ಮಹಾಶೈವ ಪ್ರಬೋಧ ಮಾಲೆ –೦೨ : ಹರಸ್ವಾಮಿಯ ಕಥೆ : ಮುಕ್ಕಣ್ಣ ಕರಿಗಾರ

ಸಂಸ್ಕೃತದ ಮಹಾಕವಿಗಳಲ್ಲೊಬ್ಬನಾದ ಸೋಮದೇವ ಭಟ್ಟನು ‘ ಕಥಾ ಸರಿತ್ಸಾಗರ’ ಎನ್ನುವ ಕಥೆಗಳ ಮೂಲಕ ಸಮಾಜಕ್ಕೆ ನೀತಿಬೋಧೆಯನ್ನು ಹೇಳುವ ಮಹಾಕಾವ್ಯ ಒಂದನ್ನು ರಚಿಸಿರುವನು.ಕಥೆಗಳ ಸಾಗರವೇ ಆಗಿರುವ’ ಕಥಾಸರಿತ್ಸಾಗರ’ ದಲ್ಲಿ ‘ ಹರಸ್ವಾಮಿಯ ಕಥೆ’ ಎನ್ನುವ ಒಂದು ಕಥೆ ಇದೆ.ಜಡದೇಹಿಗಳು ಮತ್ತು ಮೃಡಚೇತನರುಗಳ ನಡುವಿನ ವ್ಯತ್ಯಾಸವನ್ನು ಅರಹುವ ಆ ಕಥೆಯು ಸಾರ್ವತ್ರಿಕ ಸಂದೇಶ ಒಂದನ್ನು ಸಾರುತ್ತದೆ.ಧರ್ಮ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಸ್ಥಾವರ ಮತ್ತು ಜಂಗಮಗಳ ನಡುವೆ ತಿಕ್ಕಾಟ ನಡೆದೇ ಇರುತ್ತದೆ.ಮನೆ- ಮಠಗಳೆಂಬವು ಸ್ಥಾವರಗಳಾಗಿ ‘ನಡೆದಮನೆ’ ,ಪರಂಪರೆಯಿಂದ ಬಂದ ಮಠ’ ಎನ್ನುವಂತಹವುಗಳು ಸ್ಥಾವರಸೂಚಕಗಳು.ಯಾವುದೋ ಮನೆತನದಲ್ಲಿ ಯಾರೋ ಒಬ್ಬ ಮಹಾಪುರುಷ ಹುಟ್ಟಿದ್ದ ಮಾತ್ರಕ್ಕೆ ಆ ಮನೆತನದಲ್ಲಿ ಹುಟ್ಟಿದವರೆಲ್ಲರೂ ಮಹಾನ್ ವ್ಯಕ್ತಿಗಳಾಗುವುದಿಲ್ಲ,ಆದರೂ ಆತನ ಹೆಸರು ಹೇಳಿ ಸಮಾಜದಲ್ಲಿ ತಮ್ಮ ಸ್ಥಾನಮಾನ ಭದ್ರಪಡಿಸಿಕೊಳ್ಳಲು ನಾನಾ ಬಗೆಯ ಕಸರತ್ತುಗಳನ್ನು ಮಾಡುತ್ತಾರೆ.ಯಾರೋ ಶರಣರೋ ಸಂತರೋ ತಮ್ಮ ಶಿವಯೋಗದ ಬಲದಿಂದ ಐಕ್ಯರಾದ ಬಳಿಕ ದೇವರಾಗಿ ಪೂಜೆಗೊಳ್ಳುತ್ತಿರುತ್ತಾರೆ.ಆ ಶರಣರು,ಶಿವಯೋಗಿಗಳ ಹೆಸರಿನಲ್ಲಿ ಮುಂದೆ ಮಠ ಒಂದು ಬೆಳೆದು ಅದಕ್ಕೊಬ್ಬ ಪೀಠಾಧಿಪತಿ,ಅವನ ನಂತರ ಅವನ ಉತ್ತರಾಧಿಕಾರಿ ಹೀಗೆ ಮಠದ ನಡೆವಳಿಯು ಪ್ರಾರಂಭವಾಗಿ ಅದು ‘ಮಠ ಪರಂಪರೆ’ ಎನ್ನಿಸಿಕೊಳ್ಳುತ್ತದೆ.