ಶ್ರಾವಣ ಸಂಜೆ | ಶ್ರೀ ಶಿವ ಮಹಾಪುರಾಣ ವ್ಯಾಖ್ಯಾನ –೦೯ | ಮುಕ್ಕಣ್ಣ ಕರಿಗಾರ

ಪಂಚಾಕ್ಷರ ಮಂತ್ರಜಪದಿಂದ ದೊರೆಯುವ ಫಲಗಳು

ಶಿವನ ಸ್ವರೂಪವೇ ಆದ ಓಂಕಾರ ಪ್ರಣವ ಮಹಿಮೆ ಮತ್ತು ಶಿವನಿಂದ ಮಂತ್ರೋಪದೇಶ ಪಡೆದು ಬ್ರಹ್ಮ- ವಿಷ್ಣುಗಳಿಬ್ಬರು ಮಹಿಮೆಪಡೆದುದನ್ನು ಸೂತಮುನಿಯಿಂದ ಕೇಳಿ ಪರಮಾನಂದ ಹೊಂದಿದ ಋಷಿಗಳು ಮತ್ತೆ ಪ್ರಶ್ನೆ ಮಾಡುವರು ;
ಋಷಿಗಳು —ಸೂತಮುನಿಗಳೆ,ನಿಮ್ಮಿಂದ ಪರಬ್ರಹ್ಮನಾದ ಶಿವನ ಮಹಿಮೆಯನ್ನು ಕೇಳುತ್ತ ಹರ್ಷಗೊಳ್ಳುತ್ತಲಿರುವೆವು.ಶಿವನ ಮಹಿಮೆಯನ್ನು ಎಷ್ಟು ಕೇಳಿದರೂ ಸಾಲದು,ಶಿವಲೀಲೆಯನ್ನು ಎಷ್ಟು ಕೊಂಡಾಡಿದರೂ ತೃಪ್ತಿ ಎನಿಸದು.ಈಗ ನಮ್ಮ ಮೇಲೆ ಪ್ರೀತಿಯುಳ್ಳವನಾಗಿ ನಮ್ಮ ಕುತೂಹಲವನ್ನು ತಣಿಸುವವನಾಗು.” ಲಿಂಗವನ್ನು ಸ್ಥಾಪಿಸುವ ವಿಧಾನವೇನು? ಅದರ ಲಕ್ಷಣವೇನು? ಲಿಂಗಪೂಜಾ ವಿಧಾನ ಯಾವುದು? ಲಿಂಗಪೂಜೆಗೆ ಪ್ರಶಸ್ತವಾದ ದೇಶಕಾಲಗಳಾವುವು ? ಸಾಧನಗಳಾವುವು?”

