ಚಿಂತನೆ : ಶಿವಾನುಗ್ರಹವನ್ನು ಪಡೆಯುವ ದಿವ್ಯರಾತ್ರಿ ಶಿವರಾತ್ರಿ : ಮುಕ್ಕಣ್ಣ ಕರಿಗಾರ

 

ಲೇಖನ : ಮುಕ್ಕಣ್ಣ ಕರಿಗಾರ

    ಶಿವರಾತ್ರಿ ಭಾರತದ ಬಹುಮಹತ್ವದ ಹಬ್ಬ,ಆಧ್ಯಾತ್ಮಿಕ ಹಿನ್ನೆಲೆಯ ಆಚರಣೆ.ಬೋಳೇಶಂಕರನೆಂದು ಬಿರುದುಗೊಂಡು ಅತಿಬೇಗನೆ ಪ್ರಸನ್ನನಾಗಿ ಭಕ್ತರನ್ನು ಉದ್ಧರಿಸುವ ಶಿವನ ಕಾರುಣ್ಯವನ್ನುಣ್ಣುವ ಮಹಾದಿನ,ಮಹಾ ಆಚರಣೆ.ಶಿವ ಸರ್ವೇಶ್ವರ- ಶಿವ ಪರಮೇಶ್ವರ ತತ್ತ್ವವನ್ನು ಸಾರುವುದರ ಜೊತೆಗೆ ಶಿವ ಭಕ್ತವತ್ಸಲನು ಎನ್ನುವ ಸಂದೇಶವನ್ನು ಸಾರುತ್ತದೆ ಶಿವರಾತ್ರಿ.

ಶಿವನು ಪರಮೇಶ್ವರನು,ಶಿವನೇ ಜಗನ್ನಿಯಾಮಕನು.ಮೂಲತಃ ನಿರಾಕಾರ ಪರಬ್ರಹ್ಮನಾಗಿರುವ ಶಿವನು ಜಗದೋದ್ಧಾರದ ಕಾರಣದಿಂದ ಸಾಕಾರ ಶಿವನಾಗಿ ಪ್ರಕಟಗೊಂಡು ವಿಶ್ವಲೀಲೆಯನ್ನಾಡುವನು.ಶಿವನ ಮೂರ್ತಿ,ವಿಗ್ರಹಗಳು ಸಾಕಾರ ಶಿವನನ್ನು ಪ್ರತಿನಿಧಿಸಿದರೆ ಲಿಂಗವು ಶಿವನ ನಿರಾಕಾರ ಪರಬ್ರಹ್ಮ ತತ್ತ್ವದ ಪ್ರತೀಕ.ಇತರ ದೇವತೆಗಳಿಗೆ ಕೇವಲ ಅವರ ಮೂರ್ತಿಗಳಿಗೆ ಮಾತ್ರ ಪೂಜೆ ಸಲ್ಲುತ್ತದೆ.ಆದರೆ ಶಿವನಿಗೆ ಲಿಂಗ ಮತ್ತು ಮೂರ್ತಿಗಳೆರಡರ ರೂಪದಲ್ಲಿ ಪೂಜೆ ಸಲ್ಲುತ್ತದೆ.ಪರಶಿವನ ನಿರಾಕಾರ ಮೂಲದ ಪ್ರತೀಕವಾದ ಲಿಂಗತತ್ತ್ವದ ಕುರಿತು ಶಿವಮಹಾಪುರಾಣ,ಸ್ಕಂದ ಮಹಾಪುರಾಣ,ವಾಯುಪುರಾಣ ಮೊದಲಾದ ಪುರಾಣಗಳಲ್ಲಿ ವಿವರವಾಗಿ ವರ್ಣಿಸಲಾಗಿದೆ.

