ಶ್ರಾವಣ ಸಂಜೆ–ಶ್ರೀ ಶಿವ ಮಹಾಪುರಾಣ ವ್ಯಾಖ್ಯಾನ –೦೬–ಮುಕ್ಕಣ್ಣ ಕರಿಗಾರ

ಭೈರವನು ಬ್ರಹ್ಮನ ಸುಳ್ಳಾಡಿದ ತಲೆಯನ್ನು ಕತ್ತರಿಸಿದುದು ಸುಳ್ಳನ್ನಾಡಿದ ಬ್ರಹ್ಮನನ್ನು ದಂಡಿಸಬೇಕೆಂದುಕೊಂಡು ರೋಷೋನ್ಮತ್ತನಾದ ಶಿವನೊಮ್ಮೆ ತನ್ನ ಹಣೆಯತ್ತ ನೋಡಿದ.ಅವನ ಹುಬ್ಬುಗಳೆಡೆಯಿಂದ ಭೀಕರಾಕೃತಿಯೊಂದು ಅವತರಿಸಿ,ಮೂರು ಲೋಕಗಳು ಭಯದಿಂದ ಕಂಪಿಸುವಂತೆ ಘರ್ಜಿಸಿದ.ಶಿವನಿಗೆ ತಲೆಬಾಗಿ ‘ ಏನಪ್ಪಣೆ ಸ್ವಾಮಿ’ ಎಂದು ಪ್ರಾರ್ಥಿಸಿದನು.ಶಿವನು ” ಮಗು ಭೈರವ,ಹೋಗು ಸುಳ್ಳನ್ನಾಡಿದ ಬ್ರಹ್ಮನನ್ನು ನಿನ್ನ ಹರಿತವಾದ ಖಡ್ಗದಿಂದ ಕತ್ತರಿಸು”

ಶಿವನಪ್ಪಣೆಯನ್ನು ಕೊಂಡು ಉಗ್ರಭಯಂಕನಾದ ಭೈರವನು ಬ್ರಹ್ಮನ ಬಳಿಬಂದು ಅವನನ್ನು ಹಿಡಿದೆಳೆದಾಡಿ ,ಅವನು ತಲೆಗೂದಲನ್ನು ಹಿಡಿದುಕೊಂಡು ಸುಳ್ಳನ್ನಾಡಿದ ಅವನ ತಲೆಯನ್ನು ತನ್ನ ಹರಿತವಾದ ಖಡ್ಗದಿಂದ ಕತ್ತರಿಸಿದ.ಭಯದಿಂದ ನಡುಗತೊಡಗಿದ ಬ್ರಹ್ಮನ ವೇಷಭೂಷಣಗಳೆಲ್ಲ ಅಸ್ತವ್ಯಸ್ತವಾಗಿವೆ.ಭೈರವನು ತನ್ನ ಹರಿತವಾದ ಕತ್ತಿಯನ್ನು ಕೈಯಲ್ಲಿಡಿದುಕೊಂಡು ಬ್ರಹ್ಮನ ಉಳಿದ ತಲೆಗಳನ್ನು ಕತ್ತರಿಸಲು ಝಳಪಿಸುತ್ತಿದ್ದಾನೆ.ಭೈರವನ ಕೈಯಲ್ಲಿ ತಾನು ಬದುಕುಳಿಯುವುದಿಲ್ಲವೆಂದರಿತ ಬ್ರಹ್ಮನು ಭೈರವನ ಕಾಲಿಗೆ ಬಿದ್ದು ” ಪ್ರಾಣ ರಕ್ಷಿಸು,ಪ್ರಾಣ ರಕ್ಷಿಸು” ಎಂದು ಅಂಗಲಾಚಿ ಬೇಡತೊಡಗಿದನು.

