ಪ್ರವಾಸ ಕಥನ : ಕಡಲ ತೀರದ ನಡಿಗೆ’ (Marin drive)ಯನ್ನು ಆನಂದಿಸುತ್ತ ಮುಂಬೈಯೊಂದಿಗೆ ಮಾತನಾಡಿದ್ದು ! : ಮುಕ್ಕಣ್ಣ ಕರಿಗಾರ

ಪ್ರವಾಸ ಕಥನ : ಕಡಲ ತೀರದ ನಡಿಗೆ’ (Marin drive)ಯನ್ನು ಆನಂದಿಸುತ್ತ ಮುಂಬೈಯೊಂದಿಗೆ ಮಾತನಾಡಿದ್ದು ! 

ಮುಕ್ಕಣ್ಣ ಕರಿಗಾರ

ಸಿದ್ಧಿವಿನಾಯಕ ಮತ್ತು ಮಹಾಲಕ್ಷ್ಮೀ ದೇವಸ್ಥಾನಗಳ ದರ್ಶನ ಪಡೆದಾದ ಬಳಿಕ ‘ ಮೆರಿನ್ ಡ್ರೈವ್’ ಎಂದು ಪ್ರಸಿದ್ಧವಾದ ‘ಕಡಲತೀರದ ನಡಿಗೆ’ ಗಾಗಿ ಪ್ರಯಾಣಿಸಿದೆವು.ದಕ್ಷಿಣ ಮುಂಬೈಯ ನೇತಾಜಿ ಸುಭಾಷಚಂದ್ರ ಬೋಸ್ ರಸ್ತೆಯಲ್ಲಿರುವ ‘ ಮೆರಿನ್ ಡ್ರೈವ್’ ಮುಂಬೈಯ ಆಕರ್ಷಕ ತಾಣಗಳಲ್ಲೊಂದು,ಪ್ರವಾಸಿಗರ ನೆಚ್ಚಿನ ಸ್ಥಳ.ನಾರಿಮನ್ ಪಾಯಿಂಟ್ ಪಕ್ಕದಲ್ಲಿರುವ ‘ ಮೆರಿನ್ ಡ್ರೈವ್’ ನ ಬದಿಯಲ್ಲಿ ಶ್ರೀಮಂತರ ಮುಂಬೈ ಇದೆ.ಶ್ರೀಮಂತ ಪಾರ್ಸಿ ಕುಟುಂಬಗಳು,ಉದ್ಯಮಿಗಳು,ಕೋಟ್ಯಾಧಿಪತಿಗಳ ಬಡಾವಣೆಯಿರುವ ಮುಂಬೈಯ ಈ ಪ್ರದೇಶವು ಸದಾ ಜನಸಂದಣಿಯಿಂದ ತುಂಬಿರುತ್ತದೆ.ನಾವು ಅಲ್ಲಿಗೆ ಹೋದಾಗ ಮಧ್ಯಾಹ್ನದ ಮೂರು ಘಂಟೆ ಆಗಿದ್ದರಿಂದ ಸೂರ್ಯನ ಪ್ರಖರ ಕಿರಣಗಳು ನಮ್ಮ ಕಡಲಸೌಂದರ್ಯಾಸ್ವಾದನೆಗೆ ತುಸು ಭಂಗವನ್ನುಂಟು ಮಾಡಿದರೂ ಲೆಕ್ಕಿಸದೆ ಕಡಲತಡಿಯ ಆನಂದವನ್ನು ಆಸ್ವಾದಿಸಿದೆವು.’ ಸಿ’ ಶೇಪ್ ನಲ್ಲಿರುವ ಮೆರಿನ್ ಡ್ರೈವ್ 3.6 ಕಿಲೋಮೀಟರ್ಗಳಷ್ಟು ಉದ್ದವಿದೆ.ಪಲ್ಲೋಂಜಿ ಮಿಸ್ತ್ರಿ ಇದನ್ನು ನಿರ್ಮಿಸಿದ್ದಾರೆ.ಆರು ಲೇನ್ ಗಳ ಕಾಂಕ್ರಿಟ್ ರಸ್ತೆಯು ಮುಂಬೈಯ ಚಿತ್ರನಟರುಗಳು,ಉದ್ಯಮಿಗಳು,ಕ್ರೀಡಾಪಟುಗಳ ನೆಚ್ಚಿನ ವಿಹಾರತಾಣ.ಬೆಳಿಗ್ಗೆ ವಾಯುವಿಹಾರಕ್ಕೆಂದು ಸೆಲೆಬ್ರಿಟಿಗಳು ಇಲ್ಲಿಗೆ ಬರುತ್ತಾರಂತೆ.ವಿದೇಶಿ ಪ್ರವಾಸಿಗರಿಗೆ ಇದು ಬಹಳ ಪ್ರಿಯಸ್ಥಳ.ಬಹಳಷ್ಟು ಹಿಂದೀ ಚಿತ್ರಗಳ ಶೂಟಿಂಗ್ ನಡೆದ ಸ್ಥಳವೂ ಇದು.

