ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ– ಅಮೃತಸಿಂಚನ ವರ್ಷವಾಗಲಿ : ಮುಕ್ಕಣ್ಣ ಕರಿಗಾರ

ಕಲ್ಯಾಣ ಕರ್ನಾಟಕಉತ್ಸವ ದಿನಾಚರಣೆಯ ಅಮೃತಮಹೋತ್ಸವವನ್ನು ಇಂದು ಆಚರಿಸಲಾಗುತ್ತಿದೆ.ಕಲ್ಯಾಣ ಕರ್ನಾಟಕದ ಇಂದಿನ ಏಳು ಜಿಲ್ಲೆಗಳ ಭೂಪ್ರದೇಶವು ಹೈದರಾಬಾದ್ ನಿಜಾಮನ ಆಳ್ವಿಕೆಯಿಂದ ಮುಕ್ತಗೊಂಡು ಇಂದಿಗೆ ಎಪ್ಪತ್ನಾಲ್ಕು ವರ್ಷಗಳಾದವು.ಇಂದಿನಿಂದ ಒಂದು ವರ್ಷ ಪರ್ಯಂತರ ಕಲ್ಯಾಣ ಕರ್ನಾಟಕದ ಅಮೃತಮಹೋತ್ಸವ ಆಚರಿಸಲಾಗುತ್ತಿದೆ.

ಕಲ್ಯಾಣ ಕರ್ನಾಟಕದ ಅಮೃತಮಹೋತ್ಸವದ ಈ ಸಂದರ್ಭದಲ್ಲಿ ಸಂಬಂಧಪಟ್ಟವರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗೆ ಪ್ರಾಮಾಣಿಕ ಕಾಳಜಿ,ಇಚ್ಛಾಶಕ್ತಿ ಮತ್ತು ಬದ್ಧತೆಯನ್ನು ಪ್ರದರ್ಶಿಸಬೇಕಿದೆ.ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟು,ಒಂದು ದಿನಾಚರಣೆ,ಒಂದು ವರ್ಷ ವಿವಿಧ ಕಾರ್ಯಕ್ರಮಗಳನ್ನು ಆಚರಿಸಿದರೆ ಸಾಲದು,ನಿಜಾರ್ಥದಲ್ಲಿ ಕಲ್ಯಾಣ ಕರ್ನಾಟಕದ ಕನಸು ಸಾಕಾರಗೊಳ್ಳುವಂತೆ ನೋಡಿಕೊಳ್ಳಬೇಕು.ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಸ್ಥಾಪನೆ ಮತ್ತು ವರ್ಷಕ್ಕೆ ಸಾವಿರ,ಸಾವಿರದೈನೂರು ಕೋಟಿಗಳ ಅನುದಾನ ಬಿಡುಗಡೆ ಮಾಡಿದರಷ್ಟೇ ಸಾಲದು; ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಸ್ವಾಯತ್ತ ಸರ್ಕಾರ ಇಲ್ಲವೆ ಪ್ರದೇಶಾಭಿವೃದ್ಧಿ ಸರ್ಕಾರದ ಸ್ಥಾನ ಮಾನ ನೀಡಬೇಕು.ತನ್ನ ಭೌಗೋಳಿಕ ಪ್ರದೇಶದ ಸ್ಥಳೀಯ ಸರ್ಕಾರವಾಗಿ ಕಾರ್ಯನಿರ್ವಹಿಸುವ ಆಡಳಿತಾತ್ಮಕ ಅಧಿಕಾರ ನೀಡಬೇಕು.ಇದೇನು ಸಮಸ್ಯೆಯಲ್ಲ ಆದರೆ ನಮ್ಮ ಭಾಗದ ರಾಜಕಾರಣಿಗಳಿಗೆ ಈ ವಿಷಯದ ಮಾಹಿತಿ ಕೊರತೆ ಇದೆ.ಬೆಂಗಳೂರಿನ ಯೋಜನಾ ಮತ್ತು ಸಾಂಖಿಕ ಇಲಾಖೆಯ ಅಧಿಕಾರಿಗಳು ಹೇಳಿದ್ದನ್ನೇ ನಂಬಿ,ಸುಮ್ಮನಾಗುತ್ತಾರೆ.ಗ್ರಾಮಪಂಚಾಯತಿಗಳು,ತಾಲೂಕಾ ಪಂಚಾಯತಿಗಳು ಮತ್ತು ಜಿಲ್ಲಾ ಪಂಚಾಯತಿಗಳು ಸ್ಥಳೀಯ ಸರ್ಕಾರಗಳಾಗಿರುವಾಗ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ತನ್ನ ಭೌಗೋಳಿಕ ವ್ಯಾಪ್ತಿಯ ಪ್ರಾದೇಶಿಕ ಸರ್ಕಾರ ಆಗಬಾರದೇಕೆ ? ಐಎಎಸ್ ಅಧಿಕಾರಿಗಳನ್ನು ಪ್ರಾದೇಶಿಕ ಆಯುಕ್ತರೆಂದು ನೇಮಿಸಿ ಅವರಿಗೆ ಬೇಕುಬೇಕಾದ ಅಧಿಕಾರ,ಸೌಲಭ್ಯಗಳನ್ನು ನೀಡಲು ತಕರಾರಿಲ್ಲ; ಆದರೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಸ್ವಾಯತ್ತತೆ ನೀಡಲು ನೂರೆಂಟು ತಕರಾರುಗಳು! ಕಲ್ಯಾಣ ಕರ್ನಾಟಕ ಅಮೃತಮಹೋತ್ಸವ ವರ್ಷಾಚರಣೆಯ ಸಂದರ್ಭದಲ್ಲಿ ಆದರೂ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ,ಆಡಳಿತ,ಅನುಷ್ಠಾನ ಕಾರ್ಯತಂತ್ರ,ನೀತಿ ನಿಯಮಗಳನ್ನು ರೂಪಿಸುವ ವಿಷಯದಲ್ಲಿ ಸ್ವಾಯತ್ತತೆ ನೀಡುವತ್ತ ಆಸಕ್ತಿ ವಹಿಸಬೇಕು.ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮಾಡಬೇಕಾದ ಕೆಲವು ಮಹತ್ವದ ಕಾರ್ಯಗಳನ್ನು ನಾನಿಲ್ಲಿ ಪ್ರಸ್ತಾಪಿಸುವೆ.

