ಮೂರನೇ ಕಣ್ಣು : ಆರಂಭದ ದಿನಗಳಲ್ಲಿಯೇ ಭರವಸೆ ಮೂಡಿಸಿದ ಕರ್ನಾಟಕ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿ ವರಾಳೆಯವರು : ಮುಕ್ಕಣ್ಣ ಕರಿಗಾರ

ಮೂರನೇ ಕಣ್ಣು

‘ ನ್ಯಾಯದಾನಕ್ಕೆ ಸಂವಿಧಾನ ತಳಹದಿಯಾಗಬೇಕೇ ಹೊರತು ಧರ್ಮವಲ್ಲ’ ಎನ್ನುವ ಮಾತುಗಳನ್ನಾಡುವ ಮೂಲಕ ಕರ್ನಾಟಕ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರು ಜನರ ಗಮನ ಸೆಳೆದಿದ್ದಾರೆ,ನ್ಯಾಯ ನಿರೀಕ್ಷಿಸುವ ಜನರಲ್ಲಿ ಭರವಸೆ ಹುಟ್ಟಿಸಿದ್ದಾರೆ,ಸಂವಿಧಾನ ಬದ್ಧ ಮನಸ್ಸುಗಳ ಗೌರವಾದರಗಳಿಗೆ ಪಾತ್ರರಾಗಿದ್ದಾರೆ.ಇತ್ತೀಚೆಗಷ್ಟೆ ಕರ್ನಾಟಕ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿಯಾಗಿ ನೇಮಕಗೊಂಡ ಪ್ರಸನ್ನ ಬಾಲಚಂದ್ರ ವರಾಳೆ ಅವರು ಸೋಮವಾರ (೧೭.೧೦೨೦೨೨) ದಂದು ಹೈಕೋರ್ಟ್ ವಕೀಲರ ಸಭಾಂಗಣದಲ್ಲಿ ವಕೀಲರ ಸಂಘದಿಂದ ನಡೆದ ಸ್ವಾಗತ ಸಮಾರಂಭದಲ್ಲಿ ಗೌರವ ಸ್ವೀಕರಿಸುತ್ತ ಮೇಲಿನ ಮಾತುಗಳನ್ನಾಡಿದ್ದಾರೆ.ಮೂಲತಃ ಕನ್ನಡಿಗರಾದ ಅವರು ಮಹಾರಾಷ್ಟ್ರದ ಔರಂಗಬಾದಿನಿಂದ ತಮ್ಮ ವಕೀಲಿವೃತ್ತಿಯನ್ನು ಪ್ರಾರಂಭಿಸಿ ಕರ್ನಾಟಕ ಹೈಕೋರ್ಟ್ ನ ಮುಖ್ಯನ್ಯಾಯಾಧೀಶರ ಸ್ಥಾನದವರೆಗೆ ಉನ್ನತಿಯನ್ನು ಸಾಧಿಸಲು ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ ಎಂಬುದನ್ನು ಸ್ಮರಿಸಿಕೊಂಡಿದ್ದಾರೆ. ವರಾಳೆ ಅವರ ತಂದೆ ಮತ್ತು ಅಜ್ಜ ಅವರಿಬ್ಬರು ಡಾ.ಬಿ ಆರ್ ಅಂಬೇಡ್ಕರ್ ಅವರ ನಿಕಟವರ್ತಿಗಳಾಗಿದ್ದುದು ಸ್ಮರಣಾರ್ಹ.ಅಂಬೇಡ್ಕರ್ ಅವರ ಸ್ಫೂರ್ತಿಸೆಲೆಯಲ್ಲಿ ಹೊರಹೊಮ್ಮಿದ ನ್ಯಾಯ ಚೇತನ ಪ್ರಸನ್ನ ಬಾಲಚಂದ್ರ ವರಾಳೆ ಅವರಿಂದ ಖಂಡಿತವಾಗಿಯೂ ಸಂವಿಧಾನಕ್ಕೆ ಅಗ್ರಮಾನ್ಯತೆ ಸಲ್ಲುತ್ತದೆ ಮತ್ತು ನ್ಯಾಯದಾನದಲ್ಲಿ ಸಂವಿಧಾನವೇ ಗೆಲ್ಲುತ್ತದೆ ಎಂದು ಆಶಿಸಬಹುದು.