ಈ ಮಠಪರಂಪರೆಯಲ್ಲಿ ಬಂದವರೆಲ್ಲ ಮೂಲಶರಣನಂತೆ ತಪೋಬಲ,ಆಧ್ಯಾತ್ಮಿಕ ಶಕ್ತಿ ಉಳ್ಳವರು ಆಗಿರುವುದಿಲ್ಲ.ಆದರೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅವರು ಕೆಲವು ತಂತ್ರಗಳನ್ನು ಮಾಡುತ್ತಾರೆ.ಈ ತಂತ್ರಗಳಿಗೆ ಮರುಳಾದ ಜನರು ಆ ಮಠಪರಂಪರೆಯಲ್ಲಿ ಬಂದವರೆಲ್ಲರನ್ನೂ ಮಹಾತ್ಮರೆಂದೇ ಭ್ರಮಿಸುತ್ತಾರೆ.ಸತ್ಯ ಬೇರೆಯದೆ ಆಗಿರುತ್ತದೆ.ಜನತೆಗೆ ಸತ್ಯ ಗೊತ್ತಿರುವುದಿಲ್ಲ.ಮಠಪರಂಪರೆಯು ಸತ್ಯದ ಸುತ್ತ ಸುಳ್ಳಿನ ಹುತ್ತವನ್ನು ಕಟ್ಟುತ್ತದೆ.ಹಾವಿನ ಹೆಸರು ಕೇಳಿಯೇ ನಡುಗುವ ಜನರು ಹುತ್ತವನ್ನು ಕಂಡು ಹೆದರುತ್ತಾರೆ.ಹುತ್ತದಲ್ಲಿ ಹಾವು ಇದೆಯೋ ಇಲ್ಲವೋ ಎಂದು ವಿಚಾರಿಸಲು ಹೋಗುವುದಿಲ್ಲ,ದೂರದಿಂದಲೇ ಹುತ್ತಕ್ಕೆ ಕೈಮುಗಿದು ನಮಿಸುತ್ತಾರೆ! ಇದು ಧಾರ್ಮಿಕಕೇಂದ್ರಗಳು ಸಮಾಜದ ಮೇಲೆ ಪ್ರಭಾವಬೀರುತ್ತಿರುವ ಪರಿ! ಹಿಂದಿನ ಕಾಲವು ರಾಜ ಮಹಾರಾಜರು,ಅವರ ಸಾಮಂತರುಗಳ ಕಾಲವಾಗಿತ್ತು.ಆಗ ಪ್ರತಿಷ್ಠಿತರ ಮನೆಗಳು,ರಾಜಾಶ್ರಯದಿಂದ ಪೋಷಿತವಾಗಿದ್ದ ಮಠಗಳಿಗೆ ಮನ್ನಣೆ ಇದ್ದರೆ ಒಪ್ಪಬಹುದು.ಆದರೆ ಇಂದಿನ ಪ್ರಜಾಪ್ರಭುತ್ವ ಯುಗದಲ್ಲಿ ಕೆಲವರು ತಮ್ಮ ಮನೆತನ ದೊಡ್ಡದು,ತಮ್ಮ ಮಠ ಮಹಿಮೆಯ ಮಠ ಎಂದು ಕೊಚ್ಚಿಕೊಳ್ಳುತ್ತ ವಂಚಿಸುತ್ತಿದ್ದಾರೆ ಜನಕೋಟಿಯನ್ನು.ಮುಗ್ಧರಾದ ಜನರು ಅಜ್ಞಾನ ಮತ್ತು ಭಯವಶರಾಗಿ ಈ ಹುಸಿಪರಂಪರೆಗಳನ್ನು ಪೋಷಿಸುತ್ತಾರೆ.