ಅರಿವಿನ ಮನೆ,ಗುರುವಿನ ಮನೆ ಕಟ್ಟಿದ ಕರಿಗಾರರು ಅಧಿಕಾರಿಗಳಿಗೆ ಆದರ್ಶ,ಸಮಾಜ ಬದ್ಧತೆಯಿಂದ ದುಡಿಯುವವರಿಗೆ ಸ್ಫೂರ್ತಿ–ಎಚ್ ಎಸ್ ಶಿವಪ್ರಕಾಶ

ಗಬ್ಬೂರು ಅಗಸ್ಟ್ ೧೨,

ನಮ್ಮ ಬಹಳಷ್ಟು ಜನ ಅಧಿಕಾರಿಗಳು ಜನಪರ ಬದ್ಧತೆಯಿಂದ ಕೆಲಸ ಮಾಡದೆ ಸ್ವಾರ್ಥ,ಅಹಂಕಾರ ಮತ್ತರಾಗಿ ಸಮಾಜಕ್ಕೆ ಬಾಧಕರಾಗಿರುವ ದಿನಗಳಲ್ಲಿ ಮುಕ್ಕಣ್ಣ ಕರಿಗಾರ ಅವರು ತಮ್ಮ ದುಡಿಮೆಯ ಸಂಪಾದನೆಯಲ್ಲಿ ಸತ್ಕಾರ್ಯಗಳನ್ನೆಸಗುತ್ತ ಸಮಾಜಪರ ಕಾಳಜಿಯಿಂದ ದುಡಿಯುತ್ತಿರುವುದನ್ನು ನೋಡಿದಾಗ ಬಸವಣ್ಣನವರ ನೆನಪಾಗುತ್ತದೆ.ಬಿಜ್ಜಳನ ಭಂಡಾರಿ,ಪ್ರಧಾನಿಯಾಗಿಯೂ ಬಿಜ್ಜಳನ ಭಂಡಾರದ ಧನಕ್ಕೆಳಸದೆ ‘ ಶಿವನಿತ್ತ ಸಂಪದದಿಂದ ಮಹತ್ಕಾರ್ಯಗಳನ್ನು ಸಾಧಿಸಿ,’ ಭವಿ ಬಿಜ್ಜಳನಿಗೆ ಆನಂಜುನೆ?’ ಎಂದು ಪ್ರಶ್ನಿಸುವ ಎದೆಗಾರ್ಕೆ ಮೆರೆದಿದ್ದರು ಬಸವಣ್ಣನವರು.ಕರಿಗಾರರು ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳಂತಹ ಯೋಗಿಶ್ರೇಷ್ಠರ ಶಿಷ್ಯರಾಗಿ ತಪಸ್ವಿಗಳ ಲೋಕಕಲ್ಯಾಣ ಕಾರ್ಯವನ್ನು ಮುಂದುವರೆಸಿ ಜನರಿಗೆ,ಅಧಿಕಾರಿಗಳಿಗೆ ಆದರ್ಶರಾಗಿದ್ದಾರೆ.ನಮ್ಮ ಅಧಿಕಾರಿಗಳು ಒಕ್ಕಣ್ಣರಾದರೆ ಕರಿಗಾರರು ಮುಕ್ಕಣ್ಣನವರಾಗಿದ್ದಾರೆ.ಅಂತಃಶ್ಚಕ್ಷುವನ್ನು ಎಚ್ಚರಿಸಿಕೊಂಡು ಸಮಾಜಮುಖಿಯಾಗಿ ದುಡಿಯುತ್ತಿರುವ ಮುಕ್ಕಣ್ಣನವರು ತಮ್ಮಂತೆಯೇ ‘ಮುಕ್ಕಣ್ಣ’ರ ಪಡೆಯನ್ನು ಕಟ್ಟಿ,ನಾಡು ದೇಶಗಳನ್ನು ಕಟ್ಟಲಿ.ಇಂದಿನ ವಿಷಮಯ,ಪ್ರಕ್ಷುಪ್ತ ದಿನಗಳಲ್ಲಿ ಸಹೋದರತೆ- ಬಾಂಧವ್ಯಗಳು ವೃದ್ಧಿಯಾಗಿ,ಮನುಷ್ಯತ್ವ ಎದ್ದು,ಮೆರೆಯಲಿ’ ಎಂದು ಕನ್ನಡದ ಹೆಸರಾಂತ ಕವಿ,ನಾಟಕಕಾರ ಎಚ್ ಎಸ್ ಶಿವಪ್ರಕಾಶ ಅವರು ನುಡಿದರು.ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದಲ್ಲಿ ಅಗಸ್ಟ್ ೧೨ ರ ನೂಲಹುಣ್ಣಿಮೆಯಂದು ಏರ್ಪಡಿಸಿದ್ದ ಧಾರವಾಡದ ತಪೋವನದ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರ ೧೧೩ ನೇ ಹುಟ್ಟುಹಬ್ಬ ” ಮಹಾಶೈವ ಗುರುಪೂರ್ಣಿಮೆ” ಯ ಆಚರಣೆ ಸಮಾರಂಭದಲ್ಲಿ ತನ್ನಿಮಿತ್ತವಾಗಿ ಪ್ರದಾನಿಸಲ್ಪಟ್ಟ ” ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯ ಭೂಷಣ ಪ್ರಶಸ್ತಿ” ಯನ್ನು ಸ್ವೀಕರಿಸಿ ಮಾತನಾಡಿದರು.

 

 

ಮುಂದುವರೆದು ಮಾತನಾಡುತ್ತ ಎಚ್ ಎಸ್ ಶಿವಪ್ರಕಾಶ ಅವರು ” ಶೈವ ಮತ್ತು ಶಾಕ್ತಪರಂಪರೆಗಳು ಜಾತ್ಯಾತೀತ ಧಾರ್ಮಿಕ ಪರಂಪರೆಗಳಾಗಿದ್ದು ಶೈವ ಶಾಕ್ತ ಸಮನ್ವಯದ ಪಂಥವಾಗಿರುವ ಮಹಾಶೈವವು ಭಾರತದ ಬಹುಪುರಾತನ ಆರಾಧನಾ ಪರಂಪರೆಯಾಗಿದ್ದು ಅದು ಜೀವಪರವಾದುದು,ಜನಪರವಾದುದು.ಶರಣರು,ಸಂತರುಗಳು ಜಾತಿ ಮತಗಳಾಚೆ ಇರುವ ಮನುಷ್ಯತ್ವವನ್ನು ಎತ್ತಿಹಿಡಿದು ಲೋಕಕಲ್ಯಾಣವನ್ನು ಸಾಧಿಸಿದರು. ಎಲ್ಲ ಧರ್ಮಗಳ ಉದ್ದೇಶ ಲೋಕಕಲ್ಯಾಣ ಮತ್ತು ಆತ್ಮ ಕಲ್ಯಾಣ.ಆತ್ಮಕಲ್ಯಾಣವೆಂದರೆ ಸ್ವಾರ್ಥಸಾಧನೆಯಲ್ಲ,ಆತ್ಮವನ್ನು ಎಚ್ಚರಿಸಿಕೊಂಡು,ಆತ್ಮಸಾಕ್ಷಾತ್ಕಾರದ ಬೆಳಕಿನಲ್ಲಿಲೋಕಕ್ಕೆ ಮಾರ್ಗದರ್ಶಕರಾಗುವುದು.ಶರಣಚಳುವಳಿ,ಭಕ್ತಿ ಚಳುವಳಿ ಉತ್ತರಭಾರತದ ಕಬೀರ ಪರಂಪರೆ ಮೊದಲಾದವುಗಳು ಇಂತಹ ಜನಬದ್ಧತೆಯ,ಜನತೋದ್ಧಾರದ ಸಮಾಜೋಧಾರ್ಮಿಕ ಸುಧಾರಣೆಯ ಪ್ರಯತ್ನಗಳು” ಎಂದರು.
ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳ ಹೆಸರಿನಲ್ಲಿ ಕೊಡಮಾಡುತ್ತಿರುವ ” ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯ ಭೂಷಣ ಪ್ರಶಸ್ತಿಯನ್ನು ” ನಾನು ಪ್ರಶಸ್ತಿ ಎಂದು ಭಾವಿಸದೆ ನನಗೆ ನೀಡುತ್ತಿರುವ ಆಶೀರ್ವಾದ ಎಂದೇ ಭಾವಿಸುತ್ತೇನೆ” ಎಂದ ಎಚ್ ಎಸ್ ಶಿವಪ್ರಕಾಶ ಅವರು ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರನ್ನು ತಾವು ಒಂದು ಬಾರಿ ಕಂಡಿದ್ದು ಇಂದು ಅವರ ಆಶೀರ್ವಾದವೇ ಈ ಪ್ರಶಸ್ತಿಯನ್ನು ಕೊಡಿಸಿದೆ ಎಂದು ಸ್ಮರಿಸಿಕೊಂಡರಲ್ಲದೆ “ಎರಡು ವರ್ಷಗಳ ಹಿಂದೆ ನಾನು ಧಾರವಾಡದ ತಪೋವನಕ್ಕೆ ಹೋಗಿ ಕಸಿವಿಸಿಗೊಂಡಿದ್ದೆ.ಇಲ್ಲಿ ಮುಕ್ಕಣ್ಣನವರು ಮಹಾತಪಸ್ವಿಗಳ ಸ್ಮರಣಾರ್ಥ ನಡೆಸುತ್ತಿರುವ ಸೇವೆ,ಕಾರ್ಯಚಟುವಟಿಕೆಗಳನ್ನು ಕಂಡು ಸಂತಸಗೊಂಡೆ,ಮುಕ್ಕಣ್ಣ ಕರಿಗಾರ ಅವರು ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳ ನಿಜಾರ್ಥದ ಉತ್ತರಾಧಿಕಾರಿಗಳಾಗಿ ತಪಸ್ವಿಗಳಿತ್ತ ಲೋಕಸೇವಾದೀಕ್ಷೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ,ಅಭಿಮಾನದ ಸಂಗತಿ” ಎಂದು ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರನ್ನು ಕಂಡು ಅವರ ಆಶೀರ್ವಾದ ಪಡೆದಿದ್ದ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಹಿರಿಯ ಸಾಹಿತಿ ಶಾಶ್ವತಯ್ಯ ಮುಕ್ಕುಂದಿ ಮಠ ಅವರು ” ಗಬ್ಬೂರು ಐತಿಹಾಸಿಕ ಸ್ಥಳವಾಗಿ ಪ್ರಸಿದ್ಧಿಯನ್ನು ಪಡೆದ ನಗರವಾದರೆ ಈಗ ಮಹಾಶೈವ ಧರ್ಮಪೀಠದ ಕೈಲಾಸವು ಗಬ್ಬೂರಿನ ಕೀರ್ತಿಪತಾಕೆಯನ್ನು ದಿಗಂತವ್ಯಾಪಿಯಾಗಿ ಹರಡುತ್ತಿದೆ.