ಶಿವನು ವಿಶ್ವದ ಸೃಷ್ಟಿ ಸ್ಥಿತಿ ಲಯಗಳ ಸರ್ವಕರ್ತೃತ್ವದ ಪರಮೇಶ್ವರನಾಗಿದ್ದು ಬ್ರಹ್ಮ,ವಿಷ್ಣು ಮತ್ತು ರುದ್ರರ ಮೂಲಕ ತನ್ನ ವಿಶ್ವೋದ್ಧಾರ ಲೀಲೆಯನ್ನುಂಟು ಮಾಡುತ್ತಿರುವನು.ಬ್ರಹ್ಮನಿಗೆ ಜಗತ್ ಸೃಷ್ಟಿಯ ಅಧಿಕಾರವನ್ನು ವಿಷ್ಣುವಿಗೆ ಜಗತ್ತನ್ನು ಪೊರೆಯುವ ಅಧಿಕಾರವನ್ನು ಮತ್ತು ರುದ್ರನಿಗೆ ಜಗತ್ತನ್ನು ಪ್ರಳಯ ಮಾಡುವ ಲಯಾಧಿಕಾರವನ್ನು ಅನುಗ್ರಹಿಸಿರುವನು.ಬ್ರಹ್ಮ,ವಿಷ್ಣು ಮತ್ತು ರುದ್ರರುಗಳು ಪರಶಿವನ ಆಣತಿ ಮತ್ತು ವಿಶ್ವನಿಯಮಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಶಿವ ವಿಭೂತಿಗಳು.ಬ್ರಹ್ಮ,ವಿಷ್ಣು ಮತ್ತು ರುದ್ರರಲ್ಲಿ ಶಿವನು ರುದ್ರನಲ್ಲಿ ವಿಶೇಷವಾಗಿ ಪ್ರಕಟಗೊಂಡಿರುವನು.ಜಗದ ಕರ್ತಾರನಾದ ಪರಶಿವನು‌ ಇರುವನೆಂದು ತಿಳಿದಿದ್ದರೂ ಬ್ರಹ್ಮ ಮತ್ತು ವಿಷ್ಣುಗಳ ನಡುವೆ ‘ ನಾನು ದೊಡ್ಡವನು’ ‘ ನಾನು ದೊಡ್ಡವನು’ ಎನ್ನುವ ಅಹಂ ಬೆಳೆಯುತ್ತದೆ.ಯಾರು ದೊಡ್ಡವರೆಂದು ನಿರ್ಣಯಿಸಲು ಯುದ್ಧ ಪ್ರಾರಂಭಿಸುತ್ತಾರೆ.ಬ್ರಹ್ಮ ವಿಷ್ಣುಗಳಿಬ್ಬರ ಕದನದಿಂದ ಲೋಕವು ತಲ್ಲಣಗೊಳ್ಳುವುದು.ಬಹುವರ್ಷಗಳಕಾಲ ಹೋರಾಡಿದರೂ ಬ್ರಹ್ಮ ವಿಷ್ಣುಗಳಲ್ಲಿ ಯಾರೊಬ್ಬರೂ ಸೋಲದೆ ಇದ್ದುದರಿಂದ ಭಯಭೀತರಾದ ದೇವತೆಗಳು ಕೈಲಾಸಕ್ಕೆ ತೆರಳಿ ಬ್ರಹ್ಮ ವಿಷ್ಣುಗಳಿಬ್ಬರ ಕದನದಿಂದ ಲೋಕಕ್ಕೆ ಬಂದೊದಗಿದ ಕಂಟಕವನ್ನು ಪರಿಹರಿಸುವಂತೆ ಶಿವನನ್ನು ಪ್ರಾರ್ಥಿಸುವರು.ದೇವತೆಗಳ ಪ್ರಾರ್ಥನೆಗೆ ಓಗೊಟ್ಟ ಶಿವನು ಲೀಲೆಯನ್ನು ಎಸಗುವನು.

