ಮಹಾಶೈವ ಮಾರ್ಗ : ಶಿವೋಪಶಮನ’ ಎನ್ನುವ ಶಿವಾನುಗ್ರಹ ವಿಶೇಷ ಆಧ್ಯಾತ್ಮಿಕ ಉಪಶಮನ ಕಾರ್ಯ : ಮುಕ್ಕಣ್ಣ ಕರಿಗಾರ

     ಮಹಾಶೈವ ಧರ್ಮಪೀಠದ ಶ್ರೀ ಕ್ಷೇತ್ರ ಕೈಲಾಸದಲ್ಲಿ ಪ್ರತಿ ರವಿವಾರದಂದು ‘ ಶಿವೋಪಶಮನ’ ಎನ್ನುವ ಆಧ್ಯಾತ್ಮಿಕ ರೋಗ ಮತ್ತು ಬಾಧೆ ಪರಿಹಾರ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.ವಿಶ್ವೇಶ್ವರ ಶಿವನ ಸನ್ನಿಧಿಯಲ್ಲಿ ನಡೆಯುವ ಈ ವಿಶಿಷ್ಟಕಾರ್ಯವು ನಿಶ್ಚಿತ ಫಲ- ಪರಿಣಾಮಗಳನ್ನು ನೀಡುತ್ತಿರುವುದರಿಂದ ಶ್ರೀಕ್ಷೇತ್ರ ಕೈಲಾಸವನ್ನರಸಿ ಬರುವ ಭಕ್ತರ ಸಂಖ್ಯೆ ವಾರದಿಂದ ವಾರಕ್ಕೆ ಹೆಚ್ಚುತ್ತಲೇ ಇದೆ.ಈ ಕಾರ್ಯಕ್ರಮದ ಬಗ್ಗೆ ಕುತೂಹಲಾಸಕ್ತಿಗಳನ್ನು ಹೊಂದಿರುವ ನನ್ನ ಆತ್ಮೀಯರೂ ಹಿರಿಯ ಕವಿಗಳೂ ಆಗಿರುವ ಕೊಪ್ಪಳದ ಡಾಕ್ಟರ್ ಮಹಾಂತೇಶ ಮಲ್ಲನಗೌಡರ ಅವರು ‘ ಶಿವೋಪಶಮನ ಎಂದರೆ ಅತೀಂದ್ರಿಯ ಶಕ್ತಿಯ ಮೂಲಕ ಮಾಡುವ ಪರಿಹಾರವೆ? ವಿವರಿಸಿ’ ಎಂದು ಕೇಳಿದ್ದಾರೆ.ಮಹಾಂತೇಶ ಮಲ್ಲನಗೌಡರ ಅವರಂತೆಯೇ ಸಾಕಷ್ಟು ಜನರಲ್ಲಿ ಈ ಕುರಿತು ಕುತೂಹಲಾಸಕ್ತಿಗಳಿರುವುದರಿಂದ ” ಶಿವೋಪಶಮನ ಕಾರ್ಯ” ದ ಬಗ್ಗೆ ಬರೆಯುವೆ.

