ಚಿಂತನೆ : ಜನರ ಭಾವನೆಗಳನ್ನು ಓದುವವನೇ ಬುದ್ಧಿವಂತ ! : ಮುಕ್ಕಣ್ಣ ಕರಿಗಾರ

ನನ್ನ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ಒಮ್ಮೆ ನನಗೆ ಹೇಳಿದ್ದರು ” ನೀನು ಪುಸ್ತಕಗಳನ್ನು ಓದಿದರೆ ಮಾತ್ರ ಸಾಲದು; ಜನರ ಭಾವನೆಗಳನ್ನು ಓದು.ಜನರ ಭಾವನೆಗಳನ್ನು ಓದಿ,ಅರ್ಥೈಸಿಕೊಳ್ಳುವವನೇ ಬುದ್ಧಿವಂತ,ಗುರು,ಸಂತ”.ಇದರರ್ಥ ಏನು ಎಂದು ನನಗೆ ಆಗ ಅರ್ಥವಾಗಿರಲಿಲ್ಲ.ನಾನು ಪುಸ್ತಕದ ಹುಳು ಆಗಿದ್ದರಿಂದ ಗುರುದೇವ ಈ ಮಾತನ್ನು ಹೇಳಿರಬೇಕು ಎಂದುಕೊಂಡಿದ್ದೆ.ಪುಸ್ತಕದ ಜ್ಞಾನ ಸಾಕಷ್ಟು ಇರುವ ನನ್ನಲ್ಲಿ ವ್ಯವಹಾರ ಜ್ಞಾನ ಸ್ವಲ್ಪ ಕಡಿಮೆಯೆ! ಎಲ್ಲವನ್ನು,ಎಲ್ಲರನ್ನೂ ಸುಲಭವಾಗಿ ನಂಬುವ ಬೋಳೇಶಂಕರ ಸ್ವಭಾವ ನನ್ನದು.

ಗುರುದೇವನ ಮಾತಿನ ಅರ್ಥ ಏನಾಗಿರಬಹುದು ಎಂದು ಯೋಚಿಸುತ್ತಲೇ ಇದ್ದೆ. ನಾನು ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಮಹಾಶೈವ ಧರ್ಮಪೀಠದಲ್ಲಿ ಪ್ರತಿರವಿವಾರ ‘ ಶಿವೋಪಶಮನ ಕಾರ್ಯ’ ನಡೆಸುತ್ತಿದ್ದು, ಶ್ರೀಗುರುವಾಕ್ಯರ್ಥ ಪ್ರಕಟಗೊಂಡಿದೆ, ಪ್ರಕಾಶಗೊಂಡಿದೆ.ಗುರುಗಳಾದವರು,ಧಾರ್ಮಿಕ ಮುಖಂಡರಾದವರು ಸೂಕ್ಷ್ಮಮತಿಗಳಾಗಿರಬೇಕು,ಸಂವೇದನಾಶೀಲರಾಗಿರಬೇಕು,ಹೃದಯಸಂಪನ್ನರಾಗಿರಬೇಕು ಎನ್ನುವ ಅರ್ಥ ಹೊಳೆದಿದೆ.