ಬ್ರಹ್ಮ ವಿಷ್ಣುಗಳಿಬ್ಬರು ಕಾದಾಡುತ್ತಿದ್ದ ಯುದ್ಧಭೂಮಿಯಲ್ಲಿ ಉರಿಯುತ್ತಿರುವ ಮಹಾಸ್ತಂಭವು ಪ್ರಕಟಗೊಳ್ಳುವುದು.ಉರಿಯುತ್ತಿರುವ ಸ್ತಂಭವನ್ನು ಕಂಡು ಬ್ರಹ್ಮ ವಿಷ್ಣುಗಳು ಕುತೂಹಲದಿಂದ ಯುದ್ಧವನ್ನು ನಿಲ್ಲಿಸಿ ಆ ಸ್ತಂಭದತ್ತ ಬರುವರು.ಆ ಸ್ತಂಭವು ನುಡಿಯುವುದು ‘ ನಿಮ್ಮಲ್ಲಿ ಯಾರು ಹಿರಿಯರೆಂದು ನಾನು ನಿರ್ಣಯಿಸುವೆ.ಈ ಸ್ತಂಭದ ಮೂಲ ಮತ್ತು ಅಗ್ರಭಾಗಗಳನ್ನು ಕಾಣಲು ಹೊರಡಿ.ಯಾರು ಮೊದಲು ಕಂಡು ಬರುವಿರೋ ಅವರೇ ಹಿರಿಯರು’ ಎಂದು ನುಡಿದ ಸ್ತಂಭದ ನುಡಿ ಕೇಳಿ ಬ್ರಹ್ಮ ವಿಷ್ಣುಗಳು ‘ ಹೌದು,ಇದು ಸರಿಯಾದ ಸಲಹೆ’ ಎಂದು ಒಪ್ಪಿಕೊಂಡು ಬ್ರಹ್ಮನು ಸ್ತಂಭದ ಅಗ್ರಭಾಗವನ್ನು ವಿಷ್ಣುವನ್ನು ಸ್ತಂಭದ ಮೂಲವನ್ನು ಕಾಣುವುದೆಂದು ನಿರ್ಧರಿಸುವರು.ಬ್ರಹ್ಮನು ಹಂಸ ಪಕ್ಷಿಯ ರೂಪತಳೆದು ಸ್ತಂಭದ ಅಗ್ರಭಾಗವನ್ನು ಕಾಣಲು ಆಕಾಶದಲ್ಲಿ ಹಾರಿದನು.ವಿಷ್ಣುವು ಸ್ತಂಭದ ಮೂಲವನ್ನು ಕಾಣಲು ವರಾಹ ರೂಪತಾಳಿ ಭೂಮಿಯನ್ನು ಕೊರೆಯುತ್ತ ಸಾಗಿದನು.ದಿನಗಳುರುಳಿ,ತಿಂಗಳುಗಳು ಮರಳಿ,ವರ್ಷಗಳು ಕಳೆಯುತ್ತ,ಯುಗಯುಗಳ ಪರಿಭ್ರಮಣೆಯ ಕಾಲಚಕ್ರದಲ್ಲಿ ಅನಂತ ಕಾಲವಾದರೂ ಬ್ರಹ್ಮನು ಸ್ತಂಭದ ಅಗ್ರಭಾಗವನ್ನು ಕಾಣಲಿಲ್ಲ,ವಿಷ್ಣುವು ಸ್ತಂಭದ ಮೂಲವನ್ನು ಕಾಣಲಿಲ್ಲ.ಭೂಮಿಯನ್ನು ಕೊರೆಯುತ್ತ ಪಾತಾಳದಾಳಕ್ಕಿಳಿದಿದ್ದ ವಿಷ್ಣುವಿಗೆ ‘ ಇದು ಶಿವಲೀಲೆ’ ಎಂದು ಅರ್ಥವಾಗಿ ಸ್ತಂಭದ ಮೂಲಶೋಧಿಸುವುದು ವ್ಯರ್ಥಕಾರ್ಯವೆಂದು ಯುದ್ಧಭೂಮಿಗೆ ಹಿಂತಿರುಗುವನು.