ಋಷಿಗಳ ಪ್ರಶ್ನೆಗಳಿಗೆ ಸೂತನು ಉತ್ತರಿಸುವನು–” ಋಷಿಗಳೆ ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರಿಸುವೆನು,ಲಕ್ಷ್ಯವಿಟ್ಟು ಕೇಳಿರಿ.ಶಿವನ ಲಿಂಗವನ್ನು ಅನುಕೂಲವಾದ ಒಂದು ಶುಭ ಮುಹೂರ್ತದಲ್ಲಿ ಒಂದು ತೀರ್ಥಕ್ಷೇತ್ರದಲ್ಲಿಯೋ,ನದಿ ಅಥವಾ ಸರೋವರದ ದಡದಲ್ಲಿಯೋ ಸ್ಥಾಪಿಸಬಹುದು.ಎಲ್ಲಿಯೇ ಸ್ಥಾಪಿಸಲಿ ಆ ಲಿಂಗಕ್ಕೆ ನಿತ್ಯವೂ ಪೂಜೆ ನಡೆಯುತ್ತಿರಬೇಕು.ಪಾರ್ಥಿವ,ಆಪ್ಯ ಅಥವಾ ತೈಜಸ ಲಿಂಗಗಳು ಕಲ್ಪೋಕ್ತ ಲಕ್ಷಣಯುಕ್ತವಾಗಿದ್ದರೆ ಪೂಜೆಯು ತಕ್ಷದಲ್ಲಿಯೇ ಫಲನೀಡುತ್ತದೆ.ಚರಸ್ಥಲದಲ್ಲಿ ಲಿಂಗವು ಸಣ್ಣದಾಗಿರಬೇಕು.ಸ್ಥಿರಸ್ಥಳದಲ್ಲಿ ದೊಡ್ಡಲಿಂಗವನ್ನು ಸ್ಥಾಪಿಸಬೇಕು.ಲಿಂಗಪೀಠವು ವೃತ್ತಾಕಾರ,ಚತುರಸ್ರ,ತ್ರಿಕೋಣ ಅಥವಾ ಖಟ್ವಾಂಗದಂತೆ ತೆಳುನೆಡುವಾಗಿದ್ದರೆ ಪ್ರಶಸ್ತವು.ಸ್ಥಿರಸ್ಥಲದಲ್ಲಿ ಲಿಂಗವನ್ನು ಯಾವ ವಸ್ತುವಿನಿಂದ ನಿರ್ಮಿಸಲಾಗಿದೆಯೋ ಅದೇ ವಸ್ತುವಿನಿಂದ ಲಿಂಗಪೀಠವನ್ನು ನಿರ್ಮಿಸಬೇಕು.ಅಂದರೆ ಸ್ಥಿರಲಿಂಗವನ್ನು ಕಲ್ಲು,ಮಣ್ಣು ಅಥವಾ ಲೋಹದಿಂದ ನಿರ್ಮಿಸಿದ್ದರೆ ಲಿಂಗಪೀಠವನ್ನು ಅದೇ ವಸ್ತುವಿನಿಂದ ನಿರ್ಮಿಸಬೇಕು.ಚರಸ್ಥಲದಲ್ಲಿ ಲಿಂಗವನ್ನು ಬಾಣದಿಂದ ನಿರ್ಮಿಸದೆ ಇದ್ದರೆ ಮಾತ್ರ ಲಿಂಗ- ಪೀಠಗಳೆರೆಡೂ ಒಂದೇ ಆಗಿರಬೇಕು.ಲಿಂಗದ ಪ್ರಮಾಣ ಹನ್ನೆರಡು ಅಂಗುಲಗಳು.ಇದಕ್ಕಿಂತ ಕಡಿಮೆ ಇದ್ದರೆ ಫಲ ಕಡಿಮೆ.ಲಿಂಗದ ಪ್ರಮಾಣವು ಹನ್ನೆರಡು ಅಂಗುಲಗಳಿಗಿಂತ ಹೆಚ್ಚಿದ್ದರೆ ಇರಬಹುದು,ದೋಷವಿಲ್ಲ.ಚರಸ್ಥಲದಲ್ಲಿ ಲಿಂಗದ ಪ್ರಮಾಣವು ಒಂದಂಗುಲ ಕಡಿಮೆ ಇದ್ದರೂ ಇರಬಹುದು.