ಹೌದು ,ಮಹಾಂತೇಶ ಮಲ್ಲನಗೌಡರ ಅವರು ಭಾವಿಸಿದಂತೆ ‘ ಶಿವೋಪಶಮನ’ ವು ಅತೀಂದ್ರಿಯ ಶಕ್ತಿಯ ಮೂಲಕ ರೋಗ,ಬಾಧೆಗಳನ್ನು ಪರಿಹರಿಸುವ ಕಾರ್ಯ.ಆಧ್ಯಾತ್ಮಿಕ ಶಕ್ತಿಯಿಂದ ರೋಗ,ಸಮಸ್ಯೆಗಳನ್ನು ಪರಿಹರಿಸುತ್ತಿರುವುದರಿಂದ ಶಿವೋಪಶಮನವು ಆಧ್ಯಾತ್ಮಿಕ ರೋಗ,ಬಾಧೆ ಪರಿಹಾರ ( Spiritual Healing)ಕ್ರಮ.ಭಾರತದಲ್ಲಿ ಹಲವಾರು ಸಾಂಪ್ರದಾಯಿಕ ರೋಗ ಚಿಕಿತ್ಸಾ ಕ್ರಮಗಳಿವೆ.ಪ್ರಕೃತಿ ಚಿಕಿತ್ಸೆ,ಆಯುರ್ವೇದ ಚಿಕಿತ್ಸೆ,ಮಂತ್ರ ಚಿಕಿತ್ಸೆ,ಸಿದ್ಧೌಷಧ ಚಿಕಿತ್ಸೆ ಮೊದಲಾದ ಕ್ರಮಗಳ ಮೂಲಕ ರೋಗ ಚಿಕಿತ್ಸೆ ಮಾಡಲಾಗುತ್ತಿದೆ.ಇವುಗಳ ಜೊತೆಗೆ ಇವೆಲ್ಲವುಗಳಿಗಿಂತ ವಿಶಿಷ್ಟವಾದದ್ದು Spiritual Healing ಎನ್ನುವ ಆಧ್ಯಾತ್ಮಿಕ ಶಕ್ತಿಯ ಬಲದಿಂದ ರೋಗ ಗುಣಪಡಿಸುವ ಕ್ರಮ.ಇದು ಉನ್ನತ ನಿಲುವಿನ ಯೋಗಸಾಧಕರುಗಳಿಂದ ಮಾತ್ರ ಸಾಧ್ಯವಾಗುತ್ತದೆ.ಯೋಗಿಯು ತನ್ನ ಯೋಗ ಸಾಮರ್ಥ್ಯದಿಂದ ತನ್ನ ಬಳಿ ಬರುವವರ ರೋಗ ಮತ್ತು ಸಮಸ್ಯೆಯನ್ನು ತಿಳಿಯುತ್ತಾನೆ ಮತ್ತು ಅದನ್ನು ತನ್ನ ಆಧ್ಯಾತ್ಮಿಕ ಶಕ್ತಿಯಿಂದ ಪರಿಹರಿಸುತ್ತಾನೆ.ಜ್ಯೋತಿಷವಾದಿ ಇತರ ಶಾಸ್ತ್ರಗಳು ವಿಫಲವಾಗಬಹುದು ಆದರೆ ಯೋಗಿಯ ಆತ್ಮಬಲದಿಂದ ಪ್ರಯೋಗಿಸುವ ಆಧ್ಯಾತ್ಮಿಕ ಉಪಶಮನವು ವಿಫಲವಾಗದು.ಯೋಗಿಯು ಪ್ರಕೃತಿಯ ಮೇಲೆ ಪ್ರಭುತ್ವ ಪಡೆದಿರುವುದರಿಂದ ಪಂಚಭೂತಗಳಾಗಲಿ,ನವಗ್ರಹಗಳಾಗಲಿ ಯೋಗಿಯ ಉಪಮಶನಕ್ರಮವನ್ನು ವಿರೋಧಿಸದೆ,ಶರಣಾಗುವವು.ಹೀಗಾಗಿ ಆಧ್ಯಾತ್ಮಿಕ ಉಪಶಮನವು ನಿಶ್ಚಿತ ಫಲ ಪರಿಣಾಮಗಳನ್ನು ನೀಡುತ್ತದೆ.