ಹಂಸ ರೂಪದಲ್ಲಿ ಅನಂತಕಾಲ ಆಕಾಶದಲ್ಲಿ ಹಾರಿ ದಣಿದ ಬ್ರಹ್ಮನು ಸ್ತಂಭದ ಅಗ್ರಭಾಗವನ್ನು ಕಾಣದೆ ಬಳಲಿ,ಬೆಂಡಾಗಿ ಸ್ತಂಭದ ಮೇಲುಭಾಗದಿಂದ ಬೀಳುತ್ತಿದ್ದ ಕೇದಗೆಯ ಹೂವನ್ನು ಹಿಡಿತಂದು ಕೇದಗೆಯಿಂದ ಸುಳ್ಳುಸಾಕ್ಷಿ ನುಡಿಸಿ ತಾನು ದೊಡ್ಡವನು ಎಂದು ಹುಸಿಯನ್ನು ಸಾಧಿಸಿ ವಿಷ್ಣುವಿನಿಂದ ಪೂಜೆಗೊಳ್ಳಲುಪಕ್ರಮಿಸಿದನು.ಇದ್ದಕ್ಕಿದ್ದಂತೆ ಯುದ್ಧಭೂಮಿಯಲ್ಲಿ ಭಯಂಕರ ಸ್ಫೋಟ ಉಂಟಾಗಿ ಉರಿಯುತ್ತಿರುವ ಸ್ತಂಭದಿಂದ ಶಿವನು ಪ್ರಕಟಗೊಳ್ಳುವನು.ಉರಿಯುವ ಸ್ತಂಭದ ಮಧ್ಯೆ ಶಿವನನ್ನು ಕಂಡ ಬ್ರಹ್ಮ- ವಿಷ್ಣುಗಳಿಬ್ಬರು ದೈನ್ಯದಿಂದ ಶರಣಾಗುವರು.ವಿಷ್ಣುವಿನ ಸತ್ಯನಿಷ್ಠೆಯನ್ನು ಮೆಚ್ಚಿದ ಶಿವನು ‘ ವಿಷ್ಣುವೆ, ಸ್ತಂಭದ ಮೂಲವನ್ನು ಕಾಣಲಾಗಲಿಲ್ಲ ಎಂದು ಸತ್ಯ ನುಡಿದಿದ್ದರಿಂದ ಸತ್ಯಸ್ವರೂಪನಾದ ನಾನು ನಿನ್ನಲ್ಲಿ ಪ್ರಸನ್ನನಾಗಿದ್ದೇನೆ.ಇನ್ನು ಮುಂದೆ ಲೋಕದಲ್ಲಿ ನೀನು ನನ್ನ ಸಮಾನನಾಗಿ ಪೂಜೆಗೊಳ್ಳು’ ಎಂದು ವರವಿತ್ತು ಅನುಗ್ರಹಿಸುವನು.ಬ್ರಹ್ಮನತ್ತ ತಿರುಗಿ ‘ ಎಲೈ ಬ್ರಹ್ಮನೆ ನನ್ನಿಂದ ಸೃಷ್ಟಿಯಧಿಕಾರವನ್ನು ಪಡೆದೂ ನೀನು ಸುಳ್ಳನ್ನಾಡಿದೆ.ಆದ್ದರಿಂದ ನೀನು ಪೂಜಾಬಾಹಿರನಾಗುವಂತೆ ಶಪಿಸಿದ್ದೇನೆ’ ಎಂದು ಬ್ರಹ್ಮನಿಗೆ ಶಾಪವಿತ್ತನು.ಸುಳ್ಳು ಸಾಕ್ಷಿ ನುಡಿದ ಕೇದಗೆಯು ತನಗೆ ವರ್ಜ್ಯವೆಂದು ತನ್ನ ಭಕ್ತರು ಕೇದಗೆಯಿಂದ ತನ್ನನ್ನು ಪೂಜಿಸಬಾರದೆಂದು ನಿಯಮಿಸಿದನು.ವಿಷ್ಣುವು ಸತ್ಯವನ್ನು ನುಡಿದು ಶಿವಪರಮೇಶ್ವರ ತತ್ತ್ವವನ್ನು ಒಪ್ಪಿ ಜಗತ್ತಿನಲ್ಲಿ ಶಿವನ ಸಮಾನನಾಗಿ ಪೂಜೆಗೊಳ್ಳುತ್ತಿರುವನು.ಕುಟಿಲದಿಂದ ಪ್ರತಿಷ್ಠೆ ಮೆರೆಯಲೆಳಸಿ ಬ್ರಹ್ಮನು ಸುಳ್ಳನ್ನಾಡಿ ಶಿವನಿಂದ ಪೂಜಾಬಾಹಿರನಾಗುವಂತೆ ಶಪಿಸಲ್ಪಟ್ಟನು.ಸುಳ್ಳುಸಾಕ್ಷಿಯನ್ನು ನುಡಿದ ಕೇದಗೆಯು ಶಿವನ ಪೂಜೆಗೆ ಸಲ್ಲದಾಯಿತು.