(೧) ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯದ ಸ್ಥಾಪನೆ

ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಬೇಕು.ಅದಕ್ಕೆ ಸಂಪುಟ ದರ್ಜೆಯ ಸಚಿವರನ್ನು ನೇಮಿಸಬೇಕು.ಕಲ್ಬುರ್ಗಿಯಲ್ಲಿಯೇ ಆ ಸಚಿವಾಲಯದ ಕೇಂದ್ರಸ್ಥಾನವಿರಬೇಕು ಮತ್ತು ತನ್ನ ಭೌಗೋಳಿಕ ವ್ಯಾಪ್ತಿಯ ಏಳು ಜಿಲ್ಲೆಗಳ ಅಭಿವೃದ್ಧಿ,ಆಡಳಿತಕ್ಕೆ ಸಂಬಂಧಿಸಿದ ಎಲ್ಲ ಅಧಿಕಾರಗಳನ್ನು ಆ ಸಚಿವಾಲಯಕ್ಕೆ ನೀಡಬೇಕು.

(೨) ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಮುಖ್ಯಮಂತ್ರಿಗಳವರ ನೇರ ಮೇಲ್ವಿಚಾರಣೆಗೆ ಒಳಪಡಬೇಕು

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಪ್ರಸ್ತುತ ಯೋಜನಾ ಮತ್ತು ಸಾಂಖಿಕ ಇಲಾಖೆಯ ಆಧೀನದಲ್ಲಿದ್ದು ಯೋಜನಾ ಇಲಾಖೆಯಿಂದ ಅದನ್ನು ಹೊರತಂದು ನೇರವಾಗಿ ಮುಖ್ಯಮಂತ್ರಿಗಳ ಆಡಳಿತಾತ್ಮಕ ಆಧೀನದ ಪ್ರತ್ಯೇಕ ಸಚಿವಾಲಯವನ್ನಾಗಿ ರೂಪಿಸಬೇಕು.ಕಲ್ಯಾಣಕರ್ನಾಟಕ ಪ್ರದೇಶಾಭಿವೃದ್ಧಿ ಸಚಿವರು ಸಂಪುಟದರ್ಜೆಯ ಸಚಿವರಾಗಿರುವುದರ ಜೊತೆಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಪ್ರತಿ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕವನ್ನು ಪ್ರತಿನಿಧಿಸುವ ಅವಕಾಶ ಅವರಿಗೆ ನೀಡಬೇಕು.

