ಶ್ರಾವಣ ಸಂಜೆ–ಶಿವ ಮಹಾಪುರಾಣ ವ್ಯಾಖ್ಯಾನ –೦೩–ಮುಕ್ಕಣ್ಣ ಕರಿಗಾರ

ನಿರಾಕಾರ ಶಿವಲಿಂಗದ ಪ್ರಾದುರ್ಭಾವ ಕಥನ

ಜಿಜ್ಞಾಸುಗಳಾದ ಮುನಿಗಳು ಸೂತ ಮಹರ್ಷಿಯನ್ನು ಮತ್ತೆ ಪ್ರಶ್ನಿಸುವರು–‘ ಶ್ರವಣ,ಕೀರ್ತನ,ಮನನಗಳೆಂಬ ಸಾಧನತ್ರಯವನ್ನು ಅನುಷ್ಠಾನಗೈಯಲು ಅಶಕ್ತರಾದವರಿಗೆ ಶಿವಾನುಗ್ರಹ ಪ್ರಾಪ್ತಿಗೆ ಮತ್ತೇನಾದರೂ ಸುಲಭೋಪಾಯವಿದೆಯೆ?”

ಮುನಿಗಳ ಪ್ರಶ್ನೆಗೆ ಸೂತರು ಉತ್ತರಿಸಿದರು.” ಹೌದು,ಇದೆ.ಶಿವನ ಲಿಂಗ ಮತ್ತು ಮೂರ್ತಿಗಳನ್ನು ಪ್ರತಿದಿನ ಪೂಜಿಸುವುದರಿಂದ ಭವಸಾಗರವನ್ನು ದಾಟಬಹುದು; ಜನನ ಮರಣಗಳ ಚಕ್ರದಿಂದ ಪಾರಾಗಿ ಮುಕ್ತಿಯನ್ನು ಹೊಂದಬಹುದು.ಶುದ್ಧಮನಸ್ಸಿನಿಂದ ಯಥಾಶಕ್ತಿ ಪೂಜಾದ್ರವ್ಯಗಳನ್ನು ಸಂಗ್ರಹಿಸಿ ಶಿವನನ್ನು ಪೂಜಿಸಬೇಕು.ತೀರ್ಥಕ್ಷೇತ್ರಗಳಲ್ಲಿ,ಮಠ ಪೀಠಗಳಲ್ಲಿ ಶಿವನ ಆಲಯಗಳನ್ನು ಕಟ್ಟಿಸಬೇಕು.ಶಿವನಿಗೆ ಉತ್ಸವ ಮಾಡಿಸಬೇಕು.ಗಂಧ,ಮಾಲೆ,ವಸ್ತ್ರಾಭರಣ,ಚಾಮರ,ವ್ಯಜನಗಳನ್ನರ್ಪಿಸಿ ಶಿವನಿಗೆ ರಾಜೋಪಚಾರ ಸೇವೆಸಲ್ಲಿಸಬೇಕು.ಪ್ರದಕ್ಷಿಣ ನಮಸ್ಕಾರಗಳನ್ನು ಮಾಡಬೇಕು.ಶಕ್ತಿಯಿದ್ದಷ್ಟು ಶಿವನಾಮ ಜಪ ಮಾಡಬೇಕು.ಆವಾಹನೆಯಾದಿಯಾಗಿ ವಿಸರ್ಜನ ಪರ್ಯಂತ ಎಲ್ಲಾ ಪೂಜೋಪಚಾರಗಳಿಂದ ಶಿವನನ್ನು ಅರ್ಚಿಸಬೇಕು.ಹೀಗೆ ಮಾಡಿದರೆ ಶ್ರವಣಾದಿಗಳಿಲ್ಲದೆಯೇ ಸಿದ್ಧಿ ಪಡೆಯಬಹುದು.ಈ ತೆರನಾದ ಶಿವಸೇವೆಯಿಂದಲೂ ಸಿದ್ಧಿ ಪಡೆದವರು ಹಿಂದೆ ಅನೇಕರು ಆಗಿ ಹೋಗಿದ್ದಾರೆ”

