ಶ್ರಾವಣ ಸಂಜೆ | ಶ್ರೀ ಶಿವ ಮಹಾಪುರಾಣ — ವ್ಯಾಖ್ಯಾನ — ೦೭ | ಮುಕ್ಕಣ್ಣ ಕರಿಗಾರ

ಶಿವರಾತ್ರಿಯ ಪೂಜಾಫಲ

ಬ್ರಹ್ಮ ವಿಷ್ಣುಗಳು ಶಿವನನ್ನು ನಮಸ್ಕರಿಸಿ ಕೈಜೋಡಿಸಿ ಎಡ ಬಲಗಳಲ್ಲಿ ನಿಂತರು.ಶಿವನು ಉಮೆಯೊಂದಿಗೆ ತನ್ನ ದಿವ್ಯಾಸನದಲ್ಲಿ ಮಂಡಿಸಿದನು.

ಬ್ರಹ್ಮ ವಿಷ್ಣುಗಳು ಶಿವನನ್ನು ಪೂಜಿಸಿದರು.ಬಗೆಬಗೆಯ ಮಂಗಲದ್ರವ್ಯಗಳನ್ನು ಶಿವನಿಗೆ ಸಮರ್ಪಿಸಿದರು.ಷೋಡಶೋಪಚಾರದಿಂದ ಶಿವನನ್ನು ಅರ್ಚಿಸಿದರು.ಅಗಣಿತ ದಿವ್ಯ ವಸ್ತುಗಳನ್ನು ಶಿವನಿಗೆ ಅರ್ಪಿಸಿದರು.ಬ್ರಹ್ಮ ವಿಷ್ಣುಗಳು ಅರ್ಪಿಸಿದ ದಿವ್ಯ ವಸ್ತ್ರ,ವಡವೆಗಳನ್ನು ಶಿವನು ತೆಗೆತೆಗೆದು ತನ್ನ ಸಭಾಸದರಿಗೆ ಕೊಟ್ಟನು.ದೇವತೆಗಳೆಲ್ಲರೂ ವಿನೀತರಾಗಿ ಕೈ ಮುಗಿದುಕೊಂಡು ನಿಂತರು.ಸಭೆಯಲ್ಲಿದ್ದ ಋಷಿಗಳು ಮಂಗಳಘೋಷಗಳಿಂದ ಶಿವನನ್ನು ಸ್ತುತಿಸಿದರು.

ತನ್ನನ್ನು ಬಹುವಿಧವಾಗಿ ಪೂಜಿಸಿ,ಕರಗಳನ್ನು ಜೋಡಿಸಿ ನಿಂತಿದ್ದ ಬ್ರಹ್ಮ- ವಿಷ್ಣುಗಳತ್ತ ಅನುಗ್ರಹಪೂರ್ವಕವಾಗಿ ನೋಡಿದ ಶಿವನು ” ಮಕ್ಕಳೆ,ಈ ಮಹಾದಿನದಲ್ಲಿ ನೀವಿಬ್ಬರೂ ಮಾಡಿದ ಪೂಜೋಪಚಾರಕ್ಕೆ ಮೆಚ್ಚಿದೆನು.ನನಗಿದು ಪ್ರೀತಿಯ ದಿನ.ನೀವಿಬ್ಬರೂ ನನ್ನರ್ಚಿಸಿ ಪೂಜಿಸಿದ ಈ ಮಹಾಪುಣ್ಯ ದಿನವು ಶಿವರಾತ್ರಿಯಂದೇ ಪ್ರಸಿದ್ಧವಾಗುವುದು.ಈ ದಿನ ನನ್ನ ಲಿಂಗ- ಮೂರ್ತಿಗಳನ್ನು ಪೂಜಿಸಿದವನು ನನ್ನ ಪ್ರೀತಿಗೆ ಪಾತ್ರನಾಗುವನಲ್ಲದೆ ಅವನ ಮನೋಭಿಷ್ಟವನ್ನೆಲ್ಲವನ್ನು ಈಡೇರಿಸುವೆನು.ಶಿವರಾತ್ರಿಯಂದು ಹಗಲು ರಾತ್ರಿ ನಿರಾಹಾರನಾಗಿ, ಜಿತೇಂದ್ರಿಯನಾಗಿ ಶಕ್ಯವಿದ್ದಷ್ಟು ನನ್ನನ್ನು ಪೂಜಿಸಿದರೆ ವರ್ಷವಿಡೀ ಸತತವಾಗಿ ನನ್ನನ್ನು ಪೂಜಿಸಿದ ಪುಣ್ಯಫಲವು ಆ ಕೂಡಲೆ ದೊರೆಯುವುದು.ಶಿವರಾತ್ರಿಯಂದು ನನಗೆ ಸಲ್ಲಿಸುವ ಪೂಜೆ ಸೇವೆಗಳು ಚಂದ್ರೋದಯಕ್ಕೆ ಸಮುದ್ರವು ಉಕ್ಕುವಂತೆ ವೃದ್ಧಿಗೊಂಡು ಅಧಿಕಾಧಿಕ ಫಲ ನೀಡುವವು”