ಇನ್ನು ಶಿವಾಲಯ ನಿರ್ಮಾಣ ವಿಧಾನವನ್ನು ಹೇಳುವೆ,ಕೇಳಿರಿ.ಮೊದಲು ಶಿಲ್ಪದಿಂದ ವಿಮಾನ ನಿರ್ಮಿಸಬೇಕು.ಅದರಲ್ಲಿ ಶಿವ ಮತ್ತು ಶಿವನ ಪರಿವಾರ ದೈವಗಳು ಸೇರಿದಂತೆ ಎಲ್ಲ ದೈವಗಳನ್ನು ಕೆತ್ತಿರಬೇಕು.ನಂತರ ಕನ್ನಡಿಯಂತೆ ಹೊಳೆಯುವ ಶುಭ್ರವಾದ ಗರ್ಭಗುಡಿಯನ್ನು ನಿರ್ಮಿಸಬೇಕು.ಗರ್ಭಗುಡಿಯ ಹೆಬ್ಬಾಗಿಲು ನೀಲ,ಕೆಂಪು,ವೈಢೂರ್ಯ,ಶ್ಯಾಮ,ಮರಕತ,ಮುತ್ತು,ಹವಳ,ಗೋಮೇಧ ಮತ್ತು ವಜ್ರಗಳೆಂಬ ನವರತ್ನಗಳಿಂದ ಅಲಂಕೃತವಾಗಿರಬೇಕು.ಇದರ ಮಧ್ಯದಲ್ಲಿ ಲಿಂಗವನ್ನಿಟ್ಟು ಸದ್ಯೋಜಾತಾದಿ ಪಂಚರುದ್ರ ಮಂತ್ರಗಳಿಂದ ಐದು ಸ್ಥಾನದಲ್ಲಿ ಪೂಜಿಸಬೇಕು.ಶಿವನಿಗೂ ಶಿವನ ಪರಿವಾರಕ್ಕೂ ಅಗ್ನಿಯಲ್ಲಿ ಆಹುತಿ ಕೊಡಬೇಕು.ಗುರುಹಿರಿಯರನ್ನೂ ಬಂಧು – ಬಾಂಧವರನ್ನೂ ಸತ್ಕರಿಸಬೇಕು.ಭಿಕ್ಷುಕರಿಗೆ ದಾನ ನೀಡಬೇಕು.ಸ್ಥಾವರ- ಜಂಗಮಾದಿ ಪ್ರಾಣಿಗಳನ್ನು ಸಾಧ್ಯವಿದ್ದಷ್ಟು ಸಂತೃಪ್ತಿ ಪಡಿಸಬೇಕು.ಆ ಬಳಿಕ ಸುವರ್ಣಪೂರಿತವಾದ ಗರ್ತದಲ್ಲಿ ಸದ್ಯೋಜಾತಾದಿ ಮಂತ್ರ- ಪ್ರಣವಮಂತ್ರಗಳಿಂದ ಲಿಂಗಪ್ರತಿಷ್ಠಾಪನೆ –ಲಿಂಗವನ್ನು ಪೀಠದೊಂದಿಗೆ ಸೇರಿಸಿ ಅಷ್ಟಬಂಧವನ್ನು ಲೇಪಿಸಬೇಕು.ಇದೇ ವಿಧಾನವನ್ನು ವಿಗ್ರಹಸ್ಥಾಪನೆಯಲ್ಲೂ ಅನುಸರಿಸಬೇಕು.ಅನಂತರ ಹೊರಗಡೆ ಉತ್ಸವಮೂರ್ತಿಯನ್ನು ಪಂಚಾಕ್ಷರ ಮಂತ್ರದಿಂದ ಸ್ಥಾಪಿಸಬೇಕು.ಉತ್ಸವಮೂರ್ತಿಯನ್ನು ಗುರು ಹಿರಿಯರು ಇಲ್ಲವೆ ಸಾಧುಗಳು ಮೊದಲು ಪೂಜಿಸಬೇಕು.ಈ ರೀತಿಯಾಗಿ ಪ್ರತಿಷ್ಠಾಪಿಸಲ್ಪಟ್ಟ ಲಿಂಗ- ವಿಗ್ರಹಗಳ ಪೂಜೆಯು ಶಿವಪದವನ್ನೀಯುತ್ತದೆ.

ಲಿಂಗದ ಪೀಠವು ಪಾರ್ವತಿಯ ಸ್ವರೂಪವು.ಶಿವನು ತೊಡೆಯಲ್ಲಿ ಯಾವಾಗಲೂ ಪಾರ್ವತಿಯನ್ನು ಕುಳ್ಳಿರಿಸಿಕೊಂಡಿರುವಂತೆ ಲಿಂಗವು ಸದಾ ಪೀಠವನ್ನು ಧರಿಸಿರುತ್ತದೆ.

ಮತ್ತೊಂದು ಬಗೆಯಿಂದಲೂ ಶಿವನನ್ನು ಪೂಜಿಸಬಹುದು.ತರುಗುಲ್ಮಾದಿಗಳು ಶಿವನ ಸ್ಥಾವರ ಲಿಂಗಗಳೆಂದೂ ಕ್ರಿಮಿ ಕೀಟಾದಿಗಳು ಜಂಗಮಲಿಂಗಗಳೆಂದೂ ಭಾವಿಸಿ ಎರಡನ್ನೂ ತೃಪ್ತಿಪಡಿಸಿದರೆ ಅದು ಆ ಶಿವನ ಪೂಜೆಯೇ ಆಗುವುದು.

