ಪ್ರವಾಸ ಕಥನ : ವಾಣಿಜ್ಯ ರಾಜಧಾನಿ ಮುಂಬೈಗೆ ಒಂದು ಭೇಟಿ : ತ್ರಿಗುಣಾತ್ಮಿಕೆ ಮಹಾಲಕ್ಷ್ಮೀ ದೇವಿಯ ದರ್ಶನ :ಮುಕ್ಕಣ್ಣ ಕರಿಗಾರ

ಪ್ರವಾಸ ಕಥನ : ವಾಣಿಜ್ಯ ರಾಜಧಾನಿ ಮುಂಬೈಗೆ ಒಂದು ಭೇಟಿ : ತ್ರಿಗುಣಾತ್ಮಿಕೆ ಮಹಾಲಕ್ಷ್ಮೀ ದೇವಿಯ ದರ್ಶನ

ಮುಕ್ಕಣ್ಣ ಕರಿಗಾರ

ಸಿದ್ಧಿವಿನಾಯಕನ ದೇಗುಲದಿಂದ ಹೊರಬಂದ ನಾವು ದೇವಸ್ಥಾನದ ಸಮೀಪದಲ್ಲಿದ್ದ ‘ ಮೋದಕ’ ಹೋಟೆಲ್ಲಿನಲ್ಲಿ ಮೊದಕ,ಪಾವು ಬಾಜಿ ಸೇವಿಸಿ ಅಲ್ಲಿಗೆ ಸಮೀಪದಲ್ಲಿದ್ದ ಮಹಾಲಕ್ಷ್ಮೀ ದೇವಸ್ಥಾನ ನೋಡಲು ಹೊರಟೆವು.ಕೊಲ್ಲಾಪುರವು ಮಹಾಲಕ್ಷ್ಮಿಯ ನೆಲೆಯಾಗಿದ್ದು ಹಿಂದೆ ಹಲವು ಬಾರಿ ನಾನು ಕೊಲ್ಲಾಪುರಕ್ಕೆ ಹೋಗಿ ಮಹಾಲಕ್ಷ್ಮಿಯ ದರ್ಶನ ಪಡೆದಿದ್ದೆ.ಮುಂಬೈಯಲ್ಲಿ ಮಹಾಲಕ್ಷ್ಮೀ ನೆಲೆಸಿದ್ದಾಳೆಂದು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಕೇಳುತ್ತಿದ್ದೆ.ದೇವಿ ಮಹಾಲಕ್ಷ್ಮಿಯ ನೆಲೆಯಾದ್ದರಿಂದಲೇ ಮುಂಬೈಯು ಅತ್ಯಂತ ಶ್ರೀಮಂತ ನಗರವಾಗಿದೆ ಎಂದು ಜನರು ಹೇಳುತ್ತಿದ್ದರು.ಮುಂಬಾದೇವಿಯ ಕಾರಣದಿಂದ ಮುಂಬೈಗೆ ಆ ಹೆಸರು ಬಂದಿದೆಯಾದರೂ ಮುಂಬೈಯ ಅದೃಷ್ಟದೇವಿ ಎಂದರೆ ಈ ಮಹಾಲಕ್ಷ್ಮಿಯೆ.ಮುಂಬೈಗೆ ಹೋದಾಗ‌ ಮಹಾಲಕ್ಷ್ಮಿಯ ದರ್ಶನ ಪಡೆಯಬೇಕು ಎಂದುಕೊಂಡಿದ್ದೆ.ಈಗ ಆ ಅವಕಾಶ ದೊರೆತಿತ್ತು.

