ಸಂಸ್ಕೃತಿ ಚಿಂತನೆ ಕಾರಹುಣ್ಣಿಮೆ–ಮಣ್ಣೆತ್ತಿನ ಅಮವಾಸೆ–ಮುಕ್ಕಣ್ಣ ಕರಿಗಾರ

ಸಂಸ್ಕೃತಿ ಚಿಂತನೆ:ಕಾರಹುಣ್ಣಿಮೆ–ಮಣ್ಣೆತ್ತಿನ ಅಮವಾಸೆ

ಮುಕ್ಕಣ್ಣ ಕರಿಗಾರ

ಸಿಂಧನೂರಿನಿಂದ ಸಂಸ್ಕೃತಿಸಂಪನ್ನ ವ್ಯಕ್ತಿತ್ವದವರೂ ನಿವೃತ್ತ ಪ್ರೌಢಶಾಲಾ ಮುಖ್ಯೋಪಾಧ್ಯಾರೂ ಮತ್ತು ಒಂದುಕಾಲದಲ್ಲಿ ‘ಮಹಾಶೈವ ಸಾಹಿತ್ಯ ಮಂಟಪ’ ವಾಟ್ಸಾಪ್ ಗುಂಪಿನ ಸಕ್ರೀಯ ಸದಸ್ಯರೂ ಆಗಿದ್ದ ಆತ್ಮೀಯರಾದ ವೆಂಕನಗೌಡ ವಟಗಲ್ ಅವರು ‘ ಕಾರಹುಣ್ಣಿಮೆ ಮತ್ತು ಮಣ್ಣೆತ್ತಿನ ಅಮವಾಸೆಗಳ ಆಚರಣೆಯ’ ಸಾಂಸ್ಕೃತಿಕ ಮಹತ್ವವನ್ನು ತಿಳಿಯಬಯಸಿ ವಾಟ್ಸಾಪ್ ಮೆಸೇಜ್ ಮಾಡಿದ್ದಾರೆ.ಕಾರಹುಣ್ಣಿಮೆ ಮತ್ತು ಮಣ್ಣೆತ್ತಿನ ಅಮವಾಸೆಗಳು ಒಂದೇ ತಿಂಗಳಲ್ಲಿ ಬರುವ ಹುಣ್ಣಿಮೆ ಮತ್ತು ಅಮವಾಸೆಗಳಾಗಿದ್ದು ಮಣ್ಣಿನಮಕ್ಕಳಾದ ರೈತರ ಸಾಂಸ್ಕೃತಿಕ ಹಬ್ಬಗಳಾಗಿವೆ.ಯುಗಾದಿಯಿಂದ ಹೊಸಮಳೆ ಪ್ರಾರಂಭವಾಗುವುದಾದರೂ ಜೂನ್ ತಿಂಗಳಲ್ಲಿ ಬರುವ ಮೃಗಶಿರಾ ನಕ್ಷತ್ರದಿಂದ ಮುಂಗಾರುಮಳೆಯ ಆರ್ಭಟ ಹೆಚ್ಚುತ್ತದೆ.ಮುಂಗಾರು ಮಳೆಯಿಂದ ರೈತರ ಕೃಷಿಚಟುವಟಿಕೆಗಳು ಪ್ರಾರಂಭವಾಗುತ್ತವೆ.ವರ್ಷಕಾಲದ ಪ್ರಾರಂಭದ ಮುಂಗಾರು ಮಳೆಯ ದಿನಗಳಲ್ಲಿ ಬರುವ ಮೊದಲ ಹುಣ್ಣಿಮೆಯೇ ಕಾರಹುಣ್ಣಿಮೆ,ಮುಂಗಾರಿನ ಮೊದಲ ಹಬ್ಬವೇ ಎತ್ತುಗಳನ್ನು ಪೂಜಿಸಿ,ಮೆರೆಯಿಸುವ ಕಾರಹುಣ್ಣಿಮೆ.ಮುಂ+ ಕಾರು— ಮುಂಗಾರು ಆಗಿ ಮಾತಿನಲ್ಲಿ ಅದರಪೂರ್ವ ಶಬ್ದ ‘ಮುಂ’ ಮರೆಯಾಗಿ ಕಾರಹುಣ್ಣಿಮೆ ಮಾತ್ರ ಉಳಿಯಿತು ಬಳಕೆಯಲ್ಲಿ.ಕಾರಹುಣ್ಣಿಮೆಯು ರೈತರ ಸಾಂಸ್ಕೃತಿಕ ಹಬ್ಬ,ಕೃಷಿಕರ ಹಬ್ಬ.ಮಣ್ಣೆತ್ತಿನ ಅಮವಾಸೆಯು ರೈತಕುಟುಂಬಗಳ ಮಕ್ಕಳ ಆಚರಣೆಯ ಹಬ್ಬ.

