ಮೂರನೇ ಕಣ್ಣು : ಮಕ್ಕಳ ಪೋಷಕರಿಂದ ದೇಣಿಗೆ ಸಂಗ್ರಹಿಸುವುದು ಸರಿಯಲ್ಲ : ಮುಕ್ಕಣ್ಣ ಕರಿಗಾರ

ಶಾಲೆಗಳ ಅಭಿವೃದ್ಧಿ ನಿಧಿಗೆಂದು ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರು ಮಕ್ಕಳ ಪೋಷಕರುಗಳಿಂದ ಪ್ರತಿ ತಿಂಗಳು ₹100 ಗಳ ದೇಣಿಗೆ ಸಂಗ್ರಹಿಸಲು ಎಸ್ ಡಿ ಎಂ ಸಿ ಗಳಿಗೆ ಅಧಿಕಾರ ನೀಡಿ ,ಹೊರಡಿಸಿದ ಆದೇಶಕ್ಕೆ ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅಗತ್ಯವಿರುವ ಖರ್ಚುವೆಚ್ಚಗಳಿಗಾಗಿ ಈ ದೇಣಿಗೆ ಸಂಗ್ರಹ ಎಂದು ಆಯುಕ್ತರ ಆದೇಶದಲ್ಲಿ ವಿವರಿಸಲಾಗಿದೆ.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉದ್ದೇಶ ಏನೇ ಆಗಿರಲಿ ಮಕ್ಕಳ ಪೋಷಕರುಗಳಿಂದ ಪ್ರತಿ ತಿಂಗಳು ಒಂದು ನೂರು ರೂಪಾಯಿಗಳ ದೇಣಿಗೆ ನಿರೀಕ್ಷಿಸುವುದು ಅಪೇಕ್ಷಣೀಯ ಕ್ರಮವಲ್ಲ.ಇದರಿಂದ ಗ್ರಾಮೀಣ ಪ್ರದೇಶ ಮತ್ತು ನಗರಪ್ರದೇಶಗಳ ಬಡವರ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.ಸರಕಾರಿ ಶಾಲೆಗಳಿಗೆ ಬಡವರು,ದುಡಿಯುವವರು ಮತ್ತು ಶೋಷಿತ ಸಮುದಾಯ ಮಕ್ಕಳು ವಿದ್ಯಾಭ್ಯಾಸಕ್ಕೆ ಹೋಗುತ್ತಾರೆಯೇ ಹೊರತು ಶ್ರೀಮಂತರ ಮಕ್ಕಳು ಸರಕಾರಿ ಶಾಲೆಗಳಿಗೆ ಹೋಗುವುದಿಲ್ಲ.ಗ್ರಾಮೀಣ ಪ್ರದೇಶದ ಬಡವರು ಇಂದಿಗೂ ಆರ್ಥಿಕವಾಗಿ ತೀರ ದುರ್ಬಲರಾಗಿದ್ದಾರೆ.ದಿನದಿನದ ಹೊಟ್ಟೆ ಹೊರೆಯುವುದೇ ಕಷ್ಟವಾಗಿರುವ ಅಸಂಖ್ಯಾತ ಬಡಕುಟುಂಬಗಳಿವೆ.ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯು ಜಾರಿಯಲ್ಲಿದೆಯೆಂದೇ ಬಡಮಕ್ಕಳು ಶಾಲೆಗೆ ಬರುತ್ತಿದ್ದಾರೆ.ಸರಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಹೆಚ್ಚಿಸುವುದು ಸರಕಾರದ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆದ್ಯಕರ್ತವ್ಯ.ಸರಕಾರಿ ಶಾಲೆಗಳಿಗೆ ಸೇರಲು ಮಕ್ಕಳನ್ನು ಉತ್ತೇಜಿಸಬೇಕಾದ ಇಲಾಖೆಯು ಬಡಮಕ್ಕಳ ಶಿಕ್ಷಣದ ಹಕ್ಕಿನೊಂದಿಗೆ ಆಟವಾಡುವ ಇಂತಹ ಆದೇಶ ಹೊರಡಿಸಿದ್ದು ದುರದೃಷ್ಟಕರ.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಶಿಕ್ಷಣ ಇಲಾಖೆಯವರಿಗೆ ತಿಂಗಳಿಗೆ ನೂರು ರೂಪಾಯಿ ಹೊರೆಯಲ್ಲ ಎನ್ನಿಸಿರಬಹುದು; ಆದರೆ ಹತ್ತುರೂಪಾಯಿಗೂ ಪರದಾಡುವ ಗ್ರಾಮೀಣ ಕುಟುಂಬಗಳಿವೆ ಎನ್ನುವ ಸತ್ಯ ಅವರಿಗೆ ಗೊತ್ತಿಲ್ಲ.