ಭಾರತವು ಜಾತ್ಯಾತೀತ ರಾಷ್ಟ್ರವಾಗಿದ್ದು ಸಂವಿಧಾನವೇ ದೇಶದ ಸಾರ್ವಭೌಮ ಕಾನೂನು.ಸಂವಿಧಾನದಾಚೆಗೆ ಮತ್ತೊಂದು ಕಾನೂನು,ಮಾರ್ಗದರ್ಶಿ ಗ್ರಂಥಗಳಿಲ್ಲ.ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಭಾರತದಲ್ಲಿ ಪ್ರಜೆಗಳು ತಮ್ಮ ವ್ಯಕ್ತಿಗತ ನೆಲೆಯಲ್ಲಿ ಕುಟುಂಬಗಳಲ್ಲಿ,ಸಾಮಾಜಿಕ ನೆಲೆಯಲ್ಲಿ ಸ್ವಯಂ ಇಷ್ಟದ ದೈವ ದೇವರುಗಳನ್ನು ಪೂಜಿಸುವ ಸ್ವಾತಂತ್ರ್ಯ ಪಡೆದಿದ್ದಾರಾದರೂ ಸಾರ್ವಜನಿಕ ಜೀವನದಲ್ಲಿ ಎಲ್ಲರೂ ಸಂವಿಧಾನದ ಆಶಯಗಳಿಗೆ ತಕ್ಕಂತೆ ನಡೆದುಕೊಳ್ಳಬೇಕು.ನ್ಯಾಯಾಧೀಶರುಗಳಂತೂ ಸಂವಿಧಾನ ಬದ್ಧವಾಗಿಯೇ ನಡೆದುಕೊಳ್ಳಬೇಕಾದವರು.ಆದರೆ ಕೆಲವು ನ್ಯಾಯಾಧೀಶರುಗಳು ಧರ್ಮದ ಪ್ರಭಾವದಲ್ಲಿ ತೀರ್ಪುಗಳನ್ನು ನೀಡುತ್ತಿದ್ದಾರೆ.ಕೆಲವು ನ್ಯಾಯಾಧೀಶರು ಮನುಸ್ಮೃತಿ,ಭಗವದ್ಗೀತೆ,ರಾಮಾಯಣ ಮತ್ತು ಮಹಾಭಾರತದ ಸೂಕ್ತಿ,ಉದಾಹರಣೆಗಳನ್ನು ತಮ್ಮ ತೀರ್ಪುಗಳಲ್ಲಿ ಉಲ್ಲೇಖಿಸಿದ್ದನ್ನು ಆಗಾಗ ಪತ್ರಿಕೆಗಳಲ್ಲಿ ಓದುತ್ತೇವೆ.ನ್ಯಾಯಾಧೀಶರ ಇಂತಹ ಪ್ರವೃತ್ತಿ ನಿಲ್ಲಬೇಕು.ಭಗವದ್ಗೀತೆ,ರಾಮಾಯಣ- ಮಹಾಭಾರತಗಳು ಎಷ್ಟೇ ಉತ್ಕೃಷ್ಟ ಕೃತಿಗಳಾಗಿದ್ದರೂ ಅವು ಈ ದೇಶದ ಸಮಸ್ತಜನರ ಗೌರವಾದರಣೀಯ ಕೃತಿಗಳಲ್ಲ; ಒಂದು ಧರ್ಮದ,ಕೆಲವು ಜಾತಿಗಳ ಜನರ ಆದರ್ಶ ಕೃತಿಗಳವು.