ಶ್ರಾವಣ ಸಂಜೆ–ಶಿವಮಹಾಪುರಾಣ ವ್ಯಾಖ್ಯಾನ–೦೪–ಮುಕ್ಕಣ್ಣ ಕರಿಗಾರ

ಬ್ರಹ್ಮ – ವಿಷ್ಣುಗಳ ಯುದ್ಧ !

ಭಗವಾನ್ ನಂದಿಕೇಶ್ವರನು ಶಿವನು ತನ್ನ ಮೂಲ ನಿರಾಕಾರ ಸ್ವರೂಪವನ್ನು ಪ್ರಕಟಿಸಲು ಕಾರಣವಾದ ಪ್ರಸಂಗವನ್ನು ವಿವರಿಸುತ್ತ ಸನತ್ಕುಮಾರನಿಗೆ ಬ್ರಹ್ಮ- ವಿಷ್ಣುಗಳಿಬ್ಬರ ನಡುವೆ ಹೋರಾಟವಾದುದನ್ನು ವಿವರಿಸುವನು.ಹಿಂದೊಮ್ಮೆ ವಿಷ್ಣುವು ಶೇಷಶಯನನಾಗಿ ಮಲಗಿದ್ದಾಗ ಬ್ರಹ್ಮನು ಅಲ್ಲಿಗೆ ಬಂದನು.ಬ್ರಹ್ಮನು ಬಂದುದನ್ನು ಗಮನಿಸಿಯೂ ವಿಷ್ಣುವು ಮಲಗಿಯೇ ಇದ್ದ,ಎದ್ದು ಸತ್ಕರಿಸಲಿಲ್ಲ.ಬ್ರಹ್ಮನಿಗವಮಾನವಾಯಿತು.ಕುಪಿತನಾದ ಬ್ರಹ್ಮನು ” ಮಗನೆ,ನಾನು ಬಂದುದನ್ನು ಕಂಡೂ ಇನ್ನೂ ಮಲಗಿರುವೆಯಲ್ಲ.ಹಿರಿಯರು ಬಂದಾಗ ವಿನಯದಿಂದ ವರ್ತಿಸದ ಮೂರ್ಖರ ನಡೆಯು ದಂಡನಾರ್ಹ.ನೀನೀಗ ಶಿಕ್ಷೆಗೆ ಅರ್ಹ” ಎಂದನು.ಬ್ರಹ್ಮನ ಮಾತುಗಳನ್ನು ಕೇಳಿ ಒಳಗೆ ಕೋಪಗೊಂಡನಾದರೂ ಅದನ್ನು ಹೊರಗೆ ತೋರಗೊಡದೆ ವಿಷ್ಣುವು ಶಾಂತಚಿತ್ತದಿಂದ “ಬಾ ಮಗು,ಕುಳಿತುಕೊ” ಎಂದನು.ಮತ್ತೆ ಬ್ರಹ್ಮನನ್ನು ಕುರಿತು ” ಏಕೆ ನಿನ್ನ ಮುಖವಿಂದು ಇಷ್ಟು ಕೋಪಾವಿಷ್ಟಗೊಂಡಿದೆಯಲ್ಲ,ಏನಾಯಿತು?” ಎಂದು ಕೇಳಿದನು.

ವಿಷ್ಣುವಿನ ಮಾತುಗಳಿಂದ ಕಡು ಕೋಪಗೊಂಡ ಬ್ರಹ್ಮನು ” ಮಗನೆ! ನಿನ್ನಲ್ಲಿಂದು ಮಹಾ ಅಹಂಕಾರವು ಮೂಡಿದೆ.ಈ ನಿನ್ನ ವರ್ತನೆಯು ಕಾಲವಿಪರೀತವೇ ಸರಿ.ಸೃಷ್ಟಿಕರ್ತನಾದ ನಾನು ನಿನಗೆ ಏಕೆ,ಇಡೀ ಜಗತ್ತಿಗೆ ತಾತ ಮತ್ತು ರಕ್ಷಕ ಎನ್ನುವುದನ್ನು ಮರೆಯಬೇಡ”.