ಒಂದರಿಂದ ಹದಿನಾಲ್ಕನೇ ವರ್ಷದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕನ್ನು ಮಕ್ಕಳಿಗೆ ನಮ್ಮ ಸಂವಿಧಾನ ನೀಡಿದೆ.Right to Education Act ಮಕ್ಕಳು ಶಿಕ್ಷಣ ಪಡೆಯುವುದು ಅವರ ಹಕ್ಕು ಎಂದು ಪ್ರತಿಪಾದಿಸುವ ಶಾಸನವಾಗಿ ಮಕ್ಕಳ ಶಿಕ್ಷಣದ ಹಕ್ಕಿಗೆ ತೊಡರುಗಾಲು ಆಗಿರುವ ಅಡೆ- ತಡೆ,ಅಡ್ಡಿ-ಆತಂಕಗಳನ್ನು ನಿವಾರಿಸಿದೆ.ಸರಕಾರಗಳು ಮಕ್ಕಳ ಶಿಕ್ಷಣದ ವೆಚ್ಚ ಭರಿಸುವುದು ಸಂವಿಧಾನ ಬದ್ಧ ಕರ್ತವ್ಯ ಮತ್ತು ಸರಕಾರಗಳ ಸಾಮಾಜಿಕ ಬದ್ಧತೆ.ಶಿಕ್ಷಣಕ್ಕಾಗಿ ಮಾಡುವ ವೆಚ್ಚವು ‘ ಅನುತ್ಪಾದಕವೆಚ್ಚ’ ವೆಂದೆನ್ನಿಸಿದರೂ ಭವ್ಯ ಭಾರತವನ್ನು ನಿರ್ಮಿಸುವುದಕ್ಕೆ,ನಾಡಿನ ನಾಳಿನ ಸತ್ಪ್ರಜೆಗಳನ್ನು ರೂಪಿಸುವುದಕ್ಕೆ ಕೊಡುವ ಕೊಡುಗೆ ಎಂದು ಎಲ್ಲ ಸರಕಾರಗಳು ಭಾವಿಸಬೇಕು.ಸರಕಾರದ ಅನಗತ್ಯ ಮತ್ತು ದುಂದುವೆಚ್ಚದ ಬಾಬತ್ತುಗಳು ಸಾಕಷ್ಟು ಇವೆ.ಅವುಗಳನ್ನು ರದ್ದುಪಡಿಸಿಯಾದರೂ ಶಿಕ್ಷಣ ಇಲಾಖೆಗೆ ಅನುದಾನ ನೀಡಬೇಕು. ವಿವಿಧ ಜಾತಿಗಳ ಮಠ- ಪೀಠಗಳಿಗೆ,ಸ್ವಾಮಿಗಳಿಗೆ,ಕಾರ್ಪೋರೇಟ್ ಧರ್ಮಗುರುಗಳಿಗೆ ನೀರಿನಂತೆ ಹಣ ಚೆಲ್ಲುವ ಸರಕಾರವು ಬಡಮಕ್ಕಳ ಶಿಕ್ಷಣಕ್ಕೆ ಬೇಕಾಗುವಷ್ಟು ಅನುದಾನ ಕೊಡಲು ಹಿಂದೇಟು ಹಾಕುವುದು ಯಾಕೆ? ಸ್ವಾಮಿಗಳು-ಮಠ- ಪೀಠಾಧೀಶರುಗಳಿಗೆ ಸರಕಾರದ ಕೋಟಿಕೋಟಿ ಹಣ ಯಾಕೆ ನೀಡಬೇಕು? ಸಂನ್ಯಾಸಿಗಳು,ಕಾವಿಧಾರಿಗಳು ಮಾಡಬೇಕಾದದ್ದು ಶಾಲೆ- ಕಾಲೇಜು,ಆಸ್ಪತ್ರೆಗಳನ್ನು ತೆರೆಯುವ ವ್ಯಾಪಾರಿ ಕಾರ್ಯವನ್ನಲ್ಲ; ಅವರು ಮಾಡಬೇಕಾದದ್ದು ಧರ್ಮಜಾಗೃತಿ,ಆಧ್ಯಾತ್ಮಿಕ ಕಾರ್ಯ.ಮಾಡಬೇಕಾದುದನ್ನು ಬಿಟ್ಟು ಮಾಡಬಾರದುದನ್ನು ಮಾಡುತ್ತಿರುವ ಕಾವಿಧಾರಿಗಳಿಗೆ,ಮಠ- ಪೀಠಾಧೀಶರುಗಳಿಗೆ ಸಾರ್ವಜನಿಕರ ತೆರಿಗೆಯ ಹಣದಲ್ಲಿ ಕೋಟಿಕೋಟಿಗಳ ಅನುದಾನ ನೀಡುವುದು ಪಾಪಕಾರ್ಯ! ಮಠಪೀಠಗಳಿಗೆ ಹಣನೀಡುವ ಉದ್ದೇಶ ಬೇರೆಯದೆ ಆಗಿದೆ.