ಭಾರತದಲ್ಲಿ ವೀರಶಿವನಿಷ್ಠೆಯ ಶೈವರಿಗೆ ಭಗವದ್ಗೀತೆ,ರಾಮಾಯಣ- ಮಹಾಭಾರತಗಳು ಪೂಜ್ಯ ಗ್ರಂಥಗಳಲ್ಲ ಎಂದ ಬಳಿಕ ಮುಸ್ಲಿಮರು,ಕ್ರಿಶ್ಚಿಯನ್ನರು,ಬೌದ್ಧರು,ಪಾರ್ಸಿಗಳು,ಸಿಖ್ಖರುಗಳಿಗೆ ಆ ಕೃತಿಗಳು ಹೇಗೆ ಪ್ರಮಾಣಗ್ರಂಥಗಳಾಗಬಲ್ಲವು? ನ್ಯಾಯಾಧೀಶರು ಈ ಗ್ರಂಥಗಳನ್ನು ಉಲ್ಲೇಖಿಸುವುದು ಇತರ ಧಾರ್ಮಿಕ ಪಂಗಡಗಳ ಜನರ ನಂಬಿಕೆಯ ಮೇಲೆ ಪರಿಣಾಮ ಬೀರುತ್ತದೆ.

ಕೆಲವು ನ್ಯಾಯಾಧೀಶರು ತಿರುಪತಿ,ಮಂತ್ರಾಲಯ ಮತ್ತು ರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿ ಅಲ್ಲಿಯ ಧಾರ್ಮಿಕ ಮುಖಂಡರುಗಳಿಂದ ಸನ್ಮಾನಿಸಿಕೊಂಡ ವರದಿಗಳು ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿರುತ್ತವೆ ಆಗಾಗ.ಇದಂತೂ ಸಂವಿಧಾನವನ್ನು ಎತ್ತಿಹಿಡಿಯಬೇಕಾದ ನ್ಯಾಯಾಧೀಶರುಗಳಿಂದ ಭಾರತೀಯ ಪ್ರಜೆಗಳು ನಿರೀಕ್ಷಿಸಲಾಗದ ನಡೆ.ನ್ಯಾಯಾಧೀಶರು ಎಲ್ಲರಂತೆಯೇ ಮನುಷ್ಯರು,ಅವರಿಗೂ ಧಾರ್ಮಿಕ ಭಾವನೆಗಳಿರುತ್ತವೆ ಎನ್ನುವುದನ್ನು ಒಪ್ಪಬಹುದಾದರೂ ತಿರುಪತಿ,ಮಂತ್ರಾಲಯ,ರಾಮಚಂದ್ರಾಪುರ ಮಠಗಳಂತಹ ಧಾರ್ಮಿಕ ಕೇಂದ್ರಗಳಲ್ಲಿ ಅವರು ಪೂಜೆ ಸಲ್ಲಿಸಿ,ಸನ್ಮಾನ ಸ್ವೀಕರಿಸುವುದು ಜಾತ್ಯಾತೀತ ನಿಲುವಿಗೆ ವಿರುದ್ಧವಾದುದು,ಭಾರತೀಯ ಪ್ರಜೆಗಳೆಲ್ಲರನ್ನೂ ಧರ್ಮಾತೀತರಾಗಿ ಸಮಾನರನ್ನಾಗಿ ಕಾಣುವ ನಮ್ಮ ಸಂವಿಧಾನದ ಆಶಯಕ್ಕೆ ವಿರುದ್ಧವಾದುದು.ಆ ಧಾರ್ಮಿಕ ಕ್ಷೇತ್ರಗಳ ಮುಖ್ಯಸ್ಥರುಗಳು ಮನುಷ್ಯರು ತಾನೆ? ಅವರೇನೂ ಸರ್ವಪರಿಪೂರ್ಣ ಪರಮಾತ್ಮರಲ್ಲ.ಆ ಕ್ಷೇತ್ರಗಳ ಧಾರ್ಮಿಕ ಮುಖಂಡರುಗಳ ಬಗ್ಗೆಯೂ ಕೇಸುಗಳು ದಾಖಲಾಗುತ್ತವೆ.