ಭಾರತದ ಮೂಲನಿವಾಸಿಗಳು ಪಶುಸಂಗೋಪನೆಯಿಂದ ಜೀವನ ನಿರ್ವಹಣೆಗಾಗಿ ಕೃಷಿಯತ್ತ ಹೊರಳಿದ ದಿನಗಳಲ್ಲಿ ಒಂದೊಂದು ಹುಣ್ಣಿಮೆ- ಅಮವಾಸೆಗೆ ಒಂದೊಂದು ಭೂಮಿತತ್ತ್ವ,ಉಳುಮೆ ತತ್ತ್ವ,ರಾಶಿತತ್ತ್ವ ಮತ್ತು ದೇವತತ್ತ್ವಗಳನ್ನು ಆರೋಪಿಸುತ್ತ ಹಬ್ಬ ಉತ್ಸವಗಳನ್ನು ಆಚರಿಸತೊಡಗಿದರು.ಭಾರತೀಯ ಹಬ್ಬಗಳೆಂದರೆ ಅವು ರೈತರ ಹಬ್ಬಗಳೆ.ಮಣ್ಣಿನ ಮಕ್ಕಳ ಜೀವನ ಕ್ರಮವೇ ದೇಶದ ಸಂಸ್ಕೃತಿಯಾಗಿ ವಿಕಸನಗೊಂಡಿದೆ.ಪಶುಪಾಲಕ ಸಂಸ್ಕೃತಿಯಿಂದ ಕೃಷಿಕಾಯಕ ಸಂಸ್ಕೃತಿಯ ವಿಕಸನವಾಯಿತು.ಕೃಷಿಕಾಯಕವು ಭೂಮಿ ಮತ್ತು ಎತ್ತುಗಳನ್ನು ಅವಲಂಬಿಸಿದ ಕಾಯಕ.ರೈತರು ಭೂಮಿಯನ್ನು ತಾಯಿಯೆಂದು ಎತ್ತುಗಳನ್ನು ಶಿವವಾಹನ ನಂದಿ ಎಂದು ಭಾವಿಸಿ ಪೂಜಿಸುತ್ತಾರೆ.ಶಿವನ ವಾಹನನಾದ ನಂದಿಯು ಧರ್ಮದೇವತೆಯಾಗಿದ್ದು ಭೂಮಿಯಲ್ಲಿ ಶಿವಧರ್ಮವನ್ನು ಎತ್ತಿಹಿಡಿಯುವ ಶಿವಧರ್ಮಪ್ರತಿನಿಧಿಯಾಗಿದ್ದಾನೆ.ಆ ಕಾರಣದಿಂದಲೇ ವಿಶ್ವಗುರು ಬಸವಣ್ಣನವರನ್ನು ನಂದಿಯ ಅವತಾರ ಎಂದು ಬಗೆದು,ಪೂಜಿಸುತ್ತಿರುವುದು.ಬಸವಣ್ಣನವರು ನಂದಿಯ ಅವತಾರ ಎನ್ನುವುದನ್ನು ಕೆಲವರು ಆಕ್ಷೇಪಿಸುತ್ತಾರೆ.ಆದರೆ ನಂದಿಯ ಕಾರ್ಯವು ಲೋಕಕಲ್ಯಾಣ,ಬಸವಣ್ಣನವರ ಕಾರ್ಯವು ಲೋಕಕಲ್ಯಾಣವೇ ಆಗಿತ್ತು ಎಂಬುದನ್ನು ಮನಗಾಣಬೇಕು.ವಿಚಾರವಾದಿಗಳು ಎನ್ನುವವರು ಮನಸ್ಸಿಗೆ ಬಂದಂತೆ ವಿತಂಡವಾದಗಳನ್ನು ಮಂಡಿಸಿ ಮುಗ್ಧಭಕ್ತರ ಭಾವನೆಗಳು ಘಾಸಿಗೊಳಿಸುತ್ತಾರೆ.