ಮೂರನೇ ಕಣ್ಣು : ಕನ್ನಡ ಬಳಕೆಯಲ್ಲಿ ನಿರ್ಲಕ್ಷ್ಯ– ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಸಾಧುವಲ್ಲದ ಬೇಡಿಕೆ !–ಮುಕ್ಕಣ್ಣ ಕರಿಗಾರ

ಮೂರನೇ ಕಣ್ಣು : ಕನ್ನಡ ಬಳಕೆಯಲ್ಲಿ ನಿರ್ಲಕ್ಷ್ಯಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಸಾಧುವಲ್ಲದ ಬೇಡಿಕೆ !ಮುಕ್ಕಣ್ಣ ಕರಿಗಾರ

 * ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರವು ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎನ್ನುವ ನಿಲುವನ್ನು ತಳೆದು ಅದಕ್ಕೆ ಶಾಸನದ ಬಲ ನೀಡಿದ್ದು ಕನ್ನಡಕ್ಕೆ ಆನೆಬಲ ಬಂದಂತಾಗಿದೆ.ಕನ್ನಡ ಸಮಗ್ರ ಅಭಿವೃದ್ಧಿ ಮಸೂದೆಯು ಈಗ ಶಾಸನವಾಗಿ ರೂಪುಗೊಳ್ಳುತ್ತಲಿದೆ ,ಅದರಡಿ ನಿಯಮಗಳನ್ನು ರೂಪಿಸಲಾಗುತ್ತಿದೆ.ಕನ್ನಡದ ಬಗ್ಗೆ ಉದಾಸೀನ ಇಲ್ಲವೆ ನಿರ್ಲಕ್ಷ್ಯ ಭಾವನೆ ತಳೆಯುವ ಅಧಿಕಾರಿಗಳು ಇನ್ನು ಮುಂದೆ ಸುಲಭವಾಗಿ ಪಾರಾಗುವಂತಿಲ್ಲ.ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ,ಸಾರ್ವಭೌಮ ಭಾಷೆ ಎನ್ನುವ ಕನ್ನಡಿಗರ ಬಹುದಿನದ ಕೂಗು,ಬೇಡಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಲ್ಲದೆ ಕನ್ನಡ ಪರ ಕಾಳಜಿ ಮತ್ತು ಬದ್ಧತೆಯಿಂದ ವಿಧಾನ ಮಂಡಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಿ,ಅಂಗೀಕಾರ ಪಡೆದು ಅಭಿನಂದನಾರ್ಯ ಕಾರ್ಯ ಮಾಡಿದ್ದಾರೆ.

* ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ ಎಸ್ ನಾಗಾಭರಣ ಅವರು ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ಕನ್ನಡ ಸಮಗ್ರ ಅಭಿವೃದ್ಧಿ ಮಸೂದೆಯ ಬಗ್ಗೆ ತಮ್ಮ ಅಸಮಧಾನ,ಆಕ್ಷೇಪಣೆಗಳನ್ನು ವ್ಯಕ್ತಪಡಿಸಿ ಕರಡು ಮಸೂದೆಯಲ್ಲಿದ್ದ ಕೈ ಬಿಟ್ಟ ಅಂಶಗಳನ್ನು ಪುನಃ ಸೇರಿಸಿ ಮತ್ತೆ ಮಸೂದೆಯನ್ನು ಮಂಡಿಸಿ,ಅಂಗೀಕಾರ ಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಟಿ ಎಸ್ ನಾಗಾಭರಣ ಅವರ ಅಸಮಾಧಾನದ ಕಾರಣ ಕನ್ನಡ ಬಳಕೆಯಲ್ಲಿ ನಿರ್ಲಕ್ಷ್ಯವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಬೇಕು ಮತ್ತು ಕನ್ನಡ ಬಳಕೆಯಲ್ಲಿ ಕಾನೂನು ಉಲ್ಲಂಘನೆ ಮಾಡುವವರಿಗೆ ಜೈಲು ಶಿಕ್ಷೆ ವಿಧಿಸಬೇಕು ಎಂದು ಕರಡು ಮಸೂದೆಯಲ್ಲಿ ಪ್ರಸ್ತಾಪಿಸಿದ್ದ ಅಂಶಗಳನ್ನು ಸರಕಾರವು ಕೈ ಬಿಟ್ಟಿದ್ದು.ಕನ್ನಡ ಬಳಕೆಯಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳಿಗೆ ದಂಡನೆ ವಿಧಿಸುವ ಅಧಿಕಾರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಮುಖ್ಯಕಾರ್ಯದರ್ಶಿಯವರಿಗೆ ನೀಡಲಾಗಿದೆ.ಜೈಲು ಶಿಕ್ಷೆಯ ಕ್ರಮದ ಬದಲು ರಾಜಿಮಾಡುವಂತಹ ನಿಯಮ ರೂಪಿಸಲಾಗಿದೆ.ಈ ಎರಡು ಅಂಶಗಳನ್ನು ಬಲವಾಗಿ ವಿರೋಧಿಸಿರುವ ಟಿ ಎಸ್ ನಾಗಾಭರಣ ಅವರು ಇದು ಕಾಯ್ದೆಯ ತೀವ್ರತೆಯನ್ನು ಕಡಿಮೆ ಮಾಡುತ್ತಿರುವುದರಿಂದ ಈ ಮಸೂದೆಯನ್ನು ವಾಪಾಸು ಪಡೆದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಮಂಡಿಸಿದ್ದ
ಮೂಲ ಪ್ರಸ್ತಾವನೆಗಳನ್ನು ಒಳಗೊಂಡು ಪುನಃ ಮಸೂದೆಯನ್ನು ಮಂಡಿಸಿ,ಅಂಗೀಕಾರ ಪಡೆಯಬೇಕು ಎನ್ನುವ ಆಗ್ರಹವನ್ನು ಮುಂದಿಟ್ಟಿದ್ದಾರೆ.

* ‌ಟಿ ಎಸ್ ನಾಗಾಭರಣ ಅವರ ಕನ್ನಡಪರ ಕಾಳಜಿ,ಕನ್ನಡ ಅನುಷ್ಠಾನದ ಬದ್ಧತೆಗಳು ಶ್ಲಾಘನೀಯ.ಇದೇ ವೇಳೆಗೆ ಅವರು ಸರಕಾರಿ ಅಧಿಕಾರಿಗಳ ಮೇಲಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯಂತ್ರಣದ ಇತಿಮಿತಿಗಳು ಮತ್ತು ಸಂವಿಧಾನದ ವಿಧಿ- ನಿಯಮಗಳನ್ನು ತಿಳಿದುಕೊಳ್ಳಬೇಕಿತ್ತು.ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕರ್ನಾಟಕದಲ್ಲಿ ಕನ್ನಡ ಅನುಷ್ಠಾನದ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದನ್ನು ಖಚಿತಪಡಿಸುವುದಕ್ಕಾಗಿ ಶಾಸನದ ಮೂಲಕ ಹುಟ್ಟಿದ ಒಂದು ಪ್ರಾಧಿಕಾರವೇ ಹೊರತು ಸರ್ಕಾರವಲ್ಲ.