ಪ್ರವಾಸ ಕಥನ : ಮುಂಬೈ ಎನ್ನುವ ಅದ್ಭತ ನಗರ : ಮುಕ್ಕಣ್ಣ ಕರಿಗಾರ

ಪ್ರವಾಸ ಕಥನ : ಮುಂಬೈ ಎನ್ನುವ ಅದ್ಭತ ನಗರ

       ಮುಕ್ಕಣ್ಣ ಕರಿಗಾರ

        ಭಾರತದ ಐತಿಹಾಸಿಕ,ಸಾಂಸ್ಕೃತಿಕ ,ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅತಿ ಪ್ರಾಮುಖ್ಯತೆ ಪಡೆದ,ಅತ್ಯಂತ ಮಹತ್ವದ ಮಹಾನಗರಗಳಲ್ಲಿ ಒಂದಾಗಿರುವ ಮುಂಬೈಯನ್ನು ಒಂದಿಲ್ಲ ಒಂದು ಸಾರೆ ನೋಡುವ  ಬಯಕೆ ಪ್ರತಿಯೊಬ್ಬ ಭಾರತೀಯರಲ್ಲಿ ಮನೆಮಾಡಿರುತ್ತದೆ.ಮುಂಬೈ ನಗರದ ಹೆಸರೇ ರೋಮಾಂಚನವನ್ನುಂಟು ಮಾಡುತ್ತದೆ.ನಾನು ಹುಡುಗನಾಗಿದ್ದಾಗ ಜಾತ್ರೆ ಹಾಗೂ ಸಂತೆಗಳಲ್ಲಿ ‘ಬೊಂಬಾಯಿವಾಲಾ’ ಎನ್ನುವ ಹೆಸರಿನ ಡಬ್ಬಾ ವ್ಯಾಪಾರಿ ಒಂದು ಡಬ್ಬದಲ್ಲಿ ಜೋಡಿಸಿದ ಚಿತ್ರಗಳ ಮಾಲೆಗಳನ್ನಿಟ್ಟು ‘ ಬೊಂಬಾಯಿ ತಾರೀಪು’ ಎಂದು ಚಿತ್ರಗಳನ್ನು ತೋರಿಸುತ್ತಿದ್ದ.ನಾಲ್ಕಾಣೆ ಕೊಟ್ಟು ಡಬ್ಬದ ಬಣ್ಣದ ಪೇಪರ್ ಅಂಟಿಸಿದ ಕಿಂಡಿಯಲ್ಲಿ ಕಣ್ಣಿಟ್ಟು ನೋಡುತ್ತಿದ್ದ ಹುಡುಗರಿಗೆ ಬೊಂಬಾಯಿ ಎಂದು ಹಲವುಹತ್ತು ಕಟ್ಟಡಗಳು,ಸಮುದ್ರ,ಹಡಗು,ಪ್ರಾಣಿ ಸಂಗ್ರಹಾಲಯ ಮೊದಲಾದವುಗಳನ್ನು ತೋರಿಸುತ್ತ ‘ಅದು ನೋಡಿ’ , ‘ ಇದು ಬಂತು ನೋಡಿ’ ಎಂದು ಹೇಳುತ್ತ ‘ ಹೆಂಗೈತಿ ಬೊಂಬೈ,ಭಾಳ ಪಸಂದಾಗೈತಿ’ ಎಂದು ಹೊಗಳುತ್ತಿದ್ದ.’ಬೊಂಬೈ ತಾರೀಪು’ ನೋಡುತ್ತ ಹುಡುಗರಾಗಿದ್ದ ನಾವು ‘ ಜೀವನದಲ್ಲೊಮ್ಮೆ ಬೊಂಬಾಯಿ ನೋಡಬೇಕು’ ಎಂದುಕೊಳ್ಳುತ್ತಿದ್ದೆವು. ನಮ್ಮೂರು ಗಬ್ಬೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಕೆಲವು ಬಡಕುಟುಂಬಗಳು ದುಡಿಯಲೆಂದು ಬೊಂಬಾಯಿಗೆ ವಲಸೆಹೋಗಿದ್ದವು.ಅವರು ವರ್ಷಕ್ಕೆ ಒಮ್ಮೆ ಊರಿಗೆ ಬಂದಾಗ ಬೊಂಬಾಯಿಯ ವೈಭವವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತಿದ್ದರು.ಬೊಂಬಾಯಿಯನ್ನು ನೋಡುವ ಆಸೆ ಚಿಗುರುತ್ತಿತ್ತು ಅವರ ಬೊಂಬಾಯಿ ಬಣ್ಣನೆ ಕೇಳಿ.ದೆಹಲಿ,ಚೆನ್ನೈ,ಹೈದರಾಬಾದ ಮತ್ತು ಕೊಲ್ಲತ್ತಾಗಳಂತಹ ಮಹಾನಗರಗಳನ್ನು ಕಂಡಿದ್ದ ನಾನು ಇದುವರೆಗೂ ಮುಂಬೈಯನ್ನು ನೋಡಿರಲಿಲ್ಲ.ನನ್ನ ಅಳಿಯ ಅನಿಲಕುಮಾರನಿಗೆ  ಹೆಣ್ಣುನೋಡುವ ಕಾರಣದಿಂದ ಮುಂಬೈಯನ್ನು ನೋಡುವಂತಾಯಿತು.