ಪ್ರತಿಷ್ಠೆ ಮೆರೆಯಲು ಏನೆಲ್ಲ ಕಸರತ್ತು ಮಾಡುವ ಮಂದಿಯನ್ನು ‘ ಪಟ್ಟಭದ್ರರು’ ಎನ್ನಲಾಗುತ್ತದೆ.ಪಟ್ಟಭದ್ರರ ಕಪಟ,ಕುಹಕ,ಕುತ್ಸಿತಗಳನ್ನು ನಿಗ್ರಹಿಸಲು ಪರಮಾತ್ಮನೆ ನಿರ್ಧರಿಸಿ ಸಮಾಜಸುಧಾರಕರುಗಳು,ಧಾರ್ಮಿಕ ಸುಧಾರಕರುಗಳು ಎನ್ನಿಸಿಕೊಳ್ಳುವ ಶಿವಚೇತನರುಗಳನ್ನು ಕಳುಹಿಸುತ್ತಾನೆ.ಮೃಡಚೇತನರುಗಳು ಪಟ್ಟಭದ್ರರ ಕಾಪಟ್ಯ,ಕರ್ಮಕಾಂಡಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಾರೆ ತಮ್ಮ ನಡೆನುಡಿಗಳಿಂದ.ಧರ್ಮ ಎಂದರೇನು,ಯಾವುದು ಆಧ್ಯಾತ್ಮ ಎನ್ನುವುದನ್ನು ತಮ್ಮ ಸರಳ,ಸನ್ನಡತೆಯ ಮೂಲಕ ಸಮಾಜಕ್ಕೆ ತಿಳಿಸಿಕೊಡುತ್ತಾರೆ.ಮೃಡಚೇತನರ ಪ್ರಭಾವದಿಂದ ಸಮಾಜವು ಜಾಗೃತಗೊಳ್ಳುತ್ತದೆ,ಧರ್ಮದ ನಿಜಪಥದಲ್ಲಿ ನಡೆಯುತ್ತದೆ.ತಮ್ಮ ಬುಡಕ್ಕೆ ನೀರು ಬಂದುದನ್ನರಿತ ಪಟ್ಟಭದ್ರರು ಕುಯುಕ್ತಿ-ಕುತಂತ್ರಗಳಿಂದ ಶಿವಚೇತನರುಗಳ ವಿರುದ್ಧ ಸಂಚುಸಾಧಿಸಿ,ಸಮಾಜವನ್ನು ತಮ್ಮೆಡೆ ಸೆಳೆದುಕೊಳ್ಳಲು ಪ್ರಯತ್ನಿಸುತ್ತಾರೆ.ಮುಗ್ಧಜನತೆ ಕಪಟಿಗಳ ಸಂಚನ್ನರಿಯದೆ ಮೋಸಹೋಗುತ್ತಾರೆ.ಇದು ಬಹುಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ.ಮನುಷ್ಯರು ಎಲ್ಲಿಯೇ ಇರಲಿ,ಯಾವದೇಶದವರೇ ಆಗಿರಲಿ ಜಡದೇಹಿಗಳು ಮತ್ತು ಮೃಡಚೇತನರುಗಳ ನಡುವೆ ತಿಕ್ಕಾಟ,ಸಂಘರ್ಷ ಸಹಜ ಸಂಗತಿ.ಅದನ್ನೇ ಮಹಾಕವಿ ಸೋಮದೇವ ಭಟ್ಟನು ತನ್ನ ಮಹಾಕೃತಿ ಕಥಾಸರಿತ್ಸಾಗರದಲ್ಲಿ ‘ ಹರಸ್ವಾಮಿಯ ಕಥೆ’ ಯ ಮೂಲಕ ಬಿತ್ತರಿಸಿದ್ದಾನೆ.

