ಪ್ರವಾಸ ಕಥನ : ವಾಣಿಜ್ಯ ರಾಜಧಾನಿ ಮುಂಬೈಗೆ ಒಂದು ಭೇಟಿ : ಮುಕ್ಕಣ್ಣ ಕರಿಗಾರ

ಕನಸುಗಳ ನಗರ’ ( Dreams city) ಎಂದೇ ಖ್ಯಾತಿವೆತ್ತ ಮುಂಬೈ ಮಹಾನಗರಕ್ಕೆ ಭೇಟಿ ನೀಡುವ ಅನಿರೀಕ್ಷಿತ ಅವಕಾಶ ಒಂದು ಇತ್ತೀಚೆಗೆ ನನಗೆ ಬಂದೊದಗಿತು.ಮುಂಬೈ ಮಹಾನಗರವನ್ನು ನೋಡುವ ಬಯಕೆಯು ನನಗಿತ್ತಾದರೂ ಆ ಆಸೆ ಇಲ್ಲಿಯವರೆಗೆ ಕೈಗೂಡಿರಲಿಲ್ಲ.ನನ್ನ ಅಳಿಯ ಅನಿಲನಿಗೆ ಕನ್ಯೆ ನೋಡಲೆಂದು ಮುಂಬೈಗೆ ಹೋಗುವ ಪ್ರಸಂಗವು ಒದಗಿ ಬಂದಿದ್ದರಿಂದ ನಾನು ೨೦೨೨ ರ ಡಿಸೆಂಬರ್ ೧೩ ನೇ ತಾರೀಖಿನಂದು ಕುಟುಂಬಸಮೇತ ಮುಂಬೈಗೆ ಪ್ರಯಾಣವನ್ನಾರಂಭಿಸಿದೆ.

ಸೋಮವಾರ( ೧೨.೧೨.೨೦೨೨) ರ ಸಂಜೆಯೇ ನಮ್ಮೂರು ಗಬ್ಬೂರಿನಿಂದ ಹೊರಟು ಕಲ್ಬುರ್ಗಿಯ ಮಾವನ ಮನೆಗೆ ಬಂದು ತಂಗಿದ್ದೆ ಮರುದಿನ ಮುಂಬೈಗೆ ಪ್ರಯಾಣಿಸುವ ಉದ್ದೇಶದಿಂದ.ನನ್ನ ಶಿಷ್ಯ ವರದರಾಜನ ಕಿಯಾ ಕಾರಿನಲ್ಲಿ ಮುಂಬೈಗೆ ಪ್ರಯಾಣಿಸುವುದೆಂದು ನಿರ್ಧರಿಸಿದ್ದೆವು.ಮಡದಿ ಸಾಧನಾ ಮತ್ತು ಇಬ್ಬರು ಪುಟ್ಟ ಮಕ್ಕಳಾದ ವಿಂಧ್ಯಾ ಮತ್ತು ನಿತ್ಯಾರೊಂದಿಗೆ ಮುಂಬೈಗೆ ಪಯಣಿಸಬೇಕಿದ್ದರಿಂದ ಶಿಷ್ಯ ವರದರಾಜನನ್ನೇ ಕರೆದುಕೊಂಡು ಹೋಗುವುದು ಸೂಕ್ತವೆಂದು ಆಲೋಚಿಸಿದ್ದೆ.ವರದರಾಜ ನನ್ನ ಅತ್ಯಂತ ಪ್ರೀತಿಪಾತ್ರ ಶಿಷ್ಯನಾಗಿದ್ದುದರಿಂದ ಮತ್ತು ಅವನು ನನ್ನ ಪ್ರವೃತ್ತಿ,ಒಲವು- ನಿಲುವುಗಳನ್ನು ಬಲ್ಲವನಾದ್ದರಿಂದ ಇಂತಹ ದೀರ್ಘ ಪ್ರಯಾಣದಲ್ಲಿ ಅವನನ್ನೇ ಜೊತೆಗೆ ಕರೆದೊಯ್ಯವುದು ಉಚಿತವೆನ್ನಿಸಿತು.ಜೊತೆಗೆ ವರದರಾಜನು ಕಾರು ಚಾಲನೆಯಲ್ಲಿ ಅತ್ಯಂತ ನಿಪುಣನಿರುವುದರಿಂದ ಅವನನ್ನು ಜೊತೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದೆ.