‌ಪ್ರಪಂಚವು ಪಂಚಭೂತಗಳಿಂದ ನಿರ್ಮಾಣಗೊಂಡಿದೆ.ಮನುಷ್ಯರಾದಿ ಸಕಲ ಜೀವಿಗಳು ಸಹ ಪಂಚಭೂತತತ್ತ್ವದಿಂದಲೇ ಸೃಷ್ಟಿಗೊಂಡಿವೆ.ಪಂಚಭೂತಗಳು ಮತ್ತು ನವಗ್ರಹಗಳು ಜಗತ್ತಿನ,ಜೀವರುಗಳ ಆಗು- ಹೋಗುಗಳನ್ನು ನಿರ್ಧರಿಸುತ್ತವೆ.ಗ್ರಹಗಳು ವಿಜ್ಞಾನಿಗಳು ಹೇಳುವಂತೆ ಕೇವಲ ಭೌತಿಕ,ನಿರ್ಜೀವ ಆಕಾಶ ಕಾಯಗಳಲ್ಲ.ಹೊರನೋಟಕ್ಕೆ ಬರಿಯ ಭೌತಿಕಕಾಯಗಳಂತೆ ಕಾಣಬಹುದಾದ ಪ್ರತಿ ಗ್ರಹಕ್ಕೆ ಒಬ್ಬೊಬ್ಬ ಗ್ರಹದೇವತೆ ಇದ್ದಾರೆ.ಸೂರ್ಯ,ಚಂದ್ರ,ಮಂಗಳ,ಬುಧ,ಗುರು,ಶುಕ್ರ,ಶನಿ,ರಾಹು ಮತ್ತು ಕೇತುಗಳೆಂಬ ನವಗ್ರಹಗಳು ಆಕಾಶಪಥದ ಲಕ್ಷಾಂತರ ಗ್ರಹಗಳು,ಆಕಾಶ ಕಾಯಗಳ ನಡುವಣ ಪ್ರಮುಖ ಗ್ರಹಗಳು.ಭಾರತೀಯ ಜ್ಯೋತಿಷ ಶಾಸ್ತ್ರವು ಈ ನವಗ್ರಹಗಳನ್ನೇ ಆಧರಿಸಿದೆ.ಪಾಶ್ಚಿಮಾತ್ಯರು ರಾಹು- ಕೇತುಗಳನ್ನು ನಂಬುವುದಿಲ್ಲ ,ಬದಲಿಗೆ ಪ್ಲೇಟೋ,ನೆಪ್ಚೂನ್ ಗ್ರಹಗಳನ್ನು ನವಗ್ರಹಗಳಲ್ಲಿ ಸಾಲಿನಲ್ಲಿ ಪರಿಗಣಿಸಿದ್ದಾರೆ.ನಮ್ಮ ವಿಜ್ಞಾನಿಗಳು,ಪ್ರಗತಿಪರರು ನವಗ್ರಹಗಳು ಸುಳ್ಳು,ಅವು ಬರಿಯ ಖಗೋಳದ ಭೌತಿಕ ಕಾಯಗಳು ಎನ್ನಬಹುದಾದರೂ ಅವರ ದೃಷ್ಟಿ ಪೂರ್ಣವಾದುದಲ್ಲ.ನಮ್ಮ ಶರೀರವು ಜೀವ ಇಲ್ಲದೆ ಇದ್ದರೆ ಬರೀ ನಿರ್ಜೀವ ಶರೀರ ಇಲ್ಲವೆ ಹೆಣವೆನ್ನಿಸಿಕೊಳ್ಳುತ್ತದೆ.ದೇಹವು ಹೊರಗೆ ಕಾಣಿಸುತ್ತದೆ,ಆದರೆ ದೇಹದ ಚಲನೆ,ಕ್ರಿಯೆಗಳಿಗೆ ಕಾರಣವಾದ ಜೀವವು ಕಣ್ಣಿಗೆ ಕಾಣಿಸದು.ಹಾಗೆಂದು ಜೀವ ಇಲ್ಲ ಎನ್ನಲಾದೀತೆ? ಶರೀರವು ಪ್ರಕಟತತ್ತ್ವವಾದರೆ ಜೀವವು ಅವ್ಯಕ್ತತತ್ತ್ವ.ಇಂದ್ರಿಯಗಳು ಪ್ರಕಟತತ್ತ್ವದ ಶರೀರದ ಅವಯವಗಳಾದರೆ ಅತೀಂದ್ರಿಯ ಶಕ್ತಿಗಳು ಪ್ರಕೃತಿಯ ಅವ್ಯಕ್ತ ಶಕ್ತಿಯ ಸಾಧನಗಳು.ನವಗ್ರಹಗಳು ಭೌತಿಕ ಕಾಯಗಳಾದ ಶರೀರಗಳಾದರೆ ಗ್ರಹದೇವತೆಯು ಆ ಗ್ರಹಗಳ ಅಧಿದೈವಗಳಾಗಿರುವ ಜೀವಸ್ವರೂಪರು.ನವಗ್ರಹೋಪಾಸನೆಯು ಉಪಾಸನಾಕ್ರಮಗಳಲ್ಲಿ ಒಂದಾಗಿ ಬಹುಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ.