ಇದು ಶಾಸ್ತ್ರೋಕ್ತ ಶಿವಪೂಜೆಯು.ಲೋಕದ ಜನಸಾಮಾನ್ಯರಿಗೆ ಈ ಶಿವಪೂಜಾ ವಿಧಾನವು ಕಠಿಣವೆನ್ನಿಸಬಹುದು.ಪರಶಿವನು ಲೋಕಸಾಮಾನ್ಯರ ಮೇಲೆ ಕನಿಕರಿಸಿ ತ್ರಯಂಬಕ ಋಷಿಗಳ ಮೂಲಕ ಸರಳವಾದ ಶಿವಾರ್ಚನಾ ಪದ್ಧತಿಯನ್ನು ಬೋಧಿಸಿರುವನು.ತ್ರಯಂಬಕ ಮುನಿಗಳು ಲೋಕಸಮಸ್ತರ ಕಲ್ಯಾಣಕ್ಕಾಗಿ ಶಿವನ ಸರಳ ಪೂಜೋಪಾಯವನ್ನು ಪ್ರಚುರ ಪಡಿಸಿರುವರು.ಆಲಯಪೂಜೆ ಮತ್ತು ಕಾಯಕೈಲಾಸ ಪೂಜೆ ಎಂದು ಎರಡು ಬಗೆಯ ಪೂಜೆಗಳನ್ನು ತ್ರಯಂಬಕ ಋಷಿಗಳು ಲೋಕಕ್ಕೆ ಉಪದೇಶಿಸಿರುವರು.ಶಿವಾಲಯಗಳಲ್ಲಿ ಕುಳಿತು ಸದಾ ಶಿವನಾಮಸ್ಮರಣೆ ಮಾಡುತ್ತಿರಬೇಕು.ಇದು ಆಲಯಪೂಜೆ.ಶಿವಾಲಯ ಇಲ್ಲದ ಎಡೆಗಳಲ್ಲಿ ಅಥವಾ ಶಿವಾಲಯಕ್ಕೆ ಹೋಗಲಾಗದವರು ತಮ್ಮ ಕಾಯವೇ ಶಿವಾಲಯವೆಂದು ಭಾವಿಸಿ,ತಮ್ಮ ಕಾಯದಲ್ಲಿ ಶಿವನು ನೆಲೆಗೊಂಡಿಹನೆಂದರಿತು ತಾವಿದ್ದ ಎಡೆಗಳಲ್ಲಿಯೇ ಸದಾಕಾಲವು ಶಿವನಾಮ ಸ್ಮರಣೆ,ಜಪ ಮಾಡುತ್ತಿರಬೇಕು.ಮನೆ,ಗುಡಿಸಲು,ಆಶ್ರಮ ಯಾವ ಸ್ಥಳವಾದರೇನು ಮನಸ್ಸನ್ನು ಮಹಾದೇವನಲ್ಲಿ ನೆಲೆಗೊಳಿಸಿ ಪೂಜಿಸಬೇಕು.ಜನಸಾಮಾನ್ಯರಾದ ಇಂತಹ ಭಕ್ತರುಗಳಿಗೆ ವಿಶೇಷ ಪೂಜೋಪಚಾರವಾಗಲಿ,ಪೂಜಾ ಸಾಮಗ್ರಿಗಳಾಗಲಿ ಅವಶ್ಯಕವಲ್ಲವು.ಕೇವಲ ಭಕ್ತಿಯಿಂದಲೇ ಶಿವನನ್ನು ಪೂಜಿಸಬೇಕು,ಅರ್ಚಿಸಬೇಕು.ಈ ತೆರನಾದ ಸಹಜ ಪೂಜೆಯಿಂದಲೂ ಶಿವಾನುಗ್ರಹಕ್ಕೆ ಪಾತ್ರರಾಗಿ,ಮೋಕ್ಷವನ್ನು ಪಡೆಯಬಹುದು”.