ಬ್ರಹ್ಮನ ಮಾತುಗಳಿಂದ ರೋಷಾವಿಷ್ಟನಾದ ವಿಷ್ಣುವು ಬ್ರಹ್ಮನನ್ನು ಕೆಣಕಿ ನುಡಿದನು –” ಮಗು,ಈ ಜಗತ್ತು ನನ್ನ ಆಧೀನದಲ್ಲಿದೆ.ನನ್ನಿಂದ ಪೊರೆಯಲ್ಪಡುತ್ತಿರುವ ನನ್ನ ಆಧೀನದ ಜಗತ್ತು ನಿನ್ನದು ಎನ್ನುವ ನಿನ್ನ ವರ್ತನೆಯು ಕಳ್ಳ ವರ್ತನೆಯು.ನನ್ನ ನಾಭಿಕಮಲದಿಂದ ಹುಟ್ಟಿಬಂದ ನೀನು ನನ್ನ ಮಗ.ಹಿರಿಯನೆಂಬ ಅಹಂಕಾರವಶನಾಗಿ ಏನೇನೋ ಮಾತನಾಡಬೇಡ”.

ಬ್ರಹ್ಮ- ವಿಷ್ಣುಗಳಿಬ್ಬರು ಹೀಗೆ ಏನೇನೋ ಮಾತನಾಡಿಕೊಳ್ಳುತ್ತ ‘ ನಾನು ಹಿರಿಯ’ ‘ ನಾನು ಹಿರಿಯ’ ಎಂದು ವಾದಿಸಿ,ಕಚ್ಚಾಡತೊಡಗಿದರು.ಮಾತಿಗೆ ಮಾತು ಬೆಳೆದು ಕೊನೆಗೆ ಯುದ್ಧದಿಂದ ನಿಷ್ಕರಿಸುವುದು ಎಂದು ಯುದ್ಧಕ್ಕೆ ತೊಡಗುವರು.ಬ್ರಹ್ಮ ವಿಷ್ಣುಗಳ ಯುದ್ಧವೆಂದರೆ ಕೇಳಬೇಕೆ ? ಅಸ್ತ್ರ ಪ್ರತ್ಯಸ್ತ್ರಗಳಿಂದ ಪರಸ್ಪರರು ಹೋರಾಡತೊಡಗಿದರು.ಬ್ರಹ್ಮ- ವಿಷ್ಣುಗಳು ಯುದ್ಧ ಮಾಡುವ ಸಂಗತಿಯನ್ನು ಕುತೂಹಲದಿಂದ ದೇವತೆಗಳು ಆಕಾಶದಲ್ಲಿ ನೆರೆದು ನೋಡತೊಡಗಿದರು.ದೇವತೆಗಳು ಯುದ್ಧನಿರತರಾದ ಬ್ರಹ್ಮ- ವಿಷ್ಣುಗಳಿಬ್ಬರಿಗೂ ಪುಷ್ಪವೃಷ್ಟಿ ಮಾಡಿದರು.

