ಚಿಂತನೆ : ಕೈಮರವಾಗಬಾರದು,ಮೈಮರೆಯದೆ ನಡೆದು ಗುರಿಮುಟ್ಟಬೇಕು : ಮುಕ್ಕಣ್ಣ ಕರಿಗಾರ

ಇಪ್ಪತ್ತು ಮುವ್ವತ್ತು ವರ್ಷಗಳ ಹಿಂದೆ ಊರಿನ ದಾರಿ ತೋರಿಸಲು ಕೈಮರಗಳಿದ್ದವು.ಮರ ಒಂದರ ಟೊಂಗೆಗೆ ನಾಲ್ಕುದಿಕ್ಕುಗಳಿಗೆ ಒಂದೊಂದು ಹಲಗೆ ಇರುವಂತೆ ಹಲಗೆಗಳ ಕಟ್ಟನ್ನು ಕಟ್ಟಿ ಯಾವ ಊರಿಗೆ ಯಾವ ದಾರಿ ಎಂದು ಬರೆದ ಬರಹ ಇರುತ್ತಿತ್ತು ಸೂಚನಾ ಫಲಕದಂತೆ.ಈಗ ರಸ್ತೆಗಳಲ್ಲಿ ಬಗೆಬಗೆಯ ಬೋರ್ಡ್ಗಳಿವೆ,ಊರೂರಿಗೆ ಸ್ವಾಗತ ಕಮಾನುಗಳಿವೆ,ಗೂಗಲ್ ನಲ್ಲಿ ಸರ್ಚ್ ಮಾಡಿದರೆ ಊರು- ದಾರಿ ಎಲ್ಲ ಗೊತ್ತಾಗುತ್ತದೆ.ಹಿಂದೆ ಇಷ್ಟು ಪ್ರಗತಿ ಆಗಿರಲಿಲ್ಲವಾಗಿ ಕೈಮರಗಳೇ ತಲುಪಬೇಕಾದ ಊರಿನ ದಾರಿಯನ್ನು ನಿರ್ದೇಶಿಸುತ್ತಿದ್ದವು.

