ಚಿಂತನೆ : ಮನುಷ್ಯರು ದೇವನ ತೋಟದ ಹೂವುಗಳು : ಮುಕ್ಕಣ್ಣ ಕರಿಗಾರ

ಹೂವಿನ ತೋಟದಲ್ಲಿ ನೂರಾರು ಬಗೆಯ ಹೂವುಗಳು ಇರುತ್ತವೆ.ಪ್ರತಿ ಹೂವಿಗೂ ಅದರದೆ ಸೌಂದರ್ಯವಿದೆ,ಅದರದೆ ಆದ ಸುಗಂಧವಾಸನೆ ಇದೆ.ಒಂದು ಹೂವಿನಹಾಗೆ ಮತ್ತೊಂದು ಹೂವು ಇಲ್ಲ,ಎಲ್ಲ ಹೂವುಗಳ ಪರಿಮಳವೂ ಬೇರೆ ಬೇರೆಯೆ.ಆದರೂ ಆ ಎಲ್ಲ ಹೂವುಗಳು ಸೇರಿ ಹೂದೋಟದ ಸೌಂದರ್ಯವನ್ನು ಹೆಚ್ಚಿಸಿವೆ,ಎಲ್ಲ ಹೂವುಗಳ ಒಟ್ಟು ಪರಿಮಳವು ವಿಶೇಷ ಸುಗಂಧವನ್ನುಂಟು ಮಾಡಿದೆ.ಹೂವಿನ ತೋಟ ಇರುವಂತೆಯೇ ಮನುಷ್ಯ ಪ್ರಪಂಚ.

ಪ್ರಪಂಚದಲ್ಲಿ ಇರುವ ಮನುಷ್ಯರೆಲ್ಲ ಹೂವುಗಳು.ಪ್ರಪಂಚ ಎನ್ನುವ ಪರಮಾತ್ಮನ ತೋಟದಲ್ಲಿ ಅರಳಿದ ಹೂವುಗಳು ನಾವೆಲ್ಲ.ಪ್ರಪಂಚದ ಆರುನೂರು ಬಿಲಿಯನ್ ಜನರಲ್ಲಿ ಪ್ರತಿಯೊಬ್ಬರೂ ಭಿನ್ನರೆ.ದೇಹ,ಆಕಾರ,ಬಣ್ಣ,ಭಾವನೆ,ಭಾಷೆಗಳಲ್ಲಿ ಪ್ರತಿಯೊಬ್ಬರೂ ಭಿನ್ನರೆ.ಎಲ್ಲರಿಗೂ ಅವರದೆ ಆದ ಪ್ರತ್ಯೇಕ ಅಸ್ತಿತ್ವ ಇದೆ.ಒಬ್ಬರ ಹಾಗೆ ಮತ್ತೊಬ್ಬರು ಇರುವುದಿಲ್ಲ.ಒಬ್ಬರು ಆಲೋಚಿಸಿದಂತೆ ಮತ್ತೊಬ್ಬರು ಆಲೋಚಿಸುವುದಿಲ್ಲ.ಕೆಲವರು ಒಳ್ಳೆಯವರು,ಕೆಲವರು ಕೆಟ್ಟವರು.ಸುಂದರ ದೇಹವುಳ್ಳವರು ಇದ್ದಂತೆಯೇ ಕುರೂಪಿ ಶರೀರಿಗಳೂ ಇದ್ದಾರೆ.ಸತ್ತ್ವಶೀಲರು ಇದ್ದಂತೆ ದುಷ್ಟಪ್ರವೃತ್ತಿಯ ಜನರೂ ಇದ್ದಾರೆ.ಎಲ್ಲರೊಳು ಬೆರೆಯುವ ಮುಕ್ತಸ್ವಭಾವದವರು ಇರುವಂತೆಯೇ ಏಕಾಂತವನ್ನು ಬಯಸುವ ವಿರಕ್ತ ಸ್ವಭಾವದ ಜನರೂ ಇದ್ದಾರೆ.ಈ ಎಲ್ಲ ವೈರುಧ್ಯ, ವೈವಿಧ್ಯತೆಗಳ ನಡುವೆಯೇ ಬೆಳೆದುನಿಂತಿದೆ ಮನುಷ್ಯ ನಾಗರಿಕತೆ,ಸಂಸ್ಕೃತಿ.

ಭಾರತವು ‘ವಿವಿಧತೆಯಲ್ಲಿ ಏಕತೆ’ ಗೆ ಪ್ರಪಂಚದ ಅತ್ಯುತ್ತಮ ನಿದರ್ಶನ.ಇಲ್ಲಿ ಎಲ್ಲ ಮತ- ಧರ್ಮಗಳನ್ನು ಅನುಸರಿಸುವ ಜನರಿದ್ದಾರೆ.ನೂರಾರು ಭಾಷೆಗಳು,ಸಾವಿರಾರು ಉಪಭಾಷೆಗಳಿವೆ.ಭಾರತ ಎನ್ನುವ ಮಹಾಸಂಸ್ಕೃತಿಯಲ್ಲಿ ನೂರಾರು ಉಪಸಂಸ್ಕೃತಿಗಳಿವೆ.ವಿವಿಧ ಭಾಷೆ,ಭಾವನೆ,ಸಂಸ್ಕೃತಿಗಳೆಲ್ಲ ಕೂಡಿ ಭಾರತವೆಂಬ ಮಹಾನ್ ದೇಶವಾಗಿದೆ.ಎಲ್ಲ ಹೂವುಗಳು ತೋಟದ ಸೌಂದರ್ಯವನ್ನು ಹೆಚ್ಚಿಸುವಂತೆ ಎಲ್ಲ ಸಂಸ್ಕೃತಿಗಳು ಸೇರಿ ಭಾರತದ ಸತ್ತ್ವವನ್ನು ಹೆಚ್ಚಿಸಿವೆ.ಹೂದೋಟದ ಎಲ್ಲ ಹೂವುಗಳ ಪರಿಮಳವು ವಿಶೇಷ ಸೌರಭವನ್ನು ಸೂಸುವಂತೆ ಎಲ್ಲ ಮತ- ಧರ್ಮಗಳು ಜನರು ಒಟ್ಟಾಗಿ ಜೀವಿಸುವ ಮೂಲಕ ಭಾರತದ ಅಖಂಡತೆಯನ್ನು ಎತ್ತಿಹಿಡಿದಿದ್ದಾರೆ.ಭಾರತವೆಂಬ ಪರಮಾತ್ಮನಿರ್ಮಿತ ಮಹಾನ್ ಹೂದೋಟದಲ್ಲಿರುವ ಎಲ್ಲ ಬಗೆಯ ಹೂಗಿಡಗಳಿಗೆ ನೀರೆರೆದು ಪೋಷಿಸುವವರೇ ನಾಯಕಶ್ರೇಷ್ಠರು. ಸಮಷ್ಟಿಸಂಸ್ಕೃತಿಯನ್ನು ಎತ್ತಿಹಿಡಿಯುವುದರಲ್ಲಿಯೇ ನಾಯಕತ್ವದ ಹಿರಿಮೆ ಇದೆ.ಮಹಾನ್ ನಾಯಕರು ಎನ್ನಿಸಿಕೊಳ್ಳಬೇಕಾದರೆ ಭಾರತೀಯರೆಲ್ಲರ ಹೃದಯಗಳನ್ನು ಗೆಲ್ಲಬೇಕು,ಭಾರತೀಯರೆಲ್ಲರ ಹೃದಯಸಿಂಹಾಸನಗಳಲ್ಲಿ ವಿರಾಜಮಾನರಾಗಬೇಕು.

About The Author