ಬ್ರಹ್ಮನು ಶಕ್ತಿಶಾಲಿಯಾದ ಅಸ್ತ್ರಗಳನ್ನು ವಿಷ್ಣುವಿನ ಮೇಲೆ ಪ್ರಯೋಗಿಸಿದ.ವಿಷ್ಣುವು ಬ್ರಹ್ಮನ ಮೇಲೆ ಜ್ವಲಿಸುವ ಅಸ್ತ್ರಗಳನ್ನು ಪ್ರಯೋಗಿಸಿದ.ಬ್ರಹ್ಮನಿಂದ ಪ್ರಯೋಗಿಸಲ್ಪಟ್ಟ ಅಸ್ತ್ರಗಳನ್ನು ವಿಷ್ಣುವು ಕತ್ತರಿಸಿದ; ವಿಷ್ಣುವಿನಿಂದ ಪ್ರಯೋಗಿಸಲ್ಪಟ್ಟ ಅಸ್ತ್ರಗಳನ್ನು ಬ್ರಹ್ಮನು ಕತ್ತರಿಸಿದ.ಹೀಗೆ ಪರಸ್ಪರರು ಅಸ್ತ್ರಗಳನ್ನು ಛೇದಿಸುತ್ತ,ಶಕ್ತಿಯುತ ಪ್ರಬಲ ಅಸ್ರ್ತಗಳನ್ನು ಒಬ್ಬರ ಮೇಲೆ ಮತ್ತೊಬ್ಬರು ಪ್ರಯೋಗಿಸುತ್ತ ಬಹುವರ್ಷಗಳ ಕಾಲ ಯುದ್ಧಮಾಡಿದರೂ ಬ್ರಹ್ಮ ವಿಷ್ಣುಗಳಲ್ಲಿ ಯಾರೂ ಗೆಲ್ಲಲಿಲ್ಲ,ಯಾರೂ ಸೋಲಲಿಲ್ಲ !ಕೊನೆಗೆ ವಿಷ್ಣುವು ಕೋಪಗೊಂಡು ಬ್ರಹ್ಮನನ್ನು ಸಂಹರಿಸಿ ಯುದ್ಧಗೆಲ್ಲಬೇಕೆಂದು ನಿಶ್ಚಯಿಸಿ, ಮಹೇಶ್ವರಾಸ್ತ್ರವನ್ನು ಪ್ರಯೋಗಿಸಿದನು.ಬ್ರಹ್ಮನೂ ಕೋಪಗೊಂಡು ಭೂಮಂಡಲವನ್ನೇ ಅಲ್ಲಾಡಿಸುವಂತೆ ಪಾಶುಪತಾಸ್ತ್ರವನ್ನು ಪ್ರಯೋಗಿಸಿದನು.ಮಹೇಶ್ವರಾಸ್ತ್ರ ಪಾಶುಪತಾಸ್ತ್ರಗಳಿಂದ ಗಗನಮಂಡಲವೆಲ್ಲ ಬೆಂಕಿ,ಬಿರುಗಾಳಿಗಳಿಂದ ತುಂಬಿತು.ಸಾವಿರ ಸೂರ್ಯರು ಒಮ್ಮೆಲೆ ಬೆಳಗಿದಂತೆ ಅದ್ಭುತ ಪ್ರಕಾಶ ಉಂಟಾಯಿತು.ಎರಡು ಮಹಾ ಅಸ್ತ್ರಗಳಿಂದ ಹೊರಹೊಮ್ಮಿದ ಬೆಂಕಿಯು ಪ್ರಪಂಚವನ್ನೇ ಸುಡುವಂತೆ ಜ್ವಲಿಸತೊಡಗಿತು.ದೇವತೆಗಳು ಈ ಭಯಂಕರ ಅಸ್ತ್ರಗಳ ಪ್ರಯೋಗದಿಂದ ಭಯಗೊಂಡರು.ಬ್ರಹ್ಮ ವಿಷ್ಣುಗಳಿಬ್ಬರ ಯುದ್ಧದಿಂದ ಜಗತ್ತನ್ನು ರಕ್ಷಿಸುವ ಉದ್ದೇಶದಿಂದ ದೇವತೆಗಳು ಪರಮೇಶ್ವರನಾದ ಶಿವನನ್ನು ಮೊರೆಹೊಕ್ಕು ಬೇಡಲು ಕೈಲಾಸಕ್ಕೆ ತೆರಳಿದರು.

