ಮೂರನೇ ಕಣ್ಣು : ಐದುವರೆ ಕೋಟಿಗೂ ಹೆಚ್ಚು ಬಡವರಿದ್ದಾರೆನ್ನುವುದು ಕಳವಳದ ಸಂಗತಿ : ಮುಕ್ಕಣ್ಣ ಕರಿಗಾರ

ಭಾರತವು ವಿಶ್ವದ ಬಲಿಷ್ಠ ಹತ್ತು ಆರ್ಥಿಕ ದೇಶಗಳಲ್ಲಿ ಒಂದಾಗಿದೆ,ಭಾರತದ ಉದ್ಯಮಿಯೊಬ್ಬರು ವಿಶ್ವದ ಎರಡನೇ ಅತಿದೊಡ್ಡ ಶ್ರೀಮಂತರು ಎನ್ನುವುದು ಹೆಮ್ಮೆಯ ವಿಷಯ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಕೆಲವರು.ಒಂದು ನೂರು ಜನ ಶತಕೋಟ್ಯಾಧಿಪತಿಗಳಿರುವ ರಾಷ್ಟ್ರ ನಮ್ಮದು ಎನ್ನುವ ಹೆಗ್ಗಳಿಕೆ ನಮಗಿದೆ ಎಂಬುದನ್ನು ಒತ್ತುಕೊಟ್ಟು ಹೇಳುತ್ತಾರೆ ಅಂಥವರು.ಆದರೆ ಇತ್ತೀಚೆಗೆ ಬಿಡುಗಡೆಯಾದ ವಿಶ್ವಸಂಸ್ಥೆಯ ವರದಿಯೊಂದು ಭಾರತದಲ್ಲಿ 5.6 ಕೋಟಿ ಬಡವರಿದ್ದಾರೆ ಎಂದು ಹೇಳಿರುವುದು ಕಳವಳದ ಸಂಗತಿ.ಒಂದು ನೂರಾ ಮುವ್ವತ್ತು ಕೋಟಿ ಜನಸಂಖ್ಯೆಯ ದೇಶದಲ್ಲಿ ಐದುಕೋಟಿ ಅರವತ್ತು ಲಕ್ಷ ಜನರು ಬಡವರಿರುವುದು ದೊಡ್ಡ ಸಂಗತಿಯಲ್ಲ ಎಂದು ಉಳ್ಳವರು ಮತ್ತು ಉದ್ಯಮಿಗಳ ಪರ ಇರುವವರು ವಾದಿಸಬಹುದು.ಆದರೆ ವಿಶ್ವದ ಎರಡನೇ ಅತಿದೊಡ್ಡ ಶ್ರೀಮಂತ ಮತ್ತು ನೂರು ಜನ ಶತಕೋಟ್ಯಾಧಿಪತಿಗಳಿರುವ ದೇಶದಲ್ಲಿ ಐದುಕೋಟಿ ಅರವತ್ತು ಲಕ್ಷ ಜನರು ಬಡವರಿದ್ದಾರೆ ಎಂದರೆ ಅದು ಗಂಭೀರವಾಗಿ ಆಲೋಚಿಸಬೇಕಾದ ಸಂಗತಿ.ನೂರು ಜನ ಶತಕೋಟ್ಯಾಧಿಪತಿಗಳಿಗೆ ಆರ್ಥಿಕ ಭದ್ರತೆ ನೀಡುವುದಕ್ಕಿಂತ ಐದುಕೋಟಿ ಅರವತ್ತು ಲಕ್ಷ ಬಡಜನರ ಅಭದ್ರತೆ,ಆತಂಕದ ಬಾಳುಗಳಿಗೆ ಭದ್ರತೆ ಕಲ್ಪಿಸುವುದು ಆದ್ಯತೆಯಾಗಬೇಕು.

