ಶ್ರಾವಣ ಸಂಜೆ–ಶ್ರೀ ಶಿವ ಮಹಾಪುರಾಣ ವ್ಯಾಖ್ಯಾನ–೧೦–ಮುಕ್ಕಣ್ಣ ಕರಿಗಾರ

ಶಿವನು ವಾರಾದಿಗಳನ್ನೇರ್ಪಡಿಸಿ ಲೋಕೋಪಕಾರ ಗೈದುದು

ಋಷಿಗಳು ಸೂತಮುನಿಯನ್ನು ಪ್ರಶ್ನಿಸುವರು — ” ಮುನಿವರ್ಯ ಏಳುದಿವಸಗಳುಳ್ಳ ವಾರದ ವ್ಯವಸ್ಥೆ ಹೇಗಾಯಿತು? ವಾರಗಳಿಗೆ ಅಧಿಪತಿಗಳಾರು? ಅವರನ್ನು ಪೂಜಿಸುವ ವಿಧಾನವೇನು? ವಾರದ ಅಧಿದೇವತೆಗಳನ್ನು ಪೂಜಿಸಿದರೆ ಲಭಿಸುವ ಫಲವೇನು ?”

ಸೂತನು ಋಷಿಗಳಿಗೆ ಹೇಳತೊಡಗಿದರು—ಹಿಂದೆ ಸೃಷ್ಟಿಯ ಆದಿಯಲ್ಲಿ ಮಹಾದೇವನು ಲೋಕೋಪಕಾರ ದೃಷ್ಟಿಯಿಂದ ಏಳುವಾರಗಳನ್ನು ವ್ಯವಸ್ಥೆಗೊಳಿಸಿದನು.ಮೊದಲವಾರವೇ ಭಾನುವಾರ,ಇದು ಆರೋಗ್ಯಕರವಾದುದು.ಈಶ್ವರನೇ ಭಾನುವಾರಕ್ಕೆ ದೇವತೆ.ನಂತರ ಸೋಮವಾರ.ಇದು ಸಂಪತ್ಕರವು.ಈಶ್ವರನ ಶಕ್ತಿಯಾದ ಪ್ರಕೃತಿಯು ಸೋಮವಾರದ ದೇವತೆ.ನಂತರ ಮಂಗಳವಾರವು.ಇದು ಆಲಸ್ಯ- ಪಾಪಗಳನ್ನು ದೂರಮಾಡುತ್ತದೆ.ಮಂಗಳವಾರಕ್ಕೆ ಷಣ್ಮುಖನು ದೇವತೆ.ಅನಂತರ ಬರುವುದೇ ಬುಧವಾರವು.ಲೋಕಕ್ಕೆ ಕ್ಷೇಮ,ಪುಷ್ಟಿ,ರಕ್ಷಣೆಗಳನ್ನುಂಟು ಮಾಡುವ ಮಂಗಳವಾರಕ್ಕೆ ವಿಷ್ಣುವು ದೇವತೆ.ಅನಂತರ ಬರುವ ಗುರುವಾರವು ಆಯುವೃದ್ಧಿಕರ.ಬ್ರಹ್ಮನು ಗುರುವಾರದ ದೇವತೆ.ಅನಂತರ ಬರುವ ಶುಕ್ರವಾರ ಶನಿವಾರಗಳನ್ನು ಈಶ್ವರನು ಲೋಕವು ಬೆಳೆಯಲೆಂದು ಆದಿಸೃಷ್ಟಿಯಲ್ಲಿ ಪುಣ್ಯ – ಪಾಪಗಳನ್ನು ಏರ್ಪಡಿಸಿ, ಅವುಗಳಿಗೆ ಕರ್ತೃಗಳಾಗಿ ಚಂದ್ರ ಮತ್ತು ಯಮ ಇವರನ್ನು ನೇಮಿಸಿದ.ಶುಕ್ರವಾರಕ್ಕೆ ಚಂದ್ರನು ದೇವತೆಯಾದರೆ ಶನಿವಾರಕ್ಕೆ ಯಮನು ದೇವತೆ.ಶುಕ್ರವಾರವು ಭೋಗಪ್ರದವಾದರೆ ಶನಿವಾರವು ಮೃತ್ಯುಹರ.ಈ ವಾರಗಳಿಗೆ ಶಿವನು ತನ್ನ ಸ್ವರೂಪರೇ ಆದ ಆದಿತ್ಯಾದಿ ಗ್ರಹಗಳನ್ನು ಅಧಿಪತಿಗಳನ್ನಾಗಿ ಮಾಡಿ ಆಯಾ ಜ್ಯೋತಿರ್ಮಂಡಲಗಳಲ್ಲಿರಿಸಿದನು.ವಾರದ ಅಧಿಪತಿಗಳು ಮಾನವರ ಶುಭಾಶುಭ ಸೂಚಕರುಗಳು.