ಕಡಲನ್ನು ಕಂಡೊಡನೆ ನಾನು ಭಾವುಕನಾದೆ.ವಿಂಧ್ಯಾ ಮತ್ತು ನಿತ್ಯಾರಿಗಂತೂ ಇದು ‘ಬಿಟ್ಟುಬಾರದ ಸ್ಥಳ’ ವಾಗಿಯೇ ಕಂಡು ಅವರು ಆಡಿ, ಕುಣಿದು ಆನಂದಿಸತೊಡಗಿದರು.ಕಿರಿಯ ಮಗಳು ನಿತ್ಯಾಳಂತೂ ಕಾಂಕ್ರಿಟ್ ರಸ್ತೆಯ ಮೇಲೆ ತನ್ನ ಪುಟ್ಟ ಹೆಜ್ಜೆಗಳನ್ನಿಟ್ಟು ಓಡಿದ್ದೇ ಓಡಿದ್ದು.ಅವಳ ಅಣ್ಣ ವರದರಾಜ ಅವಳೊಂದಿಗೆ ರಸ್ತೆಯಲ್ಲಿ ಆಟವಾಡಿ ಆನಂದಿಸುತ್ತಿದ್ದ.ಸಾಧನಾ ಮತ್ತು ಸುನಿಲ್ ವಿಂಧ್ಯಾಳೊಂದಿಗೆ ವಿಹರಿಸುತ್ತಿದ್ದರು.ನನ್ನ ಕವಿಹೃದಯ ಕಡಲ ದರ್ಶನದಿಂದ ಸ್ಫೂರ್ತಿಗೊಂಡು ನಾನು ಪರಿವಾರದಿಂದ ಸ್ವಲ್ಪ ಹೊತ್ತು ಬಿಡುಗಡೆಗೊಂಡು ಕಡಲ ಸೌಂದರ್ಯವನ್ನು ಆನಂದಿಸತೊಡಗಿದೆ.ಅಲ್ಲಿ ಬಹಳಷ್ಟು ಜನ ತಿರುಗಾಡುತ್ತ ಟೀ,ಕಾಫಿ ಮಾರುತ್ತಿದ್ದರಿಂದ ಹತ್ತು ಹದಿನೈದು ನಿಮಿಷಗಳಿಗೊಮ್ಮೆ ಟೀ,ಕಾಫಿ ಕುಡಿಯುತ್ತ ಕಡಲ ಅಗಾಧತೆಯನ್ನು ಕಣ್ಣುತುಂಬಿಕೊಳ್ಳುತ್ತಿದ್ದೆ.ಸಮುದ್ರ ಎಂದರೆ ನನಗೆ ತುಂಬ ಪ್ರೀತಿ.ಹಿಂದೆ ಕಾರವಾರದಲ್ಲಿದ್ದ ಮೂರುವರೆವರ್ಷಗಳ ಕಾಲ ಬೆಳಿಗ್ಗೆ ಸಂಜೆ ಕಡಲತಟದಲ್ಲಿ ವಿಹರಿಸಿ ಕಡಲ ಸೊಬಗು- ಸೌಂದರ್ಯವನ್ನು ಆನಂದಿಸುತ್ತಿದ್ದೆ.

