ನವರಾತ್ರಿ ಮತ್ತು ದುರ್ಗಾಪೂಜೆ–ಮುಕ್ಕಣ್ಣ ಕರಿಗಾರ

ನವರಾತ್ರಿಯು ಭಾರತೀಯರ ಮಹತ್ವದ ಹಬ್ಬ,ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವಗಳನ್ನುಳ್ಳ ಹಬ್ಬ.ಭಾರತದಾದ್ಯಂತ ಸಾರ್ವತ್ರಿಕವಾಗಿ ಆಚರಿಸುವ ಹಬ್ಬವೂ ಹೌದು.ಭಾರತದಲ್ಲಿ ಬಹುಪುರಾತನ ಕಾಲದಿಂದಲೂ ಆಚರಿಸುತ್ತ ಬಂದಿರುವ ಹಬ್ಬ ಎನ್ನುವುದು ಇದರ ವಿಶೇಷ.

ರಾಮನಿಂದ ನವರಾತ್ರಿ ಪೂಜೆ ಆರಂಭವಾಯಿತು ಎನ್ನಲಾಗುತ್ತಿದೆ.ರಾಮನು ರಾವಣನನ್ನು ಕೊಲ್ಲುವ ಪೂರ್ವದಲ್ಲಿ ಒಂಬತ್ತು ದಿನಗಳ ಕಾಲ ದುರ್ಗಾದೇವಿಯ ಪೂಜೆಯನ್ನು ಮಾಡಿದನೆಂದೂ ರಾಮರಾವಣರ ಯುದ್ಧವು ಒಂಬತ್ತು ದಿನಗಳ ಕಾಲ ನಡೆದು ಹತ್ತನೇ ದಿನದಂದು ರಾಮನು ರಾವಣನನ್ನು ಕೊಂದನೆಂದೂ ಪುರಾಣಗಳು ಹೇಳುತ್ತವೆ.ಯುದ್ಧದ ಹತ್ತನೇ ದಿನ ರಾಮನು ರಾವಣನನ್ನು ಕೊಂದು ವಿಜಯೋತ್ಸವವನ್ನು ಆಚರಿಸಿದನೆಂದೂ ಅಂದಿನಿಂದ ‘ ವಿಜಯ ದಶಮಿ’ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ನಂಬಲಾಗಿದೆ.ಆದರೆ ರಾಮನಿಗಿಂತ ಬಹುಹಿಂದಿನಿಂದಲೂ ದುರ್ಗಾದೇವಿಯ ಪೂಜೆ- ಉಪಾಸನೆ ನಡೆದಿತ್ತು ಎನ್ನುವುದನ್ನು ಶಾಕ್ತಗ್ರಂಥಗಳು ವಿವರಿಸುತ್ತವೆ.ಮಾರ್ಕಂಡೇಯ ಋಷಿಗಳಿಂದ ರಚಿತವಾದ ‘ ದುರ್ಗಾಸಪ್ತಶತಿ’ ಮತ್ತು ‘ ದೇವಿ ಭಾಗವತ ಪುರಾಣ’ ಗಳು ಶ್ರೀದೇವಿ ದುರ್ಗೆಯು ಪರಶಿವನ ಶಕ್ತಿಯಾದ ಜಗದಾದಿ ಶಕ್ತಿಯೆಂದು,ಜಗನ್ನಿಯಾಮಕಳಾದ ಆಕೆಯು ವಿಶ್ವಸೃಷ್ಟಿಯನ್ನು ಸಂಕಲ್ಪಿಸಿ ಬ್ರಹ್ಮ,ವಿಷ್ಣು,ರುದ್ರಗಳನ್ನು ಸೃಷ್ಟಿಸಿ ಅವರಿಂದ ವಿಶ್ವವ್ಯವಹಾರ ನಿರ್ವಹಿಸಿದಳೆಂದೂ ವಿವರಿಸುತ್ತವೆ.ದುರ್ಗಾದೇವಿಯನ್ನು ಬ್ರಹ್ಮ,ವಿಷ್ಣು,ರುದ್ರರಲ್ಲದೆ ಇಂದ್ರನ ನೇತೃತ್ವದಲ್ಲಿ ಸಮಸ್ತ ದೇವತಾ ಸಮೂಹವು ಸ್ತುತಿಸುತ್ತದೆ ಮಧುಕೈಟಭರು,ಮಹಿಷಾಸುರ ಮತ್ತು ನಿಶುಂಭ ಶುಂಭರ ವಧೆಗಾಗಿ.ಅಲ್ಲದೆ ಭೂಮಂಡಲದಲ್ಲಿ ದುಷ್ಟರಾಕ್ಷಸರ ಹಾವಳಿ ಉಂಟಾದಗಲೆಲ್ಲ ದುರ್ಗಾದೇವಿಯು ಅವತರಿಸಿ ದುಷ್ಟಶಿಕ್ಷಣ,ಶಿಷ್ಟರಕ್ಷಣೆ ಮಾಡಿರುವ ಪರಾಶಕ್ತಿಯ ಲೀಲೆಗಳನ್ನು ಸೊಗಸಾಗಿ ಬಣ್ಣಿಸುತ್ತವೆ ಶಾಕ್ತಗ್ರಂಥಗಳು.

ವಿಶ್ವದಲ್ಲಿ ಮಾತೃ ಉಪಾಸನೆಯು ಮೊದಲು ಕಾಣಿಸಿಕೊಂಡ ಉಪಾಸನಾ ಪದ್ಧತಿ.ಆದಿಮಾನವರು ಮಾತೃದೇವತೆಯನ್ನು ಪೂಜಿಸುತ್ತಿದ್ದರು.ತಾಯ ಗರ್ಭದಿಂದ ಮನುಷ್ಯರು ಮತ್ತು ವಿಶ್ವವು ಹೊರಬಂದುದನ್ನು ತತ್ತ್ವೀಕರಿಸಲು ಆದಿಮಾನವ ಯೋನಿರೂಪದಲ್ಲಿ ದೇವಿಯನ್ನು ಪೂಜಿಸಲಾರಂಭಿಸಿದ.ಇದರಲ್ಲಿ ಅಸಹ್ಯ ಪಡುವಂತಹದ್ದಾಗಲಿ,ಕಾಡುಮಾನವರ ಭಾವನೆ ಎಂದು ಹೀಗಳೆಯುವಂತಹದ್ದಾಗಲಿ ಏನೂ ಇಲ್ಲ.ಇದು ಸಹಜ ಆರಾಧನಾ ಪದ್ಧತಿ.ಯೋನಿ ಪೂಜೆಯ ನಂತರ ಶಿವನನ್ನು ಶಿಶ್ನರೂಪದಲ್ಲಿ ಪೂಜಿಸತೊಡಗಿದರು.ವೇದದಲ್ಲಿ ಶಿವನನ್ನು ‘ ಶಿಶ್ನದೇವ’ ಎಂದು ಕರೆಯಲಾಗಿದೆ.ಯೋನಿಪೂಜೆ ಮತ್ತು ಶಿಶ್ನಪೂಜೆಗಳಿಂದ ಇಂದಿನ ಬಗೆಬಗೆಯ ಬೆಡಗು- ಬಿನ್ನಾಣಗಳ ದೈವಗಳು, ಅತ್ಯಾಧುನಿಕ ಅಲಂಕಾರಸೇವೆಗಳವರೆಗೆ ಬೆಳೆದು ಬಂದಿದೆ ಉಪಾಸನಾ ಪದ್ಧತಿ.ಶಿವನ ಲಿಂಗವೂ ಕೂಡ ಯೋನಿ ಮತ್ತು ಶಿಶ್ನಗಳ ಕೂಟರೂಪವೆ.ಶಿವನ ಲಿಂಗವು ಪ್ರಕೃತಿ ಮತ್ತು ಪುರುಷನಾದ ಶಿವನ ಕೂಟ ಇಲ್ಲವೆ ಸಮಾಗಮದ ಕುರುಹು.ಗಂಡು ಹೆಣ್ಣುಗಳ ಮೈಥುನ ಕ್ರಿಯೆಯಿಂದ ಸಂತಾನೋತ್ಪತ್ತಿ ಆಗುವಂತೆ ಪುರುಷ ಮತ್ತು ಪ್ರಕೃತಿಯ ಕೂಟ ಇಲ್ಲವೆ ಸಮಾಗಮದಿಂದ ವಿಶ್ವದುತ್ಪತ್ತಿ ಎನ್ನುವುದನ್ನು ಸಂಕೇತಿಸುತ್ತದೆ ಶಿವಲಿಂಗ.

