ಚಿಂತನೆ : ಸಂಕ್ರಮಣ : ಮುಕ್ಕಣ್ಣ ಕರಿಗಾರ

ಸೂರ್ಯನು ಉತ್ತರಮುಖವಾಗಿ ಪಯಣವನ್ನಾರಂಭಿಸುವ ಕಾಲವನ್ನು ಸಂಕ್ರಮಣ ಎನ್ನುತ್ತಾರೆ.’ಸಂಕ್ರಮಣ’ ಎಂದರೆ ಒಳ್ಳೆಯ ದಾರಿಯನ್ನು ಕ್ರಮಿಸುವುದು ಎಂದರ್ಥ.ಸೂರ್ಯನು ಮಕರರಾಶಿಯನ್ನು ಪ್ರವೇಶಿಸುವ ದಿನವು ‘ ಮಕರಸಂಕ್ರಾಂತಿ’ ಎನ್ನಿಸಿಕೊಳ್ಳುತ್ತದೆ.ಸೂರ್ಯನು ವರ್ಷದ ಆರು ತಿಂಗಳುಗಳ ಕಾಲ ಉತ್ತರಮುಖವಾಗಿ ಸಂಚರಿಸಿದರೆ ಮತ್ತೆ ಆರು ತಿಂಗಳಕಾಲ ದಕ್ಷಿಣಮುಖವಾಗಿ ಚಲಿಸುತ್ತಾನೆ.ಸೂರ್ಯನ ಈ ಚಲನೆಯನ್ನು ‘ ಆಯಣ’ ಎನ್ನಲಾಗುತ್ತಿದ್ದು ಸೂರ್ಯನು ಉತ್ತರಮುಖವಾಗಿ ಚಲಿಸುವ ಕಾಲವು ಉತ್ತರಾಯಣವಾಗಿದ್ದರೆ ದಕ್ಷಿಣದಿಕ್ಕಿನತ್ತ ಚಲಿಸುವ ಕಾಲವು ದಕ್ಷಿಣಾಯನ ಎನ್ನಿಸಿಕೊಳ್ಳುತ್ತದೆ.ಸೂರ್ಯನು ಮಕರರಾಶಿಯನ್ನು ಪ್ರವೇಶಿಸಿದಂದು ಉತ್ತರಾಯಣ ಪ್ರಾರಂಭವಾದರೆ ಕರ್ಕರಾಶಿಯನ್ನು ಪ್ರವೇಶಿಸಿದಂದು ದಕ್ಷಿಣಾಯನ ಪ್ರಾರಂಭವಾಗುತ್ತಿದೆ.

