ಸಿದ್ದರಾಮಯ್ಯನವರ 75ನೇ ಜನ್ಮದಿನದ ಅಮೃತಮಹೋತ್ಸವ | 15 ಲಕ್ಷಕ್ಕೂ ಹೆಚ್ಚು ಜನರು | ದೇಶದ ಇತಿಹಾಸ ನಿರ್ಮಿಸಿದ ಸಿದ್ದರಾಮೋತ್ಸವ

ಅಮೀನ್ ಮಟ್ಟು ಹಿರಿಯ ಪತ್ರಕರ್ತರು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಜನ್ಮದಿನದ ಅಮೃತಮಹೋತ್ಸವಕ್ಕೆ ಸೇರಿರುವ ಜನರ ಸಂಖ್ಯೆ ಬಗ್ಗೆ ಚರ್ಚೆ ನಡೆಯುತ್ತಿದೆ. ಒಂದು ಟಿವಿ ಡಿಬೇಟ್ ನಲ್ಲಿ ಬಿಜೆಪಿಯ ವಕ್ತಾರರೊಬ್ಬರು ಇಂತಹ ನೂರಾರು ಸಮಾವೇಶಗಳನ್ನು ನಾವು ಮಾಡಿದ್ದೇವೆ ಎಂದೆಲ್ಲ ಹೇಳಿಕೊಳ್ಳುತ್ತಿದ್ದರು.

ನಾನು ವೃತ್ತಿಜೀವನದಲ್ಲಿ ಕನಿಷ್ಠ 40-50 ರಾಜಕೀಯ ಸಮಾವೇಶಗಳನ್ನು ಬೇರೆ ಬೇರೆ ರಾಜ್ಯಗಳಲ್ಲಿ ನೋಡಿದ್ದೆ. ಸಮಾವೇಶಗಳಿಗೆ ಅತಿಹೆಚ್ಚು ಜನಸೇರುವ ರಾಜ್ಯಗಳೆಂದರೆ ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳ. ಉತ್ತರಪ್ರದೇಶದ ಜನಸಂಖ್ಯೆಯೂ ಇದಕ್ಕೆ ಕಾರಣವಿರಬಹುದು.

ಒಂದು ಕಾಲದಲ್ಲಿ ಕಾನ್ಸಿರಾಮ್ ಮತ್ತು ಮಾಯಾವತಿ ಭಾಗವಹಿಸಿದ್ದ ರ್ಯಾಲಿಗಳಲ್ಲಿ ಸಾಮಾನ್ಯವಾಗಿ ಮೂರರಿಂದ ನಾಲ್ಕು ಲಕ್ಷ ಜನ ಸೇರಿದ್ದನ್ನು ನಾನು ಕಂಡಿದ್ದೆ.

ಪಶ್ಚಿಮಬಂಗಾಳದಲ್ಲಿ ಕಮ್ಯುನಿಸ್ಟರ ರ್ಯಾಲಿಗಳಲ್ಲಿಯೂ ಲಕ್ಷಾಂತರ ಜನ ಸೇರುತ್ತಿದ್ದರು. ಅದಕ್ಕೆ ಮುಖ್ಯ ಕಾರಣ ಅದು ಕ್ಯಾಡರ್ ಬೇಸ್ಡ್ ಪಕ್ಷವಾಗಿರುವುದು.

ಸಿಪಿಎಂ ಸರ್ಕಾರದ ಕೊನೆ ದಿನಗಳಲ್ಲಿ ಮಮತಾ ಬ್ಯಾನರ್ಜಿ ರ್ಯಾಲಿಗಳಿಗೆ ಕೂಡಾ ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ನನ್ನ ಅಂದಾಜಿನ ಪ್ರಕಾರ ಅವುಗಳು ಯಾವುದೂ3-4 ಲಕ್ಷ ದಾಟಿರಲಿಲ್ಲ.