ಆದಿಮಾನವರು ಮತ್ತು ಆದಿವಾಸಿಗಳು ದೇವಿಯನ್ನು ‘ ಅಮ್ಮಾ’ ಎಂದು ಶಿವನನ್ನು ‘ ಅಪ್ಪಾ’ ಎಂದು ಕರೆಯುತ್ತಿದ್ದರು.ಆದಿಮಾನವರು ದೇವರಿಗೆ ಯಾವುದೇ ಗುಣ ವಿಶೇಷಗಳನ್ನು ಆರೋಪಿಸದೆ ತಮ್ಮ ರಕ್ಷಕ ದೈವಗಳು ಎಂದು ಭಾವಿಸಿದ್ದರು.ದೇವರು,ದೇವತೆಗಳ ಗುಣ ವಿಶೇಷಗಳು ಮೊದಲಬಾರಿಗೆ ಪ್ರಕಟವಾದದ್ದು ವೇದದಲ್ಲಿ.ವೇದದಲ್ಲಿ ಸ್ತ್ರೀ ದೇವತೆಗಳು ಇಲ್ಲವೆ ದೇವಿಯರಿಗೆ ಪ್ರಾಧಾನ್ಯ ಇರುವುದು ಆ ಕಾಲಕ್ಕಾಗಲೆ ಮಾತೃ ದೇವತೆಗಳ ಉಪಾಸನೆಯು ಸಮಾಜದಲ್ಲಿ ವ್ಯಾಪಕ ಪ್ರಚಾರದಲ್ಲಿತ್ತು ಎನ್ನುವುದನ್ನು ಸೂಚಿಸುತ್ತದೆ.ವೇದದಲ್ಲಿ ವಾಗಂಭೃಣಿ,ಉಶಷ್ ದೇವಿಯರಂತಹ ದೇವಿಯರುಗಳ ಸೂಕ್ತಗಳಿರುವುದರ ಜೊತೆಗೆ ದುರ್ಗಾಸೂಕ್ತವೂ ಇದೆ.ಕೆಲವರು ಶ್ರೀಸೂಕ್ತ ವೇದೋಕ್ತ ಎನ್ನುತ್ತಾರಾದರೂ ಅದರ ಭಾಷೆಯನ್ನು ಗಮನಿಸಿದರೆ ಅದು ನಂತರ ಕಾಲದ ಸೃಷ್ಟಿ ಎಂಬುದು ಮನವರಿಕೆಯಾಗುತ್ತದೆ.ಲಕ್ಷ್ಮೀಯು ಪುರಾಣಗಳ ಕಾಲದ ದೇವಿ,ವೇದೋಪನಿಷತ್ತುಗಳ ಕಾಲದ ದೇವಿಯಲ್ಲ.ದುರ್ಗಾಸೂಕ್ತ ಮತ್ತು ಶ್ರೀ ಸೂಕ್ತಗಳೆರಡನ್ನು ಬದಿಯಲ್ಲಿಟ್ಟು ವಿಚಾರಿಸಿದಾಗ ಈ ಅಂಶ ಸ್ಪಷ್ಟವಾಗುತ್ತದೆ.ಸಂಸ್ಕೃತ ಮತ್ತು ಸಂಸ್ಕೃತಿಯನ್ನು ಗುತ್ತಿಗೆ ಪಡೆದಿದ್ದ ಜನರು ಹೇಳುವುದನ್ನೇ ಸತ್ಯ ಎಂದು ಭಾವಿಸಿದ್ದಾರೆ ಮುಗ್ಧ ಜನತೆ.