        ಕೇಂದ್ರ ಸರ್ಕಾರವು 1995 ರಲ್ಲಿ ಹಿಂದಿನ ಬಾಂಬೆ ಹೆಸರನ್ನು ಮುಂಬೈ ಎಂದು ಮರುನಾಮಕರಣಗೊಳಿಸಿದ್ದರಿಂದ ಈಗ ಮುಂಬೈ ಎನ್ನುತ್ತೇವಾದರೂ ಹಳ್ಳಿಗರ ಬಾಯಲ್ಲಿ ಇಂದಿಗೂ ಅದು ಬೊಂಬಾಯಿಯೇ ಆಗಿ ಉಳಿದಿದೆ.ಹೊಟ್ಟೆಪಾಡಿಗೆ ಪರದಾಡುತ್ತಿರುವ ಜನರಿಗೆ ಹೆಸರು ಕಟ್ಟಿಕೊಂಡು ಏನಾಗಬೇಕು? ನಮ್ಮೂರು,ಸುತ್ತಮುತ್ತಲಿನ ಹಳ್ಳಿಗಳಿಂದ ವಲಸೆ ಹೋಗಿ ಮುಂಬೈಯಲ್ಲಿ ನೆಲೆಕಂಡವರು ಕೂಡ ಇಂದಿಗೂ ಬೊಂಬಾಯಿಯೇ ಎನ್ನುತ್ತಿದ್ದಾರೆ.ಮುಂಬೈಯ ಧಾರಾವಿಯಂತಹ ಕೊಳೆಗೇರಿವಾಸಿಗಳಿಗೆ ಮುಂಬಯಿಯೋ ಬೊಂಬಾಯಿಯೋ ಎನ್ನುವ ಹೆಸರು ಮುಖ್ಯವಲ್ಲ,ಹೊಟ್ಟೆ ತುಂಬಿದರಷ್ಟೇ ಸಾಕು.ಅಕ್ಷರಸ್ಥರು,ವಿದ್ಯಾವಂತರು ಎನ್ನುವವರಿಗೆ ಹೆಸರು,ಸಂಸ್ಕೃತಿ,ನಾಗರಿಕತೆ ಮತ್ತು ಸ್ವದೇಶಿಗಳಂತಹ ಭಾವನಾತ್ಮಕ ವಿಚಾರಗಳು ಕಾಡಬಹುದು,ಆದರೆ ಬಡವರು ಮತ್ತು ದುಡಿಯುವವರಿಗೆ ತಮ್ಮ ಹೊಟ್ಟೆ ಬಟ್ಟೆಗಳ ಬದುಕಿನಾಚೆಯ ಭಾವನಾತ್ಮಕ ವಿಚಾರಗಳಲ್ಲಿ ಆಸಕ್ತಿ ಇರುವುದಿಲ್ಲ.ಅನಕ್ಷರಸ್ಥರು,ಮೂಢಮತಿಗಳು ಎಂದು ನಾವು, ವಿದ್ಯಾವಂತರು ಕರೆಯುವ ಮುಗ್ಧ ಜನತೆ ನಮಗಿಂತ ಹೆಚ್ಚು ಹೃದಯವಂತರಾಗಿರುತ್ತಾರೆ,ಅಂತಃಕರಣ ಉಳ್ಳವರಾಗಿರುತ್ತಾರೆ.ಇದ್ದ ಚೂರು ರೊಟ್ಟಿಯನ್ನು ಹಂಚಿ ತಿನ್ನುವ ಜನಸಾಮಾನ್ಯರ ಹೃದಯ ಸಿರಿವಂತಿಕೆಯ ಎದುರು ಬಿಲಿಯನೇರುಗಳು,ಶತಕೋಟ್ಯಾಧಿಪತಿಗಳು ಸಣ್ಣವರಾಗಿ ಕಾಣುತ್ತಾರೆ ನನಗೆ !. ಮುಂಬೈ ಹೇಗೆ ಅದ್ಭುತ ನಗರವೋ ಹಾಗೆಯೇ ವೈರುಧ್ಯಗಳ ನಗರವೂ ಹೌದು.ದೇಶದ ಅತಿಹೆಚ್ಚು ಮಿಲಿಯನೇರುಗಳು,ಬಿಲಿಯನೇರುಗಳನ್ನುಳ್ಳ,ವಿಶ್ವದ ಎಂಟನೇ ಶ್ರೀಮಂತನಗರ ಎನ್ನುವ ಹೆಗ್ಗಳಿಕೆಯನ್ನು ಹೊಂದಿದ ಮುಂಬೈಯಲ್ಲಿ ಧಾರಾವಿಯಂತಹ ಮಹಾಕೊಳಗೇರಿಗಳಿವೆ,ಲಕ್ಷಾಂತರ ಜನರು ಹಂದಿ- ನಾಯಿಗಳಂತೆ ಬದುಕುತ್ತಿದ್ದಾರೆ ಎನ್ನುವುದು ವಿಪರ್ಯಾಸದ ,ವಿಷಾದದ ಸಂಗತಿ.