ಆಯಾ ವಾರಗಳಲ್ಲಿ ಆಯಾ ಗ್ರಹದೇವತೆಗಳನ್ನರ್ಚಿಸಿದರೆ ಅನುಕ್ರಮವಾಗಿ ಆರೋಗ್ಯ ,ಸಂಪತ್ತು,ರೋಗನಿವೃತ್ತಿ,ಪುಷ್ಟಿ,ಆಯಸ್ಸು,ಭೋಗ,ಅಪಮೃತ್ಯು ಪರಿಹಾರ ಈ ಏಳು ಫಲಗಳು ಲಭಿಸುವವು.ಫಲಕೊಡುವವನು ಮಾತ್ರ ಶಿವನೊಬ್ಬನೇ.ಶಿವನು ವಾರಗಳನ್ನು ವ್ಯವಸ್ಥೆಗೊಳಿಸಿ,ಅವುಗಳಿಗೆ ಒಬ್ಬೊಬ್ಬ ಗ್ರಹದೇವತೆಗಳನ್ನು ಅಧಿಪತಿಗಳನ್ನಾಗಿ ನಿಯಮಿಸಿದ್ದರಿಂದ ಅವರುಗಳ ಮೂಲಕ ತಾನೇ ಫಲವನ್ನು ನೀಡುವನು.

ಈ ದೇವತೆಗಳ ಪೂಜೆಯು ಐದು ಬಗೆಯಾಗಿದೆ.ಆಯಾ ದೇವತೆಗಳ ಮಂತ್ರ,ಜಪ,ದಾನ,ಹೋಮ, ತಪಸ್ಸು ಮತ್ತು ಷೋಡಶೋಪಚಾರಗಳು ಇವುಗಳೇ ಐದು ವಿಧವಾದ ದೇವತಾರ್ಚನಾ ಕ್ರಮಗಳು.ಈ ದೇವತೆಗಳ ಪೂಜೆಯಿಂದ ಲಭಿಸುವ ಫಲವು ಹೀಗಿದೆ —
ಆದಿತ್ಯೋಪಾಸನೆಯಿಂದ ನೇತ್ರರೋಗ,ಶಿರೋರೋಗ,ಕುಷ್ಠರೋಗಗಳು ಪರಿಹಾರವಾಗುವವು.ಒಂದು ದಿನ ಇಲ್ಲವೆ ಪ್ರಾರಬ್ಧಕರ್ಮವು ಬಲವತ್ತರವಾಗಿದ್ದರೆ ಒಂದು ತಿಂಗಳು,ಒಂದು ವರ್ಷ ಅಥವಾ ಮೂರುವರ್ಷಗಳವರೆಗೆ ಆದಿತ್ಯನನ್ನು ಪೂಜಿಸಿ ಶಿವಭಕ್ತರುಗಳನ್ನು ಪೂಜಿಸಿ,ಸತ್ಕರಿಸಬೇಕು.ರೋಗ,ಮುಪ್ಪು ಮೊದಲಾದವುಗಳು ಪರಿಹಾರವಾಗುವವು.

ಸೋಮವಾರ ಲಕ್ಷ್ಮೀ ಮೊದಲಾದ ದೇವತೆಗಳನ್ನು ಪೂಜಿಸಿ ಶಿವಭಕ್ತರಿಗೆ ಅನ್ನ ತುಪ್ಪದ ಆಹಾರ ನೀಡಿದರೆ ಸಂಪತ್ತು ದೊರೆಯುವುದು.