ಮಂಗಳವಾರ ಬೆಳಿಗ್ಗೆ 9.45 ಕ್ಕೆ ಕಲ್ಬುರ್ಗಿಯಿಂದ ಮುಂಬೈಯತ್ತ ಪಯಣ ಪ್ರಾರಂಭಿಸಿದೆವು.ಸೊಸೆ ಸುಜಾತಾಳು ನಮ್ಮೊಂದಿಗಿದ್ದಳು.ನಾನು, ವರದರಾಜ,ಮಡದಿ ಸಾಧನಾ,ನಾಲ್ಕುವರ್ಷ ಹನ್ನೊಂದು ತಿಂಗಳ ಮಗಳು ವಿಂಧ್ಯಾ,ಒಂದುವರೆ ವರ್ಷದ ಮಗಳು ನಿತ್ಯಾ ಮತ್ತು ಸುಜಾತಾರನ್ನೊಳಗೊಂಡ ನಮ್ಮ ಕಲ್ಯಾಣೋದ್ದೇಶದ ಪಯಣವು ಆರಂಭವಾಯಿತು.ಆಳಂದ ಮಾರ್ಗವಾಗಿ ಮುಂಬೈ ಹೆದ್ದಾರಿ ಹಿಡಿಯುವುದೆಂದು ವರದರಾಜ ಯೋಚಿಸಿದ್ದರಿಂದ ಆ ಮಾರ್ಗವಾಗಿಯೇ ಬಂದೆವು.

ಬೆಳಿಗ್ಗೆ ತಿಂಡಿ ಸೇವಿಸಿರಲಿಲ್ಲವಾದ್ದರಿಂದ ಆಳಂದದ ಹೊರವಲಯದ ಮಹಾಲಕ್ಷ್ಮೀ ಫ್ಯಾಮಿಲಿ ರೆಸ್ಟಾರೆಂಟ್ ನಲ್ಲಿ ಬೆಳಗಿನ ಉಪಹಾರ ಸೇವಿಸಿದೆವು.ಬೆಲ್ಲದ ಚಹಾ ಸಿಗುತ್ತದೆ ಎಂದು ಬೋರ್ಡ್ ಹಾಕಿದ್ದರಿಂದ ಬೆಲ್ಲದ ಚಹಾ ಸೇವಿಸಿದೆವು.ಈಗೀಗ ಬೆಲ್ಲದ ಚಹಾ ಸೇವಿಸುವುದು ಟ್ರೆಂಡ್ ಆಗಿದೆ.ನಾನು ಹುಡುಗನಿದ್ದಾಗ ನಮ್ಮ ಮನೆಯಲ್ಲಿ ಬೆಲ್ಲದ ಚಹಾವನ್ನೇ ಕುಡಿಯುತ್ತಿದ್ದೆವು .ಬೆಲ್ಲದಚಹಾ ರುಚಿಕರವಾಗಿರುತ್ತದಲ್ಲದೆ ಮಧುಮೇಹದಂತಹ ರೋಗಗಳನ್ನುಂಟು ಮಾಡದು.ಮಧುಮೇಹ( ಸಕ್ಕರೆಕಾಯಿಲೆ) ಇದ್ದವರೂ ಮಿತಪ್ರಮಾಣದಲ್ಲಿ ಬೆಲ್ಲದ ಚಹಾ ಸೇವಿಸಬಹುದು.ಈ ಕಾರಣದಿಂದ ಇತ್ತೀಚೆಗೆ ಬೆಲ್ಲದ ಚಹಾ ಸೇವನೆಯು ಹವ್ಯಾಸವಾಗಿ ಬೆಳೆಯುತ್ತಿದ್ದುದರಿಂದ ಹೋಟೆಲ್ ಗಳಲ್ಲಿ ಬೆಲ್ಲದ ಚಹಾ ಮಾಡುತ್ತಿದ್ದಾರೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗ ‘ ಬಲ್ಲವನೆ ಬಲ್ಲ ಬೆಲ್ಲದ ಸವಿಯ’ ಎನ್ನುವ ಗಾದೆ ಹೇಳುತ್ತ ಬೆಲ್ಲದ ಚಹಾ ಕುಡಿಯುತ್ತಿದೆ,ಬೆಲ್ಲದ ಹೋಳಿಗೆ,ಹುಗ್ಗಿಗಳನ್ನು ಸವಿಯುತ್ತಿದ್ದೆ.ಐವತ್ತುವರ್ಷಗಳ ಹಿಂದೆ ಬೆಲ್ಲವು ಗ್ರಾಮೀಣ ಸಂಸ್ಕೃತಿಯ ಸಿಹಿ ಆಗಿತ್ತು,ಸೊಗಡು- ಸೊಗಸು ಎಲ್ಲವೂ ಆಗಿತ್ತು.ಗ್ರಾಮೀಣ ಕರ್ನಾಟಕದಲ್ಲಿ ಐವತ್ತು ವರ್ಷಗಳ ಹಿಂದೆ ಎಲ್ಲೋ ಒಬ್ಬಿಬ್ಬರು ಶ್ರೀಮಂತರ ಮನೆಗಳಲ್ಲಿ ಮಾತ್ರ ಸಕ್ಕರೆ ಚಹಾ ಮಾಡುತ್ತಿದ್ದರು.ದೊಡ್ಡ ಹಳ್ಳಿಗಳಲ್ಲಿ ಮಾತ್ರ ಒಂದೋ ಎರಡೋ ಹೋಟೆಲ್ ಗಳು ಇದ್ದವು.