ಮೋಕ್ಷಕ್ಕೆ ಸಾಧನವಾದ ಇತರ ಸುಲಭೋಪಾಯಗಳನ್ನು ಸೂತಮಹರ್ಷಿಗಳಿಂದ ಅರಿತ ಋಷಿಗಳು ಸಂತೋಷಭರಿತರಾಗಿ ಸೂತರರನ್ನು ಪ್ರಶ್ನಿಸುವರು –” ಎಲ್ಲ ದೇವರುಗಳಿಗೆ ಅವರವರ ಮೂರ್ತಿಗಳಲ್ಲಿ ಮಾತ್ರ ಪೂಜೆ.ಶಿವನಿಗೆ ಮಾತ್ರ ಮೂರ್ತಿ ಲಿಂಗಗಳೆರಡರಲ್ಲಿಯೂ ಪೂಜೆ ಸಲ್ಲುತ್ತದೆ.ಏಕೆ ?”

ಮುನಿಗಳ ಪ್ರಶ್ನೆಗಳಿಗೆ ಸೂತರು ಉತ್ತರಿಸುವರು –” ನೀವೆಲ್ಲರು ಬಹಳ ಮಹತ್ವದ ಪ್ರಶ್ನೆಯನ್ನು ಎತ್ತಿದ್ದೀರಿ.ಇದನ್ನು ತಿಳಿದುಕೊಳ್ಳುವವರು ಮಹಾಭಾಗ್ಯಶಾಲಿಗಳು.ಇದನ್ನು ಸಂಪೂರ್ಣವಾಗಿ ಮಹಾದೇವನೊಬ್ಬನೇ ಬಲ್ಲ.ಅವನೇ ಹೇಳಿದ ರಹಸ್ಯವನ್ನು ನಾನು ಗುರುಮುಖದಿಂದ ಗ್ರಹಿಸಿದ್ದೇನೆ.ನನ್ನ ಗುರುಗಳಾದ ವ್ಯಾಸರು ಇದನ್ನು ಮಹರ್ಷಿಗಳಾದ ಸನತ್ಕುಮಾರರಿಂದ ತಿಳಿದುಕೊಂಡಿದ್ದರು.ಸನತ್ಕುಮಾರರಿಗೆ ಭಗವಾನ್ ನಂದಿಕೇಶ್ವರನು ಬೋಧಿಸಿದ್ದನು.ಭಗವಾನ್ ನಂದಿಕೇಶ್ವರನಿಗೆ ಸಾಕ್ಷಾತ್ ಶಿವನೇ ತನ್ನ ದ್ವಿವಿಧ ಪೂಜೆಯ ರಹಸ್ಯವನ್ನು ವಿವರಿಸಿದ್ದನು.ಈ ರಹಸ್ಯವನ್ನು ತಿಳಿದುಕೊಳ್ಳುವವರು ಮಹಾ ಅದೃಷ್ಟವಂತರು.ಅದನ್ನು ಹೇಳುತ್ತೇನೆ ಕೇಳಿ —

ಶಿವನೊಬ್ಬನೇ ಪರಬ್ರಹ್ಮಸ್ವರೂಪಿಯಾಗಿದ್ದು ಆತ ನಿರಾಕಾರನೂ ಹೌದು,ಸಾಕಾರನೂ ಹೌದು.ನಿರಾಕಾರ ಪರಬ್ರಹ್ಮನಾದುದರಿಂದ ನಿರಾಕಾರ ಲಿಂಗದಲ್ಲಿ ಪೂಜೆ.ಶಿವನು ಸಾಕಾರನೂ ಆದುದರಿಂದ ಸಾಕಾರ ಮೂರ್ತಿಯಲ್ಲಿಯೂ ಆತನಿಗೆ ಪೂಜೆ ಸಲ್ಲುತ್ತದೆ.ಇನ್ನುಳಿದ ದೇವರುಗಳು ಸಾಕಾರರೂಪಿಗಳು ಮಾತ್ರ,ಅವರುಗಳಿಗೆ ನಿರಾಕಾರ ರೂಪವೇ ಇರುವುದಿಲ್ಲ.ಇತರ ದೇವತೆಗಳು ಬ್ರಹ್ಮಸ್ವರೂಪರಲ್ಲವಾದ್ದರಿಂದ ಅವರು ನಿರಾಕಾರಸ್ವರೂಪರಲ್ಲ.ಶಿವನೊಬ್ಬನೇ ಬ್ರಹ್ಮನು,ಉಳಿದವರು ಬರಿ ಜೀವರು ಎನ್ನುವುದು ವೇದ- ವೇದಾಂತಗಳ ಸಾರ.ಇದುವೇ ಓಂಕಾರದ ಅರ್ಥ.”

