ದೀಪಾವಳಿಯ ಅಧ್ಯಾತ್ಮಿಕ ಶಾಸ್ತ್ರೀಯ ಪರಂಪರೆಗಳು ಮತ್ತು ಆಚರಣೆ : ಡಾ.ಈಶ್ವರಾನಂದ ಸ್ವಾಮೀಜಿ

ವರದಿ : ಗುರುಬಸವ ಹುರಿಕಡ್ಲಿ ಗಬ್ಬೂರು

“ಭಾರತವು ಹಬ್ಬಗಳ ತವರೂರು. ಇಲ್ಲಿ ಎಲ್ಲ ಹಬ್ಬಗಳನ್ನು ಆಯಾ ಧರ್ಮ, ಪ್ರಾದೇಶಿಕತೆ, ಸಂಸ್ಕೃತಿಗೆ ಅನುಗುಣವಾಗಿ ಆಚರಿಸುತ್ತಾರೆ. ಈ ಎಲ್ಲ ಹಬ್ಬಗಳಲ್ಲಿ ಪ್ರಮುಖವಾದ ಹಬ್ಬವೆಂದರೆ, ದೀಪಾವಳಿ.” ಭಾರತದ ಎಲ್ಲ ಭಾಗಗಳಲ್ಲೂ ಸಂಭ್ರಮವಾಗಿ ಆಚರಿಸಲ್ಪಡುವ ದೀಪಾವಳಿಯನ್ನು ದಕ್ಷಿಣ ಭಾರತದಲ್ಲಿ ಮೂರು ದಿನ ಆಚರಿಸಿದರೆ, ಉತ್ತರ ಭಾರತದಲ್ಲಿ ಐದು ದಿನಗಳ ಕಾಲ ಆಚರಿಸುವರು.

ಅಸತೋಮಾ ಸದ್ಗಮಯ|
ತಮಸೋಮಾ ಜ್ಯೋತಿರ್ಗಮಯ|
ಮೃತ್ಯೋಮಾ ಅಮೃತಂಗಮಯ|

 ” ಅಸತ್ಯದಿಂದ ಸತ್ಯದೆಡೆಗೂ, ಕತ್ತಲೆಯಿಂದ ಬೆಳಕಿನೆಡೆಗೂ, ಮೃತ್ಯುವಿನಿಂದ ಅಮೃತತ್ವದೆಡೆಗೂ ನಮ್ಮನ್ನು ಕರೆದೊಯ್ಯುವ ಜ್ಞಾನದ ಬೆಳಕಿನ ಸಂಕೇತವಾಗಿದೆ.

“ಅಜ್ಞಾನವೆಂಬ ಅಂಧಕಾರವನ್ನು ಜ್ಞಾನವೆಂಬ ಬೆಳಕಿನಿಂದ ಹೊಡೆದೋಡಿಸಿ, ಮನುಷ್ಯನ ಬದುಕಿನಲ್ಲಿ ಜ್ಞಾನವನ್ನು ತುಂಬುವಂತೆ ಮಾಡುವ ಸಂಕೇತವೇ ದೀಪಾವಳಿ.

” ಒಂದು ದೀಪದಿಂದ ನೂರಾರು ದೀಪಗಳನ್ನು ಹೇಗೆ ಹಚ್ಚಬಹುದೋ ಹಾಗೆಯೇ ಒಬ್ಬ ಜ್ಞಾನಿಯು ತನ್ನಲ್ಲಿರುವ ಜ್ಞಾನದಿಂದ ನೂರಾರು ಅಜ್ಞಾನಿಗಳನ್ನು ಜ್ಞಾನಿಯನ್ನಾಗಿ ಪರಿವರ್ತಿಸಬಹುದು.

ದೀಪ+ಅವಳಿ ಎಂದರೆ `ಜೋಡಿ ದೀಪ’ ಹಾಗೂ ಸಾಲು ಸಾಲುಗಳ ದೀಪಗಳ ಹಬ್ಬಕ್ಕೆ ದೀಪಾವಳಿ ಎಂಬ ಹೆಸರು ಬಂದಿದೆ.”

      ಹಿಂದೂಗಳ ಎಲ್ಲ ಹಬ್ಬಗಳಿಗೆ ಅಧ್ಯಾತ್ಮಶಾಸ್ತ್ರದ ಆಧಾರವಿರುವುದರಿಂದ ಅದರಿಂದ ಚೈತನ್ಯವು ನಿರ್ಮಾಣವಾಗುತ್ತದೆ ಮತ್ತು ಆನಂದ ಸಿಗುತ್ತದೆ.