ಗಂಗಾನದಿಯ ದಡದಲ್ಲಿ‌ ಕುಸುಮಪುರವೆಂಬ ನಗರ.ಆ ನಗರದಲ್ಲಿ ಹರಸ್ವಾಮಿ ಎನ್ನುವ ತಪಸ್ವಿ ಇರುತ್ತಿದ್ದನು.ಆತನ ತಪೋಸಾಮರ್ಥ್ಯ,ಸಾತ್ತ್ವಿಕ ಶಕ್ತಿಯಿಂದ ಜನತೆ ಆತನೆಡೆ ಆಕರ್ಷಿತರಾಗಿ ಆತನದರ್ಶನಾಶೀರ್ವಾದಾಕಾಂಕ್ಷಿಗಳಾಗಿ ಯೋಗಕುಟೀರಕ್ಕೆ ಆಗಮಿಸುತ್ತಿದ್ದರು.ಬಳಿ ಬಂದವರಲ್ಲಿ ಆತ್ಮಜಾಗೃತಿಯನ್ನುಂಟು ಮಾಡುತ್ತಿದ್ದ ಹರಸ್ವಾಮಿ.ದೇವರು,ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಕಪಟ,ಕಂದಾಚಾರ,ಮೌಢ್ಯಗಳ ಬಗ್ಗೆ ಜನರಿಗೆ ತಿಳಿಹೇಳುತ್ತ ಆಧ್ಯಾತ್ಮಿಕ ಪಥದ ನಿಜ ರಹಸ್ಯವನ್ನು ಬೋಧಿಸುತ್ತಿದ್ದ.ಕುಸುಮಪುರವಷ್ಟೇ ಅಲ್ಲ,ಸುತ್ತಮುತ್ತಣ ಗ್ರಾಮ,ನಗರಗಳಲ್ಲಿ ಹರಸ್ವಾಮಿಯ ಖ್ಯಾತಿ ಹರಡಿ ಎಲ್ಲೆಡೆಯಿಂದಲೂ ಜನರು ಆತನ ದರ್ಶನಾಶೀರ್ವಾದಕ್ಕಾಗಿ ಬರತೊಡಗಿದರು.ಹರಸ್ವಾಮಿಯ ಪ್ರಭಾವ ಹೆಚ್ಚತೊಡಗಿದಂತೆ ಕುಸುಮಪುರದಲ್ಲಿದ್ದ ಪುರೋಹಿತರು,ಪಟ್ಟಭದ್ರರಿಗೆ ಮಾನ ಮನ್ನಣೆಗಳು ಇಲ್ಲವಾದವು.ತಲೆತಲಾಂತರಗಳಿಂದ ಪೌರೋಹಿತ್ಯ ಮಾಡುತ್ತ ಬದುಕು ಕಂಡುಕೊಂಡವರು,ಮಠಗಳ ಆಶ್ರಯದಲ್ಲಿ ಬದುಕುತ್ತಿದ್ದವರಿಗೆ ಹರಸ್ವಾಮಿಯು ಸಮಸ್ಯೆಯಾಗಿದ್ದ.ಹೇಗಾದರೂ ಮಾಡಿ ಸಾಗುಹಾಕಬೇಕು ಈತನನ್ನು ಎಂದು ಆಲೋಚಿಸಿದರು.

ಹರಸ್ವಾಮಿಯು ಒಮ್ಮೆ ಆಶ್ರಮದಿಂದ ಹೋರಹೋಗಿದ್ದ.ಇದೇ ಸಮಯವೆಂದರಿತ ಕಪಟಿಗಳಲ್ಲಿ ಒಬ್ಬ ಜನರನ್ನು ಉದ್ದೇಶಿಸಿ,’ ಈ ಕಪಟ ತಪಸ್ವಿ ಇಲ್ಲೇಕೆ ಇದ್ದಾನೆ ಗೊತ್ತಾ?’ ಎಂದು ಪ್ರಶ್ನಿಸಿದ.ಜನರು ಕುತೂಹಲದಿಂದ ‘ ಯಾಕೆ?’ ಎಂದು ಪ್ರಶ್ನಿಸಲು ಆ ಕಪಟಿಯು ನಿಜ ಹೇಳುವವನಂತೆ ‘ ಅವನು ಮಕ್ಕಳನ್ನು ತಿನ್ನುವ ರಾಕ್ಷಸ.