ಮಹಾಶೈವ ಪ್ರಬೋಧ ಮಾಲೆ –೦೧ : ಪ್ರಶ್ನೆ ಮತ್ತು ಪರಮಾತ್ಮ : ಮುಕ್ಕಣ್ಣ ಕರಿಗಾರ

ನಾನು ಸದಾ ಹೇಳುತ್ತಿರುತ್ತೇನೆ ‘ ಮನುಷ್ಯರಲ್ಲಿ ಯಾರೂ ಪ್ರಶ್ನಾತೀತರಲ್ಲ; ಪ್ರಕೃತಿಯಲ್ಲಿ ಪರಿಹಾರವಿಲ್ಲದ ಪ್ರಶ್ನೆಯಿಲ್ಲ’ ಎನ್ನುವ ಮಾತನ್ನು.ಜನೆವರಿ ೨೩ ನೆಯ ಸೋಮವಾರದ ಸಂಜೆಯಂದು ಮಹಾಶೈವ ಧರ್ಮಪೀಠದ ಮಹಾಕಾಳಿ ಮಾತೆಯ ಸನ್ನಿಧಿಯಲ್ಲಿ ನಡೆದ ಸಂಜೆಯ ‘ಪ್ರಬೋಧ’ ದಲ್ಲಿ ಕೂಡ ಪ್ರಶ್ನೆಯ ಮಹತ್ವವನ್ನು ಒತ್ತಿಹೇಳಿದೆ.ನಮ್ಮ ಮಹಾಶೈವ ಧರ್ಮಪೀಠದ ಮಹಾಕಾಳಿ ಸನ್ನಿಧಿಯಲ್ಲಿ ಪ್ರತಿದಿನ ಸಂಜೆ ಏಳರಿಂದ ಒಂಬತ್ತರವರೆಗೆ ಶಿಷ್ಯರುಗಳು,ಭಕ್ತರುಗಳೊಂದಿಗೆ ಆಧ್ಯಾತ್ಮಿಕ,ಸಾಮಾಜಿಕ ಮತ್ತು ಲೋಕಕಲ್ಯಾಣ ಚಿಂತನೆಗಳ ಬಗ್ಗೆ ಚರ್ಚೆ ಮಾಡುತ್ತಿರುತ್ತೇನೆ.’ ಮಹಾಶೈವ ಪ್ರಬೋಧ ಕಾರ್ಯಕ್ರಮ’ ಎಂದು ಸಂಜೆಯ ಈ ವಿಶಿಷ್ಟ ಕಾರ್ಯಕ್ರಮವನ್ನು ಹೆಸರಿಸಲಾಗಿದೆ.ಹಿಂದಿನ ಕಾಲದಲ್ಲಿ ಋಷಿಗಳು ತಮ್ಮ ಶಿಷ್ಯಂದಿರನ್ನು ಹತ್ತಿರ ಕುಳ್ಳಿರಿಸಿಕೊಂಡು ಉಪದೇಶಮಾಡಿದ ತತ್ತ್ವಚಿಂತನೆಯು ‘ ಉಪನಿಷತ್ತು’ ಎನ್ನಿಸಿಕೊಂಡರೆ ಪ್ರತಿ ಸಂಜೆ ನಾನು ತಾಯಿ ಮಹಾಕಾಳಿಯ ಸನ್ನಿಧಿಯಲ್ಲಿ ಶಿಷ್ಯರು,ಅನುಯಾಯಿಗಳೊಂದಿಗೆ ಚರ್ಚಿಸುವ ಸಂಗತಿ ‘ ಮಹಾಶೈವ ಪ್ರಬೋಧ ಕಾರ್ಯಕ್ರಮ’ ಎಂದು ಹೆಸರುಗೊಂಡಿದೆ.ಹತ್ತಿಪ್ಪತ್ತು ಜನರೊಡನೆ ನಡೆಯುವ ಆತ್ಮೀಯ ಸಂವಾದ ಇದು.ಧರ್ಮ ಮತ್ತು ಆತ್ಮಜಾಗೃತಿ ಮಹಾಶೈವ ಪ್ರಬೋಧ ಕಾರ್ಯಕ್ರಮದ ಉದ್ದೇಶ.ಕೆಲವೊಮ್ಮೆ ನನ್ನ ವಿಶೇಷ ಶಿಷ್ಯರುಗಳು ಬಂದಾಗ ಚರ್ಚೆಯ ಹರಹು ವಿಸ್ತಾರವಾಗುತ್ತದೆ.