     ದೀಪಾವಳಿಯಂತಹ ಹಬ್ಬವನ್ನು ಶಾಸ್ತ್ರ ತಿಳಿದು ಆಚರಿಸಿದರೆ ಹಾಗೂ ಅದರಲ್ಲಾಗುವ ತಪ್ಪುಗಳನ್ನು ತಡೆಗಟ್ಟಿದರೆ, ಅದರಿಂದ ಚೈತನ್ಯದ ಅನುಭೂತಿಯನ್ನು ಪಡೆಯಬಹುದು.

          ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಪ್ರಭು ಶ್ರೀರಾಮಚಂದ್ರನು ಅಯೋಧ್ಯೆಗೆ ಹಿಂದಿರುಗಿದನು. ಆಗ ಪ್ರಜೆಗಳು ದೀಪೋತ್ಸವವನ್ನು ಆಚರಿಸಿದರು. ಅಂದಿನಿಂದ ಪ್ರಾರಂಭವಾದ ದೀಪಾವಳಿಯನ್ನು ಯೋಗ್ಯ ರೀತಿಯಲ್ಲಿ ಆಚರಿಸಿ, ಆನಂದವನ್ನು ದ್ವಿಗುಣಪಡಿಸಿಕೊಳ್ಳಿರಿ !

ದೀಪಾವಳಿಯ ದಿನಗಳ ಮಹತ್ವ
ಮತ್ತು 1.ಧನತ್ರಯೋದಶಿ :–ಸಾಧನೆಗೆ ಅನುಕೂಲವಾಗಲು ಮತ್ತು ಐಶ್ವರ್ಯ ಪ್ರಾಪ್ತಿ ಗಾಗಿ ಈ ದಿನದಂದು ಧನಲಕ್ಷಿ ಯ ಪೂಜೆ ಯನ್ನು ಮಾಡುತ್ತಾರೆ. ವರ್ಷವಿಡೀ ಯೋಗ್ಯ ಮಾರ್ಗದಿಂದ ಹಣ ಸಂಪಾದಿಸಿ, ಉಳಿದ ಹಣವನ್ನು ಅಥವಾ ನಮ್ಮ ವಾರ್ಷಿಕ ಉತ್ಪನ್ನದ ಆರನೇ ಒಂದು ಭಾಗವನ್ನು (1/6) ಧರ್ಮ ಕಾರ್ಯಕ್ಕಾಗಿ ಅರ್ಪಣೆ ಮಾಡಬೇಕೆಂದು ಪ್ರತೀತಿ.

        2.ಧನ್ವಂತರಿ ಜಯಂತಿ :–ಈ ದಿನ ದಂದು ಧನ್ವಂತರಿ ದೇವಿಯ ಪೂಜೆ ಮಾಡಿ, ಪ್ರಸಾದವೆಂದು ಅಮೃತದಿಂದ ಉತ್ಪನ್ನ ವಾದ ಬೇವಿನ ಎಲೆಯನ್ನು ಸೇವಿಸುವ ಪದ್ಧತಿ.

3. ನರಕ ಚತುರ್ದಶಿ :–ಮನೆಯವರೆಲ್ಲರೂ ನರಕ ಚತುರ್ದಶಿಯಂದು ಎಣ್ಣೆ ಸ್ನಾನ ಮಾಡುತ್ತಾರೆ. ಕೇದಾರೇಶ್ವರ ವ್ರತ ಹಾಗೂ ಮನೆ, ಅಂಗಡಿ ಮುಂಗಟ್ಟುಗಳಲ್ಲಿ ಧನಲಕ್ಷ್ಮೀ ಪೂಜೆಯನ್ನು ಮಾಡಲಾಗುತ್ತದೆ. ಅರುಣೋದಯದಲ್ಲಿ ಮನೆಯಂಗಳ ಸಾರಿಸಿ, ರಂಗೋಲಿ ಹಾಕಿ ದೀಪಗಳನ್ನು ಬೆಳಗಿಸಲಾಗುತ್ತದೆ. ಅಂದ ಚೆಂದದ ಆಕಾಶಬುಟ್ಟಿಗಳನ್ನು ಮನೆಯ ಮುಂಬಾಗಿಲಿಗೆ ಇಳಿಬಿಟ್ಟ ದೃಶ್ಯ ಕಾಣಸಿಗುತ್ತದೆ. ಈ ದಿನದ ಸ್ನಾನಕ್ಕೆ ಬಹಳ ಮಹತ್ವವಿದೆ. ಸ್ತ್ರೀಯರು, ಪುರುಷರು, ಮಕ್ಕಳು, ವೃದ್ಧರು, ರೋಗಿಗಳನ್ನೊಳಗೊಂಡಂತೆ ಸನ್ಯಾಸಿಗಳು ಸಹ ಇಂದು ಎಣ್ಣೆಸ್ನಾನ ಮಾಡಲೇಬೇಕು ಎಂದು ಧರ್ಮಶಾಸ್ತ್ರ ಹೇಳುತ್ತದೆ.