ರಾಮಚಂದ್ರಾಪುರ ಮಠದ ಸ್ವಾಮಿಯವರ ಕೇಸಿನಲ್ಲಿ ಹೈಕೋರ್ಟಿನ ಮೂರ್ನಾಲ್ಕು ಜನ ನ್ಯಾಯಾಧೀಶರುಗಳು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಲು ಅವರುಗಳು ಮಠದೊಂದಿಗೆ ಹೊಂದಿದ್ದ ಒಡನಾಟ ಇಲ್ಲವೆ ಆ ಮಠದಲ್ಲಿ ಸನ್ಮಾನ ಸ್ವೀಕರಿಸಿದ್ದೇ ಕಾರಣ ಎನ್ನುವುದನ್ನು ಗಮನಿಸಿದಾಗ ನ್ಯಾಯಾಧೀಶರುಗಳು ತಿರುಪತಿ,ಮಂತ್ರಾಲಯ,ರಾಮಚಂದ್ರಾಪುರ ಮಠ ಸೇರಿದಂತೆ ಯಾವುದೇ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡದೆ ಜಾತ್ಯಾತೀತ ನಿಲುವನ್ನು ಎತ್ತಿಹಿಡಿಯುವುದು ಅಪೇಕ್ಷಣೀಯ.ಧಾರ್ಮಿಕ ಕ್ಷೇತ್ರಗಳಿಗೆ ನ್ಯಾಯಾಧೀಶರು ಭೇಟಿ ನೀಡಿದಾಗ ಕನಿಷ್ಠ ಗೌಪ್ಯತೆಯನ್ನಾದರೂ ಕಾಪಾಡಿಕೊಳ್ಳಬೇಕು.ಆದರೆ ಆ ಮಠಗಳ ಸ್ವಾಮಿಗಳು ತಮ್ಮ‌ಪ್ರತಿಷ್ಠೆ ಮೆರೆಯಲು ನ್ಯಾಯಾಧೀಶರುಗಳು ತಮ್ಮಿಂದ ಸನ್ಮಾನಗೊಳ್ಳುತ್ತಿರುವ ಫೋಟೋಗಳು ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟಗೊಳ್ಳುವಂತೆ ನೋಡಿಕೊಳ್ಳುತ್ತಾರೆ.ಇತರರು ಇಂತಹ ಘಟನೆಗಳಿಂದ ಘಾಸಿಗೊಳ್ಳುತ್ತಾರೆ.ನ್ಯಾಯಾಧೀಶರ ಬಗ್ಗೆ ನಂಬಿಕೆ,ಭರವಸೆ ಕಳೆದುಕೊಳ್ಳುತ್ತಾರೆ.ಕೋರ್ಟ್ ಗಳು ನಿಷ್ಪಕ್ಷಪಾತವಾದ ನ್ಯಾಯದಾನಕ್ಕೆ ಹೆಸರಾದ ಸಂವಿಧಾನವನ್ನು ಅರ್ಥೈಸುವ ನ್ಯಾಯಪೀಠಗಳು.ಅಂತಹ ನಿಷ್ಪಕ್ಷಪಾತನ್ಯಾಯಪೀಠಗಳ ಮೇಲೆ ಕುಳಿತುಕೊಳ್ಳುವವರು ಜಾತ್ಯಾತೀತ,ಧರ್ಮಾತೀತ ವ್ಯಕ್ತಿತ್ವವನ್ನು ಹೊಂದಿರಬೇಕಾದದ್ದು ಅವಶ್ಯಕ.