ಪಾಶ್ಚಿಮಾತ್ಯರು ಅದರಲ್ಲೂ ಕ್ರೈಸ್ತಪಾದ್ರಿಗಳು ಮತ್ತು ಕ್ರಿಶ್ಚಿಯನ್ ಮಿಶನರಿಗಳು ತಮ್ಮ ಮತಪ್ರಚಾರದ ಸ್ವಾರ್ಥಸಾಧನೆ ಮತ್ತು ದುರುದ್ದೇಶದಿಂದ ಹಿಂದೂ ಧಾರ್ಮಿಕ ಕಲ್ಪನೆಗಳನ್ನು ಅರ್ಥಹೀನ ಎಂದು ಸಾರಿ,ಹಿಂದು ದೇವರುಗಳ ಬಗ್ಗೆ ಅವಹೇಳನ ಮಾಡುತ್ತ ಬಂದಿದ್ದರಿಂದ ಅವರನ್ನು ಅನುಸರಿಸುವ ಭಾರತೀಯರು ಕೂಡ ಸನಾತನ ಭಾರತದ ಸತ್ತ್ವ- ತತ್ತ್ವಗಳನ್ನು ಪ್ರಶ್ನಿಸತೊಡಗಿದರು,ಹೀಗಳೆಯತೊಡಗಿದರು.ಪ್ರಶ್ನಿಸುವ ಮನೋಭಾವ ಪ್ರತಿಯೊಬ್ಬರಲ್ಲಿಯೂ ಅವಶ್ಯಕವಾಗಿ ಇರಲೇಬೇಕಾದ ಗುಣ.ಆದರೆ ಪ್ರಶ್ನಿಸುವ ಭರದಲ್ಲಿ ದುರುದ್ದೇಶಪೀಡಿತ ವಿಚಾರಗಳಿಗೆ ಬಲಿಯಾಗಬಾರದು.ಎರಡು ಸಾವಿರ ವರ್ಷಗಳ ಇತಿಹಾಸ ಇರುವ ಕ್ರೈಸ್ತಮತವು ಲಕ್ಷಾಂತರ ವರ್ಷಗಳಿಂದ ಪ್ರವಹಿಸುತ್ತ ಬಂದಿರುವ ಭಾರತೀಯ ಧರ್ಮ,ಪರಂಪರೆ,ಸಂಸ್ಕೃತಿಗಳನ್ನು ಅವಹೇಳನ ಮಾಡುತ್ತಿದೆ.ಕ್ರಿಸ್ತ ಹುಟ್ಟುವ ಸಾವಿರಾರು ವರ್ಷಗಳ ಪೂರ್ವದಲ್ಲಿ ಭಾರತದಲ್ಲಿ ಋಷಿಗಳಿದ್ದರು ಅವರು ತಮ್ಮ ಆಧ್ಯಾತ್ಮಿಕ ಸಾಧನೆಯ ಬಲದಿಂದ ಪರಮಾತ್ಮನ ಅಸ್ತಿತ್ವವನ್ನು ನಿಖರವಾಗಿ ಪ್ರತಿಪಾದಿಸಿದ್ದರು ಮತ್ತು ಪ್ರಕೃತಿಯ ಕಾರ್ಯಪ್ರವೃತ್ತಿಯನ್ನು ಗುರುತಿಸಿ,ಖಚಿತಪಡಿಸಿದ್ದರು.ವೇದ,ಉಪನಿಷತ್ತುಗಳಲ್ಲಿ ಭಾರತೀಯ ಋಷಿಗಳ ದರ್ಶನ,ಕಾಣ್ಕೆಗಳಿವೆ.ಯೋಗ,ಆಯುರ್ವೇದ,ಪ್ರಕೃತಿ ಚಿಕಿತ್ಸೆ,ಆಧ್ಯಾತ್ಮಿಕ ಉಪಶಮನಗಳೆಲ್ಲ ಪುರಾತನ ಋಷಿ ಮುನಿಗಳ ಕೊಡುಗೆ,ವಿಫಲವಾಗದ ನಿಶ್ಚಿತ ಫಲ- ಪರಿಣಾಮಗಳನ್ನು ನೀಡುವ ಚಿಕಿತ್ಸಾಕ್ರಮಗಳು.