ನನ್ನ ಆತ್ಮೀಯ ಶಿಷ್ಯರುಗಳಾದ ವರದರಾಜ ಅಬ್ಕಾರಿ ಮತ್ತು ಷಣ್ಮುಖ ಹೂಗಾರ ಅವರಿಬ್ಬರು ಇಂದಿನ ಸಂಜೆಯ ಪ್ರಬೋಧ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದ ಸಂವಾದ ಕಾರ್ಯ ಎರಡು ಘಂಟೆಗಳಿಗೂ ಮಿಕ್ಕು ನಡೆಯಿತು.ವರದರಾಜ ಮತ್ತು ಷಣ್ಮುಖ ಹೂಗಾರ ಇಬ್ಬರಿಗೂ ನನ್ನಲ್ಲಿ ಮೊದಲಿನಿಂದಲೂ ಆತ್ಮೀಯತೆ ಮತ್ತು ಸಲುಗೆ ಇದ್ದುದರಿಂದ ಅವರು ನನ್ನನ್ನು ಪ್ರಶ್ನಿಸುತ್ತಾರೆ,ಪ್ರಬೋಧವನ್ನು ಸ್ವಾರಸ್ಯಪೂರ್ಣವಾಗಿಸುತ್ತಾರೆ,ರಸವತ್ತಾಗಿಸುತ್ತಾರೆ.ಇಂದಿನ ಪ್ರಬೋಧದಲ್ಲಿ ಪ್ರಶ್ನಿಸುವ ಮನೋಭಾವದ ಅಗತ್ಯವನ್ನು ಒತ್ತಿಹೇಳಲಾಯಿತು ಮತ್ತು ಪರಮಾತ್ಮನನ್ನು ಪ್ರಶ್ನೆಯ ಮೂಲಕವೇ ಕಂಡುಕೊಳ್ಳಬೇಕು ಎಂದು ಸಿದ್ಧಮಾಡಲಾಯಿತು.

ಪ್ರಶ್ನೆ ಕೇಳುವುದು ಮನುಷ್ಯರ ಸಹಜ ಪ್ರವೃತ್ತಿ.ಪ್ರಶ್ನೆ ಕೇಳುವ ಸ್ವಭಾವದಿಂದಲೇ ಮನುಷ್ಯ ಪ್ರಕೃತಿಯಲ್ಲಿ ಪ್ರಾಣಿ,ಪಕ್ಷಿ ವರ್ಗಗಳಿಂದ ಭಿನ್ನನಾಗಿದ್ದಾನೆ.ಪಶು,ಪಕ್ಷಿಗಳಿಗೆ ನಮ್ಮಂತೆಯೇ ಅವುಗಳಿಗೆ ಒಪ್ಪುವ ಶರೀರ ಇದೆ,ಆದರೆ ವಿಚಾರ ಸಾಮರ್ಥ್ಯ ಇಲ್ಲ.ಹಾಗಾಗಿ ಪಶು ಪಕ್ಷಿಗಳು ಹಸಿವಾದಾಗ ತಿನ್ನುವುದು,ದಾಹವಾದಾಗ ನೀರುಕುಡಿಯುವುದು,ಕಾಮದ ಒತ್ತಡ ಉಂಟಾದಾಗ ಕಾಮಕೇಳಿಯಲ್ಲಿ ತೊಡಗುವುದು,ಸಂತಾನೋತ್ಪತ್ತಿ ಮಾಡುವುದು ಕೊನೆಗೆ ಸಾಯುವುದು ಇಷ್ಟನ್ನು ಮಾತ್ರ ಮಾಡುತ್ತವೆ.ಎಂದು ಸಾಯುವುದು? ಏಕೆ ಸಾಯುವುದು? ಎಂದು ಯೋಚಿಸುವುದಿಲ್ಲ ಪಶು ಪಕ್ಷಿಗಳು ಅವುಗಳಲ್ಲಿ ವಿಚಾರಿಸುವ ಸಾಮರ್ಥ್ಯ ಇಲ್ಲವಾದ್ದರಿಂದ.ಆದರೆ ಮನುಷ್ಯ ಬುದ್ಧಿವಂತ.