” ನಾನು ಸ್ತಂಭ ರೂಪದಿಂದ ಕಾಣಿಸಿಕೊಂಡುದುದು ಮಾರ್ಗಶೀರ್ಷ ಮಾಸದ ಆರಿದ್ರಾ ನಕ್ಷತ್ರ ದಿನದಲ್ಲಿ.ಆ ದಿನ ನನ್ನನ್ನು ಉಮಾಸಹಿತನಾಗಿ ಲಿಂಗ- ಮೂರ್ತಿಗಳಲ್ಲಿ ಪೂಜಿಸುವವನು ನನಗೆ ಕುಮಾರ ಷಣ್ಮುಖನಿಗಿಂತಲೂ ಹೆಚ್ಚು ಪ್ರೀತಿ ಪಾತ್ರನಾಗುವನು.ಅಂದು ನನ್ನ ಲಿಂಗ ಮೂರ್ತಿಗಳ ದರ್ಶನ ಮಾತ್ರದಿಂದಲೇ ಪಾಪಗಳು ಅಳಿದು,ಪುಣ್ಯಪ್ರಾಪ್ತಿಯಾಗುವುದು.ಆ ದಿನ ನನ್ನನ್ನು ಪೂಜಿಸಿದರೆ ಅನಂತಫಲ ದೊರೆಯುವುದು”.

” ಯುದ್ಧಭೂಮಿಯಲ್ಲಿ ನಿಮ್ಮಿಬ್ಬರನ್ನು ಉದ್ಧರಿಸಲು ನಾನು ಲಿಂಗರೂಪದಿಂದ ಆವಿರ್ಭವಿಸಿದುದರಿಂದ ಆ ಸ್ಥಳವು ಲಿಂಗಸ್ಥಾನವೆಂದೇ ಲೋಕದಲ್ಲಿ‌ ಪ್ರಸಿದ್ಧಿಯನ್ನು ಹೊಂದುವುದು.ಆದ್ಯಂತವಾಗಿದ್ದ ಆ ಮಹಾಸ್ತಂಭವು ಇನ್ನು ಮುಂದೆ ಚಿಕ್ಕ ಲಿಂಗಾಕಾರವನ್ನು ಹೊಂದಿ ಭಕ್ತಾದಿಗಳ ದರ್ಶನ,ಸೇವೆ ಸತ್ಕಾರಗಳನ್ನು ಪಡೆಯುವುದು.ಈ ಲಿಂಗದ ದರ್ಶನ ಸ್ಪರ್ಶನ ಧ್ಯಾನಗಳಿಂದ ಲೋಕದ ಭಕ್ತರು ಭುಕ್ತಿ ಮುಕ್ತಿಗಳೆರಡನ್ನೂ ಹೊಂದುವರು”.