ಅಲೋಪಥಿಕ್ ಚಿಕಿತ್ಸೆಯು ಶೀಘ್ರಪರಿಣಾಮ ಬೀರುತ್ತಿರುವುದರಿಂದ ಅದು ಜನಪ್ರಿಯಗೊಂಡಿದೆ; ಆದರೆ ಆಲೋಪೆಥಿಕ್ ಚಿಕಿತ್ಸೆಯು ಶರೀರದ ಮೇಲೆ ಪ್ರತಿಕೂಲ ಪರಿಣಾಮ ( side effects) ಬೀರುತ್ತದೆ.ದೇಹವನ್ನು ತತ್ಕಾಲದಲ್ಲಿ ರೋಗದಿಂದ ಗುಣಪಡಿಸಿದರೂ ಅಲೋಪೆಥಿಕ್ ಇಂಜಕ್ಷನ್ ಗಳು,ಮಾತ್ರೆಗಳು ದೇಹದಲ್ಲಿ ರಾಸಾಯನಿಕ ವಸ್ತುಗಳನ್ನು ಹಾಗೆಯೇ ಬಿಡುವುದರಿಂದ ದೇಹ ದುರ್ಬಲಗೊಳ್ಳುತ್ತದೆ,ಶರೀರದ ಜೀವಸತ್ತ್ವಗಳು ತಮ್ಮ ಸಹಜ ರೋಗಪ್ರತಿರೋಧ ಸಾಮರ್ಥ್ಯ ಕಳೆದುಕೊಳ್ಳುತ್ತವೆ.ಕೊರೊನಾ ರೋಗಕ್ಕೆ ಚಿಕಿತ್ಸೆ ಪಡೆದವರಲ್ಲಿ ಬಹಳಷ್ಟು ಜನರಲ್ಲಿ ಆರೋಗ್ಯ ಸಮಸ್ಯೆಗಳಿರಲು ಇದುವೇ ಕಾರಣ.ಮನುಷ್ಯ ಶರೀರವು ತನಗೆ ಒಗ್ಗದ ಪ್ರತಿರೋಧ ಕಣಗಳಿಗೆ ಸರಿಯಾಗಿ ಸ್ಪಂದಿಸದು,ಆಗಂತುಕ ವೈರಸ್ ಪ್ರತಿರೋಧಕ ಕಣಗಳೊಂದಿಗೆ ಶರೀರದ ಜೀವಕಣಗಳು,ಜೀವಸತ್ವಗಳು ಹೊಂದಾಣಿಕೆ ಮಾಡಿಕೊಳ್ಳವು.ಮನುಷ್ಯ ಶರೀರವು ಯಂತ್ರವಲ್ಲ,ಪ್ರಕೃತಿಯಿಂದ ಪೋಷಿತವಾಗಿ ನಿರಂತರ ಚಾಲನೆಯಲ್ಲಿರುವ ಅದ್ಭುತಜೀವ ಸಂಚಲನಾ ಕಾಯ.ಮನುಷ್ಯ ಶರೀರವು ಪಂಚಭೂತಗಳಾದ ಆಕಾಶ,ವಾಯು,ಬೆಂಕಿ,ಜಲ ಮತ್ತು ಭೂಮಿಗಳ ತತ್ತ್ವ ಸಂಯೋಜನೆಯಿಂದ ಉಂಟಾಗಿದೆ.ಈ ಪಂಚಭೂತಗಳ ಸುಸ್ಥಿತಿ ಮತ್ತು ಕಾರ್ಯನಿರ್ವಹಣೆಗೆ ಪೂರಕವಾಗಿವೆ ಆಕಾಶಕಾಯಗಳಾದ ನವಗ್ರಹಗಳು.ಭೂಮಿಯ ಮೇಲಿನ ಎಲ್ಲ ಆಗು ಹೋಗುಗಳಿಗೆ ನವಗ್ರಹಗಳು ಕಾರಣ ಎನ್ನುವುದು ನಮ್ಮ ಪೂರ್ವಿಕರಾದ ಋಷಿ ಮುನಿಗಳು ಕಂಡುಕೊಂಡಿದ್ದ ಆತ್ಯಂತಿಕ ಸತ್ಯಗಳಲ್ಲೊಂದು.