ಮುಂದುವರೆದು ಶಿವನು ಹೇಳುವನು :’ ನಿಮ್ಮಿಬ್ಬರ ಯುದ್ಧ ನಿಲ್ಲಿಸಲು ನಾನು ಯುದ್ಧಭೂಮಿಯಲ್ಲಿ ಪ್ರಕಟಗೊಂಡ ಈ ಜ್ವಲಸ್ತಂಭವು ಜ್ವಲಲಿಂಗವೆಂದು ಪ್ರಸಿದ್ಧಿಗೊಳ್ಳುವುದು.ನಾನು ನಿಮ್ಮಿಬ್ಬರ ಮಧ್ಯೆ ಪ್ರಕಟಗೊಂಡ ಈ ರಾತ್ರಿಯು ಶಿವರಾತ್ರಿ ಎಂದು ಪ್ರಸಿದ್ಧಿಗೊಳ್ಳುವುದು.ಲೋಕಕಲ್ಯಾಣಕ್ಕಾಗಿ ನಾನು ಈ ರಾತ್ರಿಯಲ್ಲಿ ಜ್ವಲಲಿಂಗದ ರೂಪದಲ್ಲಿ ಪ್ರಕಟಗೊಂಡಿರುವೆನಾದ್ದರಿಂದ ಭಕ್ತರು ಶಿವರಾತ್ರಿಯ ದಿನ ನನ್ನನ್ನು ಲಿಂಗ ಮತ್ತು ಮೂರ್ತಿಗಳಲ್ಲಿ ಪೂಜಿಸಬೇಕು.ಶಿವರಾತ್ರಿಯಂದು ನನಗೆ ಸಲ್ಲಿಸುವ ಪೂಜೆ- ಸೇವೆಗಳಿಗೆ ನಾನು ಪ್ರಸನ್ನನಾಗಿ ಭಕ್ತರನ್ನು ಉದ್ಧರಿಸುವೆ’ ಎಂದು ಅಭಯವಿತ್ತನು.ಬ್ರಹ್ಮ ವಿಷ್ಣುಗಳಿಬ್ಬರು ಶಿವನನ್ನು ಆ ಜ್ವಲಲಿಂಗದಲ್ಲಿ ಪೂಜಿಸಿದರು.ಇದು ಪರಶಿವನ ಲಿಂಗೋದ್ಭವಲೀಲೆ ಎಂದೇ ಪ್ರಸಿದ್ಧಿಯಾಗಿದೆ.ಬ್ರಹ್ಮ ವಿಷ್ಣುಗಳಿಬ್ಬರಿಗೆ ಶಿವನು ದರ್ಶನವಿತ್ತ ರಾತ್ರಿಯಾದ್ದರಿಂದ ಶಿವರಾತ್ರಿಗೆ ವಿಶೇಷಸ್ಥಾನವಿದೆ.ಬ್ರಹ್ಮವಿಷ್ಣುಗಳಿಬ್ಬರ ನಡುವೆ ಜ್ವಲಲಿಂಗವು ಪ್ರಕಟಗೊಂಡ ಸ್ಥಳವು ಅರುಣಾಚಲವೆಂದು ಪ್ರಸಿದ್ಧಿಯಾಗಿ ಶಿವನು ಅಲ್ಲಿ ಅರುಣಾಚಲೇಶ್ವರನ ಹೆಸರಿನಲ್ಲಿ ಪೂಜೆಗೊಳ್ಳುತ್ತಿರುವನು.’ಅರುಣಾಚಲ’ ಎಂದರೆ ಉರಿಯುತ್ತಿರುವ ಗಿರಿ ಎಂದರ್ಥ.ಹಿಂದೆ ಬಹುಕಾಲ ಅಲ್ಲಿ ಅಗ್ನಿ ಪ್ರಜ್ವಲಿಸುತ್ತಿತಂತೆ.ಶಿವರಾತ್ರಿಯಂದು ಶಿವನ ಲಿಂಗ ಮೂರ್ತಿಗಳು ವಿಶೇಷ ಕಳೆಯಿಂದ ಪ್ರಕಾಶಮಾನವಾಗುತ್ತವೆ.

