ವಡಿಗೇರಾ ತಹಶೀಲ್ದಾರ ಕಚೇರಿಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್.ಭೇಟಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ : ತಾಲೂಕು ಆಡಳಿತ ಸೌಧ ನಿರ್ಮಾಣಗೊಳ್ಳಲಿರುವ ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿಗಳ

ಯಾದಗಿರಿ; ಜಾನುವಾರುಗಳಿಗೆ  ಚರ್ಮ ಗಂಟು ಸಾಂಕ್ರಾಮಿಕ  ರೋಗ ಹರಡುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇಲಾಖೆಯಿಂದ  ಅಧಿಕಾರಿ ಸಿಬ್ಬಂದಿಗಳು  ಜಾನುವಾರು ಮಾಲೀಕರಿಗೆ ಸೋಂಕು ನಿವಾರಣೆಯಾಗುವವರೆಗೂ ಹಾಲು ಮಾರಾಟ ಮಾಡದಂತೆ  ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಸೂಚಿಸಿದರು.

* ಪ್ರತಿ ತಿಂಗಳ ಮಂಗಳವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮುಂದುವರೆದ ಭಾಗವಾಗಿ  ಜಿಲ್ಲಾಧಿಕಾರಿ ಅವರು ವಡಿಗೇರಾ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ತಾಲೂಕು ಮಟ್ಟದ ಅಧಿಕಾರಿಗಳ  ಸಭೆ ನಡೆಸಿ  ಮಾತನಾಡಿದರು.ಚರ್ಮ ಗಂಟು ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡುವಂತೆ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗೆ ಕಟ್ಟುನಿಟ್ಟಾಗಿ  ನಿರ್ದೇಶಿಸಿದರು.

 *  ಅತಿಯಾದ ಮಳೆಯಿಂದ ಹದಗೆಟ್ಟು ಜನ ಸಂಚಾರಕ್ಕೆ ದುಸ್ತರವಾದಂತಹ  ರಸ್ತೆಗಳನ್ನು ಸರಿಪಡಿಸಿ ವಾಹನ ಸವಾರರು, ಮಕ್ಕಳು, ಮಹಿಳೆಯರು ರಸ್ತೆಯಲ್ಲಿ ಸುಗಮವಾಗಿ ಸಂಚರಿಸುವುದಕ್ಕೆ  ಕ್ರಮ ಕೈಗೊಳ್ಳಿ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮಗಳಲ್ಲಿ ರಸ್ತೆ  ಚರಂಡಿ, ಶುದ್ಧ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಇತರೆ ಮೂಲಸೌಕರ್ಯಗಳ ಕೊರತೆಯಾಗದಂತೆ  ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ  ಸೂಚಿಸಿದರು.ತಾಲೂಕಿನ ಜಮೀನು ಸರ್ವೇ ಕಾರ್ಯಗಳ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ, ಇಲಾಖೆಯ ಹಾಗೂ ನೋಂದಾಯಿತ ಸರ್ವೇಯರ್‌ಗಳಿಗೆ ಪ್ರಕರಣಗಳನ್ನು ಹಂಚಿಕೆ ಮಾಡಿದ  ಶೀಘ್ರದಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಿ.  ಅಧಿಕಾರಿಗಳು ಸರ್ವೇಯರ್‌ಗಳ ಪ್ರಗತಿಯನ್ನು ನಿರಂತರವಾಗಿ ಗಮನಿಸಬೇಕು.

*  ಮಾಸಾಶನ, ತ್ರೀ ಆ್ಯಂಡ್ ನೈನ್  ಮಿಸ್ ಮ್ಯಾಚ್, ಪೈಕಿ ಪಹಣಿ, ಮೋಜನಿ ಕಡತಗಳು,  ಎಜೆಎಸ್ಕೆ ತಂತ್ರಾಂಶದಡಿ ಸ್ವೀಕೃತವಾದ ಅರ್ಜಿಗಳು,  ನವೋದಯ ಆ್ಯಪ್ ಮತ್ತು ಸ್ಮಶಾನ ಭೂಮಿಗಳ ಲಭ್ಯತೆ ಬಗ್ಗೆ  ಮಾಹಿತಿ ಪಡೆದು ಕಂದಾಯ ಇಲಾಖೆಯ  ಸೇವೆಗಳನ್ನು ಆದ್ಯತೆಯಲ್ಲಿ ಒದಗಿಸಿ  ಪ್ರಗತಿ ಕುಂಠಿತವಾಗದಂತೆ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.ವೈದ್ಯರು ಸರಿಯಾದ ಸಮಯಕ್ಕೆ ಹಾಜರಾಗಿ ಕರ್ತವ್ಯ ನಿರ್ವಹಿಸಬೇಕು, ಆಸ್ಪತ್ರೆಯ ಪ್ರತಿಯೊಂದು ವಾರ್ಡ್ ಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ, ಹೊರ ಮತ್ತು ಒಳ ರೋಗಿಗಳ ಹಿತರಕ್ಷಣೆ ಕಾಪಾಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಮಕ್ಕಳ ತೂಕ ಮತ್ತು ಎತ್ತರವನ್ನು ಅಳತೆ ಮಾಡಿ ಹೆಚ್ಚಾಗಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ಪೌಷ್ಠಿಕ ಆಹಾರ ಒದಗಿಸುವ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

* ವಡಿಗೇರಾ ಮೊರಾರ್ಜಿ ವಸತಿ ಶಾಲೆಯ ಪಕ್ಕದಲ್ಲಿ ತಾಲೂಕು ಆಡಳಿತ ಸೌಧ (ಮಿನಿ ವಿಧಾನಸೌಧ) ನಿರ್ಮಾಣಗೊಳ್ಳಲಿರುವ  ಸ್ಥಳವನ್ನು ಜಿಲ್ಲಾಧಿಕಾರಿ  ಪರಿಶೀಲಿಸಿದರು. ತಹಶೀಲ್ದಾರ ಸುರೇಶ ಅಂಕಲಗಿ ಹಾಗೂ ಇತರ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

About The Author