ನೂರಾರು ಕೋಟಿಗಳ ವೆಚ್ಚದಲ್ಲಿ ರಮ್ಯಾದ್ಭುತ ಸಿನೆಮಾಗಳನ್ನು ನಿರ್ಮಿಸುವವರ ನಡುವೆಯೇ ಬದುಕುತ್ತಿದ್ದಾರೆ ಕೊಳೆಗೇರಿವಾಸಿಗಳು ಹಂದಿಗೂಡಿನಂತಹ  ಮನೆಗಳಲ್ಲಿ– ಎದುರು ನದಿಯಂತೆ ಹರಿಯುತ್ತಿರುವ ಕೊಳಚೆನೀರಿನ ದುರ್ಗಂಧವನ್ನು ಆಘ್ರಾಣಿಸುತ್ತ .ಕೊಳೆಗೇರಿಯ ಮಕ್ಕಳು ಚರಂಡಿ ನೀರಿನಲ್ಲಿ ಮೈತೋಯಿಸಿಕೊಂಡು ಆಟವಾಡುವುದು ಅತ್ಯಾಧುನಿಕ ನಾಗರಿಕ ಭಾರತಕ್ಕೊಂದು ಕಳಂಕ,ಕಪ್ಪುಚುಕ್ಕೆ.ಕೊಳೆಗೇರಿವಾಸಿಗಳ ಜೀವನ ಸುಧಾರಿಸದ ಹೊರತು ಭಾರತದ ಭವ್ಯೋಜ್ವಲ ವರ್ತಮಾನಕ್ಕೆ ಅರ್ಥವಿಲ್ಲ.
       ‘ ಎಂದೂ ನಿದ್ರಿಸದ ನಗರ'(The city never sleeps ),’ ಕನಸುಗಳ ನಗರ'(Dreams city), ಸಪ್ತದ್ವೀಪಗಳ ನಗರ (City of seven Islands),’ ಭಾರತದ ಹಾಲಿವುಡ್ ( Hollywood of India) ಮತ್ತು ‘ ಭಾರತದ ಪ್ರವೇಶದ್ವಾರ'( Gateway of India)ಎನ್ನುವ ಬಿರುದುಗಳಿಂದ ಬಣ್ಣಿಸಲ್ಪಡುತ್ತಿರುವ ಮುಂಬೈ ಭಾರತದ ,ವಿಶ್ವದ ಅದ್ಭುತ ನಗರ.ನೂರಾರು ಜಾತಿ,ಜನಾಂಗ,ಮತ-ಧರ್ಮಗಳ ನೆಲೆವೀಡಾದ ಬಹುಸಂಸ್ಕೃತಿಗಳ ನಗರ.ನಾಗರಿಕತೆ,ವಿಜ್ಞಾನ- ತಂತ್ರಜ್ಞಾನ,ವೈದ್ಯಕೀಯ ಕ್ಷೇತ್ರಗಳಲ್ಲಿ ಮನುಷ್ಯಸಾಧನೆಯ ಪರಮೋಚ್ಛಸಿದ್ಧಿಯನ್ನು ಪಡೆದ ನಗರ.’ ಇಲ್ಲಿ ಎಲ್ಲವೂ ಇದೆ’ ಎನ್ನುವಂತಹ ಭೂಮಿಯ ಮೇಲಣ ಸ್ವರ್ಗ ಮುಂಬೈ.ಕುಬೇರರ ನೆಲೆವೀಡು ಮುಂಬೈ.ದೇಶದ ಅತಿಹೆಚ್ಚು ಮಿಲಿಯನೇರುಗಳು,ಬಿಲಿಯನೇರುಗಳು ಮುಂಬೈಯಲ್ಲಿದ್ದಾರೆ.ವ್ಯಾಪಾರ- ವಾಣಿಜ್ಯ- ವ್ಯವಹಾರಗಳಿಗೆ ಅತಿಸೂಕ್ತನಗರವಾದ್ದರಿಂದ ಮುಂಬೈನಗರವು ಶ್ರೀಮಂತರ ಕನಸುಗಳ ನಗರವೆನ್ನಿಸಿದೆ.