ಮಹಾಶೈವ ಧರ್ಮಪೀಠದಲ್ಲಿ ಹತ್ತು ಹದಿನೈದು ವರ್ಷಗಳಿಂದ ನಿರಂತರವಾಗಿ ಧಾರ್ಮಿಕ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಚಟುವಟಿಕೆಗಳು ನಡೆಯುತ್ತಿರುವುದನ್ನು ನೋಡಿದರೆ ಈ ನೆಲದ ಸತ್ತ್ವವಿಶೇಷವೆಂದೇ ಮನದಟ್ಟಾಗುತ್ತಿದೆ.ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರ ಆಶೀರ್ವಾದದ ಬಲದಿಂದ ಮುಕ್ಕಣ್ಣ ಕರಿಗಾರ ಅವರು ಮಹಾಶೈವ ಧರ್ಮಪೀಠವನ್ನು ಕಟ್ಟಿ ಧಾರ್ಮಿಕ ಪ್ರಜ್ಞೆಯನ್ನು ಎಚ್ಚರಿಸುತ್ತಿದ್ದಾರೆ.ಮಹಾತ್ಮರ ಅನುಗ್ರಹದಿಂದ ಮಹಾಪುರುಷರು ಉದಯಿಸುತ್ತಾರೆ ಎನ್ನುವುದಕ್ಕೆ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರ ಆಶೀರ್ವಾದ ಬಲದಿಂದ ಉನ್ನತ ಅಧಿಕಾರಿಯಾಗಿ ಸಮಾಜಪರರಾಗಿ ದುಡಿಯುತ್ತಿರುವ ಮುಕ್ಕಣ್ಣ ಕರಿಗಾರ ಅವರೇ ಸಾಕ್ಷಿ.ಮುಂದಿನ ದಿನಗಳಲ್ಲಿ ಗಬ್ಬೂರಿನ ಇತಿಹಾಸವನ್ನು ಬರೆಯುವವರು ಮಹಾಶೈವ ಧರ್ಮಪೀಠದ ಇತಿಹಾಸದಿಂದಲೇ ಗಬ್ಬೂರಿನ ಇತಿಹಾಸವನ್ನು ಬರೆಯಬೇಕಾಗುತ್ತದೆ” ಎಂದರು.

ಡಾ. ಎಚ್ ಎಸ್ ಶಿವಪ್ರಕಾಶ ಅವರ ಬದುಕು- ಬರಹಗಳ ಬಗ್ಗೆ ಪರಿಚಯ ಭಾಷಣ ಮಾಡಿದ ಬಸವರಾಜ ಭೋಗಾವತಿಯವರು ಎಚ್ ಶಿವಪ್ರಕಾಶ ಅವರು ಕನ್ನಡದ ಗಣ್ಯಲೇಖರಲ್ಲಿ ಒಬ್ಬರಾಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಮಹತ್ವದ ಪ್ರಶಸ್ತಿಗಳನ್ನು ಪಡೆದವರು.ಇವರ ಕೃತಿಗಳು ಸ್ಪ್ಯಾನಿಸ್,ಇಟಾಲಿಯನ್,ಇಂಗ್ಲೀಷ ಸೇರಿದಂತೆ ಪ್ರಪಂಚದ ಹದಿಮೂರು ಭಾಷೆಗಳಿಗೆ ಅನುವಾದಗೊಂಡಿರುವುದು ಅವರ ಸಾಹಿತ್ಯದ ಸತ್ತ್ವದ ನಿದರ್ಶನ.ಮಹಾಶೈವ ಧರ್ಮಪೀಠದಿಂದ ಪ್ರಶಸ್ತಿಯನ್ನು ಪಡೆಯುವ ಮೂಲಕ ಎಚ್ ಎಸ್ ಶಿವಪ್ರಕಾಶ ಅವರು ಮತ್ತಷ್ಟು ಹಿರಿಮೆ- ಗರಿಮೆಯ ಶ್ರೇಯಸ್ಸಿಗೆ ಪಾತ್ರರಾಗಲಿದ್ದಾರೆ” ಎಂದರು.
