ಮಹಾಶೈವ ಪ್ರಬೋಧ ಮಾಲೆ –೦೩ : ತಾಯಿಯ ಮೂಲಕವೇ ತಂದೆಯ ಬಳಿ ಹೋಗಬೇಕು ! : ಮುಕ್ಕಣ್ಣ ಕರಿಗಾರ

ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ವಿಶ್ವೇಶ್ವರ ಶಿವನು ಕ್ಷೇತ್ರೇಶ್ವರನಾಗಿದ್ದರೆ ವಿಶ್ವೇಶ್ವರಿ ದುರ್ಗಾದೇವಿಯು ಕ್ಷೇತ್ರೇಶ್ವರಿಯಾಗಿದ್ದಾಳೆ.ಶಿವ ದುರ್ಗಾ ದೇವಸ್ಥಾನಗಳು ಒಂದರ ಪಕ್ಕದಲ್ಲಿ ಮತ್ತೊಂದು ಇವೆ.ಪೀಠಾಧ್ಯಕ್ಷನಾಗಿರುವ ನಾನು ಪೂಜೆ ಮತ್ತು ದರ್ಶನದ ವೇಳೆ ದುರ್ಗಾದೇವಿಯ ದೇವಸ್ಥಾನವನ್ನು ಬಳಸಿಕೊಂಡೇ ಶಿವನ ಸನ್ನಿಧಿಗೆ ಹೋಗುತ್ತೇನೆ.ಪ್ರತಿ ರವಿವಾರದ ಶಿವೋಪಶಮನ ಕಾರ್ಯದಲ್ಲಿ ಪಾಲ್ಗೊಳ್ಳುವವರು ಮತ್ತು ಮಹಾಶೈವ ಧರ್ಮಪೀಠದ ಭಕ್ತರುಗಳು ಇದನ್ನು ಗಮನಿಸಿರುತ್ತಾರೆ.ನಮ್ಮ ಭಾಗದಲ್ಲಿ ಶಿವ ಶಕ್ತಿಯರ ದೇವಸ್ಥಾನ ಇರುವುದು ನಮ್ಮ ಮಹಾಶೈವ ಧರ್ಮಪೀಠದಲ್ಲಿ ಮಾತ್ರ.ಇತ್ತೀಚೆಗೆ ಯಾರೋ ಕಟ್ಟಿಸಿದ್ದಾರೆ ಎಂದು ಕೇಳಿದ್ದೇನೆ.ಶಿವ ಶಕ್ತಿಯರ ಯುಗಳ ದೇವಸ್ಥಾನಗಳಿದ್ದಲ್ಲಿ ಮಠಾಧೀಶರುಗಳು ಇಲ್ಲವೆ ಅರ್ಚಕರು ಮೊದಲು ಶಿವನ ದರ್ಶನ ಮಾಡಿಕೊಂಡು ನಂತರ ಶಕ್ತಿಯ ಬಳಿ ತೆರಳುತ್ತಾರೆ.ಆದರೆ ನಮ್ಮಲ್ಲಿ ಶಕ್ತಿಯ ಮೂಲಕವೇ ಶಿವನ ಬಳಿ ಹೋಗುವ ಪದ್ಧತಿಯನ್ನು ಬೆಳೆಸಿದ್ದೇವೆ.ಈ ಪದ್ಧತಿಯು ಶುಷ್ಕ ಪದ್ಧತಿ ಆಗಿರದೆ ಇದರ ಹಿಂದೆ ಯೋಗದರ್ಶನವಿದೆ,ಶಿವಶಕ್ತ್ಯಾದ್ವೈತ ದರ್ಶನ ವಿದೆ.ಮಹಾಶೈವ ಧರ್ಮಪೀಠವು ಶಿವಶಕ್ತ್ಯಾದ್ವೈತ ತತ್ತ್ವವನ್ನು ಪ್ರತಿಪಾದಿಸುವ ಧರ್ಮಪೀಠವಾಗಿದ್ದು ಶಿವ ಶಕ್ತಿಯರು ಪರಸ್ಪರ ಅಭಿನ್ನರು,ಶಿವನನ್ನು ಬಿಟ್ಟು ಶಕ್ತಿಯಿಲ್ಲ,ಶಕ್ತಿಯನ್ನು ಬಿಟ್ಟು ಶಿವನಿಲ್ಲ ಎನ್ನುವುದನ್ನು ಸಾರುವುದೇ ಶಕ್ತಿಯಮೂಲಕ ಶಿವನೆಡೆಗೆ ಕ್ರಮಿಸುವ ಪಥಕ್ರಮಣದ ಅರ್ಥ.