ಕಾರವಾರದ ಕಡಲು ನನ್ನ ಬದುಕನ್ನು ಉದ್ದೀಪ್ತಗೊಳಿಸಿದ,ಭಾವೋತ್ಕರ್ಷಗೊಳಿಸಿದ ಕಡಲು.ಕಾರವಾರದಲ್ಲಿದ್ದಾಗ ನನ್ನ ವ್ಯಕ್ತಿತ್ವ ಪರಿಪುಷ್ಟಗೊಂಡಿತು.ಆಧ್ಯಾತ್ಮಿಕ ಮತ್ತು ಸಾಹಿತ್ಯಕ ಸಾಧನೆಗಳಲ್ಲಿ ನಾನು ಮಹತ್ವದ ಸಿದ್ಧಿಸಂಪಾದಿಸಿದ್ದು ಕಾರವಾರದ ಕಡಲತಟದಲ್ಲಿ.ಕನ್ನಡ ಕಾವ್ಯಲೋಕದ ನವೋದಯ,ನವ್ಯ,ಪ್ರಗತಿಶೀಲ,ದಲಿತ ಮತ್ತು ಬಂಡಾಯ ಕಾವ್ಯ ಪ್ರಕಾರಗಳಂತೆ ನಾನು ನನ್ನದೇ ಆದ ಸ್ವಂತ ಕಾವ್ಯಮಾರ್ಗ ‘ ಕಲ್ಯಾಣಕಾವ್ಯ’ ವನ್ನು ಕಂಡುಕೊಂಡಿದ್ದು ಕಾರವಾರದ ಕಡಲಸ್ಫೂರ್ತಿಯಲ್ಲಿಯೆ.’ ಮಗನಿಗೆ ಮಾರ್ಗೋಪದೇಶ’ ಎನ್ನುವ ಕವನ ಸಂಕಲನದ ಮೂಲಕ ಪ್ರಕಟಗೊಂಡಿತ್ತು ನನ್ನ’ ಕಲ್ಯಾಣಕಾವ್ಯ’ ಮಾರ್ಗ.’ ಕಲ್ಯಾಣರಾಜ್ಯ’ ಎನ್ನುವ ಮಾಸಪತ್ರಿಕೆಯನ್ನು ಹಾಗೂ ‘ ಮುಕ್ಕಣ್ಣ’ ಎನ್ನುವ ವಾರಪತ್ರಿಕೆಯನ್ನು ಕಾರವಾರದ ಮಾರುತಿಗಲ್ಲಿಯಲ್ಲಿದ್ದ ‘ ಜನತಾ ಕಲ್ಯಾಣ ಪರಿಷತ್ತು’ ಎನ್ನುವ ಕಛೇರಿಯಿಂದ ಪ್ರಕಟಿಸುತ್ತಿದ್ದೆ.ಇಂದು ಕಾರವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ರಾಮಾ ನಾಯ್ಕ್ ನನ್ನ ಆತ್ಮೀಯ ಸ್ನೇಹಿತರಾಗಿದ್ದು ನನ್ನ ಪುಸ್ತಕಗಳು ಮತ್ತು ಪತ್ರಿಕೆಗಳ ಪ್ರಕಟಣೆಯ ಹೊಣೆಹೊತ್ತು,ಸಮರ್ಥವಾಗಿ ನಿರ್ವಹಿಸುತ್ತಿದ್ದರು.