ಲಿಂಗ ಪ್ರತಿಷ್ಠಾಪನೆಯಾದ ಬಳಿಕ ಅದನ್ನು ಷೋಡಶೋಪಚಾರದಿಂದ ಪೂಜಿಸಬೇಕು.ಆವಾಹನ,ಆಸನ,ಅರ್ಘ್ಯ,ಪಾದ್ಯ,ಆಚಮನ,ಅಭ್ಯಂಗ,ಸ್ನಾನ,ವಸ್ತ್ರ,ಗಂಧ,ಪುಷ್ಪ,ಧೂಪ,ದೀಪ,ನೈವೇದ್ಯ,ನೀರಾಜನ,ತಾಂಬೂಲ,ನಮಸ್ಕಾರ,ವಿಸರ್ಜನೆ– ಇವುಗಳು ಷೋಡಶೋಪಚಾರಗಳು.ಇದಾಗದಿದ್ದರೆ ಅರ್ಘ್ಯದಿಂದ ಹಿಡಿದು ನೈವೇದ್ಯದವರೆಗಿನ ದಶೋಪಚಾರಗಳಿಂದ ಪೂಜಿಸಬಹುದು.ಇದೂ ಆಗದಿದ್ದರೆ ಅಭಿಷೇಕ,ನೈವೇದ್ಯ,ತರ್ಪಣಗಳಿಂದಲಾದರೂ ಶಿವನನ್ನು ಪೂಜಿಸಬೇಕು.

ಲಿಂಗಗಳಲ್ಲಿ ಕೆಲವು ಮನುಷ್ಯರಿಂದ ಸ್ಥಾಪಿಸಲ್ಪಟ್ಟವುಗಳಾದರೆ ಕೆಲವು ಲಿಂಗಗಳು ಋಷಿಗಳು- ದೇವತೆಗಳಿಂದ ಸ್ಥಾಪಿಸಲ್ಪಟ್ಟಿವೆ.ಇನ್ನೂ ಕೆಲವು ತಾವೇ ಉದ್ಭವಿಸಿದ ಸ್ವಯಂಭೂಲಿಂಗಗಳು.ಇವುಗಳನ್ನು ಪೂಜಿಸಿ,ಪ್ರದಕ್ಷಿಣ ನಮಸ್ಕಾರಗಳನ್ನು ಮಾಡಿದರೆ,ಪ್ರತಿದಿನವೂ ದರ್ಶನ ಮಾಡಿದರೂ ಶಿವಪದವು ದೊರೆಯುವುದು.

ಲಿಂಗವನ್ನು ಮಣ್ಣು,ಹಿಟ್ಟು,ಗೋಮಯ,ಕರವೀರಪುಷ್ಪ,ಫಲ,ಬೆಲ್ಲ,ಬೆಣ್ಣೆ,ಭಸ್ಮ,ಅನ್ನಗಳಂತಹ ವಸ್ತುವಿನಿಂದಲೂ ನಿರ್ಮಿಸಬಹುದು.ಮಹಾಶೈವರಂತೆ ಅಂಗುಷ್ಠಾದಿಗಳಲ್ಲಿಯೂ ಶಿವನನ್ನು ಪೂಜಿಸಬಹುದು.ಶಿವನ ಸೇವೆಗಾಗಿ ಪಡುವ ಶ್ರಮಕ್ಕೆ ಅನುಗುಣವಾದ ಫಲವು ನಿಶ್ಚಿತವಾಗಿಯೂ ದೊರೆಯುತ್ತದೆ.

ಲಿಂಗವನ್ನು ಭಕ್ತಿಯಿಂದ ಶಿವಭಕ್ತನೊಬ್ಬನಿಗೆ ದಾನ ಮಾಡಿದರೂ ಶಿವಪದ ಪ್ರಾಪ್ತಿಯು.ಲಿಂಗವನ್ನು ದಾನ ಮಾಡಲು ಆಗದಿದ್ದರೆ ಲಿಂಗದ ಮೌಲ್ಯವನ್ನು ದಾನ ಮಾಡಬಹುದು.