ಮನುಷ್ಯ ಶರೀರವು ಪಂಚಭೂತಗಳಿಂದ ಆಗಿರುವುದರಿಂದ ಸಹಜವಾಗಿಯೇ ಪ್ರಾಕೃತಿಕ ಶಕ್ತಿಗಳಾದ ನವಗ್ರಹಗಳು ಮನುಷ್ಯ ಶರೀರದ ಮೇಲೆ ಪ್ರಭಾವ ಬೀರುತ್ತದೆ.ಪಂಚಭೂತಗಳ ಪರಿಮಾಣ ನಮ್ಮ ದೇಹದಲ್ಲಿ ಎಷ್ಟು ಇರಬೇಕೋ ಅದೇ ಪ್ರಮಾಣದಲ್ಲಿ ಇದ್ದರೆ ಸಮಸ್ಯೆ ಆಗುವುದಿಲ್ಲ,ಯಾವುದಾದರೂ ಒಂದು ಭೂತದ ತತ್ತ್ವ ಇಲ್ಲವೆ ಪರಿಮಾಣ ಹೆಚ್ಚಾದರೆ ಅದು ಸಮಸ್ಯೆಯನ್ನುಂಟು ಮಾಡುತ್ತದೆ.ಈ ಸಮಸ್ಯೆಯು ರೋಗ ಇಲ್ಲವೆ ಬಾಧೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.ಪಂಚಭೂತಗಳ ಈ ಅಸಮೋತಲನಕ್ಕೆ ನವಗ್ರಹಗಳು ಕಾರಣವಾಗಿದ್ದು ಪರಿಮಾಣಮೀರಿದ ಭೂತತತ್ತ್ವ ಮತ್ತು ಅದರ ಉಪಶಮನಕ್ಕೆ ಕಾರಣವಾದ ಗ್ರಹತತ್ತ್ವವನ್ನರಿತು ನೀಡುವ ಚಿಕಿತ್ಸೆಯೇ ‘ ಶಿವೋಪಶಮನ’ ಇಲ್ಲವೆ ಆಧ್ಯಾತ್ಮಿಕ ಉಪಶಮನ ಕ್ರಿಯೆ.

 

ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಶಿವನು ವಿಶ್ವೇಶ್ವರ ನಾಮ – ರೂಪಗಳಲ್ಲಿ ಕೈಲಾಸದ ಗಣಪ್ರಮುಖರುಗಳೊಂದಿಗೆ ಪ್ರಕಟಗೊಂಡಿದ್ದಾನೆ.ಕೈಲಾಸದ ಶಿವಗಣರುಗಳು ಸೂಕ್ಷ್ಮರೂಪದಲ್ಲಿ ಶ್ರೀ ಕ್ಷೇತ್ರಕೈಲಾಸದಲ್ಲಿ ನೆಲೆಸಿದ್ದಾರೆ.’ ಮಾತನಾಡುವ ಮಹಾದೇವ’ ನೆಂದೇ ಪ್ರಸಿದ್ಧನಾಗಿರುವ ಶಿವ ವಿಶ್ವೇಶ್ವರನು ತನ್ನ ಪೀಠಾಧಿಪತಿಯ ಮೂಲಕ ಲೋಕೋದ್ಧಾರದ ಲೀಲೆಯನ್ನಾಡುತ್ತಿದ್ದಾನೆ.ತನ್ನ ಸನ್ನಿಧಿಯನ್ನರಸಿ ಬರುವವರ ಕಷ್ಟ- ಸಂಕಷ್ಟ,ವ್ಯಾಧಿ- ಬಾಧೆಗಳನ್ನು ಪೀಠಾಧಿಪತಿಯ ಮೂಲಕ ಪರಿಹರಿಸುತ್ತಿದ್ದಾನೆ.