ತಮ್ಮ ಮಾತುಗಳನ್ನು ಮುಂದುವರೆಸಿ ಮಾತನಾಡಿದ ಭೋಗಾವತಿಯವರು ” ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಮುಕ್ಕಣ್ಣ ಕರಿಗಾರ ಅವರು ಸರಕಾರದ ಉನ್ನತ ಹುದ್ದೆಯಲ್ಲಿದ್ದೂ ಅತ್ಯಂತ ಸರಳವಾಗಿ ಬದುಕುತ್ತಿರುವುದು ನಮಗೆಲ್ಲರಿಗೆ ಸ್ಫೂರ್ತಿದಾಯಕವಾದುದು.ಸರಕಾರದ ಸಣ್ಣ ನೌಕರಿಯಲ್ಲಿ ಇದ್ದವರೇ ಕೋಡು ಮೂಡಿಸಿಕೊಂಡು ಬದುಕುತ್ತಿರುವ ದಿನಗಳಲ್ಲಿ ಉನ್ನತ ಸರಕಾರಿ ಅಧಿಕಾರಿಗಳಾಗಿಯೂ ಗತ್ತು ಗರ್ವಗಳಿಗೆ ಆಸ್ಪದೆ ನೀಡದೆ ಕೈ ಬಾಯಿಗಳನ್ನು ಸ್ವಚ್ಛವಾಗಿಟ್ಟುಕೊಂಡು ಗುರುಮಾರ್ಗದಲ್ಲಿ ನಡೆದು ಗುರುವಾಗಿದ್ದಾರೆ,ಆದರ್ಶರಾಗಿದ್ದಾರೆ.ಸರಕಾರದ ದೊಡ್ಡ ಅಧಿಕಾರಿಯಾಗಿದ್ದರೂ ಸಣ್ಣದೊಂದು ಮನೆಯಲ್ಲಿ ಕುಟುಂಬ ಸಮೇತವಾಸಮಾಡುತ್ತಿರುವುದನ್ನು ಕಂಡು ಆಶ್ಚರ್ಯಚಕಿತರಾಗಿದ್ದ ಬಳ್ಳಾರಿಯ ಕುಮಾರಸ್ವಾಮಿ ಎನ್ನುವ ಅವರ ಆಧೀನದ ಅಧಿಕಾರಿಯವರಿಗೆ ಮುಕ್ಕಣ್ಣ ಕರಿಗಾರ ಅವರು ಹೇಳಿದ್ದ ಮಾತು ” ನಾನು ಅರಮನೆಯನ್ನು ಕಟ್ಟಲು ಬಂದವನಲ್ಲ,ಅರಿವಿನ ಮನೆಯನ್ನು ಕಟ್ಟಲು ಬಂದವನು” ನಮ್ಮೆಲ್ಲರ ನಿತ್ಯಸ್ಫೂರ್ತಿಯ ಮಾತಾಗಿದೆ ” ಎಂದರು.

ಕಾರ್ಯಕ್ರಮ ನಿರೂಪಿಸಿದ ಡಾ. ಎನ್ ಹೆಚ್ ಪೂಜಾರ ಅವರು ಮಹಾಶೈವ ಧರ್ಮಪೀಠದ ಹುಟ್ಟು,ಬೆಳವಣಿಗೆಗಳನ್ನು ವಿವರಿಸುತ್ತ ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಮಹಾಶೈವ ಧರ್ಮಪೀಠವು ಹಮ್ಮಿಕೊಂಡ ಅಸಂಖ್ಯಾತ ಕಾರ್ಯಕ್ರಮಗಳು,ಇಲ್ಲಿ ಪುರಸ್ಕೃತರಾದ ಡಾ.