ಕೈಲಾಸವನ್ನು ತಪ್ಪಾಗಿ ಅರ್ಥೈಸಿಕೊಂಡ ಕವಿ- ಪುರಾಣಿಕರುಗಳು !–ಮುಕ್ಕಣ್ಣ ಕರಿಗಾರ

ಚಿಂತನೆ

ಕವಿಗಳು,ಪುರಾಣಿಕರುಗಳು ಶರಣರು- ಸಂತರುಗಳ ಜೀವನವನ್ನು ಚಿತ್ರಿಸುವಾಗ,ಬಣ್ಣಿಸುವಾಗ ಶರಣರುಗಳು ಕೈಲಾಸಲ್ಲಿ ಯಾವುದೋ ತಪ್ಪು ಮಾಡಿ,ಶಿವನ ಆಗ್ರಹಕ್ಕೆ ತುತ್ತಾಗಿ, ಶಾಪಗ್ರಸ್ತರಾಗಿ ಭೂಮಿಗೆ ಅವತರಿಸಿದರು ಎಂಬಂತೆ ವರ್ಣಿಸುತ್ತಾರೆ.ಆದರೆ ಇದು ತಪ್ಪು ಕಲ್ಪನೆ,ಪರಂಪರಾನುಗತ ನಂಬಿಕೆಯನ್ನು ಪ್ರಶ್ನಿಸದೆ ಬಣ್ಣಿಸುವ ಪ್ರಯತ್ನ.ಮೇಲಾಗಿ ಕವಿಗಳು ಅನುಭಾವಿಗಳಲ್ಲ,ಅವರಿಗೆ ಆಧ್ಯಾತ್ಮಿಕ ಸಂಗತಿಗಳ ಪರಿಚಯ ಇರುವುದಿಲ್ಲ.ಪುರಾಣಿಕರಂತೂ ಇತರರು ಬರೆದುದನ್ನು ರಸವತ್ತಾಗಿ ಬಣ್ಣಿಸುವಲ್ಲಿ,ಬರೆಯುವಲ್ಲಿ ನಿಪುಣರೇ ಹೊರತು ಅವರಲ್ಲಿ ಆಧ್ಯಾತ್ಮದ ಒಳಗಣ್ಣು ತೆರೆದಿರುವುದಿಲ್ಲ.ಕೈಲಾಸದ ಶಿವಗಣರುಗಳು,ಋಷಿಗಳು ಶಿವನ ಶಾಪಕ್ಕೆ ತುತ್ತಾಗಿ ಭೂಮಿಯಲ್ಲಿ ಹುಟ್ಟುತ್ತಾರೆ ಎನ್ನುವುದು ಯೋಗಿಗಳು,ಆತ್ಮಜ್ಞಾನಿಗಳು ಒಪ್ಪುವ ಮಾತಲ್ಲ.

ಕೈಲಾಸ ಎಂದರೆ ಶಿವನ ನೆಲೆ,ಮುಕ್ತಾತ್ಮರ ನಿವಾಸ.ಶಿವನು ಮುಕ್ತಿದಾತ,ಮೋಕ್ಷದ ಅಧಿಪತಿ.ಮೋಕ್ಷ ಎಂದರೆ ಹುಟ್ಟು ಸಾವುಗಳಿಂದ ಬಿಡುಗಡೆ.ಜೀವರುಗಳನ್ನು ಸಂಸಾರಬಂಧನದಿಂದ ಬಿಡುಗಡೆ ಮಾಡುವ ವಿಶೇಷ ಸಾಮರ್ಥ್ಯವು ಶಿವನೊಬ್ಬನಿಗೇ ಇರುವುದು,ಇತರದೇವತೆಗಳಿಗೆ ಆ ಸಾಮರ್ಥ್ಯ ಇಲ್ಲ.ಸೃಷ್ಟಿ,ಸ್ಥಿತಿ,ಲಯ,ತಿರೋಭಾವ ಮತ್ತು ಅನುಗ್ರಹಗಳೆಂಬವು ಶಿವನ ಐದು ಕಾರ್ಯಗಳು.ಇವುಗಳಲ್ಲಿ ಸೃಷ್ಟಿ ಕಾರ್ಯವನ್ನು ಬ್ರಹ್ಮನಿಗೆ,ಸ್ಥಿತಿ ಕಾರ್ಯವನ್ನು ವಿಷ್ಣುವಿಗೆ,ಲಯಕಾರ್ಯವನ್ನು ರುದ್ರನಿಗೆ,ತಿರೋಭಾವ ಕಾರ್ಯವನ್ನು ಮಹೇಶ್ವರನಿಗೆ ಅನುಗ್ರಹಿಸಿದ ಶಿವನು ಅನುಗ್ರಹಕಾರ್ಯವನ್ನು ಮಾತ್ರ ಯಾರಿಗೂ ಪ್ರದಾನಿಸದೆ ತನ್ನ ಬಳಿಯೇ ಇಟ್ಟುಕೊಂಡಿದ್ದಾನೆ.ಅನುಗ್ರಹದಿಂದ ಮೋಕ್ಷಪ್ರಾಪ್ತಿ.ಅದು ಶಿವನೊಬ್ಬನ ಸಾಮರ್ಥ್ಯ ವಿಶೇಷವು.