ಪ್ರತಿದಿನ ಹತ್ತುಸಾವಿರ ಪ್ರಣವ ಜಪ ಮಾಡಿದರೆ ಶಿವಪದ ದೊರಕುವುದು.ಅದಾಗದಿದ್ದರೆ ಪ್ರತಿಸಂಧ್ಯೆಯಲ್ಲಿ ಒಂದು ಸಾವಿರದಂತೆ ತ್ರಿಸಂಧ್ಯೆಗಳಲ್ಲಿ ಜಪಿಸಿದರೂ ಶಿವಪದ ಲಭಿಸುವುದು.ಸಮಾಧಿಸ್ಥಿತಿಯಲ್ಲಿದ್ದಾಗ ಮಾನಸಿಕ ಜಪವು ನಡೆಯುತ್ತಿರಬೇಕು.ಇತರ ಸಂದರ್ಭಗಳಲ್ಲಿ ಮೆಲುಧ್ವನಿಯಲ್ಲಿ ಮಂತ್ರೋಚ್ಚಾರ ಮಾಡಬೇಕು.

ಪಂಚಾಕ್ಷರ ಮಂತ್ರವನ್ನು ದಿನ ಒಂದಕ್ಕೆ ಹತ್ತು ಸಾವಿರ ಇಲ್ಲವೆ ಸಂಧ್ಯೆಗೆ ಒಂದು ಸಾವಿರದಂತೆ ತ್ರಿಸಂಧ್ಯೆಗಳಲ್ಲಿ ಧ್ಯಾನ ಮಾಡಿದರೆ ಮೋಕ್ಷ ಪಡೆಯಬಹುದು.ಗುರೂಪದೇಶ ಪಡೆದವರು ಪಂಚಾಕ್ಷರ ಮಂತ್ರದ ಆದಿಯಲ್ಲಿ ಓಂ ಪ್ರಣವವನ್ನುಚ್ಚರಿಸಬೇಕು.ಗುರುದೀಕ್ಷೆ ಪಡೆಯದೆ ಇದ್ದವರು ” ನಮಃ ಶಿವಾಯ” ಎನ್ನುವ ಪಂಚಾಕ್ಷರ ಮಂತ್ರವನ್ನು ಮಾತ್ರ ಜಪಿಸಬೇಕು.ಉಪದೇಶವನ್ನು ಸಮರ್ಥಗುರುಗಳಿಂದ ಮಾತ್ರ ಪಡೆಯಬೇಕು,ಸಾಮಾನ್ಯ ಜನರಿಂದ ಉಪದೇಶ ಪಡೆದರೆ ಫಲವಿಲ್ಲ.ಸಮರ್ಥಗುರು ಮತ್ತು ಸಮರ್ಥ ಶಿಷ್ಯರು ಸಿಗುವುದು ಅಪರೂಪವು.ಶಿವನ ಲೋಕಕಾರುಣ್ಯ ವಿಶೇಷದಿಂದ ಒಮ್ಮೆಮ್ಮೆ ಸಮರ್ಥಗುರು ಮತ್ತು ಸಮರ್ಥ ಶಿಷ್ಯರು ಅವತರಿಸುತ್ತಾರೆ.ಪಂಚಾಕ್ಷರ ಮಂತ್ರವನ್ನು ಐದುಕೋಟಿ ಜಪಿಸಿದರೆ ಶಿವಸಾರೂಪ್ಯವು ದೊರೆಯುವುದು.ಒಂದು ಕೋಟಿ ಜಪಿಸಿದರೆ ಬ್ರಹ್ಮ ಪದವಿಯೂ ಎರಡು ಕೋಟಿ ಜಪಿಸಿದರೆ ವಿಷ್ಣು ಪದವಿಯೂ ಮೂರುಕೋಟಿ ಜಪಿಸಿದರೆ ರುದ್ರಪದವಿಯೂ,ನಾಲ್ಕು ಕೋಟಿ ಜಪಿಸಿದರೆ ಮಹೇಶಪದವಿಯೂ ದೊರೆಯುತ್ತದೆ.” ನಮಃಶಿವಾಯ” ಪಂಚಾಕ್ಷರಿ ಮಂತ್ರದ ಒಂದೊಂದು ಅಕ್ಷರವನ್ನು ಪ್ರತ್ಯೇಕವಾಗಿ ಲಕ್ಷಬಾರಿ ಜಪಿಸಿದರೂ ಮೋಕ್ಷವು ದೊರೆಯುವುದು.ಪ್ರತಿದಿನವೂ ಒಂದು ಸಾವಿರದಂತೆ ಶಿವಪಂಚಾಕ್ಷರ ಮಂತ್ರವನ್ನು ಸಾವಿರ ದಿನ ಜಪಿಸಿ,ಶಿವಭಕ್ತರಿಗೆ ಅನ್ನಸಂತರ್ಪಣೆ ಮಾಡಿದರೆ ಸಕಲೇಷ್ಟವು ಸಿದ್ಧಿಸುವುದು.