ದೇವರು ಖಗ ಮೃಗಗಳಿಗಿಲ್ಲದ ವಿಶೇಷವಾದ ಆಲೋಚನಾ ಸಾಮರ್ಥ್ಯವನ್ನು ಮನುಷ್ಯನಿಗೆ ನೀಡಿದ್ದಾನೆ.ಆಲೋಚನೆ ಇಲ್ಲವೆ ವಿಚಾರ ಪ್ರಾರಂಭವಾಗುವುದು ಪ್ರಶ್ನೆಯಿಂದಲೇ.ಎಳೆಯ ಮಕ್ಕಳನ್ನು ನೋಡಿ ಅವು ಪ್ರತಿಯೊಂದನ್ನು ಪ್ರಶ್ನಿಸುತ್ತವೆ.ಅದು ಏನು? ಅದು ಯಾಕೆ ಹಾಗೆ? ಇದು ಹೀಗೇಕೆ? ಹೀಗೆ ದಿನನಿತ್ಯದ ಬದುಕಿನಲ್ಲಿ ತಾವು ಕಾಣುವ ಎಲ್ಲದರ ಕುರಿತು ಸಹಜ ಕುತೂಹಲದಿಂದ ಪ್ರಶ್ನಿಸುತ್ತವೆ ಎಳೆಯ ಕಂದಮ್ಮಗಳು.ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ಮೂಲಕ ಪ್ರಾರಂಭವಾಗುತ್ತದೆ ಮಕ್ಕಳ ಕಲಿಕೆ.ಕಲಿಕೆ ಎಂದರೆ ಕೇವಲ ಅಕ್ಷರಾಭ್ಯಾಸವಲ್ಲ,ಪ್ರಕೃತಿಯನ್ನು ಅರಿತುಕೊಳ್ಳುವ ಬುದ್ಧಿವರ್ಧನೆಯ ಸಹಜ ಕ್ರಿಯೆ.

ಪರಮಾತ್ಮನನ್ನು ನಂಬುವವರು ‘ ಆಸ್ತಿಕರು’ ಆದರೆ ನಂಬದೆ ಇರುವವರನ್ನು ‘ ನಾಸ್ತಿಕರು’ ಎಂದು ಗುರುತಿಸಲಾಗಿದೆ.ದೇವರ ಅಸ್ತಿತ್ವದ ಬಗೆಗಿನ ಸಂದೇಹ ಇಲ್ಲವೆ ವೈಯಕ್ತಿಕ ಬದುಕಿನ ಪರಿಹಾರವಾಗದ ಸಮಸ್ಯೆಗಳು ಜನರನ್ನು ನಾಸ್ತಿಕರನ್ನಾಗಿಸುತ್ತವೆ.ನಾಸ್ತಿಕರು ಎಂದು ನಾವು ಅವರನ್ನು ಹೀಯಾಳಿಸುವುದಾಗಲಿ,ಕೆಟ್ಟವರು ಎಂದು ಭಾವಿಸುವುದನ್ನಾಗಲಿ ಮಾಡಬಾರದು.ಯಾಕೆಂದರೆ ಅವರಿಗೂ ಸ್ವತಂತ್ರವಾಗಿ ಆಲೋಚಿಸುವ ವಿಚಾರಸಾಮರ್ಥ್ಯ ಇದೆ,ಸರಿ ಕಂಡುದುದನ್ನು ಒಪ್ಪುವ ಸರಿ ಕಾಣದೆ ಇರುವುದನ್ನು ಒಪ್ಪದೆ ಇರುವ ಸ್ವಾತಂತ್ರ್ಯ ಅವರಿಗಿದೆ ಪ್ರಕೃತಿದತ್ತವಾಗಿ.ತಮ್ಮ ಸಂದೇಹ ಇಲ್ಲವೆ ಸಮಸ್ಯೆಗಳಿಗೆ ಪರಿಹಾರ ದೊರೆತರೆ ಬಹುಶಃ ನಾಸ್ತಿಕರೂ ದೇವರ ಭಕ್ತರು ಆಗುತ್ತಿದ್ದರೊ ಏನೋ.