ರಾಯಚೂರು ಜಿಲ್ಲೆಯ ಜನ ತೆಲಂಗಾಣಕ್ಕೆ ಸೇರುವಷ್ಟು ಅಭಿಮಾನಶೂನ್ಯರಲ್ಲ–ಮುಕ್ಕಣ್ಣ ಕರಿಗಾರ

ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಎರಡುದಿನಗಳ ಹಿಂದೆ ಕರ್ನಾಟಕದ ಗಡಿಯಲ್ಲಿರುವ ವಿಕಾರಾಬಾದಿನ ಕಾರ್ಯಕ್ರಮ ಒಂದರಲ್ಲಿ ” ರಾಯಚೂರು ಜಿಲ್ಲೆಯನ್ನು ತೆಲಂಗಾಣಕ್ಕೆ ಸೇರಿಸಬೇಕೆಂಬ ಬೇಡಿಕೆ ಇದೆ” ಎನ್ನುವ ಮಾತುಗಳನ್ನಾಡಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.ತೆಲಂಗಾಣ ಮುಖ್ಯಮಂತ್ರಿಯವರ ಈ ನಡೆ ಆಕ್ಷೇಪಾರ್ಹ ಮತ್ತು ಒಕ್ಕೂಟ ವ್ಯವಸ್ಥೆಯ ಸಂವಿಧಾನ ಪಾರಮ್ಯದ ಭಾರತಕ್ಕೆ ತಕ್ಕುದಲ್ಲದ ನಡೆ.ತೆಲಂಗಾಣ ರಾಜ್ಯವನ್ನು ಅವರು ಅಭಿವೃದ್ಧಿ ಪಡಿಸಲಿ, ಅದಕ್ಕೆ ಯಾರ ತಕರಾರೂ ಇಲ್ಲ.ಆದರೆ ತೆಲಂಗಾಣದ ಅಭಿವೃದ್ಧಿಯನ್ನು ಮೆಚ್ಚಿಕೊಂಡು ರಾಯಚೂರು ಜಿಲ್ಲೆಯ ಜನರು ತೆಲಂಗಾಣ ಸೇರಬಯಸಿದ್ದಾರೆ ಎನ್ನುವುದು ಸರಿಯಲ್ಲ.ರಾಜಕಾರಣಿಗಳು ಪಕ್ಷಾತೀತವಾಗಿ ಇದನ್ನು ಖಂಡಿಸಬೇಕು ಮತ್ತು ಈ ಕುರಿತು ಕರ್ನಾಟಕ ಸರಕಾರವು ತನ್ನ ನಿಲುವನ್ನು ಸ್ಪಷ್ಟಪಡಿಸಿ ತೆಲಂಗಾಣಮುಖ್ಯಮಂತ್ರಿಯವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಬೇಕು.

ರಾಯಚೂರು ರಾಜ್ಯದಲ್ಲಿ ಹಿಂದುಳಿದ ಜಿಲ್ಲೆಗಳಲ್ಲಿ ಒಂದು ಎಂಬುದು ನಿಜ.ಆದರೆ ಆ ಒಂದೇ ಕಾರಣ ಮುಂದಿಟ್ಟುಕೊಂಡು ರಾಯಚೂರಿನ ಜನತೆ ತೆಲಂಗಾಣರಾಜ್ಯಕ್ಕೆ ಸೇರ್ಪಡೆಯಾಗಲು ಇಷ್ಟಪಡುತ್ತಾರೆ ಎನ್ನುವುದು ಭ್ರಮೆ.ಇತ್ತೀಚಿನ ವರ್ಷಗಳಲ್ಲಿ ರಾಯಚೂರು ಹಿಂದುಳಿದ ಜಿಲ್ಲೆಯ ಹಣೆಪಟ್ಟಿ ಕಳಚಿಕೊಂಡು ಮುಂದುವರೆದ ಜಿಲ್ಲೆಗಳಿಗೆ ತಾನೇನು ಕಡಿಮೆ ಇಲ್ಲ ಎನ್ನುವ ಸ್ಪರ್ಧೆ ಒಡ್ಡುತ್ತಿದೆ.ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಭಿವೃದ್ಧಿ ಯೋಜನೆಗಳು ಜಿಲ್ಲೆಯ ಚಿತ್ರಣವನ್ನು ಬದಲಿಸಲು ನೆರವಾಗುತ್ತಿವೆ.ಕೇಂದ್ರ ಸರ್ಕಾರದ ಬಹುಮಹತ್ವದ ಆಕಾಂಕ್ಷಿಜಿಲ್ಲೆ( aspirational district) ಗಳಲ್ಲಿ ರಾಯಚೂರೂ ಒಂದಾಗಿದ್ದು ಆ ಯೋಜನೆಯಡಿ ಸಾಕಷ್ಟು ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ.ಸಂಸದರ,ಶಾಸಕರುಗಳ ಅನುದಾನದಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತಿವೆ.ಮೂಲಭೂತಸೌಲಭ್ಯಗಳ ಕೊರತೆ ನಿಧಾನವಾಗಿಯಾದರೂ ಕಡಿಮೆ ಆಗುತ್ತಿದೆ.ರಾಯಚೂರು ಜಿಲ್ಲಾ ಕೇಂದ್ರದಲ್ಲಿ ರಾಯಚೂರು ವಿಶ್ವವಿದ್ಯಾಲಯವಿದೆ,ರಾಯಚೂರು ಕೃಷಿ ವಿಶ್ವವಿದ್ಯಾಲಯ ಬಹುಹಿಂದಿನಿಂದಲೂ ಕಾರ್ಯನಿರ್ವಹಿಸುತ್ತಿದೆ.ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ( RIMS) ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿದೆ.ರಾಯಚೂರಿನಲ್ಲಿ ವಿಶೇಷ ಸೌಲಭ್ಯ ಉಳ್ಳ ಆಸ್ಪತ್ರೆಗಳಿವೆ,ಪರಿಣತ ವೈದ್ಯರುಗಳಿದ್ದಾರೆ.ಏನಿಲ್ಲ ಹೇಳಿ ರಾಯಚೂರಿನಲ್ಲಿ ತೆಲಂಗಾಣಕ್ಕೆ ಸೇರುವ ಅನಿವಾರ್ಯತೆಯ ಕೊರತೆಯಾಗಿ?