‌ಪರಾಶಕ್ತಿಯನ್ನು ದುರ್ಗಾ ರೂಪದಲ್ಲಿ ಪೂಜಿಸಿದ್ದು ಉಪಾಸನಾ ತತ್ತ್ವದ ಮೊದಲ ಘಟ್ಟ.ದುರ್ಗಾ ಎಂದರೆ ರಕ್ಷಕ ದೇವಿ ಎಂದರ್ಥ.ರಾಜ ಮಹಾರಾಜರುಗಳ ಕೋಟೆಗಳಿಗೆ ‘ ದುರ್ಗ’ ಎನ್ನುತ್ತಾರೆ.ನಮ್ಮ ದೇಹವೂ ಕೋಟೆಯೆ.ಆದಿಮಾನವ ಕಾಡಿನಲ್ಲಿ ಇದ್ದುದರಿಂದ ದುರ್ಗೆಯನ್ನು ಮೊದಲು ‘ ವನದುರ್ಗಾ’ ಎಂದು ಪೂಜಿಸಲಾರಂಬಿಸಿದ.ಬನಶಂಕರಿಯು ವನದುರ್ಗೆಯ ಶಿಷ್ಟರೂಪ.ರಾಜ ಮಹಾರಾಜರುಗಳು ಪರಾಶಕ್ತಿಯನ್ನು ತಮ್ಮ ರಕ್ಷಕ ದೇವಿ ಎಂದು ಪೂಜಿಸುತ್ತಿದ್ದರಲ್ಲದೆ ಕೋಟೆಯ ಹೊರಭಾಗದಲ್ಲಿ ದುರ್ಗಾದೇವಿಯ ದೇವಸ್ಥಾನವನ್ನು ಕಟ್ಟಿ,ಪೂಜಿಸುತ್ತಿದ್ದರು.ದೇವಿ ದುರ್ಗೆಯು ಶತ್ರುಗಳು ರಾಜ್ಯವನ್ನು ಪ್ರವೇಶಿಸದಂತೆ ತಡೆಯುತ್ತಾಳೆ ಎಂದು ರಾಜರುಗಳು ನಂಬಿದ್ದರು.ರಾಜರುಗಳ ಕಾಲದಲ್ಲಿ ದುರ್ಗಾ ಉಪಾಸನೆಯು ಸಾರ್ವತ್ರಿಕವಾಗಿತ್ತು.ದೇಶದಾದ್ಯಂತ ಶಿವನಂತೆಯೇ ಎಲ್ಲೆಡೆಯೂ ಪೂಜೆಗೊಳ್ಳುವ ದೇವಿ ಎಂದರೆ ದುರ್ಗಾದೇವಿಯೆ.ಭಾರತದ ಯಾವುದೇ ಹಳ್ಳಿಗೆ ಹೋದರೂ ಅಲ್ಲಿ ಒಂದು ಶಿವದೇವಸ್ಥಾನ ಇರುತ್ತದೆ; ಹಾಗೆಯೇ ದುರ್ಗಾದೇವಿಯ ಮಂದಿರವೂ ಇರುತ್ತದೆ.ಇದು ಶಿವ ದುರ್ಗೆಯರು ಭಾರತದ ಆದಿ ದೈವಗಳು,ಮೂಲ ದೇವರುಗಳು ಮತ್ತು ಭಾರತೀಯ ಸಂಸ್ಕೃತಿಯ ವಿಕಸನದೊಟ್ಟಿಗೆ ಬೆಳೆದ ದೇವರುಗಳು ಎನ್ನುವದನ್ನು ವಿಷದಪಡಿಸುತ್ತದೆ.

