ಅನುಭಾವ–ಯೋಗ–ಮುಕ್ಕಣ್ಣ ಕರಿಗಾರ

ರಾಯಚೂರು ಜಿಲ್ಲೆಯ ಪ್ರಗತಿಪರನಿಲುವಿನ ಸ್ವಾಮಿಗಳೂ ದೇವರಗುಡ್ಡ ಹತ್ತಿಗೂಡೂರು ತಪೋವನ ಮಠದ ಪೀಠಾಧಿಪತಿಗಳೂ ಮತ್ತು ನನ್ನ ಆತ್ಮೀಯರೂ ಆಗಿರುವ ಪೂಜ್ಯ ಗಿರಿಮಲ್ಲದೇವರು ಸ್ವಾಮಿಗಳವರು ‘ ಯೋಗದ ಬಗ್ಗೆ ತಿಳಿಸಿ’ ಎಂದಿದ್ದಾರೆ.ಇತ್ತೀಚೆಗೆ ಕೆಲವರು ಯೋಗಾಸನಗಳನ್ನೇ ಯೋಗವೆಂದು ಬೊಗಳೆ ಹೊಡೆಯುತ್ತಿರುವುದರಿಂದ ಮತ್ತು ಮುಗ್ಧಜನಕೋಟಿಗೆ ಯಾವುದು ಯೋಗ,ಯಾವುದು ಯೋಗವಲ್ಲ ಎನ್ನುವ ಗೊಂದಲ ಉಂಟಾಗಿ ಕಂಡವರನ್ನೆಲ್ಲ ಯೋಗಿಗಳು,ಯೋಗ ಗುರುಗಳು ಎಂದು ಭ್ರಮಿಸಿ ಬಳಲುತ್ತಿರುವುದನ್ನು ಕಂಡ ಗಿರಿಮಲ್ಲದೇವರು ಅವರಲ್ಲಿ ಈ ಸಂದೇಹ ತಲೆದೋರಿರಬಹುದು.

ಮೊದಲಿಗೆ ಒಂದು ವಿಷಯವನ್ನು ಸ್ಪಷ್ಟಪಡಿಸುವೆ.ಯೋಗಾಸನ ಮಾಡುವವರೆಲ್ಲ ಯೋಗಿಗಳಲ್ಲ.ಒಂದಲ್ಲ,ಎರಡಲ್ಲ ಎಂಬತ್ನಾಲ್ಕು ಯೋಗಾಸನಗಳಲ್ಲಿ ನಿಪುಣರಿದ್ದರೂ ಅವರು ಯೋಗಿಗಳಲ್ಲ.ಪ್ರಾಣಾಯಾಮವೆಂದು ಶ್ವಾಸೋಚ್ಛಾಸ ಶುದ್ಧೀಕರಣಕ್ರಿಯೆಯ ಪರಿಣತರೂ ಯೋಗಿಗಳಲ್ಲ.ಕಪಾಲಭಾತಿಯಂತಹವುಗಳು ಕೇವಲ ದೇಹಶುದ್ಧೀಕರಣ ಸಾಧನಗಳೇ ಹೊರತು ಅವುಗಳನ್ನು ಆಚರಿಸಿ ಜನರಿಂದ ಹೊಗಳಿಸಿ ಕೊಳ್ಳುವವರು ಯೋಗಿಗಳಲ್ಲ.ಪತಂಜಲಿ ಋಷಿ ಪ್ರಣೀತ ಅಷ್ಟಾಂಗಯೋಗ ಮಾರ್ಗದ ಆಧ್ಯಾತ್ಮಿಕ ಸಾಧನೆಯ ಯೋಗದ ಎಂಟು ಅಂಗಗಳಲ್ಲಿ ಯೋಗಾಸನವು ಒಂದು ಅಂಗ ಮಾತ್ರ.ವಿಶ್ವವಿದ್ಯಾಲಯದ ಪದವಿ ಪಡೆಯಲು ಪ್ರಾಥಮಿಕ ಶಿಕ್ಷಣದ ಅಗತ್ಯವಿರುವಂತೆ ಯೋಗಸಾಧನೆಗೆ ಯೋಗಾಸನಗಳು ಪ್ರಾಥಮಿಕ ಅಗತ್ಯವಷ್ಟೆ.ಯೋಗಾಸನಗಳಿಂದ ಯೋಗಸಿದ್ಧಿ ಲಭಿಸುವುದಿಲ್ಲ; ಯೋಗಾಸನಗಳ ಸಹಾಯವಿಲ್ಲದೆಯೂ ಪಡೆಯಬಹುದು ಆಧ್ಯಾತ್ಮಿಕ ಲೋಕದ ಅತ್ಯುನ್ನತ ಸಿದ್ಧಿ ಮೋಕ್ಷವನ್ನು.