ಅವತಾರ ತತ್ತ್ವವನ್ನು ಒಪ್ಪದವರು ಜೀವನದ ಅಖಂಡತೆಯನ್ನು,ಬದುಕಿನ ಪೂರ್ಣತೆಯನ್ನು,ಸೃಷ್ಟಿಯ ವಿಕಾಸತತ್ತ್ವವನ್ನು ಅರಿಯದವರು.’ಅವತಾರ’ ಎಂದರೆ ಲೋಕೋದ್ಧರಣ ತತ್ತ್ವವೇ ಹೊರತು ಮತ್ತೇನಲ್ಲ.ಲೋಕಜನರ ಬದುಕಿಗೆ ಅನ್ನನೀಡುವ ನಂದಿಯ ಪವಿತ್ರಕಾರ್ಯಕ್ಕಿಂತ ಮತ್ತಾವ ಕಾರ್ಯದೊಡ್ಡದು ಇದ್ದೀತು? ಶಿವನಿಗಿಂತ ನಂದಿಯ ಲೋಕಕಾರುಣ್ಯ ದೊಡ್ಡದು ಎಂದು ಭಾವಿಸಿರುವ ನೇಗಿಲಯೋಗಿಗಳು ನಂದಿಯು ಎತ್ತಾಗಿ ಲೋಕಸಮಸ್ತರಿಗೆ ಅನ್ನವನ್ನು ನೀಡುವ ಅನ್ನದಾತದೈವವಾದ ಬಗ್ಗೆ ಒಂದು ಸುಂದರ ಕಥೆ ಕಟ್ಟಿದ್ದಾರೆ.

ಲೋಕದ ಕರ್ತಾರನಾದ ಶಿವನಿಗೆ ಲೋಕದ ಜೀವರುಗಳಿಗೆ ಅನ್ನವನ್ನಿತ್ತು ಸಲಹುವ ಹೊಣೆಯೂ ಇದೆ.ಅದನ್ನು ಭೂಲೋಕದ ಜನರಿಗೆ ಸಾರಿಬರಲು ಶಿವನು ನಂದಿಯನ್ನು ಕರೆದು ‘ ಅಯ್ಯಾ ನಂದಿಯೆ, ಶಿವನು ಲೋಕದ ಜನರಿಗೆ ಒಂದು ಹೊತ್ತಿನ ಊಟ ನೀಡುತ್ತಾನೆ ಎಂದು ಸಾರಿ ಬಾರಯ್ಯ’ ಎಂದು ಭೂಲೋಕಕ್ಕೆ ಕಳುಹಿಸುವನು.ಭೂಲೋಕಕ್ಕೆ ಬಂದ ನಂದಿಯು ಜನರಿಗೆ ‘ ಶಿವನು ಜೀವರುಗಳಿಗೆ ಮೂರು ಹೊತ್ತಿನ ಊಟ ನೀಡುವ ಅಭಯ ನೀಡಿದ್ದಾನೆ’ ಎಂದು ಸಾರಿ ಕೈಲಾಸಕ್ಕೆ ಮರಳುವನು.ಇದನ್ನು ಅರಿತ ಶಿವನು ನಂದಿಯ ನಡೆಯನ್ನು ಆಕ್ಷೇಪಿಸಿ ‘ ಏನಯ್ಯಾ,ನಾನು ಒಂದು ಹೊತ್ತಿನ ಅನ್ನ ನೀಡುವುದಾಗಿ ಅಭಯ ನೀಡಿದ್ದರೆ ನೀನು ಶಿವನು ಮೂರು ಹೊತ್ತಿನ ಊಟ ನೀಡುತ್ತಾನೆ ಎಂದು ಅಭಯಸಾರಿದ್ದಿಯಲ್ಲ!’ ಎಂದು ಕೇಳುವನು.