ಅದಕ್ಕೆಂದೇ ತಪಸ್ವಿಯ ವೇಷ ಹಾಕಿದ್ದಾನೆ’ ಎಂದ.ಮತ್ತೊಬ್ಬ ಕಪಟಿ ‘ಹೌದು ಹೌದು,ಆ ಗ್ರಾಮದಲ್ಲಿ ನೂರು ಮಕ್ಕಳನ್ನು ತಿಂದ ಬಗ್ಗೆ ಸುದ್ದಿ ಬಂದಿದೆ’ ಎಂದರೆ ಮತ್ತೊಬ್ಬ ಕಪಟಿ ‘ ನಿಜ ನಿಜ ಮತ್ತೊಂದು ಊರಿನಲ್ಲಿ ಇನ್ನೂರು ಮಕ್ಕಳನ್ನು ತಿಂದಿದ್ದಾನಂತೆ’ ಎಂದನು.ನಾಲ್ಕನೆಯ ಕಪಟಿ ‘ ಆ ಊರು,ಈ ಊರು ಕಥೆ ಏಕೆ ನಮ್ಮ ನಗರದಲ್ಲಿ ಆ ಓಣಿಯಲ್ಲಿ ಇಷ್ಟು ಮಕ್ಕಳನ್ನು ತಿಂದಿದ್ದಾನೆ,ಈ ಓಣಿಯಲ್ಲಿ ಇಷ್ಟು ಜನರನ್ನು ತಿಂದಿದ್ದಾನೆ’ ಎಂದನು.ಇದನ್ನು ಕೇಳಿದ ಪುರಜನತೆ ಭಯಗ್ರಸ್ತರಾದರು.ಅದೇ ವೇಳೆಗೆ ದೂರದಲ್ಲಿ ಹರಸ್ವಾಮಿಯು ಬರುತ್ತಿರುವುದನ್ನು ಕಂಡು ಎಲ್ಲರೂ ಓಡಿ ಹೋದರು ತಮ್ಮನ್ನು ಎಲ್ಲಿ ತಿಂದು ಬಿಡುತ್ತಾನೋ ಎನ್ನುವ ಭಯದಿಂದ! ಜನರು ಏಕೆ ಹೀಗೆ ದಿಕ್ಕಾಪಾಲಾಗಿ ಓಡುತ್ತಿದ್ದಾರೆ ಎನ್ನುವುದು ಅರ್ಥವಾಗಲಿಲ್ಲ ಹರಸ್ವಾಮಿಗೆ.ತನ್ನ ಪಾಡಿಗೆ ತಾನು ಆಶ್ರಮದತ್ತ ನಡೆದ.ಕಪಟಿಗಳು ಗುಟ್ಟಾಗಿ ಪುರಜನರ ಸಭೆ ಸೇರಿಸಿ’ ಹರಸ್ವಾಮಿಯನ್ನು ಊರಿನಿಂದ ಓಡಿಸಬೇಕು’ ಎಂದು ಪುರಜನರನ್ನು ಪುಸಲಾಯಿಸಿದರು.ಕಪಟಿಗಳ ಕುತಂತ್ರವನ್ನರಿಯದ ಪುರಜನತೆ ಮಕ್ಕಳನ್ನು ಕಬಳಿಸುವ ಹರಸ್ವಾಮಿಯಿಂದ ತಮ್ಮ ಮಕ್ಕಳಿಗೂ ಕಂಟಕ ತಪ್ಪಿದ್ದಲ್ಲ ಎಂದು ಆಲೋಚಿಸಿ ದೂತನೊಬ್ಬನನ್ನು ಹರಸ್ವಾಮಿಯ ಆಶ್ರಮಕ್ಕೆ ಕಳಿಸಿದರು.ಆಶ್ರಮಕ್ಕೆ ಬಂದ ದೂತನು ‘ ನೀನು ಈ ಊರನ್ನು ತೊರೆದು ದೂರ ಹೋಗಬೇಕಂತೆ.ಇದು ಪುರಜನರ ನಿರ್ಣಯ’ ಎಂದನು.’ ಹರಸ್ವಾಮಿಯು ಕುತೂಹಲದಿಂದ ದೂತನನ್ನು ‘ ಯಾಕೆ?’ ಎಂದು ಪ್ರಶ್ನಿಸಲು ದೂತನು ‘ ನೀನು ಮಕ್ಕಳನ್ನು ತಿನ್ನುತ್ತಿಯಲ್ಲ,ಅದಕ್ಕೆ’ ಎಂದನು.