ಹೆಚ್ಚೆಂದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಕನ್ನಡಪರ ಸ್ವಾಯತ್ತ ಸಂಸ್ಥೆಯಾಗಿರಬಹುದು.ಆದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರಕಾರ ಆಗಲಾರದು,ಸರಕಾರವು ಚಲಾಯಿಸಬೇಕಾದ ಅಧಿಕಾರವನ್ನು ತಾನು ಚಲಾಯಿಸುತ್ತೇನೆ ಎಂದು ನಿರೀಕ್ಷಿಸಲಾಗದು.ಕರ್ನಾಟಕದಲ್ಲಿ ಸೇವೆಸಲ್ಲಿಸುತ್ತಿರುವ ಅಖಿಲಭಾರತೀಯ ಸೇವೆಯ ಅಧಿಕಾರಿಗಳಿಗೆ All India Civil Service Rules ಗಳಿದ್ದರೆ ರಾಜ್ಯ ಸೇವೆಯ ಅಧಿಕಾರಿಗಳಿಗೆ ಕರ್ನಾಟಕ ಸರಕಾರಿ ಸೇವಾನಿಯಮಗಳು,ವರ್ತನೆ ನಿಯಮಗಳು ಇವೆ.ಸರಕಾರಿ ಅಧಿಕಾರಿಗಳ ನೇಮಕಾತಿ ಮತ್ತು ನಿಯಂತ್ರಣ,ದಂಡನೆ ವಿಧಿಸುವುದು ಈ ನಿಯಮಗಳಿಗೆ ಅನುಗುಣವಾಗಿರುತ್ತದೆ.ಭಾರತ ಸಂವಿಧಾನದ ಅನುಚ್ಛೇದ 311 ‘ನೇಮಕಾತಿ ಪ್ರಾಧಿಕಾರವಲ್ಲದ ಯಾವುದೇ ಆಧೀನದ ಪ್ರಾಧಿಕಾರವು ಸಾರ್ವಜನಿಕ ಸೇವಕರಾದ ಕೇಂದ್ರ ಮತ್ತು ರಾಜ್ಯ ಸೇವೆಗೆ ಸೇರಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳತಕ್ಕದಲ್ಲ’ ಎಂದು ನಿರ್ಬಂಧಿಸಿದೆ.ಅಖಿಲ ಭಾರತ ಸೇವೆಗೆ ಸೇರಿದ ಅಧಿಕಾರಿಗಳ ವಿರುದ್ಧ ಕೇಂದ್ರ ಸರ್ಕಾರವು ಕ್ರಮ ಕೈಗೊಳ್ಳಬಹುದು; ರಾಜ್ಯಸೇವೆಗೆ ಸೇರಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರವು ಸಕ್ಷಮ ಪ್ರಾಧಿಕಾರವಾಗಿರುತ್ತದೆ.ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕೇಂದ್ರ ಮತ್ತು ರಾಜ್ಯ ಸೇವೆಗೆ ಸೇರಿದ ಅಧಿಕಾರಿಗಳ ನೇಮಕಾತಿ ಪ್ರಾಧಿಕಾರ ಅಲ್ಲವಾದ್ದರಿಂದ ದಂಡನೆ ವಿಧಿಸುವ ಶಿಸ್ತು ಪ್ರಾಧಿಕಾರವೂ ಆಗುವುದಿಲ್ಲ.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಬೇಡಿಕೆಯು ಸಂವಿಧಾನಕ್ಕೆ ವಿರುದ್ಧವಾದುದು ಮತ್ತು ಯಾರಾದರೂ ನ್ಯಾಯಾಲಯಗಳಲ್ಲಿ ಪ್ರಶ್ನಿಸಿದರೆ ಬಿದ್ದು ಹೋಗುತ್ತದೆ.