ವಿಶ್ವದುತ್ಪತ್ತಿಯ ಕಾರಣನೂ ವಿಶ್ವನಿಯಾಮಕನೂ ಆಗಿರುವ ವಿಶ್ವೇಶ್ವರನ ಸನ್ನಿಧಿಯಲ್ಲಿ ಪರಿಹಾರವಾಗದ ಸಮಸ್ಯೆಗಳಿರುವುದುಂಟೆ? ಪ್ರಕೃತಿಪತಿಯಾದ ವಿಶ್ವೇಶ್ವರನ ಆಜ್ಞೆಯಂತೆ ಕಾರ್ಯನಿರ್ವಹಿಸುತ್ತಿರುವ ಪಂಚಭೂತಗಳಾಗಲಿ,ನವಗ್ರಹಗಳಾಗಲಿ ಶಿವನ ಇಚ್ಛೆಗೆ ವಿರುದ್ಧವಾಗಿ ವರ್ತಿಸಲು ಶಕ್ಯರೆ? ತನ್ನ ಸನ್ನಿಧಿಯನ್ನರಸಿ ಬರುವ ಭಕ್ತರ ಸಮಸ್ಯೆ ಏನು ಮತ್ತದಕ್ಕೆ ಪರಿಹಾರ ಏನು ಎನ್ನುವುದನ್ನು ಸ್ವಯಂ ವಿಶ್ವೇಶ್ವರ ಶಿವನೇ ಅಂತರ್ಬೋಧೆಯ ಮೂಲಕ ಬೋಧಿಸುತ್ತಿರುವುದರಿಂದ ಮಹಾಶೈವ ಧರ್ಮಪೀಠದಲ್ಲಿ ಅಸಾಧ್ಯರೋಗಗಳು ವಾಸಿಯಾಗುತ್ತವೆ,ಸಂಕಷ್ಟಗಳು ಕರಗುತ್ತಿವೆ,ಭಕ್ತರ ದುಃಖ- ದುಮ್ಮಾನಗಳು ಅಳಿಯುತ್ತವೆ.ವೈದ್ಯರು ‘ಬದುಕುವುದಿಲ್ಲಿ,ಒಯ್ಯರಿ’ ಎಂದು ಕಳುಹಿಸಿದ ರೋಗಿಗಳಿಲ್ಲಿ ವಿಶ್ವೇಶ್ವರನ ಕೃಪೆಯಿಂದ ರೋಗಮುಕ್ತರಾಗುತ್ತಿದ್ದಾರೆ.ಮನೋವೈದ್ಯರು,ಮಾನಸಿಕ ತಜ್ಞರುಗಳು ಗುಣಪಡಿಸಲಾಗದ ಮಾನಸಿಕ ಕಾಯಿಲೆಗಳಿಲ್ಲಿ ಗುಣವಾಗುತ್ತಿವೆ.ಮದುವೆಯಾಗಿ ಬಹುಕಾಲ ಮಕ್ಕಳಿಲ್ಲದವರಿಗೆ ವಿಶ್ವೇಶ್ವರ ಶಿವನು ಸಂತಾನ ಭಾಗ್ಯ ಕರುಣಿಸುತ್ತಾನೆ.ಬಗೆಬಗೆಯ ಪೀಡೆ,ವ್ಯಾಧಿ-ಬಾಧೆಗಳಿಂದ ಬಳಲುತ್ತಿರುವವರು ವಿಶ್ವೇಶ್ವರನ ಸನ್ನಿಧಿಯಲ್ಲಿ ಸುಖ ಶಾಂತಿಯನ್ನು ಅನುಭವಿಸುತ್ತಿದ್ದಾರೆ.ಲೋಕೋದ್ಧಾರ ಲೀಲೆಯನ್ನಾಡಲೆಂದೇ ಕಾಶಿಯಿಂದ ಬಂದು ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸಲ್ಲಿ ವಿಶ್ವೇಶ್ವರಿ ದುರ್ಗಾಸಮೇತನಾಗಿ ನೆಲೆಸಿರುವ ವಿಶ್ವೇಶ್ವರ ಶಿವನು ತನ್ನ ಪುತ್ರರು ಮತ್ತು ಪರಿವಾರದೈವಗಳಾದ ಗಣಪತಿ,ಷಣ್ಮುಖ,ವೀರಭದ್ರ,ಭೈರವರುಗಳ ಮೂಲಕ ಭಕ್ತರ ಸಂಕಷ್ಟಗಳನ್ನು ಪರಿಹರಿಸುತ್ತಿದ್ದಾನೆ.