ಬ್ರಹ್ಮನ ಈ ದೈನ್ಯಾವಸ್ಥೆಯನ್ನು ಕಂಡು ವಿಷ್ಣುವಿಗೆ ಸಹಿಸಲಾಗಲಿಲ್ಲ.ಕ್ಷಣ ತಡಮಾಡಿದರೆ ಮಹಾ ಅನರ್ಥವಾಗುವುದೆಂದರಿತ ವಿಷ್ಣುವು ಅವಸರವಸರವಾಗಿ ನಡೆದು ಶಿವನ ಕಾಲುಗಳ ಮೇಲೆ ಬಿದ್ದು ಅವುಗಳನ್ನು ತನ್ನ ಕಣ್ಣೀರಿನಿಂದ ತೊಳೆದ.ಕೈಮುಗಿದು ಪ್ರಾರ್ಥಿಸಿದ ” ಪರಮಕರುಣಾಳುವಾದ ಶಿವನೆ,ಬ್ರಹ್ಮನಿಗೆ ನೀನೇ ಅಲ್ಲವೆ ಈ ಪದವಿಯನ್ನಿತ್ತವನು?ನೀನು ಬ್ರಹ್ಮಪದವಿಯನ್ನಿತ್ತೆ ಎಂದು ಅವನು ಐದು ತಲೆಗಳನ್ನು ಹೊಂದಿದ.ಇದೊಂದು ಸಾರೆ ಬ್ರಹ್ಮನನ್ನು ಕ್ಷಮಿಸಿಬಿಡು”ಎಳೆಮಗುವು ತನ್ನ ತೊದಲುಮಾತಿನಿಂದ ತಂದೆಯನ್ನು ಪೀಡಿಸಿ,ಕಾಡುವಂತೆ ಮಾತನಾಡಿದ ವಿಷ್ಣು.

ವಿಷ್ಣುವಿನ ಪ್ರಾರ್ಥನೆಗೆ ಕರಗಿತು ಶಿವನ ಮನಸ್ಸು.ಭೈರವನನ್ನು ಕರೆದು ” ಸಾಕು ಬ್ರಹ್ಮನಿಗೀ ಶಿಕ್ಷೆ” ಎಂದನು.ಅಪ್ಪಣೆ ಎಂದು ಶಾಂತನಾದ ಭೈರವನು ಬ್ರಹ್ಮನನ್ನು ಬಿಟ್ಟು ಬಿಟ್ಟನು.ಗಡಗಡನೆ ನಡುಗುತ್ತ ಶಿವನೆದುರು ತಲೆ ತಗ್ಗಿಸಿ ನಿಂತ ಬ್ರಹ್ಮನನ್ನು ಕುರಿತು ಶಿವನು ” ಬ್ರಹ್ಮ ನೀನು ಹಿರಿಯವನೆನ್ನಿಸಿಕೊಳ್ಳಬೇಕು ಎನ್ನುವ ಆಸೆಯಲ್ಲಿ ಸುಳ್ಳನ್ನಾಡಿದೆ.ಸುಳ್ಳಾಡಿದ ನೀನು ಪೂಜೆಗೆ ಅರ್ಹನಲ್ಲ.ಇನ್ನು ಮುಂದೆ ಲೋಕದಲ್ಲಿ ನಿನಗೆ ಪೂಜೆ,ಸೇವೆಗಳು ಸಲ್ಲದಿರಲಿ” ಎಂದನು ಶಿವ.

‌ಪಶ್ಚಾತ್ತಾಪದಗ್ಧನಾದ ಬ್ರಹ್ಮನು ಶಿವನ ಪಾದಗಳನ್ನು ಹಿಡಿದುಕೊಂಡು ” ದಯಾಸಾಗರನಾದ ಪರಮೇಶ್ವರನೆ,ನೀನೀಗ ಮಾಡಿದ ಶಿಕ್ಷೆ ,ನನ್ನ ಐದನೆಯ ತಲೆಯನ್ನು ತೆಗೆದುದು ವರವೆಂದೇ ಬಗೆಯುತ್ತೇನೆ.ನಿನಗಿದೋ ಭಕ್ತಿಪೂರ್ವಕ ಪ್ರಣಾಮಗಳು.ಜಗತ್ತಿನ ಮೂಲಕಾರಣನಾದ ನೀನೇ ನಮಗೆಲ್ಲರಿಗೂ ಬಂಧು.ಭಕ್ತರ ಅಪರಾಧ ಸಹಸ್ರವನ್ನು ಕ್ಷಮಿಸಿ,ಪೊರೆಯುವ ದಯಾವಾರಿಧಿಯು ನೀನು.ಮೇರು ಪರ್ವತವನ್ನು ಬಿಲ್ಲನ್ನಾಗಿಸಿ,ತ್ರಿಪುರರನ್ನು ಸಂಹರಿಸಿ ಲೋಕಕಲ್ಯಾಣ ಮಾಡಿದ ಪ್ರಭುವು ನೀನು.ಅಜ್ಞಾನವಶನಾಗಿ ನಾನು ಗೈದ ಅಪರಾಧವನ್ನು ಮನ್ನಿಸು.ಆರ್ತರಕ್ಷಕನಾದ ನೀನಲ್ಲದೆ ನನಗೆ ಮತ್ತಿನ್ನಾರು ಗತಿ?” ಎಂದು ಪರಿಪರಿಯಾಗಿ ಬೇಡಿದನು.