” ಅಗ್ನಿಪರ್ವತದಂತೆ ಜ್ವಲಿಸುತ್ತಿದ್ದ ಜ್ವಲಲಿಂಗವು ಆವಿರ್ಭವಿಸಿದ ಸ್ಥಳವು ಅರುಣಾಚಲವೆಂದು ಹೆಸರಾಗುವುದು.ಇಲ್ಲಿ ಹಲವಾರು ಮಹಾ ತೀರ್ಥಗಳು ಉದ್ಭವಿಸುವವು.ಇಲ್ಲಿ ವಾಸಿಸುವವರು,ಮರಣ ಹೊಂದಿದವರು ಮೋಕ್ಷವನ್ನು ಪಡೆಯುವರು.ಜನರು ತಂಡೋಪತಂಡವಾಗಿ ಅರುಣಾಚಲಕ್ಕೆ ಬಂದು ವಾಸಿಸುವರು,ನನ್ನನ್ನು ಪೂಜಿಸಿ,ಸೇವಿಸುವರು.ರಥೋತ್ಸವವಾದಿಗಳನ್ನು ಸಂಭ್ರಮದಿಂದ ನೆರವೇರಿಸುವರು.ಇಲ್ಲಿ ಮಾಡುವ ದಾನ- ಜಪಗಳಿಗೆ ಕೋಟಿ ಫಲದೊರೆಯುವುದು.ನನ್ನ ಕ್ಷೇತ್ರಗಳಲ್ಲೆಲ್ಲ ಅರುಣಾಚಲಕ್ಷೇತ್ರವು ಮಿಗಿಲು ಮಹಿಮೆಯ ಕ್ಷೇತ್ರವೆನ್ನಿಸಿಕೊಂಡು ಸ್ಮರಣ ಮಾತ್ರದಿಂದಲೇ ಮುಕ್ತಿಯನ್ನು ನೀಡುವುದು.ಸಕಲರ ಮುಕ್ತಿಯ ಸ್ಥಾನವಾಗಿ ಅರುಣಾಚಲವು ಪ್ರಸಿದ್ಧಿಯನ್ನು ಹೊಂದುವುದು.ಇಲ್ಲಿ ನೀವು ನನ್ನ ಲಿಂಗವನ್ನು ಪೂಜಿಸಿ ಸಾಲೋಕ್ಯ,ಸಾಮಿಪ್ಯ,ಸಾರೂಪ್ಯ,ಸಾರ್ಷ್ಟಿ,ಸಾಯುಜ್ಯಗಳೆಂಬ ಐದು ವಿಧವಾದ ಮೋಕ್ಷಗಳನ್ನು ಪಡೆಯಿರಿ”.

