ಪ್ರವಾಸಕಥನ : ಮುಂಬೈ ಅದ್ಭುತನಗರ’ವೆಂದು ಮರೆಯಲಾದೀತೆ ‘ ಧಾರಾವಿ’ ಯನ್ನು ? : ಮುಕ್ಕಣ್ಣ ಕರಿಗಾರ

ಪ್ರವಾಸಕಥನ : ಮುಂಬೈ ಅದ್ಭುತನಗರ’ವೆಂದು ಮರೆಯಲಾದೀತೆ ‘ ಧಾರಾವಿ’ ಯನ್ನು ?

ಮುಕ್ಕಣ್ಣ ಕರಿಗಾರ

ಮುಂಬೈ ಎನ್ನುವ ಅದ್ಭುತ ನಗರದಲ್ಲಿ ಜಗತ್ತಿನಲ್ಲಿ ಅತಿದೊಡ್ಡ ಕೊಳಗೇರಿಗಳಲ್ಲಿ ಒಂದಾದ ‘ ಧಾರಾವಿ’ ಯೂ ಇದೆ ಮುಂಬೈಯ ಪ್ರಗತಿಗೆ ಪ್ರಶ್ನಾರ್ಥಕ ಚಿಹ್ನೆಯಾಗಿ .’ ಧಾರಾವಿ’ ಯ ಅಭಿವೃದ್ಧಿಯಾಗದೆ ಮುಂಬಯಿಯ ಪ್ರಗತಿಗೆ ಅರ್ಥವಿಲ್ಲ.ಪ್ರಜಾಪ್ರಭುತ್ವ ಭಾರತದಲ್ಲಿ ಎಲ್ಲರಂತೆ ಸಮಾನ ಹಕ್ಕು- ಅವಕಾಶಗಳನ್ನು ಆನಂದಿಸಬೇಕಿದ್ದ ಧಾರಾವಿ ಕೊಳೆಗೇರಿವಾಸಿಗಳು ಹಂದಿ- ನಾಯಿಗಳಂತೆ ನಿಕೃಷ್ಟಜೀವನ ಸಾಗಿಸುತ್ತಿರುವುದು ಪ್ರಜಾಪ್ರಭುತ್ವದ ಆಶಯಗಳನ್ನೇ ಪ್ರಶ್ನಿಸುವಂತಿದೆ.

ವಿಶ್ವದ ಅತಿವಿಸ್ತಾರವಾದ ಕೊಳೆಗೇರಿಗಳಲ್ಲಿ ಒಂದು ಎನ್ನುವ ಅಗ್ಗಳಿಕೆ(?) ಗೆ ಪಾತ್ರವಾಗುರುವ ‘ ಧಾರಾವಿ’ ಕೊಳೆಗೇರಿಯು ಮುಂಬೈಯ ಹೃದಯಭಾಗದಲ್ಲಿದೆ.ಪಶ್ಚಿಮ ಮತ್ತು ದಕ್ಷಿಣ ಮೆಟ್ರೋ ರೈಲುಗಳ ನಡುವಿರುವ ಧಾರಾವಿಯು ಮುಂಬೈ ವಿಮಾನ ನಿಲ್ದಾಣಕ್ಕೆ ಸಮೀಪವಿದೆ.ಹತ್ತುಲಕ್ಷ ಜನಸಂಖ್ಯೆಯನ್ನು ಹೊಂದಿರುವ ಧಾರಾವಿಯು ವಿಶ್ವದ ಅತಿ ಹೆಚ್ಚು ಜನಸಾಂದ್ರತೆಯ ಪ್ರದೇಶವೂ ಹೌದು.ಚದುರಮೀಟರ್ ಗೆ 717780 ಜನಸಾಂದ್ರತೆಯನ್ನು ಹೊಂದಿರುವ ಧಾರಾವಿಯು 2.1 ಚದುರ ಕಿಲೋಮೀಟರ್ ವಿಸ್ತಾರವಾಗಿದೆ.ಅಂದರೆ 520 ಎಕರೆಗಳಷ್ಟು ವಿಸ್ತೀರ್ಣ ಹೊಂದಿದೆ ಧಾರಾವಿ.