ಕೈಲಾಸದಲ್ಲಿ ಶಿವನು ಸಭಾಮಧ್ಯದಲ್ಲಿ ರತ್ನಖಚಿತ ಸಿಂಹಾಸನದಲ್ಲಿ ಉಮಾದೇವಿಯೊಡನೆ ಕುಳಿತಿದ್ದನು.ಗಣಗಳು ಶಿವನ ಸುತ್ತನಿಂತುಕೊಂಡು ಶಿವಸೇವೆಯನ್ನು ಮಾಡುತ್ತಿದ್ದರು.ಋಷಿಗಳು ವೇದಮಂತ್ರಗಳಿಂದ ಶಿವನನ್ನು ಸ್ತುತಿಸುತ್ತಿದ್ದರು.ಸಿದ್ಧರು,ಯೋಗೀಶ್ವರರು ಬಗೆಬಗೆಯ ಸ್ತುತಿ,ನಾಮಾವಳಿಗಳಿಂದ ಶಿವನನ್ನು ಹೊಗಳುತ್ತಿದ್ದರು.ಶಿವನು ಎಲ್ಲರನ್ನೂ ಅನುಗ್ರಹಿಸುತ್ತಿದ್ದನು.ಕೈಲಾಸಕ್ಕೆ ಆಗಮಿಸಿದ ದೇವತೆಗಳು ದೂರದಲ್ಲಿಯೇ ನಿಂತು ಶಿರಸಾಸ್ಟಾಂಗ ಪ್ರಣಾಮಗಳನ್ನರ್ಪಿಸಿದರು.ಶಿವನು ಅವರನ್ನು ನೋಡಿ ತನ್ನ ಗಣಗಳ ಮೂಲಕ ತನ್ನ ಬಳಿ ಕರೆಸಿಕೊಂಡನು.ದೇವತೆಗಳು ಒಕ್ಕೊರಲಿನಿಂದ ಹಾಡಿದರು ;

“ಜಗತ್ತಿನ ಸೃಷ್ಟಿಸ್ಥಿತಿ ಸಂಹಾರ,ನಿಗ್ರಹಾನುಗ್ರಹಗಳು ಯಾರಿಂದಲಾಗುವವೋ,ಯಾರ ಅನುಗ್ರಹವಿಲ್ಲದೆ ಉಳಿದ ಯಾರೂ ಏನನ್ನು ಮಾಡರೋ,ಒಂದು ಹುಲ್ಲುಕಡ್ಡಿಯ ನಾಶವು ಸಹ ಯಾರ ಆಧೀನದಲ್ಲಿರುವುದೋ,ಯಾರು ವಿಶ್ವನಿಯಾಮಕನಾದ ಪರಮೇಶ್ವರನೋ ಆ ಪರಬ್ರಹ್ಮ ಸ್ವರೂಪನಾದ ಶಿವನಿಗೆ ನಮೋ ನಮೋ ಅನ್ನುವೆವು”
ಪ್ರಸನ್ನನಾದ ಶಿವನು ದೇವತೆಗಳತ್ತ ಅನುಗ್ರಹಪೂರ್ವಕವಾಗಿ ನೋಡುತ್ತ ಮಧುರೋಕ್ತಿಗಳಿಂದ ಅವರ ಯೋಗಕ್ಷೇಮ ವಿಚಾರಿಸಿದನು.

ಶಿವಮಹಾಪುರಾಣದ ವಿದ್ಯೇಶ್ವರ ಸಂಹಿತೆಯಲ್ಲಿನ ಬ್ರಹ್ಮ- ವಿಷ್ಣುಗಳ ಯುದ್ಧ ಎನ್ನುವ ಅಧ್ಯಾಯವು ಮುಗಿದುದು.