‘ಯೋಗ’ ಎಂದರೆ ಒಂದು ಗೂಡುವುದು ಎಂದರ್ಥ.ಜೀವ ಮತ್ತು ಆತ್ಮ ಇಲ್ಲವೆ ಪರಮಾತ್ಮರ ಬೆಸುಗೆಯೇ ಯೋಗ.ಆತ್ಮ ಪರಮಾತ್ಮರ ಸಮಾಗಮ ಎಂದರೂ ನಡೆದೀತು.ಆತ್ಮನಿಗೂ ಪರಮಾತ್ಮನಿಗೂ ವ್ಯತ್ಯಾಸವಿಲ್ಲ.ವ್ಯಷ್ಟಿಗತ ಚೇತನನು ಆತ್ಮನಾದರೆ ಸಮಷ್ಟಿಯೊಳಿಹ ಆತ್ಮಚೇತನನೇ ಪರಮಾತ್ಮನು.ಜೀವಾತ್ಮನನ್ನು ವಿರಾಟ್ ಆತ್ಮನೊಂದಿಗೆ ಸಮರಸಗೊಳಿಸುವುದೇ ಯೋಗ,ಮೋಕ್ಷ.

ಜೀವರುಗಳಲ್ಲಿ ದೇವರಿದ್ದಾನೆ.ಆದರೆ ಜೀವರುಗಳು ಅಜ್ಞಾನವಶರಾಗಿ ತಮ್ಮ ಆತ್ಮಸ್ವರೂಪವನ್ನು ಮರೆತಿದ್ದಾರೆ.ನಾಮ,ರೂಪ,ಕ್ರಿಯೆ,ಕಳೆಗಳ ಉಪಾಧಿಗಳಿಗೆ ಒಳಗಾಗಿ ಜೀವರುಗಳು ಆತ್ಮಸ್ವರೂಪವನ್ನು ಮರೆತಿರುವರು.ಅಹಂಕಾರ- ಮಮಕಾರ,ರಾಗ- ದ್ವೇಷ,ಅರಿಷಡ್ವರ್ಗ- ಅಷ್ಟಮದಗಳ ಮಾಯಾವರಣಕ್ಕೆ ಸಿಕ್ಕು ಜೀವನು ತಾನು ಜೀವಿಮಾತ್ರನು ಎನ್ನುವ ಭ್ರಮೆಗೆ ಒಳಗಾಗುವನು.ಕವಿದ ಮಾಯೆಯ ಪೊರೆಯನ್ನು ಹರಿದೊಗೆದಾಗ ಆತ್ಮಜ್ಞಾನವು ಮೈದೋರುವುದು.ಜೀವನು ತಾನು ಆತ್ಮನು ಎಂದು ತಿಳಿಯುವುದಕ್ಕೆ ಒಂದು ಅರಿವಿನ ಮಾಧ್ಯಮ ಬೇಕು.ಆ ಅರಿವಿನ ಮಾಧ್ಯಮವೇ ಗುರು.ಶಿಷ್ಯನಿಗೆ ಗುರುವು ಮಂತ್ರವೆಂಬ ಸಾಕ್ಷಾತ್ಕಾರದ,ಮೋಕ್ಷದ ಸೂತ್ರವನ್ನು ನೀಡುವನು.ಗುರುವಿತ್ತ ಸೂತ್ರಾನುಸಂಧಾನದಿಂದ ಶಿಷ್ಯ ಯೋಗಿಯಾಗುವನು,ಮುಕ್ತನಾಗುವನು.

ಯೋಗದಲ್ಲಿ ಭಕ್ತಿಯೋಗ,ಕರ್ಮಯೋಗ,ಜ್ಞಾನಯೋಗಗಳೆಂಬ ಯೋಗತ್ರಯಗಳು ಪ್ರಧಾನಯೋಗಗಳು.ಹಠಯೋಗ,ಲಯಯೋಗ,ರಾಜಯೋಗ,ರಾಜಾಧಿರಾಜ ಯೋಗಗಳೆಂಬ ಯೋಗಗಳಿವೆ.ಶಾಕ್ತರಲ್ಲಿ ಕುಂಡಲಿನಿ ಶಕ್ತಿಯನ್ನು ಜಾಗ್ರತಗೊಳಿಸುವುದು ಸ್ವತಂತ್ರಯೋಗವೆ.ಖೇಚರಿ,ತಾರಕ,ಅಮನಸ್ಕಗಳಾದಿ ಮುದ್ರೆಗಳನ್ನು ಯೋಗಗಳೆಂದು ಪರಿಭಾವಿಸಿ ಆ ಒಂದೊಂದೇ ಮುದ್ರಾಯೋಗದಿಂದ ಸಿದ್ಧಿಪಡೆದವರೂ ಇದ್ದಾರೆ.ಆತ್ಮಜ್ಞಾನಕ್ಕೆ ಸಹಾಯಕವಾಗುವ ಮಾಧ್ಯಮವೆಲ್ಲವೂ ಯೋಗವೆ! ಪೂಜೆಯೂ ಯೋಗವೆ! ಪ್ರಾರ್ಥನೆಯೂ ಯೋಗವೆ! ಸೇವೆಯೂ ಯೋಗವೆ! ಮಾಡುವ ಕೆಲಸವೂ ಯೋಗವಾಗುತ್ತದೆ ತನು ಮನ ಧನಗಳೆಂಬ ತ್ರಿಕರಣಶುದ್ಧಿ ಇರೆ.