ಚಂದ್ರಶೇಖರ ಕಂಬಾರ ಅವರನ್ನು ಮೊದಲ್ಗೊಂಡ ಕನ್ನಡದ ಹಿರಿಯ ಚೇತನರುಗಳು,ಅನುಭಾವ ಕವಿಗೋಷ್ಠಿ,ಚಿಂತನಗೋಷ್ಠಿಗಳಲ್ಲಿ ಪಾಲ್ಗೊಂಡ ನಾಡಿನ ಧೀಮಂತ ಪ್ರತಿಭೆಗಳ ಹೆಸರುಗಳನ್ನು ಉಲ್ಲೇಖಿಸಿ ಕೈಲಾಸವು ಗಬ್ಬೂರಿನಲ್ಲಿದೆಯೋ,ಗಬ್ಬೂರೇ ಕೈಲಾಸದಲ್ಲಿಯೇ ಎನ್ನುವ ಶಿವಾತ್ಮಭಾವ ಜಾಗೃತಿಯ ಕೇಂದ್ರವಾಗಿ ಮಹಾಶೈವ ಧರ್ಮಪೀಠವು ಬೆಳೆದು ಬಂದ ಬಗೆಯನ್ನು ವಿವರಿಸಿ ,ಸರ್ವವನ್ನು ಶಿವಾರ್ಪಣವೆಂದು ಮುಕ್ಕಣ್ಣ ಕರಿಗಾರ ಅವರು ತಮಗಾಗಿ ಏನನ್ನೂ ಇಟ್ಟುಕೊಳ್ಳದೆ ಎಲ್ಲವನ್ನು ಶಿವಕಾರ್ಯಕ್ಕೆ ವಿನಿಯೋಗಿಸುತ್ತಿರುವುದರಿಂದ ಮಹಾಶೈವ ಧರ್ಮಪೀಠವು ಹತ್ತು ಹದಿನೈದು ವರ್ಷಗಳ ಅವಧಿಯಲ್ಲೇ ನಾಡಿನ ಜಾಗೃತ ಶಿವಕ್ಷೇತ್ರ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ ಎಂದರು.

ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಡಾ. ಎಚ್ ಎಸ್ ಶಿವಪ್ರಕಾಶ ಅವರಿಗೆ ” ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯ ಭೂಷಣ ಪ್ರಶಸ್ತಿ” ಯನ್ನು ಕೊಡಮಾಡಿ ಮಾತನಾಡಿದ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಮುಕ್ಕಣ್ಣ ಕರಿಗಾರ ಅವರು ” ಎಚ್ ಎಸ್ ಶಿವಪ್ರಕಾಶ ಅವರು ಕನ್ನಡದ ಅತಿಮಹತ್ವದ ಸಾಹಿತಿಗಳಲ್ಲೊಬ್ಬರು.ಸಾಹಿತ್ಯವು ಜನರ ವೇದನೆ ಸಂವೇದನೆಗಳಿಗೆ ಅಭಿವ್ಯಕ್ತಿ ಮಾಧ್ಯಮವಾಗಬಲ್ಲದು ಎನ್ನುವುದನ್ನು ಸಮರ್ಥವಾಗಿ ತೋರಿಸಿದ ಲೋಕದೃಷ್ಟಿಯ ಸಾಹಿತಿಗಳು.ಅವರ ಕಾವ್ಯ,ನಾಟಕಗಳು ನಿರ್ಲಕ್ಷಿತ ಸಮುದಾಯಗಳ ಆಸೆ ಕನಸುಗಳನ್ನು ಕಟ್ಟಿಕೊಡುತ್ತವೆ.ಕನ್ನಡ ಪುರಾಣ ಪ್ರಪಂಚದಿಂದ ಆಯ್ದುಕೊಂಡ ಕಥನಗಳನ್ನು ಜನಸಮುದಾಯದ ಕನಸು ಕನವರಿಕೆಗಳಲ್ಲಿ ಕಣ್ಣಲ್ಲಿ ಕಟ್ಟಿಕೊಟ್ಟಿದ್ದಾರೆ.’ ಸಿಂಗಿರಾಜನ ಸಂಪಾದನೆ’ ಎಚ್ ಎಸ್ ಶಿವಪ್ರಕಾಶ ಅವರ ಶ್ರೇಷ್ಠಕವನ ಮಾತ್ರವಲ್ಲದೆ ಕನ್ನಡದ ಶ್ರೇಷ್ಠ,ಪ್ರಾತಿನಿಧಿಕ ಕವನಗಳಲ್ಲೊಂದು.ಇತಿಹಾಸವನ್ನು ವರ್ತಮಾನಕ್ಕೆ ಮುಖಾಮುಖಿಯಾಗಿಸುವಲ್ಲಿ ಸಮುದಾಯ ಪರಧ್ವನಿ ಎತ್ತುವ ಎಚ್ ಎಸ್ ಶಿವಪ್ರಕಾಶ ಅವರು ಈ ಕಾರಣದಿಂದಾಗಿಯೇ ವಿಶಿಷ್ಟರಾಗಿದ್ದಾರೆ.ತಮ್ಮ ಈ ವೈಶಿಷ್ಟ್ಯದಿಂದಾಗಿಯೇ ಅವರು ಕನ್ನಡದಲ್ಲಿ ಕುವೆಂಪು,ಬೇಂದ್ರೆ,ಅಡಿಗರಂತೆಯೇ ಅಸಂಖ್ಯಾತ ಕವಿಗಳನ್ನು ಪ್ರಭಾವಿಸಿದ್ದಾರೆ.’ಮಂಟೆಸ್ವಾಮಿ ಕಥಾ ಪ್ರಸಂಗ’ ಸಮಗಾರ ಭೀಮವ್ವ’ ಕೃತಿಗಳಲ್ಲಿ ಅವರ ಶಿವದೃಷ್ಟಿ,ಸರ್ವೋದಯ ದೃಷ್ಟಿ ಎದ್ದು ಕಾಣುತ್ತಿದೆ.ಸಾಹಿತ್ಯದಿಂದ ಲೋಕಸೇವೆ ಸಾಧ್ಯವೆಂಬುದನ್ನು ನಿರೂಪಿಸುತ್ತ ಸಮಾಜಕ್ಕಂಟಿದ ಅಶಿವಭಾವವನ್ನು ಕಳೆದು ಶಿವಭಾವ ಜಾಗೃತಿಯನ್ನುಂಟು ಮಾಡುತ್ತಿರುವ ಎಚ್ ಎಸ್ ಶಿವಪ್ರಕಾಶ ಅವರು ಕನ್ನಡದ ಶಿವ ಸಾಹಿತಿ,ಸಂತಸಾಹಿತಿ.ಕುವೆಂಪು ಅವರ ನಂತರ ಕುವೆಂಪು ಅವರ ಎತ್ತರಕ್ಕಲ್ಲದಿದ್ದರೂ ತಮ್ಮ ನಿಲುವಿಗೆಟುಕಿದ ಅನುಭಾವ,ಆಧ್ಯಾತ್ಮಿಕ ಸಾಧನೆ ಸಿದ್ಧಿಗಳಿಂದ ಸ್ವಯಂಪರಂಪರೆ ಒಂದನ್ನು ಸೃಷ್ಟಿಸಿದ ಸಿದ್ಧಸಾಹಿತಿ,ಸಾಹಿತಿ ಸಿದ್ಧ ಶಿವಪ್ರಕಾಶ ಅವರು ಜ್ಞಾನಪೀಠ ಪ್ರಶಸ್ತಿ ಪಡೆದು ಕನ್ನಡದ ಕೀರ್ತಿಯನ್ನು ಬೆಳಗಿಸಲಿ” ಎಂದು ಹಾರೈಸಿ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರ ಭವ್ಯೋಜ್ವಲವಾದ ಯುಗಸಂತನ ದಾರ್ಶನಿಕ,ಋಷಿ ವ್ಯಕ್ತಿತ್ವದ ಸಾಧನೆ ಸಿದ್ಧಿ- ಪ್ರಸಿದ್ಧಿಗಳನ್ನು ಬಣ್ಣಿಸಿದರು.

