ಪ್ರವಾಸ ಕಥನ : ಭಾರತದ ಪ್ರವೇಶ ದ್ವಾರ’ ಕ್ಕೆ ಭೇಟಿ : ಮುಕ್ಕಣ್ಣ ಕರಿಗಾರ

ಪ್ರವಾಸ ಕಥನ : ಭಾರತದ ಪ್ರವೇಶ ದ್ವಾರ’ ಕ್ಕೆ ಭೇಟಿ :

ಮುಕ್ಕಣ್ಣ ಕರಿಗಾರ

ಮುಂಬೈಯಲ್ಲಿ ಮೊದಲ ದಿನ ಅಳಿಯ ಅನಿಲಕುಮಾರನಿಗೆ ವಧು ನೋಡಲೆಂದು ಜಗನ್ನಾಥ ಪೂಜಾರಿಯರ ನವ ಮುಂಬಯಿಯ ಟ್ರೈಸಿಟಿ ಅಪಾರ್ಟ್ ಮೆಂಟಿನ ಲ್ಲಿರುವ ಅವರ ನಿವಾಸಕ್ಕೆ ತೆರಳಿ ಕನ್ಯೆ ನಿಶ್ಚಯಿಸುವ ಕಾರಣ ಮುಗಿಸಿ,ಊಟ ಮುಗಿಸುವ ಹೊತ್ತಿಗೆ ಮಧ್ಯಾಹ್ನವಾಗಿತ್ತು.ಹಾಗಾಗಿ ಮೊದಲ ದಿನ’ ಗೇಟ್ ವೇ ಆಫ್ ಇಂಡಿಯಾ’ ವನ್ನು ಮಾತ್ರ ನೋಡಲು ಸಾಧ್ಯವಾಗಬಹುದಿತ್ತಾದ್ದರಿಂದ ಜಗನ್ನಾಥ ಪೂಜಾರಿಯವರ ಮನೆಯಿಂದ ಹೋಟೆಲ್ ಹಿಲ್ ವಿವ್ಯೂಗೆ ಮರಳಿ ಸಂಜೆ ಗೇಟ್ ವೇ ಆಫ್ ಇಂಡಿಯಾಕ್ಕೆ ತೆರಳಿದೆವು.

ನಾನು ,ಮಡದಿ ಸಾಧನಾ,ಶಿಷ್ಯ ವರದರಾಜ,ಅಳಿಯ ಸುನಿಲಕುಮಾರ ಮತ್ತು ಪುತ್ರಿಯರಾದ ವಿಂಧ್ಯಾ ಹಾಗೂ ನಿತ್ಯಾರೊಡನೆ ಗೇಟ್ ವೇ ಆಫ್ ಇಂಡಿಯಾದತ್ತ ಪಯಣಿಸಿದೆವು.ಸಂಜೆಯ ಆರು ಘಂಟೆಯ ಹೊತ್ತಿಗೆ ಈ ‘ ವಿಜಯ ಸ್ಮಾರಕ’ ದ ಬಳಿ ಇದ್ದೆವು. ‘ ಗೇಟ್ ವೇ ಆಫ್ ಇಂಡಿಯಾ’ ವು ದಕ್ಷಿಣ ಮುಂಬೈಯ ಛತ್ರಪತಿ ಶಿವಾಜಿ ಮಾರ್ಗದ ಕೊನೆಯ ಭಾಗದಲ್ಲಿ ಅಪೋಲೊ ಬಂದರಿನ ಕೊಲಾಬ್ ಪ್ರದೇಶದ ಅರಬ್ಬಿ ಸಮುದ್ರದ ಒಂದು ಶೃಂಗತುದಿಯಲ್ಲಿದೆ.ಹೋಟೆಲ್ ತಾಜಮಹಲ್ ಪ್ಯಾಲೇಸ್ ಮತ್ತು ಟವರ್ ಹೋಟೆಲ್ ಗಳ ಎದುರುಗಡೆ ಇದೆ ಈ ನಯನಮನೋಹರ ಪ್ರವೇಶದ್ವಾರ.ನಾವು ಅಲ್ಲಿಗೆ ತಲುಪುವ ಹೊತ್ತಿಗೆ ಕತ್ತಲಾಗಿತ್ತು.ವಿದ್ಯುತ್ ದೀಪಗಳು ಮತ್ತು ಅಲಂಕಾರಿಕ ದೀಪಗಳ ಬೆಳಗಿನಲ್ಲಿ ಗೇಟ್ ವೇ ಇಂಡಿಯಾ ಮಿರಮಿರನೆ ಮಿರುಗುತ್ತಿತ್ತು.ಎದುರಿಗಿದ್ದ ತಾಜಮಹಲ್ ಪ್ಯಾಲೇಸ್ ಹೋಟೆಲ್ ಸಾಲು ಸಾಲು ದೀಪಗಳ ಬೆಳಕಿನಲ್ಲಿ ಭವ್ಯವಾಗಿ ಕಾಣಿಸುತ್ತಿತ್ತು.

