ಆಡಳಿತ ಕಾಣುವಂತಾಗಬೇಕಾದರೆ–ಮುಕ್ಕಣ್ಣ ಕರಿಗಾರ

ಮೂರನೇ ಕಣ್ಣು

ವಿಧಾನಸಭೆಯ ಇಂದಿನ ( 21.09.2022) ಅಧಿವೇಶನದಲ್ಲಿ ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸರ್ಕಾರಕ್ಕೆ ‘ ಆಡಳಿತ ಕಾಣುವಂತಿರಬೇಕು’ ಎನ್ನುವ ಸೂಚನೆ ನೀಡಿದ್ದಾರೆ. ಸದನದ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ಸಿನ ಹಿರಿಯ ಶಾಸಕರಾದ ಅಮರೇಗೌಡ ಬಯ್ಯಾಪುರ ಅವರು ತೋಟಗಾರಿಕೆ ಇಲಾಖೆಯಲ್ಲಿ ತೋಟಗಾರರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಲ್ಲಿ ಆಗುತ್ತಿರುವ ವಿಳಂಬವನ್ನು ಕುರಿತು ಪ್ರಶ್ನಿಸಿದ್ದರು.ತೋಟಗಾರಿಕಾ ಸಚಿವರು ನೀಡಿದ ಉತ್ತರದಿಂದ ತೃಪ್ತರಾಗದ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಈ ಕುರಿತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ತಾವು ಮಾತನಾಡಿದ್ದು ಇನ್ನೂ ಕೆಲಸ ಆಗಿಲ್ಲ ಎನ್ನುವ ಅಸಮಧಾನವನ್ನು ಹೊರಹಾಕಿ ಸಚಿವರಿಗೆ” ಆಡಳಿತ ಉತ್ತರದಲ್ಲಿದ್ದರೆ ಸಾಲದು,ಆಡಳಿತದಲ್ಲಿ ಕಾಣಬೇಕು.ಇಚ್ಛಾಶಕ್ತಿ ತೋರಿಸಿ ಪಟ್ಟಿಯನ್ನು ಅಂತಿಮಗೊಳಿಸಿ” ಎಂದು ತಾಕೀತು ಮಾಡಿದರು.ವಿಧಾನಸಭಾಧ್ಯಕ್ಷರ ” ಆಡಳಿತ ಕಾಣುವಂತಾಗಲಿ” ಎನ್ನುವ ಕಳಕಳಿಯನ್ನು ಸಂಬಂಧಪಟ್ಟವರೆಲ್ಲ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಈ ಪ್ರಕರಣದಲ್ಲಿ ತೋಟಗಾರಿಕಾ ಇಲಾಖೆಯ ಸಚಿವರನ್ನು ನಾನು ಹೊಣೆಗಾರರನ್ನಾಗಿ ಮಾಡುತ್ತಿಲ್ಲ ಅಥವಾ ಇದನ್ನು ತೋಟಗಾರಿಕೆ ಇಲಾಖೆ ಒಂದಕ್ಕೆ ಸೀಮಿತಗೊಳಿಸಿ ಹೇಳುತ್ತಿಲ್ಲ. ಬದಲಿಗೆ ವಿಧಾನ ಸಭೆಯಲ್ಲಿ ಶಾಸಕರುಗಳು ಕೇಳುವ ಪ್ರಶ್ನೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ಇಲಾಖೆಯ ಸಚಿವರುಗಳ ಮೂಲಕ ಉತ್ತರ ನೀಡುವ ಸರಕಾರಿ ಇಲಾಖೆಗಳ ಕಾರ್ಯ ವೈಖರಿಯ ಬಗ್ಗೆ ಪ್ರಸ್ತಾಪಿಸುತ್ತಿದ್ದೇನೆ.ಈ ಪ್ರಕರಣದಲ್ಲಿ ತೋಟಗಾರಿಕೆ ಇಲಾಖೆಯ ಸಚಿವರು ತಮ್ಮ ಇಲಾಖೆಯ ಅಧಿಕಾರಿಗಳು ಒದಗಿಸಿದ ಮಾಹಿತಿಯನ್ನೆ ಆಧಾರವಾಗಿಟ್ಟುಕೊಂಡು ಉತ್ತರಿಸಿದ್ದಾರೆ.