ಅವರ ಸಹೋದರ ಹಿರಿಯ ಸಾಹಿತಿ ವಿಷ್ಣು ನಾಯ್ಕ್ ಅವರೊಂದಿಗೆ ಆತ್ಮೀಯ ಸಂಪರ್ಕವು ಏರ್ಪಟ್ಟಿತ್ತು,ಹಿರಿಯಕವಿ ಬಿ.ಎ.ಸನದಿಯವರೊಂದಿಗೆ ಸಲುಗೆಯ ಸಂಬಂಧ ಉಂಟಾಗಿತ್ತು.’ಕನ್ನಡದ ಸಮನ್ವಯ ಕವಿ ‘ಜಿ.ಎಸ್.ಶಿವರುದ್ರಪ್ಪನವರ ಪರಿಚಯ ಉಂಟಾಗಿದ್ದು ನಾನು ಕಾರವಾರದಲ್ಲಿದ್ದಾಗಲೆ.ನನ್ನ ಆರೇಳು ಪುಸ್ತಕಗಳು ಪ್ರಕಟಗೊಂಡವು ಕಾರವಾರದಲ್ಲಿ.ಕಾರವಾರದ ಕಡಲು ನನಗೆ ಸಿದ್ಧಿ- ಪ್ರಸಿದ್ಧಿಗಳನ್ನಿತ್ತ ಜಲಧಿ,ನನ್ನ ಆಧ್ಯಾತ್ಮಿಕ ಸಾಧನೆಯ ಶಿಖರಶೃಂಗದ ಪಶ್ಚಿಮಾಂಬುಧಿ.ನಾನು’ ಮಹಾಶೈವ ಧರ್ಮ’ ಎನ್ನುವ ಸ್ವತಂತ್ರ ಧರ್ಮ ಒಂದನ್ನು ಸ್ಥಾಪಿಸಿದ್ದು ಕೂಡ ಕಾರವಾರದಲ್ಲಿಯೆ.ಗೋಕರ್ಣದ ಮಹಾಬಲ ಶಿವ ನನ್ನನ್ನು ಕೈಲಾಸದೆತ್ತರಕ್ಕೆ ಕರೆದೊಯ್ದು ಶಿವತತ್ತ್ವದರ್ಶನ ಮಾಡಿಸಿದ.’ ಮಹಾಬಲಶಿವನ ಆತ್ಮಶ್ರೀ’ ಎನ್ನುವ ಇಪ್ಪತ್ತೈದು ವಚನಗಳ ಸಂಕಲನವು ಮಹಾಬಲನ ಸನ್ನಿಧಿಯಲ್ಲಿ ರಚಿಸಲ್ಪಟ್ಟಿತು.ಕಾರವಾರದ ಕಡಲು ನನಗೆ ಅಮೃತಕಡಲು,ನನ್ನನ್ನು ರೂಪಿಸಿದ ಬಾಳ್ಗಡಲು.ಅದೇ ಪಶ್ಚಿಮಾಂಬುಧಿಯ ತುಟ್ಟತುದಿಯ ಮುಂಬೈಯಲ್ಲಿಂದು ಕಡಲಸೌಂದರ್ಯವನ್ನು ಆನಂದಿಸುತ್ತಿದ್ದೆ.