ಈ ಸಂಗತಿಯನ್ನು ಕೇಳಿ ಆಶ್ಚರ್ಯಗೊಂಡ ಹರಸ್ವಾಮಿಯು ಇದು ‘ ತನಗಾಗದವರ ಸಂಚು’ ಎಂದರಿತುಕೊಂಡು ಪುರಜನತೆಗೆ ಸತ್ಯವನ್ನರುಹಬೇಕೆಂದು ಊರಲ್ಲಿ ನಡೆದನು.ಹರಸ್ವಾಮಿಯು ಬರುತ್ತಿರುವುದನ್ನು ಕಂಡ ನಗರವಾಸಿಗಳು ಭಯದಿಂದ ತಮ್ಮ ಹೆಂಡಿರು ಮಕ್ಕಳುಗಳೊಡನೆ ಮನೆಯ ಮಹಡಿಗಳ ಮೇಲೆ ಹತ್ತಿ ನಿಲ್ಲತೊಡಗಿದರು.ಕೆಲವರು ಗಿಡ ಮರಗಳನ್ನೇರಿದರು.ಹಾದಿಯಲ್ಲಿದ್ದವರು ‘ ಸತ್ತೆವೊ’ ‘ ಕೆಟ್ಟೆವೊ’ ಎನ್ನುತ್ತ ದಿಕ್ಕುಪಾಲಾಗಿ ಓಡತೊಡಗಿದರು.ಜನರ ಭಯ-ಆತಂಕಗಳನ್ನು ಕಂಡ ಹರಸ್ವಾಮಿಯು ನಗರವಾಸಿಗಳನ್ನು ಕೂಗಿ ಕರೆಯತೊಡಗಿದ ‘ ಯಾಕೆ ಹೆದರುತ್ತೀರಿ? ನಾನು ಯಾರ ಮಕ್ಕಳನ್ನು ತಿಂದಿದ್ದೇನೆ? ನಿಮ್ಮ ಮನೆಗಳಲ್ಲಿ ವಿಚಾರಿಸಿ’. ಹರಸ್ವಾಮಿಯ ಮಾತು ಕೇಳಿದ ಪೌರರು ಒಬ್ಬೊಬ್ಬರಾಗಿ ತಮ್ಮ ಮನೆಗಳಲ್ಲಿ ವಿಚಾರಿಸತೊಡಗಿದರು.ಮನೆಗಳಲ್ಲಿ ಮಕ್ಕಳು ಕ್ಷೇಮದಿಂದ ಇದ್ದರು.ಎಲ್ಲರ ಮನೆಗಳಲ್ಲಿ ವಿಚಾರಿಸಿದ್ದಾಯಿತು.ಯಾರೊಬ್ಬರ ಮನೆಯಲ್ಲಿಯೂ ಮಕ್ಕಳ ಕಳುವು ಆಗಿರಲಿಲ್ಲ,ಯಾರ ಮಕ್ಕಳು ಸತ್ತಿರಲಿಲ್ಲ. ದುರುಳರ ಅಪವಾದದಿಂದ ಬೇಸತ್ತ ಹರಸ್ವಾಮಿಯು ಆಶ್ರಮಕ್ಕೆ ಹಿಂತಿರುಗಿ ಈ ಊರಿನ ಸಹವಾಸವೇ ಬೇಡ ಎಂದು ಪರ ಊರಿಗೆ ಹೋಗಲು ಸಿದ್ಧತೆ ನಡೆಸಿದ್ದ.ಸತ್ಯ ಅರಿತ ಕುಸುಮಪುರದ ಜನರೆಲ್ಲ ಒಟ್ಟಾಗಿ ಹರಸ್ವಾಮಿಯ ಆಶ್ರಮಕ್ಕೆ ಬಂದು ತಮ್ಮಿಂದ ಆದ ‘ಅಪಚಾರವನ್ನು ಮನ್ನಿಸಬೇಕು.ಯಾರದೋ ಮಾತುಗಳನ್ನು ಕೇಳಿ ನಾವು ಮೋಸಹೋದೆವು.ದಯವಿಟ್ಟು ನಮ್ಮ ನಗರವನ್ನು ತೊರೆದು ಹೋಗದೆ,ನಮ್ಮನ್ನು ಉದ್ಧರಿಸಿ’ ಎಂದು ಪರಿಪರಿಯಿಂದ ಬೇಡಿಕೊಂಡರು.ಜನತೆಯ ಮೊರೆಗೆ ಮನಸ್ಸು ಕರಗಿ ಹರಸ್ವಾಮಿಯು ಅಲ್ಲಿಯೇ ಉಳಿಯಲು ನಿರ್ಧರಿಸಿದ.