ಭಗವಾನ್ ನಂದಿಕೇಶ್ವರನು ಶಿವನು ಮೂರ್ತಿ ಮತ್ತು ಲಿಂಗ ಎರಡು ರೂಪಗಳಲ್ಲಿ ಪೂಜೆಗೊಳ್ಳುವ ರಹಸ್ಯವನ್ನು ಸನತ್ಕುಮಾರನಿಗೆ ಬೋಧಿಸುವ ಸಂದರ್ಭದಲ್ಲಿ ನಿರಾಕಾರ ಲಿಂಗದ ಪ್ರಾದುರ್ಭಾವಕ್ಕೆ ಕಾರಣವಾದ ಪ್ರಸಂಗವನ್ನು ಬೋಧಿಸಿದ್ದನು.
ಸನತ್ಕುಮಾರ –” ಪೂಜ್ಯರಾದ ಭಗವಾನ್ ನಂದಿಕೇಶ್ವರರೆ,ನಿರಾಕಾರ ಲಿಂಗದ ಪ್ರಾದುರ್ಭಾವ ಎಂದು ಹೇಗೆ,ಉಂಟಾಯಿತು ?”
ನಂದಿಕೇಶ್ವರ :–” ಮಗು,ಕೇಳು– ಹಿಂದೊಮ್ಮೆ ಬ್ರಹ್ಮ ವಿಷ್ಣುಗಳು ನಾಮೇಲು ತಾಮೇಲು ಎಂದು ತಮ್ಮೊಳಗೆ ಜಗಳವಾಡಿಕೊಂಡರು.ಅವರ ಅಹಂಕಾರವನ್ನಡಗಿಸಲು ಶಿವನು ಅವರಿಬ್ಬರ ನಡುವೆ ಒಂದು ನಿರಾಕಾರ ಸ್ತಂಭರೂಪದಿಂದ ಆವಿರ್ಭವಿಸಿದನು.ಬಳಿಕ ಅದೇ ಸ್ತಂಭದ ಮೂಲಕ ಜಗತ್ತಿನ ಹಿತಕ್ಕಾಗಿ ತನ್ನ ಲಿಂಗರೂಪವನ್ನು ಪ್ರಕಟಿಸಿದನು.ಅಂದಿನಿಂದ ಶಿವನಿಗೆ ಲಿಂಗ ಮತ್ತು ಮೂರ್ತಿಗಳಲ್ಲಿ ಪೂಜೆಯು ಪ್ರಾರಂಭವಾಯಿತು.ಉಳಿದ ದೇವರುಗಳಿಗೆ ಕೇವಲ ಮೂರ್ತಿಗಳಲ್ಲಿ ಪೂಜೆ.ದೇವರುಗಳ ಮೂರ್ತಿಪೂಜೆಯು ಕೇವಲ ಭೋಗಪ್ರದವಾದುದು.ಆದರೆ ಶಿವನ ಪೂಜೆ ಹಾಗಲ್ಲ.ಶಿವನ ಮೂರ್ತಿಪೂಜೆ ಭೋಗದಾಯಕ,ಲಿಂಗಪೂಜೆ ಮೋಕ್ಷದಾಯಕ” ಎಂದು ನಂದಿಕೇಶ್ವರರು ಸನತ್ಕುಮಾರ ಋಷಿಗಳಿಗೆ ನಿರಾಕಾರ ಲಿಂಗಪ್ರಾದುರ್ಭಾವ ಕಥನ ಬೋಧಿಸಿದರೆಂಬಲ್ಲಿಗೆ ಶಿವಮಹಾಪುರಾಣದ ವಿದ್ಯೇಶ್ವರ ಸಂಹಿತೆಯಲ್ಲಿನ ನಿರಾಕಾರಲಿಂಗ ಪ್ರಾದುರ್ಭಾವ ಕಥನಾಧ್ಯಾಯವು ಮುಗಿದುದು.