ಮುಂಬೈ ಇಂದು ದೇಶದ ಅತಿಹೆಚ್ಚು ಜನಸಂಖ್ಯೆಯ,ಜನಸಾಂದ್ರತೆಯ, ಭಾರತದ ಅತ್ಯಂತ ಶ್ರೀಮಂತನಗರ.ಕಡಲತಟದಲ್ಲಿ ಕುಳಿತು ಧ್ಯಾನಾಸಕ್ತನಾದ ನನಗೆ ಮನುಷ್ಯನಾಗರಿಕತೆಯ ವಿಕಾಸದಲ್ಲಿ ಸಣ್ಣಹಳ್ಳಿಯಾಗಿದ್ದ ಈ ನೆಲ ಇಂದು ಮೆಟ್ರೋಸಿಟಿಯಾಗಿ ಬೆಳೆದುಬಂದ ಮುಂಬೈ- ಭಾರತದ ಇತಿಹಾಸ ದರ್ಶನವಾಯಿತು.ಮುಂಬೈಯ ಎಲಿಫೆಂಟಾ ಗುಹೆಗಳಲ್ಲಿ ಮನುಷ್ಯ ನಾಗರಿಕತೆಯ ಕುರುಹುಗಳನ್ನು ಗುರುತಿಸಬಹುದು.ಸಾವಿರಾರು ವರ್ಷಗಳ ಹಿಂದೆ ಭಾರತೀಯರಾದ ನಮ್ಮ ಪೂರ್ವಜರು ಈ ಕಡಲತಟದಿ ನೆಲೆ ಕಂಡು ತಮ್ಮ ಜೀವನವನ್ನು ರೂಪಿಸಿಕೊಂಡು,ಭಾರತದ ಚರಿತ್ರೆಯನ್ನು ರೂಪಿಸಿದರು.ಆಗ ಕುಗ್ರಾಮವಾಗಿದ್ದ,ಸುತ್ತ ಬೆಟ್ಟ ಪರ್ವತ ಕಡಲುಗಳಿಂದ ಆವೃತ್ತವಾಗಿದ್ದ ಮುಂಬೈ ಆದಿಮಾನವರ ಆಹಾರಾನ್ವೇಷಣೆಯ,ಬಾಳುಗಳನ್ನು ಕಟ್ಟಿಕೊಳ್ಳುವ ಮನುಷ್ಯನೆಲೆಯಾಗಿತ್ತು.ಪ್ರಕೃತಿಯೊಂದಿಗೆ ಆನಂದಿಸುತ್ತ ಬದುಕುತ್ತಿದ್ದ ಮನುಷ್ಯ ಅಂದು ಈ ಸಮುದ್ರ ತಟದಲ್ಲಿ.ಮುಂದೆ ವರ್ಷಗಳುರುಳಿ,ಕಾಲ ಮರಳಿ ಮರಳಿ ಇಂದಿನ ನಾಗರಿಕ ಪ್ರಪಂಚದ ಅದ್ಭುತನಗರವಾಗಿದೆ ಮುಂಬೈ.ಈ ಕಡಲತಟದಲ್ಲಿಯೇ ಪೂರ್ವಜರ ಹೆಜ್ಜೆಗುರುತುಗಳಿವೆ,ನಮ್ಮ ಪೂರ್ವಿಕರ ಕನಸು- ಕನವರಿಕೆ,ಆಸೆ- ಆಕಾಂಕ್ಷೆಗಳಿಗೆ ಸಾಕ್ಷಿಯಾಗಿದೆ ಈ ಕಡಲು.ಈ ಕಡಲ ಅಲೆಗಳಲ್ಲಿ ಭೋರ್ಗರೆಯುತ್ತಿವೆ ನಮ್ಮ ಪೂರ್ವಿಕರ ದುಃಖ,ಸಂತಸದ ಭಾವತರಂಗಗಳು.