ಮಧ್ಯಾಹ್ನ ಎರಡು ಘಂಟೆಗೆ ನಾವು ಕುಂಬಾಲ್ ಹಿಲ್ ಪ್ರದೇಶದ ಬ್ರೀಚ್ ಕ್ಯಾಂಡಿಯ ,ಪಶ್ಚಿಮ ಮಹಾಲಕ್ಷ್ಮಿಯ ಭುಲ್ ಭಾಯಿ ದೇಸಾಯಿ ಮಾರ್ಗದಲ್ಲಿರುವ ಮಹಾಲಕ್ಷ್ಮೀ ದೇವಸ್ಥಾನವನ್ನು ತಲುಪಿದೆವು.ದೇವಸ್ಥಾನದ ಹೊರಗಡೆ ದೊಡ್ಡ ಕ್ಯೂ ಇತ್ತು. ಮಹಾರಾಷ್ಟ್ರದ ಎಲ್ಲ ದೇವಸ್ಥಾನಗಳಲ್ಲಿರುವಂತೆ ಇಲ್ಲಿಯೂ ಪುರುಷರಿಗೆ ಮತ್ತು ಮಹಿಳೆಯರಿಗೆ ದರ್ಶನಕ್ಕೆ ಪ್ರತ್ಯೇಕ ಸಾಲುಗಳಿವೆ.ಇದು ನಮಗೆ ಸ್ವಲ್ಪ ಕಿರಿಕಿರಿಯನ್ನುಂಟು ಮಾಡಿತು.ಮಹಾರಾಷ್ಟ್ರ ಸರ್ಕಾರದ ಮುಜರಾಯಿ ಇಲಾಖೆಯ ನಿರ್ದೇಶನದಂತೆ ಮುಂಬೈಯಲ್ಲಿ ಎಲ್ಲ ದೇವಸ್ಥಾನಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿರಬಹುದು.ಭಯೋತ್ಪಾದಕರ ಭೀತಿಯನ್ನು ತಡೆಗಟ್ಟಲು ದರ್ಶನಾರ್ಥಿಗಳಾದ ಮಹಿಳೆಯರು ಮತ್ತು ಪುರುಷರಿಗೆ‌ ಪ್ರತ್ಯೇಕವಾಗಿ ತಪಾಸಣೆ ಮಾಡುತ್ತಿರುವುದರಿಂದ ಇದರ ಅಗತ್ಯ ಇರಬಹುದು.ಆದರೆ ಕುಟುಂಬ ಸಮೇತರಾಗಿ ಹೊರರಾಜ್ಯಗಳಿಂದ ಬರುವ ದರ್ಶನಾರ್ಥಿಗಳಿಗೆ ಇದರಿಂದ ತೊಂದರೆ ಆಗುತ್ತದೆ.ನನ್ನ ಉದಾಹರಣೆಯನ್ನೇ ಹೇಳುವುದಾದರೆ ನಾನು ಮಡದಿ ಸಾಧನಾ ಮತ್ತು ಇಬ್ಬರು ಎಳೆಯ ಮಕ್ಕಳುಗಳೊಂದಿಗೆ ದರ್ಶನಕ್ಕೆ ಬಂದಿದ್ದೇನೆ.ನಾಲ್ಕುವರ್ಷ ಹನ್ನೊಂದು ತಿಂಗಳ ಮಗಳು ವಿಂಧ್ಯಾ ನನ್ನ ಜೊತೆಗಾಗಲಿ,ವರದರಾಜನ ಜೊತೆಗಾಗಲೆ ಇಲ್ಲವೆ ಸುನಿಲನ ಜೊತೆಗಾಗಿ ಕ್ಯೂನಲ್ಲಿ ಇರಬಹುದು.ಒಂದುವರೆ ವರ್ಷದ ಎರಡನೇ ಮಗಳು ನಿತ್ಯಾ ಒಮ್ಮೆ ಅಪ್ಪ ಬೇಕು ಎಂದರೆ ಮತ್ತೊಮ್ಮೆ ಅಮ್ಮ ಬೇಕು ಎನ್ನುತ್ತಾಳೆ.