ಶ್ರಾವಣ ಸಂಜೆ–ಬ್ರಹ್ಮನು ಉಪದೇಶಿಸಿದ ಶಿವಪರತತ್ತ್ವ–ಮುಕ್ಕಣ್ಣ ಕರಿಗಾರ

ಶ್ರಾವಣ ಸಂಜೆ

ಬ್ರಹ್ಮನು ಉಪದೇಶಿಸಿದ ಶಿವಪರತತ್ತ್ವ

ಮುಕ್ಕಣ್ಣ ಕರಿಗಾರ

ಕಲ್ಪದ ಆದಿಯಲ್ಲಿ ಋಷಿಗಳಲ್ಲಿ ಪರತತ್ತ್ವ ಯಾವುದು ಎನ್ನುವ ಬಗ್ಗೆ ಗೊಂದಲವೇರ್ಪಟ್ಟಿತ್ತು.ಇದು ಪರತತ್ತ್ವ ಎಂದು ಕೆಲವರು ಅಂದರೆ ಅದು ಪರತತ್ತ್ವ ಎಂದರು ಕೆಲವರು.ಇವೆರಡನ್ನೂ ಒಪ್ಪದವರು ಇದಾವುದೂ ಪರತತ್ತ್ವವಲ್ಲ ಎಂದರು.ಬಹಳಕಾಲ ತಮ್ಮತಮ್ಮೊಳಗೆ ವಾದ ವಿವಾದ ಮಾಡಿಕೊಂಡರು ಋಷಿಗಳು.ಕೊನೆಗೆ ಅವರೆಲ್ಲರು ಬ್ರಹ್ಮನಲ್ಲಿಗೆ ಹೋಗಿ ಕೇಳೋಣ ಎಂದು ನಿರ್ಧರಿಸಿ ಸತ್ಯಲೋಕಕ್ಕೆ ಹೋಗಿ ಬ್ರಹ್ಮನನ್ನು ಕಂಡು ಕೈ ಮುಗಿದು,” ಎಲ್ಲಕ್ಕೂ ಆದಿಕಾರಣನಾದ ನೀನೇ ಹೇಳು.ಎಲ್ಲ ತತ್ತ್ವಗಳಿಗಿಂತಲೂ ಪ್ರಾಚೀನವಾದ ತತ್ತ್ವ ಯಾವುದು? ಯಾವುದು ಪರತತ್ತ್ವ?’

ಬ್ರಹ್ಮನು ಉತ್ತರಿಸುತ್ತಾನೆ ;
‘ಅವನೇ ಮಹಾದೇವ,ಮಾತಿಗೂ ನಿಲುಕದವ.ಬ್ರಹ್ಮ,ವಿಷ್ಣು,ರುದ್ರ,ಇಂದ್ರರಂತಹವರುಗಳನ್ನೇ ಸೃಷ್ಟಿಸುವ ಸರ್ವಶಕ್ತ,ಸರ್ವಜ್ಞ.ಶಿವನೇ ಜಗದೀಶ್ವರ.ಶಿವನು ಕೇವಲ ಭಕ್ತಿಗೆ ಮಾತ್ರ ವಶನಾಗಿರುವವನು.ಹರಿ,ರುದ್ರಾದಿಗಳೆಲ್ಲರೂ ನಿತ್ಯವೂ ಅವನ ದರ್ಶನಾಶೀರ್ವಾದ ಪಡೆಯಲು ಉತ್ಸುಕರಾಗಿರುತ್ತಾರೆ.ಹೆಚ್ಚೇಕೆ ಶಿವನಲ್ಲಿ ಭಕ್ತಿಯನ್ನಿಡುವುದು ಮುಕ್ತಿಯ ಸಾಧನವಾಗಿದೆ.ಆದರೆ ಶಿವನ ಅನುಗ್ರಹದ ಹೊರತು ಶಿವನಲ್ಲಿ ಭಕ್ತಿ ಮೊಳೆಯದು.ಆದ್ದರಿಂದ ನೀವೆಲ್ಲರೂ ಭೂಮಿಗೆ ಹೋಗಿ ಶಿವನನ್ನು ಕುರಿತು ದೀರ್ಘ ತಪಸ್ಸನ್ನಾಚರಿಸಿ ಶಿವ ಪರತತ್ತ್ವವನ್ನು ತಿಳಿದುಕೊಳ್ಳಿ.ಶಿವಾನುಗ್ರಹದಿಂದ ನಿಮ್ಮ ಧ್ಯೇಯ ಸಾಧನೆಗಳ ಅರಿವು ನಿಮಗೆ ಮೂಡುವುದು”.

ಬ್ರಹ್ಮನ ಮಾತುಗಳಿಂದ ಸಂತೃಪ್ತರಾದ ಋಷಿಗಳು ಮತ್ತೆ ಬ್ರಹ್ಮನನ್ನು ಪ್ರಶ್ನಿಸುತ್ತಾರೆ ;
” ದೇವ,ಧ್ಯೇಯ ಸಾಧನೆಗಳ ಗುಟ್ಟೇನು? ಸಾಧಕನ ಲಕ್ಷಣಗಳೇನು ವಿವರಿಸು”.
ಋಷಿಗಳತ್ತ ವಾತ್ಸಲ್ಯಪೂರಿತ ನೋಟದಿಂದ ನೋಡಿದ ಬ್ರಹ್ಮನು ನುಡಿಯುವನು
“ಶಿವಪದಪ್ರಾಪ್ತಿ ನಮ್ಮೆಲ್ಲರ ಪರಮ ಧ್ಯೇಯ.ಆತನ ಸೇವೆಯೇ ಅದಕ್ಕೆ ಸಾಧನ.ಶಿವನ ಅನುಗ್ರಹಕ್ಕೆ ಪಾತ್ರನಾಗಿದ್ದು ಅನಿತ್ಯವಸ್ತುಗಳಲ್ಲಿ ವೈರಾಗ್ಯ ತಳೆದವನೇ ಸಾಧಕ.ಸತ್ಕರ್ಮಗಳನ್ನಾಚರಿಸಬೇಕು.ಫಲವನ್ನು ಶಿವನಿಗರ್ಪಿಸಬೇಕು.ಇದರಿಂದ ಸಾಲೋಕ್ಯವನ್ನೂ ಕ್ರಮೇಣ ಶಿವಪದವನ್ನೂ ಪಡೆಯಬಲ್ಲೆವು.ಅವರವರ ಭಕ್ತಿಗನುಸಾರವಾಗಿ ಎಲ್ಲರೂ ಪರಮಪದವನ್ನು ಪಡೆಯಬಹುದು.