ನಾಸ್ತಿಕರಿಗಿಂತ ಹೆಚ್ಚಿನ ಸಮಸ್ಯೆ,ತೊಂದರೆಗಳು ದೇವರ ಭಕ್ತರಾದ ಆಸ್ತಿಕರನ್ನು ಕಾಡುತ್ತಿರುತ್ತವೆ ! ತಾವು ನಂಬಿದ ದೇವರು ತಮ್ಮ ಕಷ್ಟಪರಿಹರಿಸುತ್ತಾನೆ ಎನ್ನುವ ಭಾವನೆಯಿಂದ ಆಸ್ತಿಕರು ನೆಮ್ಮದಿಯಿಂದ ಇದ್ದರೆ ನಮ್ಮ ಸಮಸ್ಯೆಗಳಿಗೆ ನಾವೇ ಕಾರಣ ಮತ್ತು ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಬೇಕು,ಅದಕ್ಕೆ ದೇವರು,ಅವತಾರ ಪುರುಷರುಗಳು ಅಗತ್ಯ ಇಲ್ಲ ಎನ್ನುವುದು ನಾಸ್ತಿಕರ ವಿಚಾರ ಲಹರಿ.

‌.      ದೇವರ ಬಗ್ಗೆ ನಾವು ಸ್ವಯಂ ವಿಚಾರಿಸಿ ಅರ್ಥೈಸಿಕೊಳ್ಳುವುದಕ್ಕಿಂತ ನಮ್ಮನ್ನು ನಂಬಿಸಲಾಗಿರುತ್ತದೆ.ನಮ್ಮ‌ಕುಟುಂಬ,ಪರಿಸರ,ಸಮಾಜ ಇಂತಹ ನಂಬಿಕೆಗಳನ್ನು ಹುಟ್ಟಿಸಿರುತ್ತದೆ.ಆಸ್ತಿಕಪರಿಸರದಲ್ಲಿ ಹುಟ್ಟಿದವರು ಸಹಜವಾಗಿಯೇ ಭಕ್ತರು ಆಗುತ್ತಾರೆ.ಆಸ್ತಿಕಪರಿಸರದಲ್ಲಿ ಹುಟ್ಟಿಯೂ ಕೆಲವರು ನಾಸ್ತಿಕರಾಗಿರುತ್ತಾರೆ ಯಾವುದನ್ನೂ ಸುಲಭವಾಗಿ ಒಪ್ಪಿಕೊಳ್ಳದ ಅವರ ಹುಟ್ಟುಗುಣದಿಂದ.ದೇವರು ಇದ್ದಾನೆಯೆ? ಹೇಗಿದ್ದಾನೆ? ದೇವರನ್ನು ಕಾಣಬಹುದೆ? ದೇವರು ಸೃಷ್ಟಿಕರ್ತನಾಗಿದ್ದರೆ ಮನುಷ್ಯ ಸಮಾಜದಲ್ಲಿ ಈ ತರತಮ,ವೈರುಧ್ಯ ಏಕೆ ಇದೆ? ಎನ್ನುವಂತಹ ಪ್ರಶ್ನೆಗಳನ್ನು ಮುಂದಿಡುತ್ತಾರೆ ನಾಸ್ತಿಕರು.ಸ್ವಾರಸ್ಯದ ಸಂಗತಿ ಎಂದರೆ ಆಸ್ತಿಕರೂ ಇವೇ ಪ್ರಶ್ನೆಗಳನ್ನಿಟ್ಟುಕೊಂಡು ದೇವರನ್ನು ಹುಡುಕುತ್ತಾರೆ.ಆಸ್ತಿಕರು ‘ ಶ್ರದ್ಧೆ’ ಎನ್ನುವ ಅಸ್ತ್ರದಿಂದ ಪರಮಾತ್ಮನೆಂಬ ‘ ಆನಂದ’ ವನ್ನು ಕಂಡರೆ ನಾಸ್ತಿಕರು ‘ ಸಂಶಯ ಪಿಶಾಚಿ’ ಯ ಕಾಟದಿಂದ ಸಂದೇಹಪೀಡಿತರಾಗಿಯೇ ಉಳಿಯುತ್ತಾರೆ.