ನಗುತ್ತ ನಂದಿಯು ಉತ್ತರಿಸುತ್ತಾನೆ ‘ ಪ್ರಭು ಪರಮೇಶ್ವರನೆ, ಭೂಲೋಕದ ಮನುಷ್ಯರು ರಕ್ತ ಮಾಂಸಗಳನ್ನುಳ್ಳ,ಒಡಲುಗೊಂಡ ಮಾನವರು.ಅವರಿಗೆ ಹಸಿವೆ ನೀರಡಿಕೆ ಆಗುತ್ತದೆ.ಒಂದು ಹೊತ್ತಿನ ಊಟ ಉಂಡು ಬದುಕಲು ಸಾಧ್ಯವೆ? ಅವರ ಆಯಸ್ಸು ವೃದ್ಧಿಯಾಗಬೇಡವೆ ? ಸರ್ವಸಮರ್ಥನೂ ಲೋಕೇಶ್ವರನೂ ಪರಮಪ್ರಭುವಾದ ನೀವು ಕಾರುಣ್ಯಮೂರ್ತಿಗಳು.ನಿಮ್ಮ ಕಾರುಣ್ಯವಿಶೇಷವನ್ನು ಭೂಲೋಕದ ಮನುಜರು ಉಣ್ಣಲಿ ಎಂದು ಪ್ರಭು ಶಿವನು ಮೂರು ಹೊತ್ತಿನ ಊಟ ನೀಡುತ್ತಾನೆ ಎಂದು ಸಾರಿ ಬಂದೆ.ತಪ್ಪಿದ್ದರೆ ಮನ್ನಿಸಬೇಕು’ ಎಂದು ಪ್ರಾರ್ಥಿಸುವನು.ನಂದಿಯ ಲೋಕೋಪಕಾರಗುಣವನ್ನು ಕಂಡು ಸಂತುಷ್ಟನಾದರೂ ಶಿವನು ಅದನ್ನು ತೋರಗೊಡದೆ ‘ ಏನಾದರಾಗಲಿ ನಾವು ನಮ್ಮ ನಮ್ಮ ಮಾತಿಗೆ ಬದ್ಧರು,ಜೀವರುಗಳಿಗೆ ಒಂದು ಹೊತ್ತಿನ ಅನ್ನ ಕೊಡುತ್ತೇವೆ.ಉಳಿದ ಎರಡು ಹೊತ್ತಿನ ಊಟ ನೀನೇ ಕೊಡಯ್ಯ’ ಎಂದು ಹುಸಿಕೋಪದಿಂದ ನುಡಿಯುವನು.’ ಅಪ್ಪಣೆ ಪ್ರಭು’ ಎಂದು ನಂದಿಯು ಭೂಮಿಗೆ ಇಳಿದು ಎತ್ತು ಆಗಿ ಅವತರಿಸಿ ರೈತರ ಮನೆಮನೆಗಳಲ್ಲಿ ಕಾಣಿಸಿಕೊಂಡನು.ರೈತರು ಎತ್ತುಗಳ ಮೂಲಕ ಕೃಷಿಕಾಯಕ ಮಾಡಿ ಬಿತ್ತಿ ಬೆಳೆಯತೊಡಗಿದರು,ಲೋಕದ ಜನರ ಅನ್ನದ ಸಮಸ್ಯೆಯು ಪರಿಹಾರವಾಯಿತು.ಕೈಲಾಸದಲ್ಲಿ ನಂದಿಯ ಅಗಲಿಕೆಯನ್ನು ಸಹಿಸದೆ ಶಿವನೂ ಬಂದನಂತೆ ಭೂಮಿಗೆ.ಶಿವನು ಭೂಮಿಗೆ ಬಂದುದರಿಂದಲೇ ಶಿವನ ದೇವಸ್ಥಾನಗಳು ಹುಟ್ಟಿ ಶಿವಲಿಂಗದೆದುರು ನಂದಿಯನ್ನು ಸ್ಥಾಪಿಸುವ ಸಂಪ್ರದಾಯ ಪ್ರಾರಂಭವಾಯಿತಂತೆ.