‌ವನದುರ್ಗಾ ರೂಪದಿಂದ ಆರಂಭವಾದ ದೇವಿ ಉಪಾಸನೆಯು ದುರ್ಗಾ,ರಾಜದುರ್ಗಾ,ರಾಜರಾಜೇಶ್ವರಿ,ಚಕ್ರೇಶ್ವರಿ ಮೊದಲಾದ ರೂಪಗಳಲ್ಲಿ ಕಾಣಿಸಿಕೊಂಡಿತು.ಪುರಾಣಗಳ ಕಾಲಕ್ಕೆ ನವದುರ್ಗಾ ಪೂಜಾ ಪದ್ಧತಿಯು ರೂಢಿಗೆ ಬಂದಿತು.ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜೆಯನ್ನು ವಿಶಿಷ್ಟವಾಗಿ ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಸಾವಿರಾರು ವರ್ಷಗಳಿಂದ.ವಿಜಯನಗರದ ಅರಸರು ದುರ್ಗಾಪೂಜೆಯನ್ನು ವಿದ್ಯುಕ್ತವಾಗಿ ಪ್ರಾರಂಭಿಸಿದ ದಕ್ಷಿಣ ಭಾರತದ ಅರಸರು.ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಸ್ಫೂರ್ತಿ ಶಕ್ತಿಯಾದ ವಿದ್ಯಾರಣ್ಯರು ಶಿವ ದುರ್ಗಾ ದೇವಿಯರ ಆರಾಧಕರು ಆಗಿದ್ದರಿಂದ ವಿಜಯನಗರ ಸಾಮ್ರಾಜ್ಯದಲ್ಲಿ ನೂರಾರು ಶಿವ ದೇವಾಲಯಗಳು ನಿರ್ಮಾಣಗೊಂಡವು.ಅಂತೆಯೇ ಶರನ್ನವರಾತ್ರಿಯ ಒಂಬತ್ತುದಿನಗಳ ದುರ್ಗಾಪೂಜೆಗೂ ವಿದ್ಯಾರಣ್ಯರೇ ಸ್ಫೂರ್ತಿ,ಪ್ರೇರಣೆ.ವಿಜಯನಗರವನ್ನು ಪಂಪಾಪಟ್ಟಣವೆಂದೂ ಸಾಮ್ರಾಜ್ಯದೇವಿಯನ್ನು ಪಂಪಾಂಬಿಕೆ ಎಂದು ಪೂಜಿಸಲಾಗುತ್ತಿತ್ತು.ವಿಜಯನಗರದ ಪ್ರಾರಂಭದ ಅರಸರ ಆಳ್ವಿಕೆಯ ಕಾಲದಲ್ಲಿ ವಿದ್ಯಾರಣ್ಯರ ಪ್ರಭಾವದಿಂದ ಕಾಶಿಯಂತೆಯೇ ಅರಸರು ಶಿವನ‌ ಪ್ರತಿನಿಧಿಗಳಾಗಿ ರಾಜ್ಯಭಾರ ಮಾಡುತ್ತಿದ್ದರು.ಕಾಶಿಯು ವಿಶ್ವೇಶ್ವರನ ಸಾಮ್ರಾಜ್ಯವಾಗಿದ್ದು ವಿಶ್ವೇಶ್ವರನೇ ಕಾಶಿರಾಜ್ಯದ ಅಧಿಪತಿ,ಚಕ್ರವರ್ತಿಯಾಗಿದ್ದು ಅರಸರು ಆತನ ಪ್ರತಿನಿಧಿಗಳಾಗಿ ಆಳಿಕೆ ಮಾಡುತ್ತಿದ್ದ ಶಿವದೈವ ಪ್ರಭುತ್ವವು ಕಾಶಿಯಲ್ಲಿತ್ತು.ಅದೇ ಮಾದರಿಯಲ್ಲಿ ವಿಜಯನಗರದ ಅರಸರು ಹಂಪೆಯ ಅರಸ ವಿರೂಪಾಕ್ಷನೆಂದು( ಪಂಪಾಪತಿ) ಬಗೆದು ಪಂಪಾಂಬಿಕೆಯನ್ನು ಸಾಮ್ರಾಜ್ಞಿ ಎಂದು ಪೂಜಿಸುತ್ತಿದ್ದರು.ನವರಾತ್ರಿಯಲ್ಲಿ ಪಂಪಾಂಬಿಕೆಯ ಪೂಜೆ,ಉತ್ಸವಗಳು ನಡೆಯುತ್ತಿದ್ದವು.