ಚಹಾಸೇವನೆ ಬ್ರಿಟಿಷರು ಬಿಟ್ಟುಹೋದ ಹವ್ಯಾಸವಾದರೂ ಅದು ಇಂದು ಭಾರತೀಯರ ಜೀವನದ ದೈನಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ,ಆಹಾರ ಪದ್ಧತಿಯ ಭಾಗವಾಗಿದೆ.ನಾನು ಹುಡುಗನಾಗಿದ್ದಾಗ ಸುಗ್ಗಿಯ ಕಾಲದಲ್ಲಿ ರಾತ್ರಿ ಹೊಲದಲ್ಲೇ ಮಲಗುತ್ತಿದ್ದೆವು.ರೈತರುಗಳೆಲ್ಲ ಸುಗ್ಗಿಯ ಕಾಲದಲ್ಲಿ ರಾತ್ರಿಯ ಹೊತ್ತು ಅವರವರ ಹೊಲಗಳಲ್ಲಿ ಮಲಗುತ್ತಿದ್ದರು ಬೆಳೆಯನ್ನು ಕಾಯಲೆಂದು.ಕಳ್ಳಕಾಕರ ಭಯಕ್ಕಿಂತಲೂ ಭೂಮಿ ತಾಯಿಯ ಮಕ್ಕಳು ಎಂಬ ಧನ್ಯತೆಯ ಭಾವದಿಂದ ರೈತರುಗಳು ಬೆಳೆ ಕೈಗೆ ಬಂದಾಗ ತಿಂಗಳುಗಟ್ಟಲೆ ತಮ್ಮ ಹೊಲಗಳಲ್ಲಿ ಮಲಗುತ್ತಿದ್ದರು.ನಮ್ಮ ಹೊಲವು ಊರಮುಂದೆಯೇ ಇದ್ದುದರಿಂದ ಸುತ್ತಮುತ್ತಣ ಹೊಲಗಳವರು ಸಹ ರಾತ್ರಿ ನಮ್ಮ ಹೊಲಗಳಲ್ಲಿ ಬಂದು ಮಲಗುತ್ತಿದ್ದರು.ನಮ್ಮ ತಂದೆ ನಾಗಪ್ಪ ಕರಿಗಾರ ಮತ್ತು ಚಿಕ್ಕಪ್ಪ ಯಲ್ಲಪ್ಪ ಕರಿಗಾರ ಇಬ್ಬರೂ ಗೌರವಾನ್ವಿತ ವ್ಯಕ್ತಿಗಳಾಗಿದ್ದುದರಿಂದ ಊರವರು ಅವರ ಒಡನಾಟ,ಸಖ್ಯ ಬಯಸಿ ಬರುತ್ತಿದ್ದರು.ನಮ್ಮ ತಂದೆ ಹಾಗೂ ಚಿಕ್ಕಪ್ಪ ಇಬ್ಬರೂ ‘ ಗುರುಪುತ್ರರು’ ಆಗಿದ್ದರಿಂದ ಇತರರು ಅವರ ಬಳಿ ಆಧ್ಯಾತ್ಮಿಕ ಚರ್ಚೆ,ಭಜನೆಗಳಿಗಾಗಿ ಬರುತ್ತಿದ್ದರು.ಹೊಲದಲ್ಲಿ ಬೆಳೆದಿದ್ದ ಶೇಂಗಾವನ್ನು ಸುಟ್ಟು ತಿನ್ನುತ್ತ ರಾತ್ರಿಯ ಸತ್ಸಂಗ ನಡೆಸುತ್ತಿದ್ದರು.