ಇದು ಕಥೆ.ಇದು ಕುಸುಮಪುರದ ಕಥೆ ಮಾತ್ರವಲ್ಲ, ಭಾರತದ ಎಲ್ಲ ಹಳ್ಳಿ,ನಗರಗಳಲ್ಲಿ ನಡೆಯುವ ಕಥೆ.ದೇವರ ವರದಂತೆ ಆಗೊಮ್ಮೆ ಈಗೊಮ್ಮೆ ಅವತರಿಸುವ ಸಾಧು,ಸತ್ಪುರುಷರನ್ನು ಕಪಟಿಗಳು ಹೇಗೆ ಕಾಡುತ್ತಾರೆ,ಪೀಡಿಸುತ್ತಾರೆ ಎನ್ನುವುದಕ್ಕೆ ನಿದರ್ಶನವಾದ ಒಂದು ಕಥೆ ಅಷ್ಟೆ.ನಮ್ಮ ದೇಶದಲ್ಲಿ ಸಮಾಜಸುಧಾರಕರುಗಳೆಲ್ಲ ಬಹಳ ಕಷ್ಟ ಅನುಭವಿಸಿದ್ದಾರೆ ಸಮಾಜವನ್ನು ತಿದ್ದುವ ತಮ್ಮ ಪ್ರಯತ್ನದಿಂದಾಗಿ.ತಮ್ಮದೆ ನಡೆಯಬೇಕು ಎನ್ನುವ ಮನೆ ಮಠಗಳ ಮಂದಿ ಸುಳ್ಳುತಿಪ್ಪೆಸಾರಿಸಿ ತಮ್ಮ ಪ್ರತಿಷ್ಠೆ ಸ್ಥಾಪಿಸಿಕೊಂಡಿರುತ್ತಾರೆ.ಸುಧಾರಕರು ಸತ್ಯವನ್ನು ಪ್ರತಿಪಾದಿಸತೊಡಗೆ ಸಗಣಿಯ ಸೌಧಗಳ ನಿಜಸ್ವರೂಪ ಅರ್ಥವಾಗತೊಡಗುತ್ತದೆ ಜನರಿಗೆ.ಎಚ್ಚೆತ್ತ ಜನತೆ ಧರ್ಮದ ನಿಜಪಥದಿ ನಡೆಯುತ್ತಿರಲು ಮತ್ತೆ ಕಪಟನಾಟಕವನ್ನಾಡುವ ಪಟ್ಟಭದ್ರರು ಜನರನ್ನು ತಮ್ಮತ್ತ ಸೆಳೆದುಕೊಳ್ಳಲು ತಂತ್ರ ಹೂಡುತ್ತಾರೆ.ಯಾರಿಂದ ಉಪಕೃತರಾಗಿದ್ದರೋ,ಯಾರಿಂದ ಉದ್ಧಾರವಾಗುತ್ತಿದ್ದರೋ ಅಂತಹ ಸತ್ಪುರುಷರಲ್ಲಿಯೇ ದೋಷಕಾಣುವ ಜನತೆ ಮಹಾಪುರುಷರ ವಿರುದ್ಧವೇ ತಿರುಗಿ ಬೀಳುತ್ತಾರೆ.ಇದು ವಿಧಿಯಾಟ ! ಇದುವೆ ಮಾಯೆ !ಸತ್ಯ ಸತ್ಯವೆ,ಸುಳ್ಳು ಸುಳ್ಳೆ.ಕೊನೆಗೆ ಸತ್ಯವೇ ಗೆಲ್ಲುತ್ತದೆಯಾದರೂ ಕಪಟಿಗಳ ಕುತಂತ್ರಕ್ಕೆ ಸತ್ಪುರುಷರು ವಿನಾ ಕಾರಣ ಕಷ್ಟಪಡುವಂತೆ ಆಗುತ್ತದೆ.ಸಮಾಜ ಸುಧಾರಕರಿಗೆ ಹರಸ್ವಾಮಿಯು ಆದರ್ಶವಾಗಲಿ; ಹರಸ್ವಾಮಿಯ ಕಥೆಯು ಕಪಟಿಗಳ ಕಣ್ಣುಗಳನ್ನು ತೆರೆಸಲಿ.

About The Author