ವ್ಯಾಖ್ಯಾನ

ಶಿವಮಹಾಪುರಾಣದ ಈ ಅಧ್ಯಾಯದಲ್ಲಿ ಬ್ರಹ್ಮ ವಿಷ್ಣುಗಳಿಬ್ಬರು ಶಿವಮಾಯೆಗೊಳಗಾಗಿ ವಿಶ್ವನಿಯಾಮಕನಾದ ಪರಶಿವನೊಬ್ಬನಿಹನು ಎಂಬುದನ್ನು ಮರೆತು ಪರಸ್ಪರ ನಾನು ಮೇಲು,ತಾನು ಮೇಲು ಎಂದು ಕಚ್ಚಾಡಿ,ಸಂಘರ್ಷಕ್ಕಿಳಿಯುವರು.ಜಗತ್ತಿಗೆ,ದೇವತೆಗಳಿಗೆ ಆದರ್ಶರಾಗಬೇಕಿದ್ದ ಬ್ರಹ್ಮ ವಿಷ್ಣುಗಳೇ ಅಹಂಕಾರವಶರಾಗಿ ವರ್ತಿಸುವರು.ಪರಶಿವನೊಬ್ಬನೇ ವಿಶ್ವ- ಬ್ರಹ್ಮಾಂಡಗಳ ಕಾರಣಕರ್ತನಿರುವನು. ವಿಶ್ವನಿಯಾಮಕನಾದ ವಿಶ್ವೇಶ್ವರನ ಸಂಕಲ್ಪ ಮತ್ತು ನಿಯತಿಗನುಗುಣವಾಗಿ ಬ್ರಹ್ಮನು ಸೃಷ್ಟಿಕಾರ್ಯವನ್ನು,ವಿಷ್ಣುವನ್ನು ಸ್ಥಿತಿ ಕಾರ್ಯವನ್ನು ಮತ್ತು ರುದ್ರನು ಸಂಹಾರ ಕಾರ್ಯವನ್ನು ಮಾಡುತ್ತಿರುವರು.ಪರಶಿವನ ವಿಭೂತಿಗಳಾಗಿ ವಿಶ್ವವ್ಯವಹಾರ ನಿರ್ವಹಿಸುವ ಬ್ರಹ್ಮ ವಿಷ್ಣುಗಳಿಬ್ಬರು ಪರಸ್ಪರ ಕಾದಾಡುವಂತಾದದ್ದು ಶಿವಮಾಯೆಯ ಪ್ರಭಾವ.ಜಗತ್ತಿನ ಕಲ್ಯಾಣಕ್ಕೋಸ್ಕರ,ತನ್ನ ಲೀಲೆ ಒಂದನ್ನು ನಟಿಸಲೋಸ್ಕರ ಪರಶಿವನು ಬ್ರಹ್ಮ ವಿಷ್ಣುಗಳಿಬ್ಬರಲ್ಲಿ ಅಹಮಿಕೆಯನ್ನುಂಟು ಮಾಡಿದನು.

ಬ್ರಹ್ಮ ವಿಷ್ಣು ಮತ್ತು ರುದ್ರರು ಸತ್ತ್ವ,ರಜ,ತಮೋಗುಣಗಳ ಪ್ರತೀಕರಾಗಿದ್ದು ಗುಣತ್ರಯಗಳ ಸಂಘರ್ಷ ಸದಾ ನಡೆದಿರುತ್ತದೆ.ಈ ಸಂಘರ್ಷಕ್ಕೆ ಸಿಕ್ಕಿ ಬೀಳದೆ ಗುಣಗಳ ಸ್ವಭಾವವನ್ನು ಮೀರಿ ಬೆಳೆದವನೇ ಯೋಗಿ,ಮಹಾತ್ಮ.ಯೋಗೀಶ್ವರನಾದ ಶಿವನು ಅಂತಹ ನಿರ್ಲಿಪ್ತನಿಲುವಿನ,ನಿಶ್ಚಿಂತಮತಿಗಳೂ ಮಾಯೆಗೆ ಒಳಗಾಗದ ನಿರ್ಮಾಯಸಿದ್ಧರುಗಳಿಗೆ ಮಾತ್ರ ಒಲಿಯುವನು.

೦೩.೦೮.೨೦೨೨

About The Author