ನಮ್ಮ ಸಂವಿಧಾನದ ಜಾತ್ಯಾತೀತ ನಿಲುವಿಗೆ ಬದ್ಧರಾದರೆ ಸರಕಾರಗಳು ಮಠ- ಪೀಠಗಳು,ಧಾರ್ಮಿಕ ಕ್ಷೇತ್ರಗಳಿಗೆ ಅನುದಾನ,ಕೊಡುಗೆಗಳನ್ನು ನೀಡುವಂತಿಲ್ಲ.ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಧಾರ್ಮಿಕ ಸಂಸ್ಥೆಗಳಿಗೆ ಪ್ರತಿವರ್ಷ ಒಂದು ಸಾವಿರ ಕೋಟಿಯಷ್ಟು ಅನುದಾನ ನೀಡಲಾಗುತ್ತಿದೆ.ಸಾರ್ವಜನಿಕರ ಹಣವನ್ನು ಹೀಗೆ ಉದಾರಮನಸ್ಸಿನಿಂದ ಮಠ- ಪೀಠಗಳಿಗೆ ದಾನನೀಡಿ,ಸ್ವಾಮಿಗಳ ಆಶೀರ್ವಾದದಿಂದ ಪುನೀತರಾದೆವು ಎನ್ನುವ ಮಹಾನುಭಾವರುಗಳು ತಮ್ಮ ಸ್ವಂತ ಹಣವನ್ನು ಹೀಗೆ ಉದಾರವಾಗಿ ನೀಡುತ್ತಾರೆಯೆ? ‘ ಯಾರದೋ ಗಂಟು,ಯಲ್ಲಮ್ಮನ ಜಾತ್ರೆ’ ಎಂದು ಭಾವಿಸಿ,ಸಾರ್ವಜನಿಕರ ಸಂಪತ್ತನ್ನು ಮನಸ್ವಿಯಾಗಿ ಬಳಸುವವರು ಜನಹಿತ ಸಾಧಿಸರು.ಮಠ ಪೀಠಾಧೀಶರುಗಳು ಶಾಲೆ- ಕಾಲೇಜು,ಆಸ್ಪತ್ರೆಗಳನ್ನು ನಡೆಸುವಂತಿದ್ದರೆ ಭಕ್ತರುಗಳಿಂದ ಭಿಕ್ಷೆಬೇಡಲಿ,ದೇಣಿಗೆ ಸಂಗ್ರಹಿಸಲಿ.ಮಠ ಪೀಠಾಧೀಶರುಗಳೇನು ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರಸ್ವಾಮಿಗಳವರಂತೆ ಮಕ್ಕಳಿಗೆ ಉಚಿತ ಶಿಕ್ಷಣ,ಅನ್ನ,ವಸತಿ ನೀಡುವುದಿಲ್ಲ; ಬದಲಿಗೆ ಡೊನೇಶನ್,ಕ್ಯಾಪಿಟೇಶನ್ ಶುಲ್ಕಗಳಾದಿ ಹತ್ತೆಂಟು ಶುಲ್ಕಗಳನ್ನು ವಿಧಿಸಿ ಲಾಭಪಡೆಯುತ್ತಿದ್ದಾರೆ.ಯಾವುದಾದರೂ ಸ್ವಾಮಿ ಬಡಮಕ್ಕಳಿಗಾಗಿ ಹಾಸ್ಟೇಲು ಕಟ್ಟಿಸುತ್ತೇನೆ ಎಂದರೆ ಅದರಿಂದ ಅವರಿಗೆ ಪುಣ್ಯಬರುತ್ತದೆ.ಅವರ ಪುಣ್ಯದಲ್ಲಿ ಸರಕಾರಕ್ಕೇನು ಪಾಲು ಬರುವುದಿಲ್ಲ! ಸರಕಾರವು ತನ್ನ ನಿಯಂತ್ರಣದಲ್ಲಿರುವ ಸರಕಾರಿ ಶಾಲೆ,ಹಾಸ್ಟೇಲುಗಳನ್ನು ಚೆನ್ನಾಗಿ ನೋಡಿಕೊಂಡರಷ್ಟೆ ಸಾಕು.ಸರಕಾರಿ ಶಾಲೆ,ಹಾಸ್ಟೇಲುಗಳಲ್ಲಿ ಓದುತ್ತಿರುವ ಬಡಮಕ್ಕಳ ಆಶೀರ್ವಾದ ಸರಕಾರಕ್ಕೆ ಸಿಗುತ್ತದೆ.