ವಿಧಾನ ಸಭಾಧ್ಯಕ್ಷರ ” ಆಡಳಿತ ಉತ್ತರದಲ್ಲಿದ್ದರೆ ಸಾಲದು,ಕಾಣುವಂತಿರಲಿ ಮತ್ತು ಇಚ್ಛಾಶಕ್ತಿ ಪ್ರದರ್ಶಿಸಿ” ಎನ್ನುವ ಮಾತುಗಳು ಕಾರ್ಯಾಂಗದ ಕಾರ್ಯವೈಖರಿಯ ಮೇಲೆ ಬೆಳಕು ಚೆಲ್ಲುತ್ತಿವೆ.ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹಿರಿಯ ಮತ್ತು ನುರಿತ ರಾಜಕಾರಣಿಗಳಾಗಿದ್ದವರು,ಶಾಸಕರಾಗಿ,ಶಿಕ್ಷಣ ಸಚಿವರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ಅವರು ಆಡಳಿತದ ಸೂಕ್ಷ್ಮಗಳನ್ನು ಚೆನ್ನಾಗಿ ಬಲ್ಲವರು.ವಿಧಾನಸಭೆಯ ಅಧಿವೇಶನ ನಡೆಯುತ್ತಿರುವಾಗ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರುಗಳು ಪ್ರಶ್ನೆಗಳನ್ನು ಕೇಳುವುದು ಅವರ ವಿಶೇಷಹಕ್ಕು.ಈ ಪ್ರಶ್ನೆಗಳನ್ನು ಲಿಖಿತ ಪ್ರಶ್ನೆಗಳು ಮತ್ತು ಮೌಖಿಕ ಪ್ರಶ್ನೆಗಳು ಎಂದು ವಿಂಗಡಿಸಬಹುದು.ಸದನ ನಡೆದಾಗ ಪ್ರಶ್ನೋತ್ತರ ಅವಧಿ,ಶೂನ್ಯ ಅವಧಿಯಲ್ಲಿ ಸದಸ್ಯರುಗಳು ದೈನಂದಿನ ಮತ್ತು ತುರ್ತು ಸಮಸ್ಯೆ,ಮಹತ್ವದ ಸಂಗತಿಗಳ ಬಗ್ಗೆ ಮೌಖಿಕವಾಗಿ ಪ್ರಶ್ನೆ ಮಾಡುತ್ತಾರೆ.ಸಂಬಂಧಿಸಿದ ಸಚಿವರು ಅಂತಹ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.ಲಿಖಿತ ರೂಪದಲ್ಲಿ ಪ್ರಶ್ನೆಗಳನ್ನು ಸಾಕಷ್ಟು ಮುಂಚಿತವಾಗಿಯೇ ಕಳುಹಿಸಲಾಗುತ್ತದೆ.ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಅಧ್ಯಕ್ಷರುಗಳ ಕಛೇರಿಗಳು ಪ್ರಶ್ನೆಗಳನ್ನು ಕ್ರಮಾನುಗತವಾಗಿ ಜೋಡಿಸಿ,ಸಂಬಂಧಿಸಿದ ಇಲಾಖೆಯ ಸಚಿವರುಗಳು ಸದನದಲ್ಲಿ ಉತ್ತರಿಸಬೇಕಾದ ದಿನಾಂಕವನ್ನು ನಿಗದಿಪಡಿಸಿ,ಸಂಬಂಧಿಸಿದ ಸಚಿವರು,ಇಲಾಖೆಯ ಮುಖ್ಯಸ್ಥರುಗಳಿಗೆ ರವಾನಿಸುತ್ತಾರೆ ಮತ್ತು ನಿಗದಿಯಾದ ದಿನ,ಸಮಯಕ್ಕೆ ಆ ಪ್ರಶ್ನೆಗಳಿಗೆ ಉತ್ತರ ನೀಡಲಾಗುತ್ತದೆ.