ಪ್ರತಿದಿನ ಪ್ರಾತಃಕಾಲದಲ್ಲಿ ಸಾವಿರದೆಂಟು ಗಾಯತ್ರಿ ಜಪಗಳನ್ನು ಮಾಡಬೇಕು.ವೇದಮಂತ್ರಗಳನ್ನು,ರುದ್ರಸೂಕ್ತವಾದಿ ಶಿವ ಸಂಬಂಧಿ ಸೂಕ್ತಗಳನ್ನು ಜಪಿಸಬೇಕು.” ಓಂ ನಮೋ ಭಗವತೇ ರುದ್ರಾಯ” ಎನ್ನುವ ದಶಾಕ್ಷರ ಮಂತ್ರವನ್ನು ಪ್ರತಿದಿನ ನೂರು,ಸಾವಿರ,ಹತ್ತುಸಾವಿರ ಮಂತ್ರ ಜಪಿಸಬೇಕು.ವೇದ ಪಾರಾಯಣ ಮಾಡಬೇಕು.ಇತರ ಮಂತ್ರಗಳನ್ನು ಪ್ರತಿ ಅಕ್ಷರಕ್ಕೆ ಲಕ್ಷದಂತೆ ಮಂತ್ರದಲ್ಲಿ ಎಷ್ಟು ಅಕ್ಷರಗಳಿವೆಯೋ ಅಷ್ಟು ಲಕ್ಷ ಜಪಿಸಬೇಕು.ಅಂದರೆ ಆ ಮಂತ್ರಗಳು ಸಿದ್ಧಿಯಾಗಿ,ಫಲ ನೀಡುವವು.ಏಕಾಕ್ಷರ ಮಂತ್ರವನ್ನು ಕೋಟಿ ಬಾರಿ ಜಪಿಸಬೇಕು.ಉಳಿದ ಮಂತ್ರಗಳನ್ನು ಹತ್ತುಸಾವಿರ ಬಾರಿ ಜಪಿಸಬೇಕು.ಮಾಲಾ ಮಂತ್ರಗಳನ್ನು ಸಾವಿರಬಾರಿ ಜಪಿಸಬೇಕು.ಪ್ರಣವಮಂತ್ರವನ್ನು ಪ್ರತಿದಿನ ಸಾವಿರದಂತೆ ಮರಣಪರ್ಯಂತರ ಜಪಿಸಬೇಕು.ಇದರಿಂದ ಇಹದಲ್ಲಿ ಸಕಲಭೋಗಗಳೂ ಮರಣಾನಂತರ ಶಿವಪದ ಪ್ರಾಪ್ತವಾಗುವುದು.