ಬೆಳಿಗ್ಗೆ ಜೋಳದ ಬೆಳಸೆ ,ಸಿಹಿತೆನೆ ತಿನ್ನುತ್ತಿದ್ದೆವು.ಬೆಳಸೆ ತಿಂದ ಬಳಿಕ ಹೊಲಗಳಲ್ಲಿಯೇ ಬೋಗುಣಿ ಗಟ್ಟಲೆ ಚಹಾ ಮಾಡುತ್ತಿದ್ದರು ಹತ್ತಿಪ್ಪತ್ತು ಜನರು ಕುಡಿಯಲೆಂದು.ಕುರಿಕಾಯುವವರು ಅಲ್ಲಿಯೇ ಸಮೀಪದಲ್ಲಿ ಕುರಿ ತರಬುತ್ತಿದ್ದುದರಿಂದ ಕುರಿಹಾಲು ತಂದು ಅಂಬರೆಹೂವು ಹಾಕಿ ಚಹಾ ಮಾಡುತ್ತಿದ್ದರು.ಕುರಿಹಾಲು ಮತ್ತು ಅಂಬ್ರೆಹೂವಿನ ಬೆಲ್ಲದ ಚಹಾ ಬಹುರುಚಿಕರವಾಗಿರುತ್ತಿತ್ತು.ಚಹಾಪುಡಿ ಅಡವಿಯಲ್ಲಿ ಸಿಗುತ್ತಿರಲಿಲ್ಲವಾದ್ದರಿಂದ ‘ ಅಂಬ್ರೆಹೂವು’ಎಲ್ಲಿ ಅಂದರೆ ಅಲ್ಲಿ ವಿಪುಲವಾಗಿ ಬೆಳೆಯುತ್ತಿದ್ದುದರಿಂದ ಅಂಬ್ರೆಹೂವು ಹಾಕಿ ಚಹಾ ಮಾಡುತ್ತಿದ್ದರು.ಅಂಬ್ರೆಹೂವು ಹಳದಿ ಹೂವುಗಳುಳ್ಳ ಮೊಳಕಾಲು ಎತ್ತರ ಬೆಳೆಯುತ್ತಿದ್ದ ಸಸ್ಯ.ಔಷಧಿಯ ಗುಣವನ್ನು ಹೊಂದಿರುವ ಅದನ್ನು ಔಷಧಿಗಾಗಿಯೂ ಬಳಸಲಾಗುತ್ತಿತ್ತು.ಅದರ ಕಡ್ಡಿಯನ್ನು ಹಲ್ಲುಜ್ಜುವ ಕಡ್ಡಿಯನ್ನಾಗಿ ಬ್ರಶ್ ಗಳಂತೆ ಉಪಯೋಗಿಸುತ್ತಿದ್ದರು.ಹುಡುಗರು ಆಟವಾಡಿ ಕೈಕಾಲುಗಳಿಗೆ ಗಾಯಮಾಡಿಕೊಂಡಾಗ ಅಂಬ್ರೆತಪ್ಪಲನ್ನು ಕುಟ್ಟಿ ಅದರ ರಸವನ್ನು ಗಾಯವಾದ ಭಾಗಕ್ಕೆ ಸವರುತ್ತಿದ್ದರು.ಆಳಂದದ ಮಹಾಲಕ್ಷ್ಮೀ ಫ್ಯಾಮಿಲಿ ರೆಸ್ಟಾರೆಂಟ್ ನಲ್ಲಿ ಬೆಲ್ಲದ ಚಹಾ ಕುಡಿಯುತ್ತಿದ್ದಾಗ ನನ್ನ ಬಾಲ್ಯದ ನಮ್ಮೂರ ಗ್ರಾಮಸಂಸ್ಕೃತಿಯು ಕಣ್ಮುಂದೆ ಬಂದಿತು.