ಪ್ರತಿ ರವಿವಾರ ಶ್ರೀಕ್ಷೇತ್ರಕೈಲಾಸದ ವಿಶ್ವೇಶ್ವರ ಶಿವನ ಸನ್ನಿಧಿಗೆ ಸಮಸ್ಯೆ ಪರಿಹಾರಕ್ಕೆಂದು ಬರುವವರಲ್ಲಿ ಬಹಳಷ್ಟು ಜನ ಅವಿದ್ಯಾವಂತರು,ಮಹಿಳೆಯರೇ ಇರುತ್ತಾರೆ.ಶುದ್ಧವಾದ ಕನ್ನಡದಲ್ಲಿ ಮಾತನಾಡುವ ಕಲೆ ಅವರಿಗೆ ತಿಳಿದಿಲ್ಲ.ಮುಚ್ಚು ಮರೆ ಅಂತ ಏನೂ ಇಲ್ಲದೆ ಮನದಾಳವನ್ನು ಬಿಚ್ಚಿಡುತ್ತಾರೆ.ದೇವರ ಎದುರು ಕುಳಿತಿದ್ದೇವೆ ಎನ್ನುವ ಭಕ್ತಿ,ಭಾವಪರವಶತೆಯಲ್ಲಿರುತ್ತಾರೆ.ಅಕ್ಷರಸ್ಥರಂತೆ ಶಿಷ್ಟಾಚಾರವನ್ನರಿಯದ ಅವರು ತಮ್ಮ ಮುಗ್ಧಭಕ್ತಿಯನ್ನು ಮೆರೆಯುತ್ತಾರೆ.ಇಂಥವರ ಭಾವನೆಗಳನ್ನು ಓದಲು ಗುರುದೇವ ಆದೇಶಿಸಿದ್ದರು ಎಂದು ನನಗೀಗ ಅರ್ಥವಾಗಿದೆ.

ಜನರ ಭಾವನೆಗಳನ್ನು ಓದುವುದು ಎಂದರೆ ಅವರ ಮನದಾಳದ ನೋವು,ಸಂಕಟಗಳನ್ನು ಅರ್ಥಮಾಡಿಕೊಂಡು ಅದಕ್ಕೆ ಪರಿಹಾರ ಸೂಚಿಸುವುದು.ನೂರಾರು ಬಗೆಯ ಸಮಸ್ಯೆಗಳನ್ನು ಹೊತ್ತು ವಿಶ್ವೇಶ್ವರ ಸನ್ನಿಧಿಯಲ್ಲಿ ಬೆಳಕನ್ನು ಅರಸಿ ಬರುವವರ ಭಾವನೆಗಳನ್ನು ಓದಲು ಪ್ರಯತ್ನಿಸುತ್ತಿದ್ದೇನೆ.ಅವರ ಮುಖದಲ್ಲಿನ ಕಳೆ,ಕಳವಳಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.ಬಳಿ ಬಂದವರು ಯಾರೇ ಆಗಿರಲಿ ಅವರಿಗೆ ಶಿವಾನುಗ್ರಹ ನಿಶ್ಚಿತ ಎನ್ನುವ ಶಿವಾಭಯ ನೀಡುತ್ತಿದ್ದೇನೆ.ಸಂಕಷ್ಟವನ್ನು ಹೊತ್ತು ಬಂದ ಜನರಲ್ಲಿ ಶಿವಕಾರುಣ್ಯಾಮೃತದ ಉಣಿಸನ್ನು ಉಣಬಡಿಸುತ್ತಿದ್ದೇನೆ.ಅರ್ಥವಿಲ್ಲದ ಶಾಸ್ತ್ರೋಪಚಾರಗಳ ಪೂಜೆ,ಸೇವೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ,ಸುಮ್ಮನೆ ಶಿವನಿಗೆ ಶರಣು ಬನ್ನಿ ಎನ್ನುತ್ತೇನೆ.ಭಯಗ್ರಸ್ತರಾಗಿರುವ ಜನತೆಗೆ ಅಭಯ ನೀಡುವುದೇ ಗುರುವಾದನ ಕರ್ತವ್ಯ.ಜನರ ಅಜ್ಞಾನ- ಅಂಧಕಾರಗಳನ್ನು ದುರೂಪಯೋಗಪಡಿಸಿಕೊಂಡು ಅವರನ್ನು ನಿರಾಶೆಯ ಮಡುವಿಗೆ ತಳ್ಳುವವರು ಗುರುಗಳಲ್ಲ,ಸಂತರಲ್ಲ.