‌ಬ್ರಿಟಿಷ ವಸಾಹತುಶಾಹಿಯ ಕಾಲದಲ್ಲಿ ಕ್ರಿ.ಶ 1884 ರಲ್ಲಿ ಹುಟ್ಟಿದ ಧಾರಾವಿಯು ಕಾರ್ಖಾನೆಗಳು ಚೆಲ್ಲುತ್ತಿದ್ದ ಕೊಳಚೆ ಮತ್ತು ಮುಂಬೈ ನಿವಾಸಿಗಳ ಕೊಳಚೆ ನೀರು ಸಂಗ್ರಹವಾಗುತ್ತಿದ್ದ ಪ್ರದೇಶ.ಧಾರಾವಿಯು ಕೊಳಗೇರಿ ಎನ್ನಿಸಿಕೊಳ್ಳುವ ಪೂರ್ವದಲ್ಲಿ ಸ್ಥಳೀಯ ಮೀನುಗಾರರ ಜಾತಿಯಾದ ಕೋಲಿ ಜನಾಂಗದ ಪ್ರದೇಶವಾಗಿತ್ತು ಮತ್ತು ಕೋಳಿವಾಡ ಎಂದು ಕರೆಯಲ್ಪಡುತ್ತಿತ್ತು.ಚರ್ಮಹದಮಾಡುವ ಕಾರ್ಖಾನೆಗಳೇ ಧಾರಾವಿಯ ಕೊಳೆ ಹೆಚ್ಚಲು ಕಾರಣವಾಗಿದ್ದು ಈಸ್ಟ್ ಇಂಡಿಯಾ ಕಂಪನಿಯು 1887 ರಲ್ಲಿ ಧಾರಾವಿಯಲ್ಲಿ ಮೊದಲ ಚರ್ಮಹದ ಮಾಡುವ ಕಾರ್ಖಾನೆಯನ್ನು ಸ್ಥಾಪಿಸಿತು.ಅಂದಿನಿಂದ ಅಸಂಖ್ಯಾತ ಚರ್ಮ ಹದಮಾಡುವ ಕಾರ್ಖಾನೆಗಳು ಸ್ಥಾಪಿತಗೊಂಡು ಧಾರಾವಿಯು ಜಗತ್ಪ್ರಸಿದ್ಧ ಕೊಳಗೇರಿಯಾಗಲು ಕಾರಣವಾಗಿವೆ.ಬ್ರಿಟಿಷ್ ವಸಾಹತು ಶಾಹಿ ಆಡಳಿತವು ಚರ್ಮಹದಮಾಡುವ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಸ್ಥಳೀಯ ಕಾರ್ಮಿಕರುಗಳಿಗೆ1895 ರಲ್ಲಿ ಇಲ್ಲಿಯ ಪ್ರದೇಶವನ್ನು 99 ವರ್ಷಗಳಿಗೆ ಲ್ಯಾಂಡ್ ಲೀಸ್ ನೀಡುವ ಮೂಲಕ ಕೊಳಗೇರಿ ಬೆಳೆಯಲು ಕಾರಣವಾಯಿತು.ಭಾರತದ ಎಲ್ಲ ರಾಜ್ಯಗಳ ಗ್ರಾಮೀಣ ಪ್ರದೇಶಗಳಿಂದ ದುಡಿಯಲು ಬಂದ ಬಡವರು,ಕಾರ್ಮಿಕರುಗಳು ನೆಲೆಸಿರುವ ಧಾರಾವಿಯು ಹಲವು ಮತ- ಧರ್ಮಗಳ,ಬಹುಸಂಸ್ಕೃತಿಯ ನೆಲೆ.ಧಾರಾವಿಯ ಜನಸಂಖ್ಯೆಯಲ್ಲಿ ತಮಿಳರೇ ಹೆಚ್ಚಿದ್ದಾರೆ.ತಮಿಳುನಾಡಿನ ರಾಮನಾಥಪುರಂ,ತಿರುವಿನೇಲಿ,ತೂತಕುಡಿ ಮತ್ತು ಪುದಚೇರಿ ಜಿಲ್ಲೆಗಳಿಂದ ವಲಸೆ ಬಂದಿರುವ ತಮಿಳರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಹಿಂದೂ ಧರ್ಮದ ಕೆಳವರ್ಗ ಮತ್ತು ತಳಸಮುದಾಯಗಳ ಜನತೆ ಧಾರಾವಿಯ ಜನಸಂಖ್ಯೆಯ 63% ರಷ್ಟಿದೆ.ಮುಸ್ಲಿಮರ ಜನಸಂಖ್ಯೆ 3%.ಧಾರಾವಿಯ ಜನಸಂಖ್ಯೆಯ 6% ನಷ್ಟು ಕ್ರಿಶ್ಚಿಯನ್ನರಿದ್ದಾರೆ.ಬೌದ್ಧಧರ್ಮೀಯರು ಕಡಿಮೆ ಪ್ರಮಾಣದಲ್ಲಿದ್ದಾರೆ.ಬಹುಸಂಸ್ಕೃತಿಗಳ ನೆಲೆಯಾದ ಧಾರಾವಿಯಲ್ಲಿ ಎಲ್ಲ ಜಾತಿ ಧರ್ಮಗಳ ಉಪಾಸನಾ ಕೇಂದ್ರಗಳು ಸಾಕಷ್ಟು ಸಂಖ್ಯೆಯಲ್ಲಿವೆಯಾದರೂ ಇಲ್ಲಿ ‘ ಬಡಾ ಮಸೀದಿ’ ಎನ್ನುವ ಮಸೀದಿಯು 1887 ರಲ್ಲಿ ಸ್ಥಾಪನೆಗೊಂಡ ಮೊದಲ ಮಸೀದೆಯಾಗಿದೆ.ಧಾರಾವಿಯಲ್ಲಿ ಹಿಂದೂಗಳ ಮೊದಲ ದೇವಾಲಯ ಗಣೇಶ ಮಂದಿರವು 1913 ರಲ್ಲಿ ನಿರ್ಮಿಸಲ್ಪಟ್ಟಿದೆ.