ಮೋಕ್ಷ ಎಂದರೆ ಜನನ- ಮರಣಗಳ ಸಂಸಾರ ಚಕ್ರದಿಂದ ಬಿಡುಗಡೆ.ಮೋಕ್ಷಪಡೆದವರು ಶಿವನೊಂದಿಗೆ ಕೈಲಾಸದಲ್ಲಿರುತ್ತಾರೆ.ಶಿವನ ದರ್ಶನದಿಂದಲೇ ಮೋಕ್ಷಪ್ರಾಪ್ತಿಯಾಗುತ್ತದೆ ಎಂದೇ ಋಷಿ- ಮುನಿ,ಸಿದ್ಧರುಗಳು ಶಿವನ ಸಾಕ್ಷಾತ್ಕಾರಕ್ಕಾಗಿ ಹಂಬಲಿಸಿ,ಹಾತೊರೆದು ಕಠಿಣ ತಪಸ್ಸನ್ನಾಚರಿಸುತ್ತಾರೆ.ಹೀಗಿದ್ದ ಬಳಿಕ ಶಿವನೊಂದಿಗೆ ಕೈಲಾಸದಲ್ಲಿ ಇದ್ದವರು ನಿತ್ಯಮುಕ್ತರು ತಾನೆ? ಕೈಲಾಸ ಎನ್ನುವುದು ಪರಶಿವನ ಮಂಗಳಧಾಮ.ಅಲ್ಲಿ ಅಮಂಗಳಕ್ಕೆ ಅವಕಾಶವಿಲ್ಲ.ಶಿವನಿದ್ದಲ್ಲಿ ಅಶಿವಭಾವಕ್ಕೆ ಆಸ್ಪದವಿಲ್ಲ.ಶಿವ ಎಂದರೆ ಶುಭ, ಕಲ್ಯಾಣ,ಮಂಗಳ ಎಂದರ್ಥ.ಶುಭ ಮತ್ತು ಮಂಗಳಗಳು ಲೌಕಿಕ ಪ್ರಪಂಚಕ್ಕೆ ಸಂಬಂಧಿಸಿದ್ದರೆ ಕಲ್ಯಾಣವು ಆತ್ಮಕ್ಕೆ,ಅಲೌಕಿಕ ಪ್ರಪಂಚಕ್ಕೆ ಸಂಬಂಧಿಸಿದುದು.ಭವಹರನಾದ ಶಿವನ ನೆಲೆ ಕೈಲಾಸದಲ್ಲಿ ಭವಕ್ಕಾಗಲಿ ಇಲ್ಲವೆ ಭವಸಂಬಂಧಿ ಶಾಪ- ಪಾಪಗಳಿಗಾಗಲಿ ನೆಲೆ ಇಲ್ಲ.ಅಶುಭಗಳನ್ನೆಲ್ಲ ಕಳೆಯುವವನೇ ಶಿವನಾದ್ದರಿಂದ ಕೈಲಾಸದಲ್ಲಿ ಶಾಪ- ಪಾಪಗಳಿಗೆ ಅವಕಾಶವಿಲ್ಲ.ಶಿವನು ಮೋಕ್ಷದ ಅಧಿಪತಿಯಾದ್ದರಿಂದ ಕೈಲಾಸದ ಶಿವಸಭಾಸದರುಗಳಾದ ಋಷಿ- ಮುನಿ,ಸಿದ್ಧರುಗಳು ಅಪೂರ್ಣರಲ್ಲ.ಪೂರ್ಣರಾದವರು ಅಪೂರ್ಣರಾಗರಾದ್ದರಿಂದ ಪೂರ್ಣರಾಗಲು ಭೂಮಿಗೆ ಹುಟ್ಟುತ್ತಾರೆ ಎನ್ನುವುದು ಅರ್ಥಹೀನ ಮಾತು.