ಆಳಂದ ದಾಟಿ ಐದಾರು ಕಿಲೋಮೀಟರುಗಳ ದೂರ ಕ್ರಮಿಸುವಷ್ಟರಲ್ಲೇ ಮಹಾರಾಷ್ಟ್ರ ರಾಜ್ಯದ ಗಡಿಯನ್ನು ಪ್ರವೇಶಿಸಿದೆವು.ರಸ್ತೆಯುದ್ದಕ್ಕು ಕಾಣುತ್ತಿದ್ದ ಹೋಟೆಲ್,ಅಂಗಡಿಗಳ ನಾಮಫಲಕಗಳು ಮರಾಠಿ ಇಲ್ಲವೆ ಹಿಂದಿಯಲ್ಲಿ ಮಾತ್ರ ಇದ್ದವು.ಇಂಗ್ಲಿಷಿನಲ್ಲಿ ಕೂಡ ಬೋರ್ಡ್ ಕಾಣುತ್ತಿರಲಿಲ್ಲ.ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಗ್ರಾಮಗಳ ಮಹಾರಾಷ್ಟ್ರದ ಜನತೆ ಕನ್ನಡವನ್ನೇ ಮಾತನಾಡುತ್ತಿದ್ದುದನ್ನು ಕಾರಿನಲ್ಲಿ ಕೇಳುತ್ತ ಸಾಗುತ್ತಿದ್ದೆ.ಕಬ್ಬು ಮತ್ತು ದ್ರಾಕ್ಷಿಯನ್ನು ಹೊಲಗಳಲ್ಲಿ ಬೆಳೆದಿದ್ದರು.ಅಲ್ಲಲ್ಲಿ ತೆಂಗಿನ ತೋಟಗಳು ಕಾಣಿಸುತ್ತಿದ್ದವು.ರಸ್ತೆಯುದ್ದಕ್ಕೂ ಮಹಾರಾಷ್ಟ್ರದ ಗ್ರಾಮೀಣ ಸಂಸ್ಕೃತಿಯ ಸೊಬಗನ್ನು ನೋಡಿ,ಆನಂದಿಸುತ್ತ ಪಯಣಿಸುತ್ತಿದ್ದೆ.

ಸೊಲ್ಲಾಪುರಕ್ಕೆ ಬಂದಾಗ ಶರಣ ಸಿದ್ಧರಾಮನ ನೆನಪಾಯಿತು.ಸಿದ್ಧರಾಮೇಶ್ವರರು ಎಂದು ಪ್ರಸಿದ್ಧರಾಗಿರುವ ಶರಣಸಿದ್ಧರಾಮನ ಕರ್ಮಭೂಮಿ ಸೊಲ್ಲಾಪುರವು ಹಿಂದೆ ‘ ಸೊನ್ನಲಿಗೆ’ ಎಂಬ ಕನ್ನಡನುಡಿಯ ಗ್ರಾಮವಾಗಿತ್ತು.ಸಿದ್ಧರಾಮನು ಶ್ರೀಶೈಲ ಮಲ್ಲಯ್ಯನ ಒಲುಮೆಯನ್ನುಂಡು ಸೊನ್ನಲಿಗೆಯನ್ನು ಎರಡನೇ ಶ್ರೀಶೈಲವನ್ನಾಗಿಸಿದ ಮಹಾಶಿವಭಕ್ತ,ಶಿವಯೋಗಿ.ಮಹಾರಾಷ್ಟ್ರದ ಹತ್ತಾರು ಸಹಸ್ರ ಸಂಖ್ಯೆಯ ಭಕ್ತರು ಪ್ರತಿವರ್ಷ ಯುಗಾದಿಯ ಮುಂಚಿನ ದಿನಗಳಲ್ಲಿ ಶ್ರೀಶೈಲಕ್ಕೆ ಪಾದಯಾತ್ರೆ ಹೊರಡುತ್ತಾರೆ.ಸೊಲ್ಲಾಪುರದ ಪಾದಯಾತ್ರಿಗಳ ಸಂಖ್ಯೆ ಹೆಚ್ಚಿನದು.ಮಹಾರಾಷ್ಟ್ರದ ಪಾದಯಾತ್ರಿಗಳು ಶ್ರೀಶೈಲಕ್ಕೆ ಹೋಗುವ ಮಾರ್ಗದಲ್ಲಿ ಅಲ್ಲಲ್ಲಿ ತಂಗುವಂತೆ ನಮ್ಮೂರು ಗಬ್ಬೂರಿನಲ್ಲಿಯೂ ತಂಗುತ್ತಾರೆ.