‌ ಧಾರಾವಿಯು ಮಿಶ್ರ ಅರ್ಥವ್ಯವಸ್ಥೆಯನ್ನು ಹೊಂದಿದೆ.ಕೈಗಾರಿಕೆಗಳಿರುವಂತೆ ಗುಡಿ ಕೈಗಾರಿಕೆಗಳೂ ಇಲ್ಲಿವೆ.ಚರ್ಮಹದ ಮಾಡುವ ಕಾರ್ಖಾನೆಗಳೊಂದಿಗೆ ವಸ್ತ್ರೋದ್ಯಮ,ಕುಂಬಾರಿಕೆ ಮತ್ತು ಕರಕುಶಲ ಉತ್ಪನ್ನಗಳ ಗುಡಿಕೈಗಾರಿಕೆಗಳಿವೆ.ಧಾರಾವಿಯು ವಾರ್ಷಿಕ 1 ಬಿಲಿಯನ್ ಅಮೇರಿಕನ್ ಡಾಲರ್ ಗಳಷ್ಟು ವ್ಯಾಪಾರ- ವಹಿವಾಟು ನಡೆಸುತ್ತಿದೆ.ಮುಂಬೈಯ ಆರ್ಥಿಕ ಬೆಳವಣಿಗೆಗೆ ಧಾರಾವಿಯು ತನ್ನದೆ ಆದ ಕೊಡುಗೆ ನೀಡಿದೆ.ಮೂಲಭೂತ ಸೌಕರ್ಯಗಳ ತೀವ್ರ ಕೊರತೆಯಿಂದ ಬಳಲುತ್ತಿರುವ ಧಾರಾವಿಯಲ್ಲಿ ಶುದ್ಧಕುಡಿಯುವ ನೀರು,ನೈರ್ಮಲ್ಯ ವ್ಯವಸ್ಥೆಯ ಸಮಸ್ಯೆ ಬೃಹದಾಕಾರವಾಗಿದೆ.ಸಾರ್ವಜನಿಕ ಶೌಚ ವ್ಯವಸ್ಥೆಯಂತೂ ತೀರ ಶೋಚನೀಯ ಸ್ಥಿತಿಯಲ್ಲಿದೆ.ಇಲ್ಲಿನ ವೈದ್ಯರುಗಳು ಪ್ರತಿದಿನ 4000 ಟೈಫಾಯ್ಡ್ ಪೀಡಿತ ರೋಗಿಗಳನ್ನು ಪರೀಕ್ಷಿಸುತ್ತಿದ್ದಾರೆ ಎಂದರೆ ಧಾರಾವಿ ಜನರ ಜೀವನಮಟ್ಟ ಹೇಗಿರಬಹುದೆಂದು ಊಹಿಸಿಕೊಳ್ಳಬಹುದು.ವಿಶ್ವಸಂಸ್ಥೆಯು 2006 ರಲ್ಲಿ‌ಪ್ರಕಟಿಸಿದ ಮಾನವ ಅಭಿವೃದ್ಧಿ ವರದಿಯಂತೆ ಧಾರಾವಿಯಲ್ಲಿ 1440 ಜನರಿಗೆ ಒಂದು ಶೌಚಾಲಯ ಇದೆ ! ಪುಟ್ಟಹಂದಿಗೂಡಿನಂತಹ ಮನೆಗಳಲ್ಲಿ ಹತ್ತೆಂಟು ಜನರು ವಾಸಿಸುತ್ತಾರೆಂದರೆ’ ಜೀವಂತ ನರಕ’ ವಲ್ಲವೆ ಧಾರಾವಿ? ಜನರು ಸತ್ತ ಮೇಲೆ ಸ್ವರ್ಗ ನರಕಗಳನ್ನು ಅನುಭವಿಸುತ್ತಾರಂತೆ.ಆದರೆ ಮುಂಬೈಯ ಮಿಲಿಯನೇರುಗಳು,ಬಿಲಿಯನೇರುಗಳು ಸ್ವರ್ಗಸುಖವನ್ನು ಅನುಭವಿಸಿದರೆ ಅವರ ವಿಲಾಸಿಜೀವನದ ಪಾಪಕೃತ್ಯಗಳ ಫಲವಾದ ರೌರವನರಕವನ್ನು ಅನುಭವಿಸುತ್ತಿದ್ದಾರೆ ಧಾರಾವಿವಾಸಿಗಳು ಬದುಕಿದ್ದಾಗಲೆ.