ಹಾಗಾದರೆ ಶಿವಗಣರು ಭೂಮಿಗೆ ಬರುವುದಿಲ್ಲವೆ? ಖಂಡಿತವಾಗಿಯೂ ಶಿವಗಣರಾದ ಋಷಿ ಮುನಿಗಳು,ಶಿವನ ಪರಿವಾರ ದೈವಗಳು ಭೂಮಿಗೆ ಅವತರಿಸುತ್ತಾರೆ.ಆದರೆ ಅವರುಗಳು ಶಿವ ಸಂಕಲ್ಪದಿಂದ ಭೂಮಿಗೆ ಅವತರಿಸುತ್ತಾರೆಯೇ ಹೊರತು ಶಾಪಗ್ರಸ್ತರಾಗಿ ಹುಟ್ಟುವುದಿಲ್ಲ.ಭೂಮಿಯ ಮೇಲಣ ಸಂಗತಿಗಳನ್ನು ರಮ್ಯಾಧ್ಭುತವಾಗಿ ವರ್ಣಿಸುವ ಕವಿಗಳಿಗೆ ಕೈಲಾಸವು ಎಟುಕದ ತತ್ತ್ವವಾದ್ದರಿಂದ ಅವರು ಕೈಲಾಸವನ್ನು ಸಹ ರಾಜ ಮಹಾರಾಜರುಗಳ ಅರಮನೆಯಂತೆಯೇ ಭವ್ಯವಾಗಿದೆ ,ವಿಲಾಸಮಯವಾಗಿದೆ ಎಂಬಂತೆ ಬಣ್ಣಿಸಿ ಅಲ್ಲಿಯ ಗಣರುಗಳ ವ್ಯಕ್ತಿತ್ವವನ್ನು ಚಿತ್ರಿಸುತ್ತಾರೆ.ಹಿಮಾಲಯವನ್ನೇ ಕೈಲಾಸವೆಂದು ಬಗೆದ ಕೆಲವರು ಕೈಲಾಸವನ್ನು ರಜತಗಿರಿ ಎಂದು ಬಣ್ಣಿಸಿದ್ದಾರೆ.ಆದರೆ ಇದಾವುದೂ ಕೈಲಾಸವಲ್ಲ.ಯೋಗದ ಬಲದಿಂದ ಸಹಸ್ರಾರ ಚಕ್ರವನ್ನು ತಲುಪಿದವರು ಮಾತ್ರ ನಿಜಕೈಲಾಸವನ್ನು ಕಾಣಬಲ್ಲರು.ಸಹಸ್ರಾರದಲ್ಲಿ ಸಹಸ್ರದಳ ಕಮಲಮಧ್ಯೆ ಪವಡಿಸಿರುವ ಪರಶಿವನೇ ಕೈಲಾಸದ ವಟಮೂಲದಲ್ಲಿರುವ ಶಿವನು.ಶಿವನ ಸಭೆಯು ಸಹಸ್ರಗಣರುಗಳಿಂದ ಕೂಡಿದೆ ಎನ್ನುವುದೇ ಸಹಸ್ರದಳ ಕಮಲಕ್ಕರ್ಥ.