ಅವಳನ್ನು ಸಂಭಾಳಿಸುವುದೇ ಬಹಳ ಕಷ್ಟದ ಕೆಲಸ ನಮ್ಮಿಬ್ಬರಿಗೆ.ಅಂತಹದ್ದರಲ್ಲಿ ದೇವಸ್ಥಾನದಲ್ಲಿ ಪ್ರತ್ಯೇಕ ಕ್ಯೂನಲ್ಲಿ ಹೆಂಡತಿಯನ್ನು ನಿಲ್ಲಿಸಿದಾಗ ಹೆಂಡತಿ ಮಗಳನ್ನು ಸಂಭಾಳಿಸಿಕೊಂಡು ಮಹಿಳೆಯರ ದೊಡ್ಡ ಕ್ಯೂನಲ್ಲಿ ಹೇಗೆ ಸಾಗಬೇಕು? ಅಲ್ಲದೆ ಕರ್ನಾಟಕದಿಂದ ಬಂದ ನಮಗೆ ಮುಂಬೈ ಪರಕೀಯ ವಾತಾವರಣ ಎನ್ನಿಸುತ್ತದೆ.ದೇವಸ್ಥಾನ ಟ್ರಸ್ಟಿನವರು ಇಂತಹ ಸಂಗತಿಗಳನ್ನು ಆಲೋಚಿಸಿ ಕುಟುಂಬ ಸಮೇತ ಬಂದವರನ್ನು ಕುಟುಂಬ ಸಮೇತರಾಗಿಯೇ ದರ್ಶನಕ್ಕೆ ಬಿಡುವ ಬಗ್ಗೆ ಆಲೋಚಿಸಬೇಕು.

ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಇಂದು ಪುರುಷರ ಸಂಖ್ಯೆ ಕಡಿಮೆ ಇದ್ದುದರಿಂದ ನಮ್ಮನ್ನು ಬೇಗನೆ ಒಳ ಬಿಟ್ಟರು.ಇಲ್ಲಿಯೂ ಕೂಡ ಬಿಗಿಯಾದ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಭದ್ರತಾ ದೃಷ್ಟಿಯಿಂದ.ಲೋಹಪರಿಶೋಧಕ ಯಂತ್ರದ ಪರಿಶೋಧನೆಗೆ ಒಳಪಟ್ಟೇ ಒಳಪ್ರವೇಶಿಸಬೇಕು.ಮಹಾಲಕ್ಷ್ಮೀ ದೇವಸ್ಥಾನ ಟ್ರಸ್ಟಿನವರು ಅವರದೇ ಮಹಿಳಾ ಮತ್ತು ಪುರುಷ ಸಿಬ್ಬಂದಿಯವರನ್ನು ನೇಮಿಸಿಕೊಂಡಿದ್ದರಿಂದ ಭಕ್ತರುಗಳ ನಿಯಂತ್ರಣ ಕಾರ್ಯ ಸುಲಭವಾಗಿದೆ.ಮಹಾಲಕ್ಷ್ಮೀ ದೇವಸ್ಥಾನದ ಒಳಗಡೆ ಸಾಕಷ್ಟು ಸಂಖ್ಯೆಯ ಭಕ್ತರುಗಳು ಕ್ಯೂನಲ್ಲಿ‌ ಇದ್ದುದರಿಂದ ಇಲ್ಲಿ ಸುಮಾರು ನಲವತ್ತು ನಿಮಿಷಗಳ ಕಾಲ ಕ್ಯೂನಲ್ಲಿ ಸಾಗಿ ದೇವಿಯ ದರ್ಶನ ಪಡೆದೆವು.