ಮುಂಬೈ ಎನ್ನುವ ದೇಶದ ಮಹಾನಗರವನ್ನು ರೂಪಿಸಿದ ಅರಬ್ಬಿಸಮುದ್ರವು ಮುಂಬೈಯ ಇತಿಹಾಸವನ್ನು ತನ್ನ ಒಡಲಲ್ಲಿರಿಸಿಕೊಂಡಿದೆ.ಇಲ್ಲಿ ಬಾಳಿ ಬದುಕಿದವರ ನೋವು,ನಿರಾಶೆ,ಭಾವ- ಬಂಧುತ್ವಗಳಿಗೆಲ್ಲ ಸಾಕ್ಷಿಯಾಗಿರುವ ಮುಂಬೈಯ ಕಡಲು ಮನುಷ್ಯರ ಒಳಿತನ್ನು ಹಾರೈಸಿ,ಅಲೆಗಳನ್ನೆಬ್ಬಿಸುತ್ತ ಶುಭಸೂಚಿಸುತ್ತಿದೆ.ಕಡಲ ಅಲೆಗಳೆದ್ದು ಭೋರ್ಗರೆದಂತೆ ವಿಕಾಸವಾಗುತ್ತ ನಡೆದಿದೆ ಮುಂಬೈ.ಮನುಷ್ಯರ ಸ್ವಾರ್ಥ- ದುರಾಸೆ,ಕುಹಕ- ಕುತ್ಸಿತಗಳನ್ನು ಕಂಡಿರುವ ಕಡಲು ತನ್ನ ಒಡಲಿನಿಂದ ಮನುಷ್ಯ ಲೋಕದ ಅದ್ಭುತವೆನ್ನಿಸುವ ವ್ಯಕ್ತಿತ್ವಗಳನ್ನು ಅರಳಿಸಿದೆ ತನ್ನಮೈಯ ಉಸುಕಿನಲ್ಲಿ.ಸಮುದ್ರಮಥನದ ಸಮಯದಲ್ಲಿ ಸಾಗರದಾಳದಿಂದ ಮೇಲೆದ್ದು ಬಂದ ಲಕ್ಷ್ಮಿದೇವಿಯು ಮುಂಬೈಯಲ್ಲಿಯೇ ನೆಲೆಸಿದ್ದಾಳೆ ಎಂಬಂತೆ ಸಂಪತ್ತು ತುಂಬಿ ತುಳುಕುತ್ತಿದೆ ಮುಂಬೈ ಮಹಾನಗರದಲ್ಲಿ.ಮುಂಬೈಯ ಸಿರಿವಂತರ ಸ್ವಾರ್ಥ- ದಾಹಕ್ಕೆ ಕುರುಹಾಗಿ ಸಾವಿರಾರು ಕಾರ್ಖಾನೆಗಳು,ಹೋಟೆಲ್ ಗಳು,ರೆಸ್ಟಾರೆಂಟುಗಳು,ಲಾಡ್ಜ್ ಗಳು ಹೊರಚೆಲ್ಲುವ ಕೊಳೆನೀರನ್ನು ತನ್ನ ಒಡಲಲ್ಲಿ ಸೇರಿಸಿಕೊಂಡರೂ ಬೇಸರಿಸದೆ ಮುಂಬೈ ವಾಸಿಗಳ ಹಿತವನ್ನೇ ಬಯಸುತ್ತಿರುವ ಕಡಲು ಮುಂಬೈಯ ಭಾಗ್ಯದೇವಿ,ತವನಿಧಿ.ಮಿಲಿಯನೇರ್ಗಳು,ಬಿಲಿಯನೇರುಗಳ ಆನಂದದ ವಿಹಾರಧಾಮವಾಗಿರುವಂತೆ ಹಂದಿ ನಾಯಿಗಳಂತೆ ಕೊಳೆಗೇರಿಗಳಲ್ಲಿ ಬದುಕುತ್ತಿರುವ ಲಕ್ಷಾಂತರ ಜನರ ನೋವು- ನಿಟ್ಟುಸಿರುಗಳನ್ನೂ ಆಲಿಸುತ್ತಿದೆ ಈ ಕಡಲು.ಮುಂಬೈಯ ಕೊಳಚೆ ನೀರನ್ನು ತನ್ನ ಗರ್ಭಕ್ಕೆ ಸೇರಿಸಿಕೊಳ್ಳುವ ಕಡಲು ಎಲ್ಲವನ್ನು ಸಮಭಾವದಿಂದ ಕಾಣುತ್ತಿರುವ ಸ್ಥಿತಪ್ರಜ್ಞಯೋಗಿಯಾಗಿರುವುದರಿಂದ ನಿರ್ಲಿಪ್ತಭಾವದಿಂದ ವೀಕ್ಷಿಸುತ್ತಿದೆ ಮುಂಬೈ ಜನರ ನಡೆ- ನುಡಿಗಳನ್ನು,ನಿರುದ್ವಿಗ್ನ ಭಾವದಿಂದ ನಿರೀಕ್ಷಿಸುತ್ತಿದೆ ತನ್ನ ತಟದಲ್ಲಿ ವಿಹರಿಸುವ ಯಾತ್ರಿಕರು,ವಿದೇಶಿಗರ ಆನಂದೋನ್ಮಾದಗಳನ್ನು.