(೩) ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪ್ರತ್ಯೇಕ ನಿರ್ದೇಶನಾಲಯ

ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳ ವ್ಯಾಪ್ತಿಗೆ‌ ಪ್ರತ್ಯೇಕ ನಿರ್ದೇಶನಾಲಯ ಒಂದನ್ನು ಸ್ಥಾಪಿಸಿ ಪ್ರದೇಶಾಭಿವೃದ್ಧಿ ಯೋಜನೆಗಳನ್ನು ತ್ವರಿತ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅಧಿಕಾರ ಹಾಗೂ ಜವಾಬ್ದಾರಿಗಳನ್ನು ಆ ನಿರ್ದೇಶನಾಲಯಕ್ಕೆ ನೀಡಬೇಕು.

(೪) ಕಲ್ಯಾಣ ಕರ್ನಾಟಕ‌ ಪ್ರದೇಶ ನೇಮಕಾತಿ ಪ್ರಾಧಿಕಾರ

ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದತ್ತವಾಗಿ ಅನುಚ್ಛೇದ 371( J) ರಡಿ ದೊರೆತ ಹುದ್ದೆಗಳ ನೇಮಕಾತಿ ಅವಕಾಶಗಳನ್ನು ಪರಿಪೂರ್ಣವಾಗಿ ಬಳಸಿಕೊಳ್ಳಲು ಕಲ್ಯಾಣ ಕರ್ನಾಟಕ‌ ಪ್ರದೇಶಕ್ಕೆ ಪ್ರತ್ಯೇಕ ನೇಮಕಾತಿ ಪ್ರಾಧಿಕಾರ ರಚಿಸಬೇಕು.ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ನೇಮಕಾತಿ ಪ್ರಾಧಿಕಾರ ರಚನೆಯಾಗಬೇಕು.

(೫) ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗಾಗಿ ಪ್ರತ್ಯೇಕ ಘಟಕ ಕಛೇರಿಗಳನ್ನು ಸ್ಥಾಪಿಸಬೇಕು

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಪ್ರಸ್ತುತ ಜಿಲ್ಲಾಧಿಕಾರಿಗಳು,ಜಿಲ್ಲಾ ಪಂಚಾಯತಿಗಳ ಸಹಯೋಗದೊಂದಿಗೆ ತನ್ನ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.ಇದರಿಂದಾಗಿ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ,ಮಂಡಳಿಯ ಕಾರ್ಯಕ್ರಮಗಳು ನಿರೀಕ್ಷಿತ ವೇಗದಲ್ಲಿ ಅನುಷ್ಠಾನಗೊಳ್ಳುವುದಿಲ್ಲ.ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಸಚಿವಾಲಯದ ಆಧೀನದಲ್ಲಿ ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳಿಗೆ ಪ್ರತ್ಯೇಕ ಘಟಕ ಕಛೇರಿಗಳನ್ನು ತೆರೆದು ಆ ಕಛೇರಿಗಳಿಗೆ ಕಾರ್ಯಕಾರಿ ಮತ್ತು ತಾಂತ್ರಿಕ ಸಿಬ್ಬಂದಿಯವರನ್ನು ಒದಗಿಸಬೇಕು. ಘಟಕ ಕಛೇರಿಗಳ ಮೂಲಕ ತ್ವರಿತ ಅಭಿವೃದ್ಧಿ ಸಾಧ್ಯವಾಗುತ್ತದೆ.

(೬) ಕಲ್ಯಾಣ ಕರ್ನಾಟಕ ಪ್ರದೇಶ ಸಾಂಸ್ಕೃತಿಕ ಕೋಶದ ಸ್ಥಾಪನೆ

ಕಲ್ಯಾಣ ಕರ್ನಾಟಕ‌ ಪ್ರದೇಶದ ಕವಿ- ಸಾಹಿತಿ,ಕಲಾವಿದರು,ರಂಗಭೂಮಿ,ಬಯಲಾಟ ಕಲಾವಿದರು,ಸಂಗೀತ ಕಲಾವಿದರು,ಕ್ರೀಡಾಪಟುಗಳಿಗೆ ರಾಜ್ಯಮಟ್ಟದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲವಾದ್ದರಿಂದ ಪ್ರತ್ಯೇಕ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಕೋಶ ಒಂದನ್ನು ಸ್ಥಾಪಿಸಿ ಈ ಪ್ರದೇಶದ ವಿವಿಧ ಕ್ಷೇತ್ರಗಳ ಪ್ರತಿಭಾವಂತರುಗಳನ್ನು ಗುರುತಿಸಿ,ಗೌರವಿಸುವ ಕೆಲಸ ಮಾಡಬೇಕು.