ವಿಶ್ವಬ್ಯಾಂಕಿನ ವೆಬ್ ಸೈಟ್ ನಲ್ಲಿ ಪ್ರಕಟಗೊಂಡಿರುವ ‘ ಪ್ರಾಪರ್ಟಿ ಆ್ಯಂಡ್ ಷೇರ್ಡ್ ಪ್ರಾಸ್ಪರಿಟಿ 2022: ಕೊರ್ಸ್ ಕರೆಕ್ಷನ್’ ಎನ್ನುವ ಹೆಸರಿನ ಈ ವರದಿಯಲ್ಲಿ ಭಾರತವು 2020 ರಲ್ಲಿ ಎದ್ದು ಕಾಣುವ ಆರ್ಥಿಕ ಕುಸಿತ ಕಂಡಿದ್ದ ಬಗ್ಗೆ ಮತ್ತು ಆ ವರ್ಷ ಭಾರತದಲ್ಲಿ 5.6 ಕೋಟಿಯಷ್ಟು ಬಡವರಿರುವ ಬಗ್ಗೆ ಉಲ್ಲೇಖಿಸಲಾಗಿದೆ.ವಿಶ್ವಬ್ಯಾಂಕಿನ ಅಂಗಸಂಸ್ಥೆಯಾಗಿರುವ ‘ ಪುನರ್ ರಚನೆ ಮತ್ತು ಅಭಿವೃದ್ಧಿಗಾಗಿ ಅಂತಾರಾಷ್ಟ್ರೀಯ ಬ್ಯಾಂಕ್’ ಈ ವರದಿಯನ್ನು ಸಿದ್ಧಪಡಿಸಿದ್ದು ‘ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ( CMIE) ಎನ್ನುವ ಖಾಸಗಿ ಪರಿಣತ ಸಂಸ್ಥೆಯು ಸಂಗ್ರಹಿಸಿದ ಅಂಕಿ- ಅಂಶಗಳ ಆಧಾರದಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.ಕೊರೊನಾ ಹಾವಳಿಗೆ ತುತ್ತಾದ 2020 ರಲ್ಲಿ ವಿಶ್ವದಾದ್ಯಂತ ಒಟ್ಟು 7.1 ಕೋಟಿಯಷ್ಟು ಜನರು ಬಡತನದ ದವಡೆಗೆ ಸಿಕ್ಕಿದರು ಎಂದು ಪ್ರತಿಪಾದಿಸುವ ಈ ವರದಿಯಲ್ಲಿ 7.1 ಕೋಟಿ ಬಡವರಲ್ಲಿ 5.6 ಕೋಟಿಯಷ್ಟು ಬಡವರು ಭಾರತೀಯರು ಎಂಬುದು ಮತ್ತು ಆ ವರ್ಷದ ಒಟ್ಟು ಬಡವರ ಸಂಖ್ಯೆಯಲ್ಲಿ ಭಾರತೀಯರ ಪಾಲು 78.87 ರಷ್ಟು ಎಂಬುದು ಆತಂಕಕಾರಿ ಸಂಗತಿ.

ದೇಶದಲ್ಲಿ 5.6 ಕೋಟಿ ಬಡವರಿರುವುದಲ್ಲದೆ 4 ಕೋಟಿಯಷ್ಟು ನಿರುದ್ಯೋಗಿಗಳಿದ್ದಾರೆ.ಒಟ್ಟು ಒಂಬತ್ತುಕೋಟಿ ಅರವತ್ತು‌ಲಕ್ಷದಷ್ಟು ಜನರು ಅಭದ್ರತೆಯಲ್ಲಿದ್ದಾರೆ,ಇಂದಿಗೆಂತು,ನಾಳೆಗೆಂತು ಎನ್ನುವ ಭಯ,ಆತಂಕದಲ್ಲಿ ದಿನಗಳನ್ನು ತಳ್ಳುತ್ತಿದ್ದಾರೆ.ದೇಶದಲ್ಲಿ ಒಂದು ಕೋಟಿಗೂ ಅಧಿಕ ಸಂಖ್ಯೆಯಲ್ಲಿ ಭಿಕ್ಷುಕರಿದ್ದಾರೆ.ಸರಕಾರಿ ಅಂಕಿ ಸಂಖ್ಯೆಗಳಂತೆ ಅರವತ್ತು ಲಕ್ಷ ಬೀದಿ ಬದಿಯಲ್ಲಿ ಬದುಕುವ ನಿರಾಶ್ರಿತರಿದ್ದಾರೆ.ಅಂದರೆ ದೇಶದಲ್ಲಿ ಹನ್ನೊಂದು ಕೋಟಿ ಇಪ್ಪತ್ತುಲಕ್ಷದಷ್ಟು ಜನರು ಅಭದ್ರತೆಯ ಬದುಕು ಸಾಗಿಸುತ್ತಿದ್ದಾರೆ.ಇದು ಸಣ್ಣ ಸಂಖ್ಯೆಯೇನಲ್ಲ.ಈ ಬೃಹತ್ ಸಂಖ್ಯೆಯ ಬಡವರು,ನಿರುದ್ಯೋಗಿಗಳು,ಭಿಕ್ಷುಕರು ಮತ್ತು ನಿರಾಶ್ರಿತರ ಬಾಳುಗಳಿಗೆ ಆಸರೆ ಕಲ್ಪಿಸದ ಹೊರತು ನಾವು ವಿಶ್ವದ ಹತ್ತು ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ಆರನೇ ಸ್ಥಾನದಲ್ಲಿದ್ದೇವೆ ಎಂದು ಕೊಚ್ಚಿಕೊಳ್ಳುವುದರಲ್ಲಿ ಅರ್ಥ ಇಲ್ಲ.ಶತಕೋಟ್ಯಾಧಿಪತಿಗಳ ಆದಾಯ ನೂರ್ಮಡಿಸುವಂತೆ ನೋಡಿಕೊಂಡಿದ್ದು ಮತ್ತು ಬ್ಯಾಂಕುಗಳು ಸದೃಢವಾಗುವಂತೆ ನೋಡಿಕೊಂಡಿದ್ದರಿಂದ ನಾವು ಬಲಿಷ್ಠ ಆರ್ಥಿಕ ದೇಶವಾಗಿದ್ದೇವೆಯೇ ಹೊರತು ಜನರ ಜೀವನಮಟ್ಟ ಸುಧಾರಣೆ,ಕೊಳ್ಳುವ ಸಾಮರ್ಥ್ಯವೃದ್ಧಿ (purchasing power)ಯ ಹೆಚ್ಚಳಗಳಂತಹ ಆರ್ಥಿಕ ಮಾನದಂಡಗಳಲ್ಲಿ ಗಣನೀಯ ಹೆಚ್ಚಳ ಸಾಧಿಸಿಲ್ಲ.ಇತ್ತೀಚೆಗೆ ಖಾಸಗಿ ಸಂಸ್ಥೆಯೊಂದು ದೇಶದ 40% ರಷ್ಟು ಜನರು ಮಾತ್ರ ವಿಲಾಸಿ ವಸ್ತುಗಳನ್ನು ಖರೀದಿಸುವ ಸಾಮರ್ಥ್ಯ ಹೊಂದಿದ್ದಾರೆ ಎನ್ನುವ ಅಂಕಿ- ಅಂಶಗಳನ್ನು ಪ್ರಕಟಿಸಿತ್ತು.ಅಂದರೆ 60% ಜನರು ದೈನಂದಿನ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಮಾತ್ರ ಆದಾಯಹೊಂದಿದ್ದಾರೆ.