ಸೋಜಿಗ ಎಂದರೆ ದಾರಿಯನ್ನು ಸೂಚಿಸುವ ಕೈಮರವು ತಾನು ಸೂಚಿಸುವ ಊರುಗಳನ್ನೇ ಕಂಡಿಲ್ಲ ! ಆದರೂ ದಾರಿ ತೋರಿಸುತ್ತದೆ! ಯಾರೋ ಬರೆದು ಅಂಟಿಸಿದ್ದಾರೆ ತನ್ನ ಟೊಂಗೆಗೆ,ತೋರಿಸುತ್ತದೆ ದಾರಿಯನ್ನು.ಕೈಮರವು ತಾನಿದ್ದ ನೆಲಕ್ಕೆ ಅಂಟಿಕೊಂಡಿದೆ,ಅದರಾಚೆಗೆ ಅದರ ಅಸ್ತಿತ್ವವಿಲ್ಲ,ತಾನಿದ್ದ ನೆಲೆಯಲ್ಲೇ ತನಗೆ ಅಂಟಿಸಿದ ಬೋರ್ಡ್ ನಿಂದ ದಾರಿ ತೋರಿಸುತ್ತದೆ.ಕೈಮರದಂತಿದೆ ನಮ್ಮ ಧಾರ್ಮಿಕ- ಆಧ್ಯಾತ್ಮಿಕ ಕ್ಷೇತ್ರಗಳ ಬಹಳಷ್ಟು ಜನರ ಪಾಡು.ಬರಿ ಪುಸ್ತಕಗಳನ್ನು ಓದಿ,ಅರ್ಥೈಸಿ,ಉಪದೇಶಿಸಿ ದೊಡ್ಡವರಾಗುವರಲ್ಲದೆ ಸಾಧಿಸಿ,ಸಾಕ್ಷಾತ್ಕಾರ ಪಡೆಯರು.ಹಿಂದೆ ಯಾರೋ ದೇವರನ್ನು ಕಂಡವರು ಬರೆದಿದ್ದಾರೆ,ಯೋಗ ಮಾರ್ಗದಲ್ಲಿ ನಡೆದು ಸಿದ್ಧಿ ಸಂಪನ್ನರಾದವರು ತಮ್ಮ ಅನುಭವಗಳನ್ನು ಬರೆದಿಟ್ಟಿದ್ದಾರೆ.ಅದನ್ನು ಉರು ಹೊಡೆಯುವುದೇ ಸಾಧನೆಯಲ್ಲ,ಸಾರ್ಥಕತೆಯಲ್ಲ.ಧಾರ್ಮಿಕ ಕ್ಷೇತ್ರಗಳ ಬಹಳಷ್ಟು ಜನರು ಸಾಧನಾಸಕ್ತರಲ್ಲ,ಸತ್ಯ ಸಾಕ್ಷಾತ್ಕಾರದ ಹಂಬಲವೂ ಅವರಿಗಿರುವುದಿಲ್ಲ.ಆದರೂ ಕುಳಿತು ದೊಡ್ಡವರಾದ ಗದ್ದುಗೆ- ಪೀಠಗಳ ಮರ್ಯಾದೆಯನ್ನು ಕಾಪಾಡಬೇಕಲ್ಲ.ಹುಡುಕಿ ತೆಗೆಯುತ್ತಾರೆ ಪೂರ್ವಿಕರ ಹೊತ್ತುಗೆಗಳನ್ನು,ಅರಸುತ್ತಾರೆ ಪುರಾಣ ಪುರುಷರುಗಳನ್ನು.ತಾಳೆ ಓಲೆಯ ಗ್ರಂಥಗಳೋ,ಹಳಗನ್ನಡ,ನಡುಗನ್ನಡ ಲಿಪಿಯ ಕೃತಿಗಳೋ ಇಲ್ಲವೆ ಕನ್ನಡಲಿಪಿಯಲ್ಲಿರುವ ಸಂಸ್ಕೃತ ಕೃತಿಗಳೋ ಆಸರೆಯಾಗುತ್ತವೆ,ಆದರ್ಶವಾಗುತ್ತವೆ.ಅದರಲ್ಲಿ ಇದ್ದುದನ್ನೇ ಓದಿ, ವಾದಿಸುತ್ತಾರೆ; ಸತ್ಯವೆಂದು ಸಾಧಿಸುತ್ತಾರೆ.ತಾವು ನಡೆದು ಪ್ರಯಾಸ ಪಡದೆ ಕೈಮರವಾಗಿಯೇ ಉಳಿಯುತ್ತಾರೆ.ಕೈಮರವಾದವರು ದಾರಿ ಕಾಣದವರಿಗೆ ಆದರ್ಶವಾಗಬಲ್ಲರೆ ಹೊರತು ನಡೆದು,ಗುರಿಮುಟ್ಟಬಲ್ಲೆ ಎನ್ನುವ ಆತ್ಮವಿಶ್ವಾಸ ಉಳ್ಳವರಿಗೆ ಆದರ್ಶವಾಗರು.ಶಾಸ್ತ್ರ,ಪುರಾಣ,ತರ್ಕ,ಸತ್ಸಂಗ,ಭಜನೆಗಳೆಲ್ಲ ಕೈಮರಗಳೆ.ಕೈಮರವನ್ನು ನಂಬಿ ನಡೆಯುವವನು ತನ್ನ ಕಾಲುಗಳ ಬಲ ಮತ್ತು ಬುದ್ಧಿಬಲವನ್ನು ನಂಬದೆ,ಪರೀಕ್ಷಿಸದೆ ಕೈಮರವನ್ನೇ ಆಶ್ರಯಿಸಿರುತ್ತಾನೆ,ಅವಲಂಬಿಸಿರುತ್ತಾನೆ.ಪರಂಪರೆಯನ್ನು ನಂಬಿ,ನಡೆಯುವವರು ಕೈಮರವನ್ನು ಆಶ್ರಯಿಸಿದವರು,ಜಡಚೇತನರು.ಶಿವಾತ್ಮರುಗಳನ್ನು,ಅನುಭಾವಿಗಳನ್ನು ನಂಬಿ ನಡೆಯುವವರು ವಿವೇಕಿಗಳು,ಜಂಗಚೇತನರುಗಳು.

ಕೈಮರವು ಜೀವವಿದ್ದೂ ಸ್ಥಾವರವೆ! ದಾರಿ ನಡೆದು ತೋರುವವರೇ ಧೀರರು,ಇತಿಹಾಸ ನಿರ್ಮಾಪಕರು,ಪುರುಷಸಿಂಹರು.ಆಧ್ಯಾತ್ಮಿಕ ಪಥದಲ್ಲಿ ಪುರುಷಸಿಂಹರಿಗೆ ಬೆಲೆ ಇದೆಯೇ ಹೊರತು ಪರಂಪರೆಯ ಕೈಮರಕ್ಕೆ ಜೋತು ಬಿದ್ದವರಿಗೆ ನೆಲೆ ಬೆಲೆಗಳಿಲ್ಲ.ಅವರಿವರ ಮಾತು- ಮತಗಳಲ್ಲಿ ವಿಶ್ವಾಸವಿಡದೆ ನಡೆದು ನೋಡುವೆನು ಎಂಬ ಆತ್ಮಬಲ,ಬುದ್ಧಿಬಲ ಉಳ್ಳವರೇ ಯಶಸ್ವಿ ವ್ಯಕ್ತಿಗಳಾಗುತ್ತಾರೆ.ಕೈಮರವನ್ನೇ ನಂಬಿ ಅದರ ಬುಡದಲ್ಲಿಯೇ ಮೈಮರೆಯದೆ ನಡೆದು ಸಾಗಿ ಗುರಿಮುಟ್ಟುವ ಹಿರಿಯರಾಗಬೇಕು.ನಡೆದು ಗುರಿಮುಟ್ಟಿದ ಹಿರಿಯರೇ ಗುರುಗಳು,ಪೂಜ್ಯರು,ನಡೆಯದೆ ಉಪದೇಶಿಸುವವರು ಹಿರಿಯರಲ್ಲ,ಪೂಜ್ಯರಲ್ಲ.

About The Author