ಮಹಾಲಕ್ಷ್ಮೀಯು ಇಲ್ಲಿ ‘ ತ್ರಿಗುಣಾತ್ಮಿಕೆ’ ಯಾಗಿ ನೆಲೆಸಿದ್ದಾಳೆ.ಮಹಾಕಾಳಿ,ಮಹಾಲಕ್ಷ್ಮೀ ಮತ್ತು ಮಹಾ ಸರಸ್ವತಿ ಎನ್ನುವ ಮೂರು ಪ್ರತ್ಯೇಕ ರೂಪಗಳಲ್ಲಿ ಪ್ರಕಟಗೊಂಡಿದ್ದಾಳೆ.ನನಗಿದು ಅತೀವ ಆನಂದವನ್ನುಂಟು ಮಾಡಿದ ಸಂಗತಿ.ಯಾಕೆಂದರೆ ‘ ದುರ್ಗಾಸಪ್ತಶತಿ’ ಯನ್ನು ಪಾರಾಯಣ ಮಾಡುತ್ತಿರುವ ನಾನು ತಾಯಿ ದುರ್ಗಾದೇವಿಯನ್ನು ಮಹಾಕಾಳಿ,ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿಯರೆಂಬ ತ್ರಿಗುಣಾತ್ಮಿಕೆ ದೇವಿಯನ್ನಾಗಿ ಕಂಡು,ಪೂಜಿಸುತ್ತಿದ್ದೇನೆ.ಮಹಾಲಕ್ಷ್ಮೀಯು ದೇವಿದುರ್ಗೆಯ ಒಂದು ಅಂಶ,ಒಂದು ಅವತಾರವಾಗಿದ್ದಾಳೆ. ದೇವಿ ದುರ್ಗೆಯು ಕೆಲವುಕಡೆ ಪರಬ್ರಹ್ಮೆಯಾದ ದುರ್ಗಾಪರಮೇಶ್ವರಿಯಾಗಿ ಪ್ರಕಟಗೊಂಡಿದ್ದರೆ ಮತ್ತೆ ಕೆಲವು ಕಡೆ ಮಹಾಕಾಳಿಯಾಗಿ,ಮಹಾಲಕ್ಷ್ಮೀಯಾಗಿ,ಮಹಾ ಸರಸ್ವತಿಯಾಗಿ ಒಂದೊಂದು ಪ್ರತ್ಯೇಕ ಗುಣ,ರೂಪಗಳೊಂದಿಗೆ‌ ಪ್ರಕಟಗೊಂಡಿದ್ದಾಳೆ.ನಮ್ಮ ಮಹಾಶೈವ ಧರ್ಮಪೀಠದ ವಿಶ್ವೇಶ್ವರಿ ದುರ್ಗಾದೇವಿಯು ಮಹಾಕಾಲಿ ಮಹಾಲಕ್ಷ್ಮೀ ಮತ್ತು ಮಹಾ ಸರಸ್ವತಿ ಎನ್ನುವ ತ್ರಿಗುಣಾತ್ಮಿಕೆಯಾಗಿರುವಂತೆಯೇ ‘ ಸರ್ವಶಕ್ತಿ ಸಮನ್ವಿತೆ’ ಯಾದ ವಿರಾಟ್ ಶಕ್ತಿ ರೂಪಿಣಿಯಾಗಿದ್ದಾಳೆ.ಮುಂಬೈಯ ಮಹಾಲಕ್ಷ್ಮೀದೇವಿಯು ನಡುವೆ ತಾನು ಕುಳಿತು ಬಲಭಾಗದಲ್ಲಿ ಮಹಾಕಾಳಿಯನ್ನು,ಎಡಭಾಗದಲ್ಲಿ ಮಹಾಸರಸ್ವತಿಯನ್ನು ಕೂಡಿಸಿಕೊಂಡು ತ್ರಿಗುಣಾತ್ಮಿಕೆಯಾಗಿ ಪೂಜೆಗೊಳ್ಳುತ್ತಿದ್ದಾಳೆ.ದುರ್ಗಾಸಪ್ತಶತಿಯನ್ನು ಪಾರಾಯಣ ಮಾಡಿದ ಯಾರೋ ಭಕ್ತರ ತಪಃ ಫಲವಾಗಿ ಇಲ್ಲಿ ಮಹಾಲಕ್ಷ್ಮಿಯು ತ್ರಿಗುಣಾತ್ಮಿಕೆಯಾಗಿ ಪ್ರಕಟಗೊಂಡಿರಬೇಕು.