ಸದನದಲ್ಲಿ ಕೇಳಲಾಗುವ ಪ್ರಶ್ನೆಗಳನ್ನು ‘ ಚುಕ್ಕೆ ಗುರುತಿನ ಪ್ರಶ್ನೆಗಳು’ ಮತ್ತು ‘ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳು’ ಎಂದು ವಿಂಗಡಿಸಿದ್ದು ಚುಕ್ಕೆಗುರುತಿನ ಪ್ರಶ್ನೆಗಳು ಮಹತ್ವದ ಪ್ರಶ್ನೆಗಳಾಗಿದ್ದರೆ ಚುಕ್ಕೆಗುರುತಿಲ್ಲದ ಪ್ರಶ್ನೆಗಳು ಸಾಮಾನ್ಯ ಮಾಹಿತಿಯನ್ನು ಕೋರುವ ರೂಪದ ಪ್ರಶ್ನೆಗಳಾಗಿರುತ್ತವೆ.ವಿಧಾನಸಭೆಯ ಅಧಿವೇಶನ ನಡೆಯುತ್ತಿರುವ ವೇಳೆಯಲ್ಲಿ ಪ್ರಶ್ನೆಗಳಿಗೆ‌ ಉತ್ತರಿಸುವುದು ಕಾರ್ಯಾಂಗದ ಪ್ರಮುಖ ಕಾರ್ಯವಾಗಿದೆ,ಸರಕಾರಿ ಅಧಿಕಾರಿಗಳು ನಿಗದಿತ ಅವಧಿಯಲ್ಲಿ,ನಿರ್ದಿಷ್ಟ ಉತ್ತರ ನೀಡಬೇಕಾಗುತ್ತದೆ.ಸರಕಾರದ ಇಲಾಖೆಗಳ ಮುಖ್ಯಸ್ಥರುಗಳ ಕಛೇರಿಗಳ ಆಸಕ್ತಿಯ ಫಲವಾಗಿ ಆಧೀನದ ಸರಕಾರಿ ಇಲಾಖೆ,ಕಛೇರಿಗಳು ನಿಗದಿತ ಸಮಯದಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತಾರಾದರೂ ಉತ್ತರಿಸಿದ ಪ್ರಶ್ನೆಗಳು ಕಾರ್ಯಾನುಷ್ಠಾನಕ್ಕೆ ಬರುತ್ತವೆ ಎಂದು ನಿಶ್ಚಿತವಾಗಿ ಹೇಳುವಂತಿಲ್ಲ. ಕ್ಷೇತ್ರ ಮಟ್ಟದ,ತಾಲೂಕಾ ಮಟ್ಟದ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಲ್ಲಿ ಕೆಲವರು ಸದನದಲ್ಲಿ ಕೇಳಲಾಗುವ ಪ್ರಶ್ನೆಗಳ ಬಗ್ಗೆಯೂ ಅಸಡ್ಡೆಯ ವರ್ತನೆ ತೋರಿ ದರ್ಪ ಪ್ರದರ್ಶಿಸುವ ಮೂಲಕ ಪ್ರಜಾಪ್ರಭುತ್ವವನ್ನು ಅಣುಕಿಸುತ್ತಾರೆ.ಆ ಅಸಮಾಧಾನದಿಂದಲೇ ವಿಧಾನಸಭಾಧ್ಯಕ್ಷರು ಇಂತಹ ಮಾತುಗಳನ್ನು ಆಡಿದ್ದಾರೆ.ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಶಾಸಕರುಗಳು ಕೆಲವೊಮ್ಮೆ ಆಡಳಿತ,ಅಭಿವೃದ್ಧಿ ಮತ್ತು ಕಾರ್ಯಾನುಷ್ಠಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಾರೆ.ಸಂಬಂಧಪಟ್ಟ ಸಚಿವರು ಇದಕ್ಕೆ ಜವಾಬ್ದಾರಿಯುತವಾಗಿ ಉತ್ತರಿಸಬೇಕಾಗುತ್ತದೆ ಮತ್ತು ಕಾಲಮಿತಿಯಲ್ಲಿ ಅದನ್ನು ಅನುಷ್ಠಾನಕ್ಕೆ ತರಬೇಕಾಗುತ್ತದೆ.ಆದರೆ ಇಲಾಖೆಯ ಸಚಿವರ ಮೂಲಕ ಸದನಕ್ಕೆ ಉತ್ತರ ಒದಗಿಸಿದ ಅಧಿಕಾರಿಗಳು ಆ ಬಗ್ಗೆ ಕಾರ್ಯತತ್ಪರರಾಗದೆ ಮರೆತು ಬಿಡುತ್ತಾರೆ.ಮತ್ತೆ ಅಧಿವೇಶನದ ದಿನಾಂಕ ಪ್ರಕಟವಾದಾಗಲೇ ಅಧಿಕಾರಿಗಳು ಆ ಕಡತಗಳನ್ನು ಗಮನಿಸುವುದು.ಸದನದಲ್ಲಿ ಉತ್ತರಿಸಲಾದ ಪ್ರಶ್ನೆಗಳು ಸರ್ಕಾರದ ಭರವಸೆಗಳಾಗಿ ” ಭರವಸೆ ಸಮಿತಿ” ( Assurance Committee)ಪರಾಮರ್ಶೆಗೆ ಒಳಪಟ್ಟು,ನಿರ್ದೇಶನ ರೂಪದಲ್ಲಿ ಹೊರಬರುತ್ತವೆ.ವಿಧಾನಸಭೆಯ ಒಂದು ಅಧಿವೇಶನ ಮುಗಿದು ಮತ್ತೊಂದು ಅಧಿವೇಶನ ಪ್ರಾರಂಭವಾಗುವುದರಲ್ಲಿ ಇಲಾಖೆಯ ಮುಖ್ಯಸ್ಥರ ಹುದ್ದೆಯಲ್ಲಿದ್ದ ಅಧಿಕಾರಿಗಳ ವರ್ಗಾವಣೆ ಆಗಿರಬಹುದು ಇಲ್ಲವೆ ಸಂಬಂಧಪಟ್ಟ ಸಚಿವರಿಗೆ ಆ ವಿಷಯಕ್ಕೆ ಸಂಬಂಧಿಸಿದ ಕಡತವು ಹೋಗಿಲ್ಲದೆ ಇರಬಹುದು.ಕೆಲವೊಮ್ಮೆ ಸಚಿವರುಗಳ ಉದಾಸೀನವೂ ಕಾರಣವಾಗಿ ಉತ್ತರಿಸಲ್ಪಟ್ಟ ಪ್ರಶ್ನೆಗಳು ಕಾರ್ಯರೂಪಕ್ಕೆ ಬರುವುದಿಲ್ಲ.ಇದನ್ನೆ ವಿಧಾನಸಭಾಧ್ಯಕ್ಷರು ಬೆರಳು ಮಾಡಿ ತೋರಿಸಿದ್ದಾರೆ.