ಗೇಟ್ ವೇ ಆಫ್ ಇಂಡಿಯಾದ ಎದುರು ನೂರಾರು ಜನ ಪ್ರವಾಸಿಗರು ಫೋಟೋ ತೆಗೆಯಿಸಿಕೊಳ್ಳುತ್ತಿದ್ದರು.ನಾನು,ಮಡದಿ ಸಾಧನಾ,ವರದರಾಜ,ಸುನಿಲ್ ಮತ್ತು ಮಕ್ಕಳಿಬ್ಬರೊಂದಿಗೆ ಹಲವು ಫೋಟೋಗಳನ್ನು ತೆಗೆಯಿಸಿಕೊಂಡೆ.ಮೋದಿ ಎನ್ನುವ ವೃತ್ತಿಪರ ಫೋಟೋಗ್ರಾಫರ್ ನಮ್ಮ ಫೋಟೋಗಳನ್ನು ಕ್ಲಿಕ್ಕಿಸಿದ.

ಗೇಟ್ ವೇ ಆಫ್ ಇಂಡಿಯಾ ಸ್ಮಾರಕ ಕಮಾನು ಆಗಿದ್ದು ಬ್ರಿಟಿಷ್ ಸಾಮ್ರಾಟ ಐದನೇ ಜಾರ್ಜ್ ತನ್ನ ಮಡದಿ ರಾಣಿ ಮೇರಿಯೊಂದಿಗೆ ಭಾರತಕ್ಕೆ ಭೇಟಿ ನೀಡಿದ್ದ ನೆನಪಿಗಾಗಿ ಇದನ್ನು ಕಟ್ಟಲಾಗಿದೆ.ಬ್ರಿಟಿಷ್ ದೊರೆ ಐದನೇ ಜಾರ್ಜ್ ಭಾರತಕ್ಕೆ ಭೇಟಿ ನೀಡಿದ್ದ ಇಂಗ್ಲಂಡಿನ ಮೊದಲ ದೊರೆ.ಆತ ಪತ್ನೀ ಸಮೇತನಾಗಿ 1911 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ತನ್ನ ಸಿಂಹಾಸನಾರೂಢ ಕಾರ್ಯಕ್ರಮದ ಆಚರಣೆಯ ಅಂಗವಾಗಿ.ಇಂಡೋ ಸಾರ್ಸೆನಿಕ್ ಮಾದರಿಯ ಈ ರಮಣೀಯ ಸ್ವಾಗತಕಮಾನು 1913 ರ ಮಾರ್ಚ್ 31 ರಂದು ಪ್ರಾರಂಭಗೊಂಡು 1924 ರಲ್ಲಿ ಮುಕ್ತಾಯಗೊಂಡಿದೆ.ಗೇಟ್ ವೇ ಆಫ್ ಇಂಡಿಯಾವು 1924 ರ ಡಿಸೆಂಬರ್ 04 ರಂದು ಉದ್ಘಾಟನೆಗೊಂಡಿದೆ.ಈ ಸ್ಮಾರಕ ನಿರ್ಮಾಣಕ್ಕೆ ತಗುಲಿದ ವೆಚ್ಚ 21 ಲಕ್ಷ ರೂಪಾಯಿಗಳು.26 ಮೀಟರ್ ( 85 ಅಡಿ) 15 ಮೀಟರ್ ಸುತ್ತಳತೆಯ ಈ ಸ್ಮಾರಕದ ಶಿಲ್ಪಿ ಜಾರ್ಜ್ ವಿಟೆಟ್.ಗ್ಯಾಮನ್ ಇಂಡಿಯಾ ಸಂಸ್ಥೆಯು ಗೇಟ್ ವೇ ಆಫ್ ಇಂಡಿಯಾ ಸ್ಮಾರಕವನ್ನು ನಿರ್ಮಿಸಿದ ಸಂಸ್ಥೆ.ಭಾರತದ ಸಾಂಕೇತಿಕ ಸ್ಮಾರಕದ್ವಾರವಾದ ಗೇಟ್ ವೇ ಆಫ್ ಇಂಡಿಯಾವು 2003 ರಲ್ಲಿ ಭಯೋತ್ಪಾದಕರ ದಾಳಿಗೆ ತುತ್ತಾಗಿತ್ತು.ಟ್ಯಾಕ್ಸಿ ಒಂದರಲ್ಲಿ ಬಾಂಬ್ ಸ್ಫೋಟಗೊಂಡಿತ್ತು.ಭಯೋತ್ಪಾದಕರು 2008 ರಲ್ಲಿ ತಾಜಮಹಲ್ ಪ್ಯಾಲೇಸ್ ಹೋಟೆಲ್ ನಲ್ಲಿ ನುಗ್ಗಿದ್ದರು.