ಶಿವಪದವನ್ನು ಪಡೆಯಲು ಹಲವಾರು ಸಾಧನಗಳಿವೆ.ಅವುಗಳನ್ನೆಲ್ಲ ಸ್ವಯಂ ಪರಮೇಶ್ವರನಾದ ಶಿವನೇ ವಿಸ್ತಾರವಾಗಿ ಉಪದೇಶಿಸಿದ್ದಾನೆ.ಸಂಕ್ಷಿಪ್ತವಾಗಿ ಹೇಳುವುದಾದರೆ ಶ್ರವಣ,ಕೀರ್ತನ ಮತ್ತು ಮನನಗಳು ಶಿವಕಾರುಣ್ಯಕ್ಕೆ ಮುಖ್ಯ ಸಾಧನಗಳು.ಅವುಗಳಲ್ಲಿ ಶ್ರವಣವು ಮಹತ್ವದ್ದು ಮತ್ತು ಮೊದಲನೆಯದು.ಅನಂತರ ಕೀರ್ತನ- ಮನನಗಳು.ಹೀಗೆ ಮಾಡಿದರೆ ಕ್ರಮೇಣ ಶಿವಪದವು ಲಭಿಸುವುದು.ಎಲ್ಲ ರೋಗಗಳು ಗುಣವಾಗುವವು.ಸಂಸಾರ ಕ್ಲೇಶ ಪರಿಹಾರವಾಗಿ,ಪರಮಾನಂದ ಲಭಿಸುವುದು”

ಋಷಿಗಳು ಬ್ರಹ್ಮನನ್ನು ಪ್ರಶ್ನಿಸುವರು ; ದೇವ,ಶ್ರವಣಾದಿಗಳ ಸ್ವರೂಪವೇನು?’
ಮುನಿಗಳ ಪ್ರಶ್ನೆಗೆ ಬ್ರಹ್ಮನು ಉತ್ತರಿಸುವನು
” ಈಶ್ವರನ ಪೂಜೆ,ಜಪ,ಅವನ ಗುಣಗಳು,ರೂಪ,ವಿಲಾಸ,ನಾಮಗಳು ಇವುಗಳ ಚರ್ಚೆ -ಚಿಂತನೆಗಳ ಮೀಮಾಂಸೆಯೇ ಮನನ.ಇದು ಸಾಧನಗಳಲ್ಲೆಲ್ಲ ಉತ್ತಮವಾದುದು.ಈಶ್ವರನ ಪ್ರತಾಪ,ಗುಣ,ರೂಪ,ವಿಲಾಸ,ನಾಮಗಳನ್ನು ವೇದಮಂತ್ರಗಳಲ್ಲಿ ಇದ್ದಂತೆ ಅಥವಾ ಇತರ ದೇಶ ಭಾಷೆಗಳಲ್ಲಿ ಋಷಿಗಳು,ಸಂತರು,ಶರಣರು ರಸವತ್ತಾಗಿ ಬಣ್ಣಿಸಿದಂತೆ ಹಾಡಿ ಹೊಗಳುವುದೇ ಕೀರ್ತನೆಯು.ಇದು ಸಾಧನೆಗಳಲ್ಲಿ ಮಧ್ಯಮ.ಕಾಮುಕನು ತನ್ನ ಕಿವಿಗೆ ಬೀಳುವ ಪ್ರತಿಯೊಂದು ಶಬ್ದವನ್ನು ತನಗರಿವೆ ಇಲ್ಲದಂತೆಯೇ ತನ್ನ ಪ್ರೇಯಸಿಯಲ್ಲಿ,ಅವಳ ಹಾವ ಭಾವಗಳಲ್ಲಿ ಸಮನ್ವಯಗೊಳಿಸುವಂತೆ ಭಕ್ತನು ಎಲ್ಲ ಶಬ್ದಗಳನ್ನು ಶಿವನಲ್ಲೇ ಅವನ ರೂಪ,ವಿಲಾಸಗಳಲ್ಲಿಯೇ ಸಮನ್ವಯಗೊಳಿಸುತ್ತಿರಬೇಕು.ಈ ಸ್ಥಿತಿಯೇ ಶ್ರವಣವು.ಶ್ರವಣವು ಸಿದ್ಧಿಸಲು ಸಜ್ಜನರ ಒಡನಾಟ,ಸತ್ಸಂಗಗಳು ಅವಶ್ಯಕ.ಶ್ರವಣದ ನಂತರ ಕೀರ್ತನ,ಅನಂತರ ಮನನ.ಈ ಮೂರೂ ಶಿವನ ಕೃಪಾದೃಷ್ಟಿ ಬಿದ್ದಾಗಲೇ ಸಿದ್ಧಿಸುವವು”

೩೦.೦೭.೨೦೨೨

About The Author