ಪರಮಾತ್ಮನನ್ನು ನಂಬುವುದು ಪರಮಾತ್ಮನ ಸಾಕ್ಷಾತ್ಕಾರದ ಮೊದಲ ಅಗತ್ಯ.ನಂಬಿಕೆಯೇ ದೇವರು,ಜಗತ್ತು ಎಲ್ಲ.ಪರಮಾತ್ಮನನ್ನು ನಂಬಿಸುವಲ್ಲಿ ಕುಟುಂಬ,ಸಮಾಜ ಮತ್ತು ಗುರುಮಾರ್ಗಗಳು ಕಾರ್ಯನಿರ್ವಹಿಸುತ್ತಿವೆ.ಹೀಗಿದ್ದೂ ಪರಮಾತ್ಮನನ್ನು ಪ್ರಶ್ನೆಯ ಮೂಲಕವೇ ಕಂಡುಕೊಳ್ಳುವುದು ಶ್ರೇಷ್ಠ.ಪರಮಾತ್ಮನ ಬಗೆಗೆ ಹಿರಿಯರು ಹೇಳಿದುದೆಲ್ಲವೂ ಸತ್ಯವೇ ಆಗಿರಬೇಕಿಲ್ಲ,ಗುರುಗಳು ಹೇಳಿದ್ದೇ ಪರಮಾರ್ಥವಾಗಬೇಕಿಲ್ಲ,ಪುಸ್ತಕ- ಧರ್ಮಗ್ರಂಥಗಳೇ ಪ್ರಮಾಣವಾಗಬೇಕಿಲ್ಲ.ಸ್ವಾನುಭಾವವೇ ಪರಮಾತ್ಮ ಸಾಕ್ಷಾತ್ಕಾರದ ಹಿರಿಯ ಸೂತ್ರ.ಸ್ವಂತ ಅನುಭವ ಎಂದರೆ ಅದು ಪ್ರಶ್ನೆಯ ಗರ್ಭದಲ್ಲಿಯೇ ಕಾಣುವ ಬೆಳಕು.ದೇವರು ಎಂದರೇನು? ಪರಮಾತ್ಮನ ಸ್ವರೂಪ ಗುಣ- ಲಕ್ಷಣಗಳೇನು? ಪರಮಾತ್ಮನು ನಿರಾಕಾರನೆ ? ಹಾಗಿದ್ದರೆ ಲಿಂಗ,ಮೂರ್ತಿ ವಿಗ್ರಹಗಳೇಕೆ ?ಪರಮಾತ್ಮನು ಸರ್ವಶಕ್ತನಾಗಿದ್ದರೆ ಜಗತ್ತಿನ ಜನರೆಲ್ಲರನ್ನೂ ಏಕೆ ಸುಖದಿಂದ ಇಟ್ಟಿಲ್ಲ? ಕೆಲವರು ಶ್ರೀಮಂತರು ಮತ್ತೆ ಕೆಲವರು ಬಡವರು ಏಕಿದ್ದಾರೆ? ಇವೇ ಮೊದಲಾದ ಪ್ರಶ್ನೆಗಳನ್ನು ಎದುರಿಸಿತ್ತಾ ಆಸ್ತಿಕನು ಪರಮಾತ್ಮನ ರಹಸ್ಯವನ್ನು ಕಂಡುಕೊಳ್ಳುತ್ತಾನೆ.ಜಗನ್ನಿಯಾಮಕನೂ ಸರ್ವಶಕ್ತನೂ ಸರ್ವೇಶ್ವರನೂ ಆಗಿದ್ದರೂ ಸಹ ಪರಮಾತ್ಮನನ್ನು ಪ್ರಶ್ನೆಯ ಮಾರ್ಗ ಇಲ್ಲವೆ ಮಾಧ್ಯಮದಿಂದಲೇ ಕಂಡುಕೊಳ್ಳಬೇಕು.