ತಾಜಮಹಲ್ ಪ್ಯಾಲೇಸ್ ಹೋಟೆಲ್

ಭಾರತದ ಮೊದಲ ‘ ವಿಲಾಸಿ ಹೋಟೆಲ್ ( Luxury hotel ) ಎನ್ನುವ ಖ್ಯಾತಿಯ ಹೋಟೆಲ್ ತಾಜಮಹಲ್ ಪ್ಯಾಲೇಸ್ ಗೇಟ್ ಆಫ್ ಇಂಡಿಯಾದ ಎದುರು ಇರುವ ಅರಮನೆಯೋಪಾದಿಯ ರಮ್ಯಾದ್ಭುತ ಕಟ್ಟಡ.ಅಷ್ಟೇ ದುಬಾರಿ ವೆಚ್ಚದ ಹೋಟೆಲ್ ಕೂಡ .‌ದೇಶದ ಪ್ರಸಿದ್ಧ ಹೋಟೆಲ್ಗಳಲ್ಲಿ ಒಂದಾಗಿರುವ 2.6 ಎಕರೆ ವಿಸ್ತೀರ್ಣದ ತಾಜಮಹಲ್ ಪ್ಯಾಲೇಸ್ ಹೋಟೆಲ್ ಒದಗಿಸುವ ಸೇವೆಗಳು,ಸುಸಜ್ಜಿತ ಅತ್ಯಾಧುನಿಕ ಸೌಲಭ್ಯಗಳು ಮತ್ತು ರೂಮ್ ಬಾಯ್ ಗಳು ಸೇರಿದಂತೆ ಹೋಟೆಲ್ ಸಿಬ್ಬಂದಿಯವರ ಸೌಜನ್ಯದ ವರ್ತನೆಯಿಂದಾಗಿ ಹೆಸರು ಪಡೆದಿದೆ.