ಸರಕಾರದ ಹಣವನ್ನು ಸಂಘ- ಸಂಸ್ಥೆಗಳು,ಟ್ರಸ್ಟ್ ಗಳು,ಸರ್ಕಾರೇತರ ಸಂಸ್ಥೆಗಳಿಗೆ ಕೊಡುವ ಪ್ರವೃತ್ತಿಗೆ ಕಡಿವಾಣ ಬೀಳಬೇಕು.ಖಾಸಗಿ ವ್ಯಕ್ತಿ,ಸಂಸ್ಥೆಗಳಿಗೆ ಅನುದಾನ- ಸಹಾಯಾನುದಾನ ನೀಡುವ ಬದಲು ಅದನ್ನೇ ಸರಕಾರಿ ಶಾಲೆಗಳು,ಹಾಸ್ಟೇಲುಗಳಿಗೆ ಬಳಸಬೇಕು.ಸಂವಿಧಾನಕ್ಕೆ ಹೊರತಾದ ಎಲ್ಲವನ್ನೂ ಘನಕಾರ್ಯವೆಂಬಂತೆ ಮಾಡುವವರಿಗೆ ಬಡಮಕ್ಕಳಿಗೆ ಶಿಕ್ಷಣ ನೀಡುವುದು ತಮ್ಮ ಸಂವಿಧಾನಬದ್ಧ ಕರ್ತವ್ಯ ಎಂದು ಅನ್ನಿಸುವುದೇ ಇಲ್ಲ !

‌.    ಎಸ್ ಡಿ ಎಂ ಸಿ ಗಳಿಗೆ ಪೋಷಕರುಗಳಿಂದ ದೇಣಿಗೆ ಸಂಗ್ರಹಿಸಲು ಅಧಿಕಾರ ನೀಡುವುದು ಎಸ್ ಡಿ ಎಂ ಸಿ ಗಳ ಭ್ರಷ್ಟಾಚಾರ ಮತ್ತು ಸ್ವೇಚ್ಛಾಚಾರಕ್ಕೂ ಕಾರಣವಾಗುತ್ತದೆ.ಈಗಾಗಲೆ ಎಸ್ ಡಿ ಎಂ ಸಿ ಗಳು ಶಿಕ್ಷಕರು,ಪೋಷಕರುಗಳು ಮತ್ತು ಗ್ರಾಮಸಮುದಾಯಕ್ಕೆ ‘ ತಲೆನೋವು’ ಆಗಿವೆ.ಎಸ್ ಡಿ ಎಂ ಸಿ ಅಧ್ಯಕ್ಷರುಗಳಾದವರು ಶಾಲೆಗಳ ಮುಖ್ಯೋಪಾಧ್ಯಾರುಗಳು,ಶಿಕ್ಷಕರುಗಳ ಮೇಲೆ ಹಿಡಿತ ಸಾಧಿಸುವ ನಿಯಂತ್ರಣಾಧಿಕಾರಿಗಳಾಗುತ್ತಿದ್ದಾರೆ.ಶಾಲೆಗಳಲ್ಲಿ ಕೈಗೊಳ್ಳುವ ಶಾಲಾ ಕಟ್ಟಡಗಳ ನಿರ್ಮಾಣ,ದುರಸ್ತಿ ಸೇರಿದಂತೆ ಮೂಲಭೂತಸೌಕರ್ಯಗಳ ಕಾಮಗಾರಿಗಳನ್ನು ಗುತ್ತಿಗೆ ಪಡೆದು ನಿರ್ವಹಿಸುವುದು ತಮ್ಮ ಹಕ್ಕು ಎಂಬಂತೆ ವರ್ತಿಸುತ್ತಿರುವ ಎಸ್ ಡಿ ಎಂ ಸಿಗಳು ನಿಜವಾದ ಅರ್ಥದ ಚುನಾಯಿತ ಸಂಸ್ಥೆಗಳಲ್ಲ.ಕೇವಲ ಪೋಷಕರ ಪ್ರತಿನಿಧಿಗಳಾಗಿರುವ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ ಚುನಾಯಿತ ಸದಸ್ಯರ ಸ್ಥಾನ ಮಾನಗಳನ್ನು ನೀಡುವುದು ಸೂಕ್ತವೂ ಅಲ್ಲ.