ಮಹಾಶೈವ ಧರ್ಮಪೀಠ ಸಾಂಸ್ಕೃತಿಕ ಸಮಿತಿಯ ಸದಸ್ಯರಾದ ಬಸವರಾಜ ಸಿನ್ನೂರು,ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ದೇಸಾಯಿ ಮತ್ತು ಪ್ರಾಂಶುಪಾಲ ಈರಣ್ಣ ಮರ್ಲಟ್ಟಿ ವೇದಿಕೆಯಲ್ಲಿದ್ದರು.ಪ್ರಶಸ್ತಿ ಪುರಸ್ಕೃತರಾದ ಡಾ. ಎಚ್ ಎಸ್ ಶಿವಪ್ರಕಾಶ ಅವರನ್ನು ಗಬ್ಬೂರಿನ ವಿದ್ಯಾಜ್ಯೋತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಚೆನ್ನಪ್ಪ ಬೂದಿನಾಳ, ವಿರುಪಾಕ್ಷೇಶ್ವರ ಪತ್ತಿನ ಸಹಕಾರಿ ಬ್ಯಾಂಕಿನ ಮ್ಯಾನೇಜರ್ ಜಗದೀಶ,ಪಿಡಿಒಗಳ ಪರವಾಗಿ ರಘುನಂದನ ಪೂಜಾರಿ, ಕಾರ್ಯದರ್ಶಿಗಳ ಪರವಾಗಿ ಹುಲಗಪ್ಪ ಸೆಕ್ರೆಟರಿ,ಗ್ರಾಮದ ಪರವಾಗಿ ಕೆ ಬಸ್ಸಪ್ಪ ಸಾಹುಕಾರ ಮೊದಲಾದವರು ಹೂಹಾರಗಳಿಂದ ಸನ್ಮಾನಿಸಿದರು.

ಕಾರ್ಯಕ್ರಮದ ಅಂಗವಾಗಿ ಶಿಕ್ಷಣ ಕ್ಷೇತ್ರದ ಸೇವೆಗಾಗಿ ವಿದ್ಯಾಜ್ಯೋತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಚೆನ್ನಪ್ಪ ಬೂದಿನಾಳ ಅವರನ್ನು,ಗ್ರಾಮೀಣಾಭಿವೃದ್ಧಿ ಕ್ಷೇತ್ರದ ಸೇವೆಗಾಗಿ ಗಲಗ ಪಿಡಿಒ ರಘುನಂದನ್ ಪೂಜಾರಿಯವರನ್ನು,ಸಮಾಜಮುಖಿ ಕಾರ್ಯಚಟುವಟಿಕೆಗಳಿಗಾಗಿ ಬಸ್ಸಣ್ಣ ನಾಯಕ ಗುತ್ತೆದಾರರನ್ನು,ಸಾಹಿತ್ಯ ಚಟುವಟಿಕೆಗಳಿಗಾಗಿ ಬಸವರಾಜ ಬ್ಯಾಗವಾಟ ಮತ್ತು ಸಮಾಜಮುಖಿ ಕಾರ್ಯಚಟುವಟಿಕೆಗಳಿಗಾಗಿ ಯುವಬ್ರಿಗೇಡ್ ತಂಡದ ಮುಖ್ಯಸ್ಥ ನಾಗರಾಜ ಅವರುಗಳನ್ನು ಸನ್ಮಾನಿಸಿ,ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಮಹಾಶೈವ ಧರ್ಮಪೀಠದ ಶಿಷ್ಯರುಗಳು,ಭಕ್ತರುಗಳು,ಅನುಯಾಯಿಗಳು ಗಬ್ಬೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರುಗಳು ಪಾಲ್ಗೊಂಡಿದ್ದರು.ಬಸವಲಿಂಗ ಕರಿಗಾರ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು

ಬಸವರಾಜ ಕರೆಗಾರ
ಸಂಪಾದಕರು ಕರುನಾಡ ವಾಣಿ ಮತ್ತು ವಾರ್ತಾಧಿಕಾರಿ ಮಹಾಶೈವ ಧರ್ಮಪೀಠ

About The Author