ಸರಕಾರಿ ಅಧಿಕಾರಿಗಳು ಅವರು ಕೇಂದ್ರ ಸೇವೆಗೆ ಸೇರಿದವರಾಗಲಿ ಇಲ್ಲವೆ ರಾಜ್ಯ ಸೇವೆಗೆ ಸೇರಿದವರಾಗಿರಲಿ ಅವರೆಲ್ಲರ ನಿಯಂತ್ರಣ ಪ್ರಾಧಿಕಾರ ಸರ್ಕಾರದ ಮುಖ್ಯಕಾರ್ಯದರ್ಶಿಯವರು.ಹಾಗಾಗಿ ಮುಖ್ಯಕಾರ್ಯದರ್ಶಿಯವರಿಗೆ ದಂಡನೆ ವಿಧಿಸುವ ಅಧಿಕಾರ ನೀಡಿದ್ದು ಸರಿಯಾಗಿಯೇ ಇದೆ.ಅಲ್ಲದೆ ಮುಖ್ಯಕಾರ್ಯದರ್ಶಿಯವರು ಯಾವುದೇ ಅಧಿಕಾರಿಯ ವಿರುದ್ಧ ಸ್ವಯಂ ಆಗಿ ತಾವೇ ದಂಡನೆ ವಿಧಿಸುವುದಿಲ್ಲ,ಅದನ್ನು ಮುಖ್ಯಮಂತ್ರಿಗಳವರ ಗಮನಕ್ಕೆ ತಂದು,ಸಚಿವ ಸಂಪುಟದ ಅನುಮೋದನೆಯೊಂದಿಗೆ ಕಾರ್ಯಾನುಷ್ಠಾನಗೊಳಿಸುತ್ತಾರೆ.ಇದು ಸಂವಿಧಾನ ಬದ್ಧ ಮತ್ತು ಒಪ್ಪಿತ ಕಾನೂನು ಕ್ರಮ.ಸರಕಾರದ ಸಂವಿಧಾನದತ್ತ ಈ ಅಧಿಕಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಿಕೊಡಲಾಗದು.

*  ಕನ್ನಡ ಬಳಕೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಜೈಲಿಗೆ ಅಟ್ಟಬೇಕು ಎಂದು ನಿರೀಕ್ಷಿಸುವುದು ಕೂಡ ಕಾರ್ಯಸಾಧುವಲ್ಲದ ಬೇಡಿಕೆ.ಕ್ರಿಮಿನಲ್ ಆರೋಪದ ಮೇಲಲ್ಲದೆ ಸರಕಾರಿ ಅಧಿಕಾರಿಗಳನ್ನು ಜೈಲಿಗೆ ಅಟ್ಟಲಾಗದು.ಕನ್ನಡ ಭಾಷೆಯ ಬಳಕೆಯಲ್ಲಿ ಉದ್ದೇಶಪೂರ್ವಕ ನಿರ್ಲಕ್ಷ್ಯ ಇಲ್ಲವೆ ಉದಾಸೀನ ಮನೋಭಾವ ನಡತೆ ನಿಯಮಗಳಡಿ ದಂಡಿಸಬಹುದಾದ ಕ್ರಮವಾಗಬಹುದೇ ಹೊರತು ಅದು ಕ್ರಿಮಿನಲ್ ಅಪರಾಧ ಎನ್ನಿಸಿಕೊಳ್ಳದು.ಒಬ್ಬ ವ್ಯಕ್ತಿ ಅಪರಾಧಿಯೋ ಅಲ್ಲವೋ ಎಂಬುದನ್ನು ನಿರ್ಣಯಿಸಬೇಕಾದದ್ದು ನ್ಯಾಯಾಲಯಗಳು,ಸರ್ಕಾರವಲ್ಲ; ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಅಲ್ಲ.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಇಂತಹ ಕಾನೂನು ಸೂಕ್ಷ್ಮ ವಿಷಯಗಳನ್ನು ಅರ್ಥ ಮಾಡಿಕೊಳ್ಳಬೇಕು.ಕನ್ನಡ ಭಾಷೆಯ ಮೇಲೆ ಅತೀವ ಅಭಿಮಾನ ಇದೆ ಎಂದು ಸಂವಿಧಾನವನ್ನು ಉಲ್ಲಂಘಿಸಲಾಗದು ಮತ್ತು ನೆಲದ ಕಾನೂನಿನ ಆಶಯಗಳಿಗೆ ವಿರುದ್ಧವಾಗಿ ವರ್ತಿಸಲಾಗದು.