ಮಹಾಲಕ್ಷ್ಮೀಯು ಪ್ರಸನ್ನವದನಳಾಗಿ ಭಕ್ತರನ್ನು ಅನುಗ್ರಹಿಸುತ್ತಿದ್ದಾಳೆ.ಮಹಾಕಾಳಿಯು ಸನ್ನಿಧಿಗೆ ಬಂದವರ ಆಪತ್ತು,ಅನಿಷ್ಟಗಳನ್ನು ನಿವಾರಿಸುತ್ತಿದ್ದರೆ ಮಹಾ ಸರಸ್ವತಿ ವಿದ್ಯೆ,ಉದ್ಯೋಗ,ವಿದ್ವತ್ತುಗಳನ್ನಿತ್ತು ಅನುಗ್ರಹಿಸುತ್ತಿದ್ದಾಳೆ.ಈ ಇಬ್ಬರು ಶಕ್ತಿಯರನ್ನೊಡಗೂಡಿ ನೆಲೆಸಿರುವ ಮಹಾಲಕ್ಷ್ಮಿಯು ತನ್ನ ಸನ್ನಿಧಿಗೆ ಬಂದ ಭಕ್ತರ ದುಃಖ,ದಾರಿದ್ರ್ಯವನ್ನು ನಿವಾರಿಸಿ ಸಂಪದಭಿವೃದ್ಧಿಗಳನ್ನಿತ್ತು ಉದ್ಧರಿಸುತ್ತಿದ್ದಾಳೆ.

ಮುಂಬೈಯ ಮಹಾಲಕ್ಷ್ಮಿಯು ಮಹಾಕಾಳಿ ಮತ್ತು ಮಹಾಸರಸ್ವತಿಯರೊಂದಿಗೆ ಪ್ರಕಟಗೊಂಡಿರುವ ಮೂಲಕ ಈ ದೇವಸ್ಥಾನವು ಲಕ್ಷ್ಮೀದೇವಿಯ ವಿಶೇಷ ದೇವಸ್ಥಾನ ಎನ್ನಿಸಿದೆ.ಕೊಲ್ಲಾಪುರದಲ್ಲಿ ಕೇವಲ ಮಹಾಲಕ್ಷ್ಮೀ ರೂಪದಲ್ಲಿ ಪ್ರಕಟಗೊಂಡು,ಪೂಜೆಗೊಳ್ಳುತ್ತಿದ್ದಾಳೆ.ಕರ್ನಾಟಕದಲ್ಲಿ ಗೊರವನಹಳ್ಳಿಯಲ್ಲಿಯೂ ಲಕ್ಷ್ಮೀದೇವಿಯು ತನ್ನನ್ನು ಪ್ರಕಟಪಡಿಸಿಕೊಂಡಿದ್ದಾಳೆ.ನಮ್ಮ ಜಿಲ್ಲೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಲ್ಲೂರಿನಲ್ಲಿಯೂ ಲಕ್ಷ್ಮೀದೇವಿಯು ವೃದ್ಧೆ ಭಕ್ತೆಯೊಬ್ಬಳ ಭಕ್ತಿಗೆ ಮೆಚ್ಚಿ ಪ್ರಕಟಗೊಂಡಿದ್ದಾಳೆಂದು ಅಲ್ಲಿಗೆ ಹೋಗಿ ಭಕ್ತರು ಪೂಜಿಸುತ್ತಾರೆ.ನಾನು ಇತರ ಹಲವು ಕಡೆ ಲಕ್ಷ್ಮೀದೇವಿಯನ್ನು ಕಂಡಿದ್ದೇನೆ.ಆದರೆ ಮುಂಬೈಯ ಮಹಾಲಕ್ಷ್ಮೀದೇವಿಯು ನನಗೆ ತುಂಬ ಇಷ್ಟವಾದಳು.ನಾನು ತ್ರಿಗುಣಾತ್ಮಿಕೆಯಾದ ದುರ್ಗಾದೇವಿಯನ್ನು ಪೂಜಿಸುತ್ತಿರುವುದರಿಂದ ತ್ರಿಗುಣಾತ್ಮಿಕೆಯಾಗಿ ಪ್ರಕಟಗೊಂಡ ಮುಂಬೈ ಮಹಾಲಕ್ಷ್ಮೀಯು ನನಗೆ ಇಷ್ಟದ ದೇವಿಯಾದರೆ ಅದು ಸಹಜವೆ!