ಭೂಮಿಯ ಮೇಲಿನ ಮನುಷ್ಯರು ಸೇರಿದಂತೆ ಜೀವರಾಶಿಗಳ ಗತಿನಿರ್ಧಾರಕನಾಗಿದ್ದಾನೆ ಸೂರ್ಯ.ಸೂರ್ಯನಿಲ್ಲದೆ ಇದ್ದರೆ ಜೀವಿಗಳ ಅಸ್ತಿತ್ವಕ್ಕೆ ಅರ್ಥವೇ ಇರುವುದಿಲ್ಲ.ಮನುಷ್ಯರಾದ ನಮಗೆ ಮುನ್ನೂರಾ ಅರವತ್ತೈದು ದಿನಗಳಿಗೆ ಒಂದು ವರ್ಷವಾಗುತ್ತದೆ, ಇಪ್ಪತ್ನಾಲ್ಕು ಘಂಟೆಗಳ ಒಂದು ದಿನದ ಅವಧಿಯಲ್ಲಿ ಹನ್ನೆರಡು ಘಂಟೆಗಳು ಹಗಲು ಆದರೆ ಮತ್ತೆ ಹನ್ನೆರಡು ಘಂಟೆಗಳು ರಾತ್ರಿ.ಹಗಲಿನಲ್ಲಿ ಕೆಲಸ- ಕಾರ್ಯಗಳನ್ನು ಮಾಡಿ,ದಣಿದ ಮನುಷ್ಯರಾದಿ ಸಕಲಜೀವರುಗಳು ರಾತ್ರಿಯಲ್ಲಿ ವಿಶ್ರಾಂತಿ ಪಡೆಯುತ್ತಾರೆ ನಿದ್ರಿಸುವ ಮೂಲಕ.( ಗೂಬೆಯಂತಹ ಕೆಲವು ಪಕ್ಷಿಗಳು, ಹಗಲು ನಿದ್ರಿಸಿ,ರಾತ್ರಿ ಎಚ್ಚರವಾಗಿರುತ್ತವೆ)ದೇವತೆಗಳಿಗೂ ಸಹ ಹೀಗೆ ಹಗಲು ರಾತ್ರಿಗಳಿದ್ದು ನಮ್ಮ ಒಂದು ವರ್ಷದ ಅವಧಿಯು ದೇವತೆಗಳ ಒಂದು ದಿನವಾಗಿದ್ದು ಉತ್ತರಾಯಣದ ಆರು ತಿಂಗಳ ಕಾಲವು ದೇವತೆಗಳ ಹಗಲು ಆದರೆ ದಕ್ಷಿಣಾಯನವು ದೇವತೆಗಳ ರಾತ್ರಿ ಕಾಲವು.ದಕ್ಷಿಣಾಯನದಲ್ಲಿ ಮಲಗಿರುವ ದೇವತೆಗಳು ಉತ್ತರಾಯಣ ಪ್ರಾರಂಭವಾದೊಡನೆ ಏಳುತ್ತಾರೆ ಎನ್ನುವ ನಂಬಿಕೆ ಇದೆ.ಆ ಕಾರಣದಿಂದ ಉತ್ತರಾಯಣ ಕಾಲದಲ್ಲಿ ಎಲ್ಲ ಶುಭ ಶೋಭನಾದಿ ಮಂಗಳಕಾರ್ಯಗಳು,ಜಾತ್ರೆ- ಉತ್ಸವಾದಿ ಧಾರ್ಮಿಕ ಕಾರ್ಯಗಳು ನಡೆಯುತ್ತವೆ.ಮನೆ- ಮಂದಿರಗಳ ನಿರ್ಮಾಣಕಾರ್ಯವನ್ನಾರಂಭಿಸಲು ಸಹ ಉತ್ತರಾಯಣವೇ ಪ್ರಶಸ್ತಕಾಲ.ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನು ಪ್ರಯೋಗಿಸಿದ ಬಾಣಗಳ ಶರಶಯ್ಯೆಯಲ್ಲಿ ಮಲಗಿದ್ದರೂ ಇಚ್ಛಾಮರಣಿಯಾಗಿದ್ದ ಭೀಷ್ಮನು ಉತ್ತರಾಯಣ ಪುಣ್ಯಕಾಲದವರೆಗೆ ತನ್ನ ಪ್ರಾಣವನ್ನು ಹಿಡಿದಿಟ್ಟುಕೊಂಡಿದ್ದ ಪ್ರಸಂಗವು ಉತ್ತರಾಯಣವು ಪುಣ್ಯಕಾಲವಾಗಿದ್ದು ಈ ಕಾಲದಲ್ಲಿ ನಿಧನಹೊಂದಿದರೆ ಸ್ವರ್ಗವನ್ನು ಹೊಂದಬಹುದು ಎನ್ನುವ ನಂಬಿಕೆಯನ್ನು ಪುಷ್ಟೀಕರಿಸುವ ಪ್ರಸಂಗವಾಗಿದೆ.