ಇದು ಕಥೆ.ಕಥೆಯಾದರೂ ನಂದಿಯ ಲೋಕಾನುಕಂಪೆ ತತ್ತ್ವವು ಇಲ್ಲಿ ಪ್ರಕಟಗೊಂಡಿದೆ.ನಂದಿಯು ಲೋಕಸಮಸ್ತರಿಗೆ ಅನ್ನವನ್ನು ಹಾಕಲು ಎತ್ತಾಗುತ್ತಾನೆ,ರೈತರ ಬಾರಕೋಲಿನ ಪೆಟ್ಟಿನ ನೋವನ್ನು ಸಹಿಸಿಯೂ ಜೀವರುಗಳಿಗೆ ಅನ್ನ ನೀಡುತ್ತಾನೆ.ನೋವು ತಿಂದು ನರಳಿಯೂ ಮನುಷ್ಯರ ಬಾಳಿಗೆ ಆಸರೆಯಾಗುವ,ಬೆಳಕಾಗುವ ಜೀವಪೋಷಕದೇವ ತತ್ತ್ವವೇ ನಂದಿಯ ಎತ್ತಿನ ತತ್ತ್ವ.ತಮಗೆ ಅನ್ನ ನೀಡುವ ಎತ್ತುಗಳನ್ನು ಬಸವನೆಂದು ಭಾವಿಸಿ ರೈತರು ಕಾರಹುಣ್ಣಿಮೆಯ ದಿನಗಳಂದು ಎತ್ತುಗಳ ಮೈತೊಳೆದು,ಅಲಂಕರಿಸಿ ಪೂಜಿಸುತ್ತಾರೆ.ಸಂಜೆಯ ಹೊತ್ತಿನಲ್ಲಿ ಊರ ಎತ್ತುಗಳನ್ನೆಲ್ಲ ಮೆರೆಯಿಸುತ್ತ ಅಗಸೆಯ ಬಾಗಿಲಿಗೆ ಕಟ್ಟಿದ ತೋರಣ ಹರಿಸುತ್ತಾರೆ ಎತ್ತುಗಳಿಂದ.ಮಾವಿನ ತೋರಣವನ್ನು ಎತ್ತುಗಳಿಂದ ಹರಿಸುವ ಮೂಲಕ ಪ್ರಾರಂಭಿಸುವ ಕೃಷಿಕಾಯಕಕ್ಕೆ ಶುಭವನ್ನು ಬರಮಾಡಿಕೊಳ್ಳುತ್ತಾರೆ.

ನಂದಿಯ ದೆಸೆಯಿಂದ ಶಿವನು ಭೂಲೋಕಕ್ಕೆ ಬಂದು ಶಿವಾಲಯಗಳಲ್ಲಿ ಲಿಂಗ,ಮೂರ್ತಿ ರೂಪಗಳಲ್ಲಿ ಪ್ರಕಟಗೊಂಡನು ಎನ್ನುವ ಕಥೆಯ ಹಿನ್ನೆಲೆಯಲ್ಲಿ ಒಂದು ದರ್ಶನವಿದೆ.ನಂದಿಯು ಶಿವನ ದೇವಾಲಯ ಕಾಯುತ್ತಾನೆ,ಶಿವನು ತನ್ನ ಸಹಜಾನಂದದ ಯೋಗದಲ್ಲಿ ತಲ್ಲೀನನಾಗಿದ್ದಾನೆ.ನಂದಿಯ ಅವತಾರ ತತ್ತ್ವವು ಪ್ರಭುಶಕ್ತಿಯನ್ನು ಧರೆಗಿಳಿಸಿದೆ ಎನ್ನುವುದೇ ಇಲ್ಲಿರುವ ದರ್ಶನ.ಯೋಗದಲ್ಲಿ ಕೂಡ ಈ ದರ್ಶನವಿದೆ.ಮನುಷ್ಯರ ದೇಹದಲ್ಲಿ ಶಕ್ತಿಯು ಕುಂಡಲಿನೀ ರೂಪದಲ್ಲಿ ಮೂಲಾಧಾರ ಚಕ್ರದಲ್ಲಿ ಊರ್ಧ್ವಮುಖಿಯಾಗಿ ಮಲಗಿದ್ದಾಳೆ.