ಮಂಗಳವಾರ ಕಾಳಿ ಮೊದಲಾದ ಶಕ್ತಿ ದೇವಿಯರನ್ನು ಪೂಜಿಸಿ,ಶಿವಭಕ್ತರುಗಳಿಗೆ ಉದ್ದು,ಹೆಸರು,ತೊಗರಿಗಳಿಂದ ಮಾಡಲ್ಪಟ್ಟ ಅನ್ನವನ್ನರ್ಪಿಸಿದರೆ ರೋಗಪರಿಹಾರವಾಗುವುದು.
ಬುಧವಾರ ಮೊಸರನ್ನವನ್ನು ವಿಷ್ಣುವಿಗೆ ಅರ್ಪಿಸಿ,ಪೂಜಿಸಿದರೆ ಪುತ್ರ,ಮಿತ್ರ,ಬಂಧು-ಬಾಂಧವರುಗಳೊದಗುವರು.
ಗುರುವಾರದಂದು ದೇವತೆಗಳನ್ನು ಬಟ್ಟೆ,ಹಾಲು,ತುಪ್ಪಗಳಿಂದ ಪೂಜಿಸಿದರೆ ಆಯುರ್ವೃದ್ಧಿಯು.
ಶುಕ್ರವಾರಂದು ಭೈರವ ಚಂದ್ರ,ಕುಬೇರಾದಿಗಳನ್ನು ಪೂಜಿಸಿ ಶಿವಭಕ್ತರಿಗೆ ಉತ್ತಮ ಆಹಾರ,ಸುವಾಸಿನಿಯರಿಗೆ ವಸ್ತ್ರಾಭರಣಗಳಂತಹ ಮಂಗಳದ್ರವ್ಯಗಳನಗನಿತ್ತರೆ ಭೋಗವೃದ್ಧಿಯಾಗುವುದು.
ಶನಿವಾರದಂದು ರುದ್ರನನ್ನು ತಿಲಹೋಮದಿಂದ ಅರ್ಚಿಸಿ,ಶಿವಭಕ್ತರನ್ನು ದಾನ,ತಿಲಾನ್ನ ಭೋಜನದಿಂದ ಸಂತೃಪ್ತಿಪಡಿಸಿದರೆ ಅಪಮೃತ್ಯು ಪರಿಹಾರವಾಗುತ್ತದೆ.

ದೇವತೆಗಳಿಗೆ ಮಾಡುವ ಎಲ್ಲ ಪೂಜೆಗಳು ಅಂದರೆ ನಿತ್ಯಪೂಜೆ,ವಿಶೇಷಪೂಜೆ,ಸ್ನಾನ,ದಾನ,ಜಪ,ಹೋಮ,ಶಿವಭಕ್ತರುಗಳ ಪೂಜೆ,ಆಯಾವಾರ ತಿಥಿಗಳಲ್ಲಿ ಮಾಡುವ ವಿಶೇಷಪೂಜೆಗಳಿಗೆ ಸರ್ವಜ್ಞನನೂ ಪರಮೇಶ್ವರನೂ ಆದ ಶಿವನೇ ಆಯಾ ದೇವತೆಯ ರೂಪದಿಂದ ಫಲ ನೀಡುವನು.ಫಲ ನೀಡುವಾಗ ಪರಮೇಶ್ವರನು ದೇಶ,ಕಾಲ,ಪಾತ್ರಗಳಿಗನುಗುಣವಾಗಿ,ಭಕ್ತರ ಶ್ರದ್ಧೆಗೆ ತಕ್ಕಂತೆ ಫಲ ನೀಡುವನು.
ಶುಭಕರ್ಮದ ಆದಿಯಲ್ಲಿ ಮತ್ತು ಅಶುಭ ಅಂದರೆ ಮೃತಸಂಸ್ಕಾರಗಳ ಕೊನೆಯಲ್ಲಿ ಆದಿತ್ಯಾದಿ ಗ್ರಹಗಳನ್ನು ಪೂಜಿಸಬೇಕು.ಇದರಿಂದ ಆರೋಗ್ಯ,ಆಯುಷ್ಯ,ಭಾಗ್ಯಗಳು ವೃದ್ಧಿಹೊಂದುವವು.

ದೇವತೆಗಳ ಪೂಜೆಯನ್ನು ದೇವಯಜ್ಞ ಎಂದು ಕರೆಯಲಾಗುತ್ತಿದ್ದು ಸಕಲಭೋಗಪ್ರದವಾದ ದೇವಯಜ್ಞವನ್ನು ಯಥಾಶಕ್ತಿ ಆಚರಿಸಬೇಕು.ಇದಲ್ಲದೆ ದಾರಿಯಲ್ಲಿ ನೆರಳಿಗಾಗಿ ಸಾಲು ಮರಹಾಕಿಸುವುದು,ಕೆರೆ ಬಾವಿಗಳನ್ನು ತೋಡಿಸುವುದು,ಶಿವಭಕ್ತರು,ಅನಾಥರುಗಳು,ನಿರ್ಗತಿಕರುಗಳಿಗೆ ಆಶ್ರಯಕಲ್ಪಿಸುವುದು ಮೊದಲಾದ ಧರ್ಮಕಾರ್ಯಗಳನ್ನು ಮಾಡುವುದು ಶಿವನಿಗೆ ಪ್ರಿಯಕರವಾದುದು.ಇಂತಹ ಪರೋಪಕಾರಿ ಕಾರ್ಯಗಳಿಂದ ಸಂತುಷ್ಟನಾದ ಶಿವನು ಸತ್ಕರ್ಮಿಗಳಿಗೆ ಉತ್ತಮಜ್ಞಾನವನ್ನಿತ್ತು ಹರಸುವನು.