ಬ್ರಹ್ಮ ವಿಷ್ಣುಗಳನ್ನು ಹೀಗೆಂದು ಅನುಗ್ರಹಿಸಿದ ಶಿವನು ಯುದ್ಧಭೂಮಿಯಲ್ಲಿ ಎರಡೂ ಪಕ್ಷದಲ್ಲಿ ಮಡಿದ ಸೈನ್ಯವನ್ನು ತನ್ನ ಶಕ್ತಿಯ ಅಮೃತಸೇಚನೆಯಿಂದ ಬದುಕಿಸಿದ.ಸತ್ತ ಸೈನಿಕರೆಲ್ಲ ” ಶಿವ ಶಂಭೋ ಶಂಕರ ಹರ ಮಹಾದೇವ” ಎಂದು ಜಯಘೋಷ ಕೂಗುತ್ತ ಎದ್ದು ಕೈಮುಗಿದು ನಿಂತರು.ಪುನಃ ಬ್ರಹ್ಮ ವಿಷ್ಣುಗಳತ್ತ ತಿರುಗಿ ಅವರಿಬ್ಬರಲ್ಲಿ ಉಂಟಾದ ಅಜ್ಞಾನ ಮತ್ತು ವೈರತ್ವವನ್ನು ಕಳೆಯಲು ಹೀಗೆಂದನು :–” ನನಗೆ ಸಾಕಾರ,ನಿರಾಕಾರ ಎಂಬ ಎರಡು ರೂಪಗಳಿವೆ.ಯುದ್ಧಭೂಮಿಯಲ್ಲಿ ಮೊದಲು ನಿಮ್ಮಿಬ್ಬರಿಗೆ ಸ್ತಂಭ ರೂಪದಿಂದ ಕಾಣಿಸಿಕೊಂಡೆ.ಇದು ನನ್ನ ನಿರಾಕಾರ ಬ್ರಹ್ಮರೂಪ‌.ಬಳಿಕ ಈ ಪ್ರತ್ಯಕ್ಷ ರೂಪದಿಂದ ಕಾಣಿಸಿಕೊಂಡೆ.ಇದುವೇ ನನ್ನ ಸಾಕಾರ ಈಶ್ವರ ರೂಪ.ಸಾಕಾರ ನಿರಾಕಾರವೆಂಬ ಎರಡು ರೂಪಗಳು ನನಗೊಬ್ಬನಿಗೆ ಮಾತ್ರ ಇವೆ.ಏಕೆಂದರೆ ನೀವಾರೂ ಪರಮೇಶ್ವರರಲ್ಲ.ಅದನ್ನರಿಯದೆ ನೀವೇ ಪ್ರಭುಗಳೆಂದುಕೊಂಡಿರಿ.ಇನ್ನು ಈ ಅಹಂಕಾರವನ್ನು ಬಿಟ್ಟು ವಿಶ್ವದ ಮೂಲಕಾರಣನಾದ,ಆದಿ- ಅಂತ್ಯಗಳಿರದ ,ಪರಬ್ರಹ್ಮನಾದ ನನ್ನನ್ನು ಪ್ರಭುವೆಂದು ಭಾವಿಸಿ,ಆರಾಧಿಸಿ.ಇದುವೇ ತತ್ತ್ವಜ್ಞಾನ.ನನ್ನ ಅನುಗ್ರಹವಿಲ್ಲದೆ ಲೋಕಕ್ಕೆ ನನ್ನಲ್ಲಿ ಭಕ್ತಿಯಾಗಲಿ,ನನ್ನ ತತ್ತ್ವಜ್ಞಾನವಾಗಲಿ ದೊರಕದು.ಗುರೂಪದೇಶಗಳೂ ವೇದಾಂತಾದಿ ಸದ್ಗ್ರಂಥಗಳು ನನ್ನ ಈ ತತ್ತ್ವವನ್ನು ಒಂದಿಷ್ಟು ಮಾತ್ರ ತಿಳಿಸಿಕೊಡಬಲ್ಲವು.ನಿಮ್ಮಿಬ್ಬರ ಮೇಲಿನ ಪ್ರೀತಿಯಿಂದ ರಹಸ್ಯಾತಿರಹಸ್ಯವಾದ ನನ್ನ ಬ್ರಹ್ಮ ತತ್ತ್ವವನ್ನು ನಿಮಗೆ ಉಪದೇಶಿಸುವೆನು.ಕೇಳಿ

” ನಾನೇ ಪರಬ್ರಹ್ಮ.ನನಗೆ ಎರಡು ರೂಪಗಳಿವೆ,ಒಂದು ಸಾಕಾರ ಮತ್ತೊಂದು ನಿರಾಕಾರ.ಬೃಹತ್ವ– ಬ್ರಂಹತ್ವವೆರಡೂ ಇರುವುದರಿಂದ ನಾನು ಬ್ರಹ್ಮ.ಎಲ್ಲೆಡೆ ವ್ಯಾಪಿಸಿರುವೆನಾದ್ದರಿಂದ ನಾನು ಆತ್ಮ.ನನ್ನ ಹೊರತು ಮತ್ತಾರೂ ಆತ್ಮರಿಲ್ಲ.ಅನುಗ್ರಹವು ಮೊದಲುಗೊಂಡು ಸ್ವರ್ಗದವರೆಗಿನ ಪಂಚವಿಧದ ವಿಶ್ವವ್ಯಾಪರವೂ ಈಶ್ವರನಾದ ನನ್ನದೇ ಕಾರ್ಯ.ಮೊದಲು ನನ್ನ ಬ್ರಹ್ಮರೂಪವನ್ನು ತೋರಿಸಲೆಂದೇ ನಿಮ್ಮಿಬ್ಬರಿಗೆ ಸ್ತಂಭ ರೂಪದಲ್ಲಿ‌ ತೋರಿದೆ.ನಂತರ ನನ್ನ ಈಶ್ವರ ರೂಪ ತೋರಿಸಲೆಂದು ಸಾಕಾರನಾಗಿ ಪ್ರಕಟಗೊಂಡೆ.ಆದುದರಿಂದ ಲಿಂಗವು ನನ್ನದೇ ಒಂದು ರೂಪವೆಂದು ತಿಳಿದು ನೀವಿಬ್ಬರೂ ನಿತ್ಯವೂ ಲಿಂಗಾರ್ಚನೆ ಮಾಡಬೇಕು.ನನ್ನ ಲಿಂಗವನ್ನು ಎಲ್ಲಿ ಸ್ಥಾಪಿಸುವಿರೋ ಅಲ್ಲಿ ನಾನು ಇರುವೆ.ನನ್ನ ಮತ್ತು ಲಿಂಗದ ನಡುವೆ ವ್ಯತ್ಯಾಸವಿಲ್ಲ,ನಾನೇ ಲಿಂಗ,ಲಿಂಗವೇ ನಾನು.ಲಿಂಗಸ್ಥಾಪನೆಯಿಂದ ನಾನು ಸಂಪ್ರೀತನಾಗುವೆನು.ಒಂದು ಲಿಂಗವನ್ನು ಸ್ಥಾಪಿಸಿದರೆ ನನ್ನ ಸಾರೂಪ್ಯ ನೀಡುವೆನು.ಎರಡು ಲಿಂಗಗಳನ್ನು ಸ್ಥಾಪಿಸಿದರೆ ಸಾಯುಜ್ಯ ನೀಡುವೆನು.ಲಿಂಗವನ್ನು ಸ್ಥಾಪಿಸಿದರೆ ಅಧಿಕಫಲ; ಮೂರ್ತಿ ಸ್ಥಾಪನೆಯಿಂದ ಅಷ್ಟು ಫಲವಿಲ್ಲ.ಆದರೆ ಲಿಂಗವಿಲ್ಲದೆಡೆ ನನ್ನ ಮೂರ್ತಿ ಇದ್ದರೂ ಸಾಕು,ನನ್ನ ಮೂರ್ತಿ ಇರುವ ಆ ಸ್ಥಳ ನನ್ನ ಕ್ಷೇತ್ರವೇ ಆಗುವುದು”