ಬ್ರಹ್ಮನ ಮೊರೆ ಕೇಳ್ದ ಶಿವನು‌ ಪ್ರಸನ್ನನಾಗಿ ” ಆಗಲಿ,ನಿನ್ನನ್ನು ಪೂಜಾಬಾಹಿರನನ್ನಾಗುವಂತೆ ಶಪಿಸಿದ ನಾನು ನಿನಗೆ ಬೇರೆ ಉತ್ತಮವಾದ ವರ ಒಂದನ್ನು ಕೊಡುವೆ.ಯಜ್ಞಗಳಿಗೆಲ್ಲ ನೀನು ಗುರುವಾಗುವೆ.ನೀನಿಲ್ಲದ ಯಜ್ಞ ಅದೆಷ್ಟು ವೈಭಯುತವಾಗಿ,ಸಾಂಗವಾಗಿ ನಡೆದರೂ ಫಲಕಾರಿಯಾಗದು” ಎಂದು ಬ್ರಹ್ಮನನ್ನು ಅನುಗ್ರಹಿಸಿದ ಶಿವ.

ನಂತರ ಕೇದಗೆಯತ್ತ ತಿರುಗಿ ಶಿವನು ” ಛೀ! ಪಾಪಿ ತೊಲಗಿಲ್ಲಿಂದ.ಸುಳ್ಳನ್ನಾಡಿದ ನಿನ್ನನ್ನು ,ನಿನ್ನ ಸಂತತಿಯನ್ನು ನಾನು ಇನ್ನು ಮುಂದೆ ಧರಿಸಲಾರೆ”.

ಶಿವನ ಕೋಪದಿಂದ ಭಯಕಂಪಿತವಾದ ಕೇದಗೆಯು ” ಪ್ರಭು ಪರಮೇಶ್ವರನೆ ನನ್ನಿಂದ ಅಪರಾಧವಾಯಿತು ;ಮನ್ನಿಸಿ,ಪೊರೆಯಬೇಕು.ಜಗದ್ರಕ್ಷಕನಾದ ನೀನೇ ಮುನಿದರೆ ನಾನು ಯಾರ ಬಳಿ ಮೊರೆ ಹೋಗಲಿ?ನಿನ್ನ ಶಾಪವಾಕ್ಯದಿಂದ ನನ್ನ ಜನ್ಮವನ್ನು ನಿರರ್ಥಕಗೊಳಿಸಬೇಡ.ಕೇವಲ ನಿನ್ನ ಸ್ಮರಣೆ ಮಾತ್ರದಿಂದ ಮಹಾಪಾತಕಗಳು ಸುಟ್ಟು ಬೂದಿಯಾಗುತ್ತವೆ. ನಿನ್ನನ್ನು ಅಘಹರ,ಪಾಪಹರನೆಂದೇ ಲೋಕಗಳು ಪೂಜಿಸುತ್ತಿವೆ.ಅಂತಹ ನಿನ್ನನ್ನು ಪ್ರತ್ಯಕ್ಷ ಕಂಡ ಬಳಿಕವೂ ನಾನಾಡಿದ ಸುಳ್ಳಿನ ಪಾಪ ಉಳಿಯಬಹುದೆ?” ಪರಿಪರಿಯಿಂದ ತಪ್ಪನ್ನು ಕ್ಷಮಿಸುವಂತೆ ಬೇಡಿತು ಕೇದಗೆ.