ದೋಣಿ ವಿಹಾರ

ಗೇಟ್ ವೇ ಆಫ್ ಇಂಡಿಯಾದ ಬಳಿಯೇ ಬೋಟಿಂಗ್ ಅಥವಾ ದೋಣಿವಿಹಾರ ಮಾಡಬಹುದು. ಒಂದು ನೂರು ಜನ ಪ್ರವಾಸಿಗರನ್ನು ಅರ್ಧಘಂಟೆಯವರೆಗೆ ಸಮುದ್ರವಿಹಾರ ಮಾಡಿಸುವ ದೋಣಿ ವಿಹಾರಕ್ಕೆ ಪ್ರತಿಯೊಬ್ಬರಿಗೆ ಒಂದು ನೂರು ರೂಪಾಯಿಗಳ ಟಿಕೆಟ್ ದರ ನಿಗದಿಪಡಿಸಲಾಗಿದೆ.ಸಂಜೆ 6.35 ರಿಂದ 7.05 ನಿಮಿಷದ ಅರ್ಧಗಂಟೆಯ ಅವಧಿಯಲ್ಲಿ ನಾವು ದೋಣಿವಿಹಾರದ ಆನಂದವನ್ನು ಅನುಭವಿಸಿದೆವು.ಮಗಳು ವಿಂಧ್ಯಾಳಂತೂ ಸಮುದ್ರ ಸಮುದ್ರ ಎಂದು ಕುಣಿದು,ಕುಪ್ಪಳಿಸುತ್ತಿದ್ದಳು.ನಿತ್ಯಾಳು ಅವಳ ಅಣ್ಣ ವರದರಾಜನ ಹೆಗಲಲ್ಲಿ ಕುಳಿತು ತನಗೆ ಅರ್ಥವಾಗದೆ ಇದ್ದರೂ ನಿಸ್ಸೀಮ ಜಲರಾಶಿ,ಬೆಳಗುದೀಪಗಳ ಬೆಳಕನ್ನು ಆನಂದಿಸುತ್ತಿದ್ದಳು.

ಸಿರಿವಂತರ ನಗರವಾಗಿರುವ ಮುಂಬೈಯಲ್ಲಿ ಶ್ರೀಮಂತರು ಸಮುದ್ರದಲ್ಲಿಯೇ ಹುಟ್ಟುಹಬ್ಬ,ಮದುವೆ ಪಾರ್ಟಿಗಳನ್ನೇರ್ಪಡಿಸಿ ಆನಂದಿಸುತ್ತಾರೆ ಹಡಗುಗಳಲ್ಲಿ.ಹಡಗನ್ನು ಬುಕ್ ಮಾಡಿಕೊಂಡು ಒಂದು ತಾಸು ಇಲ್ಲವೆ ಇಡೀ ರಾತ್ರಿ ಬೋಟ್ ಪಾರ್ಟಿಯನ್ನು ಆನಂದಿಸುತ್ತಾರೆ.ನಮ್ಮ ದೋಣಿಯು ಸಮುದ್ರದಲ್ಲಿದ್ದ ಹುಟ್ಟುಹಬ್ಬದ ಪಾರ್ಟಿಯ ಹಡಗಿಗೆ ಊಟ,ಪಾನೀಯಗಳನ್ನು ಒದಗಿಸುವ ಕ್ಯಾಟರಿಂಗ್ ಸಿಬ್ಬಂದಿಯನ್ನು ಹೊತ್ತು ಬಂದಿದ್ದರಿಂದ ನಾವು ಕೇಕೆ ಹಾಕಿ,ಡ್ಯಾನ್ಸ ಮಾಡುತ್ತ,ಕುಣಿದು ಕುಪ್ಪಳಿಸುತ್ತಿದ್ದ ಹತ್ತಿಪ್ಪತ್ತು ಜನರುಳ್ಳ ದೋಣಿಯನ್ನು ನೋಡಿದೆವು.ಗೇಟ್ ವೇ ಆಫ್ ಇಂಡಿಯಾ ಮತ್ತು ದೋಣಿ ವಿಹಾರವು ಮೈ ಮನಸ್ಸುಗಳನ್ನು ಉಲ್ಲಸಿತಗೊಳಿಸಿತು.’ ಹಗಲು ಹೊತ್ತಿನಲ್ಲಾಗಿದ್ದರೆ ಚೆನ್ನಾಗಿ ಆನಂದಿಸಬಹುದಿತ್ತು’ ಎನ್ನುವ ಹೆಂಡತಿ ಸಾಧನಾಳ ಕಾಮೆಂಟ್ ನೊಂದಿಗೆ ದೋಣಿವಿಹಾರ ಮತ್ತು ಗೇಟ್ ವೇ ಆಫ್ ಇಂಡಿಯಾದ ಭೇಟಿ ಮುಕ್ತಾಯಗೊಳಿಸಿದೆವು.

About The Author