ವ್ಯಾಖ್ಯಾನ

ವಿಶ್ವನಿಯಾಮಕನಾದ ಶಿವನು ಕಾಲಕ್ಕೆ ಅಧಿಪತಿಯಾದ ಮಹಾಕಾಲನಿದ್ದು ದಿನ,ವಾರಾದಿಗಳನ್ನು ವ್ಯವಸ್ಥೆಗೊಳಿಸಿ ಲೋಕೋಪಕಾರ ಮಾಡಿರುವನು.ವಾರದ ಒಂದೊಂದು ದಿನಕ್ಕೆ ಒಬ್ಬೊಬ್ಬ ದೇವತೆ ಹಾಗೂ ಗ್ರಹಗಳನ್ನು ದೇವತೆ- ಉಪದೇವತೆಗಳನ್ನಾಗಿ ನಿಯಮಿಸಿ ಅವರುಗಳ ಮೂಲಕ ತಾನೇ ಫಲ ನೀಡುತ್ತಿರುವನು.ಶಿವನ ವಿಭೂತಿಗಳಾಗಿ ದೇವತೆಗಳು,ಗ್ರಹದೇವತೆಗಳು ಉಪಾಸಕರುಗಳಿಗೆ ಫಲ ನೀಡುವರು.ಗ್ರಹಗಳು ಲೋಕದ ಆಗು ಹೋಗುಗಳಿಗೆ ಕಾರಣರಾಗಿದ್ದು ಶಿವನು ಗ್ರಹದೇವತೆಗಳ ಮೂಲಕ ತನ್ನ ವಿಶ್ವನಿಯಮ,ನಿಯತಿಯನ್ನು ಆಗು ಮಾಡುತ್ತಿರುವನು.ಜಗತ್ತಿನಲ್ಲಿರುವ ಒಳಿತು- ಕೆಡುಕುಗಳು,ಇಷ್ಟ- ಅನಿಷ್ಟಗಳು ಶಿವನ ಪ್ರೇರಣೆಯಂತೆ ಜಗದ್ವ್ಯಾಪಾರ ನಿರ್ವಹಣೆಗೆ ಅವಶ್ಯಕವಾಗಿದ್ದು ಶಿವನು ಗ್ರಹದೇವತೆಗಳ ಮೂಲಕ ಅದು ನಡೆಯುವಂತೆ ಏರ್ಪಾಟು ಮಾಡಿರುವನು.ಇತರ ದೇವತೆಗಳಾಗಲಿ,ಗ್ರಹದೇವತೆಗಳಾಗಲಿ ಸರ್ವಶಕ್ತರಲ್ಲ,ಶಿವನೊಬ್ಬನೇ ಸರ್ವಶಕ್ತನಿರುವನು.ಶಿವನನ್ನು ಪೂಜಿಸಿ,ಆರಾಧಿಸಿದರೆ ಗ್ರಹದೇವತೆಗಳು ತೊಂದರೆಯನ್ನುಂಟು ಮಾಡರು.ಎಲ್ಲಿ ಶಿವಪೂಜೆ ನಡೆಯುತ್ತದೆಯೋ ಅಲ್ಲಿ ದುಷ್ಟಶಕ್ತಿಗಳ ಕಾಟ ಇರದು.ಎಲ್ಲಿ ಶಿವನಾಮ ಸ್ಮರಣೆ ಇದೆಯೋ ಅಲ್ಲಿ ಗ್ರಹದೇವತೆಗಳ ಉಪಟಳ ಇರದು.ಭಕ್ತರುಗಳು ಗ್ರಹಕಾಟ,ಗ್ರಹದೋಷ ಎಂದು ಅವರಿವರನ್ನು ಮೊರೆಹೋಗದೆ ಗ್ರಹಗಳಪತಿಯಾದ ಪರಮೇಶ್ವರ ಶಿವನನ್ನು ಮೊರೆಯಬೇಕು.ಶುಭಕಾರನೂ ಮಂಗಳಕಾರನೂ ಆದ ಶಿವನ ಸ್ಮರಣೆಯಿಂದ ಅನಿಷ್ಟಗಳು ತೊಲಗಿ ಇಷ್ಟವು ಸಿದ್ಧಿಸುವುದು.

‌‌ ೦೯.೦೮.೨೦೨೨

About The Author