ಕೇದಗೆಯ ಪ್ರಾರ್ಥನೆಗೆ ಶಿವನ ಮನಸ್ಸು ಕರಗಿತಾದರೂ ಶಿವನು ಕೇದಗೆಗೆ ತಾನಿತ್ತ ಶಾಪವಾಕ್ಯವನ್ನು ಹಿಂತೆಗೆದುಕೊಳ್ಳದೆ ” ನಾನಾಡಿದ ಮಾತು ವ್ಯರ್ಥವಾಗದು.ನಾನು ನಿನ್ನನ್ನು ಧರಿಸಲಾರೆ.ಆದರೆ ನಿನ್ನ ಪ್ರಾರ್ಥನೆಗೆ ಓಗೊಟ್ಟು ನನ್ನ ಭಕ್ತರು ನಿನ್ನನ್ನು ಧರಿಸುವಂತೆ ವರನೀಡುವೆ.ನನ್ನ ಭಕ್ತರು ನಿನ್ನನ್ನು ಧರಿಸಿ ನಿನ್ನ ಜನ್ಮಕ್ಕೆ ಸಾಫಲ್ಯವನ್ನುಂಟು ಮಾಡುವರು.ನನ್ನ ಧ್ವಜವಾಗಿ ನನ್ನ ರಥದ ಮೇಲೆ ಕುಳಿತುಕೊಳ್ಳುವ ಅವಕಾಶವನ್ನು ನಿನಗೆ ನೀಡುತ್ತೇನೆ “.ನಿಗ್ರಹಾನುಗ್ರಹ ಸಮರ್ಥನಾದ ಶಿವನು ಹೀಗೆ ವಿಷ್ಣುವನ್ನು ಅನುಗ್ರಹಿಸಿ,ಬ್ರಹ್ಮ ಮತ್ತು ಕೇದಗೆಗಳನ್ನು ನಿಗ್ರಹಿಸಿ,ಅನುಗ್ರಹಿಸಿ ಕೈಲಾಸಕ್ಕೆ ತೆರಳಿ ತನ್ನ ಸಿಂಹಾಸನದಲ್ಲಿ ವಿರಾಜಮಾನನಾದನು.

ವ್ಯಾಖ್ಯಾನ

ಸತ್ಯನಿಷ್ಠನಾದ ವಿಷ್ಣುವನ್ನು ತನ್ನ ಸಮಾನ ಪೂಜೆಗೊಳ್ಳುವಂತೆ ಅನುಗ್ರಹಿಸಿದ ಶಿವನು ಈಗ,ಈ ಅಧ್ಯಾಯದಲ್ಲಿ ಬ್ರಹ್ಮನನ್ನು ದಂಡಿಸುವ ಮೂಲಕ ನಿಗ್ರಹಿಸುತ್ತಿದ್ದಾನೆ. ರೋಷಾವಿಷ್ಟನಾದ ತನ್ನ ಹುಬ್ಬುಗಳಿಂದ ಹುಟ್ಟಿದ ಭೈರವನಿಗೆ ಬ್ರಹ್ಮನನ್ನು ಸಂಹರಿಸಲು ಆಜ್ಞಾಪಿಸುವನು.ಶಿವನಪ್ಪಣೆಯಂತೆ ಕ್ರೋಧೋನ್ಮತ್ತನಾದ ಭೈರವನು ತನ್ನ ಹರಿತವಾದ ಖಡ್ಗದಿಂದ ಸುಳ್ಳನ್ನಾಡಿದ ಬ್ರಹ್ಮನ ಒಂದು ತಲೆಯನ್ನು ಕತ್ತರಿಸುವನು,ಉಳಿದ ನಾಲ್ಕು ತಲೆಗಳನ್ನು ಕಡಿಯಬೇಕು ಎನ್ನುವಷ್ಟರಲ್ಲಿ ವಿಷ್ಣುವಿನ ಪ್ರಾರ್ಥನೆಗೆ ಕರಗಿದ ಶಿವನು ಬ್ರಹ್ಮನ ಉಳಿದ ಶಿರಗಳನ್ನು ತರಿಯದಂತೆ ಭೈರವನಿಗೆ ಆಜ್ಞಾಪಿಸುವನು.