ವ್ಯಾಖ್ಯಾನ

ಮಹರ್ಷಿ ವೇದವ್ಯಾಸರು ತಾವು ರಚಿಸಿದ ” ಶಿವಮಹಾಪುರಾಣ” ದ ವಿದ್ಯೇಶ್ವರ ಸಂಹಿತೆಯ ‘ ನಿರಾಕಾರ ಲಿಂಗ ಪ್ರಾದುರ್ಭಾವ ಕಥನ’ ವೆಂಬ ಅಧ್ಯಾಯದಲ್ಲಿ ಲೋಕಸಮಸ್ತರಿಗೆ ಮೋಕ್ಷಪ್ರದವಾದ ಸರಳ ಶಿವಪೂಜಾ ವಿಧಾನವನ್ನು ಹಾಗೂ ಶಿವನು ಮೂರ್ತಿ ಹಾಗೂ ಲಿಂಗರೂಪಗಳಲ್ಲಿ ಪೂಜೆಗೊಳ್ಳುತ್ತಿರುವ ರಹಸ್ಯವನ್ನು ವಿವರಿಸಿದ್ದಾರೆ.ಶಿವನು ಭಕ್ತವತ್ಸಲನಾದುದರಿಂದ ಅವನಿಗೆ ತನ್ನ ಭಕ್ತರಲ್ಲಿ ಎಲ್ಲಿಲ್ಲದ ಪ್ರೀತಿ.ಶಾಸ್ತ್ರೋಕ್ತ ಪೂಜೆಗಳಿಂತ ಶುದ್ಧಭಕ್ತಿಯಿಂದ ತನ್ನನ್ನು ನೆನೆಯುವವರಲ್ಲಿ ಬಹುಬೇಗನೆ ಪ್ರಸನ್ನನಾಗುತ್ತಾನೆ ಶಿವನು.ಆಡಂಬರದ ಪೂಜೆ,ಸೇವೆಗಳಿಗಿಂತ ನಿರಾಂಡಬರವಾದ ಸರಳ ಪೂಜೆಯು ಶಿವನಿಗೆ ಪ್ರಿಯವಾದುದು.ಇಂತಹ ನಿರಾಂಡಬರ ಶಿವ ಪೂಜೆಯಿಂದಲೇ ಹಿಂದೆ ಅನೇಕ ಜನಸಾಮಾನ್ಯರುಗಳು ಮಹಾನ್ ಶಿವಭಕ್ತರು,ಶಿವಯೋಗಿಗಳು ಎಂದು ಜಗತ್ಪ್ರಸಿದ್ಧರಾಗಿದ್ದಾರೆ.

ಶಿವನೊಬ್ಬನೇ ಪರಮೇಶ್ವರನು,ಪರಬ್ರಹ್ಮನು ಇರುವುದರಿಂದ ಶಿವನಿಗೆ ಮೂರ್ತಿ ಮತ್ತು ಲಿಂಗಗಳೆರಡರಲ್ಲಿ ಪೂಜೆಯು ಸಲ್ಲುತ್ತದೆ.ವಿಶ್ವನಿಯಾಮಕನಾದ ವಿಶ್ವೇಶ್ವರ ಶಿವನು ಸಾಕಾರ ಮತ್ತು ನಿರಾಕಾರ ಎಂಬ ಎರಡು ಸ್ವರೂಪಗಳನ್ನು ಉಳ್ಳವನಾದ್ದರಿಂದ ಶಿವನನ್ನು ಸಾಕಾರ ರೂಪದಲ್ಲಿ ಮೂರ್ತಿಗಳಲ್ಲಿ ಪೂಜಿಸುತ್ತಾರೆ.ಶಿವನು ಮೂಲತಃ ನಿರಾಕಾರ ಪರಬ್ರಹ್ಮನು ಎನ್ನುವುದರ ಕುರುಹಿಗಾಗಿ ಲಿಂಗರೂಪದಲ್ಲಿ ಪೂಜಿಸಲಾಗುತ್ತಿದೆ.ಲಿಂಗವು ನಿರಾಕಾರನೂ,ನಿರಂಜನನೂ,ಪ್ರಣವಾರ್ಥನೂ ಆದ ಪರಶಿವನ ಪ್ರತೀಕವು.

೦೨.೦೮.೨೦೨೨

About The Author