ಶಿವಾಲಯವನ್ನು ತೊಳೆದು ಶುದ್ಧಿಗೊಳಿಸುವುದು,ಸಾರಣೆ ಕಾರಣೆಗಳಿಂದ ಅಲಂಕರಿಸುವುದು,ಅಲ್ಲಿ ಹೂದೋಟಗಳನ್ನು ನಿರ್ಮಿಸುವುದು ಮತ್ತು ಅಲ್ಲಿ ವಾಸಿಸುವುದರಿಂದ ಶಿವನು ಸಂಪ್ರೀತನಾಗುವನು.ಮನುಷ್ಯಸ್ಥಾಪಿತ ಲಿಂಗಗಳಿದ್ದೆಡೆ ನೂರು ಮೊಳದಷ್ಟು,ಋಷಿಗಳು-ದೇವತೆಗಳು ಸ್ಥಾಪಿಸಿದ ಲಿಂಗಗಳಾಗಿದ್ದಲ್ಲಿ ಸಾವಿರ ಮೊಳದಷ್ಟು,ಉದ್ಭವಲಿಂಗಗಳಿದ್ದಲ್ಲಿ ಸಾವಿರ ಧನುಸ್ಸಿನಷ್ಟೂ ಪ್ರದೇಶವು ಪರಮಪವಿತ್ರವಾದುದು.ಈ ಪ್ರದೇಶದಲ್ಲಿರುವ ಬಾವಿ,ಕೆರೆ,ತಟಾಕಗಳನ್ನು ಶಿವಗಂಗೆಯೆಂದೇ ಭಾವಿಸಬೇಕು.ಹೀಗೆಂದು ಶಿವನೇ ಆಜ್ಞೆ ಮಾಡಿರುವನು.ಇಂತಹ ಲಿಂಗಸ್ಥಳಗಳಿರುವೆಡೆ ಮಾಡಿದ ಸ್ನಾನ,ದಾನ,ಜಪಗಳಿಗೆ ಶಿವಪದವವು ಫಲವು.ಅಲ್ಲಿ ಮೃತನಾದವನಿಗೆ ಶವಸಂಸ್ಕಾರ,ದಶಾಹ,ಮಾಸಿಕ,ಸಪಿಂಡೀಕರಣ,ವರ್ಷಾಂತ್ಯಗಳನ್ನು ಮಾಡಿದರೆ ಮೃತನು ಸರ್ವಪಾಪಗಳಿಂದ ಮುಕ್ತನಾಗಿ ಶಿವಪದವನ್ನು ಸೇರುವನು.ಜೀವನ‌ಪರ್ಯಂತ ಇಲ್ಲವೆ ವರ್ಷವಿಡೀ ಅಲ್ಲಿ ವಾಸಿಸಲು ಆಗದೆ ಇದ್ದವರು ಏಳುದಿನವಾಗಲಿ,ಐದು ದಿನವಾಗಲಿ,ಮೂರುದಿನವಾಗಲಿ ಕೊನೆಗೆ ಒಂದು ದಿನವಾದರೂ ಅಲ್ಲಿ ವಾಸಿಸಬೇಕು.

ಎಲ್ಲರೂ ತಮಗೆ ಸಾಧ್ಯವಿದ್ದಷ್ಟೂ ಶಿವಪೂಜೆ ಮಾಡಬೇಕು.ಇದರಿಂದ ಪುಣ್ಯವು ದೊರಕುತ್ತದೆ.ಪೂರ್ವೋಕ್ತಲಿಂಗಸ್ಥಳಗಳಿರುವೆಡೆ ಶಿವಪೂಜೆ ಮಾಡಿದರೆ ಕೂಡಲೆ ಫಲ ಸಿಗುವುದು.ಫಲಾಪೇಕ್ಷೆ ಇಲ್ಲದೆ ಶಿವಪೂಜೆ ಮಾಡಿದರೆ ಶಿವಪದವು ದೊರೆಯುವುದು.ಶಿವಪೂಜಕರು ಬೆಳಿಗ್ಗೆ ನಿತ್ಯಕರ್ಮ,ಮಧ್ಯಾಹ್ನ ಕಾಮ್ಯಕರ್ಮ,ಸಂಜೆ ಮತ್ತು ರಾತ್ರಿಗಳಲ್ಲಿ ಶಾಂತಿಕರ್ಮಗಳನ್ನಾಚರಿಸಬೇಕು.ನಿಶೀಥದಲ್ಲಿ ಅಂದರೆ ರಾತ್ರಿಯ ಮಧ್ಯದ ಎರಡು ಯಾಮಗಳಲ್ಲಿ ಶಿವಪೂಜೆಯು ಶ್ರೇಷ್ಠವು.ಕರ್ಮವು ಜ್ಞಾನಪ್ರದವಾಗಿದ್ದರೆ ಫಲ ನೀಡುತ್ತದೆ.ಕಲಿಯುಗವು ಕರ್ಮಯುಗವಾಗಿದ್ದು ಈ ಯುಗದಲ್ಲಿ ಕರ್ಮದಿಂದಲೇ ಫಲಸಿದ್ಧಿಯು.ಪಾಪಕಾರ್ಯಗಳಿಗೆ ಎಳಸದೆ ಸದಾಚಾರ ಸಂಪನ್ನನಾಗಿ ಯಾವುದಾದರೂ ವಿಧಾನದಿಂದ ಶಿವನನ್ನು ಪೂಜಿಸಿದರೆ ಶಿವನ ಕೃಪೆಯು ಒದಗುವುದು.