ಎಣ್ಣೆಯಲ್ಲಿ ಲಕ್ಷ್ಮೀಯು, ನೀರಿನಲ್ಲಿ ಗಂಗೆಯೂ ಇರುವದರಿಂದ ಲಕ್ಷ್ಮೀ, ಗಂಗೆಯರ ಕೃಪೆ, ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆಯಿಂದ ಎಣ್ಣೆಸ್ನಾನ ಮಾಡುತ್ತಾರೆ.

`ನರಕ’ ಎಂಬುದಕ್ಕೆ ಅಜ್ಞಾನ ಎಂಬ ಅರ್ಥವಿದೆ. ಈ ಅಜ್ಞಾನವು ಚತುರ್ದಶಿಯ ದಿನದಿಂದಲೇ ನಾಶವಾಗಿ ಜ್ಞಾನವು ದೊರೆಯಲಿ ಎಂದು ನರಕ ಚತುರ್ದಶಿ ಹಬ್ಬವನ್ನು ಆಚರಿಸಲಾಗುತ್ತದೆ ಹಾಗೂ `ಚತುರ್ದಶಿ’ ಎಂದರೆ ಹದಿನಾಲ್ಕು ವಿದ್ಯೆ ಎಂದರ್ಥ.

ಜ್ಞಾನವನ್ನು ಪಡೆಯಲು 14 ವಿದ್ಯೆಗಳನ್ನು ಸಂಪಾದಿಸಬೇಕೆಂದು ಎಂದು ವೇದೋಪನಿಷತ್ತುಗಳು ಹೇಳುತ್ತವೆ.

     ಆ ಹದಿನಾಲ್ಕು ವಿದ್ಯೆಗಳು
1. ಯಜುರ್ವೇದ
2. ಸಾಮವೇದ
3. ಋಗ್ವೇದ
4. ಅಥರ್ವಣವೇದ
5. ಕಲ್ಪ
6. ಸಂಹಿತೆ
7. ಜ್ಯೋತಿಷ್ಯ
8. ಪುರಾಣ
9. ಸ್ಮೃತಿ
10. ವ್ಯಾಕರಣ
11. ಶೀಕ್ಷಾ
12. ನ್ಯಾಯ
13. ಛಂದಸ್ಸು
14. ಮೀಮಾಂಸೆ