ಎಸ್ ಡಿ ಎಂ ಸಿ ಗಳು ತಳಹಂತದ ಸ್ಥಳೀಯ ಸರ್ಕಾರಗಳಾಗಿರುವ ಗ್ರಾಮ ಪಂಚಾಯತಿಗಳ ಒಂದು ಉಪಸಮಿತಿ ಇಲ್ಲವೆ ಸ್ಥಾಯಿ ಸಮಿತಿ ಆಗಿ ಕಾರ್ಯನಿರ್ವಹಿಸಬೇಕು.ಗ್ರಾಮ ಪಂಚಾಯತಿಗಳು ಗ್ರಾಮಸಭೆಗೆ ಉತ್ತರದಾಯಿ ಆಗಿವೆ.ಎಸ್ ಡಿ ಎಂ ಸಿ ಗಳು ಯಾರಿಗೆ ಉತ್ತರದಾಯಿಗಳು? ಇಂತಹ ಉತ್ತರದಾಯಿಗಳಲ್ಲದ ಸಂಸ್ಥೆಗಳಿಗೆ ಸರಕಾರಿ ಕಾಮಗಾರಿಗಳನ್ನು ವಹಿಸಿಕೊಟ್ಟಿರುವುದಲ್ಲದೆ ಈಗ ಮಕ್ಕಳ ಪೋಷಕರುಗಳಿಂದ ಹಣ ಸಂಗ್ರಹಿಸುವ ಅಧಿಕಾರ ನೀಡಿದರೆ ಎಸ್ ಡಿ ಎಂ ಸಿ ಅಧ್ಯಕ್ಷರುಗಳ ಕಿಸೆಗೆ ಹಣ ಸಂದಾಯವಾಗಲು ಅವಕಾಶ ಮಾಡಿಕೊಟ್ಟಂತೆ.ಎಲ್ಲೆಲ್ಲಿ ಶಾಲೆಗಳ ಮುಖ್ಯೊಪಾಧ್ಯಾರುಗಳು ಪ್ರಾಮಾಣಿಕರು ಮತ್ತು ಬಿಗಿನಿಲುವಿನವರು ಆಗಿದ್ದಾರೋ ಅಂತಹ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಸಾರ್ವಜನಿಕರ ಹಣ ದುರೂಪಯೋಗ ಆಗುವುದಿಲ್ಲ.ಎಸ್ ಡಿ ಎಂ ಸಿ ಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಆಗಿರುವ ಮುಖ್ಯೋಪಾಧ್ಯಾಯರ ನಡುವೆ ನಡೆಯುತ್ತಿರುವ ‘ಹೊಂದಾಣಿಕೆ’ಯು ಸಾರ್ವಜನಿಕ ಹಣ ದುರ್ಬಳಕೆಯ ಕಾರಣವಾಗಿದೆ.ಇಂತಹ ಸಾಕಷ್ಟು ಎಡವಟ್ಟುಗಳ ನಡುವೆಯೂ ಮತ್ತೆ ಎಸ್ ಡಿ ಎಂ ಸಿ ಗಳಿಗೆ ಪೋಷಕರುಗಳಿಂದ ತಿಂಗಳಿಗೆ ನೂರು ರೂಪಾಯಿ ಸಂಗ್ರಹಿಸಲು ಅಧಿಕಾರ ನೀಡುವುದು ಸರಿಯಾದ ನಿರ್ಧಾರವಲ್ಲ.ಸರಕಾರದ ಶಾಲಾ ಮತ್ತು ಸಾಕ್ಷರಾತಾ ಇಲಾಖೆಯ ಆಯುಕ್ತರು ಕೂಡಲೆ ತಮ್ಮ ಆದೇಶವನ್ನು ಹಿಂಪಡೆದು ಮಕ್ಕಳ ಸಂವಿಧಾನಬದ್ಧ ಶಿಕ್ಷಣದ ಹಕ್ಕನ್ನು ಎತ್ತಿ ಹಿಡಿಯುವ ಕೆಲಸ ಮಾಡಲಿ.

About The Author