ಶ್ರಾವಣ ಸಂಜೆ–ಶಿವಪೂಜೆಗೆ ಪ್ರಶಸ್ತಕಾಲ ಶ್ರಾವಣಮಾಸ–ಮುಕ್ಕಣ್ಣ ಕರಿಗಾರ

ಶ್ರಾವಣ ಸಂಜೆ

ಶಿವಪೂಜೆಗೆ ಪ್ರಶಸ್ತಕಾಲ ಶ್ರಾವಣಮಾಸ

ಮುಕ್ಕಣ್ಣ ಕರಿಗಾರ

ಇಂದಿನಿಂದ( ೨೯.೦೭.೨೦೨೨ ರ ಶುಕ್ರವಾರ) ಶ್ರಾವಣ ಮಾಸ ಪ್ರಾರಂಭವಾಗಿದೆ.ಶ್ರಾವಣ ಮಾಸವು ಶಿವನಿಗೆ ಅರ್ಪಿತವಾದ ಮಾಸವಾಗಿದ್ದು ಶಿವೋಪಾಸಕರಿಗೆ ಮಹತ್ವದ ಮಾಸವಾಗಿದೆ.ಶ್ರಾವಣ ಮಾಸದಲ್ಲಿಯೇ ಶಿವತತ್ತ್ವಪೂರಕವಾದ ಹಲವು ಹಬ್ಬ- ಉತ್ಸವಗಳು ಬರುತ್ತವೆ.ನಾಡಿಗೆಲ್ಲ ದೊಡ್ಡಹಬ್ಬ ಎಂದು ಜನಪದರು ಹಾಡುವ ‘ ನಾಗರ ಪಂಚಮಿ’ ಯೂ ಶ್ರಾವಣ ಮಾಸದಲ್ಲೇ ಬರುತ್ತದೆ.ನಾಗಸಂಸ್ಕೃತಿಯು ಶಿವಸಂಸ್ಕೃತಿಯ ಉಪಸಂಸ್ಕೃತಿಯಾಗಿದ್ದುದರಿಂದ ನಾಗರು ಎನ್ನುವ ಬುಡಕಟ್ಟು ಜನಾಂಗವು ಶಿವೋಪಾಸಕರು ಆಗಿದ್ದುದರಿಂದ ಶ್ರಾವಣ ಮಾಸದ ಮೊದಲಲ್ಲೇ ಆಚರಿಸಲ್ಪಡುತ್ತದೆ ನಾಗರಪಂಚಮಿ.ಹಿಂದೆ ಶ್ರಾವಣ ಮಾಸವಿಡೀ ಜಿಟಿಪಿಟಿ ಮಳೆ ಸುರಿಯುತ್ತಿದ್ದುದರಿಂದ ಕೃಷಿ ಚಟುವಟಿಕೆಗಳಿಗೆ ಬಿಡುವು ದೊರೆತು ಊರವರೆಲ್ಲ ಒಂದೆಡೆ ಸೇರಿ ಶಿವತತ್ತ್ವ ಚಿಂತನೆಯ ಏರ್ಪಾಟು ಮಾಡಿಕೊಳ್ಳುತ್ತಿದ್ದರು.ಹಿಂದಿನ ಕಾಲದಲ್ಲಿ ಶಿಕ್ಷಣವು ಸಾರ್ವತ್ರಿಕವಾಗಿರಲಿಲ್ಲ,ಹಾಗಾಗಿ ಅಕ್ಷರಸ್ಥರ ಸಂಖ್ಯೆ ಕಡಿಮೆ ಇತ್ತು.ಊರ ಬ್ರಾಹ್ಮಣರೋ ಅಯ್ಯಗಳೋ ತಮ್ಮ ಮನೆ- ಮಠಗಳಲ್ಲಿ ಇಲ್ಲವೆ ಊರ ಹಿರಿಯರ ಮನೆಗಳಲ್ಲಿ ಶಿವಕಥಾಗೋಷ್ಠಿಗಳನ್ನು ನಡೆಸುತ್ತಿದ್ದರು.ಅವಿದ್ಯಾವಂತರು ಭಕ್ತಿಯಿಂದ ಕೇಳುತ್ತಿದ್ದರು.ಶಿವಕಥೆಯನ್ನು ಕೇಳುವ ಭಕ್ತಿಯೇ ‘ಶ್ರವಣ’ ವೆಂದೆನಿಸಿ ಶಿವಕಥಾಶ್ರವಣ ಮಾಡುವ ಮಾಸವೇ ಶ್ರಾವಣಮಾಸ ಎನ್ನಿಸಿಕೊಂಡಿತು.ಶ್ರಾವಣ ಮಾಸದಲ್ಲಿ ಶಿವಮಹಾಪುರಾಣ,ಲಿಂಗಪುರಾಣ,ಪರಶಿವನ ಪಂಚವಿಂಶತಿ ಲೀಲೆಗಳು,ಅರವತ್ತುಮೂರು ಮಂದಿ ಪುರಾತನರ ಕಥೆಗಳು ಇವೇ ಮೊದಲಾದ ಶಿವಸಾಹಿತ್ಯವನ್ನು ಬಲ್ಲವರು ಓದುತ್ತಿದ್ದರು,ಭಕ್ತರು ಕೇಳುತ್ತಿದ್ದರು.