ಇದರ ಯೌಗಿಕ ಅರ್ಥವನ್ನು ಆರೈದು ನೋಡುವ ಮುಂಚೆ ಲೌಕಿಕ ದೃಷ್ಟಿಯಿಂದ ಇದನ್ನು ವಿಚಾರಿಸೋಣ.ತಂದೆಯು ಮಗುವಿನ ಜನನಕ್ಕೆ ಕಾರಣನಾದರೂ ಮಗು ಒಂಬತ್ತು ತಿಂಗಳುಗಳ ಕಾಲ ಬೆಳೆಯುವುದು ತಾಯಿಯ ಹೊಟ್ಟೆಯಲ್ಲಿ.ಮಗು ತಾಯಿಯ ಗರ್ಭದಿಂದ ಹೊರಬಂದೊಡನೆ ‘ ಅಮ್ಮಾ’ ಎಂದೇ ಅಳುತ್ತದೆ.ಮಗು ಮೊದಲು ಗುರುತಿಸುವ ವ್ಯಕ್ತಿಯೇ ತಾಯಿ.ತಾಯಿಯ ಮೂಲಕವೇ ಮಗು ತನ್ನ ತಂದೆಯನ್ನು ಗುರುತಿಸುತ್ತದೆ.ತಾಯಿಯು ಮಗುವಿಗೆ ಇವರು ನಿನ್ನ ಅಪ್ಪ ಎಂದು ಹೇಳಿದಾಗ ಮಗು ಅಪ್ಪ ಎನ್ನಲು ಕಲಿಯುತ್ತದೆ,ಅಪ್ಪನನ್ನು ಗುರುತಿಸುತ್ತದೆ.ತಾಯಿಗೆ ಮಕ್ಕಳ ಮೇಲೆ ವಿಶೇಷ ಪ್ರೀತಿ,ವಾತ್ಸಲ್ಯ ಇರುತ್ತದೆ.ತಂದೆಯೂ ಮಕ್ಕಳನ್ನು ಪ್ರೀತಿಸುತ್ತಾನಾದರೂ ತಾಯಿಯಷ್ಟು ತಂದೆಯು ಮಕ್ಕಳನ್ನು ಅಂಟಿಸಿಕೊಳ್ಳುವುದಿಲ್ಲ.ಮಗು ತಪ್ಪು ಮಾಡಿದಾಗ ತಂದೆ ಕೆನ್ನೆಗೆ ಬಾರಿಸುತ್ತಾನೆ,ಶಿಕ್ಷಿಸುವ ಮೂಲಕ ಬುದ್ಧಿ ಕಲಿಸುತ್ತಾನೆ.ಮಕ್ಕಳಿಗೆ ತಾಯಿಯಲ್ಲಿ ಪ್ರೀತಿ,ಸಲುಗೆ ಇದ್ದರೆ ತಂದೆಯ ಬಗ್ಗೆ ಒಂದಿನಿತು ಭಯ ಇರುತ್ತದೆ.ತಂದೆಯು ಮಕ್ಕಳನ್ನು ಗದರಿಸಿದಾಗ ಮಕ್ಕಳು ತಾಯಿಯೇ ಬಳಿಯೇ ಹೋಗುತ್ತವೆ.ತಾಯಿಯ ಪ್ರೀತಿ,ವಾತ್ಸಲ್ಯದ ಅಮೃತಧಾರೆಯಲ್ಲಿ ಬೆಳೆಯುತ್ತವೆ ಮಕ್ಕಳು.

ಯೌಗಿಕವಾಗಿ ವಿಚಾರಿಸುವುದಾದರೆ ಮನುಷ್ಯ ಶರೀರವೂ ಶಿವಶಕ್ತಿಯರ ಆವಾಸಸ್ಥಾನ.ದೇಹವೇ ಕ್ಷೇತ್ರ.ಕ್ಷೇತ್ರೇಶ್ವರನಾದ ಪರಶಿವನು ನಮ್ಮ ದೇಹದಲ್ಲಿಯೇ ಇದ್ದಾನೆ.ಕ್ಷೇತ್ರೇಶ್ವರನಾದ ಶಿವನು ಸಹಸ್ರಾರ ಚಕ್ರದಲ್ಲಿ ಇರುವನು.ಮೂಲಾಧಾರ,ಸ್ವಾದಿಷ್ಟಾನ,ಮಣಿಪುರ,ಅನಾಹತ,ವಿಶುದ್ಧಿ ಮತ್ತು ಆಜ್ಞಾಚಕ್ರಗಳೆನ್ನುವ ಆರುಚಕ್ರಗಳನ್ನು ಭೇದಿಸಬಲ್ಲವನೇ ಯೋಗಿ.ಈ ಆರು ಚಕ್ರಗಳನ್ನು ಮೀರಿದ ,ಆರುಚಕ್ರಗಳಾಚೆ ಇರುವ ಮಹಾಚಕ್ರವೇ ಏಳನೆಯದಾದ ಮಹಾಚಕ್ರ ಸಹಸ್ರಾರವು.