ತಾನು ಸ್ವಯಂ ಮೃತ್ಯುಂಜಯನಾಗಿ ಭಕ್ತರ ರೋಗಗಳನ್ನು ಪರಿಹರಿಸಿದರೆ,ಪಶುಪತಿ ರೂಪದಲ್ಲಿ ಭಕ್ತರ ದುಃಖ- ದಾರಿದ್ರ್ಯಗಳನ್ನು ಕಳೆಯುತ್ತಿದ್ದಾನೆ; ವಿಶ್ವೇಶ್ವರನು ದಕ್ಷಿಣಾ ಮೂರ್ತಿಯ ರೂಪದಲ್ಲಿ ವಿದ್ಯೆ,ಬುದ್ಧಿಗಳನ್ನನುಗ್ರಹಿಸಿದರೆ ಶರಭೇಶ್ವರನ ರೂಪದಲ್ಲಿ ಭಕ್ತರನ್ನು ಕಾಡುವ ಅನಿಷ್ಟ,ಆಪತ್ತು,ಶತ್ರುಬಾಧೆಗಳಿಂದ ರಕ್ಷಿಸಿ, ಪೊರೆಯುತ್ತಿದ್ದಾನೆ.ಹಾಗಾಗಿ ವಿಶ್ವೇಶ್ವರನ ಸನ್ನಿಧಿಯನ್ನರಸಿ ಶ್ರೀಕ್ಷೇತ್ರ ಕೈಲಾಸವನ್ನರಸಿ ಬರುವ ಭಕ್ತರ ಸಂಕಷ್ಟಗಳು ಕರಗಿ ಅವರುಗಳು ಸುಖ,ಶಾಂತಿ,ನೆಮ್ಮದಿಯಿಂದ ಜೀವಿಸುತ್ತಾರೆ.

” ಶಿವೋಪಶಮನ” ಎನ್ನುವುದು ಶಿವ ವಿಶ್ವೇಶ್ವರನೇ ಜಗದೋದ್ಧಾರದ ಕಾರಣದಿಂದ ತನ್ನ ಪೀಠಾಧಿಪತಿಯ ಮೂಲಕ ಆಡುತ್ತಿರುವ ಲೀಲೆ,ಲೋಕೋಪಶಮನ ಲೀಲೆ; ಶಿವಶಕ್ತಿಯೇ ಇಲ್ಲಿ ಕಾರ್ಯನಿರ್ವಹಿಸುತ್ತದೆ.ಶಿವಶಕ್ತಿಯ ಪ್ರವಾಹ ತರಂಗಗಳು ಭಕ್ತರ ಮೈಮನಗಳನ್ನು ಹೊಕ್ಕು ಅವರನ್ನು ಗುಣಮುಖರನ್ನಾಗಿಸುತ್ತಿವೆ.ಶಿವ ವಿಶ್ವೇಶ್ವರನನ್ನು ನಂಬಿ ಬಂದವರಿಗೆ ಉದ್ಧಾರದ ಅಭಯವಿದೆ,ಶಿವ ವಿಶ್ವೇಶ್ವರನನ್ನು ಮೊರೆಹೊಕ್ಕವರ ದುರಿತ ಕರ್ಮಗಳಡಗುತ್ತವೆ,ಶಿವ ವಿಶ್ವೇಶ್ವರನೇ ಗತಿಮತಿ ಎಂದವರ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ.

About The Author