ಶ್ರವಣಮಾಡುವ ಮಾಸವಷ್ಟೇ ಅಲ್ಲ ಶ್ರಾವಣ ಮಾಸ,ಸಾಧನೆಯ ಮಾಸವೂ ಹೌದು.ಶಿವಭಕ್ತರು,ಶಿವೋಪಾಸಕರು ಈ ತಿಂಗಳಲ್ಲಿ ಶಿವನನ್ನು ಆರಾಧಿಸುತ್ತಾರೆ.ಶಿವನ ಮೂರ್ತಿ,ಲಿಂಗ ಇಲ್ಲವೆ ಇಷ್ಟಲಿಂಗ ಉಪಾಸನೆಯ ಮೂಲಕ ಶಿವೋಪಾಸನೆ ಮಾಡಬಹುದು.ಕೆಲವು ಜನ ಶಿವಯೋಗಿಗಳು ‘ ಶ್ರಾವಣ ವ್ರತ’ ಆಚರಿಸುತ್ತಾರೆ.ಅಂದರೆ ಶ್ರಾವಣಮಾಸವಿಡೀ ಒಂದೆಡೆ ಕುಳಿತು ಶಿವನನ್ನು ಪೂಜಿಸುವ ವ್ರತ ಅದು.ಶಿವಪಂಚಾಕ್ಷರಿಯೋ ಷಡಕ್ಷರಿಯೋ ಆದ ಮಂತ್ರವನ್ನು ಒಂದು ನಿರ್ದಿಷ್ಟಸಂಖ್ಯೆಯಲ್ಲಿ ಜಪಿಸುವ ವ್ರತಹಮ್ಮಿಕೊಂಡು ಸಾಧಿಸುತ್ತಾರೆ.ರುದ್ರಾಧ್ಯಾಯ ಪಠಣೆಯ ವ್ರತ ಕೆಲವರದ್ದಾದರೆ,ಶಿವಸಹಸ್ರನಾಮಾವಳಿ ಪಠಣೆಯ ವ್ರತವು ಮತ್ತೆ ಕೆಲವರದ್ದು.ಕೆಲವರು ಶಿವಲಿಂಗಕ್ಕೆ ನಿರಂತರ ಜಲಾಭಿಷೇಕ ವ್ರತಕೈಗೊಂಡರೆ ಮತ್ತೆ ಕೆಲವರು ಬಿಲ್ವಾರ್ಚನೆಯ ವ್ರತ ಕೈಗೊಳ್ಳುತ್ತಾರೆ.ಶಿವನಾಮನಿಷ್ಠರಾದ ಹಲವರು ಶಿವನಾಮ ಬ್ಯಾಂಕ್ ಎಂದು ಶ್ರಾವಣಮಾಸವಿಡೀ ‘ ಓಂ ನಮಃ ಶಿವಾಯ ‘ ಮಂತ್ರ ಬರೆಯುತ್ತಾರೆ.ಮುಗ್ಧ ಭಕ್ತರುಗಳು ಶಿವದೇವಾಲಗಳ ಕಸಗುಡಿಸುತ್ತ,ಸ್ವಚ್ಛಗೊಳಿಸುತ್ತ,ಸಾರಣೆ- ಕಾರಣೆಗಳಿಂದ ತಮ್ಮ ಭಕ್ತಿ ಮೆರೆಯುತ್ತಾರೆ.ಯಾರಿಗೆ ಯಾವುದೋ ಸುಲಭವೋ ಆ ಭಕ್ತಿ,ಸೇವೆಯ ಮೂಲಕ ಶಿವನನ್ನು ಸಂಪ್ರೀತಗೊಳಿಸಬಯಸುತ್ತಾರೆ ಭಕ್ತರು.