ವ್ಯಾಖ್ಯಾನ

ಬ್ರಹ್ಮ ವಿಷ್ಣುಗಳಿಬ್ಬರನ್ನು ಅನುಗ್ರಹಿಸಿ,ಉದ್ಧರಿಸಲು ಈ ಅಧ್ಯಾಯದಲ್ಲಿ ಶಿವನು ಅವರಿಬ್ಬರಿಗೆ ತನ್ನ ಬ್ರಹ್ಮ ಸ್ವರೂಪವನ್ನು ಬೋಧಿಸುವನು.ಶಿವನು ಬ್ರಹ್ಮನಿರುವುದರಿಂದ ಅವನಿಗೆ ಸಾಕಾರ ಮತ್ತು ನಿರಾಕಾರ ಎನ್ನುವ ಎರಡು ರೂಪಗಳಿವೆ.ಶಿವನು ಮೂಲತಃ ನಿರಾಕಾರ ಪರಬ್ರಹ್ಮನಿರುವನು.ಅದಕ್ಕೆಂದೇ ಯುದ್ಧ ಭೂಮಿಯಲ್ಲಿ ಬ್ರಹ್ಮ ವಿಷ್ಣುಗಳಿಬ್ಬರಿಗೆ ಸ್ತಂಭರೂಪದಲ್ಲಿ ಕಾಣಿಸಿಕೊಂಡನು.

ಶಿವನ ನಿರಾಕಾರ ತತ್ತ್ವವು ಲೋಕಸಾಮಾನ್ಯರಿಗೆ ಎಟುಕುವುದಿಲ್ಲವಾದ್ದರಿಂದ ಅವನು ಸಾಕಾರ ರೂಪಧರಿಸಿ ಪ್ರತ್ಯಕ್ಷನಾಗುವನು ಬ್ರಹ್ಮ ವಿಷ್ಣುಗಳಿಬ್ಬರಿಗೆ ಸ್ತಂಭದ ನಡುವೆ ಪ್ರತ್ಯಕ್ಷನಾದಂತೆ.ಭಕ್ತರು ಶಿವನ ಲಿಂಗ ಅಥವಾ ಮೂರ್ತಿ ಯಾವುದು ತಮಗಿಷ್ಟವೋ ಅದರಲ್ಲಿ ಶಿವನನ್ನು ಪೂಜಿಸಬಹುದು.ಲಿಂಗೋಪಾಸನೆಯಿಂದ ನಿರ್ಗುಣಬ್ರಹ್ಮೋಪಾಸನೆಯೂ ಮೂರ್ತಿಯ ಉಪಾಸನೆಯಿಂದ ಸಗುಣಬ್ರಹ್ಮತ್ವವೂ ಅಳವಡುವವು.ವಿಶ್ವೇಶ್ವರನಾದ ಶಿವನು ಆತ್ಮಸ್ವರೂಪನಿರುವುದರಿಂದ ಅವನು ವಿಶ್ವವನ್ನೆಲ್ಲ ವ್ಯಾಪಿಸಿರುವನು ಎಂದು ಎಲ್ಲೆಡೆ ವಿಶ್ವೇಶ್ವರ ಶಿವನನ್ನು ಕಾಣಬೇಕು.