ಮೊದಲಿನಿಂದಲೂ ಹೈದರಾಬಾದ್ ಮತ್ತಿತರ ನಗರಗಳೊಂದಿಗೆ ವ್ಯಾಪಾರ ವಹಿವಾಟು ನಡೆಸುತ್ತಿರುವ ಕಾರಣಕ್ಕೆ ರಾಯಚೂರು ಜಿಲ್ಲೆಯ ಜನತೆ ತೆಲಂಗಾಣದೊಂದಿಗೆ ಸಂಪರ್ಕವಿರಿಸಿಕೊಂಡಿದ್ದಾರೆಯೇ ಹೊರತು ತೆಲಂಗಾಣಕ್ಕೆ ಸೇರಬೇಕು ಎನ್ನುವ ಮನೋಭಾವನೆ ಜಿಲ್ಲೆಯ ಜನತೆಯಲ್ಲಿಲ್ಲ.ರಾಯಚೂರು ಜಿಲ್ಲೆಯ ಜನತೆ ಉದಾರಿಗಳು,ಅಭಿವೃದ್ಧಿಯಲ್ಲಿ ಆಗುತ್ತಿರುವ ತಾರತಮ್ಯವನ್ನು ಸಹಿಸಿಕೊಂಡೂ ಅಖಂಡ ಕರ್ನಾಟಕಕ್ಕೆ ಸೇರಿದವರು ಎನ್ನುವ ಹೆಮ್ಮೆ- ಅಭಿಮಾನಗಳನ್ನುಳ್ಳ ‘ಅಭಿಮಾನಧನರು’. ಭಾಷಾವಾರು ಪ್ರಾಂತ್ಯಗಳಂತೆ ಭಾರತವು ವಿಭಜನೆಗೊಂಡಾದ ಬಳಿಕ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಸಂವಿಧಾನಬದ್ಧರಾಗಿ ನಡೆದುಕೊಳ್ಳಬೇಕಾದ ಕೆ.ಚಂದ್ರಶೇಖರರಾವ್ ಅವರು ಇಂತಹ ಹೇಳಿಕೆಗಳನ್ನು ನೀಡುವುದು ಶೋಭೆಯಲ್ಲ.ಅವರ ರಾಜ್ಯವಿಸ್ತರಾಣಾಕಾಂಕ್ಷೆಗೆ ಭಾರತವೇನು ಅರಸೊತ್ತಿಗೆಯ ಕಾಲದಲ್ಲಿ ಇಲ್ಲ,ಇದು ಪ್ರಜಾಪ್ರಭುತ್ವಭಾರತ,ವಿಶ್ವಮಾನ್ಯ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆಯುತ್ತಿರುವ ಆಧುನಿಕ ಭಾರತ.ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರು ಭಾರತದ ಸಂವಿಧಾನ,ಒಕ್ಕೂಟ ವ್ಯವಸ್ಥೆಗೆ ಗೌರವಕೊಟ್ಟು ಸ್ವಾಭಿಮಾನಶೂರರಾದ ಕನ್ನಡಿಗರನ್ನು,ಹೃದಯಸಂಪನ್ನರಾದ ರಾಯಚೂರಿನ ಜನತೆಯನ್ನು ಕೆರಳಿಸುವ ಪ್ರಯತ್ನ ನಿಲ್ಲಿಸಲಿ.

About The Author