ಸದನದಲ್ಲಿ ಉತ್ತರಿಸಲು ಹೊಣೆಗಾರರಾದ ಸಚಿವರುಗಳು ತಾವು ನೀಡಿದ ಉತ್ತರವನ್ನು ಕಾರ್ಯಾನುಷ್ಠಾನಕ್ಕೆ ತರುವ ಬಗ್ಗೆ ಕಾರ್ಯೋನ್ಮುಖರಾಗಬೇಕು.ಸರಕಾರಿ ಅಧಿಕಾರಿಗಳನ್ನು ನಂಬಿ ಕುಳಿತರೆ ಕಾರ್ಯವಾಗದು.ಇಲಾಖೆಯ ಮುಖ್ಯಸ್ಥರುಗಳಾಗಿ ಸಚಿವರುಗಳು ತಮ್ಮ ಇಲಾಖೆಯ ಎಲ್ಲ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಬೇಕು,ಅಧಿಕಾರಿಗಳಿಂದ ಸರಕಾರಿ ಕೆಲಸ- ಕಾರ್ಯಗಳು ತ್ವರಿತವಾಗಿ ಆಗುವಂತೆ ನೋಡಿಕೊಳ್ಳಬೇಕು.ಹಿರಿಯ ಅಧಿಕಾರಿಗಳು,ಆಧೀನದ ಅಧಿಕಾರಿಗಳು ಹೇಳಿದ್ದನ್ನೇ ನಂಬಬಾರದು.ಸರಕಾರಿ ಅಧಿಕಾರಿಗಳಲ್ಲಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ,ಮತ್ತೊಬ್ಬರತ್ತ ಬೆರಳು ತೋರಿಸುವ ಅಧಿಕಾರಿಗಳಿರುವುದರ ಜೊತೆಗೆ ಉದ್ಧಟತನವನ್ನು ಪ್ರದರ್ಶಿಸುವ ಅಧಿಕಾರಿಗಳೂ ಇದ್ದಾರೆ.ಅಂತಹವರನ್ನು ಸರಿದಾರಿಗೆ ತಂದು ಅವರುಗಳಿಂದ ಸರಕಾರಿ ಕೆಲಸ- ಕಾರ್ಯಗಳನ್ನು ಮಾಡಿಸಿಕೊಳ್ಳುವ ಸಾಮರ್ಥ್ಯವನ್ನು ಸಚಿವರುಗಳು ಪ್ರದರ್ಶಿಸಲೇಬೇಕು.ಅಧಿಕಾರಿಗಳು ಹೇಳಿದ್ದನ್ನೇ ಕೇಳುತ್ತ ಕುಳಿತರೆ ಅವರಿಗೂ ಹೆಸರು ಬರುವುದಿಲ್ಲ,ಸರಕಾರಕ್ಕೂ ಹೆಸರು ಬರುವುದಿಲ್ಲ.ಸರಕಾರಿ ಸೇವೆಯಲ್ಲಿ ಬಹಳಷ್ಟು ಜನ ಅದಕ್ಷ ಅಧಿಕಾರಿಗಳಿದ್ದಾರೆ,ಅಪ್ರಾಣಿಕ ಅಧಿಕಾರಿಗಳು ಒಂದು ಪಿಡುಗಾದರೆ ಸ್ವಾರ್ಥ ಮತ್ತು ಸ್ವಜನ ಪಕ್ಷಪಾತದಿಂದ ಕೆಲಸ ಮಾಡುವ ಅಧಿಕಾರಿಗಳು ಸಾರ್ವಜನಿಕ ಸೇವೆಗೆ ಕಳಂಕ.ಭ್ರಷ್ಟಾಚಾರಕ್ಕಿಂತ ಅಪಾಯಕಾರಿ ಪ್ರವೃತ್ತಿ ಅಧಿಕಾರಿಗಳ ಸ್ವಾರ್ಥಸಾಧನೆ ಮತ್ತು ಸ್ವಜನ ಪಕ್ಷಪಾತ.ಸರಕಾರಿ ಅಧಿಕಾರಿಗಳು ಯಾವುದೇ ಜಾತಿ,ಜನಾಂಗಕ್ಕೆ ಸೇರಿರಲಿ ಅವರು ಸಾರ್ವಜನಿಕರ ತೆರಿಗೆಯ ಹಣದಿಂದ ಸಂಬಳ- ಸವಲತ್ತುಗಳು ಪಡೆಯುವ ಸಾರ್ವಜನಿಕ ಸೇವಕರು.