ನಮ್ಮೂರ ಭಕ್ತರುಗಳು ಮಹಾರಾಷ್ಟ್ರದ ಶ್ರೀಶೈಲ ಮಲ್ಲಯ್ಯನ ಭಕ್ತರಿಗಾಗಿ ಬೆಳಗಿನ ತಿಂಡಿ,ಮಧ್ಯಾಹ್ನ ಮತ್ತು ರಾತ್ರಿಯ ಊಟೋಪಚಾರದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ.ಹಿಂದೆ ಒಂದೆರಡು ಬಾರಿ ನಾನು ಸೊಲ್ಲಾಪುರಕ್ಕೆ ಭೇಟಿ ನೀಡಿ ಶರಣ ಸಿದ್ಧರಾಮನ ಗದ್ದುಗೆಯ ದರ್ಶನ ಪಡೆದಿದ್ದೆ.ಅಲ್ಲಿ ಕೆರೆಯ ನಡುವೆ ಇರುವ ಮಲ್ಲಿಕಾರ್ಜುನ ಶಿವಾಲಯ ಮತ್ತು ಸಿದ್ಧರಾಮರ ಗದ್ದುಗೆಗಳು ಶಿವಭಕ್ತಿಯ ಕಂಪನಗಳನ್ನುಂಟು ಮಾಡುತ್ತಿವೆ.

ಇಂದು ಸಿದ್ಧರಾಮನ ಸಮಾಧಿ,ಆತನ ಆರಾಧ್ಯದೈವ ಶ್ರೀಶೈಲ ಮಲ್ಲಿಕಾರ್ಜುನನ ದೇವಾಲಯ,ಕೆರೆ ಮತ್ತು ಸಿದ್ಧರಾಮ ಕಟ್ಟಿಸಿದ ‘ಅಷ್ಟಾಷಷ್ಟಿ ತೀರ್ಥ’ ಗಳಿರುವುದು ಮಹಾರಾಷ್ಟ್ರ ರಾಜ್ಯದಲ್ಲಿ.ಕನ್ನಡದ ಪುಣ್ಯಭೂಮಿಯಾಗಿದ್ದ ಸೊನ್ನಲಿಗೆಯು ಇಂದು ಮಹಾರಾಷ್ಟ್ರದ ಸೊಲ್ಲಾಪುರವೆಂಬ ತೀರ್ಥಕ್ಷೇತ್ರವಾಗಿದೆ,ಪ್ರೇಕ್ಷಣಿಯ ಸ್ಥಳವಾಗಿದೆ,ಪ್ರವಾಸಿತಾಣಗಳಲ್ಲಿ ಒಂದೆನಿಸಿದೆ.ಸಿದ್ಧರಾಮನ ಶಿವಭಕ್ತಿಯ ಬೀಜಗಳು ಮಹಾರಾಷ್ಟ್ರದಲ್ಲೆಲ್ಲ ಪಸರಿಸಿ,ಮನೆಮನೆಗಳಲ್ಲಿ ನೆಲೆಸಿದ್ದಾನೆ ಶ್ರೀಶೈಲದ ಮಲ್ಲಿಕಾರ್ಜುನ.ಶ್ರೀಶೈಲ ಪಾದಯಾತ್ರೆ ಹೊರಡುವ ಮಹಾರಾಷ್ಟ್ರದ ಭಕ್ತರುಗಳಿಗೆ ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಊಟೋಪಚಾರದ ವ್ಯವಸ್ಥೆ ಮಾಡುತ್ತಾರೆ.ಆಗ ಕನ್ನಡಿಗರಿಗಾಗಲಿ,ಆಂಧ್ರಪ್ರದೇಶದವರಿಗಾಗಲಿ ಇವರು ‘ ನಮ್ಮವರಲ್ಲ,ಮಹಾರಾಷ್ಟ್ರದವರು’ ಎ‌ನ್ನುವ ಭಿನ್ನ ಭಾವ ಬರುವುದಿಲ್ಲ.ಎಲ್ಲರೂ ನಮ್ಮವರೆ,ಶ್ರೀಶೈಲ ಮಲ್ಲಯ್ಯನ ಭಕ್ತರು ಎನ್ನುವ ಭಾವ ಬರುತ್ತದೆ.ಆದರೆ ಇತ್ತೀಚೆಗೆ ಪುಂಡರುಗಳು,ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಕನ್ನಡಿಗರು- ಮರಾಠಿಗರು ಎನ್ನುವ ದ್ವೇಷಾಸೂಯೆಗಳ ಕಿಚ್ಚನ್ನು ಹೊತ್ತಿಸುತ್ತಿದ್ದಾರೆ.