ಮುಂಬೈಯ ಮೆರಿನ ಡ್ರೈವ್ ಜನರಿಗೆ ಅವರವರ ಭಾವಕ್ಕೆ ತಕ್ಕಂತೆ ಕಾಣುವ ಭೂಮಿಯ ಮೇಲಣ ಸ್ವರ್ಗ.ಪ್ರೇಮಿಗಳು,ನವದಂಪತಿಗಳ ಪ್ರೇಮೋತ್ತೇಜಕ ತಾಣವಾದರೆ,ಕವಿ- ಕಲಾವಿದರುಗಳ ಕನಸಿನ ಲೋಕ.ವ್ಯಾಪಾರೋದ್ಯಮಿಗಳ ವಿಹಾರಧಾಮ.ಬಡವರು ಬದುಕುಗಳನ್ನು ಕಟ್ಟಿಕೊಳ್ಳುವ ಆಶ್ರಯತಾಣ.ವೃದ್ಧರು,ಅಶಕ್ತರು,ಪರಿತ್ಯಕ್ತರುಗಳ ಬಾಳುಗಳಿಗೆ ಶಾಂತಿಯನ್ನು ಕರುಣಿಸಿ ಬಾಳಿನ ಸಾರ್ಥಕತೆಯನ್ನು ಕಲಿಸುವ ಸ್ಥಳ.ಯೋಗಿಗಳು,ಅನುಭಾವಿಗಳಿಗೆ ಪರಮಾತ್ಮನ ದರ್ಶನ ಮಾಡಿಸುವ ಆನಂದಿಜಲಧಿ.

ಸುಮಾರು ಎರಡು ಘಂಟೆಗಳ ಕಾಲ ಮುಂಬೈ ಕಡಲತಟದ ಆನಂದವನ್ನು ಸವಿದು ಹೋಟೆಲ್ ನತ್ತ ಹೊರಡಲನುವಾದೆವು.ವಿಂಧ್ಯಾ ಮತ್ತು ನಿತ್ಯಾ ಇಬ್ಬರೂ ಇಲ್ಲಿಂದ ಬಿಟ್ಟು ಬರಲು ಸಿದ್ಧರಿರದೆ ಇಲ್ಲಿಯೇ ಇರುವುದಾಗಿ ಹಠ ಮಾಡುತ್ತಿದ್ದರು.ಅವರಿಬ್ಬರನ್ನು ಹೊತ್ತು ಕಾರಿನಲ್ಲಿ ಕೂಡಿಸುವುದರಲ್ಲಿ ಸುಸ್ತಾಗಿದ್ದರು ವರದರಾಜ ಮತ್ತು ಸುನಿಲ್.ಕಡಲನ್ನು ಕಣ್ಣುಗಳಲ್ಲಿಟ್ಟುಕೊಂಡ ನಾನು ಭಾವಲೋಕದಲ್ಲಿ ಅಮೃತಮಥನ ಗೈಯುತ್ತ ಗುಣುಗುಟ್ಟುತ್ತಿದ್ದೆ.ಕವಿರಾಯರಿಗೆ ಮೂಡ್ ಬಂದಿದೆ ಎಂದಳು ಮಡದಿ ಸಾಧನಾ.ಉಲ್ಲಸಿತ ಮನಸ್ಸುಗಳೊಂದಿಗೆ ಎಲ್ಲರೂ ಹೊಟೆಲ್ ಹಿಲ್ ವಿವ್ಯೂನತ್ತ ಪಯಣಿಸಿದೆವು.

About The Author