ನಾಲ್ಕು ದಿಕ್ಕುಗಳಲ್ಲಿ ಪೂರ್ವದಿಕ್ಕು ಪರಮಾತ್ಮಸೂಚಕ ದಿಕ್ಕು ಆದರೆ ಪಶ್ಚಿಮದಿಕ್ಕು ಪ್ರಪಂಚತತ್ತ್ವವನ್ನು ಸಾರುವ ಅಸ್ತಮಿಸುವ ದಿಕ್ಕು.ಉತ್ತರದಿಕ್ಕು ಅಭಿವೃದ್ಧಿ,ಉನ್ನತಿಕೆಯನ್ನು ಸಂಕೇತಿಸುವ ದಿಕ್ಕು.ದಕ್ಷಿಣವು ಮರಣಸೂಚಕವಾದ ಕಾಲ ಇಲ್ಲವೆ ಯಮನ ದಿಕ್ಕು.ಪೂರ್ವವು ಆತ್ಮೋನ್ನತಿಗೆ ಸಹಾಯಕವಾದ ಮೋಕ್ಷಕಾರಕ ದಿಕ್ಕು ಆದರೆ ಉತ್ತರವು ಐಹಿಕ ಭೋಗ ಭಾಗ್ಯಗಳನ್ನು ಪ್ರತಿನಿಧಿಸುವ ಭೋಗಸೂಚಕ ದಿಕ್ಕು.’ ಉತ್ತರೋತ್ತರ ಅಭಿವೃದ್ಧಿಯಾಗಲಿ’ ಎಂದು ಹಿರಿಯರು ಹಾರೈಸುವ ಮಾತಿನಲ್ಲಿ ಉತ್ತರವು ಪ್ರಗತಿಸೂಚಕದಿಕ್ಕು ಎನ್ನುವ ಗೂಢವಿದೆ.ಸೂರ್ಯನು ತನ್ನ ಪಥದಿ ಉತ್ತರದ ಕಡೆ ಕ್ರಮಿಸುವ ಆರು ತಿಂಗಳ ಅವಧಿಯು ಉನ್ನತಿ,ಅಭ್ಯುದಯ,ಪ್ರಗತಿಯನ್ನು ಸೂಚಿಸುವ ಕಾಲವಾದರೆ ಸೂರ್ಯನು ದಕ್ಷಿಣ ದಿಕ್ಕಿನೆಡೆ ಸಂಚರಿಸುವ ಆರು ತಿಂಗಳ ಕಾಲವು ಅಧಃಪತನ ಇಲ್ಲವೆ ವಿನಾಶದತ್ತ ನಡೆಯುವ ಜೀವಗತಿಸಂಕೇತವು.

ಮನುಷ್ಯರ ಬದುಕಿನಲ್ಲಿ ಸುಖ- ದುಃಖಗಳುಂಟು,ಬೇಕು- ಬೇಡಗಳುಂಟು,ಇಷ್ಟ- ಅನಿಷ್ಟಗಳುಂಟು,ಲಾಭ- ನಷ್ಟಗಳುಂಟು.ಕೂಡುವುದು- ಅಗಲುವುದು ಇರುವ ಮನುಷ್ಯ ಸಂಬಂಧಗಳಲ್ಲಿ ರಾಗ- ದ್ವೇಷಗಳಿವೆ,ಒಳಿತು- ಕೆಡುಕುಗಳಿವೆ,ಅನುರಾಗ- ವೈರಾಗ್ಯಗಳಿವೆ.ಈ ಎಲ್ಲ ದ್ವಂದ್ವಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು,ಬಾಳಿನಲ್ಲಿ ಬಂದೊದಗುವ ಪ್ರಸಂಗಗಳನ್ನು ಸ್ಥಿತಪ್ರಜ್ಞಭಾವದಿಂದ ಸ್ವೀಕರಿಸಬೇಕು.ಮನುಷ್ಯರಲ್ಲಿ ಯಾರೂ ಪೂರ್ಣಸುಖಿಗಳಿಲ್ಲ,ಎಲ್ಲ ಕಾಲಕ್ಕೂ ದುಃಖವೇ ಇರುವುದಿಲ್ಲ.ಸಿರಿತನ ಬಡತನಗಳು ಎಲ್ಲ ಕಾಲಕ್ಕೂ ಸ್ಥಿರವಾಗಿ ಇರುವುದಿಲ್ಲ.ಸಿರಿಯೇ ಬರಲಿ,ಉರಿಯೇ ಬರಲಿ ವಿಚಲಿತಚಿತ್ತರಾಗದೆ ದೃಢಮತಿಗಳಾಗಿರಬೇಕು,ಸ್ಥಿರಚಿತ್ತರಾಗಿರಬೇಕು.