(೭) ಬಸವೇಶ್ವರ ವಚನ ಸಾಹಿತ್ಯ ವಿಶ್ವವಿದ್ಯಾಲಯದ ಸ್ಥಾಪನೆ

ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಮಾಜೋ ಧಾರ್ಮಿಕ ಸುಧಾರಣೆಯ ಅಸ್ತ್ರವಾಗಿ ಹೊರಹೊಮ್ಮಿದ ವಚನಸಾಹಿತ್ಯ ಚಳುವಳಿಯು ಕನ್ನಡದ ಅತಿವಿಶಿಷ್ಟ ಮತ್ತು ಮಹತ್ವದ ಸಾಹಿತ್ಯ ಪ್ರಾಕಾರವಾಗಿದ್ದು ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣ ಇಲ್ಲವೆ ಕಲ್ಬುರ್ಗಿಯಲ್ಲಿ ‘ ಬಸವೇಶ್ವರ ವಚನ ಸಾಹಿತ್ಯ ವಿಶ್ವವಿದ್ಯಾಲಯ’ ವನ್ನು ಸ್ಥಾಪಿಸಿ, ವಚನ ಸಾಹಿತ್ಯದ ರಕ್ಷಣೆ,ಪುನರುಜ್ಜೀವನದ ಜೊತೆಗೆ ವಚನಸಾಹಿತ್ಯ ಚಳುವಳಿಯ ಸಮಾಜೋ ಧಾರ್ಮಿಕ ಸುಧಾರಣೆಯ ಪ್ರಯತ್ನಗಳನ್ನು ಪುನರುದ್ಧರಿಸುವ ಕಾರ್ಯವಾಗಬೇಕು.

(೮) ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆ ರಚಿಸಬೇಕು

ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ನಿಜಾಮರ ವಿರುದ್ಧ ಕಲ್ಯಾಣ ಕರ್ನಾಟಕದ ಬಂಧ ವಿಮೋಚನೆಗೆ ಹೋರಾಡಿದ ಕಲ್ಯಾಣ ಕರ್ನಾಟಕ ಪ್ರದೇಶದ ಸ್ವಾತಂತ್ರ್ಯ ಹೋರಾಟಗಾರರ ಜೀವನಚರಿತ್ರೆ,ಕಲ್ಯಾಣ ಕರ್ನಾಟಕ ವಿಮೋಚನಾಂದೋಲನ ಕುರಿತಾದ ಇತಿಹಾಸ ರಚಿಸಿ,ಪ್ರಚುರಪಡಿಸಬೇಕು.

(೯) ಕಲ್ಯಾಣ ಕರ್ನಾಟಕದ ಇತಿಹಾಸ, ಸಂಸ್ಕೃತಿ,ಕಲೆ,ವಾಸ್ತುಶಿಲ್ಪಗಳ ಕುರಿತಾದ ಮಾಹಿತಿಯನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕು

ಕಲ್ಯಾಣ ಕರ್ನಾಟಕ ಪ್ರದೇಶದ ಭವ್ಯ ಇತಿಹಾಸ,ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಶೈಕ್ಷಣಿಕ ಪಠ್ಯಗಳಲ್ಲಿ ವಿಷಯವಸ್ತುವನ್ನು ಅಳವಡಿಸಿ,ಬೋಧಿಸುವ ಏರ್ಪಾಟು ಮಾಡಬೇಕು.ಇಲ್ಲವೆ ಪ್ರತ್ಯೇಕ ಅಂಕಗಳನ್ನು ನಿಗದಿಪಡಿಸಿ ಪೂರಕಪಠ್ಯವನ್ನಾಗಿಯಾದರೂ ಬೋಧಿಸುವ ಏರ್ಪಾಟು ಮಾಡಬೇಕು.

(೧೦) ಕಲ್ಯಾಣ ಕರ್ನಾಟಕ ವೃತ್ತಿ ಮತ್ತು ಕರಕುಶಲಾಭಿವೃದ್ಧಿ ಕೋಶದ ಸ್ಥಾಪನೆ

ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ವಿಶಿಷ್ಟ ವೃತ್ತಿ ಮತ್ತು ಕರಕುಶಲ ವೃತ್ತಿಗಳು,ಸಾಂಪ್ರದಾಯಿಕ ವೃತ್ತಿಗಳಿದ್ದು ಅವುಗಳ ಪುನಶ್ಚೇತನ ಮತ್ತು ಪುನರುಜ್ಜೀವನಕ್ಕಾಗಿ ಕಲ್ಯಾಣ ಕರ್ನಾಟಕ ವೃತ್ತಿ ಮತ್ತು ಕರಕುಶಲಾಭಿವೃದ್ಧಿ ಕೋಶದ ಸ್ಥಾಪನೆ ಮಾಡಬೇಕು