ಸಲ್ಲದ ಮೌಢ್ಯ

ಶ್ರಾವಣ ಮಾಸವು ಶಿವನ ಸೇವೆಗೆ ಪ್ರಶಸ್ತಮಾಸವಾಗಿದ್ದರಿಂದ ‘ ಶಿವನಿಗಾಗಿ ಕಷ್ಟಪಡಬೇಕು’ ಎಂದರು ಹಿರಿಯರು.ಆದರೆ ಇದನ್ನು ಅಪಾರ್ಥ ಮಾಡಿಕೊಂಡ ಮಹಾನುಭಾವರುಗಳು ಶಿವನಿಗಾಗಿ ಕಷ್ಟಪಡುವ ಬದಲು ಶಿವನ ಹೆಸರಿನಲ್ಲಿ ಕಷ್ಟಬಿಡುವ ಅಂದರೆ ಕ್ಷೌರ ಮಾಡಿಸಿಕೊಳ್ಳದೆ ಇರುವ ವಿಪರೀತವ್ರತವನ್ನು ಆಚರಿಸತೊಡಗಿದ್ದಾರೆ !ಹೋತನಂತೆ ಗಡ್ಡ ಮೀಸೆಗಳನ್ನು ಬಿಟ್ಟು,ಪೋತರಾಜನಂತೆ ಕೂದಲು ಬಿಟ್ಟು ಶಿವಭಕ್ತಿಯನ್ನು ಆಚರಿಸುವುದು ಒಂದು ಫ್ಯಾಶನ್ ಆಗಿದೆ.ಶ್ರಾವಣದಲ್ಲಿ ಕ್ಷೌರ ಮಾಡಿಸಿಕೊಳ್ಳದೆ ಇರುವುದು ಒಂದು ಅರ್ಥಹೀನ ಆಚರಣೆ,ಮೌಢ್ಯವಲ್ಲದೆ ಅದಕ್ಕೆ ಯಾವುದೇ ಅರ್ಥವಿಲ್ಲ,ಮಹತ್ವವಿಲ್ಲ.ಅವರು ಬಿಟ್ಟರು ಅಂತ ಇವರು,ಇವರು ಬಿಟ್ಟರು ಅಂತ ಅವರು ಹೀಗೆ ಒಬ್ಬರನ್ನು ನೋಡಿ ಒಬ್ಬರು ಕ್ಷೌರ ಬಿಡುವ ಮೂಲಕ ತೋರಿಕೆಯ ಭಕ್ತಿಯನ್ನು ಆಚರಿಸುತ್ತಿದ್ದಾರೆ.ಶಿವನ ಹೆಸರಿನಲ್ಲಿ ಕೂದಲು ಬಿಟ್ಟರೆ ಶಿವನು‌ ಪ್ರಸನ್ನನಾಗುವುದಿಲ್ಲ.