ಮುಂಬೈ ಮಹಾಲಕ್ಷ್ಮೀ ದೇವಸ್ಥಾನವು ದೇಶದ ಅತ್ಯಂತ ಪುರಾತನ ಶಕ್ತಿಮಂದಿರಗಳಲ್ಲಿ ಒಂದು.ಮುಸ್ಲಿಂ ದಾಳಿಕೋರರು ಹಿಂದು ದೇವಸ್ಥಾನಗಳನ್ನು ಹಾಳುಗೆಡಹುತ್ತ ಬಂದಾಗ ಇಲ್ಲಿನ ಭಕ್ತರು ದೇವಿಯನ್ನು ಸಮುದ್ರದ ಉಸುಕಿನಲ್ಲಿ ಮುಚ್ಚಿಟ್ಟಿದ್ದರಂತೆ.ಮುಸ್ಲಿಂ ಆಕ್ರಮಣಕಾರರ ಆಳ್ವಿಕೆಯ ನಂತರ ಬ್ರಿಟಿಷರ ಆಳ್ವಿಕೆಯಲ್ಲಿ ಮಹಾಲಕ್ಷ್ಮಿಯು ಪುನಃ ಮೇಲೆದ್ದು ಬಂದು ಪೂಜೆಗೊಳ್ಳುತ್ತಿರುವ ಬಗ್ಗೆ ಹೇಳುತ್ತದೆ ಸ್ಥಳಪುರಾಣ. ಈಗಿರುವ ಮಹಾಲಕ್ಷ್ಮೀ ದೇವಸ್ಥಾನವನ್ನು 1761-1771 ರ ಅವಧಿಯ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲಾಗಿದೆ.ಮುಂಬೈಯ ಬ್ರಿಟಿಷರ ಆಡಳಿತಗಾರನಾಗಿದ್ದ ಲಾರ್ಡ್ ಹಾರ್ನ್ಬಿಯು ವರ್ಲಿ ಮತ್ತು ಮಲಬಾರಗಳ ನಡುವೆ ಸಂಪರ್ಕ ಸೇತುವೆಯನ್ನು ಕಟ್ಟಿಸಲು ಉದ್ದೇಶಿಸಿ,ಪ್ರಯತ್ನಿಸಿ ಪ್ರತಿಸಲವು ವಿಫಲನಾಗುತ್ತಿದ್ದನಂತೆ.ರಾಮಜಿ ಶಿವಾಜಿ ಪ್ರಭು ಎನ್ನುವ ಮುಖ್ಯ ಇಂಜನಿಯರನ ನೇತೃತ್ವದಲ್ಲಿ ಮತ್ತೆ ಇಂಜನಿಯರರುಗಳು,ತಂತ್ರಜ್ಞರ ತಂಡವನ್ನು ರಚಿಸಿ,ವರ್ಲಿ ಮತ್ತು ಮಲಬಾರಗಳ ನಡುವೆ ಸಂಪರ್ಕ ಸೇತುವೆ ನಿರ್ಮಿಸಲು ಆದೇಶಿಸಿದನಂತೆ ಹಾರ್ನ್ಬಿ.ಸಮುದ್ರದ ಅಲೆಗಳಿಂದ ಸಂಪರ್ಕ ಕಲ್ಪಿಸಲು ಸಾಧ್ಯವಾಗದೆ ಒದ್ದಾಡುತ್ತಿದ್ದರು ತಂತ್ರಜ್ಞರು.