ಮುಂಬೈಯ ಪ್ರಗತಿಗೆ ಕಳಂಕವಾಗಿ ಕಾಡುತ್ತಿರುವ ಧಾರಾವಿಯ ಪುನರುಜ್ಜೀವನಕ್ಕಾಗಿ ಹತ್ತುಹಲವು Dharavi Re Development ಯೋಜನೆಗಳನ್ನು ರೂಪಿಸಲಾಗಿದೆಯಾದರೂ ಸಹಸ್ರ ಸಹಸ್ರ ಕೋಟಿಗಳಷ್ಟು ವೆಚ್ಚದ ಈ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸು ಸಂಸ್ಥೆಗಳು ನೆರವು ನೀಡಲು ಮುಂದೆ ಬರುತ್ತಿಲ್ಲವಾದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಪುನರ್ ವಸತಿಯೋಜನೆಗಳು ಯಶಸ್ಸು ಕಾಣುತ್ತಿಲ್ಲ.ಕೊಳೆಗೇರಿ ವಾಸಿಗಳ ಪುನರ್ವಸತಿಯ ಹೆಸರಿನಲ್ಲಿ ನೀಡುತ್ತಿರುವ ವಾಸಭೂಮಿಯೂ ಕಡಿಮೆ ಎನ್ನುವ ಕಾರಣದಿಂದ ಕೊಳೆಗೇರಿ ವಾಸಿಗಳು ಸರ್ಕಾರದ ಪುನರ್ ವಸತಿ ಯೋಜನೆಗಳಲ್ಲಿ ಆಸಕ್ತಿ ತೋರಿಸುತ್ತಿಲ್ಲ.ಹಲವು ಹತ್ತು ಪುನರ್ವಸತಿ ಯೋಜನೆಗಳು ವಿಫಲಗೊಂಡಿದ್ದು ಈಗ ಗೌತಮ್ ಅದಾನಿಯವರು ಧಾರಾವಿ ಪುನರ್ವಸತಿ ಯೋಜನೆಯ ಗುತ್ತಿಗೆ ಪಡೆದು ನಿರ್ವಹಿಸುತ್ತಿದ್ದು ಸಮಸ್ಯೆಗಳ ಸುಳಿಯಾಗಿರುವ,ಪರಿಹರಿಸದಷ್ಟು ಕಗ್ಗಂಟು ಆಗಿರುವ ಧಾರಾವಿ ಪುನರ್ವಸತಿ ಯೋಜನೆಯ ಕಾರ್ಯಾನುಷ್ಠಾನದಲ್ಲಿಅವರು ಯಶಸ್ವಿಯಾಗುತ್ತಾರೆಯೆ ಎನ್ನುವುದನ್ನು ಕಾದು ನೋಡಬೇಕಿದೆ.

About The Author