ಪರಶಿವನು ಸಹಸ್ರಾರದಲ್ಲಿ ಪವಡಿಸಿದ್ದಾನೆ.ಯೋಗಿಯು ತನ್ನ ಸಾಧನೆಯ ಬಲದಿಂದ ಕುಂಡಲಿನಿ ಶಕ್ತಿಯನ್ನು ಜಾಗ್ರತಗೊಳಿಸಿಕೊಂಡು ಸ್ವಾಧಿಷ್ಟಾನ,ಮಣಿಪೂರ ಚಕ್ರಗಳ ಮೂಲಕ ಅನಾಹತಚಕ್ರದ ಸ್ಥಾನವಾದ ಹೃದಯ ಚಕ್ರಕ್ಕೆ ಬರುತ್ತಾನೆ.ಹೃಯದ ಸ್ಥಾನವು ಆನಂದದ ನೆಲೆ,ಶಕ್ತಿಯ ಆವಾಸ.ಯೋಗಿಯ ಸಾಧನೆಯಿಂದ ಸಂತೃಪ್ತನಾದ ಶಿವನು ಅವನನ್ನು ಅನುಗ್ರಹಿಸಲು ಸಹಸ್ರಾರದಿಂದ ಇಳಿದು ಬರುತ್ತಾನೆ ಅನಾಹತಚಕ್ರಕ್ಕೆ.ಯೋಗಿಯ ಸಾಧನೆಯ ಶಕ್ತಿ ಮತ್ತು ಪರಶಿವನ ಪ್ರಭುಕಾರುಣ್ಯ ಶಕ್ತಿಗಳೆರಡು ಸಂಗಮಿಸುತ್ತವೆ ಅನಾಹತ ಚಕ್ರದಲ್ಲಿ.ಭಕ್ತನ ಯೋಗ ಶಕ್ತಿಯು ಮೇಲೇರಿದಂತೆ ಅವನನ್ನು ಅನುಗ್ರಹಿಸಲು ಕೆಳಗಿಳಿದು ಬರುತ್ತದೆ ಪ್ರಭುಶಕ್ತಿ.ಭಕ್ತ ಭಗವಂತರೊಂದಾಗುತ್ತಾರೆ ಅನಾಹತಚಕ್ರದಲ್ಲಿ.ಅನಾಹತಚಕ್ರವು ಲೋಕವನ್ನು ಪೊರೆವ ಲೋಕೋದ್ಧಾರಕ ಶಿವಶಕ್ತಿ ಸಮನ್ವಯದ ಆನಂದಚಕ್ರ.ನಂದಿಯು ಪರಶಿವನ ಕಾರುಣ್ಯಶಕ್ತಿಯನ್ನು ಧರೆಗಿಳಿಸುತ್ತಾನೆ ಎನ್ನುವುದರ ಸಂಕೇತವೇ ಶಿವದೇವಾಲಯಗಳ ಮುಂದೆ ಇರುವ ನಂದಿ ವಿಗ್ರಹಗಳ ತತ್ತ್ವ.ಜೀವ ಮತ್ತು ಶಿವರನ್ನು ಒಂದುಗೂಡಿಸಲು ಒಂದು ಮಾಧ್ಯಮ ಬೇಕು.ಆ ಮಾಧ್ಯಮವೇ ನಂದಿ ಎಂಬ ಗುರು ತತ್ತ್ವ.ನಂದಿ ಇದ್ದೆಡೆ ಇರುತ್ತದೆ ಆನಂದ.ನಂದಿ ಇದ್ದೆಡೆ ಬರುತ್ತಾನೆ ಆನಂದ ಸ್ವರೂಪಿ ಶಿವ.ಶಿವ ಮತ್ತು ನಂದಿಯರು ಒಂದಾದ ಯೋಗತತ್ತ್ವವೇ ” ಮಹಾನಂದಿ ತತ್ತ್ವ”. ಎತ್ತುಗಳನ್ನು ಪೂಜಿಸುವುದೆಂದರೆ ನಂದಿಗೆ ಧನ್ಯತಾಭಾವದಿಂದ ಕೃತಜ್ಞತೆಗಳನ್ನು ಸಮರ್ಪಿಸಿದಂತೆ.