ಅಂಧಶ್ರದ್ಧೆಯಾಗಲಿ,ಪರಂಪರಾನುಗತ ಆಸ್ತಿಕ್ಯದಿಂದಾಗಲಿ ಕಾಣಲಾಗದು ಪರಮಾತ್ಮನನ್ನು.ಜಗದ ಬಗೆಗಿನ ವಿಸ್ಮಯದೊಂದಿಗೆ ಆರಂಭವಾಗಬೇಕು ಪರಮಾತ್ಮನ ಇರವನ್ನು ಅರಿಯುವ ತವಕ,ಕುತೂಹಲ. ಪರಮಾತ್ಮನ ಇರವನ್ನು ಪ್ರಶ್ನಿಸುತ್ತ,ಪ್ರಶ್ನೆಯಿಂದ ಪ್ರಶ್ನೆಗೆ ಬೆಳೆಯುತ್ತ ಸಾಗಬೇಕು ಪರಮಾತ್ಮನ ಪಥದಲ್ಲಿ‌.ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟಲಿ,ಸಾವಿರ ಬಗೆಯ ಹೊಸ ಸಂದೇಹಗಳು ಮುಂದೆ ನಿಲ್ಲಲಿ ಎಲ್ಲ ಸಮಸ್ಯೆಗಳಿಗೆ ಒಂದು ಪರಿಹಾರ ಇದೆ ಎಂದು ನಂಬಿ ನಡೆಯಬೇಕು.ಪ್ರಶ್ನೆಗಳನ್ನು ಕೇಳುತ್ತ ಕೇಳುತ್ತ ಪ್ರಶ್ನೆಯೇ ಲಯವಾಗುವವರೆಗೆ,ಪ್ರಶ್ನೆಯೇ ಉತ್ತರವಾಗುವವರೆಗೆ ಮುಂಬರಿಯಬೇಕು.ಕೊನೆಗೆ ಪ್ರಶ್ನೆ ಹುಟ್ಟದೆ ನಿಂತರೆ ,ಪ್ರಶ್ನಿಸುವ ಭಾವವೇ ನಿರ್ಭಾವವಾದರೆ ಅದುವೆ ನಿಶೂನ್ಯತ್ವ,ನಿರಾಕಾರತ್ವ.ಅದುವೇ ಸಾಕ್ಷಾತ್ಕಾರ !ಪ್ರಶ್ನೆಯಿಂದ ಆರಂಭವಾಗುವ ಪರಮಾತ್ಮನ ಅನ್ವೇಷಣೆ ಪ್ರಶ್ನಾತೀತ ಅಂತಿಮ ಆನಂದದಲ್ಲಿ ಕೊನೆಯಾಗಬೇಕು.ಪ್ರಶ್ನೆಯಾಗಿ ಕಾಡುವ ಪರಮಾತ್ಮ ಪ್ರಶ್ನಾತೀತ ಸಚ್ಚಿದಾನಂದಘನನು ಎನ್ನುವ ಉತ್ತರ ಕಂಡುಕೊಳ್ಳುವುದೇ ಪರಮಾತ್ಮನ ದರ್ಶನ,ಸಾಕ್ಷಾತ್ಕಾರ.

About The Author