ಶ್ರಾವಣ ಮಾಸದಲ್ಲಿ ಶಿವನಿಗಾಗಿ ಕಷ್ಟಪಡಬೇಕು ಅಂದರೆ ಕೈಲಾದಷ್ಟು ಶಿವನ ಪೂಜೆ,ಸೇವೆಗಳನ್ನು ಕೈಗೊಳ್ಳಬೇಕು.ಶಿವನ ಕಥೆ ಪುರಾಣಗಳನ್ನು ಓದಬೇಕು ಇಲ್ಲವೆ ಕೇಳಬೇಕು.ಶಿವನ ನಾಮಸ್ಮರಣೆ,ಭಜನೆಗಳನ್ನು ಮಾಡಬೇಕು.ಶಿವ ದೇವಾಲಯಗಳಿಗೆ ಸೇವೆ ಸಲ್ಲಿಸಬೇಕು.ಶಿವನಿಗಾಗಿ ಇಂತಹ ಯಾವುದಾದರೂ ಸೇವೆಯನ್ನು ಕೈಕೊಳ್ಳುವುದೇ ಶ್ರಾವಣಮಾಸದಲ್ಲಿ ಕಷ್ಟಪಡುವ ಭಕ್ತಿಕ್ರಿಯೆ.

ಶ್ರಾವಣ ಮಾಸವು ಆತ್ಮೋನ್ನತಿಯ ಮಾಸವೂ ಹೌದು.ವರ್ಷದ ಹನ್ನೊಂದು ತಿಂಗಳು ಕೃಷಿಕಾಯಕದಲ್ಲಿ ತೊಡಗಿರುವ ರೈತರು ಶ್ರಾವಣಮಾಸದಲ್ಲಿ ಅನ್ನದಾತನಾದ ಶಿವನನ್ನು ಸ್ಮರಿಸುತ್ತ,ಸೇವಿಸುತ್ತ ಮಣ್ಣಿನಮಕ್ಕಳು ಮಹಾದೇವನ ವಂಶಿಕರು ಎನ್ನುವುದನ್ನು ಸ್ಮರಿಸಿಕೊಳ್ಳುತ್ತಾರೆ.’ಹನ್ನೊಂದು ಮಾಸಗಳು ನನಗೆ,ಒಂದು ಮಾಸ ನಿನಗೆ’ ಎಂದು ರೈತರು ಒಂದು ತಿಂಗಳನ್ನು ಶಿವನಿಗಾಗಿ ಮೀಸಲಿಟ್ಟಿದ್ದಾರೆ.ಶಿವನ ಪೂಜೆ- ಸೇವೆಗಳ ಮೂಲಕ ಶಿವಭಾವವನ್ನು ಜಾಗ್ರತಗೊಳಿಸಿಕೊಳ್ಳುತ್ತಾರೆ.ಶಿವನ ಕಥೆ ಎಂದರೆ ಅದು ನಾಡ ಜನಪದರ ಕಥೆಯೆ,ಶಿವನ ಪುರಾಣವೆಂದರೆ ನಮ್ಮ ಪೂರ್ವಿಕರ ಭಕ್ತಿವಿಶೇಷವೆ.ನಿಗ್ರಹಾನುಗ್ರಹ ಸಮರ್ಥನಾದ ಪರಶಿವನ ಕಾರುಣ್ಯವನ್ನುಣ್ಣುವುದೇ ಶ್ರಾವಣಮಾಸದ ವಿಶೇಷ.ಶಿವಾನುಗ್ರಹವು ಪ್ರಜಾಸಮಸ್ತರಿಗೆ ಒದಗಿ ಬರುವ ಪ್ರಜಾಕಲ್ಯಾಣಕಾಲವೇ ಶ್ರಾವಣ ಮಾಸ.

೨೯.೦೭.೨೦೨೨

About The Author