ ವಿಡಿಯೋ ಸಂವಾದ ಜರುಗಿಸಿ ಮಾತನಾಡಿದ ಅವರು ತಮ್ಮ ನಿರ್ದೇಶನಾತ್ಮಕ ಮಾತುಗಳನ್ನು ಮುಂದುವರೆಸಿದ ಡಾಕ್ಟರ್ ಗಿರೀಶ ದಿಲೀಪ್ ಬದೋಲೆಯವರು ‘ ಮನರೆಗಾ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನತೆ ಮತ್ತು ಮಹಿಳೆಯರು ಕೂಲಿಕೆಲಸ ಮಾಡುತ್ತಾರೆ.ಈ ದುರ್ಬಲವರ್ಗಗಳಿಗೆ ಕೆಲಸ ನೀಡುವುದು ಯೋಜನೆಯಲ್ಲಿ ತೊಡಗಿಕೊಂಡಿರುವ ಎಲ್ಲರ ಜವಾಬ್ದಾರಿ.ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳು ಮತ್ತು ಮಹಿಳಾಸಮುದಾಯದ ಬಾಳುಕಟ್ಟಿಕೊಳ್ಳಲು ನೆರವಾಗುವ ಮನರೆಗಾ ಯೋಜನೆಯಡಿ ಎಲ್ಲರೂ ಇದು ಸಮಾಜದ ದುರ್ಬಲವರ್ಗಗಳಿಗೆ ನಮ್ಮ ಕೊಡುಗೆ ಎನ್ನುವ ಶ್ರದ್ಧಾಭಾವನೆಯಿಂದ ತೊಡಗಿಸಿಕೊಂಡು ದುಡಿಯಬೇಕು.ಅಲ್ಲದೆ ಒಂದು ಮಾತು ಸದಾ ನಿಮ್ಮ ನೆನಪಿನಲ್ಲಿ ಇರಲಿ,ನೀವು ನರೆಗಾ ಯೋಜನೆ ಇದೆ ಎಂದೇ ನೆಮ್ಮದಿಯಾಗಿದ್ದೀರಿ.ನರೆಗಾ ಯೋಜನೆಯ ಕಾರಣದಿಂದ ಸರಕಾರಿ ಅಧಿಕಾರಿಗಳು ,ಸಮಾಲೋಚಕರುಗಳಿಗೆ ಸಂಬಳ,ಸವಲತ್ತು,ಸೌಕರ್ಯಗಳು ಸಿಗುತ್ತಿವೆ.ನರೆಗಾ ಯೋಜನೆಯ ಕಾರಣದಿಂದ ಭದ್ರತೆಯನ್ನು ಅನುಭವಿಸುವವರು ಗ್ರಾಮೀಣ ಪ್ರದೇಶದ ಬಡವರ ಬದುಕುಗಳು ಅಭದ್ರರಾಗಲು ಕಾರಣರಾಗಬಾರದು’ ಎಂದರು.ಎಪ್ರಿಲ್ 10,12 ಮತ್ತು 13 ನೇ ತಾರೀಖಿನದಿನಗಳಂದು ಸರಕಾರಿ ರಜಾ ದಿನಗಳಾಗಿದ್ದರೂ ಯಾರೂ ರಜೆಯಲ್ಲಿ ತೆರಳದೆ ನರೇಗಾ ಯೋಜನೆಯ ಅನುಷ್ಠಾನದಲ್ಲಿ ತೊಡಗಿಕೊಂಡು ಪ್ರತಿ ಗ್ರಾಮ ಪಂಚಾಯತಿಯಲ್ಲಿ 200 ಜನ ಕೂಲಿಕಾರರಿಗೆ ಕೆಲಸ ನೀಡಬೇಕು’ ಎಂದು ಸೂಚಿಸಿದರು.
ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಮತ್ತು ನರೆಗಾ ಜಿಲ್ಲಾ ನೋಡಲ್ ಅಧಿಕಾರಿ ಮುಕ್ಕಣ್ಣ ಕರಿಗಾರ, ಸಹಾಯಕ ಕಾರ್ಯದರ್ಶಿ ಬೀರೇಂದ್ರಸಿಂಗ್, ಎಡಿಪಿಸಿ ದೀಪಕ್ ,ಡಿಎಂಐಎಸ್ ಕೋಮಲಾ ಮತ್ತು ಡಿಐಇಸಿ ರಜನಿಕಾಂತ್ ಮೊದಲಾದವರು ಈ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.