ಶಿವನು ನಿರಾಕಾರ ರೂಪದಲ್ಲಿ ಪರಬ್ರಹ್ಮನೆನ್ನಿಸಿಕೊಂಡರೆ ವಿಶ್ವನಿಯಾಮಕನಾದ ಸಾಕಾರ ರೂಪದಲ್ಲಿ ಪರಮೇಶ್ವರ ಎನ್ನಿಸಿಕೊಳ್ಳುವನು.ಯಾರಿಂದ ವಿಶ್ವವ್ಯವಹಾರವು ನಡೆಯಲ್ಪಡುವುದೋ,ಯಾರು ವಿಶ್ವದ ಎಲ್ಲೆಡೆ ವ್ಯಾಪಿಸಿರುವನೋ ಯಾರು ವಿಶ್ವೋತ್ತೀರ್ಣನೋ ಅವನೇ ಈಶ್ವರ,ವಿಶ್ವೇಶ್ವರ.ಬ್ರಹ್ಮ ವಿಷ್ಣುಗಳಿಬ್ಬರೂ ಶಿವನ ವಿಭೂತಿಗಳೇ ಹೊರತು ಅವರಾರೂ ಪರಮಾತ್ಮರಲ್ಲ,ಪರಬ್ರಹ್ಮರಲ್ಲ.ಪಂಚಮುಖದ ಪರಮೇಶ್ವರನಾಗಿ ಪಂಚಭೂತಗಳಿಂದ ಪ್ರಪಂಚ ವ್ಯವಹಾರ ನಿರ್ವಹಿಸುವ ಶಿವನೊಬ್ಬನಲ್ಲಿ ಮಾತ್ರ ಪಂಚ ಕಾರ್ಯಗಳಿವೆ.ಮೋಕ್ಷವನ್ನು ಶಿವನೊಬ್ಬನೇ ಕೊಡಬಲ್ಲ,ಉಳಿದ ಯಾರಿಂದಲೂ ಮೋಕ್ಷವನ್ನು ಕರುಣಿಸಲು ಸಾಧ್ಯವಿಲ್ಲ.ಇತರ ದೇವತೆಗಳು ಕೇವಲ ಭೋಗವನ್ನು ಮಾತ್ರ ಪ್ರದಾನಿಸಬಲ್ಲರು.ಮೋಕ್ಷಾಪೇಕ್ಷಿಗಳು ಪರಶಿವನನ್ನೇ ಆರಾಧಿಸಬೇಕು,ಆಶ್ರಯಿಸಬೇಕು.

ಗುರೂಪದೇಶದಿಂದಾಗಲಿ ಇಲ್ಲವೆ ವೇದಾಂತಾದಿ ಗ್ರಂಥಗಳ ಪಠಣೆಯಿಂದಾಗಿ ಶಿವನ ಪರಬ್ರಹ್ಮತತ್ತ್ವವನ್ನು ಪೂರ್ಣವಾಗಿ ಗ್ರಹಿಸಲಾಗದು.ಶಿವನು ಸ್ವಯಂ ಯಾರನ್ನು ಒಲಿಯುವನೋ,ಯಾರಲ್ಲಿ ಪ್ರಸನ್ನನಾಗುವನೋ ಅವನಲ್ಲಿ ಆತ್ಮಸ್ವರೂಪದಿಂದ ತನ್ನ ತತ್ತ್ವವನ್ನು ಜಾಗ್ರತಗೊಳಿಸುವನು.

೦೬.೦೮.೨೦೨೨

About The Author