ಕಳೆದವಾರವಷ್ಟೆ ಬೆಳಗಾವಿ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಭಾಗದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಮಹಾರಾಷ್ಟ್ರದ ಕೆಲವು ಗ್ರಾಮ ಪಂಚಾಯತಿಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಕರ್ನಾಟಕ ರಾಜ್ಯಕ್ಕೆ ಸೇರ್ಪಡೆಗೊಳ್ಳಲು ನಿರ್ಣಯಿಸಿದ್ದವು.ಕರ್ನಾಟಕದ ಮರಾಠಿ ಪ್ರಾಬಲ್ಯದ ಗ್ರಾಮ ಪಂಚಾಯತಿಗಳು ಕೆಲವು ಮಹಾರಾಷ್ಟ್ರ ರಾಜ್ಯವನ್ನು ಸೇರಲು ನಿರ್ಣಯಿಸಿದ್ದವು.ಎರಡು ರಾಜ್ಯಗಳ ರಾಜಕಾರಣಿಗಳಿಗೆ ಇದು ರಾಜಕೀಯ ಅಸ್ತ್ರವಾಯಿತೇ ಹೊರತು ತಮ್ಮ ಗಡಿಪ್ರದೇಶದ ಹಳ್ಳಿಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಉಭಯರಾಜ್ಯಗಳ ರಾಜಕಾರಣಿಗಳಿಗೆ ಅರ್ಥವಾಗಲೇ ಇಲ್ಲ.ಕನ್ನಡಪರ ಮತ್ತು ಮರಾಠಿಪರ ಸಂಘಟನೆಗಳು ಇದನ್ನೇ ದೊಡ್ಡ ವಿಷಯವನ್ನಾಗಿಸಿ,ಗದ್ದಲ ಗಲಾಟೆಯನ್ನುಂಟು ಮಾಡಿದವು.ಮಹಾರಾಷ್ಟ್ರಕ್ಕೆ ಬಂದ ಕನ್ನಡಿಗರ ಮುಖಕ್ಕೆ ಮಸಿಬಳಿಯುವ ಕೆಲಸ ಮರಾಠಿ ಸಂಘಟನೆಗಳು ಮಾಡಿದರೆ ಬೆಳಗಾವಿಗೆ ಬಂದ ಮರಾಠಿಗರ ಮುಖಕ್ಕೆ ಮಸಿಬಳಿಯುವ ಕೆಲಸವನ್ನು ಕನ್ನಡಪರ ಸಂಘಟನೆಗಳು ಮಾಡಿದವು.ಎರಡೂ ರಾಜ್ಯಗಳ ಬಸ್ಸುಗಳಿಗೆ ಬೆಂಕಿ ಹಚ್ಚಿದರು,ಟೈರ್ ಗಳನ್ನು ಸುಟ್ಟರು.ಈ ಕೃತ್ಯವನ್ನು ಯಾರೇ ಮಾಡಿರಲಿ,ಅದು ಖಂಡನೀಯ.ಸಾರ್ವಜನಿಕರ ತೆರಿಗೆಯ ಹಣದಿಂದ ನಡೆಯುತ್ತಿರುವ ಬಸ್ಸುಗಳನ್ನು ಸುಡುವುದು ಸಾರ್ವಜನಿಕ ಸ್ವತ್ತಿನ ದುರ್ಬಳಕೆ ಮತ್ತು ದೌರ್ಜನ್ಯ.ಇದನ್ನು ನಿಗ್ರಹಿಸಿ,ನಿಯಂತ್ರಿಸಬೇಕಾದ ಜವಾಬ್ದಾರಿಯುತ ಸರ್ಕಾರಗಳು ರಾಜಕೀಯ ಕಾರಣಕ್ಕಾಗಿ ಅಸಹಾಯಕತೆಯನ್ನು ನಟಿಸುತ್ತವೆ.ಈಗ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳೆರಡರಲ್ಲಿಯೂ ಭಾರತೀಯ ಜನತಾ ಪಕ್ಷವೇ ಆಡಳಿತದಲ್ಲಿದೆ.