ಮೂಲಾಧಾರವು ಬೆನ್ನುಹುರಿಯು ಮೂಲದಲ್ಲಿ ಇದ್ದರೆ ಸಹಸ್ರಾರವು ಶಿರೋಭಾಗದಲ್ಲಿದೆ.ಮೂಲಾಧಾರಚಕ್ರವು ಶಕ್ತಿಯ ಸ್ಥಾನವಾಗಿದ್ದರೆ ಸಹಸ್ರಾರ ಚಕ್ರವು ಶಿವನ ಸ್ಥಾನ.ಯೋಗಿಗಳು ಯೋಗಬಲದಿಂದ ಮೂಲಾಧಾರ ಚಕ್ರದಲ್ಲಿ ಊರ್ಧ್ವಮುಖಿಯಾಗಿ ಮಲಗಿರುವ ಸರ್ಪಶಕ್ತಿಯನ್ನು ಮೇಲೆಬ್ಬಿಸಿ ಒಂದೊಂದು ಚಕ್ರಗಳ ಮೂಲಕ ದಾಟಿಸುತ್ತ ಕೊನೆಗೆ ಅದನ್ನು ಸಹಸ್ರಾರ ಚಕ್ರಕ್ಕೆ ತಲುಪಿಸುತ್ತಾರೆ.ಮೂಲಾಧಾರಚಕ್ರದಲ್ಲಿ ಸರ್ಪರೂಪದಲ್ಲಿರುವ ಶಕ್ತಿಯೇ ಕುಂಡಲಿನಿ ಶಕ್ತಿ.ಅವಳೇ ಶಿವಶಕ್ತಿ.ಕುಂಡಲಿನಿಶಕ್ತಿಯನ್ನು ಸಹಸ್ರಾರದ ಪರಶಿವನೊಂದಿಗೆ ಐಕ್ಯಮಾಡುವುದೇ ಯೋಗದ ಪರಮೋಚ್ಛಸಿದ್ಧಿ.ಹೀಗೆ ಶಿವಶಕ್ತಿಯರು ಒಂದಾಗುವುದೇ ಶಿವಶಕ್ತ್ಯಾದ್ವೈತ,ಶಿವಶಕ್ತಿ ಸಂಗಮ.ಯೋಗಿಯು ಪರಶಿವನ ಸಾಕ್ಷಾತ್ಕಾರವನ್ನು ಪಡೆಯಬೇಕಾದರೆ ,ಮೋಕ್ಷವನ್ನು ಪಡೆಯಬೇಕಾದರೆ ಅವನು ಕುಂಡಲಿನೀ ಮಾರ್ಗವಿಡಿದು ಮೇಲೆ ಏರಬೇಕು.ಇತರ ಯೋಗಸಾಧನೆಗಳಿಂದ ಪರಶಿವನ ದರ್ಶನ,ಸಾಕ್ಷಾತ್ಕಾರಗಳು ಸಾಧ್ಯವಿಲ್ಲ.ಇತರ ಯೋಗಪದ್ಧತಿಗಳು ಕೆಲವು ಸಿದ್ಧಿಗಳನ್ನು ಮಾತ್ರ ದೊರಕಿಸಿಕೊಡುತ್ತವೆ.ಪರಶಿವನ ದರ್ಶನ ಪಡೆಯಬೇಕು ಎಂದರೆ ಕುಂಡಲಿನೀಯೋಗಮಾರ್ಗವೇ ಸರ್ವಶ್ರೇಷ್ಠ ಸಾಧನವು. ಕುಂಡಲಿನಿಯು ಶಕ್ತಿಯಾಗಿದ್ದು ಅವಳು ಯೋಗಿಗೆ ತಾಯಿಯಂತೆ ಇದ್ದು ಯೋಗಿಯನ್ನು ರಕ್ಷಿಸುತ್ತ ಮೇಲುಮೇಲಕ್ಕೆ ಕರೆದುಕೊಂಡು ಹೋಗಿ ತಂದೆಯಾದ ಪರಶಿವನನಿವಾಸವಾದ ಸಹಸ್ರಾರದವರೆಗೆ ಕರೆದುಕೊಂಡು ಹೋಗಿ ಶಿವಸಾಕ್ಷಾತ್ಕಾರವನ್ನು ಕರುಣಿಸುತ್ತಾಳೆ.ಈ ಯೋಗರಹಸ್ಯವನ್ನೇ ನಾವು ನಮ್ಮ ಮಹಾಶೈವ ಧರ್ಮಪೀಠದಲ್ಲಿ ದುರ್ಗಾದೇವಿಯ ಮೂಲಕ ಶಿವನಬಳಿ ಸಾರುವ ಪಥಕ್ರಮಣದಲ್ಲಿ ಅಳವಡಿಸಿದ್ದೇವೆ.ಮಹಾಶೈವ ಧರ್ಮಪೀಠದ ಎಲ್ಲ ಆಚರಣೆಗಳ ಹಿಂದೆಯೂ ಶಿವಶಕ್ತ್ಯಾದ್ವೈತ ದರ್ಶನವಿದೆ.

About The Author