ದೇಶದ ಬಡವರು ಮತ್ತು ಬಡತನ ರೇಖೆಗಳಗಿಂತ ಕೆಳಗಿರುವ ಕುಟುಂಬಗಳನ್ನು ಮೇಲಕ್ಕೆತ್ತುವುದರಲ್ಲಿ ಭಾರತದ ಆರ್ಥಿಕ ಯಶಸ್ಸಿನ ಶ್ರೇಯಸ್ಸು ಇದೆ.ಆ ಬಗ್ಗೆ ಗಮನಹರಿಸುವ ಅಗತ್ಯ ಇದೆ ಎನ್ನುವುದರತ್ತ ಗಮನಸೆಳೆದಿದೆ ವಿಶ್ವಬ್ಯಾಂಕಿನ ವರದಿ.ನೂರು ಜನ ಶತಕೋಟ್ಯಾಧಿಪತಿ ಉದ್ಯಮಿಗಳಿಗೆ ವಿನಾಯತಿ,ರಿಯಾಯತಿಗಳನ್ನು ನೀಡಿ ಅವರನ್ನು ಆರ್ಥಿಕ ಬಲಾಢ್ಯರನ್ನಾಗಿ ಮಾಡುವುದರಿಂದ ಆರ್ಥಿಕ ಅಸಮಾನತೆ ಹೆಚ್ಚುತ್ತದೆಯೇ ಹೊರತು ಸಮಷ್ಟಿ ಕಲ್ಯಾಣ ಸಾಧ್ಯವಾಗುವುದಿಲ್ಲ.ಅತಿ ಶ್ರೀಮಂತ ವ್ಯಕ್ತಿ ಮತ್ತು ಅವರ ಕುಟುಂಬಕ್ಕೆ Z+ ಶ್ರೇಣಿಯ ಭದ್ರತೆ ಕಲ್ಪಿಸುವುದಕ್ಕಿಂತ ಬಡತನ,ಹಸಿವಿನಿಂದ ಕಂಗಾಲಾಗಿರುವ ಜನರ ಬದುಕುಗಳಲ್ಲಿ ಭರವಸೆ ತುಂಬುವುದು ಆದ್ಯತೆ ಆಗಬೇಕು.ಸಾರ್ವಜನಿಕ ಕ್ಷೇತ್ರದ ಉದ್ದಿಮೆ- ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತ ಸಾರ್ವಜನಿಕ ವಲಯ ( Public sector) ಅನ್ನು ನಿರ್ನಾಮಗೊಳಿಸಿ ಸಾಮಾಜಿಕವಾಗಿ,ಆರ್ಥಿಕವಾಗಿ ಹಿಂದುಳಿದ ದಲಿತರು,ಶೋಷಿತರು,ಬಡವರುಗಳ ಉದ್ಯೋಗಾವಕಾಶಗಳನ್ನು ಕಸಿದುಕೊಂಡು ಅವರ ಬಾಳುಗಳೊಂದಿಗೆ ಆಟ ಆಡಬಾರದು.ದೇಶದ ಆರ್ಥಿಕ ತಜ್ಞರು ಗಂಭೀರವಾಗಿ ಆಲೋಚಿಸಬೇಕು ನಮ್ಮದು ನೂರು ಜನರಿಗಾಗಿ ಇರುವ ಅರ್ಥ ವ್ಯವಸ್ಥೆಯೋ ಅಥವಾ ನೂರಾ ಮುವ್ವತ್ತು ಕೋಟಿ ಜನರಿಗಾಗಿ ಇರುವ ಅರ್ಥವ್ಯವಸ್ಥೆಯೋ ಎಂಬುದನ್ನು.

About The Author