ಒಂದೇ ಪಕ್ಷದ ಉಭಯ ಮುಖ್ಯಮಂತ್ರಿಗಳು ಒಂದೆಡೆ ಕುಳಿತು ಮಾತನಾಡಿ ಸಮಸ್ಯೆಯನ್ನು ಪರಿಹರಿಸಬಹುದು ಅಥವಾ ಕೇಂದ್ರದಲ್ಲಿ ಆಡಳಿತದಲ್ಲಿರುವ ಭಾರತೀಯ ಜನತಾ ಪಕ್ಷದ ವರಿಷ್ಠರುಗಳು ಉಭಯ ರಾಜ್ಯಗಳ ಮುಖಂಡರುಗಳನ್ನು ಕರೆದು ವಾತಾವರಣ ತಿಳಿಗೊಳಿಸಬಹುದು.ಆದರೆ ರಾಜಕಾರಣಿಗಳು –ಅವರು ಯಾವ ಪಕ್ಷದವರೇ ಆಗಿರಲಿ– ಇಂತಹ ಸನ್ನಿವೇಶಗಳನ್ನು ಸಹ ರಾಜಕೀಯ ಲಾಭ ಪಡೆಯಲು ಬಳಸಿಕೊಳ್ಳುತ್ತಾರೆ ಎನ್ನುವುದು ಪ್ರಜಾಪ್ರಭುತ್ವದ ದುರಂತ.ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಸಾಹಿತ್ಯಕ- ಸಾಂಸ್ಕೃತಿಕವಾದ ಗಾಢ ಸಂಬಂಧ ಇದೆ; ಕರ್ನಾಟಕದ ಲಕ್ಷಾಂತರ ಜನ ಬಡವರು ಸೊಲ್ಲಾಪುರ,ಪೂನಾ,ಅಂಬರನಾಥ ಮತ್ತು ಮುಂಬೈಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ.ಮಹಾರಾಷ್ಟ್ರದ‌ಸಹಸ್ರಾರು ಸಂಖ್ಯೆಯ ಬಡವರು ಬೆಳಗಾವಿ,ಹುಬ್ಬಳಿ,ಬೆಂಗಳೂರುಗಳಲ್ಲಿ ತಮ್ಮ ಬಾಳುಗಳನ್ನು ಕಟ್ಟಿಕೊಂಡಿದ್ದಾರೆ. ಕೆಲವರ ಸ್ವಾರ್ಥ,ದುರ್ಬುದ್ಧಿಯ ಫಲವಾಗಿ ಕರ್ನಾಟಕದಲ್ಲಿ ಬದುಕುತ್ತಿರುವ ಮರಾಠಿಗರು,ಮಹಾರಾಷ್ಟ್ರದಲ್ಲಿ ಬದುಕುತ್ತಿರುವ ಕನ್ನಡಿಗರು ಸಂಕಷ್ಟವನ್ನನುಭವಿಸಬೇಕಾಗುತ್ತದೆ.

ಭಾಷೆ,ನಾಡು ಯಾವುದಾದರೇನು ಮನುಷ್ಯರೆಲ್ಲರೂ ಒಂದೇ,ಎಲ್ಲರೂ ಶಿವನ ಮಕ್ಕಳೆ ಎನ್ನುವ ಸಾರ್ವತ್ರಿಕ ಸಂದೇಶವನ್ನು ಸಾರುತ್ತಿದ್ದಾನೆ ಶಿವಯೋಗಿ ಸಿದ್ಧರಾಮ ಕರ್ನಾಟಕ ,ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಮನುಷ್ಯ ಸಂಬಂಧಗಳ ಬಾಂಧವ್ಯದ ಬೆಸುಗೆಯಾಗಿ.ಸಿದ್ಧರಾಮನ ದಿವ್ಯವೂ ಭವ್ಯವೂ ಆದ ವ್ಯಕ್ತಿತ್ವವನ್ನು ಅರ್ಥಮಾಡಿಕೊಂಡು ಬಾಳಿದರೆ ಭಾಷಾತಂಟೆಯಾಗಲಿ,ಗಡಿಗಲಾಟೆಯಾಗಲಿ ಉದ್ಭವಿಸದು

‌ ‌( ಮುಂದುವರೆಯುತ್ತದೆ ).

About The Author