ಜೀವನದಲ್ಲಿ ದುಃಖ,ನಿರಾಶೆಯ ಕಾರ್ಮೋಡಗಳು ಕವಿದಾಗ ಅಧೀರರಾಗಬಾರದು.ಪ್ರತಿಕೂಲ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಬೇಕು.ಧೈರ್ಯದಿಂದ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿದರೆ ಉತ್ತಮಿಕೆಯ ಕಾಲವು ಬಂದೇಬರುತ್ತದೆ ಎನ್ನುವುದನ್ನು ಸಂಕೇತಿಸುತ್ತದೆ ಸಂಕ್ರಮಣವು.ಜೀವನದಲ್ಲಿ ಬಂದೊದಗುವ ಅಹಿತಕರ ಘಟನೆಗಳು,ದುರ್ಭರ ಪ್ರಸಂಗಗಳಿಗೆ ಹೆದರಿ ಪಲಾಯನವಾದಿಗಳಾಗದೆ ಏನೇ ಬರಲಿ,ಎದುರಿಸಿ ಗೆಲ್ಲುವೆ ಎನ್ನುವ ಆತ್ಮವಿಶ್ವಾಸದಿಂದ ನಡೆದದ್ದಾರೆ ಉತ್ತರೋತ್ತರ ಅಭಿವೃದ್ಧಿಯನ್ನುಂಟು ಮಾಡುವ ಸಂಕ್ರಮಣ ಕಾಲವು ಬಂದೇ ಬರುತ್ತದೆ. ಗೆದ್ದೇ ಗೆಲ್ಲುವೆನೆಂಬ ಆತ್ಮವಿಶ್ವಾಸ ಉಳ್ಳವರೇ ಮಹತ್ಕಾರ್ಯಗಳನ್ನು ಸಾಧಿಸಿ ವಿಜಯಿಗಳಾಗುತ್ತಾರೆ,ಯಶಸ್ವಿವ್ಯಕ್ತಿಗಳಾಗುತ್ತಾರೆ.

‘ ಸಂಕ್ರಮಣ’ ವು ಯಶೋಮಾರ್ಗಕ್ರಮಣ ಕಾಲವಾಗಿದ್ದು ಎಲ್ಲರ ಜೀವನದಲ್ಲಿ ಬಂದೇ ಬರುತ್ತದೆ ಉನ್ನತಿಯ ಕಾಲ.ಆ ಉನ್ನತಿಯ ದಿನಗಳಿಗಾಗಿ ಕಾಯಬೇಕು.ಅನಿಷ್ಟವನ್ನು ಇಷ್ಟವನ್ನಾಗಿ ಪರಿವರ್ತಿಸುವ ಕಾಲವು ಸಂಕ್ರಮಣವಾಗಿದ್ದು ಜೀವನದಲ್ಲಿ ಪ್ರತಿಯೊಬ್ಬರಿಗೂ ಸಂಕ್ರಮಣಕಾಲ ಬಂದೇ ಬರುತ್ತದೆ.ಆಶಾವಾದಿಗಳಾಗಿದ್ದು ಕಾಲವನ್ನು ಎದುರುನೋಡಿ ಎನ್ನುವುದೇ ಸಂಕ್ರಮಣದ ಸಂದೇಶ.ಸೂರ್ಯೋದಯವಾದೊಡನೆ ಕತ್ತಲೆ ಹರಿದು ಬೆಳಕಾಗುವಂತೆ ಬದುಕಿನಲ್ಲಿ ಬಂದೊದಗಿದ ವಿಪತ್ತು- ವಿಪರೀತ ಪ್ರಸಂಗಗಳನ್ನು ಸಂಯಮದಿಂದ ಎದುರಿಸಿದರೆ ಸುಖದ,ಗೆಲುವಿನ,ವಿಜಯೋತ್ಸವದ ಕಾಲ ಬರುವುದು ಎನ್ನುವುದರ ಸಂಕೇತವೇ ಸಂಕ್ರಮಣ.

‌‌ ‌

About The Author