ಬೇಡರ ಕಣ್ಣಪ್ಪನನ್ನು ಶಿವನು ಉದ್ಧರಿಸಿದ ದಿನವೂ ಶಿವರಾತ್ರಿಯೆ.ಕಣ್ಣಪ್ಪ ಶಿವಭಕ್ತಿ ಎಂದರೆ ಏನೆಂದೇ ಅರಿಯದವ.ಬೇಟೆಗಾಗಿ ಕಾಡಿಗೆ ಹೋದವನು ಪ್ರಾಣಿಗಳು ಸಿಗಲಿಲ್ಲವೆಂದು ಬೇಸತ್ತು ಒಂದು ಬಿಲ್ವದ ಮರಹತ್ತಿ ಪ್ರಾಣಿಗಳ ನಿರೀಕ್ಷೆಯಲ್ಲಿರುತ್ತಾನೆ.ಪ್ರಾಣಿಗಳ ಸುಳಿವರಿಯದ್ದರಿಂದ ಬೇಸರಗೊಂಡು ಬಿಲ್ವದ ಒಂದೊಂದೇ ಎಲೆಗಳನ್ನು ಕಿತ್ತು ಕೆಳಗೆ ಎಸೆಯುತ್ತಿರುತ್ತಾನೆ.ತಾನು ಕುಡಿಯಲು ತಂದಿದ್ದ ನೀರನ್ನು ಕೆಳಗೆ ಚೆಲ್ಲುವನು.ಮುಂಜಾವಿನಲ್ಲಿ ಶಿವನು ಆ ಮರದ ಬುಡದಲ್ಲಿದ್ದ ಶಿವಲಿಂಗದಲ್ಲಿ ಪ್ರಕಟಗೊಂಡು ಕಣ್ಣಪ್ಪನನ್ನು ಅನುಗ್ರಹಿಸಿ ಉದ್ಧರಿಸುವನು.ಕಣ್ಣಪ್ಪ ಉದ್ದೇಶಪೂರ್ವಕವಾಗಿ ಶಿವನನ್ನು ಪೂಜಿಸಲಿಲ್ಲ.ಆದರೆ ಆ ದಿನವು ಶಿವರಾತ್ರಿಯಾಗಿದ್ದರಿಂದ ತನ್ನ ಲಿಂಗಕ್ಕೆ ಜಲಾಭಿಷೇಕ ಮಾಡಿ,ಬಿಲ್ವಾರ್ಚನೆ ಮಾಡಿದ್ದಾನೆಂದು ಪ್ರಸನ್ನನಾಗಿ ಶಿವನು ಬೇಡರ ಕಣ್ಣಪ್ಪನನ್ನು ಉದ್ಧರಿಸಿ ತಾನು ಭಕ್ತವತ್ಸಲನೆಂಬ ಲೀಲೆ ಮೆರೆದನು.ಶಿವನು ಬೇಡರ ಕಣ್ಣಪ್ಪನಿಗೆ ದರ್ಶನವಿತ್ತು ಉದ್ಧರಿಸಿದ್ದು ಕಾಳಹಸ್ತಿ ಎಂದು ನಂಬಲಾಗಿದೆ.ಆದ್ದರಿಂದ ಭಕ್ತರು ಸರ್ವದೋಷಗಳಿಂದ ಮುಕ್ತರಾಗಲು ಕಾಳಿಹಸ್ತಿಗೆ ಹೋಗಿ ಶಿವದರ್ಶನ ಪಡೆಯುವರು.