ವಿಶ್ವನಿಯಾಮಕನಾದ ಶಿವನು ಪರಬ್ರಹ್ಮನಿರುವುದರಿಂದ ಅವನಿಗೆ ಹುಟ್ಟು ಸಾವುಗಳಿಲ್ಲ.ಪರಮಾತ್ಮನಾದ ಶಿವನು ಲೋಕೋದ್ಧಾರದ ಸಂಕಲ್ಪದಿಂದ ತನ್ನ ಗಣರುಗಳನ್ನು ಭೂಲೋಕಕ್ಕೆ ಕಳಿಸುತ್ತಾನೆ.ಶಿವಗಣರುಗಳೇ ಮರ್ತ್ಯವನ್ನು ಬೆಳಗುವ ಮಹಾದೇವನ ಮನೆಯ ಮಕ್ಕಳಾದ ಶರಣರು,ಸಂತರು,ವಿಭೂತಿಗಳು.ಅವರು ಮರ್ತ್ಯದಲ್ಲಿ ಅವತರಿಸುವಾಗಲೂ ತಮ್ಮ ಪೂರ್ಣತೆಯೊಂದಿಗೆ ಅವತರಿಸಿರುತ್ತಾರೆ.ಮರ್ತ್ಯದ ಜನ್ಮ ಅವರಿಗೆ ಬಾಧಕವಲ್ಲ,ಮರ್ತ್ಯದೊಳಿದ್ದೂ ಮಹಾದೇವನ ಸಂಪರ್ಕದಲ್ಲಿರುತ್ತಾರೆ ಶಿವ ವಿಭೂತಿಗಳು.ಅವರು ಶಿವನಿಂದಲೇ ಪ್ರೇರಣೆ,ಸಂದೇಶಗಳನ್ನು ಪಡೆಯುತ್ತಿರುತ್ತಾರೆ.ಶಿವನ ಲೋಕೋದ್ಧಾರ ಸಂಕಲ್ಪದ ಕಾರಣಿಕ ಶಿಶುಗಳಾಗಿ ಜನಿಸುವ ಶರಣರು- ಸಂತರುಗಳು ಭವಪ್ರಪಂಚವನ್ನು ಶಿವಪ್ರಪಂಚವನ್ನಾಗಿ ಪರಿವರ್ತಿಸುತ್ತಾರೆ.ಶಿವಾತ್ಮರಾದ ವಿಭೂತಿ ಪುರುಷರುಗಳ ಹುಟ್ಟು ಶಿವಲೀಲೆಯ ಕಾರಣದಿಂದ ಆಗಿರುತ್ತದೆಯೇ ಹೊರತು ಅವರು ಕೈಲಾಸದಿಂದ ಸ್ಥಾನಭ್ರಷ್ಟರಾಗಿರುವುದಿಲ್ಲ.ಶಿವನ ಅನಂತ ನಾಮಗಳಲ್ಲಿ ” ಸ್ಥಿರ” ” ಶಾಶ್ವತ” ಎನ್ನುವ ನಾಮಗಳೂ ಇವೆ.ಅಂತಹ ಶಾಶ್ವತನೂ ಸ್ಥಿರನೂ ಸ್ಥಾಣುವೂ ಆದ ಶಿವನ ಸನ್ನಿಧಿಯಲ್ಲಿರುವವರು ಹೇಗೆ ಅಸ್ಥಿರರಾಗುತ್ತಾರೆ,ಅಶಿವರಾಗುತ್ತಾರೆ? ಶಿವ ಮತ್ತು ಕೈಲಾಸಗಳೆರಡೂ ಕವಿಗಳ ಕಲ್ಪನೆಗೆ ಎಟುಕದ ಸಂಗತಿಗಳು; ಪುರಾಣಿಕರ ಬಣ್ಣನೆಗೆ ನಿಲುಕದ ಸತ್ಯ.ಸ್ವಾನುಭವದಿಂದ,ಯೋಗಾನುಭವದಿಂದ ಕೈಲಾಸವನ್ನು ದರ್ಶಿಸಬೇಕಲ್ಲದೆ ಕವಿ- ಪುರಾಣಿಕರುಗಳ ಮಾರ್ಗದಿಂದಲ್ಲ.

About The Author