ಆತ್ಮನು ಪರಮಾತ್ಮನೊಡನೆ ಒಂದುಗೂಡಲು ನೆರವಾಗುವ ಎಲ್ಲ ಸಾಧನವು ಯೋಗವೆ.ಅಧ್ಯಯನ,ಅನುಷ್ಠಾನ,ಪಾರಾಯಣ- ಪ್ರವಚನ,ಭಜನೆ- ಸತ್ಸಂಗ — ಈ ಎಲ್ಲವೂ ಪರಮಾತ್ಮನ ಪಥದಿ ನಡೆಯುವುದಕ್ಕೆ ನೆರವಾಗುವುದರಿಂದ ಇವೆಲ್ಲವೂ ಯೋಗಗಳೆ! ಸಮುದ್ರ ಮತ್ತು ಸಮುದ್ರದ ಹನಿಯ ಸಂಬಂಧದಂತೆ ಆತ್ಮ ಪರಮಾತ್ಮರು.ಆತ್ಮನು ಒಂದು ಹನಿಯಾದರೆ ಪರಮಾತ್ಮನು ಸಮುದ್ರ.ಹನಿಯಲ್ಲಿಯೂ ಸಮುದ್ರದ ಅಂಶವಿದೆ.ಸಮುದ್ರದಿಂದ ಹೊರಹೊಮ್ಮಿದ ಹನಿಯು ಸಮುದ್ರವೇ ಆಗುತ್ತದೆ ಉಪಾಧಿಗಳಿಗೊಳಗಾಗಿ,ಉಪಾಧಿಮುಕ್ತಗೊಂಡು.ಸಮುದ್ರದ ನೀರು ಆವಿಯಾಗಿ ಮೋಡಗಳಾಗಿ ಮೇಲೇರಿ ಮಳೆಸುರಿದು ಹಳ್ಳ- ಕೊಳ್ಳ,ನದಿಗಳಾಗಿ ಹರಿದು ಕೊನೆಗೆ ಸಾಗರವನ್ನು ಸೇರುವಂತೆ ಜೀವಾತ್ಮರುಗಳು ಕೊನೆಗೊಂದು ದಿನ ತಮ್ಮ ಮೂಲನೆಲೆಯಾದ ಪರಮಾತ್ಮನನ್ನು ಸೇರುತ್ತಾರೆ.ಆತ್ಮ ಪರಮಾತ್ಮರ ಸಮಾಗಮವೇ ದಿವ್ಯಯೋಗ,ಮೋಕ್ಷ.

ಜೀವನದ ಪರಮ ಶ್ರೇಯಸ್ಸು ಪರಮಾತ್ಮನ ಸಾಕ್ಷಾತ್ಕಾರ ಇಲ್ಲವೆ ಮೋಕ್ಷ.ಈ ಘನ ಉದ್ದೇಶಕ್ಕೆ ಯಾವುದು ಆಸರೆಯಾಗುವುದೋ ಅದೆಲ್ಲವೂ ಯೋಗವೆ.ಇದು ಯೋಗ,ಅದು ಯೋಗವಲ್ಲ ಎನ್ನುವಂತಿಲ್ಲ.ಮನವು ಘನಮನವಾಗಿ,ಮಾತು ಮೌನವಾಗಿ,ಪ್ರಾಣ ತನುವು ಪ್ರಣವತನುವಾಗಿ,ದೇಹ ದೇವಾಲಯವಾಗಿ ಜೀವನು ಆತ್ಮನಾಗಿ ಪ್ರಕಟಗೊಳ್ಳಲು ನೆರವಾಗುವ ಮಾಧ್ಯಮಗಳೆಲ್ಲವೂ ಯೋಗವೆ.ಯಾರಿಗೆ ಯಾವ ಮಾರ್ಗ ಸುಲಭವೋ ಅವರು ಆ ಮಾರ್ಗವನ್ನು ಹಿಡಿದು ಸಾಧಿಸಬಹುದು ಪರಮಾತ್ಮನ ಸಾನ್ನಿಧ್ಯ ಸುಖವನ್ನು.ಪರಮಾತ್ಮನೆಡೆಗೆ ಜೀವರುಗಳನ್ನು ಯಾವುದು ಕರೆದೊಯ್ಯುವುದೋ ಅದೇ ಯೋಗ.ಯೋಗವು ಪಥವೂ ಅಹುದು,ಪರಮಾರ್ಥವೂ ಅಹುದು.

About The Author