ಶಿವನು ಬ್ರಹ್ಮ ವಿಷ್ಣುಗಳಿಗೆ ಮತ್ತು ಬೇಡರ ಕಣ್ಣಪ್ಪನಿಗೆ ದರ್ಶನವಿತ್ತ ದಿನವು ಶಿವರಾತ್ರಿಯಾಗಿದ್ದು ಆ ದಿನ ಶಿವನಿಗೆ ಸಲ್ಲಿಸುವ ಸೇವೆ- ಪೂಜೆಗಳಿಗೆ ವಿಶೇಷ ಫಲವಿದೆ.ವರ್ಷದ ಮುನ್ನರಾ ಅರವತ್ನಾಲ್ಕು ದಿನಗಳಲ್ಲಿ ಶಿವನನ್ನು ಪೂಜಿಸದಿದ್ದರೂ ಸರಿಯೆ ಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ ಅನಂತ ಫಲವುಂಟು,ಅಭೀಷ್ಟ ಫಲಸಿದ್ಧಿಯುಂಟು.ಶಿವನು ಬ್ರಹ್ಮ ವಿಷ್ಣುಗಳಿಬ್ಬರ ಕದನ ನಿಲ್ಲಿಸಿ ತಾನೋಬ್ಬನೇ ಪರಮೇಶ್ವರನು,ಪರಬ್ರಹ್ಮನು ಎಂದು ನಿರೂಪಿಸುವನು.ಸಾಮಾನ್ಯ ಬೇಡನ ನಿರುದ್ದಿಶ್ಯ ಭಕ್ತಿಯನ್ನು ಮೆಚ್ಚಿ ಅನುಗ್ರಹಿಸುವನು.ಈ ಎರಡು ಪ್ರಸಂಗಗಳಲ್ಲಿ ಶಿವನು ತಾನು ನಿಗ್ರಹಾನುಗ್ರಹ ಸಮರ್ಥನಿರುವ ಲೋಕೇಶ್ವರನೂ ಏಕೇಶ್ವರನೂ ಆದ ಜಗನ್ನಿಯಾಮಕ,ವಿಶ್ವೋದ್ಧಾರಕ ವಿಶ್ವೇಶ್ವರನೆಂದು ನಿರೂಪಿಸಿರುವನು.