ಒಂದು ರಾತ್ರಿ ಮಹಾಲಕ್ಷ್ಮೀಯು ತಂಡದ ಮುಖ್ಯ ಇಂಜನಿಯರರಾಗಿದ್ದ ರಾಮಜಿ ಶಿವಾಜಿ ಪ್ರಭುವಿನ ಕನಸಿನಲ್ಲಿ ಬಂದು ತಾನು ಇಲ್ಲಿ ಸಮುದ್ರದಲ್ಲಿ ನೆಲೆಸಿದ್ದು ತನ್ನನ್ನು ಮೇಲಕ್ಕೆತ್ತಿ ಗುಡ್ಡದ ಮೇಲಿಟ್ಟರೆ ಸೇತುವೆ ನಿರ್ಮಾಣ ಕಾರ್ಯ ಸುಲಭವಾಗಿ ಮುಗಿಯುವುದು ಎಂದಳಂತೆ.ರಾಮಜಿ ಶಿವಾಜಿ ಪ್ರಭು ಮೀನುಗಾರರು ಮತ್ತು ದೋಣಿಯ ಸಹಾಯದಿಂದ ಸಮುದ್ರದ ಆಳದಲ್ಲಿದ್ದ ತ್ರಿಗುಣಾತ್ಮಿಕೆಯಾಗಿದ್ದ ಮಹಾಲಕ್ಷ್ಮಿಯನ್ನು ಮೇಲೆತ್ತಿ ಗುಡ್ಡದ ಮೇಲೆ ಇಟ್ಟನಂತೆ.ಸಂಪರ್ಕಸೇತುವೆಯ ಕಾರ್ಯ ಸರಾಗವಾಗಿ ಮುಗಿಯಿತಂತೆ.ಮುಖ್ಯ ಇಂಜನಿಯರ್ ರಾಮಜಿ ಶಿವಾಜಿ ಪ್ರಭು ಲಾರ್ಡ್ ಹಾರ್ನ್ಬಿಯ ಅನುಮತಿ ಪಡೆದು ಅದೇ ಎತ್ತರದ ದಿನ್ನೆಯ ಪ್ರದೇಶದಲ್ಲಿ ಮಹಾಲಕ್ಷ್ಮೀ ಮಂದಿರವನ್ನು ಕಟ್ಟಿಸಿದನಂತೆ.ದೇವಸ್ಥಾನದಲ್ಲಿ ಮಹಾಕಾಳಿ,ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿ ದೇವಿಯರಿಗೆ ಬಂಗಾರದ ಬಳೆಗಳು,ಬಂಗಾರದ ಕಿವಿಯೋಲೆ,ಬಂಗಾರದ ಮುತ್ತು- ನತ್ತುಗಳಿಂದ ಅಲಂಕರಿಸಲಾಗಿದೆ.ನವರಾತ್ರಿಯ ದಿನಗಳಲ್ಲಿ ವಿಶೇಷ ಅಲಂಕಾರಗಳಿಂದ ದೇವಿಯರನ್ನು ಅಲಂಕರಿಸಿ,ವೈಭವಪೂರ್ಣವಾಗಿ ನವರಾತ್ರಿಯನ್ನು ಆಚರಿಸಲಾಗುತ್ತಿದೆ.ಮಹಾಲಕ್ಷ್ಮೀ ದೇವಸ್ಥಾನ ಟ್ರಸ್ಟ್ ಈ ದೇವಸ್ಥಾನದ ನಿರ್ವಹಣೆ ಮಾಡುತ್ತಿದ್ದು ದೇವಸ್ಥಾನದ ಆದಾಯದಿಂದ ಸಮಾಜೋಪಯೋಗಿ ಕಾರ್ಯಗಳನ್ನು ಮಾಡುತ್ತಿದೆ.

About The Author