        ದೀಪಾವಳಿ ಅಮವಾಸ್ಯೆ ಲಕ್ಷ್ಮೀ ಪೂಜೆಗೆ ಅತ್ಯಂತ ಪ್ರಶಸ್ತವಾದ ಶುಭದಿನ. ಸಾಮಾನ್ಯವಾಗಿ ಹಿಂದೂ ಪಂಚಾಂಗದ ಪ್ರಕಾರ ಅಮವಾಸ್ಯೆಯನ್ನು ಶುಭ ಕಾರ್ಯವನ್ನು ಮಾಡಲಾಗದು ಎಂದು ಪರಿಗಣಿಸಲಾಗುತ್ತದೆ. ಅಂದು ಯಾವುದೇ ಹೊಸ ಕಾರ್ಯವಾಗಲೀ, ಖರೀದಿಯಾಗಲಿ, ಮಂಗಳಕರ ಪೂಜೆಯನ್ನಾಗಲೀ ಮಾಡುವುದಿಲ್ಲ. ಆದರೆ, ಈ ದೀಪಾವಳಿ ಅಮವಾಸ್ಯೆಯು ಇದಕ್ಕೆ ಹೊರತಾಗಿದೆ. ಏಕೆಂದರೆ, ಪುರಾಣದ ಕಾಲದಲ್ಲಿ ಸಮುದ್ರಮಂಥನ ಮಾಡುವಾಗ ಮಹಾಲಕ್ಷ್ಮಿಯು ಜನಿಸಿದಳು ಎಂಬ ಪ್ರತೀತಿಯಿಂದ ಇಂದು ವ್ಯಾಪಾರಸ್ಥರು ತಮ್ಮ ಅಂಗಡಿ, ಮುಂಗಟ್ಟುಗಳಲ್ಲಿ, ಕಛೇರಿಗಳಲ್ಲಿ ಧನಲಕ್ಷ್ಮಿ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡಿ, “ವರುಷವೆಲ್ಲಾ ಹರುಷ ನೀಡಿ, ಸಿರಿ-ಸಂಪತ್ತು ನೀಡೆಂದು” ಪ್ರಾರ್ಥಿಸುತ್ತಾರೆ. ಎಲ್ಲರಿಗೂ ಸಿಹಿ ಹಂಚಿ ಖುಷಿಪಡುತ್ತಾರೆ. ಅಂದು ಇರುಳೆಲ್ಲ ಅಂಗಡಿ ಬಾಗಿಲು ತೆಗೆದಿರಿಸಿ ಜಾಗರಣೆ ಮಾಡುತ್ತಾರೆ. ಈ ದಿನದಂದು ಯಾವುದೇ ಶುಭಕಾರ್ಯವನ್ನು ತಿಥಿ, ನಕ್ಷತ್ರ ಕಾಲವನ್ನು ನೋಡದೇ ಆರಂಭಿಸಬಹುದೆಂದು ಹೇಳುತ್ತಾರೆ. ಸಂಜೆ ಹಾಡು, ಕುಣಿತ, ಬಂಧು-ಬಾಂಧವರೊಡನೆ ಜೂಜಾಡುತ್ತಾ ರಾತ್ರಿ ಸಮಯವನ್ನು ಕಳೆಯುತ್ತಾರೆ. ವಿಶೇಷವೆಂದರೆ, ಅಂದು ಮನೆ, ಬೀದಿ, ದೇವಸ್ಥಾನ ಅಲ್ಲದೇ ಸ್ಮಶಾನದಲ್ಲಿಯೂ ದೀಪವನ್ನು ಬೆಳಗಿಸಲಾಗುತ್ತದೆ.

4.ಶ್ರೀಲಕ್ಷ್ಮೀಪೂಜೆ :ಈ ದಿನ ಶ್ರೀಲಕ್ಷ್ಮೀದೇವಿಯ ಮಾರಕ ತತ್ತ್ವವು ಕಾರ್ಯನಿರತವಾಗಿರುತ್ತದೆ. ಈ ಮಾರಕ ತತ್ತ್ವದ ಅತ್ಯಧಿಕ ಲಾಭವಾಗಲು ಶ್ರೀ ಲಕ್ಷ್ಮೀದೇವಿಯ ಪೂಜೆಯನ್ನು ಶಾಸ್ತ್ರೋಕ್ತ ವಾಗಿ ಮಾಡಬೇಕು.

5.ಬಲಿಪಾಡ್ಯ (ದೀಪಾವಳಿ ಪಾಡ್ಯ) :-ಬಲಿರಾಜನ ಅಧಿಪತ್ಯದಲ್ಲಿರುವ ಕೆಟ್ಟ ಶಕ್ತಿಗಳಿಂದ ತೊಂದರೆಯಾಗಬಾರದೆಂದು ಈ ದಿನ ಬಲಿರಾಜನ ಪ್ರತಿಮೆಗೆ ಪೂಜೆ ಮಾಡುತ್ತಾರೆ.

6.ಸಹೋದರ ಬಿದಿಗೆ :-ಈ ದಿನ ಸಹೋದರಿಯು ಸಹೋದರನಿಗೆ ಆರತಿ ಮಾಡುವಾಗ ‘ದೇವರಿಗೇ ಆರತಿ ಮಾಡುತ್ತಿ ದ್ದೇನೆ’ ಎಂಬ ಭಾವವಿಟ್ಟರೆ ಸಹೋದರನಲ್ಲಿ ರುವ ಈಶ್ವರೀ ತತ್ತ್ವವು ಜಾಗೃತವಾಗಿ ಸಹೋದರಿಗೆ ಅದರ ಲಾಭವಾಗುತ್ತದೆ.

About The Author