ಶಿವರಾತ್ರಿಯಂದು ಭಕ್ತರು ಉಪವಾಸ ಮತ್ತು ಜಾಗರಣೆಗಳ ಮೂಲಕ ಶಿವನನ್ನು ಪೂಜಿಸುತ್ತಾರೆ.ಉಪವಾಸದ ನಿಜವಾದ ಅರ್ಥವು ಅನ್ನ ಬಿಟ್ಟು ದೇಹದಂಡಿಸುವುದು ಎಂದಲ್ಲ. ಉಪವಾಸ ಪದವನ್ನು ಬಿಡಿಸಿ ಬರೆದಾಗ ಉಪ+ ವಾಸ ಎಂದಾಗುತ್ತದೆ.ಅದರರ್ಥ ‘ಉಪ’ ಎಂದರೆ ಸಮೀಪ ‘ ವಾಸ’ ಎಂದರೆ ಇರು ಎಂದು.ಶಿವನ ಸಮೀಪ ಇರುವುದೇ ‘ ಉಪವಾಸ’. ಶಿವರಾತ್ರಿಯಂದು ಭಕ್ತರು ಶಿವನ ದೇವಾಲಯ,ಮೂರ್ತಿ ಲಿಂಗಗಳಿದ್ದ ಸ್ಥಳದಲ್ಲಿ ಇರಬೇಕು ಎನ್ನುವುದು ಉಪವಾಸ ಪದದ ಅರ್ಥ.’ಜಾಗರಣೆ’ ಎಂದರೆ ಎಚ್ಚರವಾಗಿದ್ದುಕೊಂಡು ಶಿವನನ್ನು ನಿರೀಕ್ಷಿಸುವುದು.ಶಿವರಾತ್ರಿಯ ದಿನದಂದು ಶಿವಲಿಂಗಗಳಲ್ಲಿ ಶಿವನ ಶಕ್ತಿಯು ಪ್ರಕಟಗೊಳ್ಳುವುದರಿಂದ ಭಕ್ತರು ಶಿವಲಿಂಗದ ಸಮೀಪ ಎಚ್ಚರದಿಂದ ಇದ್ದು ಶಿವಲಿಂಗವನ್ನು ನೋಡುತ್ತಿರಬೇಕು.ಲಿಂಗದಲ್ಲಿ ಪ್ರಕಟಗೊಳ್ಳುವ ಶಿವಕಳೆಯು ಭಕ್ತರನ್ನು ಉದ್ಧರಿಸುತ್ತದೆ.

ಶಿವರಾತ್ರಿಯಂದು ಭಕ್ತರು ಶಿವನ ಮೂರ್ತಿ- ಲಿಂಗಗಳನ್ನು ಪೂಜಿಸಬೇಕು.ಶಿವನ ಕಥೆಗಳನ್ನು ಓದಬೇಕು,ಕೇಳಬೇಕು.ಶಿವಪುರಾಣವನ್ನು ಓದಬೇಕು ಇಲ್ಲವೆ ಕೇಳಬೇಕು.” ನಮಃ ಶಿವಾಯ” ಎನ್ನುವ ಪಂಚಾಕ್ಷರಿ ಮಂತ್ರವನ್ನಾಗಲಿ,ಪ್ರಣವಸಹಿತ ” ಓಂ ನಮಃ ಶಿವಾಯ” ಎನ್ನುವ ಶಿವ ಷಡಕ್ಷರಿ ಮಂತ್ರವನ್ನಾಗಲಿ ಇಲ್ಲವೆ ” ಓಂ ನಮಃ ಶಿವಾಯ ಓಂ” ಎನ್ನುವ ಶಿವಶಕ್ತ್ಯಾದ್ವೈತ ಸ್ವರೂಪವಾದ ಮಹಾಶೈವ ಮೂಲ ಮಂತ್ರವನ್ನಾಗಲಿ ಜಪಿಸಬೇಕು.ಶಿವರಾತ್ರಿಯ ರಾತ್ರಿಯಿಡೀ ಎಚ್ಚರದಿಂದ ಇದ್ದು ಶಿವನಾಮ ಸ್ಮರಿಸುವುದು ಉತ್ತಮವಾದುದು.ಶಿವರಾತ್ರಿಯಂದು ತನ್ನನ್ನು ಪೂಜಿಸುವವರಲ್ಲಿ ಶಿವನು ವಿಶೇಷವಾಗಿ ಪ್ರಸನ್ನನಾಗುವನಾದ್ದರಿಂದ ಶಿವರಾತ್ರಿಯಂದು ಶಿವಪೂಜೆ ಮಾಡುವುದು ಪರಮಶ್ರೇಯಸ್ಕರವು.

About The Author