(೧೧) ಕಲ್ಯಾಣ ಕರ್ನಾಟಕ ಪ್ರದೇಶ ಕೈಗಾರಿಕಾಭಿವೃದ್ಧಿ ಕೋಶ

ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ ಆಗಬೇಕಾದರೆ ಈ ಪ್ರದೇಶದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಕೈಗಾರಿಕೆಗಳು ಸ್ಥಾಪನೆ ಆಗಬೇಕು.ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳಿಗೆ ಸೂಕ್ತವಾಗಬಹುದಾದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ವಿದ್ಯಾವಂತ ಯುವಕ ಯುವತಿಯರಿಗೆ ಉದ್ಯೋಗಾವಕಾಶಗಳನ್ನು‌ ಒದಗಿಸುವಂತಹ ಕೈಗಾರಿಕೆಗಳ ಸ್ಥಾಪನೆಗಾಗಿ ಕಲ್ಯಾಣ ಕರ್ನಾಟಕ ಕೈಗಾರಿಕಾಭಿವೃದ್ಧಿ ಕೋಶದ ಸ್ಥಾಪನೆ ಮಾಡಬೇಕು.

(೧೨) ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗಾಗಿ ಪ್ರತ್ಯೇಕ ತೆರಿಗೆ ಇಲ್ಲವೆ ಸೆಸ್ ಸಂಗ್ರಹಿಸಬೇಕು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಪ್ರಸ್ತುತ ಸರ್ಕಾರವು ನೀಡುವ ಅನುದಾನವನ್ನೇ ನೆಚ್ಚಿಕೊಂಡು ಕಾರ್ಯನಿರ್ವಹಿಸುತ್ತಿದೆ.ರಾಜ್ಯ ಸರ್ಕಾರ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗಳ ನಡುವೆ ಸಮನ್ವಯ ಮತ್ತು ಸಕರಾತ್ಮಕ ಬಾಂಧವ್ಯವಿದ್ದರೆ ಪ್ರದೇಶಾಭಿವೃದ್ಧಿ ಮಂಡಳಿಗೆ ನಿರೀಕ್ಷಿತ ಅನುದಾನ ಬರುತ್ತದೆ.ರಾಜಕೀಯ ಕಾರಣಗಳಿಂದ ಅನುದಾನದ ಹಂಚಿಕೆಯಲ್ಲಿ ಏರಿಳಿತವಾಗುವ ಸಂಭವ ಇರುವುದರಿಂದ ಕಲ್ಯಾಣ ಕರ್ನಾಟಕ ಸಚಿವಾಲಯದ ಸ್ವಾಯತ್ತತೆಗೆ ಧಕ್ಕೆ ಬಾರದಂತೆ ಅದಕ್ಕೆ ನಿರಂತರ ಸಂಪನ್ಮೂಲದ ಹರಿವು ಇರುವಂತೆ ಈ ಏಳುಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ತೆರಿಗೆ ಎಂದು ಪ್ರತ್ಯೇಕ ತೆರಿಗೆಯನ್ನು ವಿಧಿಸಿ,ಆಕರಿಸುವ ಅಧಿಕಾರ ನೀಡಬೇಕು.ರಾಜ್ಯಮಟ್ಟದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಸೆಸ್ ಅನ್ನು ವಿಧಿಸಿ ಆ ಸೆಸ್ ಅನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಸಚಿವಾಲಯಕ್ಕೆ ಜಮೆ ಆಗುವಂತೆ ಆರ್ಥಿಕ ನಿಯಮಾವಳಿಗಳನ್ನು ರೂಪಿಸಿ,ಅನುಷ್ಠಾನಗೊಳಿಸಬೇಕು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿಗೆ ಮಾಡಬೇಕಾದ ಸಾಕಷ್ಟು ಕೆಲಸ ಕಾರ್ಯಗಳಿವೆ.ಈ ಹನ್ನೆರಡು ಮಹತ್ವದ ಕಾರ್ಯಗಳನ್ನು ಅನುಷ್ಠಾನಗೊಳಿಸಿದರೆ ಕಲ್ಯಾಣ ಕರ್ನಾಟಕ ಪ್ರದೇಶದ ಜನತೆಯು ಸ್ವಾತಂತ್ರ್ಯದ ನಿಜ ಸವಿಯುಣ್ಣಬಹುದು.

About The Author