ನಮ್ಮ ಬಹುಪಾಲು ಅಧಿಕಾರಿಗಳು ತಾವು ಸಾರ್ವಜನಿಕ ಸೇವಕರು ಎಂಬುದನ್ನೇ ಮರೆತಿದ್ದಾರೆ; ಇಂತಿಂತಹ ಜಾತಿ,ಜನಾಂಗಕ್ಕೆ ಸೇರಿದವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ,ತಮ್ಮ ಜಾತಿ – ಜನಾಂಗಕ್ಕೆ ಸಂಬಂಧಿಸಿದ ಕೆಲಸ- ಕಾರ್ಯಗಳನ್ನು ಪ್ರಥಮಾದ್ಯತೆಯಲ್ಲಿ ಮಾಡಿ ಸೇವೆಯಲ್ಲಿ ಸಾರ್ಥಕತೆಯನ್ನು ಕಾಣುತ್ತಾರೆ,ಧನ್ಯತೆಯನ್ನು ಮೆರೆಯುತ್ತಾರೆ. ಇದು ಸಾರ್ವಜನಿಕ ಸೇವಕರಿಗೆ ತಕ್ಕುದಲ್ಲದ ನಡೆ. ರಾಜಕಾರಣಿಗಳು,ಆಯಾ ಜನಸಮುದಾಯಗಳು ತಮ್ಮ ಜಾತಿಯ ಅಧಿಕಾರಿಗಳ ಹಿತಕಾಯುವ ಕೆಲಸ ಮಾಡುತ್ತಿರುವುದರಿಂದ ಅಧಿಕಾರಿಗಳ ಸ್ವಜನ ಪಕ್ಷಪಾತಕ್ಕೆ ಪುಷ್ಟಿ ಒದಗುತ್ತದೆ.

‘ಆಡಳಿತ ಕಾಣುವಂತಾಗಬೇಕು’ ಎಂದರೆ ಸರ್ಕಾರಿ ಅಧಿಕಾರಿಗಳು ಜನಪರರಾಗಿ,ಸೇವಾನಿಷ್ಠೆಯಿಂದ,ತ್ವರಿತವಾಗಿ,ಕಾಲಮಿತಿಯಲ್ಲಿ ಕಾರ್ಯನಿರ್ವಹಿಸುವಂತೆ ಆಗಬೇಕು.ಭ್ರಷ್ಟ ಅಧಿಕಾರಿಗಳಿಗಾಗಿ ಲೋಕಾಯುಕ್ತರಿಗೆ ಅಧಿಕಾರ ನೀಡಬಹುದು.ಆದರೆ ಅದಕ್ಷ ,ಅಸಮರ್ಥ ಮತ್ತು ಸ್ವಜನಪಕ್ಷಪಾತದಿಂದ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ? ಸರಕಾರಿ ಆಡಳಿತ ಸುಧಾರಿಸಬೇಕು,ಆಡಳಿತ ಚುರುಕಾಗಿರಬೇಕು,ಜನಸ್ನೇಹಿ ಆಡಳಿತ ನೀಡಬೇಕು ಎಂದರೆ ಅದಕ್ಷ,ಅಸಮರ್ಥ ಮತ್ತು ಜಾತಿರಾಜಕಾರಣ ಮಾಡುವ ಸ್ವಜನಪಕ್ಷಪಾತಿ ಅಧಿಕಾರಿಗಳನ್ನು ನಿಗ್ರಹಿಸಬೇಕು,ನಿಯಂತ್ರಿಸಬೇಕು.ಸದನದಲ್ಲಿ ಪ್ರಶ್ನೆ ಕೇಳುವವರು ಮತ್ತು ಉತ್ತರಿಸುವವರು ಸೇರಿದಂತೆ ಸ್ವಸ್ಥ ಸಮಾಜ ನಿರ್ಮಾಣದ ಕನಸು ಕಾಣುವ,ಪ್ರಜಾಪ್ರಭುತ್ವವನ್ನು ಬಲಪಡಿಸಲು ಬದ್ಧರಿರುವ ಎಲ್ಲರ ಜವಾಬ್ದಾರಿ ಇದು.

About The Author