ವ್ಯಾಖ್ಯಾನ

ಶಿವ ಮಹಾಪುರಾಣದ ಈ ಅಧ್ಯಾಯದಲ್ಲಿ ಶಿವಲಿಂಗ ಸ್ಥಾಪನೆ,ಪೂಜಾಕ್ರಮಗಳನ್ನು ವಿವರಿಸಲಾಗಿದೆ.ಶಿವೋಪಾಸಕರು ಶಿವನನ್ನು ಲಿಂಗ ಇಲ್ಲವೆ ಮೂರ್ತಿಗಳಲ್ಲಿ ಪೂಜಿಸಬಹುದಾದರೂ ಲಿಂಗಪೂಜೆಯೇ ಉತ್ತಮವಾದುದು.ಈ ಲಿಂಗಗಳಿರುವ ಸ್ಥಳಗಳು ಚರಲಿಂಗಸ್ಥಳ,ಸ್ಥಿರಲಿಂಗಸ್ಥಳ ಎಂದು ಎರಡು ವಿಧ.ಸ್ಥಿರಲಿಂಗ ಎಂದರೆ ಒಂದೆಡೆ ಅಚಲವಾಗಿ ಸ್ಥಾಪಿಸಿ,ಪೂಜಿಸುವ ಲಿಂಗಗಳು.ಚರಲಿಂಗಗಳು ಎಂದರೆ ಭಕ್ತರು ತಮ್ಮ ಅನುಕೂಲಕ್ಕೋಸ್ಕರ ಬಾವಿ,ಕೆರೆ,ತಟಾಕ,ನದಿ,ಸಮುದ್ರಗಳ ತಟದಲ್ಲಿ ಸ್ಥಾಪಿಸಿ,ಪೂಜಿಸುವ ಕಲ್ಲು ಮರಳು,ಹಿಟ್ಟು ಮೊದಲಾವುಗಳಲ್ಲಿ ಮಾಡಿದ ಲಿಂಗಗಳು.ಪೂಜೆಯ ಬಳಿಕ ಅವುಗಳನ್ನು ಜಲದಲ್ಲಿ ವಿಸರ್ಜನೆ ಮಾಡಲಾಗುವುದು.

ಈ ಅಧ್ಯಾಯದಲ್ಲಿ ಶಿವನು ಭೂತೇಶ್ವರನಾದುದರಿಂದ ಸ್ಥಾವರ ಜಂಗಮಗಳಾದ ಕ್ರಿಮಿ ಕೀಟ,ಪಶು- ಪಕ್ಷಿ,ಗಿಡ ಮರಗಳನ್ನು ಸಂತೃಪ್ತಪಡಿಸಿದರೆ ಶಿವನು ತನ್ನ ಪೂಜೆ ಮಾಡಿದಂತೆಯೇ ಸಂಪ್ರೀತನಾಗುವನು ಎನ್ನುವುದನ್ನು ವಿವರಿಸಲಾಗಿದೆ.ಶಿವಭಕ್ತರು ದಯಾರ್ದ ಹೃದಯಿಗಳಾಗಿರಬೇಕು.ಸಕಲ ಜೀವರುಗಳಲ್ಲಿ ಶಿವನಿದ್ದಾನೆ ಎಂದು ತಿಳಿದು ಜೀವರುಗಳಿಗೆ ಅನ್ನದಾನ,ವಸ್ತ್ರದಾನ,ಅಭಯ ದಾನ,ನೆರವು,ಸಹಾಯ ಮಾಡಬೇಕು.ಜೀವಿಗಳಲ್ಲಿ ಮಾತ್ರವಲ್ಲ ನಿರ್ಜಿವಿಗಳಾದ ಪರ್ವತಾದಿಗಳಲ್ಲಿಯೂ ಶಿವನ ಚೈತನ್ಯವನ್ನು ಗುರುತಿಸಿ,ಪ್ರಕೃತಿಯನ್ನು ಪೊರೆಯಬೇಕು,ರಕ್ಷಿಸಬೇಕು.ಜೀವರುಗಳ ಎದೆಯಲ್ಲಿ ಶಿವನಿದ್ದಾನೆ ಎಂದರಿತು ಭೂತದಯೆಯಿಂದ ವರ್ತಿಸುವುದೇ ಶಿವನ ಆತ್ಮಲಿಂಗ ಪೂಜೆ.
೦೮.೦೮.೨೦೨೨

About The Author