‌ ವಯಸ್ಕರು ಕಾರ ಹುಣ್ಣಿಮೆಯಲ್ಲಿ ಕೃಷಿಕಾಯಕದಲ್ಲಿ ಆಸರೆಯಾಗುವ ಜೀವಂತ ಎತ್ತುಗಳನ್ನು ಪೂಜಿಸಿದರೆ ರೈತರ ಮಕ್ಕಳು ಅಮವಾಸೆಯಂದು ಮಣ್ಣಿನಿಂದ ಎತ್ತುಗಳನ್ನು ಮಾಡಿ,ಅಲಂಕರಿಸಿ ಮೆರವಣಿಗೆ ಮಾಡುತ್ತಾರೆ.ಕಾರಹುಣ್ಣಿಮೆಯಂದು ಜೀವಂತ ಎತ್ತುಗಳ ಮೆರವಣಿಗೆ ಸಾಗಿದ ದಾರಿಯಲ್ಲೇ ಮಣ್ಣಿನ ಎತ್ತುಗಳ ಮೆರವಣಿಗೆ ಸಾಗುತ್ತದೆ.ಮಕ್ಕಳು ದೊಡ್ಡ ಎತ್ತುಗಳನ್ನು ಪಳಗಿಸಲಾರರು ಎನ್ನುವ ಕಾರಣದಿಂದ ಮಣ್ಣಿನ ಎತ್ತಿನ ಪೂಜೆ ನಡೆದಿರಬಹುದಾದರೂ ಅದರ ಹಿನ್ನೆಲೆಯಲ್ಲಿ ಭೂಮಿತತ್ತ್ವದ ಉಪಾಸನಾ ರಹಸ್ಯವಿದೆ.ರೈತರಿಗೆ ಎತ್ತು ಉಳುಮೆಗೆ ಆಸರೆಯಾದಂತೆ ಉತ್ತು,ಬಿತ್ತು ಬೆಳೆಯಲು ಭೂಮಿಯೇ ಮೂಲಾಧಾರ.’ಕ್ಷಮಯಾ ಧರಿತ್ರಿ’ ಎನ್ನುವಷ್ಟು ಕ್ಷಮೆಯ ತತ್ತ್ವ,ಕ್ಷಮೆಗೆ ಅರ್ಥವೇ ಆದ ಭೂದೇವಿಯ ಒಡಲಿಗೆ ಕೃಷಿಕಾಯಕದಿಂದ ನೋವಾಗಿರಬಹುದು,ಆದ್ದರಿಂದ ಭೂಮಾತೆಯಲ್ಲಿ ಕ್ಷಮೆ ಕೋರೋಣ ಎನ್ನುವ ರೈತರ ಮುಗ್ಧ ಭಕ್ತಿಯು ಮಣ್ಣಿನ ಎತ್ತುಗಳ ಪೂಜೆಯಲ್ಲಿದೆ.ನಂದಿಯು ಕೈಲಾಸದಿಂದ ಬಂದ ಆಕಾಶ ತತ್ತ್ವದ ಪ್ರತೀಕವಾದರೆ ಮಣ್ಣಿನ ಎತ್ತು ಭೂ ತತ್ತ್ವದ ಪ್ರತೀಕ.ಆಕಾಶ ಮತ್ತು ಭೂಮಿಗಳೆಂಬ ಎರಡು ಮಹಾ ತತ್ತ್ವಗಳ ಪೂಜೆ ಇಲ್ಲವೆ ಉಪಾಸನೆಯೇ ಕಾರಹುಣ್ಣಿಮೆ ಮತ್ತು ಮಣ್ಣೆತ್ತಿನ ಅಮವಾಸೆಗಳ ಹಿಂದಿನ ತತ್ತ್ವ,ಸಂದೇಶ.

About The Author