ಸುಳ್ಳನ್ನಾಡಿದ ಬ್ರಹ್ಮನು ಲೋಕದಲ್ಲಿ ಪೂಜೆಗೊಳ್ಳದಂತೆ ಶಿವನು ಶಪಿಸುವನು.ಸತ್ಯಸ್ವರೂಪನಾದ ಶಿವನು ಸತ್ಯವನ್ನು ಮೆಚ್ಚುತ್ತಾನೆ,ಸತ್ಯವ್ರತಿಗಳನ್ನು ಅನುಗ್ರಹಿಸುತ್ತಾನೆ,ಉದ್ಧರಿಸುತ್ತಾನೆ.ವಿಷ್ಣುವಿನ ಸತ್ಯನಿಷ್ಠೆಯಿಂದಾಗಿಯೇ ಅವನನ್ನು ತನ್ನ ಸಮಾನ ಪೂಜೆಗೊಳ್ಳುವಂತೆ ವರವಿತ್ತು ಅನುಗ್ರಹಿಸಿದ ಶಿವನು ಸುಳ್ಳನ್ನಾಡಿದ ಬ್ರಹ್ಮನನ್ನು ಪೂಜಾಬಾಹಿರನಾಗುವಂತೆ ಶಪಿಸುತ್ತಾನೆ.ಶಿವನ ಶಾಪದಿಂದಾಗಿ ಲೋಕದಲ್ಲಿ ಜನರು ಬ್ರಹ್ಮನನ್ನು ಪೂಜಿಸುತ್ತಿಲ್ಲ.ಲೋಕದಲ್ಲಿ ಪೂಜೆಗೊಳ್ಳದಂತೆ ಬ್ರಹ್ಮನನ್ನು ಶಾಪವಾಕ್ಯದಿಂದ ನಿಗ್ರಹಿಸಿದ ಶಿವನು ಬ್ರಹ್ಮನ ಪ್ರಾರ್ಥನೆಗೆ ಕರಗಿ ಅವನಿಗೆ ಯಜ್ಞಗಳ ಗುರುವಾಗುವ ಬೇರೊಂದು ವರವನ್ನಿತ್ತು ಅನುಗ್ರಹಿಸುವನು.ಸುಳ್ಳು ಸಾಕ್ಷಿ ನುಡಿದ ಕೇದಗೆ ಹೂವನ್ನು ತನ್ನ ತಲೆಯಲ್ಲಿ ಮುಡಿಯುವುದಿಲ್ಲ ಎಂದು ಅದನ್ನು ದಂಡಿಸಿದ ಶಿವನು ಕೇದಗೆಯ ಪ್ರಾರ್ಥನೆಗೆ ಕರುಣೆ ಉಕ್ಕಿ ಶಿವಭಕ್ತರು ಅದನ್ನು ಧರಿಸಿ,ಉದ್ಧರಿಸುವಂತೆ ವರವಿತ್ತನು.

ನಿತ್ಯನೂ ಸನಾತನನೂ ಆದ ಶಿವನು ಸತ್ಯಸ್ವರೂಪನಿರುವನು,ಸತ್ಯಪ್ರೇಮಿ‌ಇರುವನು.ಸತ್ಯದಿಂದ ಸದ್ಗತಿ,ಸುಳ್ಳಿನಿಂದ ದುರ್ಗತಿ.ಶಿವಭಕ್ತರು ಸತ್ಯವಂತರಾಗಿರಬೇಕು.ಸುಳ್ಳು,ಮೋಸಗಳು ಸಲ್ಲವು ಶಿವಭಕ್ತರಿಗೆ.ಶಿವಭಕ್ತರಾದವರು ಸುಳ್ಳನ್ನಾಡಬಾರದು ಮಾತ್ರವಲ್ಲ,ಸುಳ್ಳು ಸಾಕ್ಷಿಯನ್ನೂ ಹೇಳಬಾರದು.ಎಷ್ಟೇ ಕಷ್ಟ ನಷ್ಟಗಳುಂಟಾದರೂ ಶಿವಭಕ್ತರು ಸತ್ಯವನ್ನು ಬಿಡಬಾರದು; ಎಷ್ಟೇ ಸುಖ,ಸುಖ- ಸಮೃದ್ಧಿಯ ಪಥವಾದರೂ ಅಸತ್ಯವನ್ನು,ವಾಮ ಮಾರ್ಗವನ್ನು ಆಶ್ರಯಿಸಬಾರದು ಶಿವಭಕ್ತರು.

ಶಿವನು ತಾನು ಒಲಿದವರನ್ನು ಅನುಗ್ರಹಿಸಿ,ಉದ್ಧರಿಸಬಲ್ಲ; ತನ್ನ ಕೋಪಕ್ಕೆ ಕಾರಣರಾದ ಯಾರನ್ನೇ ಆಗಲಿ ದಂಡಿಸಿ,ನಿಗ್ರಹಿಸದೆ ಬಿಡನು.ಆದ್ದರಿಂದ ಶಿವನನ್ನು ನಿಗ್ರಹಾನುಗ್ರಹ ಸಮರ್ಥನೆನ್ನುತ್ತಾರೆ.ನಿಗ್ರಹಾನುಗ್ರಹ ಸಮರ್ಥನಿರುವ ಶಿವನು ಸತ್ಯವನ್ನು ಮೆಚ್ಚುತ್ತಾನೆ,ಸುಳ್ಳನ್ನು ಸಹಿಸುವುದಿಲ್ಲ.ಆ ಕಾರಣದಿಂದ ಶಿವಭಕ್ತರು ಸತ್ಯವ್ರತಿಗಳಾಗಿರಬೇಕು,ಸತ್ತ್ವಪಥದಲ್ಲಿ ನಡೆಯಬೇಕು.

೦೫.೦೮.೨೦೨೨

About The Author