ನ್ಯಾಯಾಧೀಶರುಗಳು ತಮ್ಮ ಮನೆಗಳಲ್ಲಿ ತಮ್ಮ ಇಷ್ಟದ ದೇವರುಗಳನ್ನು ಪೂಜಿಸಲಿ.ತಮಗಿಷ್ಟಬಂದ ಧರ್ಮವನ್ನು ಅನುಸರಿಸಲಿ.ಆದರೆ ಅದು ಸಾರ್ವಜನಿಕ ಜೀವನದಲ್ಲಿ ಪ್ರಕಟಗೊಳ್ಳಬಾರದು,ನ್ಯಾಯತೀರ್ಪಿನಲ್ಲಿ ವ್ಯಕ್ತವಾಗಬಾರದು.ಭಾರತಕ್ಕೆ ಸಂವಿಧಾನವೇ ರಾಷ್ಟ್ರೀಯ ಗ್ರಂಥವಲ್ಲದೆ ಮತ್ತಾವ ಧರ್ಮಗ್ರಂಥವೂ ರಾಷ್ಟ್ರೀಯ ಗ್ರಂಥವಲ್ಲ.ವಿವಿಧ ಜಾತಿ,ಜನಾಂಗ,ಧರ್ಮ,ಪರಂಪರೆಗಳನ್ನು ಅನುಸರಿಸುತ್ತಿರುವ ಎಲ್ಲ ಜನರನ್ನೂ ಸಮಾನವಾಗಿ ಕಾಣುವ ನಮ್ಮ ಸಂವಿಧಾನವು ಯಾವ ತರತಮಗಳನ್ನೆಣಿಸದೆ ಎಲ್ಲರಿಗೂ ಸಮಾನ ಹಕ್ಕು- ಅವಕಾಶಗಳನ್ನು ನೀಡಿದೆ.ಭಾರತದ ಸಂವಿಧಾನಕ್ಕೆ ಅನುಗುಣವಾಗಿ ನೆಲದ ಕಾನೂನುಗಳಂತೆ ನ್ಯಾಯದಾನ ಮಾಡಬೇಕಿರುವ ನ್ಯಾಯಾಧೀಶರುಗಳು ಎಲ್ಲರನ್ನೂ ಸಮಾನವಾಗಿ ಕಾಣುವ ನ್ಯಾಯದೇವತೆಗಳೇ ಆಗಬೇಕು.ಅವರ ಪ್ರತಿ ನಡೆ ನುಡಿಯಲ್ಲಿ ಜಾತ್ಯಾತೀತತೆ,ನಿಷ್ಪಕ್ಷಪಾತತನ ಎದ್ದು ಕಾಣಬೇಕು.

ಕರ್ನಾಟಕ ಹೈಕೋರ್ಟಿನ ನೂತನ ಮುಖ್ಯನ್ಯಾಯಮೂರ್ತಿಗಳಾದ ಪ್ರಸನ್ನ ಬಾಲಚಂದ್ರ ವರಾಳೆ ಅವರು ಸಂವಿಧಾನದ ತಳಹದಿಯಲ್ಲೇ ನ್ಯಾಯದಾನ ನೀಡಬೇಕು ಎನ್ನುವ ನಿಲುವು ಹೊಂದಿದವರಾದ್ದರಿಂದ ಕರ್ನಾಟಕದ ಸಮಸ್ತ ಜನತೆಯು ಅವರಲ್ಲಿ ವಿಶ್ವಾಸವನ್ನಿಡಬಹುದು.ವರಾಳೆಯವರು ತಮ್ಮ ನಡೆ ನುಡಿಗಳಿಂದ ಸಹೋದ್ಯೋಗಿ ನ್ಯಾಯಧೀಶರುಗಳು ,ಆಧೀನ ನ್ಯಾಯಾಧೀಶರುಗಳು ಸೇರಿದಂತೆ ನ್ಯಾಯಾಂಗಕ್ಕೆ ಆದರ್ಶರಾಗಬಹುದೆಂದು ನಿರೀಕ್ಷಿಸೋಣ.

About The Author