ಜನರು ಗುರುಗಳು,ಪೂಜ್ಯರು ಎಂದು ನಂಬಿ ಬಂದಿರುವಾಗ ನಾವು ಅವರ ನಂಬಿಕೆಗೆ ತಕ್ಕಂತೆ ನಡೆದುಕೊಳ್ಳಬೇಕು.ಜನರು ಅನಕ್ಷರಸ್ಥರಿರಬಹುದು ಆದರೆ ಸರಿ ಯಾವುದು,ತಪ್ಪು ಯಾವುದು ಎಂದು ವಿವೇಚಿಸದಷ್ಟು ದಡ್ಡರೇನಲ್ಲ.ಬಳಿ ಬಂದವರಲ್ಲಿ ಶ್ರೀಮಂತರಿಗೆ ಒಂದು ಸ್ಥಾನ ಬಡವರಿಗೆ ಮತ್ತೊಂದು ಸ್ಥಾನ ನೀಡಿದರೆ ಜನರಿಗೆ ನಮ್ಮಲ್ಲಿನ ಗೌರವಾದರಗಳು ಕಡಿಮೆಯಾಗುತ್ತವೆ.ಮಠ- ಪೀಠಗಳ ಗದ್ದುಗೆಗಳಲ್ಲಿ ಕುಳಿತವರು ಎಲ್ಲರನ್ನು ಸಮಭಾವದಿಂದ ಕಾಣಬೇಕು.ಸಿರಿವಂತರು ಹಣಕೊಡುತ್ತಾರೆ ಎಂದು ಅವರಿಗೆ ವಿಶೇಷ ಮಾನ ಮನ್ನಣೆಗಳನ್ನು ನೀಡಬಾರದು; ಬಡವರು ಬರಿಗೈ ಬಸವಣ್ಣನವರು ಎಂದು ಅವರನ್ನು ಕಡೆಗಣಿಸಬಾರದು.ಬಡತನ- ಸಿರಿತನಗಳು ಸಾಮಾಜಿಕ ಸ್ಥಿತಿ ಗತಿಗಳೇ ಹೊರತು ಅವು ಅನುಭಾವಿಯನ್ನು ಕಾಡುವ ಸಮಸ್ಯೆಗಳಾಗಬಾರದು.ಎಲ್ಲವನ್ನು ಮೀರಿ ನಡೆಯಬೇಕಾದ ಆತ್ಮಜ್ಞಾನಿಯು ಎಲ್ಲರಲ್ಲಿಯೂ ಶಿವಚೈತನ್ಯವನ್ನೇ ಕಾಣಬೇಕು.ಕುಳಿತ ಗದ್ದುಗೆಯಿಂದ ನಾನು ಶ್ರೇಷ್ಠ,ಇತರರು ಕನಿಷ್ಟರು ಎಂದು ಭ್ರಮಿಸಬಾರದು.ಶಿವ ನಮ್ಮೆಲ್ಲ ಕಾರ್ಯ,ನಡೆ- ನುಡಿಗಳನ್ನು ಗಮನಿಸುತ್ತಿರುತ್ತಾನೆ ಎನ್ನುವ ಎಚ್ಚರ ಸದಾ ಜಾಗ್ರತವಾಗಿರಬೇಕು.ಜನರ ಕಣ್ಣು ತಪ್ಪಿಸಬಹುದು,ಜನರೆದುರು ಸುಳ್ಳು ಹೇಳಿ ದೊಡ್ಡವರಾಗಬಹುದು; ಸರ್ವಜ್ಞನಾಗಿರುವ ಶಿವನ ಕಣ್ಣುಗಳಿಂದ ಪಾರಾಗಲು ಸಾಧ್ಯವೆ? ನಾವು ಶಿವನಿಗಿಂತ ದೊಡ್ಡವರಾಗಲು ಸಾಧ್ಯವೆ? ಶಿವಸಾಕ್ಷಿಯಾಗಿ ನಡೆಯುವರು ಉದ್ಧಾರವಾದರೆ ಶಿವನು ಕಣ್ಮುಚ್ಚಿದ್ದಾನೆ ಎಂದು ಭ್ರಮಿಸುವ ಮೂಢಮತಿಗಳು ಅವನತಿಯನ್ನು ಹೊಂದುತ್ತಾರೆ.

About The Author