ವಿಜಯನಗರ ಸಾಮ್ರಾಜ್ಯದ ಪತನಾನಂತರ ಮೈಸೂರು ಮಹಾರಾಜರು ದಸರಾ ಉತ್ಸವವನ್ನು ಮೈಸೂರಿನಲ್ಲಿ ಪ್ರಾರಂಭಿಸಿದರು.ಮಹಾಬಲಾದ್ರಿ( ಇಂದಿನ ಚಾಮುಂಡಿ ಬೆಟ್ಟ) ಯಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಕಟ್ಟಿಸಿ,ದೇವಿಯ ಪೂಜೆ- ಸೇವೆಗಳ ಏರ್ಪಾಟು ಮಾಡಿದರಲ್ಲದೆ ನವರಾತ್ರಿಯಲ್ಲಿ ಒಂಬತ್ತು ದಿನಗಳ ವಿಶೇಷ ಉತ್ಸವದ ವ್ಯವಸ್ಥೆ ಮಾಡಿದರು.ಇಂದು ಮೈಸೂರು ದಸರಾ ವಿಶ್ವವಿಖ್ಯಾತವಾಗಿದೆ.ಚಾಮುಂಡೇಶ್ವರಿಯು ಕರ್ನಾಟಕದ ನಾಡದೇವಿ ಆಗಿದ್ದಾಳೆ.ದೇವಿ ದುರ್ಗೆಯ ಮತ್ತೊಂದು ಹೆಸರೇ ಚಾಮುಂಡಿ.ಚಂಡ ಮುಂಡರೆಂಬ ರಕ್ಕಸರನ್ನು ಸಂಹರಿಸಿ ಚಾಮುಂಡಿ ಎಂಬ ಹೆಸರನ್ನು ಪಡೆಯುತ್ತಾಳೆ.ರಕ್ಕಸ ಮಹಿಷನನ್ನು ಕೊಂದಿದ್ದರಿಂದ ಮಹಿಷಮರ್ಧಿನಿ ರೂಪದಲ್ಲಿ ಚಾಮುಂಡಿ ಬೆಟ್ಟದಲ್ಲಿ ನೆಲೆಸಿದ್ದಾಳೆ.ಉತ್ತರದಲ್ಲಿ ವಿಂಧ್ಯಾದ್ರಿಯು ದುರ್ಗಾದೇವಿಯ ಮೂಲನೆಲೆಯಾದರೆ ದಕ್ಷಿಣದಲ್ಲಿ ಚಾಮುಂಡಿ ಬೆಟ್ಟವು ಚಾಮುಂಡಿಯ ನೆಲೆಯಾಗಿದೆ.