ಉತ್ತರಪ್ರದೇಶದಲ್ಲಿನ ಈ ಬಾರಿಯ ವಿಧಾನಸಭಾ ಚುನಾವಣಾ ಕಾಲದಲ್ಲಿ ವಾರಣಾಸಿಯಲ್ಲಿ ನಡೆದ ನರೇಂದ್ರಮೋದಿಯವರ ಚುನಾವಣಾ ರ್ಯಾಲಿ ಈ ವರೆಗಿನ ಅತೀ ದೊಡ್ಡ ರ್ಯಾಲಿ ಎಂದು ಹೇಳಲಾಗುತ್ತಿದೆ. ಅಲ್ಲಿಯೂ ಸೇರಿರುವ ಜನರ ಸಂಖ್ಯೆ 4-4.50 ಲಕ್ಷ ದಾಟಿರಲಿಲ್ಲ.

ಸಿದ್ದರಾಮಯ್ಯನವ ಜನ್ಮದಿನದ ಅಮೃತಮಹೋತ್ಸವ ಸಮಾರಂಭದಲ್ಲಿ ಕನಿಷ್ಠ ಹತ್ತು ಲಕ್ಷ ಜನ ಸೇರಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಸಂಘಟಕರ ಅಂದಾಜು ಸುಮಾರು 15 ಲಕ್ಷ.

ಸಾಮಾನ್ಯವಾಗಿ ಸಭೆ ನಡೆಸುವ ಮೈದಾನದ ವಿಸ್ತಾರ ಇಲ್ಲವೇ ಹಾಕಿರುವ ಕುರ್ಚಿಗಳ ಆಧಾರದಲ್ಲಿ ಸೇರಿರುವ ಜನರ ಸಂಖ್ಯೆಯನ್ನು ಲೆಕ್ಕ ಹಾಕಲಾಗುತ್ತದೆ.
ಆದರೆ ನಲ ದಾವಣಗೆರೆಯಲ್ಲಿ ಕಾರ್ಯಕ್ರಮ ನಡೆದ ಮೈದಾನದಲ್ಲಿ ಸೇರಿರುವವರಿಗಿಂತ ಕನಿಷ್ಠ ಮೂರು ಪಟ್ಟು ಜನ ಹೊರಗೆ ರಸ್ತೆಯಲ್ಲಿದ್ದ ಕಾರಣ ಸೇರಿದ ಜನರ ಸಂಖ್ಯೆಯನ್ನು ಅಂದಾಜು ಮಾಡುವುದು ಕಷ್ಟದ ಕೆಲಸ.

ಸಮಾರಂಭ ನಡೆದ ಮೈದಾನದ ಎಡ-ಬಲಗಳಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಜನ ವಾಹನಗಳಿಂದ ಇಳಿದು 8-10 ಕಿ.ಮೀ. ನಡೆದುಕೊಂಡು ಬಂದಿದ್ದರು. ಉತ್ತರ ಕರ್ನಾಟಕದ ಕಡೆಯಿಂದ ಬಂದಿದ್ದ ಬಹಳಷ್ಟು ವಾಹನಗಳು ಮೈದಾನಕ್ಕೆ ಬರಲಾಗದೆ ವಾಪಸು ಹೋಗಿವೆ.
ಈ ಲೆಕ್ಕದಲ್ಲಿ ಸೇರಿರುವ ಜನರ ಸಂಖ್ಯೆ ಎಷ್ಟೇ ಇದ್ದರೂ ಸದ್ಯಕ್ಕೆ ರಾಜ್ಯದ ಮಾತ್ರವಲ್ಲ. ದೇಶದಲ್ಲಿನ ಈ ವರೆಗಿನ ರಾಜಕೀಯ ಸಮಾವೇಶಗಳಲ್ಲಿ ಇದು ಅತ್ಯಂತ ದೊಡ್ಡದು ಎನ್ನುವುದರಲ್ಲಿ ಅನುಮಾನ ಇಲ್ಲ.

ಏನಿದ್ದರೂ, ಯಾವ ಪಕ್ಷದಿಂದ ನಡೆದಿದ್ದರೂ ಈ ಅಭೂತಪೂರ್ವ ದಾಖಲೆ ಕರ್ನಾಟಕ ರಾಜ್ಯದ ಹೆಸರಲ್ಲಿಯೇ ಉಳಿಯಬೇಕು.

About The Author