* ಕನ್ನಡ ಬಳಕೆಯಲ್ಲಿ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ವಿರುದ್ಧ ಸೇವಾನಿಯಮಗಳು,ವರ್ತನೆ ನಿಯಮಗಳಡಿ ಅನುಮತಿಸಲ್ಪಡುವ ದಂಡನಾ ಕ್ರಮಗಳನ್ನು ಕೈಗೊಳ್ಳುವುದೇ ಲೇಸು.ಬ್ಯಾಂಕುಗಳಂತಹ ಸರ್ಕಾರದ ವ್ಯಾಪ್ತಿಗೆ ಒಳಪಡದ ಸಂಸ್ಥೆಗಳ ಬಗ್ಗೆ ಅವುಗಳ ನಿಯಂತ್ರಣ ಪ್ರಾಧಿಕಾರಗಳಿಗೆ ಮನವರಿಕೆ ಮಾಡಿಕೊಟ್ಟು ಬ್ಯಾಂಕುಗಳಲ್ಲಿ ಕನ್ನಡದ ಬಳಕೆ ಆಗುವಂತೆ ನೋಡಿಕೊಳ್ಳಬೇಕು.ಕನ್ನಡದ ಬಗ್ಗೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಾರ್ಷಿಕ ವೇತನ ಬಡ್ತಿಗಳನ್ನು ತಡೆಹಿಡಿಯಬಹುದು ಇಲ್ಲವೆ ದಂಡ ವಿಧಿಸಬಹುದು ಅಥವಾ ಪದೇಪದೇ ಕನ್ನಡ ಬಳಕೆಯಲ್ಲಿ ನಿರ್ಲಕ್ಷ್ಯ ತೋರುವುದನ್ನು ನಡತೆ ನಿಯಮಗಳ ಉಲ್ಲಂಘನೆ ಎಂದು ಬಡ್ತಿ ತಡೆಹಿಡಿಯಬಹುದು( ಈ ಶಿಸ್ತುಕ್ರಮ ಕೂಡ ಕೋರ್ಟಿನಲ್ಲಿ ನಿಲ್ಲುವುದಿಲ್ಲ). ಇಂತಹ ಕಾರ್ಯಸಾಧುವಾದ ಶಿಸ್ತುಕ್ರಮಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸರಕಾರಿ ಅಧಿಕಾರಿಗಳ ವಿರುದ್ಧ ತೆಗೆದುಕೊಳ್ಳಲು ಸರಕಾರಕ್ಕೆ ಕೋರಬಹುದಲ್ಲದೆ ಅವರೇ ದಂಡನೆ ವಿಧಿಸಲು ಸಂವಿಧಾನ ಮತ್ತು ಸರಕಾರಿ ಸೇವಾ‌ನಿಯಮಗಳಲ್ಲಿ ಅವಕಾಶವಿಲ್ಲ.ಕರ್ನಾಟಕದಲ್ಲಿ ಕನ್ನಡಕ್ಕೆ ಸಾರ್ವಭೌಮಸ್ಥಾನ ಮಾನ ನೀಡಿ ಗೌರವಿಸುವುದು ಕನ್ನಡಿಗರ ತೆರಿಗೆಯ ಹಣದಿಂದ ಸಂಬಳ- ಸವಲತ್ತುಗಳನ್ನು ಪಡೆಯುತ್ತಿರುವ ಅಧಿಕಾರಿಗಳೆಲ್ಲರ ನೈತಿಕ ಜವಾಬ್ದಾರಿ,ಅದನ್ನು ಆಗ್ರಹಿಸುವುದು ಕೂಡ ಉಚಿತವಾದುದೆ.ಆದರೆ ಯಾವುದೇ ಬೇಡಿಕೆ ,ನಿರೀಕ್ಷೆ ಸಂವಿಧಾನಕ್ಕೆ ಅನುಗುಣವಾಗಿರಬೇಕು,ಕಾನೂನಿನ ವ್ಯಾಪ್ತಿಯಲ್ಲಿ ಇರಬೇಕು.

About The Author