ಚಾಮುಂಡೇಶ್ವರಿಯು ಕರ್ನಾಟಕದ ನಾಡದೇವಿ ಆಗಿರುವುದರಿಂದ ರಾಜ್ಯದಾದ್ಯಂತ ನವರಾತ್ರಿ ಉತ್ಸವವನ್ನು ಸಡಗರ ಸಂಭ್ರಮಗಳಿಂದ ಆಚರಿಸುತ್ತಾರೆ.ಒಂಬತ್ತು ದಿನಗಳ ಕಾಲ ಮನೆಮನೆಗಳಲ್ಲಿ ದುರ್ಗಾದೇವಿಯನ್ನು ಆರಾಧಿಸಿ,ವಿಜಯದಶಮಿಯ ದಿನದಂದು ಶಮೀವೃಕ್ಷದ ಪೂಜೆ ಮಾಡಿ,ಪರಸ್ಪರರು ಬನ್ನಿಪತ್ರಿಯನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಬಾಂಧವ್ಯಭಾವವನ್ನು ವೃದ್ಧಿಗೊಳಿಸುತ್ತಾರೆ.ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಭೀಮಾರ್ಜುನರು ತಮ್ಮ ಆಯುಧಗಳನ್ನು ಶಮೀವೃಕ್ಷದಲ್ಲಿಟ್ಟು ಅವುಗಳನ್ನು ಕಾಯುವಂತೆ ಮಹಾಕಾಳಿಯನ್ನು ಪ್ರಾರ್ಥಿಸಿದ್ದರಂತೆ.ಕೌರವಸೈನ್ಯವನ್ನು ನಾಶಮಾಡಿದ ಬಳಿಕ ಪಾಂಡವರು ಶಮೀವೃಕ್ಷವನ್ನು ಪೂಜಿಸಿದರಂತೆ.ಈ ತೆರನಾಗಿ ನವರಾತ್ರಿಯು ರಾಮಾಯಣ- ಮಹಾಭಾರತ ಕಾಲದಿಂದಲೂ ಆಚರಣೆಯಲ್ಲಿದೆ .

‌ ಚೈತ್ರನವರಾತ್ರಿ ಮತ್ತು ಶರನ್ನವರಾತ್ರಿ ಎಂದು ಎರಡು ನವರಾತ್ರಿಗಳನ್ನು ಆಚರಿಸಲಾಗುತ್ತಿದ್ದು ಭಾರತೀಯರ ಹೊಸವರ್ಷವಾದ ಯುಗಾದಿಯಿಂದ ಒಂಬತ್ತುದಿನಗಳ ಕಾಲ ಆಚರಿಸುವ ನವರಾತ್ರಿಯು ಚೈತ್ರನವರಾತ್ರಿ ಎಂದು ಕರೆಯಿಸಿಕೊಳ್ಳುತ್ತದೆ.ಉತ್ತರ ಭಾರತದಲ್ಲಿ ಚೈತ್ರನವರಾತ್ರಿಯನ್ನು ಆಚರಿಸಲಾಗುತ್ತಿದೆ.ಶರನ್ನವರಾತ್ರಿಯನ್ನು ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತಿದೆ.ಕರ್ನಾಟಕದಲ್ಲಿ ಚಾಮುಂಡೇಶ್ವರಿಯನ್ನು ಪೂಜಿಸಿದರೆ ಮಹಾರಾಷ್ಟ್ರದಲ್ಲಿ ತುಳಜಾ ಭವಾನಿಯನ್ನು ಪೂಜಿಸಲಾಗುತ್ತದೆ.ಛತ್ರಪತಿ ಶಿವಾಜಿಯು ತುಳಜಾ ಭವಾನಿಯ ಅನುಗ್ರಹದಿಂದ ಔರಂಗಜೇಬನನ್ನು ಸದೆ ಬಡಿದು ತನ್ನ ಕೀರ್ತಿಪತಾಕೆಯನ್ನು ಹಾರಿಸಿದ.ಆಂಧ್ರಪ್ರದೇಶದಲ್ಲಿ ಭ್ರಮರಾಂಬಾ ಮತ್ತು ಜೋಗುಲಾಂಬಾ ದೇವಿಯರನ್ನು ಪೂಜಿಸಲಾಗುತ್ತದೆ.ತಮಿಳುನಾಡಿನಲ್ಲಿ ಮಧುರೆ ಮೀನಾಕ್ಷಿ ಮತ್ತು ಪ್ರತ್ಯಂಗಿರಾ ದೇವಿಯರನ್ನು ಪೂಜಿಸಿದರೆ ಕೇರಳದಲ್ಲಿ ಕನ್ಯಾಕುಮಾರಿ ದೇವಿಯನ್ನು ಪೂಜಿಸಲಾಗುತ್ತಿದೆ.ಈ ಎಲ್ಲ ದೇವಿಯರುಗಳು ದುರ್ಗಾದೇವಿಯ ವಿವಿಧ ನಾಮ- ರೂಪಗಳು.