     ಮುಂಬಾದೇವಿಯ ಹೆಸರಿನಿಂದ ಈ ನಗರಕ್ಕೆ ‘ ಮುಂಬೈ’ ಎನ್ನುವ ಹೆಸರು ಬಂದಿತು ಎನ್ನುವ ಐತಿಹ್ಯವಿದೆ. ಮಹಾಅಂಬಾ  ಮುಂಬೈ ಆಗಿದೆ ಎನ್ನುತ್ತಾರೆ.ಮಹಾ ಅಂಬಾ ಎಂದರೆ ಮಹಾಮಾತೆ,ದೊಡ್ಡತಾಯಿ ಎಂದರ್ಥವಾಗುತ್ತಿದ್ದು ಮಹಾ+ ಅಂಬಾ ಎನ್ನುವ ಹೆಸರು ಬರಬರುತ್ತ ಮುಂಬೈ ಆಗಿರಬಹುದು.ಗುಜರಾಥಿನ ಕಾಠೆವಾಡದಿಂದ ಬಂದು ಮುಂಬೈಯಲ್ಲಿ ನೆಲೆಕಂಡ ಕೋಲಿ ಸಮಾಜವು ತಮ್ಮೊಂದಿಗೆ ತಾವು ಆರಾಧಿಸುತ್ತಿದ್ದ ತಮ್ಮ ಮಾತೆ ಮುಂಬಾದೇವಿಯನ್ನು ಕರೆತಂದರೆಂದು ಆ ಕಾರಣದಿಂದ ಈ ನಗರವನ್ನು ಮುಂಬೈ ಎಂದು ಕರೆಯುತ್ತಾರೆ ಎನ್ನುತ್ತಾರೆ.ಆದರೆ ಇದನ್ನು ಒಪ್ಪದ ವಿದ್ವಾಂಸರು ಮುಂಬೈ ಅತ್ಯಂತ ಪ್ರಾಚೀನ ನಗರವಾಗಿತ್ತು,ಕಕಮಚ್ಚೆ,ಗಲಜುಕಜ್ಜ ಎನ್ನುವ ಹೆಸರುಗಳುಳ್ಳ ನಗರವಾಗಿದ್ದ ಇತಿಹಾಸದ ಬಗ್ಗೆ ನಮ್ಮ ಗಮನಸೆಳೆಯುತ್ತಾರೆ.ಅದೇನೇ ಇರಲಿ, ಮುಂಬೈಯು ಭಾರತದ ಅತ್ಯಂತ ಪ್ರಾಚೀನ ನಗರಗಳಲ್ಲಿ ಒಂದಾಗಿದ್ದು  ಮೌರ್ಯರು,ಶಾತವಾಹನರು,ಪಶ್ಚಿಮದ ಸತ್ರಪರು,ಅಭಿಹಾರರು,ವಾಕಟಕರು,ಕಲಚೂರಿಗಳು,ಚಾಲುಕ್ಯರು,ರಾಷ್ಟ್ರಕೂಟರು ಇವೇ ಮೊದಲಾದ ಅರಸುಮನೆತನಗಳ ಆಳ್ವಿಕೆಗೆ ಒಳಪಟ್ಟ ನಗರವಾಗಿತ್ತು.ಕ್ರಿ.ಶ 810–1260 ರವರೆಗೆ ಮುಂಬೈಯನ್ನು ಆಳಿದ ಶಿಲಾಹಾರರ  ಆಳ್ವಿಕೆಯಲ್ಲಿ ಮುಂಬೈಯ ಹಲವು ಮಹತ್ವದ ಕಟ್ಟಡಗಳು,ಸ್ಮಾರಕಗಳು ರಚನೆಗೊಂಡಿವೆ.ಭೀಮದೇವ ಅರಸನು ಇಂದಿನ ಮಹಿಮ್ ಅನ್ನು ಮಹಿಕಿಲಾಬಿ ಎನ್ನುವ ಹೆಸರಿನಲ್ಲಿ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಯಿಸಿದ್ದ.ಪಥಾರೆಪ್ರಭುಗಳು ಮುಂಬೈನಿವಾಸಿಗಳಲ್ಲಿ ನಿಖರವಾಗಿ ಗುರುತಿಸಬಹುದಾದ ಪುರಾತನ ಜನಾಂಗವಾದ ಕೋಲಿ ಸಮುದಾಯದ ಜನರನ್ನು ಸೌರಾಷ್ಟ್ರದಿಂದ ಕರೆತಂದರೆನ್ನಲಾಗುತ್ತಿದೆ.ದೆಹಲಿಯ ಸುಲ್ತಾನರಂತೆ ಇದ್ದ ಸ್ವತಂತ್ರ ಗುಜರಾತ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತ್ತು ಮುಂಬೈ  1407 ರಲ್ಲಿ. ಗುಜರಾತ ಸುಲ್ತಾನರ ಅವಧಿಯಲ್ಲಿಯೇ ವರ್ಲಿಯಲ್ಲಿ ಪ್ರಸಿದ್ಧ ಹಾಜಿ ಅಲಿ ದರ್ಗಾವು ನಿರ್ಮಾಣಗೊಂಡಿದೆ.ಪೋರ್ತಗೀಸರಿಂದ ಈಸ್ಟ್ ಇಂಡಿಯಾ ಕಂಪನಿಯ ಅಧಿಪತ್ಯಕ್ಕೆ ಒಳಪಟ್ಟ ಮುಂಬೈಯನ್ನು ಕ್ಯಾಥರೀನ್ ಬ್ರಾಗಂಜ್ ಳ ತಂದೆ  ತನ್ನ ಅಳಿಯ ಐದನೇ ಚಾರ್ಲ್ಸ್ ನಿಗೆ  ವರದಕ್ಷಿಣೆಯಾಗಿ ನೀಡಿದನಂತೆ! ಹಾರ್ನ್ ಬಿ ವೆಲ್ಲಾರ್ಡ್ ಯೋಜನೆಯಿಂದ 18 ನೇ ಶತಮಾನದಲ್ಲಿ ಮರುನವೀಕರಣಗೊಂಡ ಮುಂಬೈ ಪ್ರವರ್ಧಮಾನಕ್ಕೆ ಬರಲಾರಂಭಿಸಿತು.ಭಾರತದ ಸ್ವಾತಂತ್ರ್ಯ ಹೋರಾಟದ ಗಟ್ಟಿನೆಲೆಯಾಗಿದ್ದ ಮುಂಬೈ ದೇಶವು ಸ್ವಾತಂತ್ರ್ಯಗೊಂಡ ನಂತರ 1947 ರಲ್ಲಿ ‘ ಬಾಂಬೆ ರಾಜ್ಯ’ ವಾಗಿ ಪ್ರತ್ಯೇಕ ರಾಜ್ಯದ ಸ್ಥಾನ ಪಡೆಯಿತು.ಸಂಯುಕ್ತ ಮಹಾರಾಷ್ಟ್ರ ಆಂದೋಲನ ಎನ್ನುವ ಹೋರಾಟದ ಫಲವಾಗಿ 1960 ರಲ್ಲಿ ಮಹಾರಾಷ್ಟ್ರ ಎನ್ನುವ ರಾಜ್ಯವು ಉದಯಿಸಿ,ಮುಂಬೈ ಅದರ ರಾಜಧಾನಿ ಆಯಿತು.
     ‌ದೇಶದ ಆರ್ಥಿಕ ರಾಜಧಾನಿ,ವಾಣಿಜ್ಯ ರಾಜಧಾನಿ,ಮನೋರಂಜನೆಯ ರಾಜಧಾನಿ ಎಂದು ಹೆಸರಾಗಿರುವ ಮುಂಬೈಯಲ್ಲಿ ಭಾರತದ ಕೇಂದ್ರ ಬ್ಯಾಂಕ್ ಆದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ಕಛೇರಿ ಇರುವುದಲ್ಲದೆ ಷೇರುಮಾರುಕಟ್ಟೆಯ ಕೇಂದ್ರ ಕಛೇರಿ ಸೇರಿದಂತೆ ಹಲವು ಮಹತ್ವದ ಆರ್ಥಿಕ,ವಾಣಿಜ್ಯ ಕೇಂದ್ರಗಳಿವೆ.ವಾಣಜ್ಯ ವ್ಯಾಪಾರದ ದೃಷ್ಟಿಯಿಂದ ವಿಶ್ವದ ಪ್ರಮುಖನಗರಗಳಲ್ಲಿ ಎಂಟನೆಯದಾದ ಮುಂಬೈ ದೇಶದ ಜಿಡಿಪಿಗೆ 6.16 ರಷ್ಟು ತನ್ನ ಕೊಡುಗೆ ನೀಡಿದೆ.ದೇಶದ ಕೈಗಾರಿಕಾ ಆದಾಯದಲ್ಲಿ 25%,ಸಮುದ್ರಯಾನ ವ್ಯಾಪಾರದಲ್ಲಿ ಶೇಕಡಾ 70 ರಷ್ಟು ಕೊಡುಗೆಯನ್ನು ನೀಡುತ್ತಿದೆ ಮುಂಬೈ.ಭಾರತೀಯ ಚಲನಚಿತ್ರ ರಂಗದ ‘ ಬಾಲಿವುಡ್ ‘ ಚಿತ್ರ್ಯೋದ್ಯಮ ಚಿತ್ರರಂಗಕ್ಕೆ ತನ್ನದೆ ಆದ ವೈಶಿಷ್ಟ್ಯಪೂರ್ಣ ಕೊಡುಗೆ ನೀಡಿದೆ.
     ‌ಮುಂಬೈಯು ದೇಶದಲ್ಲಿ ದೆಹಲಿಯ ನಂತರ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಮಹಾನಗರವಾಗಿದ್ದು 2011 ರ ಜನಗಣತಿಯಂತೆ ಅಲ್ಲಿ 2 ಕೋಟಿ ಜನರು ವಾಸಿಸುತ್ತಿದ್ದಾರೆ.ಯುನೈಟೆಡ್ ನೇಶನ್ಸ್ ವರದಿಯಂತೆ ದೇಶದ ಅತಿಹೆಚ್ಚು ಜನಸಂಖ್ಯೆಯುಳ್ಳ ನಗರಗಳಲ್ಲಿ ದೆಹಲಿಯ ನಂತರ ಎರಡನೇ ಸ್ಥಾನದಲ್ಲಿರುವ ಮುಂಬೈ ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಎಂಟನೇ ಸ್ಥಾನದಲ್ಲಿದೆ.ಮುಂಬೈ ನಗರವನ್ನು 2008 ರಲ್ಲಿ ‘ ಆಲ್ಫಾಸಿಟಿ’ ಎಂದು ಗುರುತಿಸಲಾಗಿದೆ.ಬೃಹನ್ ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್ನಿನ ಆಡಳಿತಕ್ಕೆ ಒಳಪಟ್ಟ ಮುಂಬೈ ಚದುರ ಕಿಲೋಮೀಟರ್ ಗೆ 54000 ಜನಸಾಂದ್ರತೆಯನ್ನು ಉಳ್ಳ ಮಹಾನಗರವಾಗಿದೆ.ಎಲಿಫಂಟಾ ಗುಹೆಗಳು,ಛತ್ರಪತಿ ಶಿವಾಜಿ ಟರ್ಮಿನಸ್,ವಿಕ್ಟೋರಿಯನ್ ಆರ್ಟ್ ಮತ್ತು ಡೆಕೋ ಸಂಸ್ಥೆಗಳು ಯುನೆಸ್ಕೋ ಮಾನ್ಯತೆಯ ಪಾರಂಪರಿಕ ಕಟ್ಟಡಗಳಾಗಿವೆ.ಐಸಲ್ ಆಫ್ ಮುಂಬೈ,ಪರೇಲ್,ಮಝಗಾಂವ್,ಮಹಿಮ್,ಕೊಲಾಬ್,ವರ್ಲಿ ಮತ್ತು ಓಲ್ಡ್ ವುಮನ್ಸ್ ಪ್ಯಾಲೇಸ್ ಗಳು ಮುಂಬೈಯ ಸಪ್ತದ್ವೀಪಗಳು.
      ಮುಂಬೈಯಲ್ಲಿ ಮನೆಗಳನ್ನು ಕಾಣುವುದೇ ಕಷ್ಟ ಎನ್ನುವಂತೆ ಎತ್ತ ನೋಡಿದತ್ತ ಗಗನಚುಂಬಿ ಅಪಾರ್ಟ್ ಮೆಂಟುಗಳು ಎದ್ದು ನಿಂತಿವೆ.ಕಣ್ಣು ಹಾಯಿಸಿದ ಎಡೆಗಳಲ್ಲೆಲ್ಲ ಅಪಾರ್ಟ್ ಮೆಂಟ್ ಗಳೇ ಕಾಣಿಸುತ್ತಿವೆ.ಹತ್ತಾರು ಸಾವಿರ ಅಪಾರ್ಟ್ ಮೆಂಟ್ ಗಳನ್ನುಳ್ಳ ಮುಂಬೈಯನ್ನು ‘ ಅಪಾರ್ಟ್ ಮೆಂಟ್ಗಳ ನಗರ’ ಎಂದೂ ಕರೆಯಬಹುದು.ಮಿತಿಮೀರಿದ ಜನಸಂಖ್ಯೆಯಿಂದಾಗಿ ಸ್ವತಂತ್ರ ಮನೆಗಳ ನಿರ್ಮಾಣ ಕಷ್ಟಸಾಧ್ಯವಾದ್ದರಿಂದ ಮುಂಬೈವಾಸಿಗಳಿಗೆ ಅಪಾರ್ಟ್ ಮೆಂಟುಗಳಡಿ ವಾಸ ಅನಿವಾರ್ಯವಾಗಿದೆ.ಹತ್ತು,ಐವತ್ತು,ಎಂಬತ್ತು ಅಂತಸ್ತುಗಳ ಅಪಾರ್ಟ್ ಮೆಂಟುಗಳಿರುವ ಮುಂಬೈಯಲ್ಲಿ ಒಂದು ನೂರಾ ಇಪ್ಪತ್ತು ಅಂತಸ್ತುಗಳ ಅಪಾರ್ಟ್ ಮೆಂಟ್ ಒಂದು ಎದ್ದುನಿಂತಿದೆ.ಮುಂಬೈಗಳ ಬಿಲಿಯನೇರುಗಳ ಬಡಾವಣೆಯಲ್ಲಿ 1200 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿದ ಮುಖೇಶ ಅಂಬಾನಿಯ ಆ್ಯಂಟಿಲಿಯಾ ವಿಲಾಸಿ ಅರಮನೆಯೂ ಇದೆ.ಮಡದಿ ಸಾಧನಾ,ಅಳಿಯ ಸುನಿಲಕುಮಾರ ಮತ್ತು ಶಿಷ್ಯ ವರದರಾಜರಿಗೆ ಆ್ಯಂಟಿಲ್ಲಿಯಾ ಬಹುದೊಡ್ಡ ಸಾಧನೆ ಎನ್ನುವಂತೆ ಕಂಡು,ಅದರ ಬಗ್ಗೆ ಅವರು ಕುತೂಹಲಗೊಂಡರು.ಅಂಬಾನಿ,ಅದಾನಿ ಕುಟುಂಬಗಳು ಸೇರಿದಂತೆ ದೇಶದ ಶತಕೋಟ್ಯಾಧಿಪತಿಗಳು ದೇಶಕ್ಕೆ,ದೇಶವಾಸಿಗಳ ಕಲ್ಯಾಣಕ್ಕೆ ಸಲ್ಲಿಸುವ ಕೊಡುಗೆ ನಗಣ್ಯವಾದ್ದರಿಂದ ಅಂತಹ ಸಿರಿವಂತರುಗಳ ಬಗ್ಗೆ ನನ್ನಲ್ಲಿ ಆಸಕ್ತಿ ಇಲ್ಲ.ಮಡದಿ ಸಾಧನಾ , ಅಳಿಯ ಸುನಿಲಕುಮಾರ ಮತ್ತು ಶಿಷ್ಯ ವರದರಾಜ ಅವರುಗಳಿಗೆ ಒಂದು ಅದ್ಭುತವೆಂಬಂತೆ ಕಂಡ ಆ್ಯಂಟಿಲ್ಲಿಯಾ ನನ್ನಲ್ಲಿ ಕುತೂಹಲವನ್ನೇನು ಉಂಟು ಮಾಡಲಿಲ್ಲ.ತನ್ನ ನಿವಾಸದ ಮೇಲೆ ಹೆಲಿಪ್ಯಾಡ್ ಹೊಂದಿ ಕಛೇರಿಯಿಂದ ಮನೆಗೆ,ಮನೆಯಿಂದ ಕಛೇರಿಗೆ ಹೆಲಿಕಾಪ್ಟರ್ ನಲ್ಲಿ ಸಂಚರಿಸುವ ಮುಖೇಶ ಅಂಬಾನಿ ಅವರಂತಹ ಗಗನವಾಸಿಗಳ ಕಣ್ಣಿಗೆ ಭೂಗ್ರಹದ ಇದೇ ಮುಂಬೈಯ ಧಾರಾವಿಯಂತಹ ಕೊಳೆಗೇರಿವಾಸಿಗಳು ಮನುಷ್ಯರಾಗಿಯೇ ಕಾಣುವುದಿಲ್ಲ!.
           ನಾವು ತಂಗಿದ್ದ ನವಮುಂಬಯಿ ಹೋಟೆಲ್ ನಿಂದ ಹಳೆಯ ಮುಂಬೈಯಲ್ಲಿ ಪ್ರವೇಶಿಸುತ್ತಿದ್ದಂತೆ ಕಂಡು ಬರುತ್ತಿದ್ದ ಕೊಳೆಗೇರಿಗಳನ್ನು,ಅಲ್ಲಿಯ ಜನರನ್ನು ಕಾರಿನಿಂದಲೇ ನೋಡುತ್ತಿದ್ದ ನನಗೆ ಸಂಕಟವಾಗುತ್ತಿತ್ತು.ಒಂದೆಡೆ ಬೃಹನ್ ಮುಂಬಯಿ ಮಹಾನಗರ ಪಾಲಿಕೆಯು ಕೊಳಗೇರಿಗಳು ಕಾಣದಂತೆ ರಸ್ತೆಯುದ್ದಕ್ಕೂ ತಾಡಪತ್ರೆಯಂತಹ ಹೊದಿಕೆ ಕಟ್ಟಿದ್ದು ಕಂಡು ನಗುಬಂದಿತು.ವಿದೇಶಿಯರಿಗೆ ಕೊಳೆಗೇರಿಗಳು ಅಸಹ್ಯ ಹುಟ್ಟಿಸಿ,ಅವರು ಮುಂಬೈಯನ್ನು ಕೆಟ್ಟದಾಗಿ ಬಿಂಬಿಸಬಹುದು ಎನ್ನುವ ಎಣಿಕೆಯಿಂದ ಬೃಹನ್ ಮುಂಬಯಿ ಮಹಾನಗರ ಪಾಲಿಕೆಯು ಈ ಜಾಣತನ ಪ್ರದರ್ಶಿಸಿರಬಹುದಾದರೂ ಕೊಳೆಗೇರಿವಾಸಿ ಜನರ ಜೀವನ ಪುನರ್ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡದೆ ಇರುವ ರಾಜಕಾರಣಿಗಳ ಬಗ್ಗೆ ಬೇಸರ ಉಂಟಾಗುತ್ತದೆ.ಚುನಾವಣೆಗಳ ಸಂದರ್ಭದಲ್ಲಿ ನೆನಪಾಗುವ ಸ್ಲಮ್ಮುಗಳು ನಂತರದ ದಿನಗಳಲ್ಲಿ ರಾಜಕಾರಣಿಗಳ ನೆನಪಿನಲ್ಲಿ ಉಳಿಯುವುದಿಲ್ಲ.
     ‌  ರಾತ್ರಿಯ ಹೊತ್ತು ಮುಂಬೈಯನ್ನು ನೋಡುವುದೇ ಆನಂದದ ಸಂಗತಿ.ಬಗೆಬಗೆಯ ವಿದ್ಯುತ್ ದೀಪಗಳ ಬೆಳಕಿನಲ್ಲಿ ಸಿಂಗರಿಸಿಕೊಂಡ ಮುಂಬೈಯ ಬೃಹತ್ ಕಟ್ಟಡಗಳು,ಅಪಾರ್ಟ್ ಮೆಂಟುಗಳು ‘ನಕ್ಷತ್ರಲೋಕ’ವನ್ನು ಕಂಡ ಆನಂದವನ್ನುಂಟು ಮಾಡುತ್ತವೆ.ತನ್ನಲ್ಲಿ ನೆಲೆಕಂಡುಕೊಳ್ಳಲು ಬಂದವರನ್ನು ಕೈಬಿಡದೆ ಬದುಕು ಕಟ್ಟಿಕೊಳ್ಳಲು ಆಸರೆಯಾಗುವ ಮುಂಬೈ ಶ್ರೀಮಂತರ ವಿಲಾಸಭೂಮಿಯಾಗಿರುವಂತೆ ಬಡವರ ಬದುಕುಗಳಿಗೆ ಆಸರೆಯಾದ ಆಶ್ರಯಭೂಮಿಯೂ ಹೌದು.

About The Author