ನವರಾತ್ರಿಯ ಸಮಯದಲ್ಲಿ ದೇವಿ ಉಪಾಸಕರುಗಳು ಉಪವಾಸ,ನಿರಾಹಾರ ವ್ರತದಿಂದ ದುರ್ಗಾದೇವಿಯನ್ನು ಪೂಜಿಸುತ್ತಾರೆ.ದುರ್ಗಾಸಪ್ತಶತಿ,ದೇವಿ ಭಾಗವತ,ಸೌಂದರ್ಯಲಹರಿಗಳನ್ನು ಪಠಿಸುತ್ತಾರೆ.ಕೆಲವರು ದುರ್ಗಾಸಹಸ್ರನಾಮ,ಲಲಿತಾಸಹಸ್ರನಾಮ ಪಠಿಸುತ್ತಾರೆ.ಉತ್ತರ ಕರ್ನಾಟಕದಲ್ಲಿ ಚಿದಾನಂದಾವಧೂತರು ಬರೆದ ‘ ಪಾರ್ವತಿ ದೇವಿ ಮಹಾತ್ಮೆ’ ಎನ್ನುವ ಪುರಾಣವನ್ನು ಓದುತ್ತಾರೆ,ಕೇಳುತ್ತಾರೆ.ಚಿದಾನಂದಾವಧೂತರು ಸಿದ್ಧಪರ್ವತದಲ್ಲಿ ಬಗಳಾಮುಖಿ ದೇವಿಯನ್ನು ಸಾಕ್ಷಾತ್ಕಾರ ಮಾಡಿಕೊಂಡು ಲೋಕೋಪಕಾರಕ್ಕಾಗಿ ‘ ಪಾರ್ವತಿ ಮಹಾತ್ಮೆ’ಯನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಿದ್ದಾರೆ.ಸಂಸ್ಕೃತದ ದುರ್ಗಾಸಪ್ತಶತಿ,ದೇವಿ ಭಾಗವತ,ಸೌಂದರ್ಯಲಹರಿಗಳನ್ನು ಓದಲಾಗದವರು ಚಿದಾನಂದಾವಧೂತರ ದೇವಿಪುರಾಣವನ್ನು ಓದಬಹುದು.ಜೊತೆಗೆ ಚಿದಾನಂದಾವಧೂತರು ಬರೆದ ‘ಬಗಳಾಶತಕ’ ಎನ್ನುವ ಬಗಳಾಮುಖಿಯ ಮಹಿಮೆಯನ್ನುಳ್ಳ ಪುಟ್ಟ ಸ್ತೋತ್ರಶತಕವಿದ್ದು ದೇವಿಪುರಾಣವನ್ನು ಓದಲಾಗದವರು ಅದನ್ನು ಓದಬಹುದು.ಜನಸಾಮಾನ್ಯರ ದೇವಿಪೂಜೆಗೆಂದು ನಾನು ‘ ದುರ್ಗಾಭಕ್ತಿಸಾರ’ ಮತ್ತು ‘ ವಿಶ್ವೇಶ್ವರಿ ದುರ್ಗಾ ಮಹಾತ್ಮೆ’ ಯನ್ನು ಕೃತಿಗಳನ್ನು ರಚಿಸಿದ್ದು ಅವುಗಳನ್